Home Blog Page 281

ಮುಡಾ ಸೈಟ್ ಹಗರಣ: ಸಿಎಂ ವಿರುದ್ಧ ಅರ್ಜಿ ವಿಚಾರಣೆ ಜ.5ಕ್ಕೆ ಮುಂದೂಡಿಕೆ!

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಸೈಟ್ ಅಕ್ರಮ ಆರೋಪ ಪ್ರಕರಣದ ವಿಚಾರಣೆಯನ್ನು ಕೋರ್ಟ್ ಜನವರಿ 5ಕ್ಕೆ ಮುಂದೂಡಿದೆ.

ಮುಡಾ ಸೈಟ್ ಹಗರಣದಲ್ಲಿ ಲೋಕಾಯುಕ್ತ ಸಲ್ಲಿಸಿರುವ ಬಿ ರಿಪೋರ್ಟ್‌ನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ನಡೆಯಿತು. ತನಿಖೆ ಪೂರ್ಣಗೊಂಡಿದ್ದರೂ ಬಾಕಿ ಇದೆ ಎಂದು ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದರು.

ಎ1 ಆಗಿರುವ ಹಾಲಿ ಸಿಎಂ ಅವರನ್ನು ನಿರಪರಾಧಿಯಾಗಿ ತೋರಿಸುವ ಪ್ರಯತ್ನ ನಡೆದಿದೆ ಎಂದು ವಾದಿಸಿ, ಆರೋಪ ಸಾಬೀತಾದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗುತ್ತದೆ ಎಂದರು. ಅಲ್ಲದೆ ತನಿಖಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕೋರಿದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಕೋರ್ಟ್ ಜನವರಿ 5ಕ್ಕೆ ನಿಗದಿಪಡಿಸಿದೆ.

ಜಿಲ್ಲೆಯಲ್ಲಿರುವ ಕ್ರೀಡಾ ಸೌಲಭ್ಯಗಳು ಸದ್ಬಳಕೆಯಾಗಲಿ: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯಲ್ಲಿ ಬೆಂಗಳೂರು ಹೊರತುಪಡಿಸಿ ಅತ್ಯತ್ತಮವಾದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ, ಮಹಾತ್ಮ ಗಾಂಧಿ ಕ್ರೀಡಾಂಗಣ ಸೇರಿದಂತೆ ಉನ್ನತಮಟ್ಟದ ಕ್ರೀಡಾ ಸೌಲಭ್ಯಗಳಿದ್ದು, ಇವುಗಳನ್ನು ಬಳಸಿಕೊಂಡು ಜಿಲ್ಲೆಯಲ್ಲಿರುವ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂದು ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕರೆ ನೀಡಿದರು.

ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಗದಗದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದ ಕುಸ್ತಿ ಮನೆಯಲ್ಲಿ ಎರಡು ದಿನಗಳ ಕಾಲ 15, 17 ಮತ್ತು 23 ವರ್ಷ ವಯೋಮಿತಿಯೊಳಗಿನ ಬಾಲಕ/ಬಾಲಕಿಯರಿಗೆ ಏರ್ಪಡಿಸಲಾಗಿದ್ದ ಅಂತರ ಜಿಲ್ಲಾ ಮಟ್ಟದ ಕ್ರೀಡಾ ವಸತಿ ನಿಲಯಗಳ ಕುಸ್ತಿ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಗದಗ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಬೀನು ಬಾಟ್, ರಾಜು ಬಾಗಡೆ, ವಿಲಾಸ ನೀಲಗುಂದ, ಹರೀಶ ಮುಟಗಾರ, ಪ್ರೇಮಾ ಹುಚ್ಚಣ್ಣವರ, ನೀಲಮ್ಮ ಮಲ್ಲಿಗವಾಡ ಸೇರಿದಂತೆ ಹಲವಾರು ಕ್ರೀಡಾಪಟುಗಳು ಈಗಿನ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದರು.

