Home Blog Page 274

ಗಮನಿಸಿ.. ಬೆಂಗಳೂರಿನ ಈ ಪ್ರದೇಶಗಳಲ್ಲಿ ಡಿ. 26ಕ್ಕೆ ಪವರ್ ಕಟ್!

0

ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲಿ ಡಿಸೆಂಬರ್ 26, 2025ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 66/11 ಕೆವಿ ಕಗ್ಗೇನಹಳ್ಳಿ ಸಬ್‌ಸ್ಟೇಷನ್‌ನಲ್ಲಿ ಕೇಬಲ್ ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವ್ಯತ್ಯಯ ಸಂಭವಿಸಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಎಕ್ಸ್ ಮೂಲಕವೂ ಮಾಹಿತಿ ಹಂಚಿಕೊಳ್ಳಲಾಗಿದೆ.

ಬೆಸ್ಕಾಂ ನೀಡಿರುವ ಮಾಹಿತಿಯಂತೆ, ಡಿಸೆಂಬರ್ 26ರಂದು ಬೆಳಿಗ್ಗೆ 11ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಕಗ್ಗೇನಹಳ್ಳಿ ಸಬ್‌ಸ್ಟೇಷನ್‌ನ 9–7 ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವುದರಿಂದ ಈ ಅವಧಿಯಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

ವಿದ್ಯುತ್ ವ್ಯತ್ಯಯಕ್ಕೆ ಒಳಪಡುವ ಪ್ರದೇಶಗಳು ಹೀಗಿವೆ: ನಾರ್ಥ್ ಗೇಟ್ 1, 2, 3, ಎಂಬಾಸಿ, ಫೀಲಿಪ್ಸ್ ಕಂಪನಿ, ದ್ವಾರಕನಗರ, ಬಾಬಾನಗರ, ಕಗ್ಗೇನಹಳ್ಳಿ ಸುತ್ತಮುತ್ತಲ ಪ್ರದೇಶಗಳು, ಬಾಗಲೂರು ಕ್ರಾಸ್, ಮಟ್ಟು ಬಾಗಲೂರು ಮುಖ್ಯ ರಸ್ತೆ, ಮಣಿಪಾಲ ಕಾಲೇಜು, BSF, PDMS, ಬಾಗಲೂರು ಕ್ರಾಸ್ ವಿನಾಯಕನಗರ ಸೇರಿದಂತೆ ಸಮೀಪದ ಇತರ ಪ್ರದೇಶಗಳು.

ನಿರ್ವಹಣಾ ಕಾರ್ಯ ಪೂರ್ಣಗೊಂಡ ಬಳಿಕ ವಿದ್ಯುತ್ ಸರಬರಾಜು ಪುನಃ ಆರಂಭಿಸಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದ್ದು, ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಿ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಚಿತ್ರದುರ್ಗ ಬಸ್‌ ದುರಂತ: ಬ್ಯಾಚುಲರ್ ಪಾರ್ಟಿಗೆ ಪ್ರವಾಸ ಹೊರಟಿದ್ದ ತಾಯಿ-ಮಗಳು ನಾಪತ್ತೆ!

0

ಚಿತ್ರದುರ್ಗ: ಚಿತ್ರದುರ್ಗದ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತವು ಬೆಂಗಳೂರಿನ ಮಾವಳ್ಳಿ ನಿವಾಸದ ಕುಟುಂಬ ಹಾಗೂ ಸಹೋದರರ ಸಮೂಹದ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ತಂಡದಲ್ಲಿದ್ದ ಕವಿತಾ ಎಂಬ ಯುವತಿಯ ಮದುವೆ ನಿಗದಿಯ ಹಿನ್ನೆಲೆಯಲ್ಲಿ, ಬ್ಯಾಚುಲರ್ ಪಾರ್ಟಿ ಹಾಗೂ ಕ್ರಿಸ್‌ಮಸ್ ರಜೆಯ ಪ್ರಯುಕ್ತ ಗೋಕರ್ಣ ಪ್ರವಾಸಕ್ಕೆ ಹೊರಟ ಏಳು ಜನರ ತಂಡ ಅಪಘಾತಕ್ಕೆ ಸಿಲುಕಿದ್ದು, ಇಬ್ಬರು ಮೃತರಾಗಿದ್ದಾರೆ.

27 ವರ್ಷದ ಬಿಂದು ಹಾಗೂ ಆಕೆಯ 3 ವರ್ಷದ ಮಗಳು ಗ್ರೀಯಾ ಇನ್ನೂ ನಾಪತ್ತೆಯಾಗಿದ್ದಾರೆ. ತಾಯಿ–ಮಗು ನಾಪತ್ತೆ ಸುದ್ದಿಯು ಕುಟುಂಬಸ್ಥರಿಗೆ ಆಘಾತ ತಂದಿದೆ. ಬೆಂಗಳೂರಿನ ಮಾವಳ್ಳಿ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಈ ತಂಡದಲ್ಲಿ ಮಂಜುನಾಥ್, ಕವಿತಾ, ದಿಲೀಪ್, ಸಂಧ್ಯಾ, ಶಶಾಂಕ್, ಬಿಂದು ಮತ್ತು ಪುಟ್ಟ ಮಗು ಗ್ರೀಯಾ ಸೇರಿದ್ದರು. ಇವರಲ್ಲಿ ಹೆಚ್ಚಿನವರು ಐಟಿ ಉದ್ಯೋಗಿಗಳಾಗಿದ್ದು, ಸಹೋದ್ಯೋಗಿಗಳಾಗಿ ಈ ಪ್ರವಾಸವನ್ನು ಯೋಜಿಸಿದ್ದರು.

ಮಾವಳ್ಳಿಯಿಂದ ಮೂರು ದಿನಗಳ ಗೋಕರ್ಣ ಟ್ರಿಪ್‌ಗಾಗಿ ಹೊರಟ ಈ ತಂಡ ಮಧ್ಯರಾತ್ರಿ ಚಿತ್ರದುರ್ಗದ ಬಳಿ ಭೀಕರ ಬಸ್ ಅಪಘಾತಕ್ಕೆ ಸಿಲುಕಿತು. ಅಪಘಾತದಲ್ಲಿ ಮಂಜುನಾಥ್ ಗೆ ಗಂಭೀರ ಗಾಯಗಳು ದಾಖಲಾಗಿದ್ದು, ಸೊಂಟದ ಕೆಳಭಾಗ ಮತ್ತು ಎಡ ಕಾಲಿಗೆ ಸುಟ್ಟ ಗಾಯಗಳಾಗಿವೆ. ಅವರನ್ನು ತಕ್ಷಣವೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಮುಂದಿನ 24 ಗಂಟೆಗಳ ಅವಧಿಯಲ್ಲಿ ತೀವ್ರ ನಿಗಾವಿನ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಶಶಾಂಕ್ ಹಾಗೂ ಸಂಧ್ಯಾ ಗಂಭೀರ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದವರಿಗೆ ಸಣ್ಣ ಗಾಯಗಳಾಗಿದ್ದು, ತಕ್ಷಣ ಚಿಕಿತ್ಸೆ ನೀಡಲಾಗಿದೆ. ಆದರೆ ಅತ್ಯಂತ ನೋವಿನ ಸಂಗತಿ ಎಂದರೆ, ಬಿಂದು ಹಾಗೂ ಆಕೆಯ 3 ವರ್ಷದ ಮಗು ಗ್ರೀಯಾ ಕುರಿತು ಯಾವುದೇ ಮಾಹಿತಿ ಇಲ್ಲದೇ ಇರುವುದು. ಕುಟುಂಬಸ್ಥರು, ಅಪಘಾತ ಸ್ಥಳ ಮತ್ತು ಆಸ್ಪತ್ರೆಗಳಲ್ಲಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹೊಸೂರು ಬಳಿ ಹಳ್ಳಿಗೆ ನುಗ್ಗಿದ 40ಕ್ಕೂ ಹೆಚ್ಚು ಕಾಡಾನೆ ಹಿಂಡು!

