Home Blog Page 3

ಎ.ಆರ್. ರೆಹಮಾನ್ ಮ್ಯೂಸಿಕ್ ಮ್ಯಾಜಿಕ್! ಧೂಳೆಬ್ಬಿಸಿದ ‘ಪೆದ್ದಿ’ ಮೂರನೇ ಹಾಡಿನ ಪ್ರೋಮೋ

ಟಾಲಿವುಡ್‌ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಪೆದ್ದಿ’ ಮತ್ತೊಮ್ಮೆ ಸಿನಿಪ್ರಿಯರ ಗಮನ ಸೆಳೆದಿದೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಈ ಚಿತ್ರದ ಮೂರನೇ ಹಾಡು ‘ಹೆಲ್ಲಲ್ಲಲ್ಲೋ’ ಪ್ರೋಮೋ ಬಿಡುಗಡೆ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ನಿರ್ದೇಶಕ ಬುಚ್ಚಿ ಬಾಬು ಸನಾ ಮತ್ತು ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕಾಂಬಿನೇಷನ್‌ನ ಈ ಹಾಡು, ರಾ ಎನರ್ಜಿ ಮತ್ತು ಮ್ಯೂಸಿಕಲ್ ಮ್ಯಾಜಿಕ್‌ನ ಮಿಶ್ರಣವಾಗಿ ಮೂಡಿಬಂದಿದೆ. ಈಗಾಗಲೇ ಬಿಡುಗಡೆಯಾದ ಮೊದಲ ಎರಡು ಹಾಡುಗಳು ಸೂಪರ್ ಹಿಟ್ ಆಗಿದ್ದು, ಇದೀಗ ಮೂರನೇ ಹಾಡಿನ ಮೇಲೂ ಭಾರೀ ನಿರೀಕ್ಷೆ ಮೂಡಿದೆ.

ಪ್ರೋಮೋದಲ್ಲಿ ವೇದಿಕೆಯೊಂದರ ಮೇಲೆ ನೂರಾರು ಜನರ ನಡುವೆ ರಾಮ್ ಚರಣ್, ಜಾನ್ವಿ ಕಪೂರ್ ಮತ್ತು ಶ್ರುತಿ ಹಾಸನ್ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿರುವುದು ಕಂಡುಬಂದಿದೆ. ರಾಮ್ ಚರಣ್ ರಗಡ್ ಲುಕ್‌ನಲ್ಲಿ ಮಿಂಚಿದ್ದರೆ, ಶ್ರುತಿ ಹಾಸನ್ ಗ್ಲಾಮರಸ್ ಅವತಾರದಲ್ಲಿ ಗಮನ ಸೆಳೆದಿದ್ದಾರೆ. ಜಾನ್ವಿ ಕಪೂರ್ ಕೂಡ ಸ್ಟೈಲಿಷ್ ಡ್ಯಾನ್ಸ್ ಮೂಲಕ ಫ್ಯಾನ್ಸ್ ಮನಗೆದ್ದಿದ್ದಾರೆ.

ಕ್ರೀಡಾ ಹಿನ್ನೆಲೆಯ ಕಥಾಹಂದರ ಹೊಂದಿರುವ ‘ಪೆದ್ದಿ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಜೊತೆಗೆ ಜಗಪತಿ ಬಾಬು ಮತ್ತು ದಿವ್ಯೇಂದು ಶರ್ಮಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ಬಿಡುಗಡೆಯಾಗಿರುವುದು ‘ಹೆಲ್ಲಲ್ಲಲ್ಲೋ’ ಹಾಡಿನ ಪ್ರೋಮೋ ಮಾತ್ರ. ಪೂರ್ಣ ಹಾಡನ್ನು ಮೇ 23ರಂದು ಭೋಪಾಲ್‌ನಲ್ಲಿ ನಡೆಯಲಿರುವ ಅದ್ಧೂರಿ ಸಂಗೀತ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಬಹುಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಪೆದ್ದಿ’ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿದ್ದು, ಜೂನ್ 3ರಿಂದಲೇ ಪ್ರೀಮಿಯರ್ ಶೋಗಳು ಆರಂಭವಾಗಲಿವೆ.

ಕೊಲೆಯಾ? ಆತ್ಮಹತ್ಯೆಯಾ? ನಟಿ ತ್ವಿಶಾ ಶರ್ಮಾ ಪ್ರಕರಣದಲ್ಲಿ ಎರಡನೇ ಮರಣೋತ್ತರ ಪರೀಕ್ಷೆ ಆರಂಭ

ನವದೆಹಲಿ: ತ್ವಿಶಾ ಶರ್ಮಾ ಸಾವಿನ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿರುವ ನಡುವೆ, ಪ್ರಮುಖ ಆರೋಪಿ ಹಾಗೂ ಪತಿ ಸಮರ್ಥ್ ಸಿಂಗ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ದೆಹಲಿ ಏಮ್ಸ್ ಮೂಲಕ ಎರಡನೇ ಮರಣೋತ್ತರ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆ ಪ್ರಕರಣ ಮತ್ತೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ 10 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿದ್ದ ಸಮರ್ಥ್ ಸಿಂಗ್, ಮಧ್ಯಪ್ರದೇಶದ ಸ್ಥಳೀಯ ಕೋರ್ಟ್‌ಗೆ ಹಾಜರಾಗಿದ್ದಾರೆ. ಮುಂಗಡ ಜಾಮೀನು ಅರ್ಜಿಯನ್ನು ಈಗಾಗಲೇ ಹಿಂಪಡೆದಿದ್ದ ಅವರು, ಬಂಧನ ಮತ್ತು ಕಠಿಣ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಶರಣಾಗುವ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತ್ವಿಶಾ ಶರ್ಮಾ ಕುಟುಂಬಸ್ಥರು ಆರಂಭದಿಂದಲೇ ಇದು ಆತ್ಮಹತ್ಯೆಯಲ್ಲ, ಪೂರ್ವನಿಯೋಜಿತ ಕೊಲೆ ಎಂದು ಆರೋಪಿಸುತ್ತಿದ್ದರು. ಮೊದಲ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅನುಮಾನಾಸ್ಪದ ಅಂಶಗಳಿದ್ದು, ಸತ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದೆ ಎಂದು ಅವರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆ ದೆಹಲಿ ಏಮ್ಸ್ ತಜ್ಞರಿಂದ ಎರಡನೇ ಮರಣೋತ್ತರ ಪರೀಕ್ಷೆ ನಡೆಸಲು ನ್ಯಾಯಾಲಯ ಆದೇಶ ನೀಡಿದೆ. ಇದರ ಬೆನ್ನಲ್ಲೇ ಸಮರ್ಥ್ ಸಿಂಗ್ ಶರಣಾಗಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸಮರ್ಥ್ ಸಿಂಗ್ ಕೋರ್ಟ್ ಆವರಣಕ್ಕೆ ಕಾಲಿಟ್ಟ ತಕ್ಷಣವೇ ಪೊಲೀಸರು ಹಾಗೂ ತನಿಖಾಧಿಕಾರಿಗಳು ಚುರುಕುಗೊಂಡಿದ್ದು, ಆತನನ್ನು ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.

ಇದೀಗ ಎರಡನೇ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಪೊಲೀಸ್ ವಿಚಾರಣೆಯ ಬಳಿಕ ತ್ವಿಶಾ ಶರ್ಮಾ ಅವರ ಸಾವಿನ ನಿಜವಾದ ರಹಸ್ಯ ಬಯಲಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಅಪಘಾತಕ್ಕೆ ಕಾರಣವಾದರೂ ಗಾಯಾಳುವಿನ ನೆರವಿಗೆ ಬಂದ ಚಾಲಕ : ಶಿಕ್ಷೆ ತಗ್ಗಿಸಿದ ಹೈಕೋರ್ಟ್

