Home Blog Page 279

ಇನ್ಸ್ಟಾಗ್ರಾಮ್​́ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ: ಆರೋಪಿ ಬಂಧನ

0

ಬೆಂಗಳೂರು: ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕನೊಬ್ಬ ಪ್ರೀತಿಯ ವಿಚಾರವಾಗಿ ನಡು ರಸ್ತೆಯಲ್ಲೇ ಯುವತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಿ.ಜಿ ಬಳಿ ಕಾರಿನಲ್ಲಿ ಬಂದ ಯುವಕ, ಯುವತಿಗೆ ಹಲವು ಬಾರಿ ಥಳಿಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರೋಪಿಯನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದ್ದು, 2024ರಲ್ಲಿ ಸಂತ್ರಸ್ತ ಯುವತಿಯೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು. ಪರಿಚಯದ ನಂತರ ಇಬ್ಬರ ನಡುವೆ ಫೋನ್ ಕರೆ ಹಾಗೂ ಮೆಸೇಜ್ ಮೂಲಕ ಸಂಪರ್ಕ ಮುಂದುವರಿದಿತ್ತು. ಆದರೆ ನವೀನ್ ಕುಮಾರ್ ಯುವತಿಯನ್ನು ಪ್ರೀತಿಸಬೇಕು ಎಂದು ಬಲವಂತ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ.

ಈ ವಿಚಾರದಿಂದ ಇಬ್ಬರ ನಡುವೆ ಪ್ರೀತಿ ಹಾಗೂ ಹಣಕಾಸಿನ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು ಎಂದು ತಿಳಿದುಬಂದಿದೆ. ಸೋಮವಾರ ಜ್ಞಾನಭಾರತಿ ವ್ಯಾಪ್ತಿಯಲ್ಲಿರುವ ಯುವತಿಯ ಪಿ.ಜಿ ಬಳಿ ಕಾರಿನಲ್ಲಿ ಬಂದ ನವೀನ್, ಹಾರನ್ ಹೊಡೆದು ಯುವತಿಯನ್ನು ಕರೆಸಲು ಯತ್ನಿಸಿದ್ದಾನೆ. ಈ ವೇಳೆ ಯುವತಿಯ ಸ್ನೇಹಿತೆ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿದಾಗ, ಯುವತಿ ಹಿಂದಕ್ಕೆ ಸರಿಯಲು ಯತ್ನಿಸಿದ್ದಾಳೆ.

ಆದರೆ ಆರೋಪಿಯು ಯುವತಿಯ ವ್ಯಾನಿಟಿ ಬ್ಯಾಗ್ ಕಸಿದು ಅದರೊಳಗೆ ಹುಡುಕಾಟ ನಡೆಸಿ, ಆಕೆಯ ಹಿಂದೆ ಓಡಿ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಎರಡು ಬಾರಿಗೂ ಹೆಚ್ಚು ಬಾರಿ ಹಲ್ಲೆ ನಡೆಸಿರುವ ದೃಶ್ಯಗಳು ಪಿ.ಜಿ ಕಟ್ಟಡದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಘಟನೆಯ ಬಳಿಕ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದರೂ, ಜ್ಞಾನಭಾರತಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಸುದೀಪ್ ಹೇಳಿಕೆ ಬಳಿಕ ವಿಜಯಲಕ್ಷ್ಮೀಗೆ ಅಶ್ಲೀಲ ಕಾಮೆಂಟ್:‌ ಸೈಬರ್ ಪೊಲೀಸರಿಗೆ ದೂರು

ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮತ್ತು ಹೇಟ್ ಕಮೆಂಟ್‌ಗಳ ಹಾವಳಿ ದಿನೇದಿನೇ ಹೆಚ್ಚುತ್ತಿದ್ದು, ಇದೀಗ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಇದರ ಬಲಿಯಾಗಿದ್ದಾರೆ. ಇತ್ತೀಚೆಗೆ ನಡೆದ ಸುದೀಪ್ ಹೇಳಿಕೆ ವಿವಾದದ ಬೆನ್ನಲ್ಲೇ ವಿಜಯಲಕ್ಷ್ಮೀ ವಿರುದ್ಧ ವೈಯಕ್ತಿಕ ದಾಳಿ ತೀವ್ರಗೊಂಡಿದ್ದು, ಅವರು ನೇರವಾಗಿ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಬಂದ ಅಶ್ಲೀಲ ಕಮೆಂಟ್‌ಗಳು, ಬೆದರಿಕೆ ಸಂದೇಶಗಳು ಹಾಗೂ ಅವಹೇಳನಕಾರಿ ಮೆಸೇಜ್‌ಗಳ ಸ್ಕ್ರೀನ್ಶಾಟ್‌ಗಳನ್ನು ವಿಜಯಲಕ್ಷ್ಮೀ ಸೈಬರ್ ಅಪರಾಧ ವಿಭಾಗಕ್ಕೆ ಸಲ್ಲಿಸಿದ್ದಾರೆ. ಸಂಬಂಧಪಟ್ಟ ಖಾತೆಗಳ ವಿವರಗಳನ್ನು ನೀಡಿದ್ದು, ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸುದೀಪ್ ಅವರು ಇತ್ತೀಚೆಗೆ ಸಿನಿಮಾ ಬಿಡುಗಡೆ ವೇಳೆ “ಯುದ್ಧಕ್ಕೆ ಸಿದ್ಧ” ಎಂಬ ಹೇಳಿಕೆ ನೀಡಿದ ನಂತರ ದರ್ಶನ್–ಸುದೀಪ್ ಅಭಿಮಾನಿಗಳ ಮಧ್ಯೆ ವಾಗ್ವಾದ ತೀವ್ರಗೊಂಡಿತ್ತು. ಈ ವಿವಾದದ ನೇರ ಪರಿಣಾಮವಾಗಿ ವಿಜಯಲಕ್ಷ್ಮೀ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಸೈಬರ್ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ದೂರು ಸ್ವೀಕರಿಸಿದ್ದು, ಖಾತೆಗಳ ಮೂಲ ಪತ್ತೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪ್ರಕರಣ ಇದೀಗ ಅಧಿಕೃತ ತನಿಖೆ ಹಂತಕ್ಕೆ ಪ್ರವೇಶಿಸಿದೆ.

ಅಶ್ಲೀಲ ಕಮೆಂಟ್ ಹಾಕಿದವರಿಗೆ ಸಂಕಷ್ಟ: ದೂರು ದಾಖಲಿಸಿದ ವಿಜಯಲಕ್ಷ್ಮೀ

0

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಕಮೆಂಟ್‌ಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸೆಲೆಬ್ರಿಟಿಗಳು ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ. ಈ ಪೈಕಿ ನಟಿ ವಿಜಯಲಕ್ಷ್ಮೀ ಕೂಡ ಇತ್ತೀಚೆಗೆ ಹೇಟ್ ಕಮೆಂಟ್‌ಗಳಿಂದ ತೊಂದರೆ ಅನುಭವಿಸಿದ್ದು, ಈ ಸಂಬಂಧ ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ತಮಗೆ ಬಂದ ಅವಹೇಳನಕಾರಿ ಕಮೆಂಟ್‌ಗಳು ಮತ್ತು ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ವಿಜಯಲಕ್ಷ್ಮೀ ಸೈಬರ್ ಅಪರಾಧ ವಿಭಾಗಕ್ಕೆ ಸಲ್ಲಿಸಿದ್ದು, ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಈ ಹಿಂದೆ ನಟ ಸುದೀಪ್ ಅವರು ‘ಸಿನಿಮಾ ರಿಲೀಸ್ ವೇಳೆ ಒಂದು ಪಡೆ ಯುದ್ಧಕ್ಕೆ ರೆಡಿ ಇದೆ’ ಎಂದು ಹೇಳಿದ್ದ ಹೇಳಿಕೆ, ದರ್ಶನ್ ಅಭಿಮಾನಿಗಳಿಗೆ ಉದ್ದೇಶಿತವಾಗಿದೆ ಎಂದು ಕೆಲವರು ವ್ಯಾಖ್ಯಾನಿಸಿದ್ದರು.

ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಅವರು ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದರಿಂದ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದವು. ಈ ವಿಚಾರದ ನಂತರವೇ ವಿಜಯಲಕ್ಷ್ಮೀ ವಿರುದ್ಧ ಹೇಟ್ ಕಮೆಂಟ್‌ಗಳ ಸಂಖ್ಯೆ ಹೆಚ್ಚಾಗಿದೆ ಎನ್ನಲಾಗಿದೆ. ಈ ಸಂಬಂಧವಾಗಿ ವಿಜಯಲಕ್ಷ್ಮೀ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ಹೇಟ್ ಕಮೆಂಟ್ ಹಾಕಿದ ಖಾತೆಗಳ ಸ್ಕ್ರೀನ್‌ಶಾಟ್ ಹಾಗೂ ವಿವರಗಳನ್ನು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸೈಬರ್ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ದೂರು ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ವಿಜಯಲಕ್ಷ್ಮೀ ಖಾತೆಗೆ ಬಂದ ಕೆಲವು ಕಮೆಂಟ್‌ಗಳು ಸುದೀಪ್ ಅಭಿಮಾನಿಗಳಿಂದ ಬಂದಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ. ಕಾರಣ, ಕೆಲ ಖಾತೆಗಳು ಸುದೀಪ್ ಅಭಿಮಾನಿಗಳ ಹೆಸರಿನಲ್ಲಿ ಇದ್ದರೆ, ಇನ್ನೂ ಕೆಲವರು ಸುದೀಪ್ ಹೆಸರು ಹಾಗೂ ಸ್ಟಿಕ್ಕರ್‌ಗಳನ್ನು ಬಳಸಿದ್ದಾರೆ. ಈ ಖಾತೆಗಳು ನಿಜವಾದ ಅಭಿಮಾನಿಗಳವೇ ಎಂಬುದು ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ರಿಷಬ್‌ ಶೆಟ್ಟಿ

ರಾಯಚೂರು: ‘ಕಾಂತಾರ’ ಬ್ಲಾಕ್‌ಬಸ್ಟರ್ ಮೂಲಕ ದೇಶಾದ್ಯಂತ ಡಿವೈನ್ ಸ್ಟಾರ್ ಎಂಬ ಹೆಸರನ್ನು ಪಡೆದಿರುವ ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಅವರು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದಿದ್ದಾರೆ.

ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಎಂದು ಖ್ಯಾತಿ ಪಡೆದಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳೊಂದಿಗೆ ಆಗಮಿಸಿ ಆಶೀರ್ವಾದ ಪಡೆದುಕೊಂಡರು. ಮೊದಲು ಗ್ರಾಮದ ಆದಿದೇವತೆ ಶ್ರೀಮಾಂಚಲಮ್ಮ ದೇವಾಲಯಕ್ಕೆ ತೆರಳಿ ದೇವಿ ದರ್ಶನ ಪಡೆದ ಅವರು, ನಂತರ ಶ್ರೀ ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಆ ಬಳಿಕ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದರು. ಈ ವೇಳೆ ಶ್ರೀಮಠದ ವತಿಯಿಂದ ರಿಷಬ್ ಶೆಟ್ಟಿ ದಂಪತಿಯನ್ನು ಸನ್ಮಾನಿಸಿ, ರಾಘವೇಂದ್ರ ಸ್ವಾಮಿಗಳ ಸ್ಮರಣಿಕೆ ನೀಡಿ ಆಶೀರ್ವದಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸ್ ರಾವ್, ಪಿಆರ್‌ಒ ಐ.ಪಿ. ನರಸಿಂಹಾಚಾರ್ಯ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಇನ್ನು, ಈ ತಿಂಗಳಾರಂಭದಲ್ಲಿ ಮಂಗಳೂರಿನ ಕಾರ್ಣಿಕ ಪ್ರಸಿದ್ಧ ಬಾರಬೈಲ್ನ ಜಾರಂದಾಯ ಮತ್ತು ವರಾಹ ಪಂಜುರ್ಲಿ ಕ್ಷೇತ್ರದಲ್ಲಿ ನಡೆದ ನೇಮೋತ್ಸವದಲ್ಲಿ ಹೊಂಬಾಳೆ ಫಿಲ್ಮ್ಸ್ ತಂಡ ಹರಕೆಯ ಸೇವೆ ಸಲ್ಲಿಸಿತ್ತು. ಈ ನೇಮೋತ್ಸವದಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು, ನಟ-ನಿರ್ದೇಶಕ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿ, ಇಬ್ಬರು ಮಕ್ಕಳು, ನಟರಾದ ಗೌತಮ್ ಶನೀಲ್, ಸ್ವರಾಜ್ ಶೆಟ್ಟಿ, ನಿರ್ದೇಶಕ ಸಂತೋಷ್ ಆನಂದ್ ರಾಮ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

‘ಕಾಂತಾರ: ಚಾಪ್ಟರ್ 1’ ಚಿತ್ರ ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಚಿತ್ರತಂಡ ಈ ಹರಕೆಯನ್ನು ಸಲ್ಲಿಸಿತ್ತು. ಈ ಹಿಂದೆ ‘ಕಾಂತಾರ’ ಚಿತ್ರದ ಸಮಯದಲ್ಲೂ ರಿಷಬ್ ಶೆಟ್ಟಿ ಅವರು ಪಚ್ಚನಾಡಿ ಸಮೀಪದ ಅಣ್ಣಪ್ಪ ಪಂಜುರ್ಲಿ ಕ್ಷೇತ್ರದಲ್ಲಿ ಹರಕೆ ಸೇವೆ ಸಲ್ಲಿಸಿದ್ದರು. ಕಳೆದ ಏಪ್ರಿಲ್ ತಿಂಗಳಲ್ಲಿ ಬಾರಬೈಲ್ನಲ್ಲಿ ನಡೆದ ನೇಮೋತ್ಸವದಲ್ಲೂ ರಿಷಬ್ ಶೆಟ್ಟಿ ಭಾಗಿಯಾಗಿದ್ದರು.

ಅಕ್ಟೋಬರ್ 2 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ‘ಕಾಂತಾರ: ಚಾಪ್ಟರ್ 1’ ನಿರೀಕ್ಷೆಯಂತೆ ಭರ್ಜರಿ ಯಶಸ್ಸು ದಾಖಲಿಸಿತ್ತು. ಚಿತ್ರದಲ್ಲಿನ ಅಭಿನಯ, ನಿರ್ದೇಶನ ಹಾಗೂ ಕಥನ ಶೈಲಿಗೆ ರಿಷಬ್ ಶೆಟ್ಟಿ ಅಪಾರ ಪ್ರಶಂಸೆ ಪಡೆದಿದ್ದಾರೆ. ಜೊತೆಗೆ 2025ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ಅವರು 10ನೇ ಸ್ಥಾನ ಪಡೆದಿದ್ದಾರೆ. ಸತತ ಸಾಧನೆಗಳ ಮೂಲಕ ಸ್ಯಾಂಡಲ್‌ವುಡ್‌ಗೆ ಹೆಮ್ಮೆ ತರುತ್ತಿರುವ ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ದಾವಣಗೆರೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ: ಕಾಂಗ್ರೆಸ್ ಮುಖಂಡ ಸೇರಿ ನಾಲ್ವರು ಬಂಧನ

0

ದಾವಣಗೆರೆ: ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಹಾಗೂ ಸೇವನೆ ಮಾಡುತ್ತಿದ್ದ ಆರೋಪದಲ್ಲಿ ಕಾಂಗ್ರೆಸ್ ಮುಖಂಡ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ರಾಮ್ ಸ್ವರೂಪ್ (33), ಧೋಲಾರಾಮ್ (36), ದೇವ್ ಕಿಶನ್ (35) ಹಾಗೂ ದಾವಣಗೆರೆಯ ಶಾಮನೂರು ಗ್ರಾಮದ ನಿವಾಸಿ ವೇದಮೂರ್ತಿ ಎಸ್.ಜಿ. (53) ಬಂಧಿತರು.

ಸೋಮವಾರ ಮಧ್ಯಾಹ್ನ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜೆ.ಹೆಚ್. ಪಟೇಲ್ ಬಡಾವಣೆಯ ಉದ್ಯಾನವನದಲ್ಲಿ ಆರೋಪಿಗಳು ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಆರೋಪಿಗಳಿಂದ ಅಂದಾಜು 10 ಲಕ್ಷ ರೂ. ಮೌಲ್ಯದ 90 ಗ್ರಾಂ ಎಂಡಿಎಂಎ ಮತ್ತು 200 ಗ್ರಾಂ ಓಪಿಯಂ ಸೇರಿದಂತೆ ದುಬಾರಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಮಾರಾಟದಿಂದ ಬಂದ ಒಂದು ಲಕ್ಷ ರೂ. ನಗದು ಹಣ ಸೇರಿ ಒಟ್ಟು 11 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆರೋಪಿ ರಾಮ್ ಸ್ವರೂಪ್ ಮೇಲೆ ರಾಜಸ್ಥಾನದ ಜೋಧಪುರದಲ್ಲಿ ಎನ್‌ಡಿಪಿಎಸ್ ಮತ್ತು ಆರ್ಮ್ಸ್ ಆಕ್ಟ್ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದು ಪತ್ತೆಯಾಗಿದೆ.

ಇನ್ನುಳಿದ ಆರೋಪಿಗಳ ಮೇಲೆ ಬೇರೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ನ್ಯೂಜಿಲೆಂಡ್ ವರ, ಚಳ್ಳಕೆರೆ ವಧು: ದಾವಣಗೆರೆಯಲ್ಲಿ ಅಪರೂಪದ ಮದುವೆ

0

ದಾವಣಗೆರೆ: ನ್ಯೂಜಿಲೆಂಡ್‌ನಲ್ಲಿ ವಾಸವಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಪಿ. ನಾಗರಾಜ್ ಮತ್ತು ರಾಣಿ ನಾಗರಾಜ್ ದಂಪತಿ ತಮ್ಮ ಮಗಳ ಮದುವೆಯನ್ನು ದಾವಣಗೆರೆಯ ಖಾಸಗಿ ರೆಸಾರ್ಟ್‌ನಲ್ಲಿ ನೆರವೇರಿಸಿದ್ದಾರೆ.

ಮದುವೆ ಸಮಾರಂಭದಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ, ಅರಿಶಿನ ಶಾಸ್ತ್ರ ಮತ್ತು ಮದುವೆ ಶಾಸ್ತ್ರದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನ್ಯೂಜಿಲೆಂಡ್ ಹುಡುಗನ ಸಂಬಂಧಿಕರು ಹಾಗೂ ಹುಡುಗಿಯ ಕುಟುಂಬದ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಪೂಜಾ ನಾಗರಾಜ್ ಮತ್ತು ಕ್ಯಾಂಪ್‌ಬೆಲ್ ವಿಟ್‌ವರ್ಥ್ ಸೇರಿದಂತೆ ಯುವ ಜೋಡಿ ಭಾರತೀಯ ಸಂಪ್ರದಾಯದಂತೆ ಸಂತೋಷದಿಂದ ಮದುವೆಯಾಗಿದ್ದು, ಕುಟುಂಬ ಮತ್ತು ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದರು.

ಘೋರ ದುರಂತ: ಮಗಳನ್ನು ಮದುವೆ ಮಾಡಿ ಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಪಾಪಿ..!

0

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ಮಗಳನ್ನ ಮದುವೆ ಮಾಡಿಕೊಡಲಿಲ್ಲ ಅಂತ ತಾಯಿಗೆ ಬೆಂಕಿ ಹಚ್ಚಿದ ಘಟನೆ ಬಸವೇಶ್ವರ ನಗರದ ಸಾಣೆಗುರು ವನಹಳ್ಳಿಯಲ್ಲಿ ನಿನ್ನೆ ಮಧ್ಯರಾತ್ರಿ 1 ಗಂಟೆಯಲ್ಲಿ ನಡೆದಿದೆ.

ಮುತ್ತು ಎಂಬಾತನಿಂದ ಗೀತಾ ಎಂಬ ಮಹಿಳೆಗೆ ಬೆಂಕಿ ಹಚ್ಚಲಾಗಿದೆ. ಗೀತಾ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದು, ಮುತ್ತು ಎಂಬ ಯುವಕ ಅದೇ ಪ್ರದೇಶದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದ.

ಒಬ್ಬರಿಗೊಬ್ಬರು ಪರಿಚಯವಾದ ಬಳಿಕ, ಗೀತಾ, ಆಕೆಯ 19 ವರ್ಷದ ಮಗಳು ಹಾಗೂ ಮುತ್ತು ಒಂದೇ ಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಯುವತಿಯನ್ನು ಮದುವೆ ಮಾಡಿಕೊಡುವಂತೆ ಮುತ್ತು ಗೀತಾಳ ಮೇಲೆ ಒತ್ತಡ ಹೇರುತ್ತಿದ್ದ ಎಂದು ಆರೋಪಿಸಲಾಗಿದೆ.

ಆದರೆ ಗೀತಾ ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವಕ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನೆ ನಂತರ ಆರೋಪಿ ಪರಾರಿಯಾಗಿದ್ದು, ತೀವ್ರವಾಗಿ ಗಾಯಗೊಂಡ ಗೀತಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದೆಲ್ಲೆಡೆ ಒಣಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ – ಹವಾಮಾನ ಇಲಾಖೆ

0

ಬೆಂಗಳೂರು:ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಮೈಕೊರೆಯುವ ಚಳಿ ಹೆಚ್ಚಾಗಿದ್ದು, ಶೀತಲೆಯ ಪ್ರಭಾವ ದಿನೇದಿನೇ ತೀವ್ರವಾಗುತ್ತಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಒಣಹವೆಯ ವಾತಾವರಣ ಇರಲಿದ್ದು, ತಾಪಮಾನದಲ್ಲಿ ಏರುಪೇರಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳಗಿನ ಸಮಯದಲ್ಲಿ ದಟ್ಟ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ವಾಹನ ಸವಾರರು ಎಚ್ಚರಿಕೆಯಿಂದ ಚಾಲನೆ ಮಾಡಬೇಕೆಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ನಗರದ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್, ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದ್ದು, ಬೆಚ್ಚಗಿನ ಹೊದಿಕೆ ಬಳಸುವುದು, ಬಿಸಿ ಆಹಾರ ಸೇವನೆ ಮಾಡುವುದು ಅಗತ್ಯವೆಂದು ವೈದ್ಯರು ಸಲಹೆ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನ ವಾತಾವರಣದಲ್ಲಿ ಚಳಿಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು ಹಾಗೂ ರೋಗಪೀಡಿತರು ಹೆಚ್ಚಿನ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಒಣಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಹಲವು ದಿನಗಳಿಂದ ಒಣಹವೆ ಕಂಡುಬಂದಿದ್ದು, ಇದೇ ವಾತಾವರಣ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಮನೆ ಮೇಲೆ ಲೋಕಾಯುಕ್ತ ರೇಡ್: 13 ಕಡೆ ದಾಳಿ!

0

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ (ಪಿಎಸ್) ಸರ್ಫರಾಜ್ ಖಾನ್ ಅವರ ಮನೆ ಮತ್ತು ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಹಲಸೂರು ಲೇಔಟ್‌ನಲ್ಲಿರುವ ನಿವಾಸ ಸೇರಿದಂತೆ ಅವರಿಗೆ ಸೇರಿದ ಐಷಾರಾಮಿ ಮನೆ, ಕಚೇರಿ ಮತ್ತು ಕೊಡಗಿನ ರೆಸಾರ್ಟ್ ಮೇಲೆ 13 ತಂಡಗಳಾಗಿ ಏಕಕಾಲದಲ್ಲಿ ದಾಳಿ ಮಾಡಿ ತಪಾಸಣೆ ನಡೆಸಲಾಗುತ್ತಿದೆ.

ನಾಲ್ಕು ವಾಹನಗಳಲ್ಲಿ ಬಂದ ಅಧಿಕಾರಿಗಳು ಸರ್ಫರಾಜ್ ಅವರ ಬ್ಯಾಂಕ್ ಖಾತೆಗಳು ಮತ್ತು ಆಸ್ತಿ ದಾಖಲೆಗಳನ್ನು ಸಂಪೂರ್ಣವಾಗಿ ಜಾಲಾಡುತ್ತಿದ್ದು, ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಹಣಕಾಸು ವ್ಯವಹಾರಗಳು ಮತ್ತು ಆಸ್ತಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಪ್ರಕರಣ: ಸಿದ್ದಾಪುರ–ಹಳಿಯಾಳದಲ್ಲಿ ಲೋಕಾಯುಕ್ತ ದಾಳಿ, ಸಿಇಒ ಬಳಿ ₹9.89 ಕೋಟಿ ಆಸ್ತಿ ಪತ್ತೆ

0

ಕಾರವಾರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹಾಗೂ ಹಣ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮತ್ತು ಹಳಿಯಾಳ ತಾಲೂಕುಗಳ ವಿವಿಧೆಡೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಸಿದ್ದಾಪುರ ತಾಲ್ಲೂಕಿನ ಕೋಲಸಿರ್ಸಿ ಗ್ರೂಪ್ ಗ್ರಾಮ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಮಾರುತಿ ಯಶವಂತ ಮಾಲ್ವಿ ಅವರಿಗೆ ಸೇರಿದ ಮನೆ, ಕಚೇರಿ ಹಾಗೂ ಅಂಗಡಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಮಾರುತಿ ಮಾಲ್ವಿ ಅವರಿಗೆ ಸೇರಿದ ಒಟ್ಟು ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಹಳಿಯಾಳದಲ್ಲಿ ಎರಡು ಕಡೆ ಹಾಗೂ ಸಿದ್ದಾಪುರದಲ್ಲಿ ಒಂದು ಕಡೆ ದಾಳಿ ನಡೆದಿದೆ. ಸಿದ್ದಾಪುರದಲ್ಲಿ ಲೋಕಾಯುಕ್ತ ಪಿ.ಐ. ವಿನಾಯಕ ಬಿಲ್ಲವ ಅವರ ನೇತೃತ್ವದಲ್ಲಿ ಮತ್ತು ಹಳಿಯಾಳದಲ್ಲಿ ಡಿವೈಎಸ್‌ಪಿ ಧನ್ಯಾ ನಾಯಕ್ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಉಡುಪಿ, ಮಂಗಳೂರು ಹಾಗೂ ಕಾರವಾರ ಲೋಕಾಯುಕ್ತ ತಂಡಗಳು ಪಾಲ್ಗೊಂಡಿದ್ದವು.

ಲೋಕಾಯುಕ್ತ ಕಚೇರಿಯ ಅಧಿಕೃತ ಪ್ರಕಟಣೆಯ ಪ್ರಕಾರ, ಶೋಧದ ವೇಳೆ ಮಾರುತಿ ಯಶವಂತ ಮಾಲ್ವಿ ಅವರಿಗೆ ಸಂಬಂಧಿಸಿದಂತೆ 7 ನಿವೇಶನಗಳು, 4 ವಾಸದ ಮನೆಗಳು ಹಾಗೂ 1 ವಾಣಿಜ್ಯ ಸಂಕೀರ್ಣ ಪತ್ತೆಯಾಗಿದೆ. ಇವುಗಳ ಅಂದಾಜು ಮೌಲ್ಯ 9.17 ಕೋಟಿ ರೂ. ಆಗಿದೆ.

ಇದಕ್ಕೂ ಜೊತೆಗೆ 2,02,244 ರೂ. ನಗದು, 8,22,310 ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ 62 ಲಕ್ಷ ರೂ. ಮೌಲ್ಯದ ವಾಹನಗಳು ಸೇರಿ ಒಟ್ಟು 72,24,554 ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. ಇದರಿಂದ ಒಟ್ಟಾರೆ ಪತ್ತೆಯಾದ ಆಸ್ತಿಯ ಮೌಲ್ಯ 9,89,33,554 ರೂ. ಆಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಸಂಬಂಧಿತ ದಾಖಲೆಗಳ ಪರಿಶೀಲನೆ ಮುಂದುವರಿದಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

error: Content is protected !!