0

ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ತಮಿಳುನಾಡು ಗಡಿ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ರೈತರು ಆತಂಕದಲ್ಲಿದ್ದಾರೆ. ಕಾಡಿನಿಂದ ನಾಡಿಗೆ ದಾಳಿ ಇಟ್ಟಿರುವ ಕಾಡಾನೆಗಳ ದೊಡ್ಡ ಹಿಂಡು ರೈತರ ಬೆಳೆಗಳನ್ನು ನಾಶಪಡಿಸುತ್ತಿದೆ.

ತಮಿಳುನಾಡಿನ ಹೊಸೂರು ಸಮೀಪದ ಶಾನಮಾವು ಪ್ರದೇಶದಲ್ಲಿ ಸುಮಾರು 40ಕ್ಕೂ ಹೆಚ್ಚು ಕಾಡಾನೆಗಳಿರುವ ಹಿಂಡು ಕಾಣಿಸಿಕೊಂಡಿದ್ದು, ಕಳೆದ ಎರಡು ದಿನಗಳಿಂದ ಶಾನಮಾವು, ಪಿರ್ಜೆಹಳ್ಳಿ ಹಾಗೂ ನಾಯಕನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿವೆ. ಈ ಕಾಡಾನೆಗಳ ಹಾವಳಿಯಿಂದಾಗಿ ರೈತರು ಬೆಳೆದ ರಾಗಿ ಸೇರಿದಂತೆ ಹಲವು ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ.

ರಾತ್ರಿ ವೇಳೆಯಲ್ಲಿ ಕೃಷಿ ಭೂಮಿಗೆ ನುಗ್ಗುತ್ತಿರುವ ಕಾಡಾನೆಗಳ ಹಿಂಡು ಹೊಲಗಳಲ್ಲಿ ಬೆಳೆದ ಬೆಳೆಗಳನ್ನು ತುಳಿದು ನಾಶಪಡಿಸುತ್ತಿದ್ದು, ರೈತರು ತೀವ್ರ ಕಂಗಾಲಾಗಿದ್ದಾರೆ. ಕಾಡಾನೆಗಳ ಭಯದಿಂದಾಗಿ ರೈತರು ಹೊಲಗಳಿಗೆ ಹೋಗಲು ಕೂಡ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ.

ಮತ್ತೆ ಚಿನ್ನದ ದರ ಏರಿಕೆ! ಬೆಳ್ಳಿ ಬೆಲೆಯೂ ಹೆಚ್ಚಳ! ಹೀಗಿದೆ ಇಂದಿನ ಬಂಗಾರ-ಬೆಳ್ಳಿ ರೇಟ್ ವಿವರ

0

ಚಿನ್ನ ಕೇವಲ ಸ್ಥಿರ ಸಂಪತ್ತಾಗಿ ಉಳಿದಿಲ್ಲ, ಬದಲಾಗಿ ಕಾಲ ಉರುಳಿದಂತೆ ಹೆಚ್ಚು ಲಾಭ ನೀಡುವ ಕಮೊಡಿಟಿಯಾಗಿಯೂ ಪ್ರಸಿದ್ಧವಾಗುತ್ತಿದೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಚಿನ್ನಕ್ಕೆ ಸಾಕಷ್ಟು ಮಹತ್ವ ನೀಡಲಾಗಿದೆ. ಬಹುತೇಕ ಭಾರತೀಯ ಕುಟುಂಬಗಳು ಚಿನ್ನವನ್ನು ಹೊಂದಿವೆ ಕಾರಣ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಪ್ರತೀಕವೆಂದೂ ನಂಬಲಾಗಿದೆ.

ಇನ್ನೊಂದೆಡೆ ರಾಷ್ಟ್ರದ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಚಿನ್ನದ ಮೀಸಲುಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ, ವಿಶೇಷವಾಗಿ ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ ಮೌಲ್ಯದ ವಿಶ್ವಾಸಾರ್ಹ ಸಂಗ್ರಹವಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಭಾರತವು ಸಹ ಸಾಕಷ್ಟು ಅಗಾಧ ಪ್ರಮಾಣದ ಚಿನ್ನದ ಮೀಸಲನ್ನು ಹೊಂದಿದೆ.

ಕ್ರಿಸ್‌ಮಸ್‌ ಹಬ್ಬದ ದಿನವಾದ ಇಂದು ಚಿನ್ನ, ಬೆಳ್ಳಿ ಬೆಲೆಗಳು ಅಲ್ಪ ಏರಿಕೆ ಆಗಿವೆ. ಚಿನ್ನದ ಬೆಲೆ 30 ರೂ, ಬೆಳ್ಳಿ ಬೆಲೆ 1 ರೂ ಹೆಚ್ಚಿದೆ. 22 ಕ್ಯಾರಟ್ ಚಿನ್ನದ ಬೆಲೆ 12,735 ರೂನಿಂದ 12,765 ರೂಗೆ ಏರಿದೆ. 24 ಕ್ಯಾರಟ್ ಚಿನ್ನದ ಬೆಲೆ 13,925 ರೂಗೆ ಏರಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 233 ರೂನಿಂದ 234 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 245 ರೂ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,650 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,39,250 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,650 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,400 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 25ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,925 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,765 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,444 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 234 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,925 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,765 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 234 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,765 ರೂ
  • ಚೆನ್ನೈ: 12,820 ರೂ
  • ಮುಂಬೈ: 12,765 ರೂ
  • ದೆಹಲಿ: 12,780 ರೂ
  • ಕೋಲ್ಕತಾ: 12,765 ರೂ
  • ಕೇರಳ: 12,765 ರೂ
  • ಅಹ್ಮದಾಬಾದ್: 12,770 ರೂ
  • ಜೈಪುರ್: 12,780 ರೂ
  • ಲಕ್ನೋ: 12,780 ರೂ
  • ಭುವನೇಶ್ವರ್: 12,765 ರೂ

ಜೈಲಿನಲ್ಲಿದ್ದರೂ ಕೋಟ್ಯಂತರ ಕನಸುಗಳು! ಜಾಕ್ವೆಲಿನ್‌ಗೆ ‘ಬೆವರ್ಲಿ ಹಿಲ್ಸ್ ಲವ್ ನೆಸ್ಟ್’ ಗಿಫ್ಟ್‌ ನೀಡಿದ ಸುಖೇಶ್

ತಿಹಾರ್ ಜೈಲಿನಲ್ಲಿ ಬಂಧನದಲ್ಲಿರುವ ಮಹಾ ವಂಚಕ ಸುಖೇಶ್ ಚಂದ್ರಶೇಖರ್, ತನ್ನ ಮೋಸದ ಕಥೆಗೆ ಮತ್ತೆ ಹೊಸ ಅಧ್ಯಾಯ ಸೇರಿಸಿದ್ದಾನೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಬೆವರ್ಲಿ ಹಿಲ್ಸ್‌ನಲ್ಲಿ ದುಬಾರಿ ಮನೆ ನೀಡಿದ್ದೇನೆ ಎಂಬ ದಾವೆಯೊಂದಿಗೆ ಜೈಲಿನಿಂದಲೇ ಪ್ರೇಮಪತ್ರ ಬರೆದಿದ್ದಾನೆ.

