Home Blog Page 297

ತಂದೆಯ ಸ್ಮರಣೆ ಉಳಿಸಿದ ಶಾಂತಿವನ: ಸಿದ್ದು ಪಾಟೀಲ ಕಾರ್ಯಕ್ಕೆ ಸಚಿವ ಎಚ್.ಕೆ. ಪಾಟೀಲ ಮೆಚ್ಚುಗೆ

ಗದಗ: ಮಗನು ತಂದೆಯ ಅಸ್ತಿತ್ವದ ಮುಂದುವರಿಕೆಯ ವಾರಸುದಾರನಾಗಿದ್ದನ್ನು ಮಕ್ಕಳು ಮರೆಯಬಾರದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು. “ಮಗ ತಂದೆಯ ಪ್ರತಿರೂಪ” ಎಂಬುದು ಕೇವಲ ದೈಹಿಕ ಹೋಲಿಕೆಯಲ್ಲ, ಅದು ಆಳವಾದ ಭಾವನಾತ್ಮಕ ಮತ್ತು ಅನುವಂಶೀಯ ಬಂಧನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಐತಿಹಾಸಿಕ ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿದ್ದು ಪಾಟೀಲರು ತಮ್ಮ ತಂದೆಯ ಹೆಸರಲ್ಲಿ ನಿರ್ಮಿಸಿದ ದಿ. ಅಜ್ಜಣ್ಣ ಕೆ. ಪಾಟೀಲ ಶಾಂತಿವನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ದಿ. ಅಜ್ಜಣ್ಣ ಪಾಟೀಲ ಹಾಗೂ ರೇಣುಕಾ ಅಜ್ಜಣ್ಣ ಪಾಟೀಲರ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿದರು.

ತಂದೆಯಂತೆ ಸಿದ್ದು ಪಾಟೀಲರು ನಡೆ-ನುಡಿಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕೌಟುಂಬಿಕ, ಶೈಕ್ಷಣಿಕ ಹಾಗೂ ವ್ಯವಹಾರಿಕ ಚಿಂತನೆಗಳನ್ನು ಅಳವಡಿಸಿಕೊಂಡಿರುವುದು ಹೆಮ್ಮೆಗೇ ಕಾರಣವಾಗಿದೆ ಎಂದು ಅವರು ಹೇಳಿದರು.

ತಂದೆಯ ಗುಣಲಕ್ಷಣಗಳು ಮತ್ತು ಸ್ವಭಾವಗಳು ಮಗನಿಗೆ ಅನುವಂಶೀಯವಾಗಿ ವರ್ಗಾವಣೆಯಾಗುತ್ತವೆ ಎಂಬುದನ್ನು ಸಿದ್ದು ಪಾಟೀಲರ ವ್ಯಕ್ತಿತ್ವ ಸ್ಪಷ್ಟಪಡಿಸುತ್ತದೆ. ತಂದೆಯ ಹೆಸರಲ್ಲಿ ಶಾಂತಿವನ ನಿರ್ಮಿಸಿ, ಅದರೊಳಗೆ ತಂದೆ-ತಾಯಿಯ ಗದ್ದುಗೆ ನಿರ್ಮಿಸುವ ಮೂಲಕ ಪೂರ್ವಜರ ಅಸ್ತಿತ್ವವನ್ನು ಉಳಿಸಿ ಬೆಳೆಸುತ್ತಿರುವುದು ಕುಟುಂಬದ ಆದರ್ಶತೆಯ ಸಂಕೇತವಾಗಿದೆ ಎಂದು ಸಚಿವರು ಹೇಳಿದರು.

ಸುಮಾರು 6 ಎಕರೆ ಪಿತ್ರಾರ್ಜಿತ ಆಸ್ತಿಯನ್ನು ಹಾಳು ಮಾಡದೆ ಶಾಂತಿವನವಾಗಿ ರೂಪಿಸಿರುವ ಸಿದ್ದು ಪಾಟೀಲರು, 3 ಬೋರ್‌ವೆಲ್‌ಗಳನ್ನು ತೆಗೆದು, ತೋಟದ ಬಾವಿಯ ನೀರನ್ನು ಬಳಸಿಕೊಂಡು ಅಡಿಕೆ, ಪಪ್ಪಾಯ, ಬಾಳೆ, ಗಂಧ, ನೆರಳೆ, ದ್ರಾಕ್ಷಿ, ಮಹಾಗಣಿ, ಆಬಾಲಿ, ಮಲ್ಲಿಗೆ ಮತ್ತು ಸೇವಂತಿಗೆ ಹೂವಿನ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಇದರಿಂದ ಅವರು ತಂದೆಯಂತೆ ಅನುಕರಣೀಯ ಕೃಷಿಕರಾಗಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ತಂದೆಯು ಕುಟುಂಬದ ಹೊಣೆಗಾರಿಕೆ ಮತ್ತು ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುತ್ತಾನೆ. ಅದೇ ಹಾದಿಯಲ್ಲಿ ಮಗ ಸಾಗುತ್ತಾನೆ ಎಂಬುದಕ್ಕೆ ಸಿದ್ದು ಪಾಟೀಲರು ಉತ್ತಮ ಉದಾಹರಣೆ ಎಂದು ಹೇಳಿದರು.

ತಂದೆ-ಮಗನ ನಡುವಿನ ಪ್ರೀತಿ ಮತ್ತು ಗೌರವವು ಅಪರೂಪದ, ಹೃದಯಸ್ಪರ್ಶಿ ಬಾಂಧವ್ಯವಾಗಿದ್ದು, ಅದನ್ನು ಅರಿತುಕೊಂಡರೆ ಕುಟುಂಬದ ನೆಲೆಗಟ್ಟು ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜನಪ್ರಿಯ ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಕಾಂಗ್ರೆಸ್ ನಾಯಕ ದಶರಥ ಗಾಣಿಗೇರ ಹಾಗೂ ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

“ಕಾರ್ಮಿಕರಿಗೆ ದೊಡ್ಡ ಉಡುಗೊರೆ: ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಆರಂಭ”

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸಾವಿರಾರು ಕಾರ್ಮಿಕರಿಗೆ ಬಹುಕಾಲದ ನಿರೀಕ್ಷೆ ಇಂದು ಕೊನೆಗೂ ನೆರವೇರಿದೆ. ಮೂರು ವರ್ಷಗಳ ವಿಳಂಬದ ನಂತರ ನೂತನ ಇಎಸ್‌ಐ ಆಸ್ಪತ್ರೆ ಅಧಿಕೃತವಾಗಿ ಕಾರ್ಯಾರಂಭಗೊಂಡಿದೆ.

ಸುಮಾರು ₹101.14 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರ“ಕಾರ್ಮಿಕರಿಗೆ ದೊಡ್ಡ ಉಡುಗೊರೆ: ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಗಳ ಇಎಸ್‌ಐ ಆಸ್ಪತ್ರೆ ಆರಂಭ” ನಿರ್ಮಿಸಿರುವ ಈ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ, ಕಾರ್ಮಿಕರಿಗೆ ಸ್ಥಳೀಯ ಮಟ್ಟದಲ್ಲೇ ತುರ್ತು ವೈದ್ಯಕೀಯ ಸೇವೆ ಒದಗಿಸುವ ಗುರಿಯನ್ನು ಹೊಂದಿದೆ. ಇನ್ನು ಮುಂದೆ ಚಿಕಿತ್ಸೆಗಾಗಿ ಬೆಂಗಳೂರಿನತ್ತ ಓಡಬೇಕಾದ ಅನಿವಾರ್ಯತೆ ಇಲ್ಲ.

ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವೀಯ ಅವರಿಂದ ಉದ್ಘಾಟನೆಗೊಂಡ ಈ ಆಸ್ಪತ್ರೆ, ಕೈಗಾರಿಕಾ ಕಾರ್ಮಿಕರ ಆರೋಗ್ಯ ಭದ್ರತೆಗೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಡಾ. ಕೆ. ಸುಧಾಕರ್ ಹಾಗೂ ಶಾಸಕ ಧೀರಜ್ ಮುನಿರಾಜ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

ಆದರೆ ಮೂರು ವರ್ಷಗಳ ತಡದ ನಂತರ ಆರಂಭವಾದ ಈ ಯೋಜನೆ ಈಗ ನಿಜವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆಯೇ ಎಂಬುದೇ ಮುಂದಿನ ದೊಡ್ಡ ಪ್ರಶ್ನೆ.

