Home Blog Page 276

ಬೆಂಗಳೂರಿನಲ್ಲಿ ಕ್ರಿಸ್ಮಸ್ ಸಂಭ್ರಮ; ಗುರುವಾರ ಪ್ರಮುಖ ರಸ್ತೆಗಳ ಸಂಚಾರಕ್ಕೆ ನಿರ್ಬಂಧ, ಪರ್ಯಾಯ ಮಾರ್ಗಗಳು ಹೀಗಿದೆ!

0

ಬೆಂಗಳೂರು: ಗುರುವಾರ ಬೆಂಗಳೂರಿನಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಜೋರಾಗಿ ನಡೆಯಲಿದೆ.

ಹೀಗಾಗಿ ನಗರದ ಹೋಲಿ ಗೋಸ್ಟ್ ಚರ್ಚ್, ಫೀನಿಕ್ಸ್ ಮಾಲ್, ವಿಆರ್ ಮಾಲ್ ಮತ್ತು ನೆಕ್ಸಸ್ ಶಾಂತಿನಿಕೇತನದಂತೆ ಪ್ರಮುಖ ಸ್ಥಳಗಳಲ್ಲಿ ಭಾರಿ ಜನಸಂದಣಿ ನಿರೀಕ್ಷೆಯಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಬಹುದು. ಸಂಚಾರ ಪೊಲೀಸ್ ಇಲಾಖೆ ಗುರುವಾರ ಮಧ್ಯಾಹ್ನ 12 ರವರೆಗೆ ಕೆಲವು ಮುಖ್ಯ ರಸ್ತೆಗಳ ಮೇಲೆ ಸಂಚಾರ ನಿರ್ಬಂಧಗಳನ್ನು ಜಾರಿಗೆ ತಂದಿದ್ದು, ವಾಹನ ಚಾಲಕರಿಗೆ ಪರ್ಯಾಯ ಮಾರ್ಗಗಳನ್ನು ಬಳಕೆ ಮಾಡಲು ಸಲಹೆ ನೀಡಲಾಗಿದೆ.

ಜೊತೆಗೆ, ಈ ಪ್ರದೇಶಗಳಲ್ಲಿ ಪಾರ್ಕಿಂಗ್ ನಿಷೇಧ ಹಾಗೂ ಕ್ಯಾಬ್ ಪಿಕಪ್-ಡ್ರಾಪ್ ಪಾಯಿಂಟ್‌ಗಳ ಮಾಹಿತಿ ನೀಡಲಾಗಿದೆ. ಸಾರ್ವಜನಿಕರಿಗೆ ಸುರಕ್ಷಿತ ಪ್ರಯಾಣ ಮತ್ತು ಸಂಚಾರ ಸೌಲಭ್ಯಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಪೊಲೀಸರು ಕೋರಿದ್ದಾರೆ.

ಈ ಕೆಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ:

– ಐಟಿಪಿಎಲ್ ಮುಖ್ಯ ರಸ್ತೆ (ಎರಡೂ ಬದಿಗಳು).

– ಶೆಲ್ ಪೆಟ್ರೋಲ್ ಬಂಕ್, ಬಿ ನಾರಾಯಣಪುರದಿಂದ ಗರುಡಾಚಾರ್ಪಾಳ್ಯ (ಡೆಕಾಥ್ಲಾನ್ ಹತ್ತಿರ).

– ಮೆಡಿಕೇರ್ ಆಸ್ಪತ್ರೆಯಿಂದ ಬಿಗ್ ಬಜಾರ್ ಜಂಕ್ಷನ್ ವರೆಗೆ.

ಕ್ಯಾಬ್ ಪಿಕಪ್ ಮತ್ತು ಡ್ರಾಪ್-ಆಫ್ ಪಾಯಿಂಟ್‌ಗಳು
ಫೀನಿಕ್ಸ್ ಮಾಲ್:

ಡ್ರಾಪ್: ಐಟಿಪಿಎಲ್ ಮುಖ್ಯ ರಸ್ತೆಯಲ್ಲಿರುವ ಬೆಸ್ಕಾಂ ಕಚೇರಿಯ ಹತ್ತಿರ.

ಪಿಕಪ್ ಸ್ಥಳ: ಲೌರಿ ಜಂಕ್ಷನ್ ಹತ್ತಿರ

ನೆಕ್ಸಸ್ ಶಾಂತಿನಿಕೇತನ:

ಡ್ರಾಪ್: ರಾಜಪಾಳ್ಯ ಹತ್ತಿರ

ಪಿಕಪ್: ಆಸ್ಟರ್ ಆಸ್ಪತ್ರೆ ಹತ್ತಿರ

ಪರ್ಯಾಯ ಸಲಹೆಗಳು:
ಹೂಡಿಯಿಂದ ಫೀನಿಕ್ಸ್ ಮಾಲ್ ಕಡೆಗೆ ಹೋಗುವ ವಾಹನಗಳು ಕಾಮಧೇನು ನಗರದಲ್ಲಿ ಯು-ಟರ್ನ್ ತೆಗೆದುಕೊಂಡು, ಶೆಲ್ ಪೆಟ್ರೋಲ್ ಬಂಕ್‌ನಲ್ಲಿ ಎಡಕ್ಕೆ ತಿರುಗಿ, ರೈಲ್ವೆ ರಸ್ತೆಯಲ್ಲಿ ಸಾಗಿ ಹಿಂಭಾಗದ ಗೇಟ್ ಮೂಲಕ ಪ್ರವೇಶಿಸಬೇಕು. ಕೆ.ಆರ್. ಪುರಂ ರೈಲು ನಿಲ್ದಾಣದಿಂದ ಬರುವ ವಾಹನಗಳು ಶೆಲ್ ಪೆಟ್ರೋಲ್ ಬಂಕ್‌ನಲ್ಲಿ ಎಡಕ್ಕೆ ತಿರುಗಿ, ರೈಲ್ವೆ ರಸ್ತೆಯನ್ನು ಬಳಸಿ, ಹಿಂಭಾಗದ ಪ್ರವೇಶ ದ್ವಾರದ ಮೂಲಕ ಫೀನಿಕ್ಸ್ ಮಾಲ್ ಪ್ರವೇಶಿಸಲು ಸೂಚಿಸಲಾಗಿದೆ. ಇದರ ಜತೆಗೆ ಖಾಸಗಿ ವಾಹನಕ್ಕಿಂತ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು ಮತ್ತು ಸಲಹೆಗಳನ್ನು ಪಾಲಿಸಬೇಕು ಎಂದು ಸಂಚಾರ ಪೊಲೀಸರು ಕೋರಿದ್ದಾರೆ.