ಈ ಪತ್ರದಲ್ಲಿ ಸುಖೇಶ್, “ನೀನು ಸಾಧ್ಯವಿಲ್ಲ ಎಂದುಕೊಂಡಿದ್ದ ಅದೇ ಪ್ರಾಪರ್ಟಿ ಈಗ ಪೂರ್ಣಗೊಂಡಿದೆ. ಇದು ನಮ್ಮ ಮನೆ. ಈ ಕ್ರಿಸ್‌ಮಸ್‌ಗೆ ನಿನಗಾಗಿ ಉಡುಗೊರೆ” ಎಂದು ಬರೆದಿದ್ದಾನೆ. ಅಲ್ಲದೆ, “ನಮ್ಮ ಹೊಸ ಮನೆಯ ಸುತ್ತ ವಿಶಾಲ ಗಾಲ್ಫ್ ಕೋರ್ಸ್ ಇದೆ” ಎಂದು ವಿವರಿಸಿದ್ದಾನೆ. ಇದಕ್ಕೆ ಜೊತೆಗೆ, ಜಾಕ್ವೆಲಿನ್ ಐಪಿಎಲ್ ತಂಡದ ಮಾಲಕಿ ಆಗಬೇಕು ಎಂಬ ಆಸೆಯನ್ನು ನೆರವೇರಿಸುವುದಾಗಿ ಹೇಳಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಆದರೆ ವಾಸ್ತವವೇನೆಂದರೆ, ಸುಖೇಶ್‌ನ ಎಲ್ಲಾ ಆಸ್ತಿ-ಪಾಸ್ತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೈಲಿನಲ್ಲೇ ಕುಳಿತುಕೊಂಡು ವಿಐಪಿಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ನಟಿಯರನ್ನು ವಂಚಿಸಿ ನೂರಾರು ಕೋಟಿ ರೂಪಾಯಿ ಹಣ ಗಳಿಸಿದ್ದ ಈತನ ಹಿನ್ನೆಲೆ, ಅವನ ಹೇಳಿಕೆಗಳ ಮೇಲೆ ಗಂಭೀರ ಅನುಮಾನ ಮೂಡಿಸಿದೆ.

ಜಾಕ್ವೆಲಿನ್ ಫರ್ನಾಂಡೀಸ್ ಸೇರಿದಂತೆ ಹಲವು ಬಾಲಿವುಡ್ ನಟಿಯರಿಗೆ ದುಬಾರಿ ಕಾರು, ಮನೆ, ಉಡುಗೊರೆ ನೀಡಿದ್ದ ಪ್ರಕರಣಗಳ ತನಿಖೆ ಈಗಾಗಲೇ ನಡೆಯುತ್ತಿದ್ದು, ಜಾಕ್ವೆಲಿನ್ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಸುಖೇಶ್‌ನ ಪತ್ರ ಪ್ರೇಮವೇ ಅಥವಾ ಮತ್ತೊಂದು ಮೋಸದ ಅಧ್ಯಾಯವೇ ಎಂಬ ಪ್ರಶ್ನೆ ಇದೀಗ ಎದ್ದಿದೆ.

Chitradurga Accident: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ಧರಾಮಯ್ಯ!

0

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ.

ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದು, ಇದೀಗ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಚಿತ್ರದುರ್ಗ ಬಳಿ ಲಾರಿ ಮತ್ತು ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾಗಿರುವ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿದೆ. ಕ್ರಿಸ್ಮಸ್‌ ರಜೆಯ ಹಿನ್ನೆಲೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ಅಂತ್ಯಗೊಂಡಿರುವುದು ಅತ್ಯಂತ ವಿಷಾದನೀಯ” ಎಂದು ಬರೆದುಕೊಂಡಿದ್ದಾರೆ.

ಅಪಘಾತದ ಕಾರಣಗಳ ಕುರಿತು ಸಮಗ್ರ ತನಿಖೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಚಿತ್ರದುರ್ಗ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

0

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿ (PNRF)ಯಿಂದ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು. ಅಲ್ಲದೆ, ಗಾಯಗೊಂಡವರಿಗೆ ₹50,000 ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಾಗಿರುವ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಅವರು, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.

ಗೊರ್ಲತ್ತು ಕ್ರಾಸ್ ಬಳಿ ಮುಂಜಾವ 3 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್​ಗೆ ಎದುರು ಬದಿಯಿಂದ ಬರುತ್ತಿದ್ದ ಕಂಟೇನರ್ ಲಾರಿ ಡಿವೈಡ್ ಕ್ರಾಸ್ ಮಾಡಿ ಡಿಕ್ಕಿಯಾಗಿದೆ. ಪರಿಣಾಮವಾಗಿ ಬಸ್ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿ ಉರಿದು 9 ಮಂದಿ ಸಜೀವ ದಹನವಾಗಿದ್ದಾರೆ.