ನೂರಾರು ಜೀವ ಉಳಿಸಿದ್ದ ವೈದ್ಯನಿಗೆ ಸಿಗಲಿಲ್ಲ ಚಿಕಿತ್ಸೆ : ಗಡಿಯ ಗ್ರಾಮದಲ್ಲಿ ಹೃದಯವಿದ್ರಾವಕ ಅಂತ್ಯ

ಕಾರವಾರ, ಮೇ 03: ನೂರಾರು ಜನರಿಗೆ ಹೊಸ ಜೀವನ ನೀಡಿದ ವೈದ್ಯನೇ ಕೊನೆಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕರ್ನಾಟಕ-ಗೋವಾ ಗಡಿಯ ಡಿಗ್ಗಿ ಗ್ರಾಮದಲ್ಲಿ ನಡೆದಿದೆ. ಡಾ. ಲೆನ್ವರ್ ಲೋಬೋ ಅವರ ಅಕಾಲಿಕ ಮರಣ ಗ್ರಾಮವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಈ ಕೂಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲದ ಪರಿಸ್ಥಿತಿಯಲ್ಲಿ ಕಳೆದ ಮೂರು ವರ್ಷಗಳಿಂದ ಡಾ. ಲೋಬೋ ಸೇವೆ ಸಲ್ಲಿಸುತ್ತಿದ್ದರು. ಶಿರಸಿಯ ಸ್ಕೋಡಾ ವೇಸ್ ಸಂಸ್ಥೆ ಕರಾರಿನಡಿ ಇಲ್ಲಿ ಆಸ್ಪತ್ರೆ ನಡೆಸಲಾಗುತ್ತಿದ್ದು, ಗೋವಾ ಗಡಿಯ ಭಾಗಗಳಿಂದಲೂ ಜನರು ಚಿಕಿತ್ಸೆಗಾಗಿ ಇಲ್ಲಿ ಆಗಮಿಸುತ್ತಿದ್ದರು.

ಅವರ ಚಿಕಿತ್ಸೆ ಮೂಲಕ ಅನೇಕರು ಗುಣಮುಖರಾಗಿದ್ದು, ಗ್ರಾಮಸ್ಥರ ನಂಬಿಕೆಯ ಆಧಾರವಾಗಿದ್ದರು. ಆದರೆ ವಿಧಿಯಾಟ ಕ್ರೂರವಾಗಿ ತಿರುಗಿತು.

ರಾತ್ರಿ ವೇಳೆ ತೀವ್ರ ಎದೆನೋವು ಕಾಣಿಸಿಕೊಂಡರೂ ತಕ್ಷಣ ಆಸ್ಪತ್ರೆಗೆ ಹೋಗಲು ವಾಹನ ಇರಲಿಲ್ಲ, ಮೊಬೈಲ್ ನೆಟ್ವರ್ಕ್ ಸಹ ಲಭ್ಯವಿರಲಿಲ್ಲ. ಬೆಳಗಿನ ಜಾವ ವಾಹನ ತರಿಸಿಕೊಂಡು ಜೋಯಿಡಾ ಕಡೆಗೆ ಹೊರಟಾಗ, ಎದೆನೋವು ಮತ್ತಷ್ಟು ತೀವ್ರವಾಗಿ ದಾರಿ ಮಧ್ಯದಲ್ಲೇ ಜೀವ ಕಳೆದುಕೊಂಡರು.

ಜೀವ ಉಳಿಸುವ ವೈದ್ಯನಿಗೇ ಚಿಕಿತ್ಸೆ ಸಿಗದ ವಾಸ್ತವ. ಇದು ಕೇವಲ ದುರಂತವಲ್ಲ, ವ್ಯವಸ್ಥೆಯ ಸ್ಪಷ್ಟ ವೈಫಲ್ಯವಾಗಿದೆ.

“ಮತ ಎಣಿಕೆಗೆ ಕೌಂಟ್‌ಡೌನ್: ನಾಳೆ 5 ರಾಜ್ಯಗಳ ತೀರ್ಪ — ಯಾರಿಗೆ ಅಧಿಕಾರ, ಯಾರಿಗೆ ಆಘಾತ?”

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ 4ರಂದು ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಪುದುಚೇರಿ ರಾಜ್ಯಗಳ ಜನತೆಯ ತೀರ್ಪು ಬಹಿರಂಗವಾಗಲಿದೆ.

ಚುನಾವಣಾ ಆಯೋಗದ ನಿಯಮಿತ ಪ್ರಕ್ರಿಯೆಯಂತೆ ಮೊದಲು ಅಂಚೆ ಮತಪತ್ರಗಳ ಎಣಿಕೆ, ಬಳಿಕ ಇವಿಎಂ ಮತಗಳ ಎಣಿಕೆ ನಡೆಯಲಿದೆ. ದೇಶದಾದ್ಯಂತ ಕಟ್ಟುನಿಟ್ಟಿನ ಭದ್ರತೆಯಲ್ಲಿ ಏಕಕಾಲದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

824 ಕ್ಷೇತ್ರಗಳ ಈ ಮಹಾ ಚುನಾವಣೆಯ ಫಲಿತಾಂಶ ಕೇವಲ ಸರ್ಕಾರ ರಚನೆಗೆ ಸೀಮಿತವಲ್ಲ — ರಾಷ್ಟ್ರಮಟ್ಟದ ರಾಜಕೀಯ ಶಕ್ತಿಪರೀಕ್ಷೆ. ಮಧ್ಯಾಹ್ನದೊಳಗೆ ಟ್ರೆಂಡ್ ಸ್ಪಷ್ಟವಾಗುವ ನಿರೀಕ್ಷೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ನೇರ ಪೈಪೋಟಿ ದೇಶದ ಗಮನ ಸೆಳೆದಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಭಾವ ಪರೀಕ್ಷೆಗೆ ಇಳಿದಿದೆ.

ಇನ್ನೊಂದೆಡೆ ಅಸ್ಸಾಂನಲ್ಲಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ತನ್ನ ಗಡಿಯನ್ನು ಕಾಪಾಡಿಕೊಳ್ಳಲು ಸಜ್ಜಾಗಿದೆ.

ಫಾಲ್ಟಾ ಕ್ಷೇತ್ರದಲ್ಲಿ ಅಕ್ರಮಗಳ ಹಿನ್ನೆಲೆಯಲ್ಲಿ ಮರು ಮತದಾನ ಆದೇಶಿಸಲಾಗಿದ್ದು, ಅದರ ಫಲಿತಾಂಶ ಮೇ 24ರಂದು ಪ್ರಕಟವಾಗಲಿದೆ.

“ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ? ಪೊಲೀಸರ ವಿರುದ್ಧ ಗಂಭೀರ ಆರೋಪ — ಶಾಸಕ ಅಬ್ಬಯ್ಯ ಕಿಡಿ”

0

ಹುಬ್ಬಳ್ಳಿ: ವ್ಯಾಪಾರ ಮತ್ತು ಶಿಕ್ಷಣದ ಹಬ್ ಆಗಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕಾನೂನು ಸುವ್ಯವಸ್ಥೆಯೇ ಪ್ರಶ್ನಾರ್ಥಕವಾಗಿದೆ. ಪೊಲೀಸರೇ ಹಣಕ್ಕಾಗಿ ಜನರನ್ನು ಪೀಡಿಸುತ್ತಿದ್ದಾರೆ, ಅಕ್ರಮ ದಂಧೆಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಈ ಕುರಿತು ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಅವಳಿ ನಗರದಲ್ಲಿ ಪೊಲೀಸ ಇಲಾಖೆಯಲ್ಲಿ ಏನೂ ಸರಿಯಿಲ್ಲ. ಕೆಲವರು ರಿಯಲ್ ಎಸ್ಟೇಟ್ ದಂಧೆಗಳಲ್ಲಿ ತೊಡಗಿಸಿಕೊಂಡು, ಅಕ್ರಮ ಚಟುವಟಿಕೆಗಳಿಗೆ ಕೈಜೋಡಿಸುತ್ತಿದ್ದಾರೆ” ಎಂದು ಅವರು ಕಿಡಿಕಾರಿದ್ದಾರೆ.

ಧಾರವಾಡದಲ್ಲಿ ವಿದ್ಯಾರ್ಥಿಯೋರ್ವ ಪೊಲೀಸರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳಿಕ ಆರೋಪಗಳು ಮತ್ತಷ್ಟು ಗಂಭೀರವಾಗಿವೆ. ನ್ಯಾಯ ಕೊಡಿಸಬೇಕಾದವರೇ ಅನ್ಯಾಯದ ದಾರಿಗೆ ಇಳಿದಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಕ್ರಿಕೆಟ್ ಬೆಟ್ಟಿಂಗ್, ಅಕ್ರಮ ಅಕ್ಕಿ ಸಾಗಾಟ ಸೇರಿದಂತೆ ಹಲವು ಕಾನೂನುಬಾಹಿರ ಚಟುವಟಿಕೆಗಳು ಪೊಲೀಸರ ಮೂಗಿನ ನೇರದಲ್ಲಿ ನಡೆಯುತ್ತಿದ್ದರೂ ಕಠಿಣ ಕ್ರಮ ಕಾಣಿಸುತ್ತಿಲ್ಲ ಎಂಬುದು ಮತ್ತೊಂದು ಆರೋಪ.

ಈ ಹಿನ್ನೆಲೆ, ಎಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕು ಎಂದು ಶಾಸಕ ಅಬ್ಬಯ್ಯ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಸಿಎಂ ಅವರನ್ನು ಭೇಟಿಯಾಗಿ ಕೂಡಾ ಈ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.

ತಲೆಸುತ್ತಿ ಬಿದ್ದ ಕ್ಷಣವೇ ದುರಂತ: ಬಾಲಕನ ಮೇಲೆ ಬಸ್ ಹರಿದು ಸಾವು!

ಬೆಂಗಳೂರು: ತಂದೆಗೆ ಔಷಧಿ ತರಲು ಮನೆಯಿಂದ ಹೊರಟಿದ್ದ 11 ವರ್ಷದ ಬಾಲಕನೊಬ್ಬ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿರುವ ಘಟನೆ ಹೆಣ್ಣೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಬಾಲಕನನ್ನು ವರುಣ್ (11) ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ ಸುಮಾರು 9 ಗಂಟೆಗೆ ವರುಣ್ ರಸ್ತೆ ದಾಟಲು ಬ್ಯಾರಿಕೇಡ್ ಬಳಿ ನಿಂತಿದ್ದ ವೇಳೆ, ತಲೆಸುತ್ತಿ ಹಿಂದಕ್ಕೆ ಬಿದ್ದಿದ್ದಾನೆ. ಅದೇ ಸಮಯದಲ್ಲಿ ಹಾದುಹೋಗುತ್ತಿದ್ದ ಖಾಸಗಿ ಬಸ್‌ನ ಹಿಂಬದಿ ಚಕ್ರ ಆತನ ಎದೆಯ ಮೇಲೆ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದೇ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಪ್ರಾಥಮಿಕ ಶಂಕೆಯಂತೆ ಬಿಸಿಲಿನ ತಾಪದಿಂದ ಹೀಟ್‌ಸ್ಟ್ರೋಕ್ ಆಗಿ ತಲೆಸುತ್ತು ಬಂದಿರಬಹುದೆಂದು ಹೇಳಲಾಗುತ್ತಿದೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕ ದೃಶ್ಯ ಸ್ಥಳೀಯರನ್ನು ಕಂಗೆಡಿಸಿದೆ.

ಘಟನೆಗೆ ಸಂಬಂಧಿಸಿದಂತೆ ಹೆಣ್ಣೂರು–ಬಾಗಲೂರು ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ಕಾಮಗಾರಿಯನ್ನೂ ಸ್ಥಳೀಯರು ಕಾರಣವೆಂದು ಆರೋಪಿಸಿದ್ದಾರೆ. ಕಾಮಗಾರಿಯಿಂದಾಗಿ ಸಂಚಾರ ಗೊಂದಲ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಕೂಡ ಅಪಘಾತ ಸಂಭವಿಸಿ ಡೆಲಿವರಿ ಬಾಯ್ ಒಬ್ಬರು ಮೃತಪಟ್ಟಿದ್ದರು ಎಂಬ ಮಾಹಿತಿ ಇದೆ.

ಘಟನೆ ಸಂಬಂಧ ಹೆಣ್ಣೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಮೇಲ್ನೋಟಕ್ಕೆ ಚಾಲಕನ ತಪ್ಪು ಸ್ಪಷ್ಟವಾಗದಿದ್ದರೂ, ಸಾವಿನ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.


ಮಂಟಪದಲ್ಲೇ ಗಂಡನ ಮದುವೆ ನಿಲ್ಲಿಸಿದ ಗರ್ಭಿಣಿ ಪತ್ನಿ: ಮುಂದೇನಾಯ್ತು ಗೊತ್ತಾ?

ದೊಡ್ಡಬಳ್ಳಾಪುರ: ಮನೆಯವರ ಒತ್ತಡಕ್ಕೆ ಮಣಿದು ಮೊದಲ ಪತ್ನಿಗೆ ವಂಚಿಸಿ ಎರಡನೇ ಮದುವೆಗೆ ಮುಂದಾಗಿದ್ದ ವರನ ಮದುವೆಯನ್ನು ಆತನ ಗರ್ಭಿಣಿ ಪತ್ನಿಯೇ ಮಂಟಪಕ್ಕೆ ಬಂದು ತಡೆದ ಘಟನೆ ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.

ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳ ಮೂಲದ ಮಹಿಳೆಯನ್ನು ಪ್ರೀತಿಸಿ ಕುಮಾರ್ ಎಂಬ ಯುವಕ ಒಂದು ವರ್ಷದ ಹಿಂದೆ ಮದುವೆಯಾಗಿದ್ದಾನೆ. ಸದ್ಯ ಆತನ ಮೊದಲ ಪತ್ನಿ ಏಳು ತಿಂಗಳ ಗರ್ಭಿಣಿಯಾಗಿದ್ದಾರೆ. ಆದರೆ ಮನೆಯವರ ಒತ್ತಡಕ್ಕೆ ಮಣಿದ ಕುಮಾರ್, ಮೊದಲ ಮದುವೆಯ ವಿಷಯವನ್ನು ಮರೆಮಾಚಿ ಮತ್ತೊಬ್ಬ ಯುವತಿಯೊಂದಿಗೆ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ಕುರಿತು ತಿಳಿದುಕೊಂಡ ಗರ್ಭಿಣಿ ಪತ್ನಿ, ತಡರಾತ್ರಿ ಕೇರಳದಿಂದ ದೊಡ್ಡಬಳ್ಳಾಪುರಕ್ಕೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ ಮದುವೆ ಶಾಸ್ತ್ರ ಆರಂಭವಾಗುವ ಮುನ್ನವೇ ಅವರು ಕಲ್ಯಾಣ ಮಂಟಪಕ್ಕೆ ಪ್ರವೇಶಿಸಿ, ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿ ಮದುವೆಯನ್ನು ತಡೆದಿದ್ದಾರೆ.

ತಮ್ಮ ಮದುವೆಯ ದಾಖಲೆಗಳು ಹಾಗೂ ಗರ್ಭಿಣಿಯಾಗಿರುವ ವಿಷಯವನ್ನು ತಿಳಿಸಿ ನ್ಯಾಯಕ್ಕಾಗಿ ಅವರು ಆಗ್ರಹಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ಪೊಲೀಸರು ವರ ಕುಮಾರ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಮೊದಲ ಮದುವೆಯ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಹಸೆಮಣೆ ಏರಬೇಕಿದ್ದ ವರ ಈಗ ಪೊಲೀಸ್ ವಶದಲ್ಲಿದ್ದು, ಎರಡನೇ ಮದುವೆಗೆ ಸಿದ್ಧವಾಗಿದ್ದ ಯುವತಿಯ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿ ಏರ್ ಇಂಡಿಯಾ: ಅಂತಾರಾಷ್ಟ್ರೀಯ ವಿಮಾನ ಹಾರಾಟಗಳ ಸಂಖ್ಯೆ ಕಡಿತ!

ನವದೆಹಲಿ: ಏರ್ ಇಂಡಿಯಾ ಸಂಸ್ಥೆ ಜುಲೈವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ.

ವಿಮಾನ ಇಂಧನ ದರ ಏರಿಕೆ ಹಾಗೂ ವಾಯುಪ್ರದೇಶ ನಿರ್ಬಂಧಗಳಿಂದಾಗಿ ಕಾರ್ಯಾಚರಣೆ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ತಿಳಿಸಿದ್ದಾರೆ.

ಸಂಸ್ಥೆ ಈಗಾಗಲೇ ಆರ್ಥಿಕ ನಷ್ಟದಲ್ಲಿದ್ದು, ಹೆಚ್ಚುತ್ತಿರುವ ವೆಚ್ಚದಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆಲ ಅಂತಾರಾಷ್ಟ್ರೀಯ ವಿಮಾನಗಳನ್ನು ಕಡಿತಗೊಳಿಸಲಾಗಿತ್ತು. ಇದೀಗ ಜುಲೈವರೆಗೆ ಹೆಚ್ಚುವರಿ ಸುಮಾರು 100 ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ.

ಈ ಕಡಿತದ ಪರಿಣಾಮವಾಗಿ ಯುರೋಪ್, ಉತ್ತರ ಅಮೆರಿಕಾ, ಆಸ್ಟ್ರೇಲಿಯಾ ಹಾಗೂ ಸಿಂಗಾಪುರ ಮಾರ್ಗಗಳ ವಿಮಾನ ಸೇವೆಗಳಲ್ಲಿ ಇಳಿಕೆ ಆಗಲಿದೆ ಎಂದು ತಿಳಿದುಬಂದಿದೆ. ದಿನನಿತ್ಯ ಸುಮಾರು 1,100 ವಿಮಾನಗಳನ್ನು ನಿರ್ವಹಿಸುತ್ತಿದ್ದ ಸಂಸ್ಥೆ, ಈಗ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಪುನರ್‌ಸಂರಚನೆ ಮಾಡುತ್ತಿದೆ.

ಏರ್ ಇಂಡಿಯಾ 2026ರ ಮಾರ್ಚ್ 31ಕ್ಕೆ ಅಂತ್ಯವಾದ ಹಣಕಾಸು ವರ್ಷದಲ್ಲಿ ಸುಮಾರು 22,000 ಕೋಟಿ ರೂಪಾಯಿಗೂ ಅಧಿಕ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ. ಇಂಧನ ದರ ಏರಿಕೆ ಮತ್ತು ನಿರ್ಬಂಧಗಳ ಕಾರಣ ಸಂಸ್ಥೆ ಇದೀಗ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ತಿಳಿಸಿದೆ.

ಮನೆ ಮುಂದೆ ಗಲಾಟೆ ಆರೋಪ: ನಿರ್ಮಾಪಕ ಸಾ.ರಾ ಗೋವಿಂದ್ ವಿರುದ್ಧ ಎಫ್‌ಐಆರ್‌

ಬೆಂಗಳೂರು: ನಟ ಚೇತನ್ ಅಹಿಂಸಾ ನೀಡಿದ ದೂರಿನ ಆಧಾರದ ಮೇಲೆ ಸಿನಿಮಾ ನಿರ್ಮಾಪಕ ಸಾ.ರಾ ಗೋವಿಂದು ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೆದರಿಕೆ ಹಾಕಿದ ಆರೋಪ ಹಾಗೂ ಮನೆ ಮುಂದೆ ಗಲಾಟೆ ನಡೆಸಿದ ಹಿನ್ನೆಲೆಯಲ್ಲಿ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಾ.ರಾಜ್‌ಕುಮಾರ್ ಸಮಾಧಿ ಜಾಗದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ನಟ ಚೇತನ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರು ಮನೆಗೆ ಬಂದು ಗಲಾಟೆ ನಡೆಸಿದ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ನಟ ಚೇತನ್ ಅಹಿಂಸಾ ಅವರು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ನೀಡಿ, ಸಾ.ರಾ ಗೋವಿಂದು, ಶಿವರಾಮೇಗೌಡ ಹಾಗೂ ಶಿವಕುಮಾರ್ ನಾಯ್ಕ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಚೇತನ್, “ಕಳೆದ ಶನಿವಾರ ಸಾ.ರಾ ಗೋವಿಂದು ಅವರು ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದರು. ಅವರ ವರ್ತನೆ ಗೂಂಡಾಗಿರಿಯಂತಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸಾಕ್ಷ್ಯಾಧಾರಗಳೊಂದಿಗೆ ದೂರು ನೀಡಲಾಗಿದೆ,” ಎಂದು ತಿಳಿಸಿದ್ದಾರೆ.

IPL 2026: CSK ವಿರುದ್ದ ಮುಂಬೈಗೆ ಸೋಲು; IPL ನಿಂದ MI ಭಾಗಶಃ ಔಟ್!

ಐಪಿಎಲ್ 2026 44ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಈ ಆವೃತ್ತಿಯ ಎರಡನೇ ಮುಖಾಮುಖಿಯಲ್ಲೂ ಮುಂಬೈ ತಂಡವನ್ನು ಮಣಿಸಿದ ಸಿಎಸ್‌ಕೆ, ಟೂರ್ನಿಯಲ್ಲಿ ತನ್ನ ನಾಲ್ಕನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ, ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಲೀಗ್ ಹಂತದಲ್ಲೇ ಹೊರ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ಮೇ 2ರಂದು ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 159 ರನ್‌ಗಳಿಗೆ ಸೀಮಿತವಾಯಿತು. ನಮನ್ ಧೀರ್ 57 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ರಯಾನ್ ರಿಕಲ್ಟನ್ 37 ರನ್ ಕೊಡುಗೆ ನೀಡಿದರು. ಆದರೆ ನಾಯಕ ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ನಿರಾಸೆ ಮೂಡಿಸಿದರು.

ಚೆನ್ನೈ ಪರ ಬೌಲಿಂಗ್‌ನಲ್ಲಿ ಅನ್ಶುಲ್ ಕಾಂಬೋಜ್ ಮಿಂಚಿ 4 ಓವರ್‌ಗಳಲ್ಲಿ 32 ರನ್ ನೀಡಿ 3 ವಿಕೆಟ್ ಕಬಳಿಸಿದರು. ನೂರ್ ಅಹ್ಮದ್ 2 ವಿಕೆಟ್ ಪಡೆದುಕೊಂಡರೆ, ಜೇಮೀ ಓವರ್ಟನ್ ಕೂಡ ಉತ್ತಮ ಬೆಂಬಲ ನೀಡಿದರು.

159 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಆರಂಭದಲ್ಲೇ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡರೂ, ನಾಯಕ ರುತುರಾಜ್ ಗಾಯಕ್ವಾಡ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಉರ್ವಿಲ್ ಪಟೇಲ್ ಜೊತೆಗೂಡಿ 49 ರನ್‌ಗಳ ಜೊತೆಯಾಟ ಕಟ್ಟಿದ ಅವರು, ಬಳಿಕ ಕಾರ್ತಿಕ್ ಶರ್ಮಾ ಜೊತೆಗೂಡಿ 98 ರನ್‌ಗಳ ಅಮೂಲ್ಯ ಪಾಲುದಾರಿಕೆ ನಿರ್ಮಿಸಿದರು.

ಈ ನಡುವೆ ರುತುರಾಜ್ ಗಾಯಕ್ವಾಡ್ ಸತತ ಎರಡನೇ ಅರ್ಧಶತಕ ಪೂರೈಸಿದರೆ, ಕಾರ್ತಿಕ್ ಶರ್ಮಾ ತಮ್ಮ ಮೊದಲ ಐಪಿಎಲ್ ಅರ್ಧಶತಕ ದಾಖಲಿಸಿದರು. ಇವರ ದಿಟ್ಟ ಆಟದ ನೆರವಿನಿಂದ ಚೆನ್ನೈ ತಂಡ 18.1 ಓವರ್‌ಗಳಲ್ಲಿ ಗುರಿ ತಲುಪಿ ಸುಲಭ ಜಯ ಸಾಧಿಸಿತು.