Home Blog Page 273

ಹನಿಮೂನ್‌ ಗೆ ಹೋಗಿದ್ದಾಗ ಏನಾಯ್ತು!? ಶ್ರೀಲಂಕಾದಿಂದ ಬಂದು ಸಾವಿನ ಕದ ತಟ್ಟಿದ ನವವಿವಾಹಿತೆ!

0

ಬೆಂಗಳೂರು: ಪ್ಯಾಲೆಸ್‌ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್‌ ಆಯೋಜಿಸಿ, ಶ್ರೀಲಂಕಾಕ್ಕೆ ಹನಿಮೂನ್‌ಗೆ ತೆರಳಿದ್ದ ನವದಂಪತಿ ಅರ್ಧದಲ್ಲೇ ವಾಪಸ್ಸಾಗಿದ್ದು, ನವವಧು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಜರುಗಿದೆ.

26 ವರ್ಷದ ಗಾನವಿ ಆತ್ಮಹತ್ಯೆಗೆ ಯತ್ನಿಸಿದ ನವವಿವಾಹಿತೆ. ಅಕ್ಟೋಬರ್‌ 29ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಂಪತಿ, ಪ್ಯಾಲೆಸ್‌ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್‌ ನಡೆಸಿದ್ದರು. ಸುಮಾರು ಹತ್ತು ದಿನಗಳ ಹಿಂದೆ ಶ್ರೀಲಂಕಾಗೆ ಹನಿಮೂನ್‌ಗೆ ತೆರಳಿದರೂ, ಮಧ್ಯದಲ್ಲೇ ಇಬ್ಬರೂ ವಾಪಸ್ಸಾಗಿದ್ದರು.

ಬುಧವಾರ (ಡಿ.25) ಮಧ್ಯಾಹ್ನ ಪತಿ ಮನೆಯಲ್ಲಿ ನವವಧು ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ವಧುವಿನ ಕುಟುಂಬಸ್ಥರು ವರನ ಕುಟುಂಬದ ವಿರುದ್ಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಿರುಕುಳದ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

‘ಕಾಂತಾರ’ ದಾಖಲೆ ಪತನ! 1000 ಕೋಟಿ ಗುರಿಯತ್ತ ಧುರಂಧರ್ ಅಬ್ಬರ

ಬಿಡುಗಡೆಯಾಗುವಾಗ ನೆಗೆಟಿವ್ ಟಾಕ್ ಎದುರಿಸಿದ್ದ ‘ಧುರಂಧರ್’ ಸಿನಿಮಾ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ನಿರ್ಮಿಸಿದೆ. ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ಅಭಿನಯದ ಈ ಸಿನಿಮಾ 935 ಕೋಟಿ ರೂಪಾಯಿ ಗಳಿಕೆ ಮಾಡಿ, ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಚಿತ್ರದ ದಾಖಲೆಯನ್ನು ಮುರಿದಿದೆ.

‘ಕಾಂತಾರ: ಚಾಪ್ಟರ್ 1’ 800 ಕೋಟಿ ರೂಪಾಯಿ ಗಳಿಕೆ ಮಾಡಿ ಈ ವರ್ಷದ ಅತಿ ದೊಡ್ಡ ಹಿಟ್ ಆಗಿತ್ತು. ಆದರೆ ಈಗ ‘ಧುರಂಧರ್’ ಆ ದಾಖಲೆಯನ್ನು ದಾಟಿ, ಜಾಗತಿಕವಾಗಿ 1000 ಕೋಟಿ ರೂಪಾಯಿ ಕ್ಲಬ್ ಸೇರುವ ಏಕೈಕ ಸಿನಿಮಾ ಆಗುವತ್ತ ವೇಗವಾಗಿ ಮುನ್ನುಗ್ಗುತ್ತಿದೆ.

ಚಿತ್ರದಲ್ಲಿ ರಣವೀರ್ ಸಿಂಗ್ ‘ಆದಿತ್ಯ ಧಾರ್’ ಪಾತ್ರದಲ್ಲಿ ಮಿಂಚಿದ್ದರೆ, ಖಡಕ್ ವಿಲನ್ ಆಗಿ ಅಕ್ಷಯ್ ಖನ್ನಾ ಅಬ್ಬರಿಸಿದ್ದಾರೆ. ಹಲವು ವರ್ಷಗಳಿಂದ ಬಾಲಿವುಡ್‌ನಲ್ಲಿ ಮಂಕಾಗಿದ್ದ ಅಕ್ಷಯ್ ಖನ್ನಾ ಅವರಿಗೆ ಈ ಸಿನಿಮಾ ಮರುಜೀವ ನೀಡಿದೆ. ಕೆಲ ದೇಶಗಳಲ್ಲಿ ಬ್ಯಾನ್ ಆದರೂ ಕೂಡ, ‘ಧುರಂಧರ್’ ಚಿತ್ರದ ಗಳಿಕೆ ಮೇಲೆ ಯಾವುದೇ ಪರಿಣಾಮ ಬೀಳದೆ, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್ ಮಾಡಿದೆ.

ಈ ವೀಕೆಂಡ್ ಮುಗಿಯುವ ಮೊದಲು ‘ಧುರಂಧರ್’ ಸಿನಿಮಾ 1000 ಕೋಟಿ ರೂಪಾಯಿ ದಾಟುವ ಸಾಧ್ಯತೆ ಪಕ್ಕಾ ಎನ್ನಲಾಗುತ್ತಿದ್ದು, 2025ರ ‘ಸಾವಿರ ಕೋಟಿ ಕ್ಲಬ್’ ಸೇರಿದ ಏಕೈಕ ಸಿನಿಮಾ ಎಂಬ ದಾಖಲೆ ಬರೆಯಲು ಸಜ್ಜಾಗಿದೆ.

ಕರ್ಮಫಲವೆಂದವರಿಗೆ ನಾನಿನ್ನೂ ಸತ್ತಿಲ್ಲವೆಂದ ಜೈಲರ್‌ ಚಿತ್ರದ ನಟ ವಿನಾಯಕನ್

ಗಾಯವನ್ನೂ ಕರ್ಮಫಲ ಎಂದು ತೀರ್ಮಾನಿಸುವ ಸಮಾಜದ ಮನಸ್ಥಿತಿಗೆ ನಟ ವಿನಾಯಕನ್ ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ. ‘ಗೋಟ್ 3’ ಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಬಂದ ಕಾಮೆಂಟ್ಸ್‌ಗಳಿಗೆ ಫೇಸ್‌ಬುಕ್ ಮೂಲಕ ತಿರುಗೇಟು ನೀಡಿದ್ದಾರೆ.

“ವಿನಾಯಕನ್ ಸತ್ತರೂ ಬದುಕಿದರೂ ಈ ಜಗತ್ತಿನಲ್ಲಿ ಏನೂ ಆಗುವುದಿಲ್ಲ. ನನ್ನ ಕರ್ಮಫಲವನ್ನು ನಾನು ಅನುಭವಿಸುತ್ತೇನೆ. ಶಾಪ ಮತ್ತು ಬೂಟಾಟಿಕೆಯ ಸಹಾನುಭೂತಿ ಬೇಡ” ಎಂದು ವಿನಾಯಕನ್ ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಕರ್ಮ ಎಂದರೇನು ಎಂದು ಬೋಧಿಸುವ ಅಗತ್ಯ ಯಾರಿಗೂ ಇಲ್ಲ ಎಂದು ಅವರು ಹೇಳಿದ್ದಾರೆ.

ತಿರುಚೆಂದೂರಿನಲ್ಲಿ ನಡೆದ ಆಕ್ಷನ್ ದೃಶ್ಯಗಳ ಚಿತ್ರೀಕರಣದ ವೇಳೆ ಕುತ್ತಿಗೆಯ ನರಕ್ಕೆ ಗಾಯವಾದುದು ಎರಡು ದಿನಗಳ ಬಳಿಕ ಪತ್ತೆಯಾಗಿದೆ. “ಇದು ಆಗಲೇ ಗೊತ್ತಾಗದಿದ್ದರೆ ಚಲನಶಕ್ತಿಯೇ ಹೋಗುತ್ತಿತ್ತು” ಎಂದು ವಿನಾಯಕನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ‘ಗೋಟ್ 3’ ಸಿನಿಮಾ 2026ರ ಮಾರ್ಚ್ 19ರಂದು ಈದ್ ಹಬ್ಬದಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಮದ್ಯದ ಅಂಗಡಿ ಪರವಾನಗಿ ನೆಪದಲ್ಲಿ ರಾಜ್ಯ ಸರ್ಕಾರ ಸುಲಿಗೆ ನಡೆಸುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಆರೋಪ

0

ದಾವಣಗೆರೆ: ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ಹಾಗೂ ಖಾಲಿಯಾಗಿರುವ ಖಜಾನೆಯನ್ನು ಭರ್ತಿ ಮಾಡಿಕೊಳ್ಳಲು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ನೆಪದಲ್ಲಿ ಜನರಿಂದ ಸುಲಿಗೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ದಾವಣಗೆರೆಗೆ ಭೇಟಿ ನೀಡಿದ ಅವರು ದಿವಂಗತ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸ್ಮೃತಿ ಸ್ಥಳಕ್ಕೆ ತೆರಳಿ ನಮನ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಮದ್ಯದ ಅಂಗಡಿ ಪರವಾನಗಿಗೆ ರಾಜ್ಯ ಸರ್ಕಾರ ₹1.95 ಕೋಟಿ ದರ ನಿಗದಿ ಮಾಡಿರುವುದು ನೇರ ಲೂಟಿಯಲ್ಲದೇ ಇನ್ನೇನು ಎಂದು ಪ್ರಶ್ನಿಸಿದರು.

ಜನರಿಗೆ ಇನ್ನಷ್ಟು ಕುಡಿತದ ಚಟ ಹತ್ತಿಸಲು ಸರ್ಕಾರವೇ ಉತ್ತೇಜನ ನೀಡುತ್ತಿದೆ. ಇದೇ ರೀತಿಯಲ್ಲಿ ಪ್ರತಿಯೊಂದು ಇಲಾಖೆಯಲ್ಲೂ ಲೂಟಿ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆ (ಟಿಎಸ್‌ಪಿ) ಸೇರಿದಂತೆ ವಿವಿಧ ಯೋಜನೆಗಳಿಗೆ ಮೀಸಲಾದ ಅನುದಾನವನ್ನು ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.

ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ರಾಜ್ಯದ ಖಜಾನೆಯನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಮದ್ಯದ ಅಂಗಡಿ ಹರಾಜು ಮೂಲಕ ಸುಲಿಗೆ ನಡೆಸುವುದು ರಾಜ್ಯ ಸರ್ಕಾರವು ಜನತೆಗೆ ನೀಡುತ್ತಿರುವ ಹೊಸ ವರ್ಷದ ಕೊಡುಗೆ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.

ನಾನು ಬರೀ ವೇದಿಕೇಲಿ ಕೂತು ಭಾಷಣ ಮಾಡಿಲ್ಲ, ಪಕ್ಷದ ಎಲ್ಲ ಕೆಲಸ ಮಾಡಿದ್ದೇನೆ: ಡಿ ಕೆ ಶಿವಕುಮಾರ್

0

ಬೆಂಗಳೂರು: ನಾನು ಕೇವಲ ವೇದಿಕೆಯಲ್ಲಿ ಕುಳಿತು, ಭಾಷಣ ಮಾಡಿಕೊಂಡು ಹೋಗಿಲ್ಲ. ಪಕ್ಷದಲ್ಲಿ ಎಲ್ಲಾ ಕೆಲಸ ಮಾಡಿದ್ದೇನೆ (ಐ ಹ್ಯಾವ್ ಡನ್ ಎವೆರಿ ವರ್ಕ್ ಇನ್ ದ ಪಾರ್ಟಿ), ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಹಾಗೂ ಸದಾಶಿವನಗರದ ತಮ್ಮ ನಿವಾಸದ ಬಳಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.

ಪಕ್ಷದ ಕಾರ್ಯಕರ್ತನಾಗಿಯೇ ಇರಲು ಬಯಸುತ್ತೇನೆ ಎಂದು ದೆಹಲಿಯಲ್ಲಿ ಹೇಳಿಕೆ ನೀಡಿದ್ದರ ಬಗ್ಗೆ ಕೇಳಿದಾಗ, “ನಾನು ಲೈಫ್ ಟೈಮ್ ಕಾರ್ಯಕರ್ತ. ನಾನು ಒಬ್ಬ ವರ್ಕರ್. ಅಧ್ಯಕ್ಷನಾದಾಗಲೂ ಪಕ್ಷದ ಬಾವುಟ ಕಟ್ಟಿದ್ದೇ‌ನೆ. ಕಾರ್ಯಕರ್ತನಾದಾಗಲೂ ಬಾವುಟ ಕಟ್ಟಿದ್ದೇನೆ, ಪೋಸ್ಟರ್ ಅಂಟಿಸಿದ್ದೇನೆ, ಕಸ ಗುಡಿಸಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಏನೇನು ಬೇಕೋ ಎಲ್ಲವನ್ನೂ ಮಾಡಿದ್ದೇನೆ” ಎಂದರು.