ಕೋಗನೂರ ಕ್ಲಸ್ಟರ್ ಪ್ರತಿಭಾ ಕಾರಂಜಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಗೋವನಕೊಪ್ಪ ಶಾಲೆಯಲ್ಲಿ ಕೋಗನೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಪ್ರೀತಮ್ ಕಬ್ಬೇರಳ್ಳಿ ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ತಳ್ಳಳ್ಳಿ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಕೋಗನೂರ ಸಿಆರ್‌ಪಿ ಸತೀಶ ಪಶುಪತಿಹಾಳ, ಶಿರಹಟ್ಟಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಯರಗುಪ್ಪಿ, ಅತಿಥಿಗಳಾದ ಭೀಮಣ್ಣ ಕಬ್ಬೇರಳ್ಳಿ, ಜಗದೀಶ ತಳ್ಳಳ್ಳಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕೋಗನೂರ ಗ್ರಾ.ಪಂ ಉಪಾಧ್ಯಕ್ಷೆ ಕಸ್ತೂರೆವ್ವ ತಳ್ಳಳ್ಳಿ, ಸದಸ್ಯರಾದ ಅಜ್ಜಪ್ಪ ಭಜಂತ್ರಿ, ಶಿಕ್ಷಣಪ್ರೇಮಿ ಬಸವರಾಜ ಇಮಡಿ, ಸಿಆರ್‌ಪಿಗಳಾದ ತಿರಕಪ್ಪ ಪೂಜಾರ, ಆರ್ ಮಾಂತೇಶ ಬನ್ನಿಕೊಪ್ಪ, ಸಿ.ವ್ಹಿ, ವಡಕಣ್ಣವರ ಹಿರಿಯ ಶಿಕ್ಷಕರಾದ ಎಮ್.ಬಿ. ಹಾವೇರಿ, ಎಸ್.ಎಫ್. ಮಠದ, ಎನ್.ಕೆ. ಕಲಾಲ, ಜೆ.ಎಸ್. ಯರಗುದ್ರಿ, ಆರ್.ಎಂ. ಕಮ್ಮಾರ, ಆರ್.ಟಿ. ಶಿವಪ್ಪಯ್ಯನಮಠ, ಬಸವರಾಜ ಮಾನೇಗಾರ, ಎಸ್.ಬಿ. ಹೀರೆಮಠ, ಹಾಲೇಶ ಜಕ್ಕಲಿ, ವಿ.ಎಂ. ಮಲ್ಲಪ್ಪನವರ ಮುಂತಾದವರಿದ್ದರು.

ಶಾಲೆಯ ಪ್ರಧಾನ ಗುರುಗಳಾದ ಸಿ.ಟಿ. ಹುರಕಣ್ಣವರ ಸ್ವಾಗತಿಸಿದರು. ಡಿ.ಎಂ. ದ್ಯಾಮಣ್ಣವರ ನಿರೂಪಿಸಿದರು. ಎಸ್.ಎನ್. ಮೇಟಿ ವಂದಿಸಿದರು.

ಢಾಕಾದಲ್ಲಿ ಮತ್ತೆ ಹಿಂಸಾಚಾರ: ಕಚ್ಚಾ ಬಾಂಬ್ ದಾಳಿಗೆ ಓರ್ವ ಬಲಿ!

0

ಢಾಕಾ: ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ರಾಜಧಾನಿ ಢಾಕಾದಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ.

ಬುಧವಾರ ಸಂಜೆ ಮೊಗ್ಬಜಾರ್ ಪ್ರದೇಶದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕದ ಮುಂಭಾಗದ ಫ್ಲೈಓವರ್ ಬಳಿ ಈ ದುರ್ಘಟನೆ ಸಂಭವಿಸಿದೆ. ಫ್ಲೈಓವರ್ ಮೇಲಿನಿಂದ ಅಪರಿಚಿತ ದಾಳಿಕೋರರು ಕಚ್ಚಾ ಸ್ಫೋಟಕ ಸಾಧನವನ್ನು ಕೆಳಗೆ ಎಸೆದಿದ್ದಾರೆ. ನೆಲಕ್ಕೆ ಬಿದ್ದ ತಕ್ಷಣ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿದ್ದ ಸಿಯಾಮ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಸಿಯಾಮ್ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು. ಸ್ಫೋಟದ ಸಮಯದಲ್ಲಿ ಆ ಪ್ರದೇಶದಲ್ಲೇ ಇದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳವನ್ನು ಸುತ್ತುವರೆದು ಭದ್ರತೆ ಹೆಚ್ಚಿಸಿದ್ದಾರೆ. ಸ್ಫೋಟಕ ಎಸೆದ ತಕ್ಷಣ ದಾಳಿಕೋರರು ಪರಾರಿಯಾಗಿದ್ದಾರೆ.

ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಠಾಣೆಯ ರಾಮ್ನಾ ವಿಭಾಗದ ಉಪ ಆಯುಕ್ತ ಮಸೂದ್ ಆಲಂ ಮಾತನಾಡಿ, ಸ್ಫೋಟದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಪ್ರಪಂಚ ಜ್ಞಾನ ಮುಖ್ಯ: ಶಾಸಕ ಡಾ. ಚಂದ್ರು ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಾಲೆಯಲ್ಲಿ ಕಲಿತ ವಿದ್ಯೆಯ ಜೊತೆಗೆ ಹೊರಗಿನ ಪ್ರಪಂಚದ ಜ್ಞಾನ, ಹೊಸ ಸಂಸ್ಕೃತಿ, ಅನುಭವ ತಿಳಿಸಿಕೊಡುವ ಉದ್ದೇಶದಿಂದ ಸರಕಾರವು ಕ್ಷೇತ್ರ ಭೇಟಿಯಂತಹ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದು, ಮಕ್ಕಳು ಇಂತಹ ಯೋಜನೆಯ ಪ್ರಯೋಜನ ಪಡೆದು ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳಬಹುದಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಪಟ್ಟಣದ ಪಿ.ಎಂ.ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.4ರ ಆವರಣದಲ್ಲಿ ಪಿ.ಎಂ.ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಅಡರಕಟ್ಟಿ ಹಾಗೂ ಪಿ.ಎಂ.ಶ್ರೀ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.4 ಲಕ್ಷ್ಮೇಶ್ವರ ಶಾಲೆಗಳ ಎಲ್ಲ ವಿದ್ಯಾರ್ಥಿಗಳಿಗಾಗಿ ಒಟ್ಟು 7 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬುಧವಾರ ಪಿ.ಎಂ.ಶ್ರೀ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಕ್ಷೇತ್ರ ಭೇಟಿ ಒಂದು ದಿನದ ಪ್ರವಾಸ ಕಾರ್ಯಕ್ರಮದ ವಾಹನಗಳಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿ ಮಾತನಾಡಿದರು.

