Home Blog Page 278

ಶ್ರೀ ಅನ್ನದಾನೇಶ್ವರರ 175ನೇ ಜಾತ್ರಾಮಹೋತ್ಸವದಲ್ಲಿ `ಬೆತ್ತದ ಅಜ್ಜ’ ಚಲನಚಿತ್ರದ ಚಿತ್ರೀಕರಣಕ್ಕೆ ಚಾಲನೆ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ತಾವು ಕಲಿಯದಿದ್ದರೂ ಗ್ರಾಮೀಣ ಭಾಗದ ಮಕ್ಕಳು ಚೆನ್ನಾಗಿ ಓದಿ, ಬರೆದು ಉತ್ತಮ ಭವಿಷ್ಯವನ್ನು ಹೊಂದಲಿ ಎಂಬ ಮಹದುದ್ದೇಶದಿಂದ ಸಮೀಪದ ನರೇಗಲ್ಲದ ಕೋಡಿಕೊಪ್ಪದ ವಿಶಾಲ ಜಾಗೆಯಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ತೆರೆಯುವ ಮೂಲಕ ಬೆತ್ತದ ಅಜ್ಜನವರು ಶೈಕ್ಷಣಿಕ ಕ್ರಾಂತಿಗೈದ ಮಹಾಪುರುಷರಾದರು. ಈ ಸಂಸ್ಥೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಬೆಳಗಿಸಿಕೊಂಡರು. ಅಂತಹ ಮಹನೀಯರ ಚಲನಚಿತ್ರಕ್ಕೆ ಇಂದು ಮುಹೂರ್ತ ಕೂಡಿ ಬಂದಿರುವುದು ನಮಗೆ ಅತ್ಯಂತ ಸಂತಸವನ್ನು ಂಟು ಮಾಡಿದೆ. ಈ ಚಿತ್ರ ಶೀಘ್ರವೇ ಚಿತ್ರೀಕರಣ ಪೂರೈಸಿ ನಮ್ಮ ಕಣ್ಣ ಮುಂದೆ ಪ್ರದರ್ಶನಗೊಳ್ಳಲಿ ಎಂದು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.

ಸಮೀಪದ ಹಾಲಕೆರೆ ಗ್ರಾಮದಲ್ಲಿ ಜರುಗುತ್ತಿರುವ ಶ್ರೀ ಅನ್ನದಾನೇಶ್ವರರ 175ನೇ ಜಾತ್ರಾಮಹೋತ್ಸವದಲ್ಲಿ `ಬೆತ್ತದ ಅಜ್ಜ’ ಚಲನಚಿತ್ರದ ಚಿತ್ರೀಕರಣಕ್ಕೆ ಕ್ಲಾಪ್ ಮಾಡಿ ಅವರು ಆಶೀರ್ವಚನ ನೀಡಿದರು.

ಬೆತ್ತದ ಅಜ್ಜನವರು ಕಟ್ಟಿರುವ ಕಟ್ಟಡಗಳನ್ನು ನೀವೊಮ್ಮೆ ನೋಡಬೇಕು. ಯಾವ ಇಂಜಿನಿಯರರೂ ತಲೆ ಬಾಗುವಂತೆ ನಿಖರವಾದ ಅಳತೆ ಹಾಕಿ ಕಟ್ಟಡ ನಿರ್ಮಿಸಿರುವುದು ಅವರ ಜ್ಞಾನ ಕ್ಷಿತಿಜದ ಪರಿಚಯ ಮಾಡಿಕೊಡುತ್ತದೆ. ಶ್ರೀ ಅನ್ನದಾನ ವಿಜಯ ಬಾಲಕರ ಪ್ರೌಢಶಾಲಾ ಕಟ್ಟಡ, ವಸತಿ ನಿಲಯ ಮತ್ತು ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಕಟ್ಟಡಗಳನ್ನು ನೋಡಿದರೆ ಅಜ್ಜನವರ ಅಗಾಧ ಜ್ಞಾನಕ್ಕೆ ನಾವೆಲ್ಲರೂ ತಲೆದೂಗಲೇಬೇಕಾಗುತ್ತದೆ. ಅವರ ಕೈಯಲ್ಲಿನ ಬೆತ್ತವೇ ಅವರ ಅಳತೆ ಪಟ್ಟಿಯಾಗಿತ್ತು. ಅದರಿಂದ ಗುರುತು ಮಾಡಿದರೆ ಇದು ಇಷ್ಟೇ ಅಳತೆ, ಇಷ್ಟೇ ಉದ್ದ-ಅಗಲವಿದೆ ಎಂಬುದನ್ನು ನಿಖರವಾಗಿ ಹೇಳುತ್ತಿದ್ದರು ಎಂಬುದನ್ನು ಕೇಳಿದಾಗ ಅವರು ಅದೆಂತಹ ಮೇಧಾವಿಯಾಗಿದ್ದರು ಎಂಬುದು ತಿಳಿದು ಬರುತ್ತದೆ ಎಂದರು.

ಈವೇಳೆ ನಾಡಿನ ಹರ-ಗುರು-ಚರ ಮೂರ್ತಿಗಳು, ಶ್ರೀಮಠದ ಗಣ್ಯರು, ತಂತ್ರಜ್ಞರು, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಇಂತಹ ಮಹಾಮಹಿಮನ ಚಿತ್ರವನ್ನು ನೋಡಲು ನಾವು ತುದಿಗಾಲಲ್ಲಿ ನಿಂತಿದ್ದೇವೆ. ಅವರ ಆಶೀರ್ವಾದದ ಬಲದಿಂದ ಈ ಚಿತ್ರವು ಚೆನ್ನಾಗಿ ಮೂಡಿ ಬರುತ್ತದೆ ಎನ್ನುವ ವಿಶ್ವಾಸ ನಮ್ಮದು. ಈ ಚಿತ್ರದಲ್ಲಿ ಅಭಿನಯಿಸುವ ಎಲ್ಲ ಕಲಾವಿದರಿಗೆ, ತಂತ್ರಜ್ಞರಿಗೆ ಶ್ರೀ ಮಠದಿಂದ, ನಮ್ಮ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಶಿಕ್ಷಕ ಬಳಗ ಮತ್ತು ವಿದ್ಯಾರ್ಥಿ ಬಳಗದಿಂದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇವೆ ಎಂದು ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.

ಪ್ರತಿಯೊಬ್ಬ ಮಹಿಳೆಯೂ ಗೌರವಕ್ಕೆ ಅರ್ಹಳು: ದೂರಿನ ಬಳಿಕ ವಿಜಯಲಕ್ಷ್ಮಿ ಪೋಸ್ಟ್

ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಸಭ್ಯತೆ ಮತ್ತು ಮಾನಸಿಕ ಕಿರುಕುಳಕ್ಕೆ ವಿಜಯಲಕ್ಷ್ಮಿ ದರ್ಶನ್ ಬಹಿರಂಗವಾಗಿ ಸವಾಲು ಹಾಕಿದ್ದಾರೆ. ತನ್ನ ಬಗ್ಗೆ ಕೆಟ್ಟ ಕಾಮೆಂಟ್ ಮಾಡಿದವರ ವಿರುದ್ಧ ಸೈಬರ್ ಕ್ರೈಂಗೆ ದೂರು ನೀಡಿರುವ ಅವರು, ಅಭಿಮಾನಿಗಳ ಹೆಸರಲ್ಲಿ ನಡೆಯುವ ದೌರ್ಜನ್ಯಕ್ಕೆ ತೆರೆ ಎಳೆದಿದ್ದಾರೆ.

ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತೀಕ್ಷ್ಣ ಪದಗಳಲ್ಲಿ ಪ್ರತಿಕ್ರಿಯಿಸಿರುವ ವಿಜಯಲಕ್ಷ್ಮಿ, ಅಸಭ್ಯ ಭಾಷೆ ಬಳಸಿ ಕಾಮೆಂಟ್ ಮಾಡಿದ ಖಾತೆಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. “ಕೀಳು ಭಾಷೆ ಬಳಸುವ ಕ್ಲಾಸಿ ಹುಡುಗಿಯರು ಮತ್ತು ಸಭ್ಯತೆಯನ್ನು ಸಂಪೂರ್ಣವಾಗಿ ಮರೆತ ಕ್ಲಾಸಿ ಪುರುಷರಿಗೆ ವಿಶೇಷ ಅಭಿನಂದನೆಗಳು” ಎಂದು ವ್ಯಂಗ್ಯವಾಡಿದ್ದಾರೆ.

“ನಾನು ಮೌನವಾಗಿ ಇದನ್ನು ಸಹಿಸುವುದಿಲ್ಲ. ಇದು ಕೇವಲ ನನ್ನ ಬಗ್ಗೆ ಅಲ್ಲ. ಪ್ರತಿಯೊಬ್ಬ ಮಹಿಳೆಯೂ ಗೌರವಕ್ಕೆ ಅರ್ಹಳು” ಎಂದು ಅವರು ಖಡಕ್ ಸಂದೇಶ ನೀಡಿದ್ದಾರೆ. ಆನ್‌ಲೈನ್ ಕಿರುಕುಳವನ್ನು ಸಾಮಾನ್ಯವಾಗಿ ಪರಿಗಣಿಸಬಾರದು ಎಂಬ ಬಲವಾದ ಸಾಮಾಜಿಕ ಸಂದೇಶ ಈ ಹೇಳಿಕೆಯ ಮೂಲಕ ಹೊರಬಿದ್ದಿದೆ.

ಆಪ್ತ ಸಹಾಯಕನ ಮನೆ ಮೇಲೆ ಲೋಕಾ ದಾಳಿ: ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು..?

0

ಮೈಸೂರು: ತಮ್ಮ ಆಪ್ತ ಸಹಾಯಕನ ಮನೆ ಸೇರಿದಂತೆ ಹಲವು ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿರುವ ದಾಳಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದಡಿ ತಮ್ಮ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್‌ಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ, ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸರ್ಫರಾಜ್ ಖಾನ್ ತಂದೆಯ ಕಾಲದಿಂದಲೂ ಅವರು ಶ್ರೀಮಂತ ಕುಟುಂಬಕ್ಕೆ ಸೇರಿದ್ದಾರೆ. ದಾಳಿ ಯಾಕೆ ನಡೆದಿದೆ ಎಂಬುದು ನನಗೆ ತಿಳಿದಿಲ್ಲ. ಏನಾಗಿದೆ ಎಂಬುದನ್ನು ನೋಡೋಣ ಎಂದು ಹೇಳಿದರು.

ಸಹಕಾರ ನಿರ್ದೇಶನಾಲಯ ಇಲಾಖೆಯಿಂದ ವಸತಿ ಇಲಾಖೆಗೆ ನಿಯೋಜನೆಗೊಂಡಿರುವ ಸರ್ದಾರ್ ಸರ್ಫರಾಜ್ ಖಾನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆ ಈ ದಾಳಿ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ಸರ್ದಾರ್ ಸರ್ಫರಾಜ್ ಖಾನ್‌ಗೆ ಸಂಬಂಧಿಸಿದ ಬೆಂಗಳೂರಿನ ಹಲಸೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಮನೆಗಳು,

ಕೊಡಗಿನಲ್ಲಿರುವ ಕಾಫಿ ಎಸ್ಟೇಟ್‌ಗಳು ಹಾಗೂ ಹೆಚ್.ಡಿ. ಕೋಟೆಯಲ್ಲಿರುವ ಒಂದು ರೆಸಾರ್ಟ್ ಸೇರಿದಂತೆ ಐದಕ್ಕೂ ಹೆಚ್ಚು ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಸದ್ಯ ಈ ಎಲ್ಲಾ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಶೋಧ ಕಾರ್ಯ ಮುಂದುವರಿದಿದ್ದು, ತನಿಖೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

 

Virat Kohli: ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಶತಕ ಚಚ್ಚಿದ ಕಿಂಗ್ ಕೊಹ್ಲಿ!

0

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿ ಅಬ್ಬರಿಸಿದ್ದ ವಿರಾಟ್ ಕೊಹ್ಲಿ, ಇದೀಗ ದೇಶಿ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲೂ ತಮ್ಮ ಶತಕಗಳ ಓಟವನ್ನು ಮುಂದುವರೆಸಿದ್ದಾರೆ. ಬರೋಬ್ಬರಿ 15 ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಡೆಲ್ಲಿ ಪರ ಕಣಕ್ಕಿಳಿದಿರುವ ಕೊಹ್ಲಿ, ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 83 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ.

ಇದರಿಂದಾಗಿ 16 ವರ್ಷಗಳ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಶತಕದ ಇನ್ನಿಂಗ್ಸ್ ಆಡಿದ ಸಾಧನೆ ಮಾಡಿದ್ದಾರೆ. ಕೊಹ್ಲಿ ಕೊನೆಯ ಬಾರಿಗೆ 2009ರಲ್ಲಿ ಈ ಟೂರ್ನಿಯಲ್ಲಿ ಶತಕ ಬಾರಿಸಿದ್ದರು. ಆ ವೇಳೆ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಅವರು 124 ರನ್ ಗಳಿಸಿದ್ದರು. ಅಲ್ಲದೆ, ಆ ಆವೃತ್ತಿಯಲ್ಲಿ ನಾಲ್ಕು ಶತಕಗಳೊಂದಿಗೆ ಒಟ್ಟು 534 ರನ್ ಕಲೆಹಾಕಿ ಟೂರ್ನಿಯ ಟಾಪ್ ಪ್ರದರ್ಶನ ನೀಡಿದ್ದರು.

ಮತ್ತೊಮ್ಮೆ ದೇಶಿ ಅಂಗಳದಲ್ಲಿ ಅಬ್ಬರಿಸಿರುವ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ತಮ್ಮ ಉತ್ತಮ ಫಾರ್ಮ್ ಮುಂದುವರೆಸಿರುವುದು ಟೀಂ ಇಂಡಿಯಾಗೆ ದೊಡ್ಡ ಬಲ ನೀಡಿದೆ. ಪ್ರಸ್ತುತ ಅದ್ಭುತ ಲಯದಲ್ಲಿರುವ ಕೊಹ್ಲಿ ತಮ್ಮ ಕೊನೆಯ ನಾಲ್ಕು ಏಕದಿನ ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳನ್ನು ಬಾರಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ್ದ ಕೊಹ್ಲಿ, ಮೂರನೇ ಪಂದ್ಯದಲ್ಲಿ ಅಜೇಯ 65 ರನ್ ಗಳಿಸಿದ್ದರು. ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಬ್ಯಾಟ್‌ನ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು: ಇಬ್ಬರು ಸಾವು! ಮತ್ತಿಬ್ಬರಿಗೆ ಗಾಯ

0

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಸೊರಬ ತಾಲೂಕು ಆನವಟ್ಟಿ ಸಮೀಪದ ಕನ್ನೆಕೊಪ್ಪ–ಹೊಸೂರು ಬಳಿ  ನಡೆದಿದೆ.

ಮೃತರನ್ನು ಶಿಕಾರಿಪುರ ತಾಲೂಕಿನ ಪುನೇದಹಳ್ಳಿ ಗ್ರಾಮದ ನಿವಾಸಿಗಳಾದ ನವೀನ್ (21) ಮತ್ತು ರಾಮಚಂದ್ರ (37) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ರುದ್ರೇಶ್ (26) ಮತ್ತು ಮಂಜುನಾಥ್ (21) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಮಚಂದ್ರ ಕಾರು ಚಾಲನೆ ಮಾಡುತ್ತಿದ್ದರು.

ಇಂದು ಬೆಳಗಿನ ಜಾವ ಶಿಕಾರಿಪುರದ ಪುನೇದಹಳ್ಳಿಯಿಂದ ಆನವಟ್ಟಿ ಕಡೆಗೆ ಮಾರುತಿ ಸುಜುಕಿ ಇಕೊ ಕಾರಿನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಆನವಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ನದಿ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ಕನಿಷ್ಠ 40-45 ಟಿಎಂಸಿ ನೀರು ನಿಗದಿ ಮಾಡಲು ಮನವಿ: ಡಿ.ಕೆ. ಶಿವಕುಮಾರ್

0

ನವದೆಹಲಿ: ನದಿ ಜೋಡಣೆ ಯೋಜನೆಯಲ್ಲಿ ನಮ್ಮ ರಾಜ್ಯಕ್ಕೆ ಕನಿಷ್ಠ 40-45 ಟಿಎಂಸಿ ನೀರನ್ನು ನೀಡಬೇಕು. ಗೋದಾವರಿ- ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಹೆಚ್ಚುವರಿ 5 ಟಿಎಂಸಿ ನೀರನ್ನು ಭೀಮಾ ನದಿ ಪ್ರದೇಶಕ್ಕೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಬುಧವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಮಾತನಾಡಿದರು.

“ನದಿ ಜೋಡಣೆ ವಿಚಾರವಾಗಿ ಕೇಂದ್ರ ಜಲ ಶಕ್ತಿ ಸಚಿವರ ನೇತೃತ್ವದಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ಯನ್ನು ರಚಿಸಲಾಗಿದ್ದು, ಎಲ್ಲಾ ರಾಜ್ಯಗಳು ಅದರ ಸದಸ್ಯರಾಗಿರುತ್ತವೆ. ಮಂಗಳವಾರ ಇದರ 24ನೇ ಸಭೆ ನಡೆದಿದ್ದು, ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಗೋದಾವರಿ ಹಾಗೂ ಕಾವೇರಿ, ಬೇಡ್ತಿ ಹಾಗೂ ವರದಾ ನದಿ ಜೋಡಣೆ ಬಗ್ಗೆ ಚರ್ಚೆ ನಡೆದಿದೆ” ಎಂದರು.

“ಗೋದಾವರಿ ಹಾಗೂ ಕಾವೇರಿ ನದಿ ಜೋಡಣೆ ಯೋಜನೆಯ ಮೊದಲ ಹಂತದಲ್ಲಿ 148 ಟಿಎಂಸಿ ನೀರನ್ನು ತಿರುಗಿಸಲಾಗುತ್ತಿದ್ದು, ಇದರಲ್ಲಿ ಕರ್ನಾಟಕಕ್ಕೆ ನಿಗದಿ ಮಾಡಿರುವುದು ಕೇವಲ 15.90 ಟಿಎಂಸಿ ನೀರು ಮಾತ್ರ. ನೀರನ್ನು ಯಾವ ಕಡೆ ನೀಡುತ್ತೀರಿ ಹಾಗೂ ಅದನ್ನು ಹೇಗೆ ಉಪಯೋಗಿಸಬೇಕು ಎಂಬ ಬೇಡಿಕೆ ಸಭೆಯ ಮುಂದಿಟ್ಟಿದ್ದೇವೆ. ಬೇಡ್ತಿ ಹಾಗೂ ವರದಾ ನದಿ ಜೋಡಣೆ ನಮ್ಮ ರಾಜ್ಯದೊಳಗೆ ಮಾಡಲಿದ್ದು,

18.50 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅವಕಾಶ ಇದೆ. ಈ ಎರಡೂ ಯೋಜನೆಗಳಿಂದ ಕರ್ನಾಟಕಕ್ಕೆ ಒಟ್ಟು 34.40 ಟಿಎಂಸಿ ನೀರನ್ನು ನಿಗದಿ ಮಾಡಲಾಗಿದೆ. ಬೇಡ್ತಿ ಹಾಗೂ ವರದಾ ನದಿ ಜೋಡಣೆಗೆ ಡಿಪಿಆರ್ ತಯಾರಿಸಲು ನಾವು ಅನುಮತಿಯನ್ನು ನೀಡಿದ್ದೇವೆ. ಇದಕ್ಕೆ 10 ಸಾವಿರ ಕೋಟಿ ವೆಚ್ಚವಾಗಲಿದ್ದು, ಇದರಲ್ಲಿ 90% ಕೇಂದ್ರ ಸರ್ಕಾರ ಹಾಗೂ 10% ರಾಜ್ಯ ಸರ್ಕಾರ ಭರಿಸಲಿದೆ” ಎಂದು ಮಾಹಿತಿ ನೀಡಿದರು.

“ಸುಪ್ರೀಂ ಕೋರ್ಟ್ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಎರಡು ತಿಂಗಳಲ್ಲಿ ಸಲ್ಲಿಕೆ ಮಾಡುತ್ತೇವೆ ಎಂದು ಕೇಂದ್ರ ಸಚಿವರ ಬಳಿ ತಿಳಿಸಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಲಾಗಿರುವ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದೇನೆ. ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಇದರ ಸಂಬಂಧ ಈಗಾಗಲೇ ಎರಡು ಬಾರಿ ಸಭೆ ಮುಂದೂಡಲ್ಪಟ್ಟಿದೆ. ಮಹದಾಯಿ ವಿಚಾರವಾಗಿ ಅಧಿಕಾರಿಗಳು ಸಭೆ ಮಾಡಿದ್ದಾರೆ. ಈ ಯೋಜನೆ ವಿಚಾರದಲ್ಲಿ ಅರಣ್ಯ ಇಲಾಖೆ ಮೇಲೆ ಒತ್ತಡ ಹಾಕುವಂತೆ ಕೇಳಿದ್ದೇವೆ” ಎಂದರು.

“ಕೇಂದ್ರ ಸಚಿವರು ನನಗೆ ಮತ್ತೊಂದು ದಿನ ಭೇಟಿಗೆ ಸಮಯಾವಕಾಶ ನೀಡುತ್ತೇನೆ. ಜಲ ಜೀವನ್ ಮಿಷನ್ ಯೋಜನೆಯಿಂದ ಹಿಡಿದು ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲಾ ವಿಚಾರವಾಗಿ ಚರ್ಚೆ ಮಾಡಲು ತಿಳಿಸಿದ್ದಾರೆ” ಎಂದರು. “ಇನ್ನು ಮಂಗಳವಾರ ಕೇಂದ್ರ ನಗರಾಭಿವೃದ್ಧಿ ಸಚಿವರಾದ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಿ ಕೆಲವು ಯೋಜನೆಗಳಿಗೆ ಬಾಕಿ ಇರುವ ಅನುಮೋದನೆಗೆ ಮನವಿ ಮಾಡಿದ್ದೇನೆ.

ಮೆಟ್ರೋ 2ನೇ ಹಂತದ ಯೋಜನೆಗೆ 15 ವರ್ಷಗಳ ಹಿಂದೆ ಅಂದರೆ 2010ರ ಜುಲೈನಲ್ಲಿ ಡಿಪಿಆರ್ ಸಿದ್ಧಪಡಿಸಲಾಗಿತ್ತು. ಆಗ 26 ಸಾವಿರ ಕೋಟಿ ಇದ್ದ ಯೋಜನೆ ವೆಚ್ಚ ಈಗ 40 ಸಾವಿರ ಕೋಟಿಗೆ ಏರಿಕೆಯಾಗಿದೆ. ಭೂಸ್ವಾಧೀನ ಪ್ರಕ್ರಿಯೆಗೆ 2500 ಕೋಟಿ ಹೆಚ್ಚು ವೆಚ್ಚವಾಗಿದೆ. 2026ರ ಡಿಸೆಂಬರ್ ವೇಳೆಗೆ ಈ ಯೋಜನೆ ಪೂರ್ಣಗೊಳಿಸಲಾಗುವುದು. ಹೀಗಾಗಿ ಈ ಪರಿಷ್ಕೃತ ದರಕ್ಕೆ ಒಪ್ಪಿಗೆ ನೀಡಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.

ಬೆಂಗಳೂರಲ್ಲಿ 30 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ACP..!

0

ಬೆಂಗಳೂರು: 30 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ (ACP) ಕೃಷ್ಣಮೂರ್ತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ರಾಜಧಾನಿಯಲ್ಲಿ ನಡೆದಿದೆ. ಮಲ್ಲೇಶ್ವರಂನಲ್ಲಿರುವ ಎಸಿಪಿ ಕಚೇರಿಯಲ್ಲೇ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ನಡೆಸಿ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಸಾಗರ್ ಹೋಟೆಲ್ ಮಾಲೀಕರಿಂದ ಪ್ರತೀ ತಿಂಗಳು 32 ಸಾವಿರ ರೂಪಾಯಿ ಲಂಚ ನೀಡುವಂತೆ ಎಸಿಪಿ ಕೃಷ್ಣಮೂರ್ತಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಹೋಟೆಲ್ ಮಾಲೀಕರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಟ್ರ್ಯಾಪ್ ಕಾರ್ಯಾ ಚರಣೆಗೆ ಮುಂದಾಗಿದ್ದರು. ಅದರಂತೆ ಬುಧವಾರ ಎಸಿಪಿ ಕಚೇರಿಯಲ್ಲಿ ಹೋಟೆಲ್ ಮಾಲೀಕರಿಂದ 30 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕೃಷ್ಣಮೂರ್ತಿ ರನ್ನು ವಶಕ್ಕೆ ಪಡೆದಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟಿರುವ ಎಸಿಪಿ ಕೃಷ್ಣಮೂರ್ತಿ ಅವರ ಆಡಿಯೋ ದಾಖಲೆಗಳೂ ಲಭ್ಯವಾಗಿದ್ದು, ಪ್ರಕರಣದ ಕುರಿತು ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸರಸಕ್ಕೆ ಕರೆದು ಟೆಕ್ಕಿಯಿಂದ ಹಣ ದೋಚಿದ ಆರೋಪ: ಇಬ್ಬರು ಮಹಿಳೆಯರು ಸೇರಿ ಐವರ ಬಂಧನ

0

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಹನಿಟ್ರ್ಯಾಪ್​ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದೀಗ ಸರಸಕ್ಕೆ ಕರೆದು ಟೆಕ್ಕಿಯೊಬ್ಬರಿಂದ ಹಣ ದೋಚಿ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿ ಐವರನ್ನು ಆರ್.ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸುಮಲತಾ @ ಅಂಜಲಿ, ಅನ್ನಪೂರ್ಣೇಶ್ವರಿ ನಗರದ ಹರ್ಷಿಣಿ @ ಸ್ವೀಟಿ, ಜಗದೀಶ್, ಲೋಕೇಶ್ ಹಾಗೂ ಮಂಜುನಾಥ್ ಎಂದು ಗುರುತಿಸಲಾಗಿದೆ.

 ಆರೋಪಿಗಳಲ್ಲಿದ್ದ ಇಬ್ಬರು ಮಹಿಳೆಯರು ಟೆಕ್ಕಿಯನ್ನು ಸರಸಕ್ಕೆ ಕರೆಸಿಕೊಂಡಿದ್ದರು. ಸ್ಥಳಕ್ಕೆ ಬಂದ ಬಳಿಕ 40 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದು, ಟೆಕ್ಕಿ ನಿರಾಕರಿಸಿದಾಗ ಸಹಚರರನ್ನು ಕರೆದು ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ.

ಘಟನೆಯ ನಂತರ ಟೆಕ್ಕಿ ಅಲ್ಲಿಂದ ತಪ್ಪಿಸಿಕೊಂಡು ಸ್ಥಳೀಯರ ಸಹಾಯದಿಂದ 112ಕ್ಕೆ ಕರೆ ಮಾಡಿದ್ದಾನೆ. ಮಾಹಿತಿ ಪಡೆದ ಹೊಯ್ಸಳ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ, ಟೆಕ್ಕಿ ಹಾಗೂ ಹಲ್ಲೆ ನಡೆಸಿದ ಇಬ್ಬರು ಮಹಿಳೆಯರು ಸೇರಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆಯ ವೇಳೆ ಪ್ರಕರಣದ ಹಿನ್ನೆಲೆ ಬೆಳಕಿಗೆ ಬಂದಿದೆ. ಡಿಸೆಂಬರ್ 10ರಂದು ಟೆಲಿಗ್ರಾಂ ಮೂಲಕ ಟೆಕ್ಕಿಗೆ ಯುವತಿಯೊಬ್ಬಳ ಪರಿಚಯವಾಗಿದ್ದು, ಆಕೆ 20 ಸಾವಿರ ರೂ. ಕೇಳಿದ್ದಾಳೆ. ಟೆಕ್ಕಿ ಹಣ ನೀಡಲು ಒಪ್ಪಿಕೊಂಡು ಮಹಿಳೆಯ ಮನೆಗೆ ಹೋಗಿದ್ದಾಗ, ಬೆದರಿಸಿ 20 ಸಾವಿರ ರೂ. ಕಸಿದುಕೊಂಡಿದ್ದಾರೆ ಎನ್ನಲಾಗಿದೆ.

ನಂತರ ಅದೇ ಮಹಿಳೆ ತನ್ನ ಸ್ನೇಹಿತೆಯ ಸಹಾಯದಿಂದ ಮತ್ತೆ ಟೆಕ್ಕಿಯನ್ನು ಕರೆಸಿ ಮತ್ತೊಂದು 20 ಸಾವಿರ ರೂ. ಕಸಿದುಕೊಂಡು ಹಲ್ಲೆ ನಡೆಸಿದ್ದಾಳೆ. ಈ ಕುರಿತು ಟೆಕ್ಕಿ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ದೂರಿನ ಆಧಾರದ ಮೇಲೆ ಪೊಲೀಸರು ಐವರನ್ನು ಬಂಧಿಸಿದ್ದು, ಸದ್ಯ ಕೋರ್ಟ್ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ.

ಇನ್ಸ್ಟಾಗ್ರಾಮ್​́ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ: ಆರೋಪಿ ಬಂಧನ

0

ಬೆಂಗಳೂರು: ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕನೊಬ್ಬ ಪ್ರೀತಿಯ ವಿಚಾರವಾಗಿ ನಡು ರಸ್ತೆಯಲ್ಲೇ ಯುವತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಿ.ಜಿ ಬಳಿ ಕಾರಿನಲ್ಲಿ ಬಂದ ಯುವಕ, ಯುವತಿಗೆ ಹಲವು ಬಾರಿ ಥಳಿಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರೋಪಿಯನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದ್ದು, 2024ರಲ್ಲಿ ಸಂತ್ರಸ್ತ ಯುವತಿಯೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ಪರಿಚಯದ ನಂತರ ಇಬ್ಬರ ನಡುವೆ ಫೋನ್ ಕರೆ ಹಾಗೂ ಮೆಸೇಜ್ ಮೂಲಕ ಸಂಪರ್ಕ ಮುಂದುವರಿದಿತ್ತು. ಆದರೆ ನವೀನ್ ಕುಮಾರ್ ಯುವತಿಯನ್ನು ಪ್ರೀತಿಸಬೇಕು ಎಂದು ಬಲವಂತ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ.

ಈ ವಿಚಾರದಿಂದ ಇಬ್ಬರ ನಡುವೆ ಪ್ರೀತಿ ಹಾಗೂ ಹಣಕಾಸಿನ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು ಎಂದು ತಿಳಿದುಬಂದಿದೆ. ಸೋಮವಾರ ಜ್ಞಾನಭಾರತಿ ವ್ಯಾಪ್ತಿಯಲ್ಲಿರುವ ಯುವತಿಯ ಪಿ.ಜಿ ಬಳಿ ಕಾರಿನಲ್ಲಿ ಬಂದ ನವೀನ್, ಹಾರನ್ ಹೊಡೆದು ಯುವತಿಯನ್ನು ಕರೆಸಲು ಯತ್ನಿಸಿದ್ದಾನೆ. ಈ ವೇಳೆ ಯುವತಿಯ ಸ್ನೇಹಿತೆ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿದಾಗ, ಯುವತಿ ಹಿಂದಕ್ಕೆ ಸರಿಯಲು ಯತ್ನಿಸಿದ್ದಾಳೆ.

ಆದರೆ ಆರೋಪಿಯು ಯುವತಿಯ ವ್ಯಾನಿಟಿ ಬ್ಯಾಗ್ ಕಸಿದು ಅದರೊಳಗೆ ಹುಡುಕಾಟ ನಡೆಸಿ, ಆಕೆಯ ಹಿಂದೆ ಓಡಿ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಎರಡು ಬಾರಿಗೂ ಹೆಚ್ಚು ಬಾರಿ ಹಲ್ಲೆ ನಡೆಸಿರುವ ದೃಶ್ಯಗಳು ಪಿ.ಜಿ ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಘಟನೆಯ ಬಳಿಕ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದರೂ, ಜ್ಞಾನಭಾರತಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಸುದೀಪ್ ಹೇಳಿಕೆ ಬಳಿಕ ವಿಜಯಲಕ್ಷ್ಮೀಗೆ ಅಶ್ಲೀಲ ಕಾಮೆಂಟ್:‌ ಸೈಬರ್ ಪೊಲೀಸರಿಗೆ ದೂರು

ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮತ್ತು ಹೇಟ್ ಕಮೆಂಟ್‌ಗಳ ಹಾವಳಿ ದಿನೇದಿನೇ ಹೆಚ್ಚುತ್ತಿದ್ದು, ಇದೀಗ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಇದರ ಬಲಿಯಾಗಿದ್ದಾರೆ. ಇತ್ತೀಚೆಗೆ ನಡೆದ ಸುದೀಪ್ ಹೇಳಿಕೆ ವಿವಾದದ ಬೆನ್ನಲ್ಲೇ ವಿಜಯಲಕ್ಷ್ಮೀ ವಿರುದ್ಧ ವೈಯಕ್ತಿಕ ದಾಳಿ ತೀವ್ರಗೊಂಡಿದ್ದು, ಅವರು ನೇರವಾಗಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಬಂದ ಅಶ್ಲೀಲ ಕಮೆಂಟ್‌ಗಳು, ಬೆದರಿಕೆ ಸಂದೇಶಗಳು ಹಾಗೂ ಅವಹೇಳನಕಾರಿ ಮೆಸೇಜ್‌ಗಳ ಸ್ಕ್ರೀನ್ಶಾಟ್‌ಗಳನ್ನು ವಿಜಯಲಕ್ಷ್ಮೀ ಸೈಬರ್ ಅಪರಾಧ ವಿಭಾಗಕ್ಕೆ ಸಲ್ಲಿಸಿದ್ದಾರೆ. ಸಂಬಂಧಪಟ್ಟ ಖಾತೆಗಳ ವಿವರಗಳನ್ನು ನೀಡಿದ್ದು, ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸುದೀಪ್ ಅವರು ಇತ್ತೀಚೆಗೆ ಸಿನಿಮಾ ಬಿಡುಗಡೆ ವೇಳೆ “ಯುದ್ಧಕ್ಕೆ ಸಿದ್ಧ” ಎಂಬ ಹೇಳಿಕೆ ನೀಡಿದ ನಂತರ ದರ್ಶನ್–ಸುದೀಪ್ ಅಭಿಮಾನಿಗಳ ಮಧ್ಯೆ ವಾಗ್ವಾದ ತೀವ್ರಗೊಂಡಿತ್ತು. ಈ ವಿವಾದದ ನೇರ ಪರಿಣಾಮವಾಗಿ ವಿಜಯಲಕ್ಷ್ಮೀ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸೈಬರ್ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ದೂರು ಸ್ವೀಕರಿಸಿದ್ದು, ಖಾತೆಗಳ ಮೂಲ ಪತ್ತೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪ್ರಕರಣ ಇದೀಗ ಅಧಿಕೃತ ತನಿಖೆ ಹಂತಕ್ಕೆ ಪ್ರವೇಶಿಸಿದೆ.

error: Content is protected !!