ಈ ಕುಸ್ತಿ ಪಂದ್ಯಾವಳಿಯಲ್ಲಿ ಗದಗ, ಶಿವಮೊಗ್ಗ, ಬಾಗಲಕೋಟೆ, ಧಾರವಾಡ, ದಾವಣಗೆರೆ, ಉತ್ತರಕನ್ನಡ, ಬೆಳಗಾವಿ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು, ಕ್ರೀಡಾ ವಸತಿ ನಿಲಯದಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳ ಪ್ರತಿಭೆ ಹೊರಬರಲು ಈ ಕ್ರೀಡಾಕೂಟ ಅನುಕೂಲಕರವಾಗಿದೆ. ಈ ಕ್ರೀಡಾಕೂಟವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು ಊಟ, ವಸತಿಯೊಂದಿಗೆ ಕ್ರೀಡಾಕೂಟದ ಆಯೋಜನೆ ಅಚ್ಚುಕಟ್ಟಾಗಿ ಮಾಡಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿ, ಎಲ್ಲ ವಿದ್ಯಾರ್ಥಿಗಳ ಗದಗದ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಿ, ಗದಗದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಿಚಯ ಮಾಡಿಕೊಳ್ಳಲಿ ಎಂದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಶರಣು ಗೋಗೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎ. ಯರಗುಡಿ ನಿರೂಪಿಸಿ ವಂದಿಸಿದರು. ವೇದಿಕೆಯಲ್ಲಿ ಗದಗ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ವಸಂತ ಸಿದ್ದಮ್ಮನಹಳ್ಳಿ, ತರಬೇತುದಾರರಾದ ರಾಜು ಫಳಕೆ, ನಾಗರಾಜ, ಶಿವಾನಂದ, ಮಂಜು ಬಾಗಡೆ, ವಿದ್ಯಾ ಕುಲಕರ್ಣಿ, ರೂಪಾ ಗೌಡರ್ ಸೇರಿದಂತೆ ಇತರ ಜಿಲ್ಲೆಗಳ ತರಬೇತುದಾರರು ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಕರ್ನಾಟಕ ಕುಸ್ತಿ ಅಸೋಸಿಯೇಷನ್ ನಿರ್ಣಾಯಕರ ತಂಡದ ಮುಖ್ಯಸ್ಥರಾದ ಡಾ. ವಿನೋದಕುಮಾರ ಮಾತನಾಡಿ, ಈಗಿನ ಕಾಲಮಾನದಲ್ಲಿ ಕ್ರೀಡೆಗಾಗಿ ಸಾಕಷ್ಟು ಅನುಕೂಲಗಳಿದ್ದು, ಅದರ ಉಪಯೋಗ ಪಡೆದುಕೊಂಡು ಕುಸ್ತಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಗದಗ ಜಿಲ್ಲೆಯಲ್ಲಿ ಸಾಕಷ್ಟು ಕ್ರೀಡಾ ಸೌಲಭ್ಯಗಳು ಇದ್ದು, ಅಂತಾರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಂಗಣ, 400 ಮೀ ಸಿಂಥೆಟಿಕ್ ಟ್ರ್ಯಾಕ್, ಫುಟ್‌ಬಾಲ್ ಪಿಚ್, ಕ್ರಿಕೆಟ್ ನೆಟ್ ಪ್ರ್ಯಾಕ್ಟಿಸ್, ಒಳಾಂಗಣ ಕ್ರೀಡಾಂಗಣಗಳು, ಈಜುಕೊಳಗಳು ಇದ್ದು ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.


ಚಲನಚಿತ್ರಗಳ ಟ್ರೇಲರ್, ಟೀಸರ್ ಆಹ್ವಾನ

0

ವಿಜಯಸಾಕ್ಷಿ ಸುದ್ದಿ, ಬಾಗಲಕೋಟ: ಇಲ್ಲಿನ ಐತಿಹಾಸಿಕ ಸ್ಥಳ ಐಹೊಳೆ ಹತ್ತಿರದ ಸುಕ್ಷೇತ್ರ ಕಲಾಪೋಷಕರ ಮಠ ಸಿದ್ಧನಕೊಳ್ಳದ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ-2026 ಜ. 14ರಿಂದ 16ರವರೆಗೆ ಮೂರು ದಿನಗಳ ಕಾಲ ಜರುಗಲಿದ್ದು, ಜ.15ರಂದು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದೆ. ಹುನಗುಂದ ಕ್ಷೇತ್ರದ ಶಾಸಕರಾದ ಡಾ. ವಿಜಯಾನಂದ ಕಾಶಪ್ಪನವರ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಧರ್ಮಾಧಿಕಾರಿಗಳಾದ ಡಾ. ಶಿವಕುಮಾರ ಸ್ವಾಮೀಜಿ ತಿಳಿಸಿದ್ದಾರೆ.