ತರಗತಿಯ ಜ್ಞಾನವನ್ನು ನೈಜ ಪ್ರಪಂಚದ ಜೊತೆ ಬೆಸೆಯುವುದೇ ಕ್ಷೇತ್ರ ಭೇಟಿಯ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಮಹತ್ವದ ಯೋಜನೆಯಡಿ ಪಿ.ಎಂ.ಶ್ರೀ ಶಾಲೆಗಳ ಮಕ್ಕಳಿಗೆ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಸಂಘಟಿಸಲಾಗುತ್ತಿದೆ. ರಸ್ತೆಗಳು ಸರಿಯಾಗಿಲ್ಲವಾದ ಕಾರಣ ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸಿ ಮಕ್ಕಳನ್ನು ಸುರಕ್ಷತೆಯಿಂದ ಕರೆದುಕೊಂಡು ಹೋಗಿ ಬರುವಂತೆ ಸಲಹೆ ನೀಡಿದರು.

ಪುರಸಭೆ ಮಾಜಿ ಸದಸ್ಯರಾದ ಬಸವರಾಜ ಓದುನವರ, ಪ್ರವೀಣ ಬಾಳಿಕಾಯಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ, ಕಾರ್ಯದರ್ಶಿ ಚಂದ್ರು ನೇಕಾರ, ಡಿ.ಡಿ. ಲಮಾಣಿ, ಎಲ್.ಎನ್. ನಂದೆಣ್ಣವರ, ಬಸವರಾಜ ಯತ್ತಿನಹಳ್ಳಿ, ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಎಂ.ಎ. ನದಾಫ್, ಮುಖ್ಯೋಪಾಧ್ಯಾಯರುಗಳಾದ ಬಿ.ಎಂ. ಕುಂಬಾರ, ಎಚ್.ಬಿ. ಸಣ್ಣಮನಿ, ಎಸ್.ಎಚ್. ಉಮಚಗಿ, ಅಡರಕಟ್ಟಿ ಗ್ರಾಮ ಪಂಚಾಯಿತಿ ಸದಸ್ಯೆ ಕಮಲವ್ವ ಲಮಾಣಿ, ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಾದ ಶಿವಾನಂದ ಚಕ್ರಸಾಲಿ, ಮಲ್ಲೇಶಪ್ಪ ಅಡರಕಟ್ಟಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರು, ಸದಸ್ಯರು, ವಿವಿಧ ಶಾಲೆಗಳ ಶಿಕ್ಷಕರು, ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ ಸ್ವಾಗತಿಸಿ ನಿರೂಪಿಸಿದರು. ಸಿಆರ್‌ಪಿಗಳಾದ ಉಮೇಶ ನೇಕಾರ ಹಾಗೂ ಶ್ರೀನಿವಾಸ ಮತ್ತೂರ ನಿರ್ವಹಿಸಿ ವಂದಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಶ ಓದು-ದೇಶ ಸುತ್ತು ಎಂಬ ಮಾತಿನಂತೆ ಪ್ರವಾಸ ಕೇವಲ ಮನರಂಜನೆಯಲ್ಲ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಕೊಠಡಿಯ ಹೊರಗಿನ ಕಲಿಕೆಯು ಬಹು ಮುಖ್ಯ ಪಾತ್ರವಹಿಸುತ್ತದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ವಿಜ್ಞಾನ ಕೇಂದ್ರ, ಕರ್ನಾಟಕ ಹಾಲು ಒಕ್ಕೂಟ ಮುಂತಾದ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುತ್ತದೆ ಎಂದರು.

ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಗುತ್ತಿದೆ: ಶಾಸಕ ಡಾ. ಚಂದ್ರು ಲಮಾಣಿ ಅಕ್ರೋಶ 

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ವಾಕ್ ಸ್ವಾತಂತ್ರ್ಯ ಹತ್ತಿಕ್ಕುವ ನಿಟ್ಟಿನಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ-2025 ತರುತ್ತಿರುವುದರಿಂದ ರಾಜ್ಯದಲ್ಲಿ ಒಂದು ರೀತಿಯ ತುರ್ತು ಪರಿಸ್ಥಿತಿ ಹೇರಿಕೆಯ ವಾತಾವರಣ ನಿರ್ಮಾಣ ಮಾಡುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಅಕ್ರೋಶ ವ್ಯಕ್ತಪಡಿಸಿದರು.

ಅವರು ಪಟ್ಟಣದಲ್ಲಿ ಬಿಜೆಪಿ ಶಿರಹಟ್ಟಿ ಮಂಡಳ, ಲಕ್ಷ್ಮೇಶ್ವರ ನಗರ ಘಟಕದ ವತಿಯಿಂದ ಸರಕಾರ ಜಾರಿಗೆ ತರುತ್ತಿರುವ ದ್ವೇಷ ಭಾಷಣ ವಿಧೇಯಕವನ್ನು ಜಾರಿಗೆ ತರದಂತೆ ಪಟ್ಟಣದ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಜನರ ವಾಕ್ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರಕಾರ ಕಸಿದುಕೊಳ್ಳುತ್ತಿದೆ. ಸರ್ಕಾರ ಆಡಳಿತ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇವುಗಳನ್ನು ಇಟ್ಟುಕೊಂಡು ಯಾರೂ ಸಹ ಸರಕಾರದ ವಿರುದ್ಧ ಮಾತನಾಡಬಾರದು, ಮಾತನಾಡಿದರೆ ಕೇಸು ದಾಖಲಿಸುವ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.

ಶಿರಹಟ್ಟಿ ಬಿಜೆಪಿ ಮಂಡಳದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಹಾಗೂ ಯುವ ಮುಖಂಡ ನವೀನ ಹಿರೇಮಠ ಮಾತನಾಡಿ, ಈ ವಿಧೇಯಕದಿಂದ ಕಾಂಗ್ರೆಸ್ ಸರ್ಕಾರವು ಪ್ರತಿಪಕ್ಷಗಳನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಇಂತಹ ನೂರು ಕಾಯ್ದೆಗಳನ್ನು ಜಾರಿಗೆ ತಂದರೂ ಸಹ ನಾವು ಹೆದರುವ ಪ್ರಶ್ನೆಯೇ ಇಲ್ಲ. ಜನಸಾಮಾನ್ಯರನ್ನು ಅಪರಾಧಿಗಳನ್ನಾಗಿ ಮಾಡುವ ಈ ಕೀಳು ಮಟ್ಟದ ಕಾಯ್ದೆ ಬೇಡ. ಇದರ ಬಗ್ಗೆ ಕಾನೂನು ಹೋರಾಟವನ್ನು ಮಾಡುತ್ತೇವೆ ಎಂದರು.

ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಾನು ಲಮಾಣಿ, ನಿಂಗಪ್ಪ ಕರ್ಜಕಣ್ಣವರ, ಚಂಬಣ್ಣ ಬಾಳಿಕಾಯಿ, ಎಂ.ಆರ್. ಪಾಟೀಲ, ಶಿವಣ್ಣ ಲಮಾಣಿ, ಗಂಗಾಧರ ಮೆಣಸಿನಕಾಯಿ, ಬಸವರಾಜ ಚಕ್ರಸಾಲಿ, ಪ್ರವೀಣ ಬೋಮರೆ, ಮಹಾದೇವಪ್ಪ ಅಣ್ಣಿಗೇರಿ, ವಿಜಯ ಕುಂಬಾರ, ಅಶೋಕ ಶಿರಹಟ್ಟಿ, ಶಿದ್ದನಗೌಡ ಬಳ್ಳೋಳ್ಳಿ, ಈರಣ್ಣ ಪೂಜಾರ, ಭೀಮಣ್ಣ ಯಂಗಾಡಿ, ವಿನಾಯಕ ವಗ್ಗಣ್ಣವರ, ರಮೇಶ ಲಮಾಣಿ, ರಾಮು ನಾಯಕ, ಹನುಮಂತ ಜಾಲಿಮರದ, ಮಂಜುನಾಥ ಗಜಾಕೋಶ, ಪುಂಡಲೀಕ ಲಮಾಣಿ, ವಿಶಾಲ ಬಟಗುರ್ಕಿ, ಸಂತೋಷ ಜಾವೂರ, ಉಳವೇಶಗೌಡ ಪಾಟೀಲ, ರಮೇಶ ಹಾಳದೊಟದ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

ಸಂವಿಧಾನದಲ್ಲಿ ಡಾ. ಅಂಬೇಡ್ಕರ್ ಕೊಟ್ಟಿರುವ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಅಂದು ಇಂದಿರಾ ಗಾಂಧಿ ದೇಶದಲ್ಲಿ ಎಮರ್ಜೆನ್ಸಿ ಘೋಷಣೆ ಮಾಡಿದ್ದರು. ಅಂತೆಯೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಮರ್ಜೆನ್ಸಿ ಘೋಷಣೆ ಮಾಡುತ್ತಿದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಮತ್ತು ಜನರ ಧ್ವನಿಯನ್ನು ನಾಶಪಡಿಸುವ ಇಂಥ ಕಾಯಿದೆ ಯಾವ ಕಾರಣಕ್ಕೂ ಜಾರಿಯಾಗಬಾರದು ಎಂದು ಶಾಸಕ ಡಾ. ಚಂದ್ರು ಲಮಾಣಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಸರ್ಕಾರ ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ್ಕೆ ಬಿಜೆಪಿ ವಿರೋಧ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರವು ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ-2025 ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಇದನ್ನು ಜಾರಿಗೊಳಿಸದಂತೆ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದ ಗಾಂಧಿ ವೃತ್ತದಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದರು.

ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ಇದು ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಸಂವಿಧಾನದ 19(1) ಪರಿಚ್ಛೇದ, (2) ಪರಿಚ್ಛೇದದಡಿ ವಾಕ್ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಡಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಂಗ್ರೆಸ್ ಸರಕಾರ ಕಿತ್ತುಕೊಳ್ಳುತ್ತಿದೆ. ಇದು ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಸಾಧನ. ಇದರಡಿ ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯವನ್ನು ಹೇಳುವುದನ್ನೂ ಕೂಡ ದ್ವೇಷ ಎಂದು ಪರಿಗಣಿಸುವ ಅಪಾಯವಿದೆ. ಜನರು ಭಯದಿಂದ ಮಾತನಾಡದೆ ಇರುವುದು ಸರ್ಕಾರದ ಉದ್ದೇಶವೇ ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಪ್ರಧಾನಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿ, ಈ ವಿಧೇಯಕದಡಿ ಪ್ರತಿಬಂಧಕ ಕ್ರಮಗಳನ್ನು ಸಹ ಉಲ್ಲೇಖಿಸಲಾಗಿದೆ. ಪೊಲೀಸರು ಅಥವಾ ಅಧಿಕಾರಿಗಳು ಸಂಭಾವ್ಯ ಅಪರಾಧ ಎಂದು ಭಾವಿಸಿ ಮುಂಚಿತವಾಗಿ ಕ್ರಮ ಕೈಗೊಳ್ಳಬಹುದು. ಇದರಿಂದ ಪ್ರತಿಭಟನೆಗಳು, ಸಭೆಗಳು ಅಥವಾ ಸಾಮಾಜಿಕ ಚಳವಳಿಗಳನ್ನು ತಡೆಯುವ ಉದ್ದೇಶ ಇದ್ದಂತಿದೆ. ಈ ವಿಧೇಯಕದಿಂದ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹೆಚ್ಚು ತೊಂದರೆಗೆ ಸಿಲುಕುತ್ತಾರೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಮತ್ತು ಜನರ ಧ್ವನಿಯನ್ನು ನಾಶಪಡಿಸುವ ಇಂತಹ ಕಾಯಿದೆ ಜಾರಿಯಾಗಬಾರದು ಎಂದರು.

ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ ಮತ್ತು ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ ಮಾತನಾಡಿ, ಅನ್ಯಾಯ ಅಥವಾ ಸರ್ಕಾರದ ತಪ್ಪುಗಳ ಬಗ್ಗೆ ಮಾತನಾಡಿದರೆ ಭಾವನಾತ್ಮಕ ಹಾನಿ ಎಂದು ಆರೋಪಿಸಿ ಬಂಧಿಸಲು ಇದು ಪೊಲೀಸರಿಗೆ ಅಧಿಕಾರ ನೀಡುತ್ತದೆ. ಪತ್ರಕರ್ತರ ತನಿಖಾ ವರದಿಗಳು ಕೇಸಿನ ತೂಗುಗತ್ತಿ ಎದುರಿಸಬೇಕಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯ ಅಥವಾ ಟೀಕೆಯನ್ನು ದ್ವೇಷ ಎಂದು ಕರೆದು ಬ್ಲಾಕ್ ಮಾಡಬಹುದು, ಕಾನೂನು ಕ್ರಮ ಕೈಗೊಳ್ಳಬಹುದು. ಈ ದೇಶದ ನಾಗರಿಕರ ಸಂವಿಧಾನದ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಈ ಕಾನೂನು ನಾಗರಿಕರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ ಎಂದು ಆರೋಪಿಸಿದರು.

