Home Blog Page 277

ಸಿಎಂ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಲ್ಲ: ರಾಜಣ್ಣ

0

ತುಮಕೂರು: ರಾಜ್ಯ ಕಾಂಗ್ರೆಸ್‌ನಲ್ಲಿ ತಲೆದೋರಿರುವ ಅಧಿಕಾರ ಹಂಚಿಕೆ ಹಾಗೂ ಸಿಎಂ ಬದಲಾವಣೆ ಕುರಿತ ಗೊಂದಲದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡುವ ಸಾಧ್ಯತೆ ಇಲ್ಲ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಿಎಂ ಬದಲಾವಣೆ ಕುರಿತ ಗೊಂದಲವನ್ನು ನಾವು ಸೃಷ್ಟಿ ಮಾಡಿಲ್ಲ. ನೀವು ಸೃಷ್ಟಿ ಮಾಡಿಕೊಂಡ ಗೊಂದಲವನ್ನು ನೀವೇ ಬಗೆಹರಿಸಿಕೊಳ್ಳಿ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ. ಇದರ ಅರ್ಥ, ಈ ವಿಚಾರದಲ್ಲಿ ಹೈಕಮಾಂಡ್ ನೇರ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದೇ ನನ್ನ ಭಾವನೆ” ಎಂದು ಹೇಳಿದರು.

ಈ ವಿಚಾರದಲ್ಲಿ ಹೈಕಮಾಂಡ್‌ ಮೇಲೆ ಬೆರಳು ಚಾಚುವ ಅಗತ್ಯವಿಲ್ಲ. ಇದು ಇಲ್ಲೇ ಕೆಲವರಿಂದ ಸೃಷ್ಟಿಯಾದ ಗೊಂದಲ. ಜನವರಿ ಅಥವಾ ಫೆಬ್ರವರಿಯಲ್ಲಿ ರಾಜ್ಯದಲ್ಲಿ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾದ ನಂತರ ಈ ಪ್ರಕ್ರಿಯೆ ಆರಂಭವಾಗಬಹುದು. ಸದ್ಯ ಹೈಕಮಾಂಡ್‌ ಬ್ಯುಸಿಯಾಗಿದ್ದು, ಎಲ್ಲ ನಿರ್ಣಯವೂ ಅವರ ತೀರ್ಮಾನದ ಮೇಲೆಯೇ ಅವಲಂಬಿತವಾಗಿದೆ. ಸಿದ್ದರಾಮಯ್ಯ ಅವರಿಗೆ ತೊಂದರೆ ಆಗುತ್ತದೆಯೋ ಅಥವಾ ಆಗುವುದಿಲ್ಲವೋ ಎಂಬುದೂ ಹೈಕಮಾಂಡ್‌ಗೆ ಮಾತ್ರ ಗೊತ್ತು ಎಂದು ಹೇಳಿದರು.

ಈ ನಡುವೆ ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಇಬ್ಬರನ್ನೂ ನಾನು ಭೇಟಿಯಾಗಿದ್ದೇನೆ. ರಾಜಕೀಯ ಚರ್ಚೆಯ ಜೊತೆಗೆ ನನ್ನ ಕ್ಷೇತ್ರದ ಅಭಿವೃದ್ಧಿ ಕುರಿತೂ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು.

ವಿಶ್ವ ಮಾನವ ದಿನಾಚರಣೆ ಅರ್ಥಪೂರ್ಣವಾಗಿರಲಿ: ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ 

0

ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ನಿಮಿತ್ತ ವಿಶ್ವ ಮಾನವ ದಿನಾಚರಣೆಯನ್ನು ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಡಿಸೆಂಬರ್ 29ರಂದು ಬೆಳಿಗ್ಗೆ 11 ಗಂಟೆಗೆ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳವಾರ ರಾಷ್ಟ್ರಕವಿ ಕುವೆಂಪು ಜನ್ಮದಿನದ ನಿಮಿತ್ತ ವಿಶ್ವ ಮಾನವ ದಿನಾಚರಣೆ ಕುರಿತು ಜರುಗಿದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಬರಹಗಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿನಾಚರಣೆಗೆ ಶೋಭೆ ತರಬೇಕು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಹಿರಿಯ, ಕಿರಿಯ ಹಾಗೂ ಮಹಿಳಾ ಬರಹಗಾರರನ್ನು ಸನ್ಮಾನಿಸುವ ಕಾರ್ಯಕ್ರಮ ಈ ಸಂದರ್ಭದಲ್ಲಿ ಜರುಗಲಿದೆ.

ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕ್ರಮ ವಹಿಸಬೇಕು. ರಾಷ್ಟ್ರಕವಿ ಕುವೆಂಪು ಅವರ ಕುರಿತು ಆಳವಾಗಿ ಅಧ್ಯಯನ ಮಾಡಿದವರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಬೇಕು. ಒಟ್ಟಾರೆಯಾಗಿ ವಿಶ್ವ ಮಾನವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಬೇಕೆಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿ ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಾಹಿತಿಗಳು, ಬರಹಗಾರರು ಹಾಜರಿದ್ದರು.

ಬಾಂಗ್ಲಾದ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಒದಗಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಆ ದೇಶ ರಕ್ಷಣೆ ಒದಗಿಸಬೇಕು. ಭಾರತದಲ್ಲಿರುವ ಬಾಂಗ್ಲಾದೇಶದ ರಾಯಬಾರಿ ತುರ್ತು ಸಂದೇಶ ರವಾನಿಸಬೇಕು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ ಆಗ್ರಹಿಸಿದ್ದಾರೆ.

ಈ ಕುರಿತು ಮಾಧ್ಯಮ ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಾವುದೇ ದೇಶ ಸಂಕಷ್ಟದಲ್ಲಿದ್ದರೂ ಅದಕ್ಕೆ ಸ್ಪಂದಿಸುವ ಭಾರತ ದೇಶದ ಹಿರಿಮೆಯಾದರೆ, ಅದೇ ದೇಶದ ಮೂಲ ನಿವಾಸಿಗಳು ವಿಭಜಿತ ಬಾಂಗ್ಲಾದೇಶದ ಹಿಂದೂ ಸಮಾಜದ ದೀಪು ಚಂದ್ರದಾಸ ಅವರ ಬರ್ಬರ ಹತ್ಯೆ ಮಾಡಿರುವುದು ಖಂಡನೀಯ. ಅಪರಾಧಿಗಳನ್ನು ಬಂಧಿಸಿದರೆ ಸಾಲದು, ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತದ ವೀರ ಸೈನಿಕರ ಬಲಿದಾನ, ಪರಾಕ್ರಮ ಮತ್ತು ರಾಜತಾಂತ್ರಿಕ ಸಹಕಾರದಿಂದ ಬಾಂಗ್ಲಾದೇಶ ಸ್ವತಂತ್ರವಾಗಿದೆ ಎನ್ನುವುದನ್ನು ಆ ದೇಶದ ಕೆಲ ಮತಾಂಧರಿಗೆ ಗೊತ್ತಾಗಬೇಕಾಗಿದೆ. ಭಾರತಕ್ಕೆ ಆಸರೆ ಕೇಳಿ ಬಂದ ಆ ದೇಶದ ಮಾಜಿ ಪ್ರಧಾನಿಗೆ ಆಶ್ರಯ ನೀಡಿದ್ದು ಭಾರತ. ಬಾಂಗ್ಲಾ ಅಖಂಡ ಭಾರತದ ಭಾಗವಾದರೆ ಇಲ್ಲಿಯ ಮೂಲನಿವಾಸಿ ಹಿಂದೂಗಳೇ ಅಲ್ಲಿ ಅಲ್ಪಸಂಖ್ಯಾತರಾಗಿ ಅವರನ್ನು ಮಾರಣ ಹೋಮ ಮಾಡುತ್ತಿರುವ ಆ ದೇಶದ ಬಹುಸಂಖ್ಯಾತರ ಕೃತ್ಯ ಖಂಡನೀಯ. ಪ್ರತಿಸಾರಿ ಒಂದಿಲ್ಲೊಂದು ಕಾರಣವಿಟ್ಟು ಅಲ್ಲಿಯ ಹಿಂದೂಗಳಿಗೆ ತೊಂದರೆ ನೀಡುತ್ತಿರುವುದನ್ನು ನಿಲ್ಲಿಸಿ ಹಿಂದೂಗಳಿಗೆ ರಕ್ಷಣೆ ನೀಡುವ ತುರ್ತು ಸಂದೇಶ ರವಾನಿಸಬೇಕು ಎಂದು ಆಗ್ರಹಿಸಿದ್ದಾರೆ.

ಅತಿಥಿ ಉಪನ್ಯಾಸಕರ ಇಡಗಂಟು ಹಣ ಬಿಡುಗಡೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಾಗೂ ಮರಣ ಹೊಂದಿದ ಅತಿಥಿ ಉಪನ್ಯಾಸಕರಿಗೆ ಇಡುಗಂಟು ಯೋಜನೆಯ ಅನುದಾನವನ್ನು ಬಿಡುಗಡೆಗೊಳಿಸಿದ್ದಕ್ಕೆ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ, ವಿಧಾನ ಪರಿಷತ್‌ನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ, ಕಾನೂನು ಸಚಿವರಾದ ಡಾ. ಎಚ್.ಕೆ. ಪಾಟೀಲ ಹಾಗೂ ವಿಧಾನ ಪರಿಷತ್‌ನ ಎಲ್ಲಾ ಸದಸ್ಯರಿಗೆ ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಪರವಾಗಿ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಆರ್.ಕಲ್ಮನಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಸಚಿವರು ನಾನ್ ಯುಜಿಸಿ ಹಾಗೂ ಯುಜಿಸಿ ಎಂಬ ಭೇದಭಾವ ಮಾಡದೆ ಆದಷ್ಟು ಬೇಗ ಸೇವೆ ಸಲ್ಲಿಸಲು ಆದೇಶ ಹೊರಡಿಸಬೇಕು ಎಂದು ಡಾ. ಹನುಮಂತಗೌಡ ಆರ್.ಕಲ್ಮನಿ, ರಾಜ್ಯ ಕಾರ್ಯದರ್ಶಿ ಶಶೀಕಲಾ ಜೋಳದ, ವಿ.ಎಂ. ದೇಸಾಯಿಗೌಡರ, ಭಗತ್‌ಸಿಂಗ್ ನವಲೂರಕರ, ಡಾ. ಅಡವೆಪ್ಪ ಇಟಗಿ, ದಾನೇಶ್ವರಿ, ಜಿ. ಪಾರ್ವತಿ ತಾರಿಹಾಳ ಸೇರಿದಂತೆ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಭವನಕ್ಕೆ ನಿವೇಶನದ ದಾನಪತ್ರ ಹಸ್ತಾಂತರ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯಲ್ಲಿ ನಿರ್ಮಾಣವಾಗಲಿರುವ ಕಾಂಗ್ರೆಸ್ ಭವನಕ್ಕೆ ನಿವೇಶನದ ದಾನಪತ್ರವನ್ನು ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ವಿಜಯ ಮುಳಗುಂದ ಹಾಗೂ ಎಲ್.ನಾರಾಯಣ ಅವರಿಗೆ ಬುಧವಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುಜಾತಾ ದೊಡ್ಡಮನಿ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ರಾಜ್ಯಾದ್ಯಂತ 100 ತಾಲೂಕಾ ಕೇಂದ್ರಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ದೃಢ ಸಂಕಲ್ಪ ಮಾಡಿದ್ದು, ಇದನ್ನು ನಮ್ಮ ಕ್ಷೇತ್ರದಲ್ಲಿ ಸಾಕಾರಗೊಳಿಸುವುದಕ್ಕೆ ಇಂದು ನಿವೇಶನವನ್ನು ಹಸ್ತಾಂತರಿಸಲಾಗಿದೆ. ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದೇನೆ. ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ, ಹಾಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷಕ್ಕಾಗಿ ಅಳಿಲು ಸೇವೆಯನ್ನು ಸಲ್ಲಿಸುವ ಸಮಯ ನನಗೆ ಒದಗಿ ಬಂದಿದ್ದರಿಂದ ಪಕ್ಷದ ಹಿರಿಯರ, ಕಾರ್ಯಕರ್ತರ ಸಮ್ಮುಖದಲ್ಲಿ ನಿವೇಶನದ ದಾನಪತ್ರವನ್ನು ಹಸ್ತಾಂತರಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಶಿರಹಟ್ಟಿ ಬ್ಲಾಕ್ ಅಧ್ಯಕ್ಷ ಹುಮಾಯೂನ್ ಮಾಗಡಿ, ದೇವಪ್ಪ ಲಮಾಣಿ, ವೀರಯ್ಯ ಮಠಪತಿ, ಅಜ್ಜು ಪಾಟೀಲ, ಮಾಬುಸಾಬ ಲಕ್ಷ್ಮೇಶ್ವರ, ಸೋಮನಗೌಡ ಮರಿಗೌಡ್ರ ಮುಂತಾದವರು ಉಪಸ್ಥಿತರಿದ್ದರು.

ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ಗದಗ: ಸ್ವಚ್ಛ ಭಾರತ ಮಿಷನ್-2.0 ಅಡಿಯಲ್ಲಿ ಗದಗ-ಬೆಟಗೇರಿ ನಗರಸಭೆ ವತಿಯಿಂದ ಘನ ತ್ಯಾಜ್ಯ ನಿರ್ವಹಣೆ ಕುರಿತು ಸ್ವಚ್ಛತಾ ಇ-ಸೇವಾ ಯೋಜನೆ ಅಡಿಯಲ್ಲಿ ಗದಗ-ಬೆಟಗೇರಿ ಅವಳಿ ನಗರದ ವಾರ್ಡ್ ನಂ. 23ರ ಸರ್ಕಲ್‌ನಲ್ಲಿ ಸ್ಮಾರ್ಟ್ ಪಾಯಿಂಟ್ ಆಗಿ ಪರಿವರ್ತಿಸುವುದು, ಹಸಿ ಕಸ-ಒಣ ಕಸವನ್ನು ಬೇರ್ಪಡಿಸುವುದರ ಕುರಿತು ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲಕರಿಗೆ ಮನವರಿಕೆ ಮಾಡಿ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ನಗರಸಭೆ ಸದಸ್ಯರಾದ ಬರಕತ್ ಅಲಿ ಮುಲ್ಲಾ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಫಕೀರಪ್ಪ ಹೆಬಸೂರ, ನಾಗಪ್ಪ ಗುಗ್ಗರಿ, ಶಾಲಾ ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು.

ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರಾದ ರಾಜಾರಾಮ ಪವಾರ, ನಗರಸಭೆ ಪರಿಸರ ಅಭಿಯಂತರ ಆನಂದ್ ಬದಿ, ಆರೋಗ್ಯ ಅಧಿಕಾರಿಗಳಾದ ಎಂ.ಎ. ಮಕಾನದಾರ, ಸೂಪರ್‌ವೈಸರ್ ಸಿ.ಆರ್. ಹಾದಿಮನಿ, ಸಣ್ಣಪ್ಪ ಬೋಳಮನವರ್, ಟ್ರ‍್ಯಾಕ್ಟರ್ ಚಾಲಕರು, ಪೌರ ಕಾರ್ಮಿಕರು, ಸ್ವಸಹಾಯ ಗುಂಪುಗಳ ಸದಸ್ಯರು, ಸಾರ್ವಜನಿಕರು, ಕಮ್ಯುನಿಟಿ ಮುಬಲೈಸರ್ ನಾಗಮ್ಮ ಬಳ್ಳಾರಿ, ವಸಂತಲಕ್ಷ್ಮಿ ರಾಮಗಿರಿ ಮುಂತಾದವರು ಉಪಸ್ಥಿತರಿದ್ದರು.

ಖರೀದಿಯ ವೇಳೆ ಜಾಗ್ರತೆಯಿಂದ ವ್ಯವಹರಿಸಿ: ಎ.ಜೆ. ಮಾಲ್ದಾರ

0

ವಿಜಯಸಾಕ್ಷಿ ಸುದ್ದಿ, ಗದಗ: ಗ್ರಾಹಕರು ತಾವು ಖರೀದಿಸಿದ ಸಾಮಗ್ರಿಯ ಗುಣಮಟ್ಟ ಅಥವಾ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಆ ಸಂದರ್ಭದಲ್ಲಿ ಡಿಜಿಟಲ್ ನ್ಯಾಯದ ಆ್ಯಪ್ ಮೂಲಕ ಪ್ರಕರಣ ದಾಖಲಿಸಿ ತ್ವರಿತ ಹಾಗೂ ಪರಿಣಾಮಕಾರಿಯಾಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎ.ಜೆ. ಮಾಲ್ದಾರ ಹೇಳಿದರು.

ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ವಾರ್ತಾ ಮತ್ತು ಸಾ.ಸಂ ಇಲಾಖೆ ಹಾಗೂ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಗದಗ ಇವರ ಸಂಯುಕ್ತಾಶ್ರಯದಲ್ಲಿ ಗದಗ-ಬೆಟಗೇರಿಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಆವರಣದ ಸುವರ್ಣ ಮಹೋತ್ಸವ ಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಹಕರು ಯಾವುದೇ ವಸ್ತು ಖರೀದಿಸುವಾಗ ಹಾಗೂ ಸೇವೆ ಪಡೆಯುವಾಗ ಜಾಗೃತೆಯಿಂದ ವ್ಯವಹರಿಸಬೇಕು. ಅದರ ಗುಣಮಟ್ಟ, ಪ್ರಮಾಣ, ವ್ಯಾರಂಟಿ, (ಎಕ್ಸ್‌ಪೈರಿ ಡೇಟ್) ಅವಧಿ ಮುಕ್ತಾಯ ಪರಿಶೀಲನೆ ಅತ್ಯವಶ್ಯಕವಾಗಿದೆ. ಗ್ರಾಹಕರಿಗೆ ಅನ್ಯಾಯವಾದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಯಶೋಧಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಗ್ರಾಹಕರುಗಳು ಅತಿವೇಗದಲ್ಲಿ ವ್ಯಾಜ್ಯಗಳನ್ನು ದಾಖಲಿಸಬಹುದು ಹಾಗೂ ಸಂಬಂಧಿತ ವ್ಯಾಜ್ಯದ ಸಾಕ್ಷಿಗಳನ್ನು ಡಿಜಿಟಲ್ ನ್ಯಾಯದ ಆ್ಯಪ್‌ನಲ್ಲಿ ಸಲ್ಲಿಸಬಹುದಾಗಿದೆ. ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿಕೊಡುವುದೇ ಇದರ ಮೂಲ ಉದ್ದೇಶ ಎಂದರು.

ಇದೇ ಸಂದರ್ಭದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ವತಿಯಿಂದ ತೂಕ ಮತ್ತು ಅಳತೆ ಹಾಗೂ ಪೊಟ್ಟಣ ಸಾಮಗ್ರಿಗಳ ವಸ್ತು ಪ್ರದರ್ಶನ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದವರ ವತಿಯಿಂದ ಆಹಾರ ಸುರಕ್ಷತೆ ಹಾಗೂ ಆಹಾರ ಕಲಬೆರಕೆ ಕುರಿತು ಭಿತ್ತಿಚಿತ್ರ ಪ್ರದರ್ಶನ, ಜಿಲ್ಲೆಯ ಗ್ಯಾಸ್ ಏಜೆನ್ಸಿಯವರ ವತಿಯಿಂದ ಎಲ್‌ಪಿಜಿ ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ಮತ್ತು ಭಿತ್ತಿಚಿತ್ರಗಳ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಣ ಸಮಿತಿ ಅಧ್ಯಕ್ಷ ಕೆ.ವಿ. ಕುಷ್ಟಗಿ, ಆದರ್ಶ ಶಿಕ್ಷಣ ಸಮಿತಿ ಚೇರಮನ್, ಹಿರಿಯ ಲೆಕ್ಕ ಪರಿಶೋಧಕ ಎ.ಎಲ್. ಪೋತ್ನೀಸ್, ಆದರ್ಶ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎ.ಡಿ. ಗೋಡಖಿಂಡಿ, ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್‌ನ ಪ್ರಾಂಶುಪಾಲ ಡಾ. ವಿ.ಟಿ. ನಾಯ್ಕರ್, ಡಿ.ಎಸ್. ಕುರ್ತಕೋಟಿ ಮೆಮೋರಿಯಲ್ ಪಿಯು ಕಾಲೇಜ್ ಆಫ್ ಕಾಮರ್ಸ್ ಆದರ್ಶ ಶಿಕ್ಷಣ ಸಮಿತಿ ಪ್ರಾಂಶುಪಾಲ ಆರ್.ಆರ್. ಕುಲಕರ್ಣಿ, ಆದರ್ಶ ಶಿಕ್ಷಣ ಸಮಿತಿ ಪ್ರಾಂಶುಪಾಲರಾದ ಎಲ್.ಎಸ್. ರೇಶ್ಮಿ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ (ಗ್ರೇಡ್-2) ಆರ್.ಎಸ್. ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಎಮ್.ಎಸ್. ರಮೇಶ ಸ್ವಾಗತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು.

ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ. ಪಲ್ಲೇದ ಮಾತನಾಡಿ, ಪ್ರತಿವರ್ಷ ಡಿ. 24ರಂದು ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಆಚರಣೆ ಮಾಡಲಾಗುತ್ತದೆ ಹಾಗೂ ಮಾರ್ಚ್ 15ರಂದು ವಿಶ್ವ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಗ್ರಾಹಕರ ದಿನಾಚರಣೆಯು 1986ರಲ್ಲಿ ಜಾರಿಗೆ ಬಂದಿದೆ. ಸುಪ್ರೀಮ್ ಕೋರ್ಟ್‌ನ ಆದೇಶದಂತೆ ಗ್ರಾಹಕರ ಕುಂದುಕೊರತೆಗಳ ಪರಿಹಾರಕ್ಕಾಗಿ ಇರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಜಿಲ್ಲಾ, ರಾಜ್ಯ, ಕೇಂದ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಚಿಕೇನಕೊಪ್ಪ ಚನ್ನವೀರಶರಣರ 31ನೇ ಪುಣ್ಯಸ್ಮರಣೋತ್ಸವ: ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ

0

ವಿಜಯಸಾಕ್ಷಿ ಸುದ್ದಿ, ಗದಗ: ಚಿಕೇನಕೊಪ್ಪ ಚನ್ನವೀರಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭವು ನಗರದ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.

ಸನ್ನಿಧಾನ ವಹಿಸಿದ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಆಶೀರ್ವಚನ ನೀಡಿ, ಮಠಗಳು, ಜಾತ್ರೆ, ಪುಣ್ಯಸ್ಮರಣೆ ಮೊದಲಾದ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸಮಾಜಮುಖಿಯಾಗಿ ಕಾರ್ಯ ಮಾಡಿ ಜನಕಲ್ಯಾಣ ಮಾಡುವುದರ ಜೊತೆಗೆ ನಿರಂತರವಾಗಿ ಜ್ಞಾನದಾಸೋಹ, ಅನ್ನದಾಸೋಹ, ಸಾಮೂಹಿಕ ವಿವಾಹ ಮೊದಲಾದ ಚಟುವಟಿಕೆಗಳು ಸುಗಮವಾಗಿ ನಿರ್ವಹಣೆಯಾಗಲು ಪೂಜ್ಯ ಚನ್ನವೀರ ಶರಣರ ಆಶೀರ್ವಾದ ಹಾಗೂ ಭಕ್ತರ ನಿಷ್ಕಲ್ಮಷ ಭಕ್ತಿ, ವಿಶ್ವಾಸ, ಪ್ರೀತಿ ಸಮರ್ಪಣಾ ಭಾವದ ಸೇವೆ ಮುಖ್ಯವಾಗಿದೆ. ಈ ಪವಿತ್ರ ಕಾರ್ಯದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಜಿ.ಪಂ ಮಾಜಿ ಅಧ್ಯಕ್ಷ ಪಿ.ವಾಯ್. ಹುಣಸಿಕಟ್ಟಿ, ಜಿ.ಆರ್. ಓದುಗೌಡರ, ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಾಜು ಗುಡಿಮನಿ, ಎಸ್.ಎಫ್. ಗದ್ದಿಕೇರಿ, ವ್ಹಿ.ಬಿ. ಪೊಲೀಸ್‌ಪಾಟೀಲ, ರಾಜೇಂದ್ರಗೌಡ ಕಾಶಿಗೌಡ್ರ, ಡಾ. ಶರಣಬಸವ ವೆಂಕಟಾಪುರ ಮುಂದಿನ ತಿಂಗಳು ಜರುಗುವ ಶ್ರೀ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಲು ತಮ್ಮ ಅನಿಸಿಕೆಗಳನ್ನು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶ್ರೀಮಠದಿಂದ ಪ್ರಕಟವಾದ 2026ರ ದಿನದರ್ಶಿಕೆ ಲೋಕಾರ್ಪಣೆಗೊಳಿಸಲಾಯಿತು.