ದೆಹಲಿಯಲ್ಲಿ ನಡೆಯುವ ಸಿಡಬ್ಲ್ಯೂಸಿ ಸಭೆಗೆ ತಾವು ತೆರಳುವಿರಾ ಎಂದು ಕೇಳಿದಾಗ, “ನನ್ನನ್ನು ಕರೆದರೆ ಖಂಡಿತಾ ಹೋಗುತ್ತೇನೆ. ಆದರೆ ಇದುವರೆಗೂ ಕರೆದಿಲ್ಲ” ಎಂದರು. ಮುಖ್ಯಮಂತ್ರಿಯವರನ್ನು ಸಭೆಗೆ ಆಹ್ವಾನಿಸಲಾಗಿದೆಯಲ್ಲ ಎಂದು ಹೇಳಿದಾಗ, “ಇರಬಹುದು, ಸಿಎಂಗೆ ಆಹ್ವಾನ ನೀಡಿದ್ದಾರೆ ಎಂದು ನನಗೂ ಗೊತ್ತಿದೆ. ಡೆಪ್ಯುಟಿ ಸಿಎಂಗೆ ಕರೆದಿಲ್ಲ” ಎಂದು ತಿಳಿಸಿದರು.

ಪಿಸಿಸಿ ಅಧ್ಯಕ್ಷರಿಗೆ ಆಹ್ವಾನವಿಲ್ಲವೇ ಎಂದು ಕೇಳಿದಾಗ, “ಸಮಿತಿಯ ವಿಸ್ತರಿತ ಸಭೆಗೆ ಕರೆಯುತ್ತಾರೆ” ಎಂದರು. ಒಂದೊಮ್ಮೆ ಸಭೆಗೆ ಕರೆದರೆ ಹೋಗುವಿರಾ ಎಂದು ಕೇಳಿದಾಗ, “ಕರೆದರೆ ಹೋಗಬೇಕಾಗುತ್ತದೆ. ಕರೆದಾಗ ಹೋಗದೇ ಇರಲು ಆಗುತ್ತದೆಯೇ” ಎಂದು ಹೇಳಿದರು.

ಖರ್ಗೆ ಅವರ ಜತೆ ನಾಯಕತ್ವ ವಿಚಾರವಾಗಿ ಚರ್ಚೆ ನಡೆಸಿದರಾ ಎಂದು ಕೇಳಿದಾಗ, “ಯಾವ ವಿಚಾರವಾಗಿಯೂ ಚರ್ಚೆ ನಡೆಸಿಲ್ಲ. ನಾನು ಚರ್ಚೆ ಮಾಡುವುದೂ ಇಲ್ಲ. ಮಾಡುವ ಅವಶ್ಯಕತೆಯೂ ಇಲ್ಲ.‌ ನಾನು ಮತ್ತು ಸಿದ್ದರಾಮಯ್ಯ ಅವರು ಈಗಾಗಲೇ ಇದರ ಬಗ್ಗೆ ಹೇಳಿದ್ದೇವೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ಅವರು ಏನು ಹೇಳುತ್ತಾರೋ ಆ ರೀತಿ ಕೇಳಿಕೊಂಡು ಹೋಗುತ್ತೇವೆ” ಎಂದರು.

ಸ್ಥಳೀಯ ಮಟ್ಟದಲ್ಲಿ ಗೊಂದಲ ಬಗೆಹರಿಸಿಕೊಳ್ಳಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವ ಬಗ್ಗೆ ಕೇಳಿದಾಗ, “ಹಿರಿಯರು ಮಾರ್ಗದರ್ಶನ ನೀಡುತ್ತಾರೆ” ಎಂದರು. ಶುಕ್ರವಾರದಂದು ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಿದೆ. ಈ ಸಭೆಯಲ್ಲಿ ಮನರೇಗಾ ಯೋಜನೆಯ ಹೆಸರು ಬದಲಾವಣೆ, ಅನುದಾನದಲ್ಲಿ ರಾಜ್ಯದ ಪಾಲನ್ನು ಶೇ.40ಕ್ಕೆ ಹೆಚ್ಚಿಸಿರುವುದು ಸೇರಿದಂತೆ ರೈತರಿಗೆ ಮಾರಕವಾದಂತಹ ಬದಲಾವಣೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ವಿಚಾರವಾಗಿ ಒಂದು ರಾಜ್ಯದ ಅಧ್ಯಕ್ಷನಾಗಿ ನನ್ನ ಅಭಿಪ್ರಾಯಗಳನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಿಳಿಸಿದ್ದೇನೆ. ಅವರ ಜತೆ ಯಾವ ರಾಜಕೀಯ ಮಾತುಕತೆಯೂ ಮಾಡಿಲ್ಲ” ಎಂದು ಸ್ಪಷ್ಟನೆ ನೀಡಿದರು.