ಜಿಲ್ಲಾ ವಕ್ತಾರ ಎಂ.ಎ. ಹಿರೇಮಠ ಮಾತನಾಡಿ, ಈ ವಿಧೇಯಕದ ಮೂಲಕ ಕಾಂಗ್ರೆಸ್ ಸರ್ಕಾರವು ಪ್ರತಿಪಕ್ಷಗಳು, ಮಾಧ್ಯಮದವರ ಮೇಲೆ ನಿಯಂತ್ರಣ ಹೇರುವುದು, ಹೆದರಿಸುವ ಕೆಲಸವನ್ನು ಮಾಡುತ್ತಿದೆ. ಇದರ ವಿರುದ್ಧ ಜಾಗೃತಿ ಮೂಡಿಸಲು ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಬಿ.ಎಸ್. ಚಿಂಚಲಿ, ಸಿದ್ದು ಪಲ್ಲೇದ, ವಿಜಯಕುಮಾರ ಗಡ್ಡಿ, ಅನಿಲ ಅಬ್ಬಿಗೇರಿ, ಅಶೋಕ ಕುಡತಿನಿ, ದಶರಥರಾಜ ಕೊಳ್ಳಿ, ಚಂದ್ರು ತಡಸದ, ಶಿವು ಹಿರೇಮನಿಪಾಟೀಲ, ಅಮರನಾಥ ಗಡಗಿ, ಸುರೇಶ ಮರಳಪ್ಪನವರ, ಸುರೇಶ ಚಿತ್ತರಗಿ, ಶಂಕರ ಕಾಕಿ, ಮಾಂತೇಶ ನಲವಡಿ, ಸುಭಾಸ ಸುಂಕದ, ಮಂಜುನಾಥ ಹಳ್ಳೂರಮಠ, ಸಂತೋಷ ಅಕ್ಕಿ, ವಿಜಯಲಕ್ಷ್ಮೀ ಮಾನ್ವಿ, ಮಹಾದೇವಪ್ಪ ಚಿಂಚಲಿ, ವಾಯ್.ಪಿ. ಅಡ್ನೂರ, ಬಸವರಾಜ ಬಡಿಗೇರ, ಮಾಂತೇಶ ಬಾತಾಖಾನಿ, ವಿಶ್ವನಾಥ ಹಳ್ಳಿಕೇರಿ, ಮುತ್ತಣ್ಣ ಮೂಲಿಮನಿ, ಮಹೇಶ ಕಮ್ಮಾರ, ರಮೇಶ ಸಜ್ಜಗಾರ, ಶಂಕರ ಕಾಕಿ, ಶಂಕರ ಕರಿಬಿಷ್ಠಿ, ವಾಯ್.ಪಿ. ಅಡ್ನೂರ, ಮಹೇಶ ಶಿರಹಟ್ಟಿ, ರಾಚಯ್ಯ ಹೊಸಮಠ, ಅಪ್ಪಣ್ಣ ಟೆಂಗಿನಕಾಯಿ, ನಾಗರಾಜ ಮದ್ನೂರ, ಕವಿತಾ ಬಂಗಾರಿ, ಸುಮಂಗಲಾ ತಕ್ಕಲಕೋಟಿ, ಲಲಿತಾ ಉಮಚಗಿ, ಬಸವರಾಜ ನರೆಗಲ್, ವಿನಾಯಕ ಹೊರಕೇರಿ, ವೀರೇಶ ಗದಗಿನ, ನವೀನ ಕುರ್ತಕೋಟಿಮಠ, ಛಗನ ರಾಜಪುರೋಹಿತ್, ಸುರೇಶ ಚವ್ಹಾಣ, ಮೋಹನ ಕೋರಿ, ಸಂಜೀವ ಖಟವಟೆ, ವಸಂತ ಹಬೀಬ, ಬಸಯ್ಯ ಸಾಸ್ವಿಹಳ್ಳಿಮಠ, ಲಕ್ಷ್ಮಣ ರಣತೂರ, ಡಿ.ಬಿ. ಕರೀಗೌಡ್ರ, ಅಪ್ಪು ನಮಸ್ತೆಮಠ, ವಿನೋದ ಹಂಸನೂರ ಮುಂತಾದವರಿದ್ದರು.

ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರೀಗೌಡ್ರ ಮಾತನಾಡಿ, ಇದು ಪ್ರಜಾಪ್ರಭುತ್ವದ ಮೂಲತತ್ವಕ್ಕೆ ಹಾನಿಯಷ್ಟೇ ಅಲ್ಲದೆ, ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನಯಾಗಿದೆ. ಈ ಕಾನೂನು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ನಿರಂಕುಶ ಅಧಿಕಾರ ನೀಡುತ್ತದೆ. ಕಾಯ್ದೆ ಹೇಳುವಂತೆ ಇಲ್ಲಿನ ಅಪರಾಧಗಳಿಗೆ ಜಾಮೀನು ಇಲ್ಲ. ಜನಸಾಮಾನ್ಯರನ್ನು ಅಪರಾಧಿಗಳಾಗಿ ಮಾಡುವ ಈ ಕೀಳು ಮಟ್ಟದ ಕಾಯಿದೆ ನಮಗೆ ಬೇಕೇ ಎಂಬ ಪ್ರಶ್ನೆ ಮೂಡಿದೆ ಎಂದರು.

ಕಲೆಗಳ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಸಹಕಾರಿ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳಲ್ಲಿನ ಕಲಾ ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸಹಕಾರಿ ಎಂದು ಎಸ್‌ಜೆಜೆಎಂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಉಪಾಧ್ಯಕ್ಷ ವಿ.ಎಸ್. ನೀಲಗುಂದ ಹೇಳಿದರು.

ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿ ಕಲಾ ಭವನದಲ್ಲಿ ಮುಳಗುಂದ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಸಾಕಷ್ಟು ಕಲಾ ಪ್ರತಿಭೆಗಳಿದ್ದು, ಅವುಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ. ಮಕ್ಕಳು ಶ್ರದ್ಧೆ, ಸತತ ಪ್ರಯತ್ನ, ಸಾಧನೆಯ ಛಲ ಹೊಂದಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ ಎಂದರು.

ಎ.ಎಂ. ಅಂಗಡಿ ಮಾತನಾಡಿ, ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳು ಇರುವುದರಿಂದ ಅವುಗಳನ್ನು ಗುರುತಿಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲಿದೆ. ಅವರಿಗೆ ಸೂಕ್ತ ತರಬೇತಿ ನೀಡಿ ಪ್ರೋತ್ಸಾಹಿಸಿದಲ್ಲಿ ಮಕ್ಕಳ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದರು.

ಎಂ.ಎಂ. ನಿಂಬನಾಯ್ಕರ ಮಾತನಾಡಿ, ಮುಳಗುಂದ ಪಟ್ಟಣ ಶೈಕ್ಷಣಿಕವಾಗಿ ಮುಂದುವರೆಯಲು ಇಲ್ಲಿನ ಎಲ್ಲಾ ಗುರು-ಹಿರಿಯರ ಸಹಾಯ ಸಹಕಾರ ಇರುವುದರಿಂದ ನಾನು ಸಿಆರ್‌ಪಿ ಹುದ್ದೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಾಗಿದೆ ಎಂದರು.