ಸಿದ್ಧಶ್ರೀ ಉತ್ಸವದಲ್ಲಿ ಸಹಸ್ರಾರು ಭಕ್ತರು ಸೇರುತ್ತಿದ್ದು, ಸಂಗೀತ, ನೃತ್ಯ, ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳು ನೆರವೇರುತ್ತವೆ. ರಾಜ್ಯ, ಹೊರರಾಜ್ಯಗಳ ವಿವಿಧ ಸಾಧಕರು, ಪ್ರತಿಭಾನ್ವಿತ, ಉದಯೋನ್ಮುಖ ಕಲಾ ಪ್ರತಿಭೆಗಳಿಗೂ ವೇದಿಕೆ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಜ.15ರಂದು ಹಮ್ಮಿಕೊಳ್ಳಲಾಗಿದೆ. ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಇನ್ನೂ ಬಿಡುಗಡೆಯಾಗದ ತಮ್ಮ 2025ರಲ್ಲಿ ನಿರ್ಮಾಣವಾದ, ಆಗುತ್ತಿರುವ ಹೊಸ ಚಲನಚಿತ್ರಗಳ, ಟೆಲಿಫಿಲ್ಮ್, ಕಿರುಚಿತ್ರಗಳ ಟ್ರೇಲರ್, ಟೀಸರ್ ಮತ್ತು ಪೋಸ್ಟರ್‌ಗಳನ್ನು ಚಿತ್ರೋತ್ಸವದಲ್ಲಿ ಬಿಡುಗಡೆ ಮಾಡಬಹುದು.

ಯಾವುದೇ ಪ್ರವೇಶ ಶುಲ್ಕಗಳಿಲ್ಲದೆ ಉಚಿತ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಿದ ಚಲನಚಿತ್ರ ತಂಡಗಳಿಗೆ ಅಭಿನಂದನಾ ಪತ್ರ, ಸ್ಮರಣಿಕೆ, ಕಿರುಚಿತ್ರ ತಂಡಗಳಿಗೆ ಅಭಿನಂದನಾ ಪತ್ರಗಳನ್ನು ನೀಡಲಾಗುತ್ತದೆ. ಆಸಕ್ತರು ಡಿಸೆಂಬರ್ 31ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನಂತರ ಬಂದವರಿಗೆ ಅವಕಾಶವಿಲ್ಲ. ಶ್ರೀಗಳ ಮತ್ತು ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ. ಆಯ್ಕೆಯಾದವರಿಗೆ ನಂತರ ತಿಳಿಸಲಾಗುತ್ತದೆ. ತಮ್ಮ ಟೀಸರ್, ಟ್ರೇಲರ್, ಪೋಸ್ಟರ್‌ಗಳನ್ನು ಡಾ. ಪ್ರಭು ಗಂಜಿಹಾಳ-ವಾಟ್ಸಪ್ ನಂ-9448775346 ಇಲ್ಲಿಗೆ ಕಳಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಚಲನಚಿತ್ರೋತ್ಸವ ವಿಭಾಗದ ಡಾ. ಪ್ರಭು ಗಂಜಿಹಾಳ-ಮೊ-9448775346, ಡಾ. ವೀರೇಶ ಹಂಡಿಗಿ-ಮೊ-9060933596, ವೀರೇಶ ಐಹೊಳೆ-ಮೊ-7026062364, ಸಂಗನಗೌಡ್ರು ಕುರುಡಗಿ-ಮೊ-8861811128, ಲೋಕೇಶ ವಿದ್ಯಾಧರ ಮೊ-8762310399 ಇವರನ್ನು ಸಂಪರ್ಕಿಸಬಹುದು ಎಂದು ಶ್ರೀಗಳು ತಿಳಿಸಿದ್ದಾರೆ.

ನೃತ್ಯ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್-ಅಪ್

0

ವಿಜಯಸಾಕ್ಷಿ ಸುದ್ದಿ, ಉಡುಪಿ: ಶ್ರದ್ಧಾ ಸ್ವರ ಸಂಗೀತ ವೆಲ್ಫೇರ್ ಟ್ರಸ್ಟ್ ಗದಗ ಇದರ ನೃತ್ಯ ತಂಡವು ಉಡುಪಿಯಲ್ಲಿ ನಡೆದ ಸೀಸನ್–8 ರಾಕ್ ಇಂಡಿಯಾ ಆಲ್ ಇಂಡಿಯಾ ಡ್ಯಾನ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫಸ್ಟ್ ರನ್ನರ್-ಅಪ್ ಸ್ಥಾನವನ್ನು ಪಡೆದು ಸಾಧನೆ ಮಾಡಿದೆ.