ತಾ.ಪಂ ಮಾಜಿ ಅಧ್ಯಕ್ಷ ವಿ.ಎಸ್. ಹಿರೇಮಠ, ಎಂ.ಬಿ. ಸಿಕ್ಕೆದೇಸಾಯಿ, ಪುಂಡಲೀಕಪ್ಪ ಕಂಬಿ, ವಸಂತ ಮೇಟಿ, ಕೆ.ಪಿ. ಪಾಟೀಲ, ಎಸ್.ಪಿ. ಪಾಟೀಲ, ಎಸ್.ಎಸ್. ಪಾಟೀಲ (ಅರಹುಣಸಿ), ಅಶೋಕ ಸಂಕಣ್ಣವರ, ಮಹಾದೇವಪ್ಪ ಗೌರಿಪುರ, ಬಸವರಾಜ ಉಮಚಗಿ, ಶಶಿಧರ ಗೂಳರಡ್ಡಿ, ಪ್ರವೀಣಗೌಡ ಪಾಟೀಲ, ಪಂಚಾಕ್ಷರಯ್ಯ ಹಿರೇಮಠ, ವ್ಹಿ.ಸಿ. ಬಳ್ಳೊಳ್ಳಿ, ಈರಣ್ಣ ಕುರಡಗಿ, ಕೊಟ್ರೇಶ ವಡಕಣ್ಣವರ ಮೊದಲಾದವರು ಉಪಸ್ಥಿತರಿದ್ದರು.

ಹುಬ್ಬಳ್ಳಿ ನವನಗರದ ಚಿ.ಚ. ಶರಣರ ಅಂಧರ ಕಲ್ಯಾಣಾಶ್ರಮದ ಶಿಕ್ಷಕ ವೇ.ಮೂ. ಶಂಕರಯ್ಯ ಗುರುಮಠ ಪ್ರಾರ್ಥಿಸಿದರು. ಎಸ್.ಎಸ್. ಪುರಾಣಿಕಮಠ ಸ್ವಾಗತಿಸಿದರು. ಪ್ರಾಚಾರ್ಯ ಪ್ರಕಾಶ ಬರದೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ವಾಯ್. ಡೊಳ್ಳಿನ ನಿರೂಪಿಸಿದರು. ಮಾರುತಿ ಹುಡೇದ ವಂದಿಸಿದರು.

ಗದಗ| ನಡುರಸ್ತೆಯಲ್ಲೇ ನಿಂತ ಡಕೋಟಾ ಬಸ್; ಚಾಲಕನಿಗೆ ಸಂಕಟ, ಪ್ರಯಾಣಿಕರ ಪರದಾಟ!

0

ಗದಗ: ನಡುರಸ್ತೆಯಲ್ಲೇ ಸಾರಿಗೆ ಬಸ್ ಒಂದು ಕೆಟ್ಟು ನಿಂತಿದ್ದು, ಚಾಲಕ ಹಾಗೂ ಪ್ರಯಾಣಿಕರು ಪರದಾಡಿರುವ ಘಟನೆ ಗದಗ ನಗರದಲ್ಲಿ ಜರುಗಿದೆ.