ಅಧ್ಯಕ್ಷತೆಯನ್ನು ಡಾ. ಎಸ್.ಸಿ. ಚವಡಿ ವಹಿಸಿದ್ದರು, ವಿ.ಎಸ್. ನೀಲಗುಂದ, ಪ್ರಾಚಾರ್ಯ ಎ.ಎಂ. ಅಂಗಡಿ, ಇ.ಎಂ. ಗುಳೆದಗುಡ್ಡ, ಸಿಆರ್‌ಪಿ ಆರ್.ಎನ್. ಅಣ್ಣಿಗೇರಿ, ಎಂ.ಎಂ. ಮೇಗಲಮನಿ ಹಾಗೂ ಮುಳಗುಂದ ಕ್ಲಸ್ಟರ್ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆತ್ಮ ಸಂಯಮ ಆಧ್ಯಾತ್ಮದ ಅಡಿಪಾಯ: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ತುಮಕೂರು: ಭಾವೈಕ್ಯತೆ ಮತ್ತು ಆಧ್ಯಾತ್ಮ ಜ್ಞಾನ ಭಾರತದ ಉಸಿರು. ಜೀವನದ ಉನ್ನತಿಗೆ ಸಂಸ್ಕಾರ-ಸನ್ಮಾರ್ಗ ದರ್ಶನದ ಅವಶ್ಯಕತೆಯಿದೆ. ಆತ್ಮ ಸಂಯಮ ಆಧ್ಯಾತ್ಮ ಜ್ಞಾನದ ಅಡಿಪಾಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ವಿಶಾಲಾಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್‌ನಿಂದ ಸಂಘಟಿಸಿದ ಧನುರ್ಮಾಸದ ಇಷ್ಟಲಿಂಗ ಮಹಾಪೂಜಾ-ಜನ ಜಾಗೃತಿ ಧರ್ಮ ಸಮಾರಂಭದ 2ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಭೂಮಿಯಲ್ಲಿ ಬಿತ್ತಿದ ಬೀಜಕ್ಕೆ ನೀರು, ಗೊಬ್ಬರ ಮತ್ತು ರಕ್ಷಣೆ ಎಷ್ಟು ಅವಶ್ಯಕವೋ ಹಾಗೆಯೇ ನೀತಿಗೆ ಧರ್ಮವೂ ಅಷ್ಟೇ ಅವಶ್ಯಕವಾಗಿದೆ. ಸಾತ್ವಿಕ ಮತ್ತು ತಾತ್ವಿಕ ಹಿತಚಿಂತನೆಗಳನ್ನು ಬೋಧಿಸುವುದೇ ಗುರುವಿನ ಧರ್ಮ. ನಡೆದಾಡುವ ದಾರಿಯಲ್ಲಿ ಬಿದ್ದ ಕಲ್ಲು-ಮುಳ್ಳುಗಳನ್ನು ಎತ್ತಿ ಹಾಕುವುದೇ ನಿಜವಾದ ಧರ್ಮ. ಪರಿಶುದ್ಧವಾದ ಮತ್ತು ಪವಿತ್ರವಾದ ಜೀವನ ರೂಪಿಸಿಕೊಳ್ಳುವ ಧರ್ಮ ಪ್ರಜ್ಞೆ ಮತ್ತು ಆಚರಣೆ ಮುಖ್ಯ. ಮೌಲ್ಯಗಳು ಕಣ್ಮರೆಯಾಗುತ್ತಿರುವ ಸಂದಿಗ್ಧ ಸಂದರ್ಭದಲ್ಲಿ ಮತ್ತೆ ಅವುಗಳನ್ನು ಉಳಿಸಿ ಬೆಳೆಸುತ್ತ ಎಲ್ಲರೂ ಶ್ರಮಿಸುವ ಅವಶ್ಯಕತೆಯಿದೆ.

ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಎಷ್ಟು ಮುಖ್ಯವೋ, ಅಷ್ಟೇ ಧರ್ಮವೂ ಮುಖ್ಯವಾಗಿದೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಜಾತಿ, ಮತ, ಪಂಥಗಳನ್ನು ಮೀರಿ ಉದಾತ್ತ ಜೀವನ ಮೌಲ್ಯಗಳನ್ನು ಬೋಧಿಸಿರುವುದನ್ನು ಯಾರೂ ಮರೆಯಬಾರದೆಂದರು.

ಬೆಳ್ಳಾವಿ ಮಠದ ಕಾರದ ವೀರಬಸವ ಸ್ವಾಮಿಗಳು ಮಾತನಾಡಿ, ಬಾಲ್ಯದಲ್ಲಿ ಜ್ಞಾನ ತಾರುಣ್ಯದಲ್ಲಿ ಸಂಪತ್ತು, ವೃದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಿಕೊಳ್ಳುತ್ತ ಬದುಕಬೇಕಾಗಿದೆ. ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ, ಸಹನೆ, ದಯೆ ವೃದ್ಧಿಗೊಳ್ಳುತ್ತವೆ. ಶ್ರೀ ರಂಭಾಪುರಿ ಜಗದ್ಗುರುಗಳವರ ಧನುರ್ಮಾಸದ ಜ್ಞಾನ ಯಜ್ಞದಿಂದ ಭಕ್ತರ ಬಾಳಿಗೆ ಬೆಳಕು ಮೂಡಿ ಬರುವುದೆಂದರು.

ಹೊಳವನಹಳ್ಳಿ ನಂಜುಂಡೇಶ್ವರ ಶಿವಾಚಾರ್ಯ ಸ್ವಾಮಿಗಳು, ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಂಭಾಪುರಿ ಬೆಳಗು ಮಾಸಿಕವನ್ನು ಅ.ಭಾ.ವೀ ಮಹಾಸಭಾದ ನಿರ್ದೇಶಕ ಎನ್. ನಂಜುಂಡೇಶ ಬಿಡುಗಡೆ ಮಾಡಿ ಮಾತನಾಡಿದರು.

ನಂಜುಂಡೇಶ, ಎಸ್.ಪಿ. ಚಿದಾನಂದ, ಕೆ.ಎಸ್. ಸಿದ್ಧಲಿಂಗಪ್ಪ, ಬಿ.ಎಸ್. ಮಂಜುನಾಥ, ಕೆ.ಜಿ. ರುದ್ರಪ್ಪ, ಕೆ.ಎಸ್. ಮಂಜುನಾಥ, ಶೈಲಾ ಶಿವಕುಮಾರ, ಡಾ. ದರ್ಶನ್ ಕೆ.ಎಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮೋಹನಕುಮಾರ ಪಟೇಲ, ಟಿ.ಎಸ್. ಸಿದ್ಧಗಂಗಾ ರುದ್ರೇಶ, ಕವಿತಾ, ಕೆ.ಎನ್. ಗಂಗಣ್ಣ, ಹೆಚ್.ಬಿ.ಎಂ ಹಿರೇಮಠ ಇವರೆಲ್ಲರಿಗೂ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು.

ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿದ್ದರು. ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಕೆ.ಎಸ್. ಉಮೇಶ್ ಕುಮಾರ ಸ್ವಾಗತಿಸಿದರು. ಡಿ.ಆರ್. ಸತೀಶ ನಿರೂಪಿಸಿದರು.

ಧರ್ಮ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ವಿಷಯವಾಗಿ ಬೆಂಗಳೂರಿನ ಎಸ್.ಜೆ.ಆರ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರೇಮಾ ಸಿದ್ಧರಾಜು ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅತ್ಯುನ್ನತ ಗೌರವ ಸ್ಥಾನವನ್ನು ಕೊಟ್ಟಿದ್ದಾರೆ. ಈ ನಾಡಿನ ಸಂಸ್ಕೃತಿ, ಸಭ್ಯತೆ ಮತ್ತು ಆದರ್ಶಗಳನ್ನು ಉಳಿಸಿ-ಬೆಳೆಸಿಕೊಂಡು ಬಂದ ಜವಾಬ್ದಾರಿ ಮಹಿಳೆಯರ ಮೇಲಿದೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಶರಣರು ವಿಶೇಷ ಧರ್ಮಾಚರಣೆಯನ್ನು ಕೊಟ್ಟಿರುವುದನ್ನು ಮರೆಯಲಾಗದೆಂದರು.

ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸಿ: ಶಾಸಕ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಡಾ.ಬಾಬಾಸಾಹೇಬ ಅಂಬೇಡ್ಕರ್ ದೇಶದ ಪ್ರಜೆಗಳ ಬದುಕು ಆರ್ಥಿಕವಾಗಿ ಸಮಾನತೆಯ ಮೂಲಕ ಮುಂದೆ ಬರಬೇಕು ಎನ್ನುವ ಆಶಾಭಾವನೆ ಹೊಂದಿದ್ದರು. ಆ ಹಿನ್ನೆಲೆಯಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಪ್ರಜೆಗಳನ್ನು ಆರ್ಥಿಕ ಪ್ರವಾಹಕ್ಕೆ ತರಲು ಶ್ರಮಿಸುತ್ತಿದೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಡಂಬಳ ಹೋಬಳಿಯ ಜಂತ್ಲಿ ಶಿರೂರ ಗ್ರಾಮ ಪಂಚಾಯಿತಿ ಕಟ್ಟಡದ ಉದ್ಘಾಟನೆ, ಗೋದಾಮು, ಮೇವುಂಡಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿಗಳಿಗೆ ಕೊಠಡಿ ನಿರ್ಮಾಣ, ವಾಲ್ಮೀಕಿ ಸಮುದಾಯ ಭವನ, ಶ್ರೀ ಬಸವಣ್ಣ ದೇವಸ್ಥಾನದ ಜೀರ್ಣೋದ್ಧಾರ, ಶ್ರೀ ಕೃಪೇಶ್ವರ ದೇವಸ್ಥಾನದ ಮುಂದುವರೆದ ಕಾಮಗಾರಿ, ಮೂಲಸೌಕರ್ಯ ಅಭಿವೃದ್ಧಿ, ಡೋಣಿ ಗ್ರಾಮದಲ್ಲಿ ಡೋಣಿ-ಹಿರೇವಡ್ಡಟ್ಟಿ ರಸ್ತೆ ಸುಧಾರಣೆ, ಗೂಳಿ ಬಸವೇಶ್ವರ ದೇವಸ್ಥಾನದ ಹತ್ತಿರ ಹಾಗೂ ಡಿಪಿಇಪಿ ಶಾಲೆಯ ಹತ್ತಿರ ಇರುವ ವಿದ್ಯಾನಗರದಲ್ಲಿ ಸಿ.ಸಿ ರಸ್ತೆ ನಿರ್ಮಾಣ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ಮಾಣ, ಕೆ.ಜಿ.ಎಸ್ ಶಾಲೆಯ 2 ಹೊಸ ಕೊಠಡಿಗಳು, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ನವೀಕರಣ, ಸರಕಾರಿ ಪದವಿಪೂರ್ವ ಕಾಲೇಜುಗಳ ಕೊಠಡಿ ದುರಸ್ತಿ, ಜಿ.ಎಚ್.ಪಿ.ಎಸ್ ಶಾಲೆಯ 2 ಕೊಠಡಿಗಳ ರೂಪ ಬದಲಾವಣೆ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಡೋಣಿಯ 99 ಕುಟುಂಬಗಳಿಗೆ, ಅತ್ತಿಕಟ್ಟಿ, ಮುರಡಿ ತಾಂಡ ಸೇರಿದಂತೆ ವಿವಿಧ ಗ್ರಾಮಗಳನ್ನು ಉಪ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುವುದು. ಇವೆಲ್ಲವನ್ನೂ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಮುಂದಿನ ಚುನಾವಣೆಗಳಲ್ಲಿ ಎಲ್ಲರೂ ಬೆಂಬಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಂತ್ಲಿ ಶಿರೂರ ಗ್ರಾ.ಪಂ ಅಧ್ಯಕ್ಷೆ ಜೈತುನಬಿ ಬಳ್ಳಾರಿ, ಉಪಾಧ್ಯಕ್ಷ ರವಿ ದೊಡ್ಡಮನಿ, ಗ್ರಾ.ಪಂ ಅಧ್ಯಕ್ಷೆ ಹುಲಿಗೆಮ್ಮ ಅಳವಂಡಿ, ದುರಗವ್ವ ಯಮನೂರಪ್ಪ ತಳಗೇರಿ, ಡಿ.ಡಿ. ಮೋರನಾಳ, ಗ್ರಾ.ಪಂ ಕಟ್ಟಡದ ಭೂದಾನಿ ಹೇಮಣ್ಣ ಪೂಜಾರ, ಇಒ ವಿಶ್ವನಾಥ ಹೊಸಮನಿ, ತಹಸೀಲ್ದಾರ ಯರಿಸ್ವಾಮಿ ಪಿ.ಎಸ್, ಬಸವರಡ್ಡಿ ಬಂಡಿಹಾಳ, ಅಬ್ದುಲಸಾಬ ಕಲಕೇರಿ, ಮಳ್ಳಪ್ಪ ಜೋಂಡಿ, ಮಹೇಶ ಗಡಗಿ, ಕಾಶಪ್ಪ ಹೊನ್ನೂರ, ಗೋಣಿಬಸಪ್ಪ ಕೊರ್ಲಹಳ್ಳಿ, ಬಾಬುಸಾಬ ಮೂಲಿಮನಿ, ಯಮನಪ್ಪ ಚುಂಗಿನ, ಬಸುರಾಜ ಶಿರೋಳ, ಶರಣು ಬಂಡಿಹಾಳ, ಬಸುರಾಜ ಮೇವುಂಡಿ, ಈಶಪ್ಪ ಓಲಿ, ಸೋಮು ಹೈತಾಪೂರ, ರಾಚಪ್ಪ ಗಾಳಪ್ಪನವರ, ಪಿಡಿಒ ವಸಂತ ಕೋಕಾಕ, ವಿರೇಶ ಅವಾರಿ, ಈರಣ್ಣ ಯಳವತ್ತಿ, ಸೋಮಣ್ಣ ಹಳ್ಳಿಕೇರಿ, ಹೇಮಂತ ಹಾರೂಗೇರಿ, ಜಗದೀಶ ಮೇನಳ್ಳಿ, ಬಸುರಾಜ ನಾರಾಯಣಪುರ, ಶರಣಬಸಪ್ಪ ಮುದಿಯಜ್ಜನವರ, ಕಾಶಪ್ಪ ಅಳವಂಡಿ, ವೀರೇಶ ಸಿದ್ನೆಕೊಪ್ಪ, ಈರಣ್ಣ ಯಳವತ್ತಿ, ಯಮನಪ್ಪ ಇಳಗೇರ, ಮಹೇಶ ಕೊರ್ಲಹಳ್ಳಿ, ಮಹಾದೇವಪ್ಪ ಗುಂಜಿ, ಬಸು ಬೇಟಗೇರಿ, ಹನಮಂತಪ್ಪ ಗೋಡಿ, ಯಮನೂರಪ್ಪ ಅರೂಣಸಿ, ಶಿವಕುಮಾರ ಉದಂಡಿ, ಕೋಟ್ರಪ್ಪ ಸ್ವಾಗಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.

