Home Blog Page 3014

ಜೂನ್ 14 ರಿಂದ 21 ರವರೆಗೆ ನಿಷೇಧಾಜ್ಞೆ, ನೈಟ್‌, ವೀಕೆಂಡ್ ಕರ್ಫ್ಯೂ ಜಾರಿ, ಕೆಲ ಮಾರ್ಗಸೂಚಿಗಳಲ್ಲಿ ಸಡಿಲಿಕೆ

0

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್-19 ಸೋಂಕು ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಜಾರಿ ಮಾಡಿದ ಕಠಿಣ ಮಾರ್ಗಸೂಚಿಗಳನ್ನು ಸಡಿಲು ಮಾಡಿ ಆದೇಶ ಹೊರಡಿಸಿರುತ್ತದೆ. ಈ ಮಾರ್ಗಸೂಚಿಗಳು ಜೂನ್ 14 ರ ಬೆಳಗ್ಗೆ 6 ಗಂಟೆಯಿಂದ ಜೂನ್ 21 ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರಲಿವೆ.

ಈ ಅವಧಿಯಲ್ಲಿ ಯಾವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಹಾಗೂ  ನಿರ್ಬಂಧಿಸಲಾಗಿದೆ ಎಂಬ ಮಾಹಿತಿಯು ಈ ಕೆಳಕಂಡಂತಿದೆ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಗದಗ ಜಿಲ್ಲೆಯಲ್ಲಿ ಯಥಾವತ್ತಾಗಿ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಮಾರ್ಗಸೂಚಿಗಳ ಪಾಲನೆ ಮಾಡುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ನೀಡಲಾಗಿದೆ. ಅದೇ ರೀತಿ ಅಗತ್ಯ ವಸ್ತು, ಮದ್ಯ ಖರೀದಿಗೆ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಲಾಗಿದೆ. ಶೇಕಡ 50 ರಷ್ಟು ಸಿಬ್ಬಂದಿಯೊಂದಿಗೆ ಕೈಗಾರಿಕೆಗಳು ಕಾರ್ಯ ನಿರ್ವಹಿಸಬಹುದಾಗಿದೆ. ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಆರಂಭಿಸಲು ಅವಕಾಶ ನೀಡಿದ್ದು, ಬೆಳಗ್ಗೆ 5 ರಿಂದ 10 ಗಂಟೆಯ ವರಗೆ ಪಾರ್ಕ್ ಗಳನ್ನು ತೆರೆಯಬಹುದು. ಅಂತ್ಯ ಸಂಸ್ಕಾರಕ್ಕೆ 5 ಜನ, ಮದುವೆಗೆ 40 ಜನ ಭಾಗವಹಿಸಲು ಸಮ್ಮತಿ ನೀಡಲಾಗಿದೆ.
ಪ್ರತಿದಿನ ಸಂಜೆ 7 ರಿಂದ ಬೆಳಗ್ಗೆ 5 ಗಂಟೆ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿ ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

ಪ್ರತಿಬಂಧಕಾಜ್ಞೆ ಜಾರಿ

ಗದಗ ಜಿಲ್ಲೆಯಾದ್ಯಂತ ಕೋವಿಡ್-19 ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಮತ್ತು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ದಂಡ ಪ್ರಕ್ರಿಯೆ ಸಂಹಿತೆ 1973 , ಸಾಂಕ್ರಾಮಿಕ  ರೋಗ ಕಾಯ್ದೆ 1897  ದಿ ಕರ್ನಾಟಕ ಎಪಿಡಮಿಕ್ ಡಿಸೀಸ್ ಕೋವಿಡ್-19 ರೆಗ್ಯುಲೇಷನ್ 2020 ಹಾಗೂ ವಿಪತ್ತು ನಿರ್ವಹಣಾ  ಕಾಯ್ದೆ 2005 ರ ಪ್ರಕಾರ ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಮುಖಗವಸುಗಳನ್ನು ಧರಿಸುವಿಕೆ, ಕೈಗಳನ್ನು ಶುಚಿಯಾಗಿಡುವಿಕೆ, ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.