ಲಾರಿ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. 32 ಆಸನ ಸಾಮರ್ಥ್ಯದ ಬಸ್‌ನಲ್ಲಿ 29 ಮಂದಿ ಪ್ರಯಾಣಿಸುತ್ತಿದ್ದರು. ಬಸ್ ಚಾಲಕ ಹಾಗೂ ಕ್ಲೀನರ್ ಪಾರಾಗಿದ್ದಾರೆ. ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಚಿತ್ರದುರ್ಗ ಹಾಗೂ ತುಮಕೂರಿನ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋಳಿ ಫಾರ್ಮ್ ಗಬ್ಬು ವಾಸನೆಗೆ ಆಕ್ರೋಶ: ಫಾರ್ಮ್‌ಗೆ ನುಗ್ಗಿ ಕೋಳಿ, ಮೊಟ್ಟೆ ಹೊತ್ತೊಯ್ದ ಗ್ರಾಮಸ್ಥರು!

0

ಗಜೇಂದ್ರಗಡ: ಕೋಳಿ ಫಾರ್ಮ್‌ನಿಂದ ಬರುತ್ತಿದ್ದ ತೀವ್ರ ಗಬ್ಬು ವಾಸನೆಯಿಂದ ಬೇಸತ್ತ ಗ್ರಾಮಸ್ಥರು ಫಾರ್ಮ್‌ಗೆ ನುಗ್ಗಿ ಕೋಳಿ ಹಾಗೂ ಮೊಟ್ಟೆಗಳನ್ನು ತೆಗೆದುಕೊಂಡು ತೆರಳಿದ ಘಟನೆ ಗಜೇಂದ್ರಗಡ ಸಮೀಪದ ಉಣಚಗೇರಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಗ್ರಾಮದ ಮಧ್ಯದಲ್ಲಿರುವ ಕೋಳಿ ಫಾರ್ಮ್‌ನಿಂದ ದಿನನಿತ್ಯ ಬರುತ್ತಿರುವ ದುರ್ವಾಸನೆಯಿಂದ ಜೀವನ ನಡೆಸುವುದು ಅಸಾಧ್ಯವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮನೆಯೊಳಗೆ ಇರಲು ಆಗದ ಸ್ಥಿತಿ ನಿರ್ಮಾಣವಾಗಿದ್ದು, ದುರ್ವಾಸನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಈ ಸಂಬಂಧ ಕೋಳಿ ಫಾರ್ಮ್ ಅನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಹಲವು ಬಾರಿ ತಹಸೀಲ್ದಾರ್ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನಗೊಂಡ ಗ್ರಾಮಸ್ಥರು ಇಂದು ಕೋಳಿ ಫಾರ್ಮ್‌ಗೆ ನುಗ್ಗಿ ಅಲ್ಲಿ ಇದ್ದ ಕೋಳಿಗಳು ಮತ್ತು ಮೊಟ್ಟೆಗಳನ್ನು ತೆಗೆದುಕೊಂಡು ತೆರಳಿದ್ದಾರೆ.

ಕರ್ತವ್ಯಲೋಪ, ಭ್ರಷ್ಟಾಚಾರ ಆರೋಪ: ಭಟ್ಕಳ ಸಿಪಿಐ, ಹೆಡ್ ಕಾನ್ಸ್​ಟೇಬಲ್ ಸಸ್ಪೆಂಡ್!

