Home Blog Page 3013

ಶಕೀಬ್ ಅಲ್ ಹಸನ್ ಗೆ ನಿಷೇಧ!

ವಿಜಯಸಾಕ್ಷಿ ಸುದ್ದಿ, ಢಾಕಾ

ಢಾಕಾ ಪ್ರಿಮಿಯರ್ ಲೀಗ್ ನಡೆಯುತ್ತಿದ್ದ ಸಂದರ್ಭದಲ್ಲಿ ಮೈದಾನದಲ್ಲಿ ಅಂಪೈರ್ ಮುಂದೆ ದುರ್ವರ್ತನೆ ಪ್ರದರ್ಶಿಸಿದ್ದ ಬಾಂಗ್ಲಾದೇಶ ಆಲ್ ರೌಂಡರ್ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಗೆ ಶಿಕ್ಷೆ ವಿಧಿಸಲಾಗಿದೆ.
ಮೊಹಮ್ಮದಿನ್ ಸ್ಪೋರ್ಟಿಂಗ್ ತಂಡದ ನಾಯಕ ಶಕೀಬ್ ಅಲ್ ಹಸನ್ ಗೆ ನಾಲ್ಕು ಪಂದ್ಯಗಳ ನಿಷೇಧ ಹೇರಲಾಗಿದೆ. ಹೀಗಾಗಿ ಅವರು ಲೀಗ್ ನ ಎಂಟು, ಒಂಭತ್ತು, ಹತ್ತು ಮತ್ತು ಹನ್ನೊಂದನೆ ಹಂತದ ಪಂದ್ಯಗಳಲ್ಲಿ ಆಡುವಂತಿಲ್ಲ.

ಟೂರ್ನಿಯಲ್ಲಿ ಅಬಹಾನಿ ಲಿಮಿಟೆಡ್ ವಿರುದ್ಧ ಮೊಹಮ್ಮದಿನ್ ಸ್ಪೋರ್ಟಿಂಗ್ ತಂಡ ಡಕ್ವರ್ತ್-ಲೂಯಿಸ್ ವಿಧಾನದ ಮೂಲಕ ಗೆಲುವು ದಾಖಲಿಸಿತ್ತು. ಈ ಸಂದರ್ಭದಲ್ಲಿ ಶಕೀಬ್ ಆಕ್ರೋಶಭರಿತದ ವರ್ತನೆ ತೋರಿಸಿದ್ದರು. ಸ್ಟಂಪ್ ಗಳನ್ನು ಒದ್ದು, ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಅವರಿಗೆ ನಾಲ್ಲು ಪಂದ್ಯಗಳ ನಿಷೇಧ ಹೇರಲಾಗಿದೆ ಎಂದು ಬಾಂಗ್ಲಾದೇಶದ ಕ್ರಿಕೆಟ್ ಪೋರ್ಟಲ್ ಬಿಡಿ ಕ್ರಿಕ್ ಟೈಮ್ ವರದಿ ಮಾಡಿದೆ.

ಮುಶ್ಫಿಕೂರ್ ರಹೀಮ್ ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದರಿಂದ ಕೋಪಗೊಂಡ ಶಕೀಬ್ ಮೊದಲಿಗೆ ಸ್ಟಂಪ್‌ಗೆ ಒದ್ದರು. ನಂತರ ಅಬಹಾನಿ ಇನ್ನಿಂಗ್ಸ್ ನ ಆರನೇ ಓವರ್‌ ವೇಳೆ ವಿರಾಮಕ್ಕೆ ಅಂಪೈರ್ ಗಳು ಕರೆ ನೀಡಿದ್ದರು. ಆಗ ಶಕೀಬ್ ಮೂರು ಸ್ಟಂಪ್‌ ಗಳನ್ನು ಕಿತ್ತು ಹಾಕಿ ದುರ್ವರ್ತನೆ ತೋರಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದಕ್ಕೆ ಸಾರ್ವಜನಿಕರು ಹಾಗೂ ಶಕೀಬ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.
ಕೂಡಲೇ ಘಟನೆ ಕುರಿತು ಟ್ವೀಟ್ ಮಾಡಿ ಶಕೀಬ್ ಕ್ಷಮೆಯಾಚಿಸಿದ್ದರು.

ಸಂಯಮ ಕಳೆದುಕೊಂಡು ಎಲ್ಲರಿಗೂ ಮತ್ತು ವಿಶೇಷವಾಗಿ ಮನೆಯಿಂದ ನೋಡುತ್ತಿರುವವರ ನೆಮ್ಮದಿ ಹಾಳು ಮಾಡಿದ್ದಕ್ಕೆ ನಾನು ತುಂಬಾ ವಿಷಾಧಿಸುತ್ತೇನೆ. ಒಬ್ಬ ಅನುಭವಿ ಆಟಗಾರ ಈ ರೀತಿ ಪ್ರತಿಕ್ರಿಯಿಸಬಾರದು. ಆದರೆ ಕೆಲವೊಮ್ಮೆ ಎಲ್ಲಾ ವಿಲಕ್ಷಣಗಳ ವಿರುದ್ಧವೂ ದುರದೃಷ್ಟವಶಾತ್ ಸಂಭವಿಸುತ್ತವೆ ಎಂದು ಫೇಸ್ ಬುಕ್ ನಲ್ಲಿ ಕ್ಷಮೆಯಾಚಿಸಿ ಬರೆದುಕೊಂಡಿದ್ದರು.

ಶಕೀಬ್ ಅಲ್ ಹಸನ್ ಬಾಂಗ್ಲಾದ ಉತ್ತಮ ಆಲ್ ರೌಂಡರ್ ಗಳಲ್ಲಿ ಒಬ್ಬರು. 34 ವರ್ಷದ ಶಕೀಬ್ ಎಲ್ಲ ರೀತಿಯ ಆಟಗಳಿಂದ 10 ಸಾವಿರಕ್ಕೂ ಅಧಿಕ ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಅಲ್ಲದೇ, ಸುಮಾರು 600ಕ್ಕೂ ಅಧಿಕ ವಿಕೆಟ್ ಕಿತ್ತಿದ್ದಾರೆ.

ಜೂ. 18ಕ್ಕೆ ಯಡಿಯೂರಪ್ಪ ಭವಿಷ್ಯ ನಿರ್ಧಾರ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಇದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಜೂ. 18ಕ್ಕೆ ಶಾಸಕರ ಸಭೆ ನಡೆಸುವಂತೆ ರಾಜ್ಯ ಬಿಜೆಪಿಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ ಎನ್ನಲಾಗಿದ್ದು, ಸಾಕಷ್ಟು ಸಂಚಲನ ಮೂಡಿಸಿದೆ.

ಇತ್ತೀಚೆಗಷ್ಟೇ ಸಿಎಂ ಯಡಿಯೂರಪ್ಪ ಅವರು, ಇನ್ನೂ ಎರಡು ವರ್ಷಗಳ ಕಾಲ ನಾನೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದರ ಮಧ್ಯೆ ಹೈಕಮಾಂಡ್ ಕೂಡ ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆಯ ವಿಚಾರ ಇಲ್ಲ. ಸಿಎಂ ಯಡಿಯೂರಪ್ಪ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರೇ ಮುಂದುವರೆಯುತ್ತಾರೆ ಎಂದು ಹೇಳಿತ್ತು. ಇದರ ಬೆನ್ನಲ್ಲಿಯೇ ಮತ್ತೆ ಈ ವಿಷಯ ಜೀವಂತಿಕೆ ಉಳಿಸಿಕೊಂಡಿದ್ದು, ಹಲವಾರು ವದಂತಿಗಳು ಹರಿದಾಡುತ್ತಿವೆ. ಹೀಗಾಗಿ ರಾಜ್ಯ ಬಿಜೆಪಿ ಶಾಸಕರ ಜೊತೆ ಸಭೆ ನಡೆಸಲು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ನಾಯಕತ್ವ ಬದಲಾವಣೆಯ ಕುರಿತು ಇರುವ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಶಾಸಕರ ಸಭೆ ನಡೆಸಬೇಕೆಂದು ಹಲವು ಶಾಸಕರು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಒತ್ತಡ ಹಾಕುತ್ತಿದ್ದರು. ಹೀಗಾಗಿ ಬಂಡಾಯ ಶಾಸಕರ ಒತ್ತಾಯಕ್ಕೆ ಮಣಿದು ಅರುಣ್ ಸಿಂಗ್, ಶಾಸಕರ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಾಗಿದೆ.

ಈ ನಿಟ್ಟಿನಲ್ಲಿ ಶಾಸಕರ ಸಭೆ ಆಯೋಜಿಸುವ ಸಿದ್ಧತೆ ಬಿಜೆಪಿಯಲ್ಲಿ ನಡೆದಿದೆ ಎನ್ನಲಾಗಿದೆ. ಜೂ. 18ಕ್ಕೆ ಶಾಸಕರ ಸಭೆ ನಡೆಯುವ ಸಾದ್ಯತೆ ಕೂಡ ಇದೆ. ಆ ನಂತರ ಅರುಣ್ ಸಿಂಗ್ ಅವರು ನೀಡುವ ವರದಿಯ ಮೇಲೆ ಸಿಎಂ ಯಡಿಯೂರಪ್ಪ ಅವರ ಭವಿಷ್ಯ ಅಡಗಿದೆ ಎನ್ನಲಾಗುತ್ತಿದೆ. ವಿರೋಧಿ ಬಣಗಳ ತಂತ್ರ ಫಲಿಸಲಿದೆಯೇ? ಅಥವಾ ನಾಯಕತ್ವಕ್ಕೆ ಮಾದರಿಯಾಗಿರುವ ಯಡಿಯೂರಪ್ಪ ವಿರೋಧಿಗಳ ಶಕ್ತಿ ಹತ್ತಿಕ್ಕುವರೇ? ಎಂಬುವುದನ್ನು ಕಾಯ್ದು ನೋಡಬೇಕಿದೆ.

ಫೇಸ್ ಬುಕ್ ನಲ್ಲಿ ರಾಜ್ಯದ ಸಿಎಂ ಆದ ಅರವಿಂದ್ ಬೆಲ್ಲದ!

ವಿಜಯಸಾಕ್ಷಿ ಸುದ್ದಿ, ಧಾರವಾಡ

ರಾಜ್ಯದಲ್ಲಿ ಸಿಎಂ ಬದಲಾವಣೆಯ ಕೂಗು ಭಾರಿ ಸದ್ದು ಮಾಡುತ್ತಿದೆ. ಈ ಚರ್ಚೆ ತಾರಕಕ್ಕೆ ಏರಿದ ಬೆನ್ನಲ್ಲಿಯೇ ಶಾಸಕ ಅರವಿಂದ ಬೆಲ್ಲದ್ ಅವರು ದೆಹಲಿ ಪ್ರಯಾಣ ಬೆಳೆಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇಂತಹ ಬೆಳವಣಿಗೆಗಳ ಮಧ್ಯೆಯೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅರವಿಂದ್ ಬೆಲ್ಲದ್ ಮುಂದಿನ ಸಿಎ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹುಬ್ಬಳ್ಳಿ – ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಅರವಿಂದ್ ಬೆಲ್ಲದ್ ಅವರ ಫೋಟೋ ಹಾಕಿ, ನಮ್ಮ ಮುಂದಿನ ಸಿಎಂ ಇವರೇ ಎಂದು ಬರೆದುಕೊಂಡು ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ರಾಜ್ಯದ ಮುಂದಿನ ಮುಖ್ಯಮಂತ್ರಿ, ಉತ್ತರ ಕರ್ನಾಟಕ ವೀರಶೈವ ಮುಖಂಡ ಅರವಿಂದ ಬೆಲ್ಲದ್ ಅವರು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಸಂಬ್ರಮಿಸುತ್ತಿದ್ದಾರೆ.

ಹುಬ್ಬಳ್ಳಿ- ಧಾರವಾಡ ಭಾಗದಲ್ಲಿನ ಬೆಲ್ಲದ್ ಅವರ ಅಭಿಮಾನಿಗಳ ಫೇಸ್ ಬುಕ್ ಖಾತೆಯಲ್ಲಿ ಈ ಕುರಿತು ಬರೆದುಕೊಳ್ಳಲಾಗಿದೆ. ಸದ್ಯ ಅರವಿಂದ ಬೆಲ್ಲದ್ ಸಿಎಂ ಯಡಿಯೂರಪ್ಪ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲಯಲ್ಲಿ ಅವರು ದೆಹಲಿಗೆ ಕೂಡ ಹೋಗಿ ವರಿಷ್ಠರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ. ಆದರೆ, ಇದು ಪಕ್ಷದಲ್ಲಿ ಸಹನೀಯ ಕಾರ್ಯವಾಗಬಹುದು. ಆದರೆ, ಇದು ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಬಹುದು.

ಅರವಿಂದ್ ಬೆಲ್ಲದ್ ಅವರ ಅಭಿಮಾನಿಗಳ ವರ್ತನೆ ಇದೇ ರೀತಿ ಮುಂದುವರೆದರೆ, ಬೆಲ್ಲದ್ ಅವರ ರಾಜಕೀಯದ ಮೇಲೆ ಮಂಕು ಕವಿಯುವ ಸಾಧ್ಯತೆಯೇ ಹೆಚ್ಚಾಗಿದೆ.

ಅತ್ತಿಗೆ, ನಾದಿನಿಯ ಜಗಳ ಅಂತ್ಯವಾಗಿದ್ದು ಹೇಗೆ?

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಕೌಟುಂಬಿಕ ಕಲಹಕ್ಕೆ ಬೇಸತ್ತ ಮಹಿಳೆಯೊಬ್ಬರು ತಮ್ಮ ಅತ್ತಿಗೆಯನ್ನು ಕೊಲೆ ಮಾಡಿ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನಾಗಮಂಗಲದ ಕಂಬದಹಳ್ಳಿಯಲ್ಲಿ ನಡೆದಿದೆ.

ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಪ್ರಿಯಾಂಕ (32) ನಾದಿನಿಯಿಂದ ಕೊಲೆಯಾದ ಅತ್ತಿಗೆಯಾಗಿದ್ದು, ಗಿರಿಜಾ(31) ಅತ್ತಿಗೆಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ನಾದಿನಿಯಾಗಿದ್ದಾರೆ. ಆ ನಂತರ ಇವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪ್ರಿಯಾಂಕಾ ಹಾಗೂ ಗಿರಿಜಾ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಹೀಗಾಗಿ ಇಬ್ಬರೂ ನಿನ್ನೆ ಕೂಡ ಜಗಳ ಮಾಡಿಕೊಂಡಿದ್ದರು. ಸಂದರ್ಭದಲ್ಲಿ ಕೋಪದಲ್ಲಿಯೇ ಇದ್ದ ಗಿರಿಜಾ ತಡರಾತ್ರಿ ತನ್ನ ಅತ್ತಿಗೆಯನ್ನು ಕೊಲೆ ಮಾಡಿದ್ದಾಳೆ. ಈ ಕುರಿತು ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಫೋನ್ ನಲ್ಲಿ ಮಾತನಾಡಬೇಡ ಎಂದಿದ್ದಕ್ಕೆ ಪತ್ನಿ ಮಾಡಿದ್ದೇನು?

ವಿಜಯಸಾಕ್ಷಿ ಸುದ್ದಿ, ಕಾರವಾರ

ಪತ್ನಿ ಮೊಬೈಲ್ ನಲ್ಲಿಯೇ ಮಾತನಾಡುತ್ತ ಹೆಚ್ಚು ಕಾಲ ಕಳೆಯುತ್ತಿದ್ದಕ್ಕೆ ಬುದ್ಧಿ ಹೇಳಿದ್ದಕ್ಕೆ ಸುಫಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಲು ಪ್ರಯತ್ನಿಸಿರುವ ಘಟನೆ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ. ಪತಿಯನ್ನೇ ಕೊಲ್ಲಲು ರೂ. 30 ಸಾವಿರಕ್ಕೆ ಸುಫಾರಿ ನೀಡಿ ಈಗ ಹೆಂಡತಿ ಸಿಕ್ಕು ಬಿದಿದ್ದಾರೆ.

ಸರಸ್ವತಿ ಸುತಾರ ಎಂಬ ಮಹಿಳೆಯೇ ಈ ಕೃತ್ಯ ಎಸಗಿದ್ದವಳು. ಈ ಮಹಿಳೆ ದಾಂಡೇಲಿಯ ಅಂಕುಷ ರಾಮಾ ಸುತಾರ ಎಂಬ ವ್ಯಕ್ತಿಯೊಂದಿಗೆ ಕಳೆದ 6 ವರ್ಷಗಳ ಹಿಂದೆ ವಿವಾಹವಾಗಿದ್ದಳು. ಇವರಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಮನೆಯಲ್ಲಿ ಸಮಯ ಕಳೆಯುವುದಕ್ಕಾಗಿ ನೆಂಟರು ಹಾಗೂ ಪರಿಚಯಸ್ಥರೊಂದಿಗೆ ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಿದ್ದಳು.
ಆದರೆ, ಮಡದಿಯ ವರ್ತನೆಯಿಂದ ಪತಿ, ಮೊಬೈಲ್ ನಲ್ಲಿ ಹರಟದಂತೆ ಬುದ್ದಿ ಹೇಳಿದ್ದರು. ಇದರಿಂದ ಕೆಂಡಾಮಂಡಲವಾದ ಪತ್ನಿ, ಪರಿಚಯದ ಗಣೇಶ ಶಾಂತರಾಂ ಎಂಬುವವನಿಗೆ ರೂ. 30 ಸಾವಿರ ಕೊಟ್ಟು ಹತ್ಯೆ ಮಾಡುವಂತೆ ಸುಫಾರಿ ಕೊಟ್ಟಿದ್ದಾಳೆ ಎನ್ನಲಾಗಿದೆ.

ಸುಫಾರಿ ಪಡೆದ ಗಣೇಶ ಶಾಂತರಾಂ ಹಾಗೂ ಇಬ್ಬರು ಅಪ್ರಾಪ್ತ ಬಾಲಕರು ಮನೆಗೆ ಆಗಮಿಸಿ, ಅಂಕುಷ ರಾಮಾ ಸುತಾರ ಅವರ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ. ಆಗ ಅಂಕುಷ ಕೂಗಾಟ ನಡೆಸಿದ್ದಾರೆ. ಕೂಡಲೇ ಪಕ್ಕದ ಮನೆಯಲ್ಲಿದ್ದ ಸಹೋದರರು ಓಡಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಹತ್ಯೆ ಮಾಡಲು ಬಂದಿದ್ದ ಇಬ್ಬರು ಅಪ್ರಾಪ್ತರು ಓಡಿಹೋಗಿದ್ದು, ಸುಪಾರಿ ತೆಗೆದುಕೊಂಡ ಗಣೇಶ್ ಶಾಂತರಾಂ ಸಿಕ್ಕಿಬಿದ್ದಿದ್ದಾನೆ.

ಈ ಕುರಿತು ದಾಂಡೇಲಿಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಸ್ವತಿ ಸುತಾರ ಮತ್ತು ಬೆಳಗಾವಿ ಮೂಲದ ಗಣೇಶ ಶಾಂತರಾಂನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಭಾರತೀಯ ಟೀಮ್ ನಲ್ಲಿ ಆತ್ಮವಿಶ್ವಾಸ ಮೂಡಿಸಿದ ರಿಷಬ್ ಪಂತ್!

ವಿಜಯಸಾಕ್ಷಿ ಸುದ್ದಿ, ಸೌತಾಂಪ್ಟನ್

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಕ್ವಾರಂಟೈನ್ ಮುಗಿಸಿ ,4 ದಿನಗಳ ಇಂಟ್ರಾ ಸ್ಕ್ವಾಡ್ ಅಭ್ಯಾಸ ಪಂದ್ಯ ಆಡುತ್ತಿದೆ.
ಈ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಅರ್ಧ ಶತಕ ಬಾರಿಸಿ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.

ಜೂ. 18ರಿಂದ 22ರ ವರೆಗೆ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ನಡೆಯಲಿದೆ. ಹೀಗಾಗಿ ವಿರಾಟ್ ಕೊಹ್ಲಿ ಪಡೆ ತಂಡದೊಳಗೆ ಅಭ್ಯಾಸ ನಡೆಸುತ್ತಿದೆ. ಇನ್ನೊಂದೆಡೆ ಭಾರತ ತಂಡವನ್ನು ಫೈನಲ್ ನಲ್ಲಿ ಎದುರಿಸಲಿರುವ ನ್ಯೂಜಿಲೆಂಡ್‌ ತಂಡ ಇಂಗ್ಲೆಂಡ್‌ ವಿರುದ್ಧ ದ್ವಿತೀಯ ಟೆಸ್ಟ್‌ ಪಂದ್ಯ ಆಡುತ್ತಿದೆ.

ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ ರಿಷಭ್ ಪಂತ್ ಅಭ್ಯಾಸ ವೇಳೆಯೂ ಬಿರುಸಿನ ಬ್ಯಾಟಿಂಗ್‌ ನಡೆಸಿದ್ದಾರೆ. ಹೀಗಾಗಿ ಅವರು ಟೆಸ್ಟ್ ಚಾಂಪಿಯನ್‌ ಶಿಪ್‌ ನಲ್ಲಿ ಉತ್ತಮ ಬ್ಯಾಟಿಂಗ್‌ ನ ನಿರೀಕ್ಷೆ ಮೂಡಿಸಿದ್ದಾರೆ. ಇದು ಭಾರತೀಯ ತಂಡದ ಆತ್ಮವಿಶ್ವಾಸಕ್ಕೆ ಕಾರಣವಾಗುತ್ತಿದೆ.

ರಾಜ್ಯದಲ್ಲಿಯೂ ಮಕ್ಕಳ ಮೇಲೆ ಪ್ರಯೋಗ!

ವಿಜಯಸಾಕ್ಷಿ ಸುದ್ದಿ, ಮೈಸೂರು

ರಾಜ್ಯದಲ್ಲಿಯೂ ಮಕ್ಕಳ ಮೇಲೆ ಲಸಿಕೆ ಪ್ರಯೋಗ ನಡೆಯುತ್ತಿದೆ.
ಇಲ್ಲಿಯ ಚೆಲುವಾಂಬ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಮೊದಲ ಡೋಸ್ ಪ್ರಯೋಗ ನಡೆಯುತ್ತಿದೆ. ಮೊದಲ ಹಂತದಲ್ಲಿ 30 ಮಕ್ಕಳ ಮೇಲೆ ಪ್ರಯೋಗ ಮಾಡಲಾಗಿದೆ.

ವ್ಯಾಕ್ಸಿನ್ ಪಡೆದ ಮಕ್ಕಳು ಕಳೆದ 6 ದಿನಗಳಿಂದ ಆರೋಗ್ಯವಾಗಿದ್ದಾರೆ. 30 ಮಕ್ಕಳಲ್ಲಿ ಇಬ್ಬರಿಗೆ ಜ್ವರ ಬಂದಿದ್ದು, ಕೆಲವರಿಗೆ ಸೂಜಿ ಚುಚ್ಚಿದ ಜಾಗದಲ್ಲಿ ಮಾತ್ರ ಸ್ವಲ್ಪ ನೋವು ಕಂಡು ಬಂದಿದೆ. ವಯಸ್ಕರಿಗೆ ನೀಡಿದ ಪ್ರಮಾಣದಲ್ಲಿಯೇ ಮಕ್ಕಳಿಗೂ ಲಸಿಕೆ ನೀಡಲಾಗಿದೆ. ವೈದ್ಯರು ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.

ಒಂದು ತಿಂಗಳ ನಂತರ ವ್ಯಾಕ್ಸಿನ್ ಪಡೆದ ಮಕ್ಕಳ ರಕ್ತದ ಮಾದರಿ ಸಂಗ್ರಹ ಮಾಡಿ, ಮಕ್ಕಳ ದೇಹದ ಮೇಲೆ ವ್ಯಾಕ್ಸಿನ್ ಪರಿಣಾಮದ ಬಗ್ಗೆ ಟೆಸ್ಟ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.

ಸದ್ಯ ರಾಜ್ಯದಲ್ಲಿ 175 ಮಕ್ಕಳ ಮೇಲೆ ಪ್ರಯೋಗ ನಡೆದಿದೆ. ಇದು ಯಶಸ್ವಿಯಾದ ನಂತರವಷ್ಟೇ 6 ರಿಂದ 12 ಹಾಗೂ 2 ರಿಂದ 6 ವಯಸ್ಸಿನ ಮಕ್ಕಳ ಮೇಲೆ ಪ್ರಯೋಗ ನಡೆಯಲಿದೆ.

ಈ ಪ್ರಯೋಗವು ರಾಜ್ಯದಲ್ಲಿ 7 ತಿಂಗಳ ಕಾಲ ನಡೆಯಲಿದೆ. ಈಗ ರಾಜ್ಯದಲ್ಲಿ ಏಕೈಕ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ವಾಕ್ಸಿನ್ ಪ್ರಯೋಗವಾಗಿದ್ದು, ದೇಶದಲ್ಲಿ ಒಟ್ಟು 10 ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ಪ್ರಯೋಗವಾಗಿದೆ.

ಗದಗ ಸೇರಿದಂತೆ ರಾಜ್ಯದಲ್ಲಿ ನಾಲ್ಕು ದಿನ ಅಬ್ಬರಿಸಲಿದ್ದಾನೆ ಮಳೆರಾಯ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದ ಹಲವು ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಮಳೆರಾಯ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚೆ ನೀಡಿದೆ.
ಕರಾವಳಿ, ಮಲೆನಾಡು, ಉತ್ತರ ಒಳನಾಡು ಸೇರಿದಂತೆ ಹಲವೆಡೆ ಜೂ. 16ರ ವರೆಗ ಮಳೆ ಸುರಿಯುವ ಸಾಧ್ಯತೆ ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಕೂಡ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಅಸಮಾಧಾನದ ಹೊಗೆ! ಬ್ಯಾನರ್‌ನಲ್ಲಿ ಫೋಟೋ ಇಲ್ಲದ್ದಕ್ಕೆ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಯುವ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಯುವ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸಾಮಾಜಿಕ ಮಾಧ್ಯಮಗಳ ಮೂಲಕ ಜಗಜ್ಜಾಹೀರಾಗುತ್ತಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಹೀಗಾಗಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಯುತ್ತಿವೆ.

ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯೂ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಜಿಲ್ಲೆಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವುದಕ್ಕಾಗಿ ಬ್ಯಾನರ್ ಸಿದ್ಧಪಡಿಸಲಾಗಿತ್ತು. ಅದಕ್ಕಾಗಿಯೇ ಎಲ್ಲ ನಾಯಕರ ಭಾವಚಿತ್ರಗಳನ್ನು ಬ್ಯಾನರ್‌ನಲ್ಲಿ ಹಾಕಲಾಗಿತ್ತು. ಆದರೆ, ಅಲ್ಪಸಂಖ್ಯಾತರ ಅಧ್ಯಕ್ಷರ ಭಾವಚಿತ್ರ ಅದರಲ್ಲಿ ಹಾಕಿರಲಿಲ್ಲ. ಇದರಿಂದಾಗಿ ಕೆಲವು ಅಲ್ಪಸಂಖ್ಯಾತ ಕಾರ್ಯಕರ್ತರು ಸೋಶಿಯಲ್ ಮೀಡಿಯಾದಲ್ಲಿ ಅಧ್ಯಕ್ಷ ಅಶೋಕ ಮಂದಾಲಿ ಅವರ ಕಾಲೆಳೆದಿದ್ದಾರೆ.

ಫೇಸ್‌ಬುಕ್ ಸಾಮಾಜಿಕ ಜಾಲತಾಣದ ಮೂಲಕ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಅಧ್ಯಕ್ಷರು ಇದ್ದಾರೋ ಅಥವಾ ಇಲ್ಲವೋ ಎಂಬುವುದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಕ್ರೋಶ ಹೊರಹಾಕಲಾಗಿದೆ. ಹಲವರು ಇದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾಧ್ಯಕ್ಷರನ್ನೇ ಮರೆತಿದ್ದಾರೆ!

ಒಬ್ಬ ಜಿಲ್ಲಾಧ್ಯಕ್ಷರನ್ನೇ ಮರೆಯಲಾಗಿದೆ. ಹಿಂದುಳಿದ ವರ್ಗದ ನಾಯಕರು ತುಂಬಾ ಜನ ಇದ್ದಾರೆ. ಅವರಿಗೆ ತಮ್ಮದೇ ಆದ ಸಿದ್ಧಾಂತಗಳು ಇವೆ. ಆದರೆ, ಒಬ್ಬ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಇವರ ಕೊಡುಗೆ ಏನು? ಪಕ್ಷದ ಕಾರ್ಯಕರ್ತರನ್ನು ಸರಿಯಾಗಿ ಮಾತನಾಡಿಸುವುದಿಲ್ಲ. ಗೌರವ ಕೊಡುವುದಿಲ್ಲ. ಹೀಗಾಗಿ ಕಾರ್ಯಕರ್ತರು ಇವರ ಕಾರ್ಯಕ್ರಮಗಳಿಗೆ ಬರುವುದು ಕಡಿಮೆಯಾಗುತ್ತಿದೆ. ಇವರ ವರ್ತನೆಯಿಂದ ನಾಯಕರು ಹಾಗೂ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದು ಗಂಗಿಮಡಿ ಕುಮಾರ್ ಮೌರ್ಯ ಎಂಬುವವರು ಕಮೆಂಟ್ ಮಾಡಿದ್ದಾರೆ. ಅಲ್ಲದೆ, ನವೀನ್ ಭಂಡಾರಿ ಎಂಬುವರು ಎಲ್ಲರನ್ನೂ ಕರೆದುಕೊಂಡು ಹೋಗುವ ಮನಸ್ಥಿತಿ ಹೊಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಹಲವು ಬಗೆಯಲ್ಲಿ ಚರ್ಚೆ

ಈ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿವೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು. ಕುಟುಂಬದಲ್ಲಿ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಹಲವರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಯುಥ್ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಈ ವೈಮನಸ್ಸು ಇಲ್ಲಿಗೆ ನಿಲ್ಲುತ್ತದೋ ಅಥವಾ ಮುಂದುವರೆಯುತ್ತೋ ಎಂಬುದನ್ನು ಕಾದು ನೋಡಬೇಕು.

ಕೊರೊನಾ; ಶನಿವಾರವೂ ಮುಂದುವರಿದ ಶುಭ ಸುದ್ದಿ, 60 ಜನರಿಗೆ ಸೋಂಕು, ಇಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ಜನರಿಗೆ ಶನಿವಾರವೂ ಶುಭ ಸುದ್ದಿ ಮುಂದುವರೆದಿದೆ.

ಇಂದು 60 ಜನರಿಗೆ ಸೋಂಕು ತಗುಲಿದೆ. ಇಂದು ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಇಬ್ಬರು ಮೃತಪಟ್ಟಿದ್ದಾರೆ.

ಇಂದು 60 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25324 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -33, ಮುಂಡರಗಿ-05, ನರಗುಂದ-00, ರೋಣ-08, ಶಿರಹಟ್ಟಿ-09, ಹೊರಜಿಲ್ಲೆಯ-05 ಸೇರಿದಂತೆ 60 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 287 ಕ್ಕೇರಿದೆ.

ಗದಗ ತಾಲೂಕಿನ ಬೆಟಗೇರಿ ನಿವಾಸಿ 87 ವರ್ಷದ ವ್ಯಕ್ತಿ ಮೇ 30 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಜೂನ -10 ರಂದು ಮೃತಪಟ್ಟಿದ್ದಾರೆ.

ಜಿಲ್ಲೆಯ ಶಿರಹಟ್ಟಿ ತಾಲೂಕಿನ ಯಳವತ್ತಿ ನಿವಾಸಿ 50 ವರ್ಷದ ವ್ಯಕ್ತಿ ಮೇ-26 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಜೂನ್ 09 ರಂದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ.

ಇಂದು 133 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 24167 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 870 ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 95 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!