“ಮನರೇಗಾ ಯೋಜನೆಯಿಂದ ಪಂಚಾಯತಿಗಳಿಗೆ ಅನುಕೂಲವಾಗುತ್ತಿತ್ತು. ಪಂಚಾಯತಿ ಸದಸ್ಯರುಗಳಿಗೆ ಶಕ್ತಿಯಿತ್ತು‌. ಪ್ರತಿ ಕೂಲಿ ಕಾರ್ಮಿಕರ ಖಾತೆಗೆ ಹಣ ಸಂದಾಯವಾಗಿತ್ತಿತ್ತು. ಪ್ರತಿಯೊಬ್ಬರು ಚರ್ಚೆ ನಡೆಸಿ ತಮ್ಮ ಊರಿಗೆ ಯಾವ ಕೆಲಸಗಳನ್ನು ತೆಗೆದುಕೊಳ್ಳಬೇಕು ಎನ್ನುವ ಅವಕಾಶವಿತ್ತು. ಆದರೆ ಈಗ ಕೇಂದ್ರ ಸರ್ಕಾರವೇ ಯಾವ ಜಿಲ್ಲೆಯಲ್ಲಿ ಯಾವ ಕೆಲಸ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡುತ್ತದಂತೆ” ಎಂದು ಹೇಳಿದರು.

“ರೈತರು ತಮ್ಮ ಸ್ವಂತ ಜಮೀನಿನಲ್ಲಿ ಕೆಲಸ ಮಾಡಿಕೊಳ್ಳಲು, ಇಂಗುಗುಂಡಿ ತೋಡಿಕೊಳ್ಳಲು, ಕೊಟ್ಟಿಗೆ ಕಟ್ಟಿಕೊಳ್ಳಲು – ಹೀಗೆ ಅನೇಕ ಕೆಲಸಗಳನ್ನು ಮಾಡಿಕೊಳ್ಳಲು ಅನುಕೂಲವಾಗುತ್ತಿತ್ತು. ಇಂತಹ ಅದ್ಬುತವಾದ ಕಾರ್ಯಕ್ರಮವನ್ನು ಸೋನಿಯಾಗಾಂಧಿ ಅವರ ಮಾರ್ಗದರ್ಶನದಲ್ಲಿ ಮನಮೋಹನ್ ಸಿಂಗ್ ಅವರು ನೀಡಿದ್ದರು. ಮುಂದಿನ 2026 ರ ಫೆಬ್ರವರಿ‌ ವೇಳೆಗೆ ಈ ಯೋಜನೆಗೆ 20 ವರ್ಷ ತುಂಬಲಿದೆ. ಆದ ಕಾರಣ ದೊಡ್ಡ ಹೋರಾಟವನ್ನು ಹಮ್ಮಿಕೊಳ್ಳಲು ಆಲೋಚಿಸಲಾಗಿದೆ” ಎಂದು ಹೇಳಿದರು.

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆಯೇ ಎಂದು ಕೇಳಿದಾಗ, “ನೀವು (ಮಾಧ್ಯಮಗಳು) ಹೇಳಿದ್ದಕ್ಕೆಲ್ಲಾ ಉತ್ತರ ನೀಡಲು ಆಗುವುದಿಲ್ಲ. ನಾನು ಹೇಳುವುದನ್ನೂ ಕೇಳಿ” ಎಂದರು. ಚಿತ್ರದುರ್ಗದ ಹಿರಿಯೂರಿನ ಬಳಿ ರಸ್ತೆ ಅಪಘಾತದಲ್ಲಿ ಬಸ್ ಬೆಂಕಿಗಾಹುತಿಯಾದ ಬಗ್ಗೆ ಕೇಳಿದಾಗ, “ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ನನಗೆ ತುಂಬಾ ದುಃಖವಾಗಿದ್ದು, ಏನು ಹೇಳಬೇಕು ಎಂದು ತೋಚದಂತಾಗಿದ್ದೇನೆ.‌ ಕುಟುಂಬಸ್ಥರಿಗೆ ಸಾಂತ್ವಾನ ತಿಳಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಘಟನೆಗೆ ಕಾರಣ ಏನು ಎಂದು ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.‌ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ” ಎಂದರು.

ಮದುವೆಯಾಗಿ ತಿಂಗಳು ಕಳೆಯೋ ಮುನ್ನವೇ ನವ ವಿವಾಹಿತೆ ನಿಗೂಢ ಸಾವು!