ಕೋವಿಡ್-19 ಸರಪಳಿಯನ್ನು ತುಂಡಿರಿಸಲು ಆದೇಶದಲ್ಲಿ ಅವಕಾಶ ನೀಡಿದ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಿದೆ. ಆದೇಶದಲ್ಲಿ  ಹೊರಡಿಸಿರುವ ಷರತ್ತುಗಳಿಗೆ ಒಳಪಟ್ಟು  ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಜೂನ 14 ರ ಬೆಳಗಿನ 6 ಗಂಟೆಯವರೆಗೆ ಜಾರಿಗೊಳಿಸಲಾದ  ಪ್ರತಿಬಂಧಕಾಜ್ಞೆಯನ್ನು ಜೂನ್ 21 ಬೆಳಗಿನ 6 ಗಂಟೆಯವರೆಗೆ ಮುಂದುವರೆಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಆದೇಶ ಹೊರಡಿಸಿದ್ದಾರೆ.

ಮುಖಗವಸು ಧರಿಸದಿದ್ದರೆ ಅಂತಹವರ ವಿರುದ್ಧ ನಗರ ಪಾಲಿಕೆ ಪ್ರದೇಶಗಳಲ್ಲಿ ರೂ.250 ಮತ್ತು ಇನ್ನಿತರ ಪ್ರದೇಶಗಳಲ್ಲಿ ರೂ.100  ದಂಡವನ್ನು ವಿಧಿಸಲಾಗುವುದು ಹಾಗೂ ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾದಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆಯಿಂದಾಗಿ ದೇಶಕ್ಕೆ ಆದ ನಷ್ಟ ಎಷ್ಟು?

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೊರೊನಾ ಹೆಮ್ಮಾರಿಯಿಂದಾಗಿ ಇಡೀ ದೇಶದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿತ್ತು. ಇದರಿಂದಾಗಿ ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಎರಡನೇ ಅಲೆಯಲ್ಲಿಯೇ ಹೀಗಾದರೆ, ಮೂರನೇ ಅಲೆಯಲ್ಲಂತೂ ಇದರ ಪರಿಸ್ಥಿತಿ ಕೆಟ್ಟದ್ದಾಗಿರುತ್ತದೆ. ಇದರಿಂದಾಗಿ ದೇಶದ ಆರ್ಥಿಕತೆ ತೀವ್ರ ಹಿನ್ನಡೆ ಅನುಭವಿಸಲಿದೆ.

ಲಾಕ್‌ ಡೌನ್‌ ನಿಂದಾಗಿ ದೇಶದಲ್ಲಿ ಬರೋಬ್ಬರಿ ರೂ. 5.4 ಲಕ್ಷ ಕೋಟಿ ನಷ್ಟ ಉಂಟಾಗಿದೆ. ಇದು ಕೊರೊನಾ ಎರಡನೇ ಅಲೆಯಿಂದಾಗಿ ಉಂಟಾದ ನಷ್ಟವಾಗಿದೆ. ಇದನ್ನು ಬರ್ಕಲೇ ಸಂಸ್ಥೆ ಅಂದಾಜು ಮಾಡಿದೆ.