ಬೆಂಗಳೂರು: ರಸ್ತೆ ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗದೆ ಗಾಯಾಳುವನ್ನು ತನ್ನದೇ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಚಾಲಕನೊಬ್ಬನಿಗೆ ವಿಧಿಸಲಾಗಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಹೈಕೋರ್ಟ್ ಒಂದು ದಿನಕ್ಕೆ ಕಡಿತಗೊಳಿಸಿ ಮಹತ್ವದ ಆದೇಶ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆಯ ನಿವಾಸಿ ರಿಯಾಜ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ಅಜಾಗರೂಕತೆಯಿಂದ ವಾಹನ ಚಲಾಯಿಸಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣನಾಗಿದ್ದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಒಂದು ವರ್ಷದ ಜೈಲು ಶಿಕ್ಷೆಯನ್ನು ಪರಿಷ್ಕರಿಸಿ, ನ್ಯಾಯಾಲಯದ ಕಲಾಪ ಮುಗಿಯುವವರೆಗೆ ಮಾತ್ರ ಶಿಕ್ಷೆ ಅನುಭವಿಸುವಂತೆ ಪೀಠ ಸೂಚಿಸಿದೆ.

ಅಪಘಾತ ಸಂಭವಿಸಿದ ತಕ್ಷಣ ಚಾಲಕ ಸ್ಥಳದಿಂದ ಪರಾರಿಯಾಗದೆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿರುವುದು ಶಿಕ್ಷೆ ಕಡಿತಗೊಳಿಸಲು ಪ್ರಮುಖ ಕಾರಣವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದಲ್ಲದೆ, ಶಿಕ್ಷೆಗೆ ಗುರಿಯಾಗಿರುವ ರಿಯಾಜ್ ನಂತರದ ದಿನಗಳಲ್ಲಿ ಮತ್ತೊಂದು ಅಪಘಾತಕ್ಕೊಳಗಾಗಿ ಬಲಗಾಲಿಗೆ ರಾಡ್ ಅಳವಡಿಸಿಕೊಂಡಿದ್ದು, ಸದ್ಯ ವೃತ್ತಿಪರ ಚಾಲನೆ ಮಾಡಲು ಸಾಧ್ಯವಾಗದೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವುದೂ ದಾಖಲೆಗಳಿಂದ ತಿಳಿದುಬಂದಿದೆ ಎಂದು ಪೀಠ ಉಲ್ಲೇಖಿಸಿದೆ.

ನ್ಯಾಯಾಲಯದ ಸಲಹೆಯಂತೆ, ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಹೆಚ್ಚುವರಿ ಪರಿಹಾರ ನೀಡಿದರೆ ಶಿಕ್ಷೆ ಕಡಿತಗೊಳಿಸಲು ಮೃತರ ಕುಟುಂಬದವರು ಸಹ ಒಪ್ಪಿಗೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಮೃತರ ಪತ್ನಿ ಮತ್ತು ಮಗನಿಗೆ ಒಟ್ಟು 1 ಲಕ್ಷ ರೂ. ಹೆಚ್ಚುವರಿ ಪರಿಹಾರ ಪಾವತಿಸುವಂತೆ ನ್ಯಾಯಪೀಠ ಆದೇಶಿಸಿದೆ. ಈ ಮೊತ್ತವನ್ನು ತಲಾ 50 ಸಾವಿರ ರೂ.ಗಳಂತೆ ಎರಡು ಕಂತುಗಳಲ್ಲಿ ಜೂನ್ 30ರೊಳಗೆ ಪಾವತಿಸಬೇಕು ಎಂದು ಸೂಚಿಸಲಾಗಿದೆ.

ಒಂದು ವೇಳೆ ನಿಗದಿತ ಅವಧಿಯಲ್ಲಿ ಹಣ ಪಾವತಿಸಲು ವಿಫಲವಾದರೆ, ಈ ಹಿಂದೆ ವಿಧಿಸಲಾಗಿದ್ದ ಒಂದು ವರ್ಷದ ಜೈಲು ಶಿಕ್ಷೆ ತಾನಾಗಿಯೇ ಜಾರಿಯಾಗಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:
2015ರ ಜುಲೈ 15ರಂದು ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಬೀಚ್ ರಸ್ತೆ ಬಳಿ ರಿಯಾಜ್ ಅಹ್ಮದ್ ಚಲಾಯಿಸುತ್ತಿದ್ದ ಕಾರು ಆನಂದ್ ಶೆಟ್ಟಿ ಎಂಬ ಪಾದಚಾರಿಗೆ ಡಿಕ್ಕಿ ಹೊಡೆದಿತ್ತು.

ಅಪಘಾತದ ತಕ್ಷಣ ರಿಯಾಜ್ ಹಾಗೂ ಅವರ ಮಗ ಗಾಯಗೊಂಡಿದ್ದ ಆನಂದ್ ಶೆಟ್ಟಿ ಅವರನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆನಂದ್ ಶೆಟ್ಟಿ ಮರುದಿನ ಸಾವನ್ನಪ್ಪಿದ್ದರು.

ಈ ಪ್ರಕರಣದಲ್ಲಿ ಮಂಗಳೂರಿನ ಸೆಷನ್ಸ್ ನ್ಯಾಯಾಲಯ ರಿಯಾಜ್‌ಗೆ ಒಂದು ವರ್ಷದ ಸಾಧಾರಣ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

ಶಿರಸಿಯಲ್ಲಿ ನಡುರಸ್ತೆಯಲ್ಲೇ ಗ್ಯಾಂಗ್‌ವಾರ್: 6 ಮಂದಿ ವಿರುದ್ಧ ದೂರು ದಾಖಲು

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಎರಡು ಯುವಕರ ಗುಂಪುಗಳ ನಡುವೆ ನಡೆದ ಮಾರಾಮಾರಿ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. ಬೈಕ್ ಅಪಘಾತದ ಸಣ್ಣ ವಿಚಾರವಾಗಿ ಆರಂಭವಾದ ಗಲಾಟೆ, ಬಳಿಕ ನಡುರಸ್ತೆಯಲ್ಲೇ ಗ್ಯಾಂಗ್‌ವಾರ್ ರೂಪ ಪಡೆದುಕೊಂಡಿದೆ.

ಮೇ 21ರ ರಾತ್ರಿ ದೇವಿಕೆರೆ ಬಳಿ ಸಂಭವಿಸಿದ್ದ ದ್ವಿಚಕ್ರ ವಾಹನ ಅಪಘಾತದ ವೇಳೆ ಎರಡು ಕೋಮುಗಳ ಯುವಕರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಘಟನೆ ಬಳಿಕ ಉಂಟಾದ ದ್ವೇಷ, ಸಿಂಪಿಗಲ್ಲಿಯಲ್ಲಿ ಮತ್ತೆ ಮುಖಾಮುಖಿಯಾದಾಗ ಸ್ಫೋಟಗೊಂಡಿದೆ. ಯುವಕರು ಸಾರ್ವಜನಿಕರ ಎದುರೇ ಪರಸ್ಪರ ಹಲ್ಲೆ ನಡೆಸಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಿಸಿದ್ದಾರೆ.

ಗಲಾಟೆಯ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಪೊಲೀಸರು ಅವುಗಳ ಆಧಾರದಲ್ಲಿ ತನಿಖೆ ಆರಂಭಿಸಿದ್ದಾರೆ. ಪ್ರಕರಣದಲ್ಲಿ ಅಯಾನ್ ಟಿನಮೇಕರ್, ಸರ್ಫರಾಜ್ ಟಿನಮೇಕರ್, ಆದಿಲ್ ಸಕ್ಕರಖಾನ್, ಅಭಯ್ ಹುದಾರ್, ಸರ್ವೇಶ ಹಿರೇಮಠ ಹಾಗೂ ಆಕಾಶ್ ಕುಂದನಗಾರ ವಿರುದ್ಧ ಶಿರಸಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಬಳಿಕ ನಗರದಲ್ಲಿ ಪೊಲೀಸ್ ನಿಗಾವನ್ನು ಹೆಚ್ಚಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬಾಂಗ್ಲಾ ವಲಸಿಗರು ಬಂದಿದ್ದಾರೆ’ ಅಲರ್ಟ್: ಬೆಳಗಾವಿ ಬಸ್ ಸ್ಟ್ಯಾಂಡ್‌ನಲ್ಲಿ ಪೊಲೀಸರ ಮೆಗಾ ಆಪರೇಷನ್

0

ಬೆಳಗಾವಿ: ಅಕ್ರಮ ಬಾಂಗ್ಲಾದೇಶಿ ವಲಸಿಗರು ಬೆಳಗಾವಿಗೆ ಪ್ರವೇಶಿಸಿದ್ದಾರೆ ಎಂಬ ಗಂಭೀರ ಶಂಕೆ ಹಿನ್ನೆಲೆ ನಗರದಲ್ಲಿ ಹೈ ಅಲರ್ಟ್ ಘೋಷಿಸಿದ ಪೊಲೀಸರು, ಕೇಂದ್ರ ಬಸ್ ನಿಲ್ದಾಣದಲ್ಲಿ ಭಾರಿ ಕಾರ್ಯಾಚರಣೆ ನಡೆಸಿ 20ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದ್ದಾರೆ.

ಡಿಸಿಪಿ ನಾರಾಯಣ ಭರಮನಿ ನೇತೃತ್ವದ ತಂಡ, ಮಾಳಮಾರುತಿ ಠಾಣೆಯಲ್ಲಿ ವಶಕ್ಕೆ ಪಡೆದವರ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಈ ಕಾರ್ಯಾಚರಣೆಗೆ ಕಾರಣವಾಗಿದ್ದು ಶ್ರೀರಾಮಸೇನೆ ನೀಡಿದ ಮಾಹಿತಿ. “ಹುಬ್ಬಳ್ಳಿಯಿಂದ ಮೂರು ಬಸ್‌ಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಬಂದಿದ್ದಾರೆ” ಎಂಬ ಆರೋಪದ ಮೇರೆಗೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರು.

ವಿಚಾರಣೆ ವೇಳೆ ವಶಕ್ಕೆ ಪಡೆದವರು ತಾವು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಎಂದು ಹೇಳಿಕೊಂಡಿದ್ದಾರೆ. ಶಹಾಪುರ ಭಾಗದಲ್ಲಿ ಬಂಗಾರದ ಕೆಲಸ ಮಾಡುತ್ತಿರುವುದಾಗಿ ಹಾಗೂ ಮತದಾನಕ್ಕಾಗಿ ಊರಿಗೆ ತೆರಳಿ ಈಗ ಮರಳಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪೊಲೀಸರು ಆಧಾರ್ ಕಾರ್ಡ್‌, ವೋಟರ್ ಐಡಿ, ಮೊಬೈಲ್ ವಿವರಗಳು ಸೇರಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದು, ಯಾವುದೇ ತಾಂತ್ರಿಕ ವ್ಯತ್ಯಾಸ ಮೇಲ್ನೋಟಕ್ಕೆ ಪತ್ತೆಯಾಗಿಲ್ಲ. ಆದರೂ ಭದ್ರತಾ ದೃಷ್ಟಿಯಿಂದ ಎಲ್ಲರ ಬೆರಳಚ್ಚುಗಳನ್ನು ಪಡೆದು ಮತ್ತಷ್ಟು ತನಿಖೆ ಮುಂದುವರಿಸಲಾಗಿದೆ.

ಪ್ರಾಥಮಿಕ ಪರಿಶೀಲನೆಯಲ್ಲಿ ಅನುಮಾನಾಸ್ಪದ ಅಂಶಗಳು ಪತ್ತೆಯಾಗದ ಹಿನ್ನೆಲೆಯಲ್ಲಿ, ಬಳಿಕ ಎಲ್ಲ ಕಾರ್ಮಿಕರನ್ನು ಬಿಡುಗಡೆ ಮಾಡಲಾಗಿದೆ. ಆದರೆ ನಕಲಿ ದಾಖಲೆಗಳ ಬಳಕೆ ನಡೆದಿದೆಯೇ ಎಂಬ ಕುರಿತು ಪೊಲೀಸರು ಆಂತರಿಕ ತನಿಖೆ ಮುಂದುವರಿಸಿದ್ದಾರೆ.

ಅಲ್ಪಸಂಖ್ಯಾತರ ಓಲೈಕೆಯಲ್ಲಿ ಕಾಂಗ್ರೆಸ್ ಸರ್ಕಾರ ತೊಡಗಿದೆ: ಆರ್ ಅಶೋಕ್ ಆರೋಪ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣದಲ್ಲೇ ತೊಡಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅದಕ್ಕಾಗಿಯೇ ಹಿಜಾಬ್ ಮರು ಜಾರಿ ಮಾಡಲಾಗಿದೆ. ಆಳಂದ ಗಲಭೆ ಪ್ರಕರಣಗಳನ್ನು ಕೂಡ ವಾಪಸ್ ಪಡೆಯಲಾಗಿದೆ ಎಂದು ಆರೋಪಿಸಿದರು.

ಸರ್ಫ್ ಹಾಕಿ, ಡೆಟ್ಟಾಲ್ ಹಾಕಿ ತೊಳೆದರೂ ಈ ಸರ್ಕಾರದ ದುಷ್ಟ ಬುದ್ಧಿ ಹೋಗಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಪೊಲೀಸರ ಮೇಲೆ ಹಲ್ಲೆ ನಡೆಸಿದವರು ಹಾಗೂ ಕೇಂದ್ರ ಸಚಿವರ ಕಾರು ಒಡೆದವರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಆರೋಪಿಸಿದ ಅಶೋಕ್, ಕೋಮುಗಲಭೆ ಪ್ರಚೋದಿಸಿದವರ ಮೇಲಿನ ಕೇಸ್ ವಾಪಸ್ ಪಡೆಯುವುದು ಸರಿಯಲ್ಲ ಎಂದರು.

ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಸರ್ಕಾರದ ಕರ್ತವ್ಯ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.

ದೇಶದ ಭದ್ರತೆಗೆ ಅಪಾಯ ಉಂಟುಮಾಡುವ ಇಂತಹ ನಿರ್ಧಾರಗಳನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಹಿಜಾಬ್ ಮರು ಜಾರಿಯನ್ನೂ ಮುಸ್ಲಿಂ ಓಲೈಕೆಯ ಭಾಗವೆಂದೇ ಆರೋಪಿಸಿದ ಅಶೋಕ್, ರೈತರು ಹಾಗೂ ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಲಿ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.

ಕೋಮುಗಲಭೆಗೆ ಪ್ರಚೋದನೆ ನೀಡಿದವರ ಮೇಲಿನ ಪ್ರಕರಣಗಳನ್ನು ಕೈಬಿಟ್ಟು ಸರ್ಕಾರ ಬಹುಸಂಖ್ಯಾತ ಸಮುದಾಯಕ್ಕೆ ದ್ರೋಹ ಮಾಡಿದೆ ಎಂದು ಆರ್ ಅಶೋಕ್ ಆರೋಪಿಸಿದರು.

ಕ್ಯಾಬ್ ಅಡ್ಡಗಟ್ಟಿ ಡ್ರೈವರ್ ಮೇಲೆ ಕ್ರೂರ ಹಲ್ಲೆ: ಬೆಂಗಳೂರು ರಸ್ತೆಯಲ್ಲಿ ಗ್ಯಾಂಗ್ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ರಸ್ತೆಯಲ್ಲೇ ಉಬರ್ ಕ್ಯಾಬ್ ಚಾಲಕನ ಮೇಲೆ ಮತ್ತೊಬ್ಬ ಚಾಲಕ ಮತ್ತು ಆತನ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಡಬಲ್ ರೋಡ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಮೇ 22ರಂದು ನಡೆದ ಈ ಘಟನೆ ತಡವಾಗಿ ಬಹಿರಂಗವಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಮಾಹಿತಿ ಪ್ರಕಾರ, ಮತ್ತೊಂದು ಕಾರಿನಲ್ಲಿ ಬಂದಿದ್ದ ಗ್ಯಾಂಗ್ ಉಬರ್ ಕ್ಯಾಬ್ ಅನ್ನು ಮಧ್ಯರಸ್ತೆಯಲ್ಲೇ ಅಡ್ಡಗಟ್ಟಿದೆ. ಬಳಿಕ ಚಾಲಕನನ್ನು ಬಲವಂತವಾಗಿ ಕಾರಿನಿಂದ ಕೆಳಕ್ಕೆ ಎಳೆದು ಮನಬಂದಂತೆ ಹಲ್ಲೆ ನಡೆಸಲಾಗಿದೆ. ಘಟನೆಯ ವೇಳೆ ಪಕ್ಕದಲ್ಲೇ ಯುವತಿಯೊಬ್ಬರು ನಿಂತಿದ್ದರೂ ಪುಂಡರು ಯಾವುದೇ ಭಯವಿಲ್ಲದೆ ಹಿಗ್ಗಾಮುಗ್ಗಾ ಥಳಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

ದೂರು ಇಲ್ಲದಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕೆ.ಹೆಚ್ ರಸ್ತೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಹಲ್ಲೆಗೆ ಬಳಸಲಾದ ಕಾರುಗಳ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದು, ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಚಿರತೆ ಹತ್ಯೆ ಪ್ರಕರಣ ಭೇದಿಸಿದ ಅರಣ್ಯಾಧಿಕಾರಿಗಳು: ನಾಲ್ವರು ಆರೋಪಿಗಳು ಅರೆಸ್ಟ್

ಉಡುಪಿ: ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ದೊಟ್ಟಿನಬೇರು ಮೀಸಲು ಅರಣ್ಯ ಪ್ರದೇಶದಲ್ಲಿ ಚಿರತೆಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಯಡಮೊಗೆ ಗ್ರಾಮದ ಸಾಲಿಮಕ್ಕಿಯ ಮಂಜುನಾಥ ಶೆಟ್ಟಿ, ಕಾವ್ರಾಡಿ ಗ್ರಾಮದ ಕಂಡೂರಿನ ನದೀಮ್ ಕರಾಣಿ ಹಾಗೂ ಯಡಮೊಗೆ ಗ್ರಾಮದ ಹನೆಬಚ್ಚಲು ನಿವಾಸಿಗಳಾದ ನಾಗರಾಜ ಭೋವಿ ಮತ್ತು ವೆಂಕಟರಮಣ ಭೋವಿ ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ ಚಿರತೆಯ ನಾಲ್ಕು ಕಾಲಿನ ಉಗುರುಗಳು, ಮೂಳೆಯ ಭಾಗಗಳು, ಒಂದು ಬಂದೂಕು, ಐದು ಜೀವಂತ ಗುಂಡುಗಳು ಹಾಗೂ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿದ್ದಾಪುರ–ಶಿವಮೊಗ್ಗ ಜಿಲ್ಲಾ ರಸ್ತೆ ಸಮೀಪ ಫೆಬ್ರವರಿ 4ರಂದು ಚಿರತೆಯೊಂದನ್ನು ಕೊಂದು ಹಾಕಿರುವ ಬಗ್ಗೆ ಶಂಕರನಾರಾಯಣ ಅರಣ್ಯ ವಲಯದಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ಕೈಗೊಂಡ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಮೇ 21ರಂದು ಆರೋಪಿ ಮಂಜುನಾಥ ಶೆಟ್ಟಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಆತ ನೀಡಿದ ಮಾಹಿತಿಯ ಆಧಾರದ ಮೇಲೆ ಉಳಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಬಂಧಿತ ಆರೋಪಿಗಳನ್ನು ಕುಂದಾಪುರ ಪ್ರಧಾನ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಕರಣದ ತನಿಖೆ ವೇಳೆ ಕುಂದಾಪುರ ಭಾಗದ ವಿವಿಧ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರ ನೀಡಿದ್ದಾರೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಹಜ್ಜೇನು ದಾಳಿಗೆ ರೈತ ಬಲಿ

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಹಜ್ಜೇನುಗಳ ದಾಳಿಗೆ ಒಳಗಾಗಿ ರೈತನೋರ್ವ ಮೃತಪಟ್ಟ ದುರ್ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ತಂಬ್ರಹಳ್ಳಿ ಗ್ರಾಮದ ತಳವಾರ ಹನುಮಂತಪ್ಪ (70) ಮೃತಪಟ್ಟ ರೈತ. ಮೇ 19ರಂದು ಶ್ರೀ ಬಂಡೆ ರಂಗಪ್ಪನ ಬೆಟ್ಟದ ಸಮೀಪದಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಏಕಾಏಕಿ ಹಜ್ಜೇನುಗಳ ಗುಂಪು ದಾಳಿ ನಡೆಸಿದೆ. ದಾಳಿಯಿಂದ ಮೈತುಂಬ ಕಚ್ಚಿಸಿಕೊಂಡ ಹನುಮಂತಪ್ಪ ಅವರನ್ನು ತಕ್ಷಣ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.

ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಬಳಿಕ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.

ಮೃತರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಪುತ್ರ ಪ್ರವೀಣ ತಳವಾರ ನೀಡಿದ ದೂರಿನ ಮೇರೆಗೆ ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಚೀನಾದ ಕಲ್ಲಿದ್ದಲು ಗಣಿಯಲ್ಲಿ ಭೀಕರ ಅನಿಲ ಸ್ಫೋಟ: 82 ಕಾರ್ಮಿಕರ ದುರ್ಮರಣ

ಬೀಜಿಂಗ್: ಉತ್ತರ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಅನಿಲ ಸ್ಫೋಟದಲ್ಲಿ ಕನಿಷ್ಠ 82 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ಸಂಭವಿಸಿದ ಅತಿದೊಡ್ಡ ಕೈಗಾರಿಕಾ ದುರಂತಗಳಲ್ಲಿ ಇದೂ ಒಂದಾಗಿದೆ ಎಂದು ವರದಿಯಾಗಿದೆ.

ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಜೆ 7:29ರ ಸುಮಾರಿಗೆ ಸ್ಫೋಟ ಸಂಭವಿಸಿದೆ.

ಅಪಘಾತ ಸಂಭವಿಸಿದ ವೇಳೆ ಒಟ್ಟು 247 ಕಾರ್ಮಿಕರು ಗಣಿಯ ಒಳಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಲ್ಲಿ ಬಹುತೇಕರನ್ನು ಶನಿವಾರ ಬೆಳಗ್ಗಿನ ವೇಳೆಗೆ ರಕ್ಷಿಸಿ ಮೇಲ್ಮೈಗೆ ಕರೆತರಲಾಗಿದೆ.

ಸ್ಫೋಟದ ಪರಿಣಾಮ 82 ಮಂದಿ ಮೃತಪಟ್ಟಿದ್ದು, ಇನ್ನೂ ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ರಕ್ಷಣಾ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸೂಚನೆ ನೀಡಿದ್ದಾರೆ. ಅದೇ ವೇಳೆ ಈ ಭೀಕರ ದುರಂತದ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಅವರು ಆದೇಶ ನೀಡಿದ್ದಾರೆ.

error: Content is protected !!