ದೇಶದ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ ಅನೇಕ ನೃತ್ಯ ತಂಡಗಳ ನಡುವೆ ನಡೆದ ತೀವ್ರ ಸ್ಪರ್ಧೆಯಲ್ಲಿ, ಟ್ರಸ್ಟ್‌ನ ನೃತ್ಯ ತಂಡವು ತನ್ನ ಶಿಸ್ತುಬದ್ಧ ಪ್ರದರ್ಶನ, ಉನ್ನತ ಕಲಾತ್ಮಕತೆ ಹಾಗೂ ನವೀನ ನೃತ್ಯ ಸಂಯೋಜನೆಯ ಮೂಲಕ ತೀರ್ಪುಗಾರರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.

ನೃತ್ಯ ನಿರ್ದೇಶಕರಾದ ಸಂತೋಷ ಅಸುಂಡಿ ಅವರ ನೇತೃತ್ವದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಸಂತೋಷ ಅಸುಂಡಿ, ಚಿರಂಜೀವಿ ಜಿಂದೇ, ವಿಕಾಸ್ ಶೆಟ್ಟಿ, ಶಬ್ದ ಕಲಾಲ ಹಾಗೂ ಪ್ರಕುಲ್ ಲಕ್ಕುಂಡಿ ಭಾಗವಹಿಸಿದ್ದರು.

ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಟ್ರಸ್ಟ್‌ನ ಅಧ್ಯಕ್ಷ ಉಜ್ವಲ್ ಡಿ.ಕಬಾಡಿ, ಸಂಸ್ಥೆಯ ಎಲ್ಲಾ ಸಿಬ್ಬಂದಿ, ಮಕ್ಕಳು ಹಾಗೂ ಪಾಲಕರೊಂದಿಗೆ ಸೇರಿ ನೃತ್ಯ ತಂಡದ ಎಲ್ಲಾ ಕಲಾವಿದರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ; ಫ್ಯಾನ್ಸ್ ವಾರ್ ಬಗ್ಗೆ ದರ್ಶನ್​​ಗೆ ಮಾಹಿತಿ ನೀಡಿದ ವಿಜಯಲಕ್ಷ್ಮಿ!

0

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್‌ ಅವರನ್ನು ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಇಂದು ಭೇಟಿ ಮಾಡಿದ್ದಾರೆ.

ಈಗಾಗಲೇ ದರ್ಶನ್ ಫ್ಯಾನ್ಸ್ ಮತ್ತು ಸುದೀಪ್ ಫ್ಯಾನ್ಸ್ ನಡುವೆ ವಿವಾದ ಶುರುವಾಗಿದೆ. ಸದ್ಯ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಫ್ಯಾನ್ಸ್ ವಾರ್ ಆರಂಭ ಆದ ಬಳಿಕ ಜೈಲಿನಲ್ಲಿ ಇದೇ ಮೊದಲ ಬಾರಿಗೆ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿ ಆಗಿದ್ದಾರೆ. ಭೇಟಿಯ ವೇಳೆ ಹೊರಗಿನ ಘಟನೆಗಳ ಬಗ್ಗೆ ಚರ್ಚೆ ನಡೆಸಿರಬಹುದೆಂದು ತಿಳಿದುಬಂದಿದೆ.

ಮಂಗಳವಾರ ಮಧ್ಯಾಹ್ನ 3.50ರ ಸುಮಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟ ವಿಜಯಲಕ್ಷ್ಮಿ ಮತ್ತು ದಿನಕರ್ ತೂಗುದೀಪ ಅವರು ದರ್ಶನ್ ಭೇಟಿ ಮಾಡಿ ಅರ್ಧ ಗಂಟೆ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವಿನ ವಾರ್ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ನಟ ದರ್ಶನ್ ಅವರು, ‘ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ನಮಗೂ ಒಳ್ಳೆಯ ಸಮಯ ಬರುತ್ತದೆ. ಅಲ್ಲಿಯವರೆಗೆ ಕಾಯಬೇಕು’ ಎಂದು ಶಾಂತವಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ.

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಪೂರ್ವಸಿದ್ಧತಾ ಸಭೆ

0

ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕುರಿತು ಪೂರ್ವಸಿದ್ಧತಾ ಸಭೆಯು ಮಂಗಳವಾರ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿತು.

ಜನವರಿ 1ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವರ ಅನುಮತಿ ಪಡೆದು ಸಮುದಾಯದ ವತಿಯಿಂದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಗೆ ಕ್ರಮ ವಹಿಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಸಮುದಾಯದ ಅಧ್ಯಕ್ಷರು, ಪ್ರಮುಖರು, ಹಿರಿಯರು ಹಾಜರಿದ್ದರು.

ಜಿಲ್ಲಾ ವಕ್ಫ್ ಅಧಿಕಾರಿ, ಸಿಬ್ಬಂದಿಗಳಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಅನ್ವರ್ ಎಚ್. ಬಾಗೇವಾಡಿ ಇವರ ನೇತೃತ್ವದಲ್ಲಿ ಗದಗ ಜಿಲ್ಲಾ ವಕ್ಫ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ವಕ್ಫ್ ಮಂಡಳಿಗೆ ಸಂಬಂಧಿಸಿದಂತೆ ಎಲ್ಲಾ ಆಸ್ತಿಗಳನ್ನು ಉಮ್ಮಿದ್ ಪೋರ್ಟಲ್ ತಂತ್ರಾಂಶದಲ್ಲಿ ನಮೂದಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿತ್ತು. ಅದರಂತೆ ಕರ್ನಾಟಕದ 31 ಜಿಲ್ಲೆಗಳಲ್ಲಿ ಪ್ರಥಮವಾಗಿ ಗದಗ ಜಿಲ್ಲೆಯ ವಕ್ಫ್ ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹಗಲು-ರಾತ್ರಿ ಮತ್ತು ರಜಾ ದಿನಗಳಲ್ಲಿ ಸುದೀರ್ಘವಾಗಿ ಕೆಲಸ ನಿರ್ವಹಿಸಿ ಜಿಲ್ಲೆಯ ವಕ್ಫ್ ಸಂಸ್ಥೆಗೆ ನೋಂದಣಿ ಇರುವ ಎಲ್ಲ ಆಸ್ತಿಗಳನ್ನು ಅವಧಿ ಪೂರ್ಣಗೊಳ್ಳುವ ಮುಂಚಿತವಾಗಿ ತಂತ್ರಾಂಶದಲ್ಲಿ ನಮೂದಿಸಿ ರಾಜ್ಯಕ್ಕೆ ಪ್ರಥಮವೆಂದು ಕೀರ್ತಿ ತಂದಿದ್ದಾರೆ.

ಸನ್ಮಾನ ಕಾರ್ಯಕ್ರಮದಲ್ಲಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಎಂ.ಆರ್. ಸೋಂಪುರ, ಕಾರ್ಯದರ್ಶಿ ಎ.ಆರ್. ಕೊಪ್ಪಳ, ಖಜಾಂಚಿ ಎಂ.ಆರ್. ನಾರಾಯಣಕೇರಿ, ಸದಸ್ಯರುಗಳಾದ ಡಿ.ಎಫ್. ಮಲಸಮುದ್ರ, ಎ.ಕೆ. ಮುಲ್ಲಾ, ಎಂ.ಎನ್. ಬಿಜಾಪುರ, ಎಂ.ಜೆ. ಕದಡಿ, ಎಚ್.ಜಿ. ಕಾಗದಗಾರ, ಎ.ಜಿ. ದಂಡಿನ, ಎಸ್.ಎಂ. ಮಾಳೆಕೊಪ್ಪ, ನ್ಯಾಯವಾದಿಗಳಾದ ಎಂ.ಎ. ಮೌಲ್ವಿ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಹೆಚ್. ಕೊಪ್ಪಳ ಹಾಗೂ ಶಹರ/ಗ್ರಾಮೀಣ ಭಾಗದ ಮುಖಂಡರು, ಅಂಜುಮನ್ ಸದಸ್ಯರು ಭಾಗವಹಿಸಿದ್ದರು.

ಜಾನಪದ ಸಾಹಿತ್ಯದಿಂದ ಉತ್ತಮ ಸಂಸ್ಕಾರ: ಸಾಹಿತಿ ಶಿವಯೋಗಿ ವಿಭೂತಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಜಾನಪದ ಸಾಹಿತ್ಯವು ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಬ್ಬರ ಜೀವನದಲ್ಲೂ ಹಾಸು ಹೊಕ್ಕಾಗಿದೆ. ಜಾನಪದ ಒಳ್ಳೆಯ ಸಂಸ್ಕಾರವನ್ನು ನೀಡುತ್ತಿದೆ ಎಂದು ಸಾಹಿತಿ ಶಿವಯೋಗಿ ವಿಭೂತಿ ಹೇಳಿದರು.

ಅವರು ಕಸಾಪ ವತಿಯಿಂದ ಕಡಕೋಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾನಪದ ಸಾಹಿತ್ಯವು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಜಾನಪದ ಸಾಹಿತ್ಯ ಗ್ರಾಮೀಣ ಜನರ ಭಾವನೆಗಳು, ಸಂಪ್ರದಾಯಗಳು, ನಂಬಿಕೆಗಳು ಮತ್ತು ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮವಾಗಿದೆ ಎಂದರು.

ತಿಪ್ಪಣ್ಣ ಕೊಂಚಿಗೇರಿ, ನವೀನಕುಮಾರ ಅಳವಂಡಿ, ಬಿ.ಎಂ. ಯರಕದ, ಎಸ್.ಬಿ. ಹೊಸೂರ, ಸತೀಶ ದೇಶಪಾಂಡೆ, ಮಲ್ಲಪ್ಪ ಹರ್ತಿ, ಕನಕಮ್ಮ, ಎಸ್.ಬಿ. ಮುಲ್ಕಿಗೌಡರ, ರವಿ ಗೌಡರು, ಈರನಗೌಡ ಪಾಟೀಲ, ಜ್ಯೋತಿ ಕೊಂಚಿಗೇರಿ, ಮಾಂತೇಶ ಮೆಳ್ಳಿಗಟ್ಟಿ, ಶರಣು ಕಲ್ಗುಡಿ ಮುಂತಾದವರು ಉಪಸ್ಥಿತರಿದ್ದರು.

ಅಧಿಕಾರಿಗಳು ಜನಪರ ಕೆಲಸ ಮಾಡಿ: ಶಾಸಕ ಜಿ.ಎಸ್. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಗಜೇಂದ್ರಗಡ ತಾಲೂಕು ಎಂದು ಘೋಷಣೆಯಾಗಿ ಸುಮಾರು 8 ವರ್ಷಗಳೇ ಕಳೆದಿವೆ. ಆದರೆ, ಜನರಿಗೆ ತಲುಪುವಂತಹ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲಿ ದೊರೆಯುತ್ತಿಲ್ಲ. ತಾಲೂಕಿನಲ್ಲಿ ಸರಿಯಾಗಿ ಇಲಾಖೆಗಳ ಕಚೇರಿಗಳು ಇಲ್ಲದೆ ಜನರು ಅಲೆದಾಡಬೇಕಾಗಿತ್ತು. ಈಗ ಹಂತ ಹಂತವಾಗಿ ಇಲಾಖೆಗಳು ನಿರ್ಮಾಣಗೊಳ್ಳುತ್ತಿದ್ದು, ಅಧಿಕಾರಿಗಳಿಗೆ ಹಾಗೂ ಜನರಿಗೆ ಪ್ರಯೋಜನ ಆಗಲಿದೆ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದಲ್ಲಿ 8.60 ಕೋಟಿ ರೂ ವೆಚ್ಚದಲ್ಲಿ ಕಾಲಕಾಲೇಶ್ವರ ರಸ್ತೆಯಲ್ಲಿ ಗುಡ್ಡಕ್ಕೆ ಹೊಂದಿಕೊಂಡಿರುವ ಒಂದು ಎಕರೆ ಜಾಗದಲ್ಲಿ ನೂತನವಾಗಿ ನಿರ್ಮಿಸಲಾಗುವ ‘ಪ್ರಜಾಸೌಧ’ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪ್ರಸ್ತುತ ಕಂದಾಯ ಇಲಾಖೆ ಕಟ್ಟಡದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲಸ ಮಾಡುವುದು ಕಷ್ಟಕರವಾಗಿತ್ತು. ಇದನ್ನು ಪರಿಗಣಿಸಿ ಹೊಸ ಕಟ್ಟಡಕ್ಕೆ ಭೂಮಿ ಹುಡುಕಿ ಅನುಮೋದನೆ ತರುವಲ್ಲಿ ಬಹಳಷ್ಟು ಶ್ರಮಪಟ್ಟಿದ್ದೇವೆ. ಇನ್ನುಮುಂದೆ ಅಧಿಕಾರಿಗಳು ಸುಗಮವಾಗಿ ಕರ್ತವ್ಯ ನಿರ್ವಹಿಸಿ ಜನಪರ ಕೆಲಸ ಮಾಡಬೇಕು ಎಂದರು.