ನಗರದ ಪುಟ್ಟರಾಜ್ ಸರ್ಕಲ್‌ನಲ್ಲಿ ರಾಯಚೂರು ವಿಭಾಗದ ಕಲ್ಯಾಣ ಕರ್ನಾಟಕ ಸಾರಿಗೆಯ ಡಕೋಟಾ ಬಸ್ ಸಿಗ್ನಲ್‌ನಲ್ಲಿ ಕೆಟ್ಟು ನಿಂತು ಪ್ರಯಾಣಿಕರಲ್ಲಿ ಆತಂಕವನ್ನು ಹುಟ್ಟಿಸಿತು.

ಲಿಂಗಸಗೂರು–ಕುಷ್ಟಗಿ–ಗದಗ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿದ್ದ ಬಸ್ ಚಾಲಕ ಪರದಾಟದಿಂದ ಸ್ಟಾರ್ಟ್ ಮಾಡಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಈ ಸಂದರ್ಭದಲ್ಲಿ ಪ್ರಯಾಣಿಕರು ಸಹಾಯ ಮಾಡಿ ಬಸ್ ತಳ್ಳಿದ ಪರಿಣಾಮ ಕೊನೆಗೂ ಬಸ್ ಸ್ಟಾರ್ಟ್ ಆಗಿ ಮುಂದಕ್ಕೆ ಸಾಗಿತು. ಈ ಘಟನೆ ರಾಜ್ಯ ಸಾರಿಗೆ ಇಲಾಖೆ ನಿರ್ವಹಣೆಯಲ್ಲಿ ಇನ್ನೂ ಹೆಚ್ಚು ಗಮನಕೊಡಬೇಕಾದ ಅಗತ್ಯವನ್ನು ಎತ್ತಿ ತೋರಿಸಿದೆ.

ಶಾಲಾ ವಾರ್ಷಿಕೋತ್ಸವ, ಸಾಂಸ್ಕೃತಿಕ ಸಂಭ್ರಮಾಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಶ್ರೀಮತಿ ಶಾಂತಾ ಎಸ್. ಕಂಪಗೌಡ್ರ ಇಂಟರ್‌ನ್ಯಾಷನಲ್ ಸಿಬಿಎಸ್‌ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಸಂಭ್ರಮಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಕಾರ್ಯದರ್ಶಿ ಆನಂದ ಗುಂಡಗೋವಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಪಿ. ಬೊಮ್ಮನಹಳ್ಳಿ ಆಗಮಿಸಿದ್ದರು. ವೇದಿಕೆಯ ಮೇಲೆ ಶಾಲೆಯ ಕಾರ್ಯದರ್ಶಿ ಆನಂದ್ ಗುಂಡಗೋವಿ, ನಿರ್ದೇಶಕ ಜಗದೀಶ ನರಗುಂದ, ಪ್ರಾಂಶುಪಾಲ ಶ್ರೀಧರ್ ಕಮತರ ಹಾಗೂ ಮುಖ್ಯೋಪಾಧ್ಯಾಯೆ ಆಸ್ಮಾ ದೊಡ್ಡಮನಿ ಉಪಸ್ಥಿತರಿದ್ದರು.

ಪ್ರಾಂಶುಪಾಲರು ವಾರ್ಷಿಕ ವರದಿಯನ್ನು ನೀಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ವೇದಿಕೆ ಕಾರ್ಯಕ್ರಮವನ್ನು ಶಿಕ್ಷಕರಾದ ವಿಜಯಲಕ್ಷ್ಮಿ ಮತ್ತು ಮೇಘಾ ನಿರೂಪಿಸಿದರು. ಮೀನಾಕ್ಷಿ ಅತಿಥಿಗಳನ್ನು ಪರಿಚಯಿಸಿದರು. ದೀಪಾ, ಫರೀದಾ, ಸುಮಾ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬ್ಲೆಸಿನಾ ಅವರು ವಂದಿಸಿದರು.

error: Content is protected !!