2ನೇ ಅಲೆಯಿಂದ ದೇಶದಲ್ಲಿ ನಿರುದ್ಯೋಗ ಸಂಖ್ಯೆ ಕೂಡ ಹೆಚ್ಚಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಾಕ್‌ ಡೌನ್ ನಿಂದಾಗಿ 2.7 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ನಷ್ಟದಿಂದಾಗಿ ದೇಶದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದಾಗಿ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರ, ಆರ್ಥಿಕತೆ ಚೇತರಿಕೆಗೆ ಯಾವ ಪ್ಯಾಕೇಜ್ ಕೂಡ ಘೋಷಿಸಿಲ್ಲ. ಜನರ ಕೈಗೆ ನೇರ ದುಡ್ಡು ಸಿಗುವಂತಾಗಬೇಕು ಎಂದು ಬರ್ಕಲೇ ಸಂಸ್ಥೆ ಸಲಹೆ ನೀಡಿದೆ.
ಕೊವಿಡ್ ನ ಎರಡನೇ ಅಲೆಯಿಂದಾಗಿ ಪ್ರಸಕ್ತ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ಶೇ. 0.8ರಷ್ಟು ಕುಗ್ಗಿದೆ. ಮೂರನೆ ಅಲೆ ಬಂದರಂತೂ ಆರ್ಥಿಕತೆಗೆ ಇನ್ನೂ ಪೆಟ್ಟು ಬೀಳಲಿದೆ. ಮೂರನೆ ಅಲೆ ಕನಿಷ್ಠ 8 ವಾರಗಳ ಕಾಲವಾದರೂ ಇರಲಿದೆ ಎಂದು ಅಂದಾಜಿಸಿದರೂ ದೇಶದ ಆರ್ಥಿಕತೆ 3.1 ಲಕ್ಷ ಕೋಟಿಯಷ್ಟು ನಷ್ಟವಾಗಬಹುದು ಆಗ ದೇಶದ ಜಿಡಿಪಿ ಶೇ. 7.7ಕ್ಕೆ ಕುಸಿಯಲಿದೆ ಎಂದು ಸಂಸ್ಥೆ ಅಂದಾಜಿಸಿದೆ.

ಮತ್ತೆ ದೆಹಲಿಗೆ ಟೂರ್ ಹೋದ ಅತೃಪ್ತ ಶಾಸಕರು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನು ಎರಡು ವರ್ಷಗಳ ಕಾಲ ತಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಹೇಳಿಕೆ ನೀಡಿದ್ದ ಸಿಎಂ, ಎಲ್ಲ ವಿಷಯಗಳಿಗೆ ಫುಲ್ ಸ್ಟಾಪ್ ಇಡಲು ಪ್ರಯತ್ನಿಸಿದ್ದರು. ಆದರೆ, ಮತ್ತೆ ಅತೃಪ್ತ ಶಾಸಕರು ದೆಹಲಿಗೆ ಟೂರ್ ಹೋಗಿದ್ದಾರೆ. ಇದರೊಂದಿಗೆ ಸಿಎಂ ಬದಲಾವಣೆ ವಿಚಾರ ತೆರೆ ಮರೆಗೆ ಸರಿಯುತ್ತದೆ ಎನ್ನುವಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ವಿರೋಧಿ ಬಣ ಫುಲ್ ಆ್ಯಕ್ಟಿವ್ ಆದಂತಿದೆ. ಇದೀಗ ಶಾಸಕ ಅರವಿಂದ್ ಬೆಲ್ಲದ್ ಕೂಡ ದೆಹಲಿಗೆ ಹಾರಿದ್ದಾರೆ.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿಗಾಗಿ ಅರವಿಂದ್ ಬೆಲ್ಲದ್, ದೆಹಲಿಗೆ ತೆರಳಿದ್ದಾರೆ. ಜೂನ್ 16 ಅಥವಾ 17 ರಂದು ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿ ನೀಡುವುದಾಗಿ ಹೇಳಿದ್ದಾರೆ. ಆ ವೇಳೆ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂದು ಅರವಿಂದ್ ಬೆಲ್ಲದ್ ಒತ್ತಾಯಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಶಾಸಕಾಂಗ ತಪ್ಪಿಸಲು ಕೊರೊನಾ ನೆಪ ಹೇಳಬಹುದು. ಅದಕ್ಕೆ ಹೈಕಮಾಂಡ್ ಕೇರ್ ಮಾಡದೇ ಪಕ್ಷದ ಹಿತದೃಷ್ಟಿಯಿಂದ ಶಾಸಕಾಂಗ ಪಕ್ಷದ ಸಭೆ ನಡೆಸಬೇಕು ಎಂದು ಅರುಣ್ ಸಿಂಗ್ ಅವರ ಮನವಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅರವಿಂದ್ ಬೆಲ್ಲದ್ ದೆಹಲಿಗೆ ಹೋದ ಬೆನ್ನಲ್ಲಿಯೇ ಇತ್ತ ರಾಜ್ಯದಲ್ಲಿಯೂ ಯಡಿಯೂರಪ್ಪ ವಿರೋಧಿ ಬಣ ಫುಲ್ ಆ್ಯಕ್ಟಿವ್ ಆಗಿದೆ.

ದೆಹಲಿ ಭೇಟಿ ಬಗ್ಗೆ ಶಾಸಕ ಅರವಿಂದ್ ಬೆಲ್ಲದ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ‘ನಾನು ಕುಟುಂಬದ ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ಭೇಟಿ ನೀಡುತ್ತಿದ್ದು, ನನ್ನ ದೆಹಲಿಯ ಭೇಟಿಗೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ ಸಿಎಂ ಬದಲಾವಣೆ ಸುದ್ದಿ ಮಾತ್ರ ಹೆಚ್ಚಿನ ಸದ್ದು ಮಾಡುತ್ತಿದೆ.

ಸಿಎಂ ಬದಲಾವಣೆ ವಿಚಾರದಲ್ಲಿ ಅರವಿಂದ್ ಬೆಲ್ಲದ್ ಹೆಸರು ಕೇಳಿ ಬಂದಿತ್ತು. ಈ ಹಿಂದೆ ಉಪಚುನಾವಣೆಯ ಬಳಿಕ ಯಡಿಯೂರಪ್ಪ ಅವರಿಗೆ ಎರಡನೇ ಬಾರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆ ಸೇರಿದಾಗ ಬೆಲ್ಲದ್, ಯತ್ನಾಳ್ ಹಾಗೂ ಕೆಲವು ನಾಯಕರು ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿತ್ತು. ಅದೇ ರೀತಿ, ಯಡಿಯೂರಪ್ಪ ನಂತರದಲ್ಲಿ ಕರ್ನಾಟಕದ ಬಿಜೆಪಿಗೆ ಪರ್ಯಾಯ ನಾಯಕ ಯಾರು ಎಂಬ ಪ್ರಶ್ನೆಗೆ ಜಾತಿವಾರು ಲೆಕ್ಕಾಚಾರದಲ್ಲಿ ಅರವಿಂದ್ ಬೆಲ್ಲದ್ ಗೆ ಒಂದಷ್ಟು ಅವಕಾಶಗಳಿವೆ. ಹೀಗಾಗಿ ಅವರು ಸಿಎಂ ಗದ್ದುಗೆಗೆ ಟವೆಲ್ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಕೂಡ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ.

ಅನ್ನಭಾಗ್ಯ ಅಕ್ಕಿ ದಂಧೆಕೋರರನ್ನ ಗಡಿಪಾರು ಮಾಡಿ; ಗವಳಿ

ವಿಜಯಸಾಕ್ಷಿ ಸುದ್ದಿ, ಗದಗ

ಸರ್ಕಾರದ ಅನ್ನಭಾಗ್ಯದ ಅಕ್ಕಿ ಜಿಲ್ಲೆಯಲ್ಲಿ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟ ಆಗುತ್ತಿದೆ. ಮನೆ ಮನೆಯಿಂದ ಕೆಜಿಗೆ 8ರಿಂದ 10 ರೂ. ದರದಲ್ಲಿ ಅಕ್ಕಿ ಸಂಗ್ರಹಿಸಿ, ಖಾಸಗಿ ಗೋದಾಮಿನಲ್ಲಿ ಶೇಖರಿಸಿ, ಹೊರ ರಾಜ್ಯಕ್ಕೆ 10 ಗಾಲಿ ವಾಹನಗಳ ಮುಖಾಂತರ ಸಾಗಿಸುತ್ತಿದ್ದಾರೆ ಎಂದು ಕದಂಬ ಸೈನ್ಯದ ಧಾರವಾಡ ವಿಭಾಗದ ಸಂಚಾಲಕ ಆನಂದ ಗವಳಿ ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಅನ್ನಭಾಗ್ಯ ಸಾಗಾಟ ಮಾಡುವವರ ವಿರುದ್ಧ ಕೆಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅತಿ ಹೆಚ್ಚು ಪ್ರಕರಣ ದಾಖಲಾದವರ ಲೆಕ್ಕ ಪತ್ರಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಸುಳ್ಳು ಲೆಕ್ಕಪತ್ರ ಅಥವಾ ನಕಲಿ ಬಿಲ್ಲು ತೋರಿಸಿದ್ದು ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ಆಹಾರ ಇಲಾಖೆ ಅಧಿಕಾರಿಗಳು ದೂರು ಬಂದಲ್ಲಿ ಮಾತ್ರ ಕ್ರಮ ಕೈಗೊಳುತ್ತಾರೆ. ಸ್ವಯಂ ಪ್ರೇರಣೆಯಿಂದ ಯಾವುದೇ ಕಾರ್ಯಾಚರಣೆಗೆ ಇಳಿಯಲು ಹಿಂದೇಟು ಹಾಕುತ್ತಿರುವುದೇಕೆ? ದಂಧೆಕೋರರೊಂದಿಗೆ ಅಧಿಕಾರಿಗಳು ಹೊಂದಾಣೀಕೆ ಮಾಡಿಕೊಂಡಿದ್ದಾರೆಯೇ ಎಂದು ಗವಳಿ ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಅನ್ಯಭಾಗ್ಯ ಅಕ್ಕಿ ಸಾಗಾಟ ತಡೆಯುವಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು, ತಪ್ಪಿತಸ್ಥರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಶುಲ್ಕ ಪಾವತಿಗೆ ಪಾಲಕರಿಗೆ ಒತ್ತಡ ಹಾಕಿದರೆ ಹುಷಾರ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೆಲವು ಖಾಸಗಿ ಶಾಲೆಗಳು ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳ ಶುಲ್ಕ ಪಾವತಿಗಾಗಿ ಪೋಷಕರಿಗೆ ಒತ್ತಡ ಹಾಕುತ್ತಿರುವ ಆರೋಪಗಳು ಕೇಳಿಬಂದವೆ. ಆರೀತಿಗಳು ದೂರು ಬಂದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಶಾಲೆಗಳು ಫೈನಾನ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಬಡ್ಡಿ ಹಣ ಪಡೆದು ವಿದ್ಯಾರ್ಥಿಗಳ ಶುಲ್ಕ ಪಾವತಿ ಮಾಡುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇನ್ನೊಂದೆಡೆ ಶುಲ್ಕ ಕಟ್ಟದ ಮಕ್ಕಳಿಗೆ ಆನ್ಲೈನ್ ಕ್ಲಾಸ್ ಗೆ ಸೇರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಬಿಇಒ ಗೆ ದೂರು ನೀಡಿದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಈ ವಿಚಾರವಾಗಿ ಈಗಾಗಲೇ ಸುಪ್ರೀಂ ಕೋರ್ಟ್, ಹೈಕೋರ್ಟ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಶಾಲೆಗಳಿಗೆ ಸೂಚನೆ ನೀಡಿದ್ದಾರೆ. ಒಂದು ವೇಳೆ ಆನ್ ಲೈನ್ ಕ್ಲಾಸ್ ನಿಲ್ಲಿಸಿದರೆ ಅಂತವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಶಾಸಕ ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲು?

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರು ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊರೊನಾ ನಿಯಮ ಮುರಿದು ಹೋಮ- ಹವನ ನಡೆಸಿದ್ದಕ್ಕೆ ಅವರ ವಿರುದ್ಧ ತಹಸೀಲ್ದಾರ್ ಬಸನಗೌಡ ಕೋಟೂರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ತಹಸೀಲ್ದಾರ್ ಅವರ ನಿರ್ಧಾರಕ್ಕೆ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವ ಕೊರೊನಾ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕೋವಿಡ್ ಕೇರ್ ಸೆಂಟರ್ ಮುಂದೆಯೇ ತಾವು ಊಟ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕೂಡಲೇ ತಹಸೀಲ್ದಾರ್ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಬಸನಗೌಡ ಕೋಟೂರ ಹಾಗೂ ಸಿಪಿಐ ದೇವರಾಜ್ ವಿರುದ್ಧ ಶಾಸಕ ರೇಣುಕಾಚಾರ್ಯ ಗುಡುಗಿದ್ದಾರೆ. ನನ್ನ ಮೇಲೆ ಕೇಸ್ ಹಾಕಲಿ. ನನ್ನನ್ನು ಅರೆಸ್ಟ್ ಮಾಡಲಿ. ಇಂತಹ ಕೇಸ್ ಗಳನ್ನು ನಾನು ಬಹಳ ನೋಡಿದ್ದೇನೆ. ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಮುಂದೆ ಏನಾಗುತ್ತದೆ ನೋಡುತ್ತೇನೆ. ಅವರು ಎಲ್ಲಿಗೆ ಬೇಕಾದರೂ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.-

ರೋಹಿಣಿ ಸಿಂಧೂರಿ ಪರ ಆನ್ ಲೈನ್ ಕ್ಯಾಂಪೇನ್!

ವಿಜಯಸಾಕ್ಷಿ ಸುದ್ದಿ, ಮೈಸೂರು

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ಆನ್ ಲೈನ್ ಕ್ಯಾಂಪೇನ್ ಆರಂಭವಾಗಿದೆ. ರೋಹಿಣಿ ಸಿಂಧೂರಿ ಅವರನ್ನು ಮತ್ತೆ ಮೈಸೂರಿಗೆ ಡಿಸಿಯಾಗಿ ನೇಮಿಸುವಂತೆ ಒತ್ತಾಯ ಈ ಮೂಲಕ ಒತ್ತಾಯಿಸಲಾಗುತ್ತಿದೆ. ಹೀಗಾಗಿ “ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ” ಎಂಬ ಹೆಸರಿನಲ್ಲಿ ಸಹಿ ಸಂಗ್ರಹ ಅಭಿಯಾನ ಪ್ರಾರಂಭವಾಗಿದೆ.

‘ಚೇಂಜ್ ಆರ್ಗ್’ ಸಾಮಾಜಿಕ ಮಾಧ್ಯಮದ ಮೂಲಕ ಈ ಅಭಿಯಾನ ಪ್ರಾರಂಭಿಸಲಾಗಿದೆ. ಈಗಾಗಲೇ ಸುಮಾರು 26 ಸಾವಿರ ಜನರಿಂದ ಸಹಿ ಸಂಗ್ರಹಿಸಲಾಗಿದೆ.

ರೋಹಿಣಿ ಸಿಂಧುರಿ ಅವರನ್ನು ಮತ್ತೆ ಮರಳಿ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ನೇಮಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳಲಾಗುತ್ತಿದೆ. ಸಹಿ ಸಂಗ್ರಹ ಅಭಿಯಾನದ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಲ್ಲಿ ಮನವಿ ಮಾಡಲಾಗುತ್ತಿದೆ.

ರೋಹಿಣಿ ಸಿಂಧೂರಿ ಅವರನ್ನು ಭೂ ಮಾಫಿಯಾದಲ್ಲಿ ಬಲಿ ಪಶು ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿ ಬೆಂಬಲ ಪಡಿಸಲಾಗುತ್ತಿದೆ. 35 ಸಾವಿರ ಸಹಿ ಸಂಗ್ರಹಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ.

ಲಂಕೆಯಲ್ಲಿ ಘರ್ಜಿಸಿ ಬರುವುದೇ ಭಾರತೀಯ ಯುವ ಪಡೆ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಕ್ರಿಕೆಟ್ ಅಂಗಳದಲ್ಲಿ ಬೆವರು ಸುರಿಸುವ ಪ್ರತಿಯೊಬ್ಬ ಆಟಗಾರನಿಗೂ ಒಮ್ಮೆಯಾದರೂ ಭಾರತ ತಂಡದ ಪರ ಆಡಬೇಕೆಂಬ ಕನಸು ಕಂಡಿರುತ್ತಾನೆ. ಹೀಗೆ ಕನಸು ಕಂಡ ಐವರು ಯುವ ಆಟಗಾರರ ಕನಸು ನನಸಾಗಿದೆ. ಸದ್ಯ ಹೊಸ ಕನಸಿನೊಂದಿಗೆ ಮೈದಾನಕ್ಕೆ ಕಾಲಿಡುತ್ತಿದ್ದಾರೆ.
ಮುಂಬರುವ ಜುಲೈ ತಿಂಗಳಲ್ಲಿ ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ನಾಯಕ ವಿರಾಟ್ ಕೊಹ್ಲಿ ಮತ್ತು ಇತರೆ ಹಿರಿಯ ಆಟಾಗರರ ಅನುಪಸ್ಥಿತಿಯಲ್ಲಿ ಇವರು ಭಾರತ ತಂಡ ಪ್ರತಿನಿಧಿಸಲಿದ್ದಾರೆ.

ಶಿಖರ್ ಧವನ್‍ ನೇತೃತ್ವದ ತಂಡದಲ್ಲಿ ಈಗ ಈ ಹೊಸ ಆಟಗಾರರು ತಮ್ಮ ಶಕ್ತಿ ಪ್ರದರ್ಶನ ಮಾಡಲು ಉತ್ಸುಕರಾಗಿದ್ದಾರೆ. ಐಪಿಎಲ್‍ ನಲ್ಲಿ ಅಬ್ಬರಿಸಿದ್ದ ಯುವ ಬ್ಯಾಟ್ಸಮನ್ ಗಳಾದ ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್, ನಿತೀಶ್ ರಾಣಾ ಮತ್ತು ವೇಗಿ ಚೇತನ್ ಸಕಾರಿಯಾ, ಆಲ್ರೌಂತಡರ್ ಕೃಷ್ಣಪ್ಪ ಗೌತಮ್ ಚೊಚ್ಚಲ ಬಾರಿಗೆ ಭಾರತ ತಂಡ ಸೇರಿದ್ದಾರೆ.

ಆರ್ ಸಿಬಿ ಬೆಂಗಳೂರು ತಂಡದ ಪರ ಆಡುವ ದೇವದತ್ ಪಡಿಕ್ಕಲ್ ಐಪಿಎಲ್‍ ನಲ್ಲಿ ಒಟ್ಟು 21 ಪಂದ್ಯವಾಡಿ 1 ಶತಕ ಮತ್ತು 5 ಅರ್ಧಶತಕ ಸಹಿತ 668 ರನ್ ಬಾರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಋತುರಾಜ್ ಗಾಯಕ್ವಾಡ್ 13 ಪಂದ್ಯಗಳನ್ನು ಆಡಿದ್ದು, 5 ಅರ್ಧ ಶತಕ ಸಹಿತ 400 ರನ್ ಸಿಡಿಸಿ ಮಿಂಚಿದ್ದಾರೆ.
ನಿತೀಶ್ ರಾಣಾ ಕೋಲ್ಕತ್ತಾ ತಂಡದ ಪರ ಒಟ್ಟು 67 ಪಂದ್ಯವಾಡಿದ್ದು, 13 ಅರ್ಧ ಶತಕ ಸಹಿತ ಒಟ್ಟು 1,638 ರನ್ ಚಚ್ಚಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡದ ಯುವ ವೇಗದ ಬೌಲರ್ ಚೇತನ್ ಸಕಾರಿಯಾ ಒಟ್ಟು 7 ಪಂದ್ಯವಾಡಿ 7 ವಿಕೆಟ್ ಕಬಳಿಸಿದ್ದಾರೆ. ಇನ್ನೋರ್ವ ಕನ್ನಡಿಗ ಆಲ್‍ ರೌಂಡರ್ ಕೃಷ್ಣಪ್ಪ ಗೌತಮ್ ದೇಶಿಯ ಟೂರ್ನಿಯಲ್ಲಿ ಕರ್ನಾಟಕದ ಪರ 42 ಪಂದ್ಯಗಳನ್ನು ಆಡಿದ್ದು, 1,045 ರನ್ ಗಳಿಸಿ , 166 ವಿಕೆಟ್ ಪಡೆದಿದ್ದಾರೆ.