0

ನೆಲಮಂಗಲ: ಮದುವೆಯಾಗಿ ಕೇವಲ 27 ದಿನಗಳಲ್ಲೇ ನವ ವಿವಾಹಿತೆ ನಿಗೂಢವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ಸಂಭವಿಸಿದೆ. ಐಶ್ವರ್ಯ (26) ಮೃತ ಯುವತಿಯಾಗಿದ್ದು, ಗಂಡನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯ ನಾಗಮಂಗಲ ನಿವಾಸಿಗಳಾದ ಮಮತಾ ಮತ್ತು ಕೃಷ್ಣಮೂರ್ತಿ ದಂಪತಿಯ ಹಿರಿಯ ಪುತ್ರಿ ಐಶ್ವರ್ಯ, ಬಾಗಲಗುಂಟೆ ಪೈಪ್‌ಲೈನ್ ಮಲ್ಲಸಂದ್ರ ನಿವಾಸಿ ಲಿಖಿತ್ ಸಿಂಹ ರನ್ನು ವಿವಾಹವಾಗಿದ್ದರು. ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮದುವೆ ನಡೆದಿದ್ದರೂ, ಮದುವೆಯಾದ ಕೆಲವೇ ದಿನಗಳಲ್ಲಿ ಐಶ್ವರ್ಯಗೆ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ.

ಈ ವಿಚಾರವಾಗಿ ನಿನ್ನೆ ಬೆಳಿಗ್ಗೆ ಎರಡೂ ಕುಟುಂಬಗಳ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ನಡೆಸಲಾಗಿತ್ತು. ಆದರೂ ಸಂಜೆ ವೇಳೆಗೆ ಐಶ್ವರ್ಯ ಮೇಲೆ ಮತ್ತೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಅದೇ ದಿನ ಸಂಜೆ ಲಿಖಿತ್ ತನ್ನ ಪೋಷಕರ ಮೂಲಕ ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಕುಟುಂಬಕ್ಕೆ ಮಾಹಿತಿ ನೀಡಿದ್ದಾನೆ.

ಮನೆಗೆ ಆಗಮಿಸಿದ ಕುಟುಂಬಸ್ಥರು ಐಶ್ವರ್ಯ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದನ್ನು ಕಂಡಿದ್ದಾರೆ. ಆದರೆ ಬಾಗಿಲು ಒಳಗಿನಿಂದ ಮುಚ್ಚಿರುವುದು ಸೇರಿದಂತೆ ಹಲವು ಅನುಮಾನಾಸ್ಪದ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ, ಗಂಡನೇ ಐಶ್ವರ್ಯಗೆ ನೇಣು ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯೆನ್ನಲಾದ ಪತಿ ಲಿಖಿತ್ ಸಿಂಹನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 

ಕಾಕನೂರು SBI ದರೋಡೆ ಪ್ರಕರಣ: ಇಬ್ಬರು ಖತರ್ನಾಕ್ ಕಳ್ಳರ ಬಂಧನ, 62 ಲಕ್ಷ ಮೌಲ್ಯದ ಚಿನ್ನ-ಹಣ ವಶ

0

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕಾಕನೂರು ಗ್ರಾಮದಲ್ಲಿರುವ ಎಸ್‌ಬಿಐ ಬ್ಯಾಂಕ್ ಲಾಕರ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾದಾಮಿ ಪೊಲೀಸರು ಮಹಾರಾಷ್ಟ್ರ ಮೂಲದ ಅಕ್ಷಯ್ ಅಂಬೋರೆ ಮತ್ತು ಕುನಾಲ್ ಚವ್ಹಾಣ್ ಎಂಬ ಇಬ್ಬರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ.

2025ರ ಸೆಪ್ಟೆಂಬರ್ 2ರಂದು ನಡೆದ ದರೋಡೆ ವೇಳೆ ಆರೋಪಿಗಳು ಸಿಸಿ ಕ್ಯಾಮರಾಗಳಿಗೆ ಸ್ಪ್ರೇ ಹೊಡೆದು, ಮೊಬೈಲ್ ಬಳಕೆ ಮಾಡದೆ, ಫಿಂಗರ್‌ಪ್ರಿಂಟ್ ಸಿಗದಂತೆ ಕಳವು ನಡೆಸಿದ್ದರು. ದರೋಡೆಗೆ ಆರು ತಿಂಗಳ ಹಿಂದೆಯೇ ಬ್ಯಾಂಕ್‌ಗೆ ಬಂದು ರೆಕ್ಕಿ ನಡೆಸಿದ್ದರೆಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಬಂಧಿತರಿಂದ 25.90 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಹಣ, ಕಾರು, ಗ್ಯಾಸ್ ಕಟರ್, ಕಂಟ್ರಿಮೇಡ್ ಗನ್, ಎರಡು ಜೀವಂತ ಗುಂಡುಗಳು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಹಮ್ಮದ್ ನವಾನ್ ಮತ್ತು ಕಮರುಲ್ ಖಾನ್ ಎಂಬ ಇಬ್ಬರನ್ನು ಬಂಧಿಸಲಾಗಿತ್ತು.

