Home Blog Page 3

ಕರಾವಳಿಯಲ್ಲಿ ಮತ್ತೆ ಗುಂಡಿನ ಸದ್ದು; ಕಾಂಗ್ರೆಸ್ ಮುಖಂಡ ಡೇವಿಡ್ ಡಿಸೋಜಾ ಗುಂಡಿಕ್ಕಿ ಹತ್ಯೆ !

0

ಉಡುಪಿ: ಕರಾವಳಿ ಭಾಗದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದ್ದು, ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಈ ಘಟನೆ ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಡೇವಿಡ್ ಡಿಸೋಜಾ ಅವರು ಮುದರಂಗಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿದ್ದರು.

ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಹಂತಕರಿಗಾಗಿ ಪೊಲೀಸರ ಹುಡುಕಾಟ:

ಡೇವಿಡ್ ಡಿಸೋಜಾ ಅವರ ಹತ್ಯೆಯ ಹಿಂದೆ ವೈಯಕ್ತಿಕ ದ್ವೇಷ, ಹಣಕಾಸಿನ ವ್ಯವಹಾರ ಸೇರಿದಂತೆ ಹಲವು ಕಾರಣಗಳಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಉಡುಪಿಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು ಮತ್ತೊಂದು ಶೂಟೌಟ್:

ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಮತ್ತೊಂದು ಗುಂಡಿನ ದಾಳಿ ಪ್ರಕರಣ ನಡೆದಿತ್ತು.

ಕುಂದಾಪುರದ ಹೋಲಿ ರೋಜಾರಿಯೋ ಚರ್ಚ್ ರಸ್ತೆಯಲ್ಲಿ ಉದ್ಯಮಿ ಐವನ್ ರೀಚರ್ಡ್ ಮಸ್ಕರೇನಸ್ (45) ಅವರನ್ನು ಡೆರಿಕ್ ಎಂಬಾತ ನಾಡಪಿಸ್ತೂಲಿನಿಂದ ಗುಂಡಿಕ್ಕಿ ಕೊಲೆ ಮಾಡಿದ್ದ.

ಐವನ್ ಅವರು 27 ಲಕ್ಷ ರೂಪಾಯಿ ಹಣ ವಸೂಲಿ ಮಾಡಿಕೊಟ್ಟಿದ್ದರು. ಆದರೆ ಅವರಿಗೆ ನೀಡಬೇಕಿದ್ದ 1.5 ಲಕ್ಷ ರೂಪಾಯಿ ಬಾಕಿ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಇದೇ ವಿಚಾರ ಕೊಲೆಯಲ್ಲಿ ಅಂತ್ಯವಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.

ಈ ಪ್ರಕರಣದ ಆರೋಪಿ ಡೆರಿಕ್ ಪತ್ತೆಗಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ.

ಕರಾವಳಿಯಲ್ಲಿ ಆತಂಕ:

ಉಡುಪಿ ಜಿಲ್ಲೆಯಲ್ಲಿ ಪದೇಪದೇ ನಡೆಯುತ್ತಿರುವ ಗುಂಡಿನ ದಾಳಿ ಘಟನೆಗಳು ಜನರಲ್ಲಿ ಆತಂಕ ಮೂಡಿಸಿವೆ. ಇದೀಗ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಶಿವಾನಂದ ನೀಲಣ್ಣನವರ್ ನಿವಾಸಗಳ ಮೇಲೆ ED ದಾಳಿ

ಬೆಳಗಾವಿ: ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಶಿವಂ ಅಸೋಸಿಯೇಟ್ಸ್ ಕಂಪನಿ ಮಾಲೀಕ ಶಿವಾನಂದ ನೀಲಣ್ಣನವರ್ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ.

40 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಗೆ ವಂಚನೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಬೆಳಗಾವಿಯ ಮೂರು ಪ್ರಮುಖ ಸ್ಥಳಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

ಮಂಗಳೂರು ಹಾಗೂ ಗೋವಾದಿಂದ ಆಗಮಿಸಿದ ಇಡಿ ಅಧಿಕಾರಿಗಳ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಶಿವಾನಂದ ನೀಲಣ್ಣನವರ್ ಅವರಿಗೆ ಸೇರಿದ ಬೆಳಗಾವಿಯ ಶಿವಬಸವನಗರದಲ್ಲಿರುವ ಎಂ.ಎಸ್. ಟವರ್ ಅಪಾರ್ಟ್‌ಮೆಂಟ್, ಬಡಕುಂದ್ರಿ ಗ್ರಾಮದ ನಿವಾಸ ಹಾಗೂ ಚಿಕ್ಕೋಡಿ ಪಟ್ಟಣದಲ್ಲಿರುವ ಅವರ ವ್ಯವಹಾರ ಪಾಲುದಾರ ಸುಭಾಷ್ ನಂದರಗಿ ಅವರ ಮನೆ ಮೇಲೆ ಶೋಧ ನಡೆಸಲಾಗಿದೆ.

ದಾಳಿ ವೇಳೆ ಇಡಿ ಅಧಿಕಾರಿಗಳು ಶಿವಾನಂದ ನೀಲಣ್ಣನವರ್ ಹಾಗೂ ಅವರ ಪತ್ನಿ ಸಂಗೀತಾ ಅವರನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

2,400 ಕೋಟಿ ಸಂಗ್ರಹ ಆರೋಪ:

ಬೆಳಗಾವಿಯಲ್ಲಿ ಶಿವಂ ಅಸೋಸಿಯೇಟ್ಸ್ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ಆರೋಪ ಕೇಳಿಬಂದಿತ್ತು. ಬಳಿಕ ಮೇ 15ರಂದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಂಪನಿ ಕಚೇರಿ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿತ್ತು.

ಅಕ್ರಮವಾಗಿ ಠೇವಣಿ ಸಂಗ್ರಹ ಹಾಗೂ ಹೆಚ್ಚಿನ ಲಾಭದ ಆಮಿಷವೊಡ್ಡಿ ಹಣ ಸಂಗ್ರಹಿಸಿದ ಆರೋಪದಡಿ ಶಿವಾನಂದ ನೀಲಣ್ಣನವರ್ ಅವರನ್ನು ಬಂಧಿಸಲಾಗಿತ್ತು. ತನಿಖೆ ವೇಳೆ ಸುಮಾರು ₹2,400 ಕೋಟಿ ಹಣವನ್ನು 40,700ಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಿರುವುದು ಬೆಳಕಿಗೆ ಬಂದಿತ್ತು.

ಈ ಹಣದಲ್ಲಿ ಸುಮಾರು ₹540 ಕೋಟಿಯನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದ್ದು, ಅದರಲ್ಲಿ ಸುಮಾರು ₹170 ಕೋಟಿ ನಷ್ಟವಾಗಿದೆ ಎಂದು ಸಿಐಡಿ ತನಿಖೆಯಲ್ಲಿ ಮಾಹಿತಿ ನೀಡಲಾಗಿತ್ತು.

ಸಿಐಡಿ ಬಳಿಕ ED ತನಿಖೆ:

ಪ್ರಕರಣದ ತನಿಖೆಯನ್ನು ಬಳಿಕ ಸಿಐಡಿಗೆ ವಹಿಸಲಾಗಿತ್ತು. ಬಂಧನಕ್ಕೊಳಗಾಗಿದ್ದ ಶಿವಾನಂದ ನೀಲಣ್ಣನವರ್ ಪ್ರಸ್ತುತ ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಇದೀಗ ಹಣಕಾಸು ಅಕ್ರಮ ವ್ಯವಹಾರಗಳ ಜಾಡು ಹಿಡಿದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ದಾಖಲೆಗಳು ಹಾಗೂ ಹಣಕಾಸು ವ್ಯವಹಾರಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನಿಂದ ಕೊಯಿಕ್ಕೋಡ್‌ಗೆ KSRTC ಫ್ಲೈ ಬಸ್ ಸೇವೆ ಆರಂಭ; ಆಗಸ್ಟ್ 15ರಿಂದ ಸಂಚಾರ!

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಬೆಂಗಳೂರಿನಿಂದ ಕೇರಳದ ಕೊಯಿಕ್ಕೋಡ್‌ಗೆ ಸಂಪರ್ಕ ಕಲ್ಪಿಸುವ ನೂತನ ಫ್ಲೈ ಬಸ್ ಸೇವೆ ಆರಂಭಿಸಲಾಗುತ್ತಿದೆ. ಆಗಸ್ಟ್ 15ರಿಂದ ಈ ಬಸ್ ಸಂಚಾರ ಆರಂಭವಾಗಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 10.45ಕ್ಕೆ ಹೊರಡುವ ಬಸ್, ಯಲಹಂಕ, ಹೆಬ್ಬಾಳ ಹಾಗೂ ನಾಯಂಡಳ್ಳಿ ಮೆಟ್ರೋ ನಿಲ್ದಾಣದ ಮೂಲಕ ಮೈಸೂರು, ಹುಣಸೂರು, ಗೋಣಿಕೊಪ್ಪ, ಪೊನ್ನಂಪೇಟೆ, ಕುಟ್ಟಾ, ಮಾನಂತವಾಡಿ ಹಾಗೂ ಕಲ್ಪೆಟ್ಟಾ ಮಾರ್ಗವಾಗಿ ಕೊಯಿಕ್ಕೋಡ್ ತಲುಪಲಿದೆ.

ಬೆಂಗಳೂರು ಏರ್‌ಪೋರ್ಟ್‌ನಿಂದ ಹೊರಡುವ ಬಸ್ ಬೆಳಗ್ಗೆ 7.15ಕ್ಕೆ ಕೊಯಿಕ್ಕೋಡ್ ತಲುಪಲಿದೆ. ಕೊಯಿಕ್ಕೋಡ್‌ನಿಂದ ಸಂಜೆ 7.30ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 4.15ಕ್ಕೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

ಪ್ರಯಾಣದ ಸಮಯ:

ಬೆಂಗಳೂರು ಏರ್‌ಪೋರ್ಟ್‌ನಿಂದ ರಾತ್ರಿ 10.45ಕ್ಕೆ ಹೊರಡುವ ಬಸ್, ನಾಯಂಡಳ್ಳಿ ಮೆಟ್ರೋ ನಿಲ್ದಾಣಕ್ಕೆ ರಾತ್ರಿ 11.55ಕ್ಕೆ, ಮೈಸೂರಿಗೆ ಬೆಳಗಿನ ಜಾವ 2.45ಕ್ಕೆ, ಗೋಣಿಕೊಪ್ಪಕ್ಕೆ 4.15ಕ್ಕೆ, ಮಾನಂತವಾಡಿಗೆ 5.20ಕ್ಕೆ, ಕಲ್ಪೆಟ್ಟಾಗೆ ಬೆಳಗ್ಗೆ 6ಕ್ಕೆ ಹಾಗೂ ಕೊಯಿಕ್ಕೋಡ್‌ಗೆ 7.15ಕ್ಕೆ ತಲುಪಲಿದೆ.

ಕೊಯಿಕ್ಕೋಡ್‌ನಿಂದ ಸಂಜೆ 7.30ಕ್ಕೆ ಹೊರಡುವ ಬಸ್, ಕಲ್ಪೆಟ್ಟಾಗೆ 8.40ಕ್ಕೆ, ಮಾನಂತವಾಡಿಗೆ 9.15ಕ್ಕೆ, ಗೋಣಿಕೊಪ್ಪಕ್ಕೆ 10.50ಕ್ಕೆ, ಮೈಸೂರಿಗೆ ರಾತ್ರಿ 12.30ಕ್ಕೆ, ನಾಯಂಡಳ್ಳಿ ಮೆಟ್ರೋ ನಿಲ್ದಾಣಕ್ಕೆ 3.15ಕ್ಕೆ ಹಾಗೂ ಬೆಂಗಳೂರು ಏರ್‌ಪೋರ್ಟ್‌ಗೆ ಬೆಳಗ್ಗೆ 4.15ಕ್ಕೆ ತಲುಪಲಿದೆ.

ಟಿಕೆಟ್ ದರ ಎಷ್ಟು?

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ₹960, ಗೋಣಿಕೊಪ್ಪಕ್ಕೆ ₹1,200, ಮಾನಂತವಾಡಿಗೆ ₹1,350, ಕಲ್ಪೆಟ್ಟಾಗೆ ₹1,400 ಹಾಗೂ ಕೊಯಿಕ್ಕೋಡ್‌ಗೆ ₹1,500 ಟಿಕೆಟ್ ದರ ನಿಗದಿಪಡಿಸಲಾಗಿದೆ.

ಹೊಸ ಫ್ಲೈ ಬಸ್ ಸೇವೆಯಿಂದ ಬೆಂಗಳೂರು, ಮೈಸೂರು ಹಾಗೂ ಕೊಡಗು ಮಾರ್ಗವಾಗಿ ಕೇರಳದ ಕೊಯಿಕ್ಕೋಡ್‌ಗೆ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.

RTO ಕಚೇರಿಗೆ ಉಪಲೋಕಾಯುಕ್ತರ ದಿಢೀರ್ ಭೇಟಿ; ಸಿಬ್ಬಂದಿಗೆ ಖಡಕ್ ಎಚ್ಚರಿಕೆ

0

ಗದಗ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ, ಕಚೇರಿ ನಿರ್ವಹಣೆ, ದಾಖಲೆಗಳ ನಿರ್ವಹಣೆ ಹಾಗೂ ಸಾರ್ವಜನಿಕ ಸೇವೆಯ ಕುರಿತು ಸಮಗ್ರ ಪರಿಶೀಲನೆ ನಡೆಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

ಕಚೇರಿಯ ವಿವಿಧ ರಿಜಿಸ್ಟರ್‌ಗಳನ್ನು ಪರಿಶೀಲಿಸಿದ ಅವರು, ಜಪ್ತಿ ಮಾಡಿದ ವಾಹನಗಳು, ಶಾಲಾ ವಾಹನಗಳು ಹಾಗೂ ತೆರಿಗೆ ಬಾಕಿ ಇರುವ ವಾಹನಗಳ ವಿವರಗಳನ್ನು ಪರಿಶೀಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಗತ್ಯ ದಾಖಲೆಗಳಿಲ್ಲದೆ ಹಾಗೂ ತೆರಿಗೆ ಪಾವತಿಸದೆ ಸಂಚರಿಸುವ ಶಾಲಾ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುವಂತೆ ನಿರ್ದೇಶನ ನೀಡಿದರು.