ಬಹುತೇಕ ಹೊಸಮುಖಗಳೊಂದಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿರಲಿದ್ದಾರೆ. ಈ ಹೊಸ ಪ್ರತಿಭೆಯನ್ನೇ ಹೊಂದಿರುವ ಭಾರತೀಯ ತಂಡ, ಶ್ರೀಲಂಕಾ ವಿರುದ್ಧ ಭಾರತ ತಂಡ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಎಸ್ ಐಟಿ ಎದುರು ಹಾಜರಾದ ಆರೋಪಿಗಳು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಆರೋಪಿಗಳಾಗಿರುವ ನರೇಶ್ ಗೌಡ ಹಾಗೂ ಶ್ರವಣ್ ವಿಚಾರಣೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ತಮ್ಮ ವಕೀಲರೊಂದಿಗೆ ಆಗಮಿಸಿರುವ ಆರೋಪಿಗಳು, ಆಡುಗೋಡಿ ಟೆಕ್ನಿಕಲ್ ಸೆಲ್ ನಲ್ಲಿ ಎಸ್ ಐಟಿ ಎದುರು ಹಾಜರಾಗಿದ್ದಾರೆ. ಈ ಹಿಂದೆಯೇ ನರೇಶ್ ಮತ್ತು ಶ್ರವಣ್ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ಅಧಿಕಾರಿಗಳು ನೊಟೀಸ್ ನೀಡಿದ್ದರು.

ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಬ್ಲ್ಯಾಕ್ ಮೇಲ್ ಪ್ರಕರಣದಲ್ಲಿ ತನಿಖೆಗೆ ಅವರು ಹಾಜರಾಗಿದ್ದಾರೆ. ಐದು ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಇಬ್ಬರಿಗೂ ಸೂಚನೆ ನೀಡಿತ್ತು, ಸಿಡಿ ಕಿಂಗ್‌ ಪಿನ್‌ಗಳಾದ ನರೇಶ್ ಮತ್ತು ಶ್ರವಣ್‌ ಅವರನ್ನು ಬಂಧನದ ಅವಶ್ಯವಿದ್ದರೆ ಬಂಧಿಸುವ ಸಾಧ್ಯತೆಯೂ ಇದೆ.

ಸರಿಯಾಗಿ ಸ್ಪಂದಿಸದಿದ್ದರೆ ಬಂಧಿಸಲು ಎಸ್ ಐಟಿ ತನಿಖಾಧಿಕಾರಿಗಳಿಗೆ ಸ್ವತಂತ್ರವಿದೆ ಎಂದು ಕೋರ್ಟ್ ಹೇಳಿತ್ತು. ಹೀಗಾಗಿ ಇಂದು ವಿಚಾರಣೆಗೆ ಹಾಜರಾಗಿರುವ ಆರೋಪಿಗಳಿಬ್ಬರನ್ನು ಎಸ್ ಐಟಿ ಪೊಲೀಸರು ತಮ್ಮ ವಶಕ್ಕೆ ಪಡೆಯಬಹುದು ಎನ್ನಲಾಗುತ್ತಿದೆ.

error: Content is protected !!