ಒಟ್ಟು ನಾಲ್ವರು ಆರೋಪಿಗಳಿಂದ 62.20 ಲಕ್ಷ ರೂ. ಮೌಲ್ಯದ 472.20 ಗ್ರಾಂ ಚಿನ್ನಾಭರಣ ಹಾಗೂ ಹಣ ಜಪ್ತಿ ಮಾಡಲಾಗಿದೆ. ಆರೋಪಿಗಳು ಜೈಲಿನಲ್ಲಿ ಪರಸ್ಪರ ಪರಿಚಿತರಾಗಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಡಿಸೆಂಬರ್ 26ಕ್ಕೆ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ನುಡಿ ನಮನ ಕಾರ್ಯಕ್ರಮ

0

ದಾವಣಗೆರೆ: ಹಿರಿಯ ಶಾಸಕ ದಿವಂಗತ ಡಾ. ಶಾಮನೂರು ಶಿವಶಂಕರಪ್ಪನವರ ಸ್ಮರಣಾರ್ಥ ‘ನುಡಿನಮನ’ ಕಾರ್ಯಕ್ರಮವನ್ನು ಅವರ ಕುಟುಂಬಸ್ಥರು ಡಿಸೆಂಬರ್ 26ರಂದು ಹಮ್ಮಿಕೊಂಡಿದ್ದಾರೆ. ಹಳೇ ದಾವಣಗೆರೆಯ ಶ್ರೀ ಕಲ್ಲೇಶ್ವರ ಮಿಲ್ ಹಿಂಭಾಗದಲ್ಲಿರುವ 100 ಎಕರೆ ವಿಶಾಲ ಪ್ರದೇಶದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರ ಪುತ್ರ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ನುಡಿನಮನ ಕಾರ್ಯಕ್ರಮಕ್ಕಾಗಿ ಮೂರು ಬೃಹತ್ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಸ್ವಾಮೀಜಿಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿವಿಧ ರಾಜಕೀಯ ನಾಯಕರು ಹಾಗೂ ಶಾಮನೂರು ಕುಟುಂಬದ ಸದಸ್ಯರು ಭಾಗವಹಿಸಲಿದ್ದಾರೆ. ಬೆಳಗ್ಗೆ 10.15ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾ. ಶಾಮನೂರು ಶಿವಶಂಕರಪ್ಪ ಅವರು ನಡೆದು ಬಂದ ಬದುಕಿನ ಹಾದಿಯನ್ನು ಒಳಗೊಂಡ ‘ಅಮೃತ ಪುರುಷ’ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿ ನುಡಿನಮನ ಸಲ್ಲಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 2026ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.

ಕಾರ್ಯಕ್ರಮದ ಸಾನಿಧ್ಯ ವಹಿಸಲಿರುವ ವಿವಿಧ ಮಠಾಧೀಶರು ಆಶೀರ್ವಚನ ನೀಡಲಿದ್ದು, ಡಾ. ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಹೊಂದಿದ್ದ ಸಾಂಗತ್ಯದ ಕುರಿತು ಅವರ ಮೊಮ್ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

 

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: ಮಂಡ್ಯ ಮೂಲದ ಯುವತಿ ಸಜೀವ ದಹನ.!

0

ಮಂಡ್ಯ: ಚಿತ್ರದುರ್ಗದ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಮಂಡ್ಯ ಜಿಲ್ಲೆಯ ಯುವತಿ ಸಜೀವ ದಹನಗೊಂಡು ಸಾವಿಗೀಡಾದ ಘಟನೆ ವರದಿಯಾಗಿದೆ. ಮೃತ ಯುವತಿಯನ್ನು ಕೆ.ಆರ್.ಪೇಟೆ ತಾಲೂಕಿನ ಅಂಕನಹಳ್ಳಿ ಗ್ರಾಮದ ನವ್ಯ ಎಂದು ಗುರುತಿಸಲಾಗಿದೆ.