ಬಳಿಕ ಸಿಬ್ಬಂದಿಯ ಹಾಜರಾತಿ, ನಗದು ವಹಿ ಹಾಗೂ ಚಲನ-ವಲನ ವಹಿಗಳನ್ನು ಪರಿಶೀಲಿಸಿದ ಅವರು, ವಹಿಗಳನ್ನು ಸಮರ್ಪಕವಾಗಿ ನಿರ್ವಹಿಸದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಿಯಮಿತವಾಗಿ ದಾಖಲೆಗಳನ್ನು ನಮೂದಿಸದ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದ ಅವರು, ಎಲ್ಲ ಸಿಬ್ಬಂದಿಯ ಮೊಬೈಲ್‌ಗಳನ್ನು ಪರಿಶೀಲಿಸುವಂತೆ ಆದೇಶಿಸಿದರು.

ಪ್ರತಿ ಸಿಬ್ಬಂದಿಯೂ ಪ್ರತಿದಿನ ಕಡ್ಡಾಯವಾಗಿ ಹಾಜರಾತಿ, ನಗದು ವಹಿ ಹಾಗೂ ಚಲನ-ವಲನ ವಹಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಅಧಿಕಾರಿಗಳು ಸಹ ಈ ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.

ಆನ್‌ಲೈನ್ ಸೇವೆಗಳಿದ್ದರೂ ಮಧ್ಯವರ್ತಿಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದಿವೆ. ಇಂತಹ ಅಕ್ರಮಗಳು ಮರುಕಳಿಸಿದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಉಪಲೋಕಾಯುಕ್ತರು ಖಡಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಸುನೀಲಕುಮಾರ್ ಆರ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ.ಪಿ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

“ಸರ್ಕಾರಿ ಸೇವೆಗಳು ಪಾರದರ್ಶಕವಾಗಿ ಜನರಿಗೆ ತಲುಪಬೇಕು. ಆನ್‌ಲೈನ್ ವ್ಯವಸ್ಥೆಯಲ್ಲೂ ಮಧ್ಯವರ್ತಿಗಳ ಹಾವಳಿ ಕಂಡುಬಂದರೆ ಕಠಿಣ ಶಿಸ್ತು ಕ್ರಮ ಅನಿವಾರ್ಯ ಎಂದು ನ್ಯಾಯಮೂರ್ತಿಗಳು ಹಾಗೂ ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹೇಳಿದರು.

ಪುತ್ರಿಗಾಗಿ ನಾನು ಸಚಿವ ಸ್ಥಾನ ಬಿಡುತ್ತೇನೆ ಎಂಬ ವದಂತಿ ಸುಳ್ಳು: ಎಲ್ಲ ಗೊಂದಲಗಳಿಗೆ ತೆರೆ ಎಳೆದ ಕೆ.ಹೆಚ್. ಮುನಿಯಪ್ಪ!

ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆಯ ಬಳಿಕ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಗಳು ಜೋರಾಗಿರುವ ನಡುವೆಯೇ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಮ್ಮ ಪುತ್ರಿ ಹಾಗೂ ಕೆಜಿಎಫ್ ಶಾಸಕಿಯಾದ ರೂಪಕಲಾ ಶಶಿಧರ್ ಅವರಿಗೆ ಸಚಿವ ಸ್ಥಾನ ಕಲ್ಪಿಸಲು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿಯನ್ನು ಅವರ ಕಚೇರಿ ಸ್ಪಷ್ಟವಾಗಿ ತಳ್ಳಿಹಾಕಿದೆ.

ಈ ಕುರಿತು ಸಚಿವ ಕೆ.ಎಚ್. ಮುನಿಯಪ್ಪ ಅವರ ಕಚೇರಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕೆಲವು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ “ರೂಪಕಲಾ ಶಶಿಧರ್ ಅವರಿಗೆ ಸಚಿವ ಸ್ಥಾನ ನೀಡಲು ಮುನಿಯಪ್ಪ ಸಚಿವ ಸ್ಥಾನ ತ್ಯಜಿಸಲಿದ್ದಾರೆ” ಎಂಬ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟಪಡಿಸಿದೆ.

ಪ್ರಕಟಣೆಯಲ್ಲಿ, ಕೆ.ಎಚ್. ಮುನಿಯಪ್ಪ ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ ಹಿರಿಯ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇಂದಿರಾ ಗಾಂಧಿಯವರ ಕಾಲದಿಂದಲೂ ಪಕ್ಷವನ್ನು ಸಂಘಟಿಸುವಲ್ಲಿ ಮಹತ್ವದ ಪಾತ್ರವಹಿಸಿರುವ ಅವರು, ಕುಟುಂಬ ಸಮೇತ ಕಾಂಗ್ರೆಸ್ ಸಿದ್ಧಾಂತಗಳಿಗೆ ಬದ್ಧರಾಗಿದ್ದಾರೆ ಎಂದು ಹೇಳಲಾಗಿದೆ.

ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಮುನಿಯಪ್ಪ, ಕೇಂದ್ರದಲ್ಲಿ ಮೂರು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಶಂಕರಾನಂದ ಹಾಗೂ ಜಾಫರ್ ಶರೀಫ್ ನಂತರ ಅತ್ಯಧಿಕ ಬಾರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ನಾಯಕರಲ್ಲಿ ಅವರೂ ಒಬ್ಬರು ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಆಹಾರ ಇಲಾಖೆಯ ಸಚಿವರಾಗಿರುವ ಮುನಿಯಪ್ಪ, ಪರಿಶಿಷ್ಟ ಜಾತಿ ಸಮುದಾಯದ ಅಭಿವೃದ್ಧಿಯ ದೃಷ್ಟಿಯಿಂದ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡುವಂತೆ ಕಾಂಗ್ರೆಸ್ ನಾಯಕತ್ವದ ಗಮನಕ್ಕೆ ಮನವಿ ಮಾಡಿರುವುದಾಗಿ ಪ್ರಕಟಣೆ ತಿಳಿಸಿದೆ. ಈ ಕುರಿತು ಪಕ್ಷದ ವರಿಷ್ಠರಿಂದ ಸಕಾರಾತ್ಮಕ ಸ್ಪಂದನೆ ದೊರೆಯುವ ನಿರೀಕ್ಷೆಯಿದೆ ಎಂದೂ ಹೇಳಲಾಗಿದೆ.

ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಯಾವುದೇ ವಾಸ್ತವಿಕತೆ ಇಲ್ಲ. ಪರಿಶೀಲಿಸದ ಮಾಹಿತಿಯನ್ನು ನಂಬಬಾರದು ಎಂದು ಸಚಿವರ ಕಚೇರಿ ಸಾರ್ವಜನಿಕರು ಹಾಗೂ ಮಾಧ್ಯಮಗಳಿಗೆ ಮನವಿ ಮಾಡಿದೆ.

ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣದ ವದಂತಿಗೆ ಅಧಿಕೃತ ತೆರೆ: ₹3,300 ಕೋಟಿ ಹಣಕಾಸಿನ ಲೆಕ್ಕಪತ್ರ ಸಂಪೂರ್ಣ ಪಕ್ಕಾ ಎಂದ ಟ್ರಸ್ಟ್!

0

ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ₹3,300 ಕೋಟಿ ದೇಣಿಗೆ ಹಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಕ್ರಮ ಅಥವಾ ಹಗರಣ ನಡೆದಿದೆ ಎಂಬ ಆರೋಪಗಳು ಆಧಾರರಹಿತವಾಗಿವೆ ಎಂದು ಸರ್ಕಾರಿ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಭಕ್ತರು ನೀಡಿರುವ ₹3,300 ಕೋಟಿ ದೇಣಿಗೆಯ ಪ್ರತಿಯೊಂದು ರೂಪಾಯಿಯೂ ಸುರಕ್ಷಿತವಾಗಿದ್ದು, ಸಂಪೂರ್ಣ ಲೆಕ್ಕಪರಿಶೋಧನೆಗೆ ಒಳಪಟ್ಟಿದೆ. ಟ್ರಸ್ಟ್‌ನ ಆಡಳಿತದಲ್ಲಿ ಯಾವುದೇ ರೀತಿಯ ಹಣಕಾಸು ಅಕ್ರಮ ನಡೆದಿಲ್ಲ. ಇತ್ತೀಚೆಗೆ ಬೆಳಕಿಗೆ ಬಂದಿರುವುದು ಹುಂಡಿಯಲ್ಲಿನ ನಗದು ಎಣಿಕೆ ವೇಳೆ ನಡೆದ ಪ್ರತ್ಯೇಕ ಕಳ್ಳತನದ ಪ್ರಕರಣ ಮಾತ್ರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಾರ್ವಜನಿಕರಿಂದ ಬಂದಿರುವ ₹3,300 ಕೋಟಿ ದೇಣಿಗೆಯನ್ನು ಸ್ವತಂತ್ರ ಬಾಹ್ಯ ಲೆಕ್ಕಪರಿಶೋಧನಾ ಸಂಸ್ಥೆಯಾದ ‘ವಿ. ಶಂಕರ್ ಅಯ್ಯರ್ ಆ್ಯಂಡ್ ಕಂಪನಿ’ ಪರಿಶೀಲಿಸಿದೆ.

ಟ್ರಸ್ಟ್‌ ಮಾಹಿತಿ ಪ್ರಕಾರ, ರಾಮ ಮಂದಿರ ನಿರ್ಮಾಣಕ್ಕಾಗಿ ಸುಮಾರು ₹1,800 ಕೋಟಿ ಹಾಗೂ ಭೂ ಖರೀದಿಗೆ ಸುಮಾರು ₹400 ಕೋಟಿ ವೆಚ್ಚ ಮಾಡಲಾಗಿದೆ. ಎಲ್ಲಾ ಹಣಕಾಸು ವ್ಯವಹಾರಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕವೇ ನಡೆಸಲಾಗಿದ್ದು, ಯಾವುದೇ ನಗದು ವಹಿವಾಟು ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಂಡಿಯಿಂದ ಸಂಗ್ರಹಿಸಿದ ಹಣವನ್ನು ಯಂತ್ರಗಳ ಮೂಲಕ ಎಣಿಕೆ ಮಾಡುವ ಮೊದಲು ಕೈಯಿಂದ ಬೇರ್ಪಡಿಸುವ ಪ್ರಕ್ರಿಯೆ ವೇಳೆ ಕಳ್ಳತನ ನಡೆದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೇಮಿಸಿದ್ದ ‘ಸೈನಿಕ್ ಸೆಕ್ಯುರಿಟಿ ಸರ್ವೀಸಸ್’ (SSS) ಸಂಸ್ಥೆಯ ಆರು ಹೊರಗುತ್ತಿಗೆ ಸಿಬ್ಬಂದಿ ಈ ಕಳ್ಳತನದಲ್ಲಿ ಭಾಗಿಯಾಗಿರುವುದು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪತ್ತೆಯಾಗಿದೆ.

ಆರೋಪಿಗಳನ್ನು ತಕ್ಷಣವೇ ಬಂಧಿಸಲಾಗಿದ್ದು, ಬಂಧಿತರಲ್ಲಿ ಯಾರೂ ರಾಮ ಮಂದಿರ ಟ್ರಸ್ಟ್ ಅಥವಾ ದೇವಸ್ಥಾನದ ಆಡಳಿತದ ನೇರ ಸಿಬ್ಬಂದಿಯಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಕಳ್ಳತನದ ಪ್ರಕರಣದ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ದೇವಸ್ಥಾನದ ಸುತ್ತಮುತ್ತಲಿನ ಭೂ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳನ್ನೂ ಸರ್ಕಾರ ತಳ್ಳಿಹಾಕಿದೆ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ಭೂಮಿಯ ಬೆಲೆ ಗಣನೀಯವಾಗಿ ಏರಿಕೆಯಾದ ಕಾರಣ ಹಾಗೂ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಪರಿಹಾರ ನೀಡಬೇಕಾದ ಹಿನ್ನೆಲೆಯಲ್ಲಿ ವೆಚ್ಚ ಹೆಚ್ಚಾಗಿದೆ. ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳ್ಳತನದ ಘಟನೆ ಬಹಿರಂಗವಾದ ಬಳಿಕವೂ ಅಯೋಧ್ಯೆ ರಾಮ ಮಂದಿರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹಾಗೂ ದೇಣಿಗೆಯ ಪ್ರಮಾಣದಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ.

2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಹುಂಡಿ ದೇಣಿಗೆಯ ಮೂಲಕವೇ ಪ್ರತಿ ತಿಂಗಳು ಸರಾಸರಿ ₹5 ಕೋಟಿ ನಗದು ಸಂಗ್ರಹವಾಗುತ್ತಿದೆ ಎಂದು ಮಾಹಿತಿ ನೀಡಲಾಗಿದೆ.

ಇಂತಹ ಘಟನೆಗಳು ಮರುಕಳಿಸದಂತೆ ಹುಂಡಿ ಹಣ ಎಣಿಕೆ ಕೇಂದ್ರಗಳಲ್ಲಿ ಡಿಜಿಟಲ್ ಸ್ಕ್ಯಾನಿಂಗ್ ವ್ಯವಸ್ಥೆ ಹಾಗೂ ಹೆಚ್ಚುವರಿ ಬಯೋಮೆಟ್ರಿಕ್ ಭದ್ರತಾ ಕ್ರಮಗಳನ್ನು ಜಾರಿಗೆ ತರಲು ಎಸ್‌ಬಿಐ ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜಂಟಿಯಾಗಿ ನಿರ್ಧರಿಸಿವೆ.

ಸಚಿವ ಕೆ.ಜೆ. ಜಾರ್ಜ್ ಬೆಂಗಾವಲು ವಾಹನ ಅಪಘಾತ: ಗೇಟ್ʼಗೆ ಪೊಲೀಸ್ ಜೀಪ್ ಡಿಕ್ಕಿ – ತಪ್ಪಿದ ಅನಾಹುತ

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬರ ಪರಿಸ್ಥಿತಿ ಪರಿಶೀಲನೆಗಾಗಿ ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗಕ್ಕೆ ಸಚಿವ ಕೆ.ಜೆ. ಜಾರ್ಜ್ ಭೇಟಿ ನೀಡಿದ್ದರು. ಈ ವೇಳೆ ಅಜ್ಜಂಪುರದ ಅಮೃತ ಮಹಲ್ ತಳಿ ಸಂವರ್ಧನ ಕೇಂದ್ರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಸಚಿವರ ವಾಹನದ ಮುಂಭಾಗದಲ್ಲಿ ಸಾಗುತ್ತಿದ್ದ ಪೊಲೀಸ್ ಜೀಪ್ ತಿರುವಿನ ಬಳಿ ಬ್ರೇಕ್ ಹಾಕುವ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮ ಜೀಪ್ ನೇರವಾಗಿ ಅಮೃತ ಮಹಲ್ ತಳಿ ಸಂವರ್ಧನ ಕೇಂದ್ರದ ಪ್ರವೇಶ ದ್ವಾರದ ಗೇಟ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಆದರೆ ಪೊಲೀಸ್ ಜೀಪ್‌ನ ಮುಂಭಾಗಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತದ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ತಮಿಳು ಸಿಎಂ ವಿಜಯ್ ದಾಂಪತ್ಯಕ್ಕೆ ಹೊಸ ತಿರುವು: ಪತ್ನಿ ಸಂಗೀತ ವಿಚ್ಛೇದನ ಅರ್ಜಿ ವಾಪಸ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರ ದಾಂಪತ್ಯ ವಿವಾದಕ್ಕೆ ಮಹತ್ವದ ತಿರುವು ಸಿಕ್ಕಿದೆ. ಅವರ ಪತ್ನಿ ಸಂಗೀತ, ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ. ಇದರಿಂದ ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದ ಕಾನೂನು ಹೋರಾಟಕ್ಕೆ ತೆರೆ ಬಿದ್ದಿದೆ.

ಫೆಬ್ರವರಿಯಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ದಾಂಪತ್ಯ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿದ್ದ ಸಂಗೀತ, ಜೀವನಾಂಶ ಮತ್ತು ದಂಪತಿಯ ಜಂಟಿ ನಿವಾಸದಲ್ಲಿ ವಾಸಿಸಲು ಅನುಮತಿ ಕೋರಿದ್ದರು. ಆದರೆ ವಿಚಾರಣೆ ಪದೇಪದೆ ಮುಂದೂಡಿಕೆಯಾಗುತ್ತಲೇ ಬಂದಿತ್ತು.

ಪ್ರಕರಣದ ಯಾವುದೇ ವಿಚಾರಣೆಯಲ್ಲೂ ವಿಜಯ್ ಹಾಗೂ ಸಂಗೀತ ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರ ಪರ ವಕೀಲರು ಮಾತ್ರ ಹಾಜರಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತಿದ್ದರು. ಆಗಸ್ಟ್ 7ರಂದು ನಿಗದಿಯಾಗಿದ್ದ ವಿಚಾರಣೆಗೆ ಮುನ್ನವೇ ಸಂಗೀತ ಅರ್ಜಿ ಹಿಂಪಡೆದಿರುವುದರಿಂದ ಪ್ರಕರಣದ ಮುಂದಿನ ವಿಚಾರಣೆಯ ಅಗತ್ಯವೇ ಉಳಿದಿಲ್ಲ.

ವಿಚ್ಛೇದನ ಅರ್ಜಿ ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ವಿಜಯ್–ಸಂಗೀತ ದಾಂಪತ್ಯ ವಿವಾದದ ಕಾನೂನು ಅಧ್ಯಾಯ ಸದ್ಯಕ್ಕೆ ಅಂತ್ಯಗೊಂಡಿದ್ದು, ಈ ಬೆಳವಣಿಗೆ ತಮಿಳುನಾಡಿನ ರಾಜಕೀಯ ಹಾಗೂ ಚಿತ್ರರಂಗದಲ್ಲೂ ಸಾಕಷ್ಟು ಗಮನ ಸೆಳೆದಿದೆ.

ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಬ್ರೇಕ್ ಹಾಕಿ: ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸಲಹೆ!

0

ನವದೆಹಲಿ: ರಾಷ್ಟ್ರ ರಾಜಧಾನಿಯ ಪ್ರಮುಖ ಪ್ರತಿಭಟನಾ ಸ್ಥಳವಾಗಿರುವ ಜಂತರ್ ಮಂತರ್ ಅನ್ನು ಪ್ರತಿಭಟನೆಗಳಿಗೆ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ಬಗ್ಗೆ ಏಕೆ ಪರಿಶೀಲಿಸುತ್ತಿಲ್ಲ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಪ್ರತಿಭಟನೆಗಳ ಹೆಸರಿನಲ್ಲಿ ನಗರದ ಜನಜೀವನವನ್ನು ವಿನಾಕಾರಣ ಅಸ್ತವ್ಯಸ್ತಗೊಳಿಸುವುದು ಸರಿಯಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರು, “ಇಂತಹ ಪ್ರತಿಭಟನೆಗಳು ನಗರದ ಒಳಭಾಗದಲ್ಲಿ ನಡೆಯಬಾರದು ಎಂಬುದು ನನ್ನ ಅಭಿಪ್ರಾಯ. ಆದರೆ ಇದು ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಪ್ರತಿಭಟನೆಗಳಿಂದ ಇಡೀ ನಗರವನ್ನು ಒತ್ತೆಯಾಳಾಗಿ ಇಡುವುದು ಎಷ್ಟು ಸಮಂಜಸ?” ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರನ್ನು ಪ್ರಶ್ನಿಸಿದರು.

ಅಂಬುಲೆನ್ಸ್ ಸಂಚಾರ ಸೇರಿದಂತೆ ನಗರದ ದೈನಂದಿನ ಚಟುವಟಿಕೆಗಳಿಗೆ ಪ್ರತಿಭಟನೆಗಳಿಂದ ಅಡ್ಡಿಯಾಗುತ್ತಿದೆ ಎಂದು ತಿಳಿಸಿದ ನ್ಯಾಯಮೂರ್ತಿಗಳು, ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವಾಗಿ ಮುಂದುವರಿಸುವ ಬಗ್ಗೆ ಮರುಪರಿಶೀಲಿಸುವಂತೆ ಸೂಚಿಸಿದರು.

ಆಲ್ ಇಂಡಿಯಾ ದಲಿತ ಕ್ರಿಶ್ಚಿಯನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಘೋಷ್, ತಮ್ಮ ಸಂಘಟನೆ ಕೇವಲ 75 ಜನರೊಂದಿಗೆ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಜುಲೈನಲ್ಲಿ ಅರ್ಜಿ ಸಲ್ಲಿಸಿದ್ದರೂ ದೆಹಲಿ ಪೊಲೀಸರು ಈವರೆಗೆ ಅನುಮತಿ ನೀಡಿಲ್ಲ ಅಥವಾ ಅರ್ಜಿಯನ್ನು ತಿರಸ್ಕರಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಶಾಹೀನ್ ಬಾಗ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ಅವರು, ಶಾಂತಿಯುತ ಪ್ರತಿಭಟನೆ ನಡೆಸುವುದು ಸಂವಿಧಾನ ನೀಡಿರುವ ಹಕ್ಕು ಎಂದು ವಾದಿಸಿದರು.

ಎಎಸ್‌ಜಿ ಚೇತನ್ ಶರ್ಮಾ ಪ್ರತಿಕ್ರಿಯಿಸಿ, ಜಂತರ್ ಮಂತರ್ ಪ್ರದೇಶದಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಜಾರಿಯಲ್ಲಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

75 ಜನರು ಎಂದು ಅನುಮತಿ ಪಡೆದು ಸಾವಿರಾರು ಜನರು ಸೇರಿದ್ದರೆ ಪರಿಸ್ಥಿತಿ ನಿಯಂತ್ರಿಸುವುದು ಕಷ್ಟವಾಗುತ್ತದೆ ಎಂದು ಅವರು ಹೇಳಿದರು. ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವಾಗಿ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ವಿಚಾರವನ್ನು ಈಗಾಗಲೇ ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿದೆ ಎಂದು ತಿಳಿಸಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ದೆಹಲಿ ಹೈಕೋರ್ಟ್, ಅರ್ಜಿದಾರರ ಮನವಿಯನ್ನು ಆಗಸ್ಟ್ 8ರೊಳಗೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದೆ.

ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಯುವಕನ ಮೇಲೆ ಹಲ್ಲೆ? ದೂರು-ಪ್ರತಿದೂರು ದಾಖಲು, 3 ಆರೋಪಿಗಳ ಬಂಧನ

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ಳಾಲದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಯುವಕನೋರ್ವನನ್ನು ಮನೆಗೆ ಕರೆಸಿಕೊಂಡ ಯುವತಿಯ ಕುಟುಂಬಸ್ಥರು ಆತನನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸನತ್ ಎಂಬ ಯುವಕನ ಮೇಲೆ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಯುವತಿ ಹಾಗೂ ಸನತ್ ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು ಬಳಿಕ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.

ಈ ನಡುವೆ ಯುವತಿ, ಸನತ್‌ನಿಂದ 50 ಸಾವಿರ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದಳು ಎಂದು ತಿಳಿದುಬಂದಿದೆ. ಬಳಿಕ ಯುವತಿ ಕೆಲಸ ತೊರೆದಿದ್ದು, ಸನತ್‌ನ ಕರೆಗಳನ್ನು ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದಳು ಎನ್ನಲಾಗಿದೆ.

ಸಾಲದ ಹಣವನ್ನು ವಾಪಸ್ ನೀಡುವಂತೆ ಸನತ್ ಕೇಳಿದಾಗ, ಮನೆಗೆ ಬರುವಂತೆ ಯುವತಿ ತಿಳಿಸಿದ್ದಳು ಎನ್ನಲಾಗಿದೆ. ಅದರಂತೆ ಮನೆ ಬಳಿ ತೆರಳಿದ್ದ ಸನತ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ, ಸನತ್ ವಿರುದ್ಧವೂ ದೂರು ದಾಖಲಾಗಿದ್ದು, ದಲಿತ ಯುವತಿ ಮೇಲೆ ದೌರ್ಜನ್ಯ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಸನತ್ ಕೂಡ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಎರಡೂ ದೂರುಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಮನೆಗೆ ನುಗ್ಗಿ ದಲಿತ ಯುವತಿ ಮೇಲೆ ದೌರ್ಜನ್ಯ ನಡೆಸಿದ ಆರೋಪ ಹಾಗೂ ಯುವಕನನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ ಕುಮಾರ್ ಮತ್ತು ನಂದೀಶ್ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.