0

ಕಾರವಾರ: ಕುಡಿದು ವಾಹನ ಚಲಾಯಿಸಿದ ಪ್ರಕರಣ, ಭ್ರಷ್ಟಾಚಾರ ಹಾಗೂ ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಭಟ್ಕಳ ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಮತ್ತು ಹೆಡ್ ಕಾನ್ಸ್‌ಟೇಬಲ್ ಅಶೋಕ ನಾಯ್ಕ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಆದೇಶ ಹೊರಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ವಿರುದ್ಧ ‘ಡ್ರಿಂಕ್ ಅಂಡ್ ಡ್ರೈವ್’ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನಡೆದ ಪ್ರಾಥಮಿಕ ತನಿಖೆಯಲ್ಲಿ ಅವರು ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದದ್ದು ದೃಢಪಟ್ಟಿದೆ. ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿ ಈ ರೀತಿಯಾಗಿ ನಿಯಮ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಇದಲ್ಲದೆ, ಸಿಪಿಐ ವಿರುದ್ಧ ಹಣಕಾಸಿನ ಅಕ್ರಮ ಆರೋಪಗಳೂ ಕೇಳಿಬಂದಿವೆ. ಡ್ರಿಂಕ್ ಅಂಡ್ ಡ್ರೈವ್ ಪ್ರಕರಣವೊಂದರಲ್ಲಿ ಸಾರ್ವಜನಿಕರಿಂದ ವಸೂಲಿ ಮಾಡಿದ್ದ 15 ಸಾವಿರ ರೂ. ದಂಡದ ಹಣವನ್ನು ನ್ಯಾಯಾಲಯಕ್ಕೆ ಪಾವತಿಸದೆ ಲಪಟಾಯಿಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಜೊತೆಗೆ ದನ ಸಾಗಾಟಗಾರರೊಂದಿಗೆ ಸಂಪರ್ಕ ಹೊಂದಿದ್ದು ಹಾಗೂ ಸಾರ್ವಜನಿಕರಿಂದ ಅಕ್ರಮ ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ದೂರುಗಳೂ ದಾಖಲಾಗಿವೆ. ಹಲವಾರು ಬಾರಿ ಎಚ್ಚರಿಕೆ ನೀಡಿದರೂ ವರ್ತನೆ ತಿದ್ದಿಕೊಳ್ಳದ ಹಿನ್ನೆಲೆ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಟಾರ್‌ವಾರ್ ನಡುವೆಯೇ ಶಾಂತಿಯ ಸಂದೇಶ: ದರ್ಶನ್ ಬಗ್ಗೆ ಸುದೀಪ್ ಮಾತು ವೈರಲ್

ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಫ್ಯಾನ್ಸ್‌ವಾರ್ ತಾರಕಕ್ಕೇರಿರುವ ಸಂದರ್ಭದಲ್ಲೇ ಕಿಚ್ಚ ಸುದೀಪ್ ನೀಡಿದ ಪ್ರತಿಕ್ರಿಯೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ದರ್ಶನ್ ಜೊತೆಗಿನ ಫೋಟೋ ಕುರಿತು ಕೇಳಿದ ಅಭಿಮಾನಿಯ ಪ್ರಶ್ನೆಗೆ ಸುದೀಪ್, “ಅವರಿಗೆ ಸದಾ ಒಳ್ಳೆಯದನ್ನೇ ಬಯಸುತ್ತೇನೆ” ಎಂದು ಉತ್ತರಿಸಿದ್ದಾರೆ.

ಈ ಉತ್ತರ ಸುದೀಪ್ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸ್ಟಾರ್‌ವಾರ್ ಜೋರಾಗಿರುವ ಹೊತ್ತಿನಲ್ಲಿ ವಿವಾದಕ್ಕೆ ಆಹಾರ ನೀಡದೇ, ಶಾಂತ ಮತ್ತು ಸಕಾರಾತ್ಮಕ ನಿಲುವು ತಳೆದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ದರ್ಶನ್ ಬಗ್ಗೆ ಸುದೀಪ್ ಒಳ್ಳೆಯ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದನ್ನು ಈ ಮಾತೇ ಸ್ಪಷ್ಟಪಡಿಸಿದೆ ಎನ್ನಲಾಗುತ್ತಿದೆ. ಈ ಮೂಲಕ ಸ್ಟಾರ್‌ವಾರ್ ಗಲಾಟೆಗೆ ತೆರೆ ಬೀಳುತ್ತದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದ್ದು, ಮುಂದಿನ ದಿನಗಳೇ ಇದಕ್ಕೆ ಉತ್ತರ ನೀಡಬೇಕಿದೆ.

error: Content is protected !!