ನವ್ಯ ಅವರ ಕುಟುಂಬವು ಪ್ರಸ್ತುತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪಟ್ಟಣದಲ್ಲಿ ವಾಸವಾಗಿತ್ತು. ನವ್ಯ ಬೆಂಗಳೂರಿನಲ್ಲಿ ಎಂ.ಟೆಕ್‌ ಶಿಕ್ಷಣ ಪೂರ್ಣಗೊಳಿಸಿ, ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ನೆನ್ನೆ ಬೆಂಗಳೂರಿನಿಂದ ಬಸ್ ಹತ್ತಿ ಪ್ರಯಾಣ ಬೆಳೆಸಿದ್ದ ಅವರು, ರಾತ್ರಿ ನಡೆದ ಭೀಕರ ಬಸ್ ಅಪಘಾತದಲ್ಲಿ ಸಜೀವ ದಹನಗೊಂಡು ಪ್ರಾಣ ಕಳೆದುಕೊಂಡಿದ್ದಾರೆ. ನವ್ಯ ಅವರ ಅಕಾಲಿಕ ಸಾವಿನಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದ್ದು, ಸಂಬಂಧಿಕರು ಹಾಗೂ ಊರಿನವರಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

ವಿವಿಧ ಹೋಟೆಲ್‌ʼಗಳ ಮೇಲೆ ಅಧಿಕಾರಿಗಳ ದಾಳಿ: 2-3 ದಿನದ ಹಳೆಯ ಮಾಂಸ, ಪನ್ನೀರ್ ಪತ್ತೆ

0

ರಾಯಚೂರು: ಕರ್ನಾಟಕದ ಅನೇಕ ಹೋಟೆಲ್‌, ರೆಸ್ಟೋರೆಂಟ್‌, ಬೇಕರಿ ಹಾಗೂ ಬಾರ್‌ & ರೆಸ್ಟೋರೆಂಟ್‌ಗಳಲ್ಲಿ ಕಳಪೆ ಆಹಾರ ಪತ್ತೆಯಾಗುತ್ತಿರುವ ಹಿನ್ನೆಲೆ ಸಾರ್ವಜನಿಕರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ನಾಲ್ಕು ಇಲಾಖೆ ಅಧಿಕಾರಿಗಳು ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದಾರೆ.

ರಾಯಚೂರು ಮಹಾನಗರ ಪಾಲಿಕೆ, ಕಂದಾಯ ಇಲಾಖೆ, ಆಹಾರ ಸುರಕ್ಷತಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಒಟ್ಟು 19 ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಎರಡು–ಮೂರು ದಿನಗಳಷ್ಟು ಹಳೆಯ ಮಾಂಸ ಹಾಗೂ ಪನ್ನೀರ್‌ಗಳನ್ನು ಫ್ರೀಜರ್‌ಗಳಲ್ಲಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ ಕಲಬೆರಿಕೆ ಮಾಡಿರುವುದು ಹಾಗೂ ಸಂಶಯ ಹುಟ್ಟಿಸುವ ಆಹಾರ ಪದಾರ್ಥಗಳು ಕಂಡುಬಂದಿದ್ದು, ಇದನ್ನು ನೋಡಿ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ.

ಪರಿಶೀಲನೆ ವೇಳೆ ಹಲವು ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಬೇಕರಿಗಳಲ್ಲಿ ಆಹಾರ ಗುಣಮಟ್ಟ ಕಳಪೆಯಾಗಿರುವುದು, ಶುಚಿತ್ವದ ಕೊರತೆ ಮತ್ತು ಅಗತ್ಯ ಲೈಸೆನ್ಸ್‌ಗಳಿಲ್ಲದೇ ವ್ಯಾಪಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಕೆಲವು ಕಡೆಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಬಳಸಲಾಗುತ್ತಿದ್ದ 27 ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ.

ನಿಯಮ ಉಲ್ಲಂಘಿಸಿದ ವ್ಯಾಪಾರಸ್ಥರಿಗೆ ದಂಡ ವಿಧಿಸಿ ನೋಟಿಸ್‌ ನೀಡಲಾಗಿದ್ದು, ಒಟ್ಟು ₹1 ಲಕ್ಷ 8 ಸಾವಿರ ದಂಡ ವಸೂಲಿ ಮಾಡಲಾಗಿದೆ. ನಿಯಮ ಉಲ್ಲಂಘನೆ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೋಹಾಪಾತ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಹೋಟೆಲ್‌ಗಳಲ್ಲಿ ಆಹಾರ ಸೇವಿಸುವ ಮುನ್ನ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಬಗ್ಗೆ ಜಾಗರೂಕರಾಗಿರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

error: Content is protected !!