ಗಜೇಂದ್ರಗಡ ಮತ್ತು ಸೂಡಿ ಗ್ರಾಮವನ್ನು ಹೋಬಳಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿಯ ಕೊರತೆ ಇದ್ದು, ಅತೀ ಶೀಘ್ರದಲ್ಲಿ ಭೂಮಿ ಹುಡುಕಲು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ನೂರು ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ, ಮಾರುಕಟ್ಟೆ ನಿರ್ಮಾಣ, ಯುವಕರಿಗೆ ಕ್ರೀಡಾಂಗಣ ಮುಂತಾದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಲ್ಲಪ್ಪ ಸಜ್ಜನ್, ಶಿವರಾಜ್ ಘೋರ್ಪಡೆ, ತಾರಾಸಿಂಗ್ ರಾಠೋಡ್, ವೀರಣ್ಣ ಶೆಟ್ಟರ್, ಎಚ್.ಎಸ್. ಸೋಂಪುರ, ರಾಜೂ ಸಾಂಗ್ಲಿಕರ್, ಮುರ್ತುಜಾ ಡಾಲಾಯತ್, ರಫೀಕ್ ತೋರಗಲ್, ಸುಭಾಸ್ ಮ್ಯಾಗೇರಿ, ಭೀಮಣ್ಣ ತಳವಾರ, ಅರ್ಜುನ್ ರಾಠೋಡ್, ಶೇಖಪ್ಪ ರಾಮಜಿ, ತಾಲೂಕಾ ದಂಡಾಧಿಕಾರಿ ಕಿರಣಕುಮಾರ್ ಕುಲಕರ್ಣಿ, ತಾ.ಪಂ ಮುಖ್ಯಾಧಿಕಾರಿ ಚಂದ್ರಶೇಖರ ಕಂದಕೂರ, ಮಂಜುಳಾ ರೇವಡಿ, ಪ್ರಕಾಶ ರಾಠೋಡ, ಅಂದಪ್ಪ ರಾಠೋಡ, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

ಮುಖಂಡರಾದ ಸಿದ್ದಣ್ಣ ಬಂಡಿ ಮಾತನಾಡಿ, ರೈತರಿಗೆ ಹೆಸರು, ಮೆಣಸಿನಕಾಯಿ ಮುಂತಾದ ಬೆಳೆಗಳಿಗೆ ಪರಿಹಾರ ಮಂಜೂರಾಗಿದೆ. ಇನ್ನೂ 2550 ರೈತರಿಗೆ ಪರಿಹಾರ ಮಂಜೂರು ಮಾಡಬೇಕಾಗಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ಅದು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಹಣವನ್ನು ಬಳಸುತ್ತಿದ್ದಾರೆ. ಆದರೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಹೇಳುವವರೂ ಇದ್ದಾರೆ. ಆದರೆ ಸರ್ಕಾರ ಅಭಿವೃದ್ಧಿ ಕೆಲಸಗಳಿಗೂ ಒತ್ತು ನೀಡಿದೆ ಎಂಬುದನ್ನು ಮರೆಯುವಂತಿಲ್ಲ ಎಂದರು.

ನಕಲಿ, ವಸೂಲಿ ಪತ್ರಕರ್ತರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ; ಜಿಲ್ಲಾಧಿಕಾರಿ ದಿವ್ಯ ಪ್ರಭು

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಂಬ ಅಂಗಗಳು ಸಂವಿಧಾನದಲ್ಲಿವೆ. ಪ್ರಜಾಪ್ರಭುತ್ವದ 4ನೇ ಅಂಗವೆಂದು ಮಾಧ್ಯಮವನ್ನು ಗುರುತಿಸಲಾಗಿದೆ. ಅಧಿಕೃತ ಪತ್ರಕರ್ತರನ್ನು ಗುರುತಿಸಿ, ಗೌರವಿಸಲು ಸಹಾಯವಾಗುವುದಕ್ಕಾಗಿ ನಕಲಿ, ವಸೂಲಿ ಪತ್ರಕರ್ತರ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಸರ್ಕಾರಿ ನೌಕರರಲ್ಲಿ ಮಾಧ್ಯಮಗಳ ಮತ್ತು ಮಾಧ್ಯಮ ಪ್ರತಿನಿಧಿಗಳ ಬಗ್ಗೆ ತಿಳುವಳಿಕೆ ಮೂಡಿಸಲು ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸರ್ಕಾರಿ ನೌಕರರಿಗೆ ಮಾಧ್ಯಮ ಕಾರ್ಯಾಗಾರ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಅವರು ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಧಾರವಾಡ ಜಿಲ್ಲಾ ಘಟಕದ 2025-28ನೇ ಅವಧಿಯ ನೂತನ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕಾರಿಣಿ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.

