ಚಿತ್ರದುರ್ಗ:– ಇಂದು ಬೆಳ್ಳಂ ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ದುರಂತ ಎಂಥವರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ.
ಘಟನೆ ವಿವರ:-
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ನಡೆದ ಭೀಕರ ಬಸ್ ದುರಂತದಲ್ಲಿ ಸಾಕಷ್ಟು ಮಂದಿ ಸಾವಿಗೀಡಾಗಿದ್ದಾರೆ. ಹಿರಿಯೂರಿನಿಂದ ಬೆಂಗಳೂರಿಗೆ ತೆರಳುತಿದ್ದ ಲಾರಿ ಬೆಂಗಳೂರಿನಿಂದ ಶಿವಮೊಗ್ಗ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್ಸಿಗೆ ಗುದ್ದಿದೆ.
ಲಾರಿ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಡಿವೈಡರ್ ದಾಟಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಬಸ್ಸಿಗೆ ಬೆಂಕಿ ಹೊತ್ತುಕೊಂಡು ಸುಮಾರು 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಹಲವು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳು ಹಿರಿಯೂರು ಹಾಗೂ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸೀಬರ್ಡ್ ಮಾಲೀಕ ಹೇಳಿದ್ದೇನು?
ವಿರುದ್ಧ ದಿಕ್ಕಿನಲ್ಲಿ ಬಂದ ಟ್ರಕ್ ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ ಗುದ್ದಿದ್ದರಿಂದ ಈ ದುರಂತ ಸಂಭವಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸ್ಲೀಪರ್ ಬಸ್ಸಿನಲ್ಲಿ 29 ಜನ ಪ್ರಯಾಣಿಸುತ್ತಿದ್ದರು. ಟ್ರಕ್ ವಿರುದ್ಧ ದಿಕ್ಕಿನಿಂದ ಬಂದು ಡೀಸೆಲ್ ಟ್ಯಾಂಕ್ ಬಳಿ ಗುದ್ದಿದೆ. ಗುದ್ದಿದ ರಭಸಕ್ಕೆ ಮೊದಲು ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿತು. ನಂತರ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಿವರಿಸಿದರು.
ಪ್ರಯಾಣಿಕರ ಸುರಕ್ಷೆಗೆ ಸಂಬಂಧಿಸಿದ ಎಲ್ಲಾ ಮಾನದಂಡಗಳನ್ನು ಬಸ್ಸು ಹೊಂದಿತ್ತು. ಎರಡೂ ತುರ್ತು ನಿರ್ಗಮನ ದ್ವಾರವೂ ಇತ್ತು. 29 ಪ್ರಯಾಣಿಕರ ಪೈಕಿ 25 ಮಂದಿ ಗೋಕರ್ಣಕ್ಕೆ ಬುಕ್ ಮಾಡಿದರೆ 2 ಮಂದಿ ಶಿವಮೊಗ್ಗ, 2 ಮಂದಿ ಕುಮಟಾಕ್ಕೆ ಸೀಟ್ ಬುಕ್ ಮಾಡಿದ್ದರು ಎಂದು ಮಾಹಿತಿ ನೀಡಿದರು.
ಬಸ್ಸಿನ ಕ್ಲೀನರ್ ಹೇಳಿದ್ದೇನು?
ರಾತ್ರಿ 1:30 ರಿಂದ 2 ಗಂಟೆಯ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಲಗಿದ್ದ ಬಸ್ಸಿನಿಂದ ನಾನು ಹೊರ ಬಿದ್ದಿದ್ದೆ. ನೋಡ ನೋಡುತ್ತಿದ್ದಂತೆ ಧಗಧಗನೆ ಬಸ್ ಹೊತ್ತಿ ಉರಿಯತೊಡಗಿತು. ಡ್ರೈವರ್ ಹೊರ ಬಿದ್ದಿದ್ದು ಅವರ ಕಾಲು ಕೈಗಳಿಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ನಮ್ಮ ಸಹಾಯಕ್ಕೆ ಬಂದರು. ಅಪಘಾತವಾಗುತ್ತಿದ್ದಂತೆ ಏನು ಆಗಿದೆ ಎನ್ನುವುದು ಗೊತ್ತಾಗದೆ ಶಾಕ್‌ನಲ್ಲಿ ಇದ್ದೆವು ಎಂದು ತಿಳಿಸಿದರು.
ಐಜಿಪಿ ರವಿಕಾಂತೇಗೌಡ ಹೇಳಿದ್ದೇನು?
ಸೀಬರ್ಡ್ ಬಸ್ಸಿನಲ್ಲಿದ್ದ 8 ಪ್ರಯಾಣಿಕರು, ಲಾರಿ ಡ್ರೈವರ್ ಸೇರಿ 9 ಮಂದಿ ಸಾವು ಮೃತಪಟ್ಟಿದ್ದಾರೆ. ಸದ್ಯ ಬಸ್ಸಿನಿಂದ ಎಂಟು ಮೃತ ದೇಹಗಳನ್ನು ಹೊರತೆಗೆಯಲಾಗಿದೆ. ಓರ್ವ ಲಾರಿ ಚಾಲಕ ಸೇರಿ ಸದ್ಯದ ಮಾಹಿತಿ ಪ್ರಕಾರ 9 ಜನ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಶಿರಾ ಹಾಗೂ ಹಿರಿಯೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕಳುಹಿಸಿಕೊಡಲಾಗಿದೆ. ಬೆಂಗಳೂರಿನಿಂದ ಡಿಎನ್‌ಎ ಅಂಡ್ ಸುಕೋ ಟೀಂ ಬಂದಿದೆ ಎಂದು ಹೇಳಿದರು.
ಎಸ್‌ಪಿ ರಂಜಿತ್ ಹೇಳಿದ್ದೇನು?
ಸೀಬರ್ಡ್ ಬಸ್ಸಿನಲ್ಲಿದ್ದ 21 ಜನರು ಪತ್ತೆಯಾಗಿದ್ದು 11 ಜನರು ಪತ್ತೆಯಾಗಿಲ್ಲ ಎಂದು ಚಿತ್ರದುರ್ಗ ಎಸ್‌ಪಿ ರಂಜಿತ್ ಹೇಳಿದ್ದಾರೆ. ಸೀಬರ್ಡ್ ಬಸ್ಸಿನಲ್ಲಿದ್ದ 21 ಜನರು ಪತ್ತೆ ಆಗಿದ್ದು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೇವೆ. ಈ ಪೈಕಿ ಆರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿಸಿದರು.