Home Blog Page 280

ದರ್ಶನ್ ಆಪ್ತ ಧನ್ವೀರ್ ಪೋಸ್ಟ್‌ಗೆ ಸುದೀಪ್ ಬೆಂಬಲಿಗ ವಿನಯ್ ಗೌಡ ಪ್ರತಿಕ್ರಿಯೆ

ದರ್ಶನ್–ಸುದೀಪ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ಇದೀಗ ನಟರ ಆಪ್ತರ ನಡುವೆಯೂ ವಿಸ್ತರಿಸುತ್ತಿದೆ. ಸುದೀಪ್ ನೀಡಿದ ಹೇಳಿಕೆ ಬಳಿಕ ದರ್ಶನ್ ಅವರ ಆಪ್ತ ಧನ್ವೀರ್ ಗೌಡ ಹಂಚಿಕೊಂಡಿದ್ದ “ಸಿಂಹ” ಪೋಸ್ಟ್ ಹೊಸ ವಿವಾದಕ್ಕೆ ಕಾರಣವಾಗಿದೆ.

ಈ ಪೋಸ್ಟ್‌ಗೆ ಉತ್ತರಿಸಿದ ಸುದೀಪ್ ಆಪ್ತ ವಿನಯ್ ಗೌಡ, “ಕಾಡಿನ ರಾಜ ಸಿಂಹ ಎಂಬುದು ಗೊತ್ತು, ಆದರೆ ಆ ಸಿಂಹ ಸುದೀಪ್” ಎಂದು ಹೇಳುವ ಮೂಲಕ ಧನ್ವೀರ್‌ಗೆ ನೇರ ತಿರುಗೇಟು ನೀಡಿದ್ದಾರೆ. ಈ ಮೂಲಕ ಫ್ಯಾನ್ಸ್ ವಾರ್‌ಗೆ ಮತ್ತಷ್ಟು ಇಂಧನ ಸಿಕ್ಕಂತಾಗಿದೆ.

ಗಮನಾರ್ಹ ಅಂಶವೆಂದರೆ, ವಿನಯ್ ಗೌಡ ಅವರು ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದಲ್ಲೂ ಅಭಿನಯಿಸಿದ್ದರು. ಆದರೆ ಅವರು ಸಿನಿಮಾದ ಯಾವುದೇ ಪ್ರಚಾರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಮಾತನಾಡಿದ್ದ ವಿನಯ್, ಖಾಸಗಿ ಕಾರಣಕ್ಕಾಗಿ ಪ್ರಚಾರಕ್ಕೆ ಹೋಗಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ‘ಡೆವಿಲ್’ ಸಿನಿಮಾದ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದೇ ಒಂದು ಪೋಸ್ಟ್ ಕೂಡ ಹಂಚಿಕೊಂಡಿಲ್ಲ.

ಇದೇ ವೇಳೆ, ‘ಡೆವಿಲ್’ ಚಿತ್ರತಂಡ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ವಿನಯ್ ಗೌಡ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದರು. “ನಾನು ಪೇಯ್ಡ್ ಆಕ್ಟರ್. ಸಂಭಾವನೆ ಕೊಟ್ಟರು ನಟಿಸಿದ್ದೇನೆ. ಬುಕ್ ಮೈ ಶೋನಲ್ಲಿ ಸಿನಿಮಾದಲ್ಲಿ ನಟಿಸಿರುವ ಎಲ್ಲರ ಹೆಸರಿದೆ, ಆದರೆ ನನ್ನ ಹೆಸರಿಲ್ಲ. ನಾನು ಮಾತನಾಡದೇ ಇರೋದು ದರ್ಶನ್ ಅವರಿಗೆ ಕಾನೂನಾತ್ಮಕ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ” ಎಂದು ಹೇಳಿದ್ದರು.

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವಿನಯ್ ಗೌಡ, ಅಲ್ಲಿ ಸುದೀಪ್ ಅವರ ಆತ್ಮೀಯತೆ ಪಡೆದಿದ್ದರು. ಇದೀಗ ಸುದೀಪ್ ವಿರುದ್ಧ ನಡೆಯುತ್ತಿರುವ ಪೋಸ್ಟ್‌ಗಳಿಗೆ ಪ್ರತಿಯಾಗಿ ಸಹಜವಾಗಿಯೇ ವಿನಯ್ ಗೌಡ ಅವರು ಕಿಚ್ಚ ಬೆಂಬಲಕ್ಕೆ ನಿಂತಿದ್ದಾರೆ.

‘ನನ್ನ ಮಾತು ಅವರಿಗೆ ತಲುಪಿದೆ, ಅವರನ್ನು ಬಿಡಲ್ಲ’: ಕಿಚ್ಚ ಸುದೀಪ್

ಹುಬ್ಬಳ್ಳಿ: ‘ಮಾರ್ಕ್’ ಚಿತ್ರದ ಪ್ರೀ-ರಿಲೀಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಕುರಿತ ವಿವಾದದ ಬಗ್ಗೆ ಅವರು ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ. ಆ ದಿನ ತಾವು ಮಾತನಾಡಲು ಕಾರಣವೇ ಪೈರಸಿ ವಿರುದ್ಧ ಬಂದ ಮಾಹಿತಿ ಎಂದು ಸುದೀಪ್ ಹೇಳಿದ್ದಾರೆ.

“ಆ ದಿನ ವೇದಿಕೆಗೆ ಏರುವ ಮೊದಲು ನನಗೆ ಒಂದು ಫೋನ್ ಕರೆ ಬಂದಿತ್ತು. ದುಡ್ಡಿಗಾಗಿ ಅಲ್ಲ, ನಿಮ್ಮ ಸಿನಿಮಾವನ್ನೇ ಹಾಳು ಮಾಡಬೇಕು ಎಂಬ ಉದ್ದೇಶದಿಂದ ಪೈರಸಿ ಮಾಡಲು ಸಂಚು ನಡೆಯುತ್ತಿದೆ ಎಂದು ತಿಳಿಸಲಾಯಿತು. ಅದರ ವಿರುದ್ಧ ನಾನು ನಿಲ್ಲದೇ ಹೋದರೆ ಮತ್ತೆ ಯಾರು ನಿಲ್ಲಬೇಕು?” ಎಂದು ಸುದೀಪ್ ಹೇಳಿದ್ದಾರೆ.

ತಾವು ಆ ಮಾತು ಹೇಳಿದ್ದು ಯಾರಿಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಆವೇಶದಲ್ಲಿ ಮಾತನಾಡುವವನು ನಾನಾಗಿದ್ದರೆ ಈಗಾಗಲೇ ಅನೇಕ ವಿವಾದಗಳಲ್ಲಿ ಸಿಲುಕುತ್ತಿದ್ದೆ. ಬೇರೆ ನಟರ ಸಿನಿಮಾಗಳಲ್ಲಿ ತಲೆ ಹಾಕುವ ಉದ್ದೇಶ ನನಗೆ ಇಲ್ಲ. ನನ್ನ ಹೆಸರು ಹೇಳಿ ಮಾತನಾಡಿದರೆ ಮಾತ್ರ ನಾನು ಪ್ರತಿಕ್ರಿಯೆ ಕೊಡುತ್ತೇನೆ” ಎಂದಿದ್ದಾರೆ.

ಪೈರಸಿ ವಿರುದ್ಧ ತಮ್ಮ ಹೋರಾಟದ ಬಗ್ಗೆ ಮಾತನಾಡಿದ ಸುದೀಪ್, “ವಿವಾದ ಮಾಡಲು ನಾನು ಬಂದಿಲ್ಲ. ಪೈರಸಿ ವಿರುದ್ಧ ನಾವು ಪ್ರಯತ್ನ ಮಾಡುತ್ತಿದ್ದೇವೆ. ಈಗಲೇ ಎಲ್ಲವನ್ನೂ ಹೇಳಲ್ಲ. ಯಶಸ್ವಿಯಾದರೆ ಪೈರಸಿ ಜಾಲವನ್ನು ಸುಮಾರು 80 percent ಮಟ್ಟಿಗೆ ಕಡಿಮೆ ಮಾಡಬಹುದು. ಇದಕ್ಕಾಗಿ ಸರ್ಕಾರದ ದೊಡ್ಡ ದೊಡ್ಡ ವ್ಯಕ್ತಿಗಳ ಸಹಾಯ ಕೇಳಿದ್ದೇವೆ. ಎಲ್ಲರೂ ಸಹಕಾರ ನೀಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಚಳಿಯಲ್ಲಿ ಮುಖದವರೆಗೂ ಬ್ಲಾಂಕೆಟ್ ಹೊದ್ದು ಮಲಗ್ತೀರಾ? ಈ ಅಭ್ಯಾಸ ಎಷ್ಟು ಡೇಂಜರ್ ಗೊತ್ತಾ..?

0

ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ದಿನದಿಂದ ದಿನಕ್ಕೆ ಚಳಿ ಹೆಚ್ಚಾಗುತ್ತಿದೆ. ತಾಪಮಾನ ಕಡಿಮೆಯಾದಾಗ ಸಹಜವಾಗಿಯೇ ಚಳಿಯಿಂದ ರಕ್ಷಣೆ ಪಡೆಯಲು ಹಲವರು ಮುಖದವರೆಗೆ ಕಂಬಳಿ ಅಥವಾ ಬೆಡ್ ಶಿಟ್ ಹೊದ್ದು ಮಲಗುತ್ತಾರೆ. ಇದು ದೇಹಕ್ಕೆ ಉಷ್ಣತೆಯನ್ನು ನೀಡುವ ಜೊತೆಗೆ ಆರಾಮದಾಯಕವಾಗಿಯೂ ಅನಿಸುತ್ತದೆ.

ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ, ರಾತ್ರಿ ನಿದ್ರಿಸುವ ವೇಳೆ ಮುಖ ಮುಚ್ಚಿಕೊಂಡು ಮಲಗುವ ಅಭ್ಯಾಸವು ಉಸಿರಾಟದ ವ್ಯವಸ್ಥೆಯ ಮೇಲೆ ಗಮನಾರ್ಹ ಒತ್ತಡವನ್ನು ಬೀರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಅಭ್ಯಾಸದಿಂದ ಉಸಿರಾಟ ಹಾಗೂ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಮುಖ ಮುಚ್ಚಿಕೊಂಡು ಮಲಗುವುದರಿಂದ ಆಗುವ ಆರೋಗ್ಯ ಸಮಸ್ಯೆಗಳು

ನಿದ್ರಿಸುವ ಸಮಯದಲ್ಲಿ ಕಂಬಳಿ ಅಥವಾ ಬೆಡ್ ಶಿಟ್‌ನಿಂದ ಮುಖವನ್ನು ಮುಚ್ಚಿಕೊಂಡಾಗ, ನಾವು ಹೊರಹಾಕುವ ಕಾರ್ಬನ್ ಡೈಆಕ್ಸೈಡ್ ಗಾಳಿ ಹೊರಹೋಗಲು ಅವಕಾಶ ಸಿಗುವುದಿಲ್ಲ. ಇದರ ಪರಿಣಾಮವಾಗಿ ಆ ಗಾಳಿ ಅಲ್ಲಿಯೇ ಸಿಲುಕಿಕೊಂಡು, ನಾವು ಅರಿವಿಲ್ಲದೆಯೇ ಅದನ್ನೇ ಪುನಃ ಪುನಃ ಉಸಿರಾಡುತ್ತೇವೆ. ಇದರಿಂದ ದೇಹಕ್ಕೆ ತಲುಪುವ ತಾಜಾ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ.

ಇದರಿಂದ ಬೆಳಿಗ್ಗೆ ಎದ್ದಾಗ ತಲೆನೋವು ಕಾಣಿಸಿಕೊಳ್ಳುವುದು, ದಿನವಿಡೀ ದಣಿವಿನ ಅನುಭವ, ಏಕಾಗ್ರತೆಯ ಕೊರತೆ, ನಿದ್ರೆಯ ಮಧ್ಯೆ ಪದೇ ಪದೇ ಎಚ್ಚರಗೊಳ್ಳುವಂತಹ ಸಮಸ್ಯೆಗಳು ಉಂಟಾಗಬಹುದು.

ಇನ್ನೂ ಮುಖ ಮುಚ್ಚಿಕೊಂಡಿರುವ ಭಾಗದಲ್ಲಿ ತೇವಾಂಶ ಹಾಗೂ ಬೆವರು ಸಂಗ್ರಹವಾಗುತ್ತದೆ. ಕಂಬಳಿಯಲ್ಲಿರುವ ಧೂಳು ಮತ್ತು ಬ್ಯಾಕ್ಟೀರಿಯಾಗಳು ಚರ್ಮದ ಸಂಪರ್ಕಕ್ಕೆ ಬಂದು ಮೊಡವೆ, ಉರಿಯೂತ ಹಾಗೂ ಚರ್ಮದ ಅಲರ್ಜಿ ಸಮಸ್ಯೆಗಳಿಗೆ ಕಾರಣವಾಗಬಹುದು. ಜೊತೆಗೆ ನಿದ್ರೆಯ ಸಮಯದಲ್ಲಿ ದೇಹದ ಉಷ್ಣತೆ ಹೆಚ್ಚಾಗುವುದರಿಂದ ಉತ್ತಮ ನಿದ್ರೆಗೆ ಅಡ್ಡಿಯಾಗುತ್ತದೆ.

ಯಾರಿಗೆ ಈ ಅಭ್ಯಾಸ ಹೆಚ್ಚು ಅಪಾಯಕಾರಿ?

  • ಅಸ್ತಮಾ ಸಮಸ್ಯೆ ಇರುವವರು

  • ಸೈನಸ್ ಅಥವಾ ಅಲರ್ಜಿ ಸಮಸ್ಯೆ ಇರುವವರು

  • ಚಿಕ್ಕ ಮಕ್ಕಳು ಮತ್ತು ಶಿಶುಗಳು

ಈ ವರ್ಗದವರಿಗೆ ಮುಖ ಮುಚ್ಚಿಕೊಂಡು ಮಲಗುವ ಅಭ್ಯಾಸ ಹೆಚ್ಚು ಅಪಾಯಕಾರಿಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮುನ್ನೆಚ್ಚರಿಕೆ ಮತ್ತು ಸುರಕ್ಷಿತ ಪರ್ಯಾಯಗಳು

  • ಕಂಬಳಿ ಅಥವಾ ಬೆಡ್ ಶಿಟ್ ಅನ್ನು ಭುಜದವರೆಗೆ ಮಾತ್ರ ಹೊದ್ದುಕೊಳ್ಳಿ

  • ಚಳಿಯಿಂದ ರಕ್ಷಣೆಗಾಗಿ ದಪ್ಪ ಬಟ್ಟೆ ಅಥವಾ ಸಾಕ್ಸ್ ಧರಿಸಿ

  • ಹತ್ತಿಯ ಹಾಸಿಗೆ ಮತ್ತು ಕಂಬಳಿಗಳನ್ನು ಬಳಸುವುದು ಉತ್ತಮ

  • ಬೆಳಕು ತಡೆಯಲು ಮುಖ ಮುಚ್ಚಿಕೊಳ್ಳುವ ಬದಲು ಐ ಮಾಸ್ಕ್ ಬಳಸಬಹುದು

  • ಪಾದಗಳ ಬಳಿ ಬಿಸಿ ನೀರಿನ ಬಾಟಲಿ ಇಡುವುದರಿಂದ ದೇಹದ ಉಷ್ಣತೆ ಕಾಪಾಡಬಹುದು

ಬಿಕ್ಲು ಶಿವ ಕೊಲೆ ಪ್ರಕರಣ: CIDಯಿಂದ ಲುಕ್‌ಔಟ್ ನೋಟಿಸ್ – ಶಾಸಕ ಬೈರತಿ ಬಸವರಾಜ್‌ಗೆ ಬಂಧನ ಭೀತಿ!

0

ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.

ಇದರಿಂದ ಬೈರತಿ ಬಸವರಾಜ್‌ಗೆ ಬಂಧನ ಭೀತಿ ಮತ್ತಷ್ಟು ಹೆಚ್ಚಾಗಿದೆ. ಕಳೆದ ಐದು ದಿನಗಳಿಂದ ಶಾಸಕ ಬೈರತಿ ಬಸವರಾಜ್ ನಾಪತ್ತೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಸಿಐಡಿ ಮೂರು ವಿಶೇಷ ತಂಡಗಳನ್ನು ರಚಿಸಿ ಮಹಾರಾಷ್ಟ್ರ, ತಮಿಳುನಾಡು ಹಾಗೂ ಗೋವಾದಲ್ಲಿ ಹುಡುಕಾಟ ನಡೆಸಿದೆ. ನಿರೀಕ್ಷಣಾ ಜಾಮೀನು ಸಿಗುವ ಭರವಸೆಯಲ್ಲಿದ್ದ ಶಾಸಕರಿಗೆ ಕೋರ್ಟ್ ಶಾಕ್ ನೀಡಿದ್ದು, ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆಯಿದೆ.

ನಿರೀಕ್ಷಣಾ ಜಾಮೀನು ವಜಾಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಕುರಿತು ಬೈರತಿ ಬಸವರಾಜ್ ಪರ ವಕೀಲರ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಈ ನಡುವೆ ಸಿಐಡಿ ಅಧಿಕಾರಿಗಳು ಶಾಸಕರ ಬಂಧನಕ್ಕೆ ಸಜ್ಜಾಗಿದ್ದಾರೆ.

ಮಂಡ್ಯ| ಆಟವಾಡಲು ಹೋದ ವಿದ್ಯಾರ್ಥಿ ಕಾವೇರಿ ನದಿಯಲ್ಲಿ ಮುಳುಗಿ ಸಾವು!

0

ಮಂಡ್ಯ: KRS ಸಮೀಪದ ಚಿಕ್ಕಾಯರಹಳ್ಳಿ ಬಳಿ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿಯೊಬ್ಬರು ನೀರುಪಾಲಾದ ಘಟನೆ ನಡೆದಿದೆ.

ಮೃತನನ್ನು ರಿತಿಕ್ ಕುಟ್ಟಪ್ಪ ಎಂದು ಗುರುತಿಸಲಾಗಿದ್ದು, ಅವರು ಮೈಸೂರು ಮಹಾಜನ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದರು.

ರಿತಿಕ್ ಕುಟ್ಟಪ್ಪ ತಮ್ಮ ಮೂವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದು, ಚಿಕ್ಕಾಯರಹಳ್ಳಿ ಬಳಿ ಕಾವೇರಿ ನದಿಯಲ್ಲಿ ಆಟವಾಡಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಘಟನೆ ಗಮನಿಸಿದ ಸಾರ್ವಜನಿಕರು ತಕ್ಷಣವೇ ರಕ್ಷಣೆಗೆ ಧಾವಿಸಿ ಯುವಕನನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಿತಿಕ್ ಸಾವನ್ನಪ್ಪಿದ್ದಾರೆ.

ಈ ಘಟನೆ KRS ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿಸಲಾಗಿದೆ. ಮೃತದೇಹವನ್ನು ಶವಪರೀಕ್ಷೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನೆ ಮಾಡಲಾಗಿದೆ

ಜೈಲಿಗೆ ಭೇಟಿ ನೀಡಿ ದರ್ಶನ್‌ಗೆ ಫ್ಯಾನ್ಸ್ ವಾರ್ ಬಗ್ಗೆ ಮಾಹಿತಿ ನೀಡಿದ ವಿಜಯಲಕ್ಷ್ಮಿ

ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ಚರ್ಚೆಯ ನಡುವೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಸಹೋದರ ದಿನಕರ್ ತೂಗುದೀಪ ಜೊತೆಗೂಡಿ ಜೈಲಿಗೆ ತೆರಳಿದ ಅವರು, ದರ್ಶನ್ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಡಿಸೆಂಬರ್ 23ರಂದು ಮಧ್ಯಾಹ್ನ 3.50ರ ಸುಮಾರಿಗೆ ಜೈಲಿಗೆ ತೆರಳಿದ ವಿಜಯಲಕ್ಷ್ಮಿ ಮತ್ತು ದಿನಕರ್ ಅವರು, ಸುಮಾರು ಅರ್ಧ ಗಂಟೆ ದರ್ಶನ್ ಜೊತೆ ಮಾತನಾಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಬಳಿಕ ಶುರುವಾದ ಫ್ಯಾನ್ಸ್ ವಾರ್ ಸೇರಿದಂತೆ ಸದ್ಯದ ಹೊರಗಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ‘ದಿ ಡೆವಿಲ್’ ಸಿನಿಮಾದ ಬಗ್ಗೆ ದರ್ಶನ್ ಅವರು ಮಾಹಿತಿ ಕೇಳಿದ್ದು, ಸಿನಿಮಾ ಕಲೆಕ್ಷನ್ ಹಾಗೂ ಅಭಿಮಾನಿಗಳ ಬೆಂಬಲದ ಕುರಿತು ವಿಜಯಲಕ್ಷ್ಮಿ ಮತ್ತು ದಿನಕರ್ ತೂಗುದೀಪ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ. ಫ್ಯಾನ್ಸ್ ವಾರ್ ಬಗ್ಗೆ ಹೆಚ್ಚು ತಲೆ ಕೆಸಿಕೊಳ್ಳಬೇಡಿ ಎಂದು ದರ್ಶನ್ ಅವರು ಶಾಂತವಾಗಿ ಹೇಳಿದ್ದಾರೆ ಎನ್ನಲಾಗಿದೆ.

ಪತಿ ಭೇಟಿ ಮಾಡಿ ಹೊರಬಂದ ಕೆಲವೇ ಹೊತ್ತಿನಲ್ಲಿ ವಿಜಯಲಕ್ಷ್ಮಿ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪತಿ ಭೇಟಿ ಬಳಿಕ ಮನಸ್ಸಿನ ದುಗುಡ ದೂರವಾಗಿ ಸಂತೋಷವಾಗಿರುವ ಭಾವದಲ್ಲಿ ಪೋಸ್ಟ್ ಮಾಡಿರುವುದು ಗಮನ ಸೆಳೆದಿದೆ. ಡಿಸೆಂಬರ್ 25ರಂದು ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಬಿಡುಗಡೆಯಾಗಲಿದ್ದು, ಫ್ಯಾನ್ಸ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕೌತುಕಕ್ಕೆ ಕಾರಣವಾಗಿದೆ.

ನಾನು ಪಕ್ಷಪಾತ ಮಾಡುವ ಪ್ರಶ್ನೆಯೇ ಇಲ್ಲ: ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ನಿರೂಪಣೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಟೀಕೆಗಳ ಬಗ್ಗೆ ಕಿಚ್ಚ ಸುದೀಪ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪ್ರತೀ ವೀಕೆಂಡ್ ಬಿಗ್ ಬಾಸ್ ನೋಡುವ ದೊಡ್ಡ ವೀಕ್ಷಕ ವರ್ಗವಿದ್ದು, ಸುದೀಪ್ ಅವರಿಗಾಗಿ ಮಾತ್ರ ಶೋ ನೋಡುವವರೂ ಇದ್ದಾರೆ.

‘ಇಡೀ ಕರ್ನಾಟಕ ಬಿಗ್ ಬಾಸ್ ನೋಡುತ್ತದೆ. ನಾನು ವೇದಿಕೆಯಲ್ಲಿ ನಿಂತು ಎಲ್ಲರ ಜೀವನವನ್ನು ಕೈಯಲ್ಲಿ ಇಟ್ಟುಕೊಂಡಿರುತ್ತೇನೆ. ನನಗೆ ಯಾರೂ ಏನೂ ಹೇಳಿಕೊಡುವುದಿಲ್ಲ. ಸ್ಪರ್ಧಿಗಳಿಗೂ ನನಗೂ ಲೈವ್ ನಡೆಯುತ್ತಿರುತ್ತದೆ. ಅವರು ಕೇಳಿದ್ದಕ್ಕೆ ತಕ್ಷಣ ಸ್ಪಂದಿಸಬೇಕಾಗುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.

ಕೆಲವೊಮ್ಮೆ ಸ್ಪರ್ಧಿಗಳನ್ನು ಗಟ್ಟಿಯಾಗಿ ಮಾತನಾಡಿಸಬೇಕಾಗುತ್ತದೆ ಎಂದು ತಿಳಿಸಿದ ಅವರು, ‘ಇವತ್ತು ಬೈಯದೇ ಇದ್ದರೆ ಅವರು ಹಾಳಾಗಿ ಹೋಗುತ್ತಾರೆ. ಇನ್ನು ಕೆಲವರಿಗೆ ಬೈಯ್ಯುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಅವರು ಅಲ್ಲಿಯವರೆಗೆ ಬರುವುದೇ ಇಲ್ಲ’ ಎಂದರು.

ಪಕ್ಷಪಾತದ ಆರೋಪಗಳ ಕುರಿತು ಮಾತನಾಡಿದ ಸುದೀಪ್, ‘ನಾನು ಯಾಕೆ ಪಕ್ಷಪಾತ ಮಾಡಬೇಕು? ನಾನು ಯಾಕೆ ಹೆದರಿಕೊಳ್ಳಬೇಕು? ಎಂಥೆಂಥವರನ್ನೂ ಪಳಗಿಸಿಕೊಂಡು ಬಂದವನು ನಾನು. ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವುದು ಅವರವರ ಅಭಿಪ್ರಾಯ. ಅಷ್ಟು ಪೇಜ್ ಓಪನ್ ಆಗಿದೆ ಅಂದರೆ ಬಿಗ್ ಬಾಸ್ ಬಗ್ಗೆ ಅವರಿಗೆ ಪ್ರೀತಿ ಇದೆ’ ಎಂದು ಹೇಳಿದರು.

‘ಪ್ರತಿ ಕ್ಷಣವನ್ನು ಜನ ನೋಡುತ್ತಾರೆ. 14 ಟಿವಿಆರ್ ಸುಮ್ಮನೆ ಬರುವುದಿಲ್ಲ. ಇಷ್ಟು ದಿನ ನಾನು ಒಬ್ಬನೇ ಆ್ಯಂಕರ್ ಆಗಿದ್ದೆ. ಈಗ ತುಂಬಾ ಜನ ಆ್ಯಂಕರ್ ಆಗಿದ್ದಾರೆ. ವೇದಿಕೆ ಮೇಲೆ ಮಾತ್ರ ನಾನು ಒಬ್ಬನೇ. ಒಬ್ಬ ವೀಕ್ಷಕ ನಮಗೆ ಮುಖ್ಯ ಅಂದರೆ, ಅವರು ಪ್ರತಿಕ್ರಿಯಿಸುವ ರೀತಿಯನ್ನೂ ನಾವು ಒಪ್ಪಿಕೊಳ್ಳಬೇಕು. ಅದನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬಾರದು’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ; ಇತಿಹಾಸ ನೋಡಿ – ಹುಬ್ಬಳ್ಳಿ ಹೇಳಿಕೆ ಬಗ್ಗೆ ಸುದೀಪ್ ಸ್ಪಷ್ಟನೆ

ಹುಬ್ಬಳ್ಳಿ: ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ನೀಡಿದ ಹೇಳಿಕೆ ಪೈರಸಿ ವಿರುದ್ಧದ ಮಾತು ಎನ್ನುವುದನ್ನು ಅವರು ಈಗಾಗಲೇ ಸ್ಪಷ್ಟಪಡಿಸಿದ್ದರೂ, ಅದು ದರ್ಶನ್ ಅಭಿಮಾನಿಗಳ ವಿರುದ್ಧ ಎನ್ನುವ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆ ಸುದೀಪ್ ಮತ್ತೊಮ್ಮೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

‘ನನಗೆ ವಾರ್ ಬೇಕಿಲ್ಲ. ಯಾರಿಗಾದರೂ ಗೊಂದಲ ಇದ್ದರೆ, ಅಲ್ಲಿಯೇ ಹೋಗಿ ನೀವು ಯಾರಿಗೆ ಹೇಳಿದ್ದು ಎಂದು ಕೇಳಬೇಕು. ನಾನು ಯಾರಿಗೆ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದೇನೆ’ ಎಂದು ಸುದೀಪ್ ಹೇಳಿದ್ದಾರೆ.

ದರ್ಶನ್ ಹಾಗೂ ತಮ್ಮ ನಡುವೆ ಬಿರುಕು ಇದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಅವರು, ‘ನಾವು ಹಿಂದೆ ಗೆಳೆಯರಾಗಿದ್ದೆವು. ಈಗ ಬೇರೆ ಆಗಿರಬಹುದು. ಆದರೆ ದರ್ಶನ್ ಬಗ್ಗೆ ನಾನು ಯಾವತ್ತೂ ಕೆಟ್ಟದಾಗಿ ಮಾತನಾಡಿಲ್ಲ. ಇತಿಹಾಸ ಕೆದಕಿ ನೋಡಿ, ಇದ್ದರೆ ತೋರಿಸಿ’ ಎಂದು ಸವಾಲು ಹಾಕಿದರು.

‘ಆಗ ಮಾತನಾಡಿಲ್ಲ ಅಂದರೆ ಈಗೇಕೆ ಮಾತನಾಡುತ್ತೇನೆ. ನನ್ನ ಫೋಕಸ್ ಬೇರೆ ಇದೆ. ಏನೇನೋ ಮಾತನಾಡಿಕೊಂಡು ಇರೋಕೆ ನಾನು ದಡ್ಡ ಅಲ್ಲ. ನಾನು ಅಂದು ಕಾಫಿ ಮಾತ್ರ ಕುಡಿದಿದ್ದೆ’ ಎಂದು ವ್ಯಂಗ್ಯವಾಗಿ ಹೇಳಿದರು.

ಆಗು ಹೋಗುಗಳ ಬಗ್ಗೆ ನೋವಿದೆ ಎಂದು ಒಪ್ಪಿಕೊಂಡ ಸುದೀಪ್, ‘ಹಾಗಾಗಬಾರದಿತ್ತು ಎಂದು ಅನೇಕ ಬಾರಿ ಹೇಳಿದ್ದೇನೆ. ಅವರ ಅಭಿಮಾನಿಗಳ ನೋವು ನನಗೆ ಅರ್ಥವಾಗುತ್ತದೆ. ಆ ವಿಷಯ ಕೆದಬೇಡಿ ಎಂದು ಹೇಳಿದ್ದೇನೆ. ಅದನ್ನು ಅವರ ಅಭಿಮಾನಿಗಳೇ ಮೆಚ್ಚಿದ್ದರು’ ಎಂದರು.

ನಮ್ಮ ಅಭಿಮಾನಿಗಳು ಅವರನ್ನು ಇಷ್ಟಪಡುವುದು, ಅವರ ಅಭಿಮಾನಿಗಳು ನಮ್ಮನ್ನು ಇಷ್ಟಪಡುವುದನ್ನು ಸಹಿಸದ ಗುಂಪುಗಳು ಈ ರೀತಿಯ ಗೊಂದಲ ಸೃಷ್ಟಿಸುತ್ತಿವೆ. ನಟರಾಗಿ ನಾವು ಎಂದಿಗೂ ಕಿತ್ತಾಡಿಲ್ಲ. ನಮ್ಮಿಬ್ಬರ ನಡುವೆ ಏನೇ ಇದ್ದರೂ ಅದು ನಮ್ಮಿಬ್ಬರ ಮಧ್ಯೆ ಇರುವ ವಿಚಾರ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ದೇವಿನಗರ ಕ್ಯಾಂಪ್ ಬಳಿ ಭೀಕರ ಅಪಘಾತ: ಕಿರು ಸೇತುವೆಗೆ ಕಾರು ಡಿಕ್ಕಿ, ಮೂವರು ಸಾವು!

0

ಬಳ್ಳಾರಿ:- ಬಳ್ಳಾರಿ–ಸಿರುಗುಪ್ಪ ರಸ್ತೆಯ ದೇವಿನಗರ ಕ್ಯಾಂಪ್ ಸಮೀಪ ಇಂದು ಬೆಳಗಿನ ಜಾವ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ರಸ್ತೆ ಬದಿಯ ಕಿರು ಸೇತುವೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿರುಗುಪ್ಪ ತಾಲ್ಲೂಕಿನ ನಿಟ್ಟೂರು ಗ್ರಾಮದ ಒಂದೇ ಕುಟುಂಬದ ಐವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿದ್ದ ಈ ಕುಟುಂಬ, ತಮಿಳುನಾಡಿನಿಂದ ವಾಪಸ್ ಆಗುವ ವೇಳೆ ಅಪಘಾತ ಸಂಭವಿಸಿದೆ.

ನಿದ್ದೆ ಮಂಪರು ಹಾಗೂ ಮಂಜುಗಟ್ಟಿದ ವಾತಾವರಣದ ಹಿನ್ನೆಲೆ ರಸ್ತೆ ಸ್ಪಷ್ಟವಾಗಿ ಕಾಣದೆ, ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಕಾರು ಕಿರು ಸೇತುವೆಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ನಿಟ್ಟೂರು ಗ್ರಾಮದ ಪ್ರಸಾದ್ ರಾವ್ ಹಾಗೂ ಜೊತೆಯಲ್ಲಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇನ್ನಿಬ್ಬರನ್ನು ಆಂಬುಲೆನ್ಸ್ ಮೂಲಕ ಬಳ್ಳಾರಿಯ ಆಸ್ಪತ್ರೆಗೆ ರವಾನಿಸಲಾಗಿದೆ.

ಸದೃಢ ಆರೋಗ್ಯಕ್ಕಾಗಿ ಸಿರಿಧಾನ್ಯ ಬಳಸಿ: ಮಂಜುನಾಥ ಅಂತರವಳ್ಳಿ

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಸಿರಿಧಾನ್ಯಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಹೃದಯದ ಆರೋಗ್ಯ, ಮಧುಮೇಹ ನಿಯಂತ್ರಣ ಮತ್ತು ತೂಕ ಸಮತೋಲನಕ್ಕೆ ಸಹಾಯಕವಾಗಿವೆ. ಈ ಆಹಾರಗಳ ಲಾಭ, ಉಪಯುಕ್ತತೆ ಮತ್ತು ಬಳಕೆ ಕುರಿತಂತೆ ವ್ಯಾಪಕ ಅರಿವು ಮೂಡಿಸುವ ಕಾರ್ಯಕ್ರಮಗಳು ಬಹಳ ಮುಖ್ಯವಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.

ಅವರು ಮಂಗಳವಾರ ಬೆಳಿಗ್ಗೆ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಿರಿಧಾನ್ಯಗಳ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಕಲಾಭವನ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ನಮ್ಮಲ್ಲಿ ಪ್ರಚಲಿತವಿರುವ ಸಜ್ಜೆ, ನವಣೆ, ಸಾವೆ, ರಾಗಿ, ಹಾರಕ, ಬರಗು, ಕೊರಲೆ, ಊದಲು ಮುಂತಾದ ಸಿರಿಧಾನ್ಯಗಳು ನಾರಿನಂಶ ಮತ್ತು ಇತರೆ ಆರೋಗ್ಯ ಸಂಬಂಧಿ ಪೋಷಕಾಂಶಗಳನ್ನು ಒಳಗೊಂಡಿದ್ದು, ಸದೃಢ ಆರೋಗ್ಯಕ್ಕಾಗಿ ಇವುಗಳ ಬಳಕೆಯ ಅವಶ್ಯಕತೆ ಇದೆ. ಸಿರಿಧಾನ್ಯಗಳನ್ನು ಸಾಧಾರಣ ಫಲವತ್ತತೆಯ ಭೂಮಿಯಲ್ಲಿ ಹೆಚ್ಚಿನ ನೀರಿನ ಅವಶ್ಯಕತೆಯಿಲ್ಲದೆ ಬೆಳೆಯಬಹುದಾಗಿದ್ದು, ಇನ್ನಿತರ ಪರಿಕರಗಳ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಕಡಿಮೆ ಖರ್ಚಿನಲ್ಲಿ ಸುಲಭ ನಿರ್ವಹಣೆಯೊಂದಿಗೆ ಬೆಳೆಯಬಹುದಾದ ಸಿರಿಧಾನ್ಯಗಳು ಪ್ರಸ್ತುತ ಸಣ್ಣ ಮತ್ತು ಅತೀ ಸಣ್ಣ ರೈತರನ್ನು ಒಳಗೊಂಡಂತೆ ರೈತ ಸಮೂದಾಯಕ್ಕೆ ವರದಾನವಾಗಿವೆ. ಇವುಗಳ ವಿಸ್ತೀರ್ಣವನ್ನು ಹೆಚ್ಚಿಸುವುದರೊಂದಿಗೆ ಗ್ರಾಹಕರ ಬಳಕೆಗೆ ಸೂಕ್ತವಾಗುವಂತೆ ಸಂಸ್ಕರಣೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಈ ಕುರಿತಂತೆ ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸುವ ಉದ್ದೇಶದಿಂದ ಧಾರವಾಡ ಶಹರದಲ್ಲಿ ಕೃಷಿ ಇಲಾಖೆಯಿಂದ ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

`ಬೆಳೆ ಉತ್ಪಾದನೆಯಾಚೆಗಿನ ಕೃಷಿ-ರೈತರ ಸಬಲೀಕರಣ’ ಎಂಬ ವಾಕ್ಯದೊಂದಿಗೆ ಸಿರಿಧಾನ್ಯ ಬಳಕೆ ಕುರಿತು ಜಾಗೃತಿ ನಡಿಗೆಯ ಜಾಥಾ ಕಾರ್ಯಕ್ರಮವನ್ನು ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಿಂದ ಕೆ.ಸಿ.ಡಿ ವೃತ್ತದವರೆಗೆ ಆಯೋಜಿಸಲಾಗಿತ್ತು.

ಜನಜಾಗೃತಿ ಜಾಥಾ ನಡಿಗೆಯಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಾಶಿನಾಥ ಭದ್ರಣ್ಣವರ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶ್ರೀಪಾದ ಕುಲಕರ್ಣಿ, ಉಪ ಕೃಷಿ ನಿರ್ದೇಶಕರಾದ ನಟರಾಜ ಟಿ.ಹೆಚ್, ಸಂದೀಪ ಜಿ.ಆರ್ ಸೇರಿದಂತೆ ಕಲಘಟಗಿ, ಹುಬ್ಬಳ್ಳಿ, ಕುಂದಗೋಳ ಹಾಗೂ ನವಲಗುಂದ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆಯ ಎಲ್ಲ ಅಧಿಕಾರಿ/ಸಿಬ್ಬಂದಿಗಳು ಹಾಗೂ ವಿವಿಧ ಕೃಷಿಯೇತರ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳು ಭಾಗವಹಿಸಿದ್ದರು.

ಸಿರಿಧಾನ್ಯಗಳ ಸಾಗುವಳಿ, ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಗ್ರಾಹಕರ ಬಳಕೆ ಕುರಿತಂತೆ ಸಾಕಷ್ಟು ಮಾಹಿತಿಯನ್ನು ಮತ್ತು ಜಾಗೃತಿಯನ್ನು ಮೂಡಿಸುವ ದೃಷ್ಟಿಯಿಂದ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಿರಿಧಾನ್ಯ ಉತ್ಪನ್ನಗಳ ಕುರಿತು ಉತ್ಪಾದಕರು ಮತ್ತು ಬಳಕೆದಾರರು ಇಬ್ಬರಲ್ಲೂ ಸಾಕಷ್ಟು ತಿಳುವಳಿಕೆ ಮೂಡಿದ್ದು, ಸಾರ್ವಜನಿಕ ವಲಯದಿಂದ ಉತ್ತಮ ಸ್ಪಂದನೆ ದೊರೆತಿದೆ. ಸಿರಿಧಾನ್ಯಗಳು ನಮ್ಮ ಸಾಂಪ್ರದಾಯಿಕ ಆಹಾರದ ಬಹುಮುಖ್ಯ ಭಾಗವಾಗಿದ್ದು, ಆಧುನಿಕ ಜೀವನ ಶೈಲಿಗೆ ತಕ್ಕಂತೆ ಹೊಸ ವಿಧದ ಖಾದ್ಯಗಳನ್ನು ತಯಾರಿಸುವದಕ್ಕೆ ಪ್ರೋತ್ಸಾಹದ ಅಗತ್ಯವಿದೆ ಎಂದು ಮಂಜುನಾಥ ಅಂತರವಳ್ಳಿ ತಿಳಿಸಿದರು.

error: Content is protected !!