Home Blog Page 3024

ಕುಸ್ತಿಪಟು ಸುಶೀಲ್ ಕುಮಾರ್ ಬಗ್ಗೆ ಸುಳಿವು ನೀಡಿದವರಿಗೆ ಭರ್ಜರಿ ಬಹುಮಾನ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಇಲ್ಲಿಯ ಹತ್ರಾಸಲ್ ಕ್ರೀಡಾಂಗಣದಲ್ಲಿ ನಡೆದ ಕುಸ್ತಿಪಟು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಲಿಂಪಿಯನ್ ಕುಸ್ತಿಪಟು ಸುಶೀಲ್ ಕುಮಾರ್ ಅವರ ಸುಳಿವು ನೀಡಿದವರಿಗೆ ಅಲ್ಲಿನ ಪೊಲೀಸರು ರೂ. 1 ಲಕ್ಷ ಬಹುಮಾನ ಘೋಷಿಸಿದ್ದಾರೆ. 

ಇದರೊಂದಿಗೆ ಸುಶೀಲ್ ಕುಮಾರ್ ಅವರ ಗೆಳೆಯನಾಗಿರುವ ಮತ್ತೊಬ್ಬ ಆರೋಪಿ ಅಜಯ್ ಅವರನ್ನು ಬಂಧಿಸಲು ಸಹಾಯ ಮಾಡಿದವರಿಗೆ ರೂ. 50 ಸಾವಿರ ಘೋಷಿಸಿದ್ದಾರೆ.

ಸೋಮವಾರ ತಡರಾತ್ರಿ, ಜಿಲ್ಲಾ ಡಿಸಿಪಿ ಉಷಾ ರಂಗ್ನಾನಿ ಅವರು, ಸುಶೀಲ್ ಮತ್ತು ಅವರ ಸ್ನೇಹಿತ ಅಜಯ್ ಅವರನ್ನು ಹುಡುಕಲು ಅನೇಕ ತಂಡಗಳನ್ನು ರಚಿಸಿದ್ದೇವೆ. ಇಬ್ಬರು ಮೇಲೆ ಸದ್ಯ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಆದರೂ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ಆರೋಪಿಗಲ ಬಂಧನಕ್ಕೆ ವಿಭಿನ್ನ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಹತ್ರಾಸಲ್ ಕ್ರೀಡಾಂಗಣದಲ್ಲಿ ನಡೆದ ಕೊಲೆ ಮತ್ತು ಕೊಲೆ ಯತ್ನದ ಘಟನೆಯಲ್ಲಿ ಸುಶೀಲ್ ಕುಮಾರ್ ಮತ್ತು ಅಜಯ್ ಅವರ ಪಾತ್ರ ಅನುಮಾನಾಸ್ಪದವಾಗಿದೆ. ಸುಶೀಲ್, ಅಜಯ್ ಮತ್ತು ಪರಾರಿಯಾಗಿದ್ದು ಇನ್ನಿತರರ ಹುಡುಕಾಟದಲ್ಲಿ ಪೊಲೀಸರು ತಲ್ಲೀಣರಾಗಿದ್ದಾರೆ. ಸುಶೀಲ್ ಹರಿಯಾಣ ಮತ್ತು ಉತ್ತರಾಖಂಡ್ ಪ್ರದೇಶಗಳಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾತುಗಳು ಕೇಳಿ ಬಂದಿವೆ.

ಈ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸರು ಈಗಾಗಲೇ ಜಾಮೀನು ರಹಿತ ವಾರಂಟ್ ಪಡೆದಿದ್ದಾರೆ. ಹೀಗಾಗಿ ಇಬ್ಬರ ಬಂಧನಕ್ಕೆ ಪೊಲೀಸರು ಕಾನೂನುಬದ್ಧವಾಗಿ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೇ ಬಹುಮಾನ ಕೂಡ ಘೋಷಿಸಿದ್ದಾರೆ.

ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಕಾಣಿಸಿಕೊಂಡ ಬ್ಲ್ಯಾಕ್ ಫಂಗಸ್

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ರೋಗಿ ಒಬ್ಬರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ಕಡೂರು ತಾಲೂಕಿನ ಹಳ್ಳಿಯೊಂದರ 45 ವರ್ಷದ ವ್ಯಕ್ತಿಯೊಬ್ಬರಲ್ಲಿಯೇ ಈ ರೀತಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ.

ಈ ವ್ಯಕ್ತಿಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ಸೋಂಕು ಕೊರೊನಾ ಸೋಂಕು ಇರುವುದು ಖಚಿತವಾಗಿತ್ತು. ಹೀಗಾಗಿ ಅವರನ್ನು ಕಡೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗೆ ಕೊರೊನಾ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿಯೇ ಬ್ಲ್ಯಾಕ್ ಫಂಗಸ್ ಇರುವುದು ಪತ್ತೆಯಾಗಿದೆ. ಆದರೆ, ಸೋಂಕಿತ ಈ ವ್ಯಕ್ತಿಗೆ ಬ್ಲ್ಯಾಕ್ ಫಂಗಸ್ ನ ಯಾವುದೇ ಲಕ್ಷಣಗಳು ಇಲ್ಲ. ಆರೋಗ್ಯವಂತರಾಗಿಯೇ ಇದ್ದಾರೆ. ಅವರನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊರೊನಾದಿಂದ ಗುಣಮುಖರಾದವರಿಗೆ ