Home Blog Page 30

ಮಕ್ಕಳ ಸುರಕ್ಷತೆಗೆ ಜಾಗೃತಿ ಅತ್ಯಗತ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದ್ದು, ಕುಟುಂಬ, ಶಾಲೆ ಹಾಗೂ ಸಮಾಜದ ಸಹಕಾರದಿಂದ ಮಾತ್ರ ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.

ನಗರದ ಸರ್ಕಾರಿ ಮಾದರಿ ಉರ್ದು ಕೇಂದ್ರ ಶಾಲೆ ನಂ. 2ರಲ್ಲಿ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯ ‘ಅಕ್ಕ ಪಡೆ’ ವತಿಯಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಮಕ್ಕಳ ಸುರಕ್ಷತೆ ತಿಳುವಳಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆಯಲ್ಲಿ ಸುರಕ್ಷಿತ ಹಾಗೂ ಭಯರಹಿತ ಕಲಿಕಾ ವಾತಾವರಣ ನಿರ್ಮಿಸುವುದು, ಶಾಲೆಗೆ ಬರುವಾಗ ಹಾಗೂ ಮನೆಗೆ ಹಿಂದಿರುಗುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು, ಅಪರಿಚಿತರೊಂದಿಗೆ ಸ್ನೇಹ ಬೆಳೆಸದೇ ಇರುವುದು, ಆನ್‌ಲೈನ್ ಸುರಕ್ಷತೆ, ‘ಗುಡ್ ಟಚ್–ಬ್ಯಾಡ್ ಟಚ್’ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಹಮ್ಮದ್‌ಶಫಿ ಯರಗುಡಿ ಮಾತನಾಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣದ ಜೊತೆಗೆ ಸುರಕ್ಷಿತ ಹಾಗೂ ಸ್ನೇಹಪರ ವಾತಾವರಣವೂ ಅಗತ್ಯವಾಗಿದೆ. ಯಾವುದೇ ರೀತಿಯ ಕಿರುಕುಳ ಅಥವಾ ತೊಂದರೆ ಎದುರಾದರೆ ಪಾಲಕರು ಅಥವಾ ಶಿಕ್ಷಕರಿಗೆ ಧೈರ್ಯವಾಗಿ ತಿಳಿಸಬೇಕು ಎಂದು ಸಲಹೆ ನೀಡಿದರು.

ಅಕ್ಕ ಪಡೆಯ ಮುಖ್ಯಸ್ಥೆ ಶಂಕ್ರಮ್ಮ ಕೊರವರ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಅಪರಿಚಿತರು ನೀಡುವ ಆಹಾರ ಅಥವಾ ಚಾಕೊಲೇಟ್‌ಗಳನ್ನು ಸ್ವೀಕರಿಸಬಾರದು.

ಶಾಲೆಯಿಂದ ಮನೆಗೆ ತೆರಳುವಾಗ ಒಂಟಿಯಾಗಿ ಹೋಗದೆ ಸ್ನೇಹಿತರೊಂದಿಗೆ ತೆರಳುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ಎಚ್. ಸರಖವಾಸ್ ಮಾತನಾಡಿ, ಶಾಲೆಯಲ್ಲಿ ಪ್ರತಿದಿನ ಪ್ರಾರ್ಥನಾ ವೇಳೆಯಲ್ಲಿ ಮಕ್ಕಳ ಸುರಕ್ಷತೆ ಹಾಗೂ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಪಾಲಕರ ಸಭೆಗಳಲ್ಲಿಯೂ ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು, ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿರಬೇಕು ಎಂದು ಹೇಳಿದರು.

ಶಿಕ್ಷಕರಾದ ಎನ್.ಬಿ. ಕರ್ಲವಾಡ ಸ್ವಾಗತಿಸಿದರು. ಎಸ್.ವಿ. ಜಕ್ಕನಗೌಡ ನಿರೂಪಿಸಿದರು. ಡಬ್ಲ್ಯೂ.ಎ. ಶಿರಹಟ್ಟಿ ವಂದಿಸಿದರು. ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಸುಧಾ ಪಾಟೀಲ, ಉಮಾ ಕನ್ಯಾಳಹಿರೇಮಠ ಹಾಗೂ ಶಿಕ್ಷಕರಾದ ಶಾಂತಲಾ ಜಂಗಮನಿ, ಜಾಯ್ಸ್ ಜೆ., ವಿಜಯಕುಮಾರ ಲಕ್ಷ್ಮಣನಾಯಕ ಉಪಸ್ಥಿತರಿದ್ದರು.

“ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆ ಕೇವಲ ಪೊಲೀಸರ ಜವಾಬ್ದಾರಿ ಅಲ್ಲ; ಕುಟುಂಬ, ಶಾಲೆ ಮತ್ತು ಸಮಾಜ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸುರಕ್ಷಿತ ವಾತಾವರಣ ನಿರ್ಮಿಸಲು ಸಾಧ್ಯ.”

– ಕವಿತಾ ದಂಡಿನ, ಸಂಪನ್ಮೂಲ ವ್ಯಕ್ತಿ

ಪ್ರಕಲ್ಪ ಶಾಲೆಯಲ್ಲಿ ವಾದ-ಪ್ರತಿವಾದ ಸ್ಪರ್ಧೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಪ್ರಕಲ್ಪ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಆತ್ಮವಿಶ್ವಾಸ, ಚಿಂತನಾ ಶಕ್ತಿ ಹಾಗೂ ಭಾಷಾ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ವಾದ-ಪ್ರತಿವಾದ ಸ್ಪರ್ಧೆ ಆಯೋಜಿಸಲಾಯಿತು.

ಒಂದನೇ ತರಗತಿಯಿಂದ ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಸ್ಪಷ್ಟವಾಗಿ ಮಂಡಿಸುವ ಮೂಲಕ ಪ್ರತಿಭೆಯನ್ನು ಅನಾವರಣಗೊಳಿಸಿದರು.

‘ಬಾಲಕಿಯರಿಗೆ ಹೆಚ್ಚಿನ ಸೌಲಭ್ಯವೇ? ಅಥವಾ ಬಾಲಕರಿಗೆ?’ ಎಂಬ ವಿಷಯದ ಕುರಿತು ನಡೆದ ವಾದ-ಪ್ರತಿವಾದ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ಉತ್ತಮ ಚರ್ಚೆಗೆ ವೇದಿಕೆಯಾಯಿತು.

ಈ ಸಂದರ್ಭದಲ್ಲಿ ಸಂಸ್ಥಾಪಕ ಹಾಗೂ ಅಧ್ಯಕ್ಷ ಎಸ್.ಬಿ. ಹುಬ್ಬಳ್ಳಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶಿಷ್ಟ ಪ್ರತಿಭೆ ಅಡಗಿದ್ದು, ಇಂತಹ ಸ್ಪರ್ಧೆಗಳು ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಹಾಗೂ ಕಾರ್ಯಕ್ರಮ ಯಶಸ್ವಿಗೊಳಿಸಿದ ಶಿಕ್ಷಕರನ್ನು ಅಭಿನಂದಿಸಲಾಯಿತು.

ನಶಾ ಮುಕ್ತ ಯುವಕರೇ ಅಭಿವೃದ್ಧಿ ಹೊಂದಿದ ಭಾರತದ ಶಕ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಆದರ್ಶ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಭವನದಲ್ಲಿ ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಪ್ರಾದೇಶಿಕ ಎನ್‌ಎಸ್‌ಎಸ್ ನಿರ್ದೇಶನಾಲಯ (ಬೆಂಗಳೂರು), ಆದರ್ಶ ಶಿಕ್ಷಣ ಸಮಿತಿಯ ಪದವಿ ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ಹಾಗೂ ಮೈ ಭಾರತ್ ಕೇಂದ್ರ, ಗದಗ ಸಹಯೋಗದಲ್ಲಿ ‘ವಿಕಸಿತ್ ಭಾರತ್–ನಶಾ ಮುಕ್ತ ಯುವ’ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

ಆದರ್ಶ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎ.ಡಿ. ಗೊಡಖಿಂಡಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಯುವ ಐಕಾನ್ ಆಗಿ ಭಾಗವಹಿಸಿದ್ದ ಭಾರತ ಸರ್ಕಾರದ ರಾಷ್ಟ್ರೀಯ ಯುವ ಐಕಾನ್ ವರುಣ್ ಡಿ. ಆರ್ಯ ಮಾತನಾಡಿ, ಇಂದಿನ ನಶಾ ಮುಕ್ತ ಯುವಕರೇ ನಾಳಿನ ಬಲಿಷ್ಠ ಭಾರತದ ಶಕ್ತಿ. ದೇಶದ ಅಭಿವೃದ್ಧಿ, ಪ್ರಗತಿ ಹಾಗೂ ಸಮೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಯುವಕರು ಮಾದಕ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮದ್ಯಪಾನ, ಧೂಮಪಾನ ಹಾಗೂ ವಿವಿಧ ಮಾದಕ ವಸ್ತುಗಳ ವ್ಯಸನವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ಥಿರತೆ, ಶಿಕ್ಷಣ, ಉದ್ಯೋಗ ಮತ್ತು ಕುಟುಂಬದ ನೆಮ್ಮದಿಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಕ್ರೀಡೆ, ಯೋಗ, ವ್ಯಾಯಾಮ, ಉತ್ತಮ ಹವ್ಯಾಸಗಳು ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಯುವಕರು ವ್ಯಸನಗಳಿಂದ ದೂರವಿರಬಹುದು ಎಂದು ಅವರು ತಿಳಿಸಿದರು.

ನಶಾ ಮುಕ್ತ ಸಮಾಜ ನಿರ್ಮಾಣಕ್ಕೆ ಕುಟುಂಬ, ಶಾಲೆ, ಕಾಲೇಜು, ಸರ್ಕಾರ ಹಾಗೂ ಸಮಾಜದ ಎಲ್ಲರ ಸಹಕಾರ ಅಗತ್ಯವಾಗಿದೆ. ಪ್ರತಿಯೊಬ್ಬ ಯುವಕ-ಯುವತಿಯೂ “ನಶಾ ಮುಕ್ತ ಯುವ–ಬಲಿಷ್ಠ ಭಾರತ” ಎಂಬ ಗುರಿಯನ್ನು ಜೀವನದ ಧ್ಯೇಯವನ್ನಾಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಮೈ ಭಾರತ್ ಕೇಂದ್ರದ ಡೆಪ್ಯುಟಿ ಡೈರೆಕ್ಟರ್ ಲೋಕೇಶ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ನಶಾ ಮುಕ್ತ ಪ್ರತಿಜ್ಞಾ ವಿಧಿ ಬೋಧಿಸಿ, ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ವಿ.ಟಿ. ನಾಯ್ಕರ್, ಯುವ ನಾಯಕ ಇಮಾಮ ಮೊರಬದ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಬಿ.ಪಿ. ಜೈನರ್, ವಿವಿಧ ಮಹಾವಿದ್ಯಾಲಯಗಳ ಶಿಕ್ಷಕರು, ಎನ್‌ಎಸ್‌ಎಸ್ ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಇಂದಿನ ನಶಾ ಮುಕ್ತ ಯುವಕರೇ ನಾಳಿನ ಶಕ್ತಿಶಾಲಿ ಭಾರತದ ನಿರ್ಮಾತೃಗಳು. ಆರೋಗ್ಯವಂತ ಮತ್ತು ಜಾಗೃತ ಯುವಜನತೆಯೇ ಅಭಿವೃದ್ಧಿ ಹೊಂದಿದ ರಾಷ್ಟ್ರದ ನಿಜವಾದ ಶಕ್ತಿ.”

– ವರುಣ್ ಡಿ. ಆರ್ಯ, ರಾಷ್ಟ್ರೀಯ ಯುವ ಐಕಾನ್

ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಕೃತಿ ವಿಕೋಪ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗುವ ಬೆಳೆ ನಷ್ಟದಿಂದ ರೈತರನ್ನು ಆರ್ಥಿಕವಾಗಿ ರಕ್ಷಿಸುವ ಉದ್ದೇಶದಿಂದ ಜಾರಿಯಲ್ಲಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯ ಮುಂಗಾರು-2026 ಅಭಿಯಾನಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೃಷಿಯು ಪ್ರಕೃತಿಯನ್ನು ಅವಲಂಬಿಸಿರುವ ವೃತ್ತಿಯಾಗಿದ್ದು, ಹವಾಮಾನ ವೈಪರೀತ್ಯದಿಂದ ರೈತರಿಗೆ ಅನಿರೀಕ್ಷಿತ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭಗಳಲ್ಲಿ ರೈತರ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡುವಲ್ಲಿ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಅತ್ಯಂತ ಪರಿಣಾಮಕಾರಿ ಯೋಜನೆಯಾಗಿದ್ದು, ಜಿಲ್ಲೆಯ ಎಲ್ಲ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಯೋಜನೆಯಡಿ ಬೆಳೆ ವಿಮೆ ಮಾಡಿಸಿಕೊಂಡರೆ ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಗಾಳಿ, ನೆರೆ ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗುವ ಬೆಳೆ ಹಾನಿಗೆ ವಿಮಾ ಪರಿಹಾರ ದೊರೆಯಲಿದ್ದು, ರೈತರ ಆದಾಯದ ಸ್ಥಿರತೆ ಹಾಗೂ ಕೃಷಿ ಚಟುವಟಿಕೆಗಳ ನಿರಂತರತೆಗೆ ಇದು ನೆರವಾಗಲಿದೆ ಎಂದು ಹೇಳಿದರು.

ಬೆಳೆ ವಿಮೆ, ನೋಂದಣಿ ಪ್ರಕ್ರಿಯೆ, ಅರ್ಹತೆ ಹಾಗೂ ಕೊನೆಯ ದಿನಾಂಕದ ಕುರಿತು ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ವ್ಯಾಪ್ತಿಯ ಕೃಷಿ ಇಲಾಖೆ ಕಚೇರಿಗಳು ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು. ಅಲ್ಲದೆ 1800 209 4980 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಸಿದ್ಧಪಡಿಸಿರುವ ಬೆಳೆ ವಿಮೆ ಜಾಗೃತಿ ಕರಪತ್ರಗಳು ಹಾಗೂ ಪೋಸ್ಟರ್‌ಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. ಜಿಲ್ಲಾದ್ಯಂತ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಸಂಖ್ಯೆಯ ರೈತರಿಗೆ ಯೋಜನೆಯ ಸೌಲಭ್ಯ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್., ಕೃಷಿ ಸಹಾಯಕ ನಿರ್ದೇಶಕ ಮಲ್ಲಯ್ಯ ಕೆ., ತಾಂತ್ರಿಕ ಅಧಿಕಾರಿ ಸಂಜೀವ ಕುಮಾರ, ಕೃಷಿ ಅಧಿಕಾರಿ ಚಿತ್ರಾ ಬಿ.ಎಂ., ವಾರ್ತಾಧಿಕಾರಿ ವಸಂತ ಮಡ್ಲೂರ, ಮಾಂತೇಶ್ ಮದ್ನೂರ, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಇಂಡಸ್‌ಇಂಡ್ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

“ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿಕೊಳ್ಳುವ ಮೂಲಕ ರೈತರು ಪ್ರಕೃತಿ ವಿಕೋಪದಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರಕ್ಷಣೆ ಪಡೆದುಕೊಳ್ಳಬೇಕು.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ

ಗದಗ–ಹರಪನಹಳ್ಳಿ ರೈಲು ಮಾರ್ಗಕ್ಕೆ ಆಗ್ರಹಿಸಿ ಜುಲೈ 31ರಿಂದ ಅನಿರ್ದಿಷ್ಟಾವಧಿ ಧರಣಿ

ವಿಜಯಸಾಕ್ಷಿ ಸುದ್ದಿ, ಗದಗ: ಗದಗ–ಹರಪನಹಳ್ಳಿ ರೈಲ್ವೆ ಮಾರ್ಗ ಕಾಮಗಾರಿ ವಿಳಂಬವನ್ನು ಖಂಡಿಸಿ ಜುಲೈ 31ರಂದು ಬೆಳಿಗ್ಗೆ 11 ಗಂಟೆಯಿಂದ ನಗರದ ರೈಲ್ವೆ ನಿಲ್ದಾಣದ ಎದುರು ಜನಕಲ್ಯಾಣ ಯಾತ್ರೆ, ಅಸಹಕಾರ ಚಳವಳಿ ಹಾಗೂ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ತಿಳಿಸಿದರು.

ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ–ಹರಪನಹಳ್ಳಿ ರೈಲು ಮಾರ್ಗ ರಚನೆಯ ಜಂಟಿ ಕ್ರಿಯಾ ಸಮಿತಿ ಹಾಗೂ ಅದ್ವಿಕ್ ವಿವಿಧೋದ್ದೇಶಗಳ ಅಭಿವೃದ್ಧಿ ಸಂಘದ ಸಹಯೋಗದಲ್ಲಿ ಪ್ರತಿಭಟನೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಗದಗ–ಮುಂಡರಗಿ–ಹೂವಿನಹಡಗಲಿ–ಹರಪನಹಳ್ಳಿ ರೈಲು ಮಾರ್ಗ ಯೋಜನೆ ಮಂಜೂರಾಗಿ 12 ವರ್ಷಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಯೋಜನೆ ಜಾರಿಗೆ ಆಗ್ರಹಿಸಿ ನವದೆಹಲಿಯ ಜಂತರ್‌ಮಂತರ್‌ ಸೇರಿದಂತೆ ಗದಗದಲ್ಲಿಯೂ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಇದರ ಪರಿಣಾಮವಾಗಿ 2015ರಲ್ಲಿ 94 ಕಿಲೋಮೀಟರ್‌ವರೆಗೆ ಸರ್ವೆ ನಡೆಸಲಾಗಿತ್ತು ಎಂದು ಹೇಳಿದರು.

ರೈಲ್ವೆ ಮಂಡಳಿಗೆ ಈ ಯೋಜನೆಯಿಂದ ಶೇ.78ರಷ್ಟು ನಷ್ಟವಾಗುತ್ತದೆ ಎಂಬ ಅವೈಜ್ಞಾನಿಕ ವರದಿ ಸಲ್ಲಿಕೆಯಾಗಿದ್ದರಿಂದ ಯೋಜನೆ ಸ್ಥಗಿತಗೊಂಡಿದೆ ಎಂದು ಆರೋಪಿಸಿದ ಅವರು, ನಿರಂತರ ಹೋರಾಟದ ಫಲವಾಗಿ 2016–17ರ ಕೇಂದ್ರ ಬಜೆಟ್‌ನಲ್ಲಿ ಮರುಸರ್ವೆಗೆ ₹9 ಲಕ್ಷ ಅನುದಾನ ಮಂಜೂರಾದರೂ, ರೈಲ್ವೆ ಮಂಡಳಿ ಇನ್ನೂ ನಿರ್ಲಕ್ಷ್ಯ ಧೋರಣೆ ಮುಂದುವರಿಸಿದೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಗದಗ–ಹರಪನಹಳ್ಳಿ ರೈಲು ಮಾರ್ಗ ರಚನೆಯ ಜಂಟಿ ಕ್ರಿಯಾ ಸಮಿತಿಯ ಮುಂಡರಗಿ ತಾಲೂಕು ಘಟಕದ ಅಧ್ಯಕ್ಷ ಧ್ರುವಕುಮಾರ ಹೂಗಾರ, ವಿಜಯಕುಮಾರ, ಉಪಾಧ್ಯಕ್ಷ ರವಿಗೌಡ ಪಾಟೀಲ, ಸಾರ್ವಜನಿಕ ಹೋರಾಟ ವೇದಿಕೆ ಸದಸ್ಯ ಬಸಪ್ಪ ವಡ್ಡರ ಹಾಗೂ ರಿಯಾಜ್ ಹೊಸಪೇಟೆ ಉಪಸ್ಥಿತರಿದ್ದರು.

ಶಿರಹಟ್ಟಿ ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ: ಶಿರಹಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಈರಪ್ಪ ರಿತ್ತಿ ಅವರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಸೂಕ್ತ ಇಲಾಖಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಮಿತ್ರ ಮಂಡಳಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ದಲಿತ ಮಿತ್ರ ಮಂಡಳಿಯ ಅಧ್ಯಕ್ಷ ಕುಮಾರ ನಡಗೇರಿ, ಕನಕವಾಡ ಗ್ರಾಮದ ದಾದೇಗೌಡ ಪಾಟೀಲ ಅವರನ್ನು ಜುಲೈ 23ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುವ ವೇಳೆ ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಇತರರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಈ ಘಟನೆಯಲ್ಲಿ ದಾದೇಗೌಡ ಪಾಟೀಲ ಅವರ ಎದೆ ಹಾಗೂ ತುಟಿಗೆ ಗಾಯಗಳಾಗಿದ್ದು, ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ದಾಖಲಾಗಿರುವುದಾಗಿ ಅವರು ತಿಳಿಸಿದರು.

ಪಿಎಸ್‌ಐ ಈರಪ್ಪ ರಿತ್ತಿ ವಿರುದ್ಧ ಈ ಹಿಂದೆಯೂ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಆರೋಪಗಳು ಕೇಳಿ ಬಂದಿವೆ ಎಂದು ಆರೋಪಿಸಿದ್ದಾರೆ.

ಇಂತಹ ಆರೋಪಗಳ ಹಿನ್ನೆಲೆಯಲ್ಲಿ ಪಿಎಸ್‌ಐ ಈರಪ್ಪ ರಿತ್ತಿ ಅವರನ್ನು ತಕ್ಷಣ ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು 10 ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಧರಣಿ, ಅಹೋರಾತ್ರಿ ಸತ್ಯಾಗ್ರಹ, ಸರದಿ ಸತ್ಯಾಗ್ರಹ ಹಾಗೂ ಅಮರಣಾಂತಿಕ ಸತ್ಯಾಗ್ರಹ ಸೇರಿದಂತೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನುಬದ್ಧವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದಲಿತ ಮಿತ್ರ ಮಂಡಳಿಯ ಉಪಾಧ್ಯಕ್ಷ ವೆಂಕಟೇಶ ದೊಡ್ಡಮನಿ, ಗೌರವಾಧ್ಯಕ್ಷ ಪಿ.ಎಸ್. ಕಾಳೆ, ಹಿರಿಯ ಮುಖಂಡ ಹುಲಿಗೆಪ್ಪ ವಾಲ್ಮೀಕಿ, ಸದಾನಂದಸಿಂಗ್ ಗುರ್ಲಹೊಸೂರ, ಮಂಜುನಾಥ ಯಮುನಾಳ, ಶಿವು ಬಂಗಾರಿ, ಆನಂದ ಅರಿಕೇರಿ, ಸಂತೋಷ ರಸಾಳಕರ, ಸ್ವರೂಪ ಉಳ್ಳಿಕಾಶಿ, ರಮೇಶ ವಾಲ್ಮೀಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಗಿಲ್ ವಿಜಯೋತ್ಸವ: ವೀರ ಯೋಧರಿಗೆ ಗೌರವ ನಮನ

0

ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಗಡಿಯಲ್ಲಿ ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ ದೇಶದ ಭದ್ರತೆಗಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಭಾರತೀಯ ಯೋಧರ ಸೇವೆ ಅವಿಸ್ಮರಣೀಯ ಎಂದು ಗದಗ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಆರ್.ಎನ್. ಗೋಡಬೋಲೆ ಹೇಳಿದರು.

ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಭಾನುವಾರ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ, ಮಾಜಿ ಹಾಗೂ ಹಾಲಿ ಪ್ಯಾರಾಮಿಲಿಟರಿ ಯೋಧರ ಕಲ್ಯಾಣ ಸಂಘ ಹಾಗೂ ವೀರನಾರಿಯರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ 27ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಸೈನಿಕರು ದೇಶದ ಹೆಮ್ಮೆ. ಅವರ ತ್ಯಾಗ, ಸಾಹಸ ಮತ್ತು ದೇಶಭಕ್ತಿಗೆ ಪ್ರತಿಯೊಬ್ಬ ನಾಗರಿಕರೂ ಗೌರವ ಸಲ್ಲಿಸಬೇಕು. ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಯೋಧರ ತ್ಯಾಗವನ್ನು ಎಂದಿಗೂ ಮರೆಯಬಾರದು ಎಂದು ಅವರು ಹೇಳಿದರು.

ಹಾಲಿ ಹಾಗೂ ಮಾಜಿ ಪ್ಯಾರಾಮಿಲಿಟರಿ ಯೋಧರ ಸಂಘದ ಅಧ್ಯಕ್ಷ ನಾಗರಾಜ ಕುಂದರಗಿ ಮಾತನಾಡಿ, ಸೈನಿಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶದ ಗಡಿಯನ್ನು ಕಾಪಾಡುತ್ತಿದ್ದಾರೆ. ಕಾರ್ಗಿಲ್ ವಿಜಯೋತ್ಸವ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಯೋಧರಿಗೆ ಸರ್ಕಾರ ಹಾಗೂ ಜಿಲ್ಲಾಡಳಿತದಿಂದಲೂ ಅಧಿಕೃತವಾಗಿ ಗೌರವ ಸಲ್ಲಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಒತ್ತಾಯಿಸಿದರು.

ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗೂಳಯ್ಯ ಮಾಲಗಿತ್ತಿಮಠ, ಉಪಾಧ್ಯಕ್ಷ ಎಸ್.ಆರ್. ಪಾಟೀಲ ಹಾಗೂ ಎಸ್.ಎಸ್. ಪೆಂಟಾ ಕಾರ್ಗಿಲ್ ಯುದ್ಧದ ಘಟನೆಗಳು ಮತ್ತು ಭಾರತೀಯ ಸೇನೆಯ ಶೌರ್ಯವನ್ನು ಸ್ಮರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಗೌರವಾರ್ಥ ಮೌನಾಚರಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಬಿ.ವಿ. ಅಬ್ಬಿಗೇರಿ, ಎ.ಎಂ. ತಹಶೀಲ್ದಾರ, ವಿ.ಬಿ. ಬಿಂಗಿ, ವಿಜಯ ಬಡಿಗೇರ, ಜಿ.ಬಿ. ಅರವಟಗಿಮಠ, ಮಹಮ್ಮದ್ ಹನೀಫ್, ಎಸ್.ಎಫ್. ಹೊನ್ನಪ್ಪನವರ, ಮಲ್ಲಿಕಾರ್ಜುನ, ಮಹೇಶ ಆಶಿ, ಕೆ.ಎಸ್. ಹಿರೇಮಠ, ಎಸ್.ಬಿ. ಸರ್ವಿ, ಎಸ್.ಎಸ್. ವಡ್ಡಿನ, ಮಂಗಲೇಶ ವಸ್ತ್ರದ, ಎಫ್.ಎನ್. ಪಾಟೀಲ, ಹಾಲಿ ಹಾಗೂ ಮಾಜಿ ಪ್ಯಾರಾಮಿಲಿಟರಿ ಯೋಧರ ಸಂಘದ ಬಸಯ್ಯ ಹಿರೇಮಠ, ಈಶ್ವರಪ್ಪ ಕರ್ಕಿಕಟ್ಟಿ, ಪ್ರಭಣ್ಣ ಮಾಕಾಪೂರ, ಮುತ್ತಣ್ಣ, ಬಸಪ್ಪ ಸಂದಿಮನಿ, ಮಲ್ಲಯ್ಯ ಕರವೀರಮಠ, ಶಂಭುಲಿಂಗಯ್ಯ ಹಾದಿಮನಿ, ಅಶೋಕ ಷಡಕ್ಷರಿ, ಅಂದಪ್ಪ ಅಬ್ಬಿಗೇರಿ, ಮಲ್ಲಿಕಾರ್ಜುನ ಮೇವುಂಡಿ, ವೀರನಾರಿಯರಾದ ಶಿವಲೀಲಾ ಬಾವಿಕಟ್ಟಿ, ಮೀನಾಕ್ಷಿ ಬಡಿ, ರೇಣುಕಾ ಮರಡಿ, ಗೀತಾ ಪೂಜಾರ, ಶಿವಲೀಲಾ ಚಿಗರಿ, ಇಂದಿರಾ ಹೆಬಸೂರ ಸೇರಿದಂತೆ ಪೊಲೀಸರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

“ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವ ಭಾರತೀಯ ಯೋಧರ ಸೇವೆ ಸದಾ ಸ್ಮರಣೀಯ. ಅವರ ತ್ಯಾಗಕ್ಕೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು.”

– ಡಾ. ಆರ್.ಎನ್. ಗೋಡಬೋಲೆ, ಸಭಾಪತಿ, ಗದಗ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ

ವಿಬಿಜಿ ರಾಮ್‌ಜೀ ಯೋಜನೆಗೆ ಶಾಸಕ ಡಾ. ಚಂದ್ರು ಲಮಾಣಿ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ವಿಬಿಜಿ ರಾಮ್‌ಜೀ ಯೋಜನೆಗೆ ಶಾಸಕ ಡಾ. ಚಂದ್ರು ಲಮಾಣಿ ಸೋಮವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಯೋಜನೆಯಡಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ವಿಬಿಜಿ ರಾಮ್‌ಜೀ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಮಹತ್ವದ ಯೋಜನೆಯಾಗಿದೆ. ತಾಲೂಕು ಪಂಚಾಯಿತಿಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಮನ್ವಯದಿಂದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಸ್ಥಳೀಯರಿಗೆ ಉದ್ಯೋಗ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಯೋಜನೆಯಡಿ ಸದ್ಯ ರಸ್ತೆ ಕಾಮಗಾರಿಗಳಿಗೆ ಅವಕಾಶವಿರುವುದರಿಂದ ಶಿಗ್ಲಿ ಗ್ರಾಮದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಜೊತೆಗೆ ದೊಡ್ಡೂರು–ಶಿಗ್ಲಿ ರಸ್ತೆ ಹಾಗೂ ಲಿಂಗರಾಜ ಸರ್ಕಲ್‌ನಿಂದ ಹಳೆ ಬಸ್ ನಿಲ್ದಾಣದವರೆಗೆ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಗುಣಮಟ್ಟದ ಕಾಮಗಾರಿ ನಡೆಸಲು ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ರಾಗಿ, ಬಸಣ್ಣ ಕಳಸದ, ಹನಮಂತಪ್ಪ ತಳವಾರ, ಡಿ.ವೈ. ಹುನಗುಂದ, ರಾಮಣ್ಣ ಲಮಾಣಿ, ಯಲ್ಲಪ್ಪ ತಳವಾರ, ಅಶೋಕ ತೋಟದ, ಅಶೋಕಯ್ಯ ಮುಳಗುಂದಮಠ, ಈರಣ್ಣ ಅಕ್ಕೂರ, ಆನಂದ ತೆವರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳ ಹಕಾರಿ, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ, ವೀರಣ್ಣ ಅಳ್ಳಳ್ಳಿ, ಪಿಡಿಒ ರವಿ ಕೊರಕನವರ, ಡಿಐಇಸಿ ಎಚ್.ಎಂ. ಮಂಜುನಾಥಸ್ವಾಮಿ, ಶಂಭು ಹುನಗುಂದ, ಸಂಜೀವ ದೇಸಾಯಿ, ಮಂಜುನಾಥ ಸೂರಣಗಿ, ಸಂತೋಷ ತಾಂದಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅಂಗನವಾಡಿಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಚ್‌ಡಿಎಫ್‌ಸಿ ಲೈಫ್ (ಮುಂಬೈ) ಹಾಗೂ ಕಲಿಕೆ–ಟಾಟಾ ಟ್ರಸ್ಟ್ಸ್ (ಬೆಂಗಳೂರು) ಸಹಯೋಗದಲ್ಲಿ ನಾಲ್ಕು ವರ್ಷಗಳ ಅವಧಿಯ ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಗಿದೆ.

2026-27ನೇ ಸಾಲಿನಿಂದ ಜಿಲ್ಲೆಯ ಐದು ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯ 1,248 ಅಂಗನವಾಡಿ ಕೇಂದ್ರಗಳಲ್ಲಿ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಜಿ. ಮಣ್ಣೂರ, ಶಾಲಾಪೂರ್ವ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ ಹೆಜ್ಜೆಯಾಗಿದ್ದು, ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಶಿವಕುಮಾರ ಡಿ. ಅವರು ಕಾರ್ಯಕ್ರಮದ ರೂಪರೇಷೆ ಕುರಿತು ವಿವರಿಸಿದರೆ, ಎಚ್‌ಡಿಎಫ್‌ಸಿ ಲೈಫ್‌ನ ಎಸ್‌ವಿಪಿ (ಮಾರ್ಕೆಟಿಂಗ್–ಸಿಎಸ್‌ಆರ್) ರೀನಾ ಭಾತಿರ್ ಯೋಜನೆಗೆ ಅಗತ್ಯವಿರುವ ಅನುದಾನ ಹಾಗೂ ಅನುಷ್ಠಾನದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ಶ್ರೀಧರ್, ರೀಜಿನಲ್ ಹೆಡ್ ಸೂರಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಕಲಿಕೆ–ಟಾಟಾ ಟ್ರಸ್ಟ್ಸ್‌ನ ಇಸಿಸಿಇ ಕಾರ್ಯಕ್ರಮ ಅಧಿಕಾರಿ ಕೊಟ್ರೇಶ್ ಎ.ವೈ., ಜಿಲ್ಲಾ ವ್ಯವಸ್ಥಾಪಕ ಅಶೋಕ, ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕಿಯರು ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ನೇತ್ರಾ ನಿರೂಪಿಸಿ, ವಂದಿಸಿದರು.

ಮಹಿಳೆಯರ ಶೌಚಗೃಹ ನಿರ್ಮಾಣಕ್ಕೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಸಮೀಪದ ಖಾಲಿ ಜಾಗದಲ್ಲಿ ಮಹಿಳೆಯರಿಗಾಗಿ ಸುಸಜ್ಜಿತ ಸಾರ್ವಜನಿಕ ಶೌಚಗೃಹ ನಿರ್ಮಿಸಬೇಕೆಂದು ಆಗ್ರಹಿಸಿ, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಸೋಮವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿದಿನ ನೂರಾರು ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಶಾಲೆ-ಕಾಲೇಜು, ಸರ್ಕಾರಿ ಕಚೇರಿ ಹಾಗೂ ವಿವಿಧ ವ್ಯವಹಾರಗಳ ನಿಮಿತ್ತ ಲಕ್ಷ್ಮೇಶ್ವರಕ್ಕೆ ಆಗಮಿಸುತ್ತಾರೆ. ಆದರೆ ಮಾರುಕಟ್ಟೆ ಪ್ರದೇಶದಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಗೃಹದ ವ್ಯವಸ್ಥೆ ಇಲ್ಲದಿರುವುದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮಹಿಳೆಯರ ಸುರಕ್ಷತೆ, ಆರೋಗ್ಯ ಮತ್ತು ಗೌರವದ ದೃಷ್ಟಿಯಿಂದ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಗೃಹ ನಿರ್ಮಿಸಿ, ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸೀರಾಜ್ ಢಾಲಾಯತ್, ಸೋಮು ಉಪ್ಪಾರ, ಹನಮಂತಪ್ಪ ಜಗದಮನಿ, ಮಂಜುನಾಥ ಬಸ್ಸಾಪೂರ, ಮಾಬುಸಾಬ್ ಅಂಜನವರ, ರಾಜೇಸಾಬ್ ಮುಲ್ಲಾನವರ, ಪ್ರಶಾಂತ ಹುರಕನವರ, ಬಸವರಾಜ ನಡವಳಕೇರಿ, ಚಂದ್ರಣ್ಣ ಗುಡಸಲಮನಿ, ಮಹಾಂತೇಶ ಹಾದಿಮನಿ, ಕಿರಣ ಗುಡಸಲಮನಿ, ಈರಣ್ಣ ಮೆಣಸಿನಕಾಯಿ, ಜಮಾಲ್ ನದಾಫ್, ನಿಸಾರ್ ಜಂಗಾಪೂರಿ, ಮಲ್ಲೇಶ ಅಂಕಲಿ, ನಿಸಾರ್ ಚನ್ನಪಟ್ಟಣ, ಮೃತ್ಯುಂಜಯ ಧಾರವಾಡ, ದಾವಲ್ ಹತ್ತಿಮತ್ತೂರ, ಜಿಲಾನಿ ತಲಿನ್, ಇಬ್ರಾಹಿಂ ಪಟೇಗಾರ, ಶಾಹಿದ್ ಊಳಟ್ಟಿ, ನಿಂಗಪ್ಪ ಮುಳಗುಂದ, ದಾದಾಪೀರ ಸೂರಣಗಿ, ಸುಲೇಮಾನ್ ಆಡೂರ, ಮೊಹಮ್ಮದ್ ಬಿಜಾಪುರ ಸೇರಿದಂತೆ ಸಂಘದ ಅನೇಕ ಸದಸ್ಯರು ಉಪಸ್ಥಿತರಿದ್ದರು.