ಸರ್ಕಾರದ ವಿವಿಧ ಇಲಾಖೆಗಳಿಗೆ ಮಾಧ್ಯಮದ ಹೆಸರಿನಲ್ಲಿ ಇತರರು ಭೇಟಿ ನೀಡಿ, ಮಾಹಿತಿ ಕೇಳುವ ಅಥವಾ ಅಧಿಕಾರಿ, ಸಿಬ್ಬಂದಿಗಳಿಗೆ ಮಾಹಿತಿ ಹೆಸರಿನಲ್ಲಿ ಹೆದರಿಸುವ, ಹಣ ಕೇಳುವ ಘಟನೆಗಳು ಜರುಗುತ್ತವೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದಾಗ ಧಾರವಾಡ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆ. ಆದರೂ ಅಧಿಕೃತ ಪತ್ರಕರ್ತರಿಗೆ ವೃತ್ತಿ ದೃಷ್ಟಿಯಿಂದ ಸಿಗಬೇಕಾದ ಮಾಹಿತಿ ಮತ್ತು ಗೌರವ ನೀಡಲು ಅಧಿಕಾರಿ, ಸಿಬ್ಬಂದಿಗಳಿಗೆ ಮಾಧ್ಯಮದ ಕಾರ್ಯ ಚಟುವಟಿಕೆಗಳ ಕುರಿತು ಮತ್ತು ಮಾಧ್ಯಮ ಪ್ರತಿನಿಧಿಗಳ ಬಗ್ಗೆ ತಿಳಿಸುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಸರ್ಕಾರದ ಯೋಜನೆ, ಬಜೆಟ್ ಸೇರಿದಂತೆ ವಿವಿಧ ವಿಷಯಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಮಹತ್ತರ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ದೇಶದ ನಾಗರಿಕರಿಗೆ ಸಿಗುವ ಅವಕಾಶಗಳ ಬಗ್ಗೆ ತಿಳಿಯಪಡಿಸಲಾಗುವುದು. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಕ್ಕೆ ತನ್ನದೇ ಘನತೆ, ಸ್ಥಾನವಿದೆ. ಕೆಲವು ಸ್ವಾತಂತ್ರ್ಯ ಹೋರಾಟದ ನಾಯಕರು ಲೇಖನಿ ಮತ್ತು ಪತ್ರಿಕೆಗಳ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ್ದಾರೆ. ಹೊಸ ಹೊಸ ತಂತ್ರಜ್ಞಾನದ ಬಳಕೆ ಬಗ್ಗೆ ಅರಿತುಕೊಳ್ಳಬೇಕಿದೆ ಎಂದು ತಿಳಿಸಿದರು.

ಪತ್ರಕರ್ತರ ಸಂಘ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಬಂಡು ಕುಲಕರ್ಣಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಮೋಹನ ಹೆಗಡೆ, ಕನ್ನಡಪ್ರಭ ಪತ್ರಿಕೆಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜುನ ಸಿದ್ದಣ್ಣನವರ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಸ್ವಾಗತಿಸಿ, ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಸದಸ್ಯ ಜೆ.ಅಬ್ಬಾಸ್ ಮುಲ್ಲಾ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಭಾಂಡಗೆ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಬ್ಯೂರೋ ಮುಖ್ಯಸ್ಥ ವೆಂಕಟರಾಜು ಕೆ.ಜಿ., ವಿಜಯವಾಣಿ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ವೇದಿಕೆಯಲ್ಲಿ ಇದ್ದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಶ್ರೀಪಾದ ಕುಲಕರ್ಣಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ವಿವಿಧ ಪತ್ರಿಕೆಗಳ ಸ್ಥಾನಿಕ ಸಂಪಾದಕರಾದ ವಿಠ್ಠಲದಾಸ್ ಕಾಮತ್, ಷಣ್ಮುಖ ಕೋಳಿವಾಡ, ಗಿರೀಶ ಪಟ್ಟಣಶೆಟ್ಟಿ, ವೆಂಕಟೇಶ ಪ್ರಭು, ರಾಹುಲ ಬೆಳಗಲಿ ಹಾಗೂ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಪ್ರತಿನಿಧಿಗಳು, ಧಾರವಾಡ ಪತ್ರಕರ್ತರು ಭಾಗವಹಿಸಿದ್ದರು.

ವಾರ್ತಾ ಇಲಾಖೆಯ ಸಿಬ್ಬಂದಿ ಕಾವ್ಯಾ ಗೌಡರ ಪ್ರಾರ್ಥಿಸಿದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

error: Content is protected !!