ಗದಗ: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ, ಕಚೇರಿ ನಿರ್ವಹಣೆ, ದಾಖಲೆಗಳ ನಿರ್ವಹಣೆ ಹಾಗೂ ಸಾರ್ವಜನಿಕ ಸೇವೆಯ ಕುರಿತು ಸಮಗ್ರ ಪರಿಶೀಲನೆ ನಡೆಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.
ಕಚೇರಿಯ ವಿವಿಧ ರಿಜಿಸ್ಟರ್‌ಗಳನ್ನು ಪರಿಶೀಲಿಸಿದ ಅವರು, ಜಪ್ತಿ ಮಾಡಿದ ವಾಹನಗಳು, ಶಾಲಾ ವಾಹನಗಳು ಹಾಗೂ ತೆರಿಗೆ ಬಾಕಿ ಇರುವ ವಾಹನಗಳ ವಿವರಗಳನ್ನು ಪರಿಶೀಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಗತ್ಯ ದಾಖಲೆಗಳಿಲ್ಲದೆ ಹಾಗೂ ತೆರಿಗೆ ಪಾವತಿಸದೆ ಸಂಚರಿಸುವ ಶಾಲಾ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುವಂತೆ ನಿರ್ದೇಶನ ನೀಡಿದರು.
ಬಳಿಕ ಸಿಬ್ಬಂದಿಯ ಹಾಜರಾತಿ, ನಗದು ವಹಿ ಹಾಗೂ ಚಲನ-ವಲನ ವಹಿಗಳನ್ನು ಪರಿಶೀಲಿಸಿದ ಅವರು, ವಹಿಗಳನ್ನು ಸಮರ್ಪಕವಾಗಿ ನಿರ್ವಹಿಸದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಿಯಮಿತವಾಗಿ ದಾಖಲೆಗಳನ್ನು ನಮೂದಿಸದ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದ ಅವರು, ಎಲ್ಲ ಸಿಬ್ಬಂದಿಯ ಮೊಬೈಲ್‌ಗಳನ್ನು ಪರಿಶೀಲಿಸುವಂತೆ ಆದೇಶಿಸಿದರು.
ಪ್ರತಿ ಸಿಬ್ಬಂದಿಯೂ ಪ್ರತಿದಿನ ಕಡ್ಡಾಯವಾಗಿ ಹಾಜರಾತಿ, ನಗದು ವಹಿ ಹಾಗೂ ಚಲನ-ವಲನ ವಹಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಅಧಿಕಾರಿಗಳು ಸಹ ಈ ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಆನ್‌ಲೈನ್ ಸೇವೆಗಳಿದ್ದರೂ ಮಧ್ಯವರ್ತಿಗಳು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಕುರಿತು ದೂರುಗಳು ಬಂದಿವೆ. ಇಂತಹ ಅಕ್ರಮಗಳು ಮರುಕಳಿಸಿದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಉಪಲೋಕಾಯುಕ್ತರು ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಸುನೀಲಕುಮಾರ್ ಆರ್., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ.ಪಿ. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
“ಸರ್ಕಾರಿ ಸೇವೆಗಳು ಪಾರದರ್ಶಕವಾಗಿ ಜನರಿಗೆ ತಲುಪಬೇಕು. ಆನ್‌ಲೈನ್ ವ್ಯವಸ್ಥೆಯಲ್ಲೂ ಮಧ್ಯವರ್ತಿಗಳ ಹಾವಳಿ ಕಂಡುಬಂದರೆ ಕಠಿಣ ಶಿಸ್ತು ಕ್ರಮ ಅನಿವಾರ್ಯ ಎಂದು ನ್ಯಾಯಮೂರ್ತಿಗಳು ಹಾಗೂ ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹೇಳಿದರು.