ಮುಂಡರಗಿ ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಶೇ. 98.5ರಷ್ಟು ಸಾಧನೆಯಾಗಿದೆ. ಅನ್ನಭಾಗ್ಯದಡಿ 36640 ಫಲಾನುಭವಿಗಳು ಲಾಭ ಪಡೆದುಕೊಳ್ಳುತ್ತಿದ್ದು, ಶಕ್ತಿ ಯೋಜನೆಯಡಿ 5 ಕೋಟಿ 55 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. 212 ಯುವಕರಿಗೆ ಯುವ ನಿಧಿ ಯೋಜನೆಗಳನ್ನು ಕೊಡುವುದರ ಮೂಲಕ ಯೋಜನೆ ತಲುಪಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರನ್ನು ಮುಖ್ಯ ಪ್ರವಾಹಕ್ಕೆ ತರಲು ಸರಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಮೈಸೂರು | ಚಳಿಯಲ್ಲೂ ತಣ್ಣಗಾಗದ ಕುರ್ಚಿ ಕದನ; ಸಿದ್ದರಾಮಯ್ಯ ಬೆಂಬಲಕ್ಕೆ ಅಹಿಂದ ಕಹಳೆ!

0

ಮೈಸೂರು: ಮೈಕೊರೆಯುವ ಚಳಿಯ ನಡುವೆಯೂ ರಾಜ್ಯ ರಾಜಕಾರಣದಲ್ಲಿ ಕುರ್ಚಿ ಕದನದ ಕಾವೇರಿ ಜೋರಾಗಿಯೇ ಹರಿಯುತ್ತಿದೆ.

ಜನವರಿ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಯ ಸಿಎಂ ಎಂಬ ದಾಖಲೆಗೆ ಸಹಿ ಹಾಕಲಿರುವ ಹೊತ್ತಲ್ಲೇ, ನಾಯಕತ್ವ ಬದಲಾವಣೆ ನಿರೀಕ್ಷೆಯಲ್ಲಿ ಡಿಕೆ ಶಿವಕುಮಾರ್ ಬಣ ಕಾದು ಕುಳಿತಿದೆ. ಈ ನಡುವೆ ಸಿದ್ದರಾಮಯ್ಯಗೆ ಬಲ ತುಂಬುವ ಉದ್ದೇಶದಿಂದ ಅವರ ತವರು ಜಿಲ್ಲೆಯಲ್ಲೇ ಅಹಿಂದ ಕಹಳೆ ಮೊಳಗಲು ಸಜ್ಜಾಗಿದೆ.

ಜನವರಿ 25ರಂದು ಮೈಸೂರಿನಲ್ಲಿ ಅಹಿಂದ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿ ಬದಲಾವಣೆ ಆಗಬಾರದು ಎಂಬ ಸಂದೇಶವನ್ನು ರಾಜಕೀಯವಾಗಿ ಬಲವಾಗಿ ತಲುಪಿಸುವ ಉದ್ದೇಶ ಈ ಸಮಾವೇಶದ ಹಿಂದಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಈಗಾಗಲೇ ಮೈಸೂರಿನಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ.

ಅಹಿಂದ ಸಮಾವೇಶಕ್ಕೆ ಸುಮಾರು 15 ರಿಂದ 20 ಸಾವಿರ ಜನರನ್ನು ಸೇರಿಸುವ ಪ್ಲ್ಯಾನ್ ಮಾಡಲಾಗಿದೆ. ಗಮನಾರ್ಹವಾಗಿ, ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಭಾಗವಹಿಸುವುದಿಲ್ಲ. ಆದರೆ ಅವರ ಬೆಂಬಲಿಗರು, ಚಿಂತಕರು, ಸಾಹಿತಿಗಳು ಮತ್ತು ಅಹಿಂದ ಪರ ಮುಖಂಡರು ಭಾಗವಹಿಸಲಿದ್ದಾರೆ.
ಇನ್ನೂ, ಅಹಿಂದ ಸಮಾವೇಶಕ್ಕೆ ಸಂಬಂಧಿಸಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ‘ಒಳ್ಳೆಯದಾಗಲಿ’ ಎಂದು ಪ್ರತಿಕ್ರಿಯಿಸಿದ್ದಾರೆ. ಇದರ ಬೆನ್ನಲ್ಲೇ, “ಸಿದ್ದರಾಮಯ್ಯ ಅವರನ್ನು ಕೆಳಗಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಸಚಿವ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದು, 2028ರವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿಯೇ ಮುಂದುವರೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಅಹಿಂದ ಸಮಾವೇಶದ ಮೂಲಕ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆಗೆ ಬ್ರೇಕ್ ಬೀಳುತ್ತದೆಯೇ ಎಂಬುದು ಈಗ ರಾಜಕೀಯ ವಲಯದ ಕುತೂಹಲಕ್ಕೆ ಕಾರಣವಾಗಿದೆ.

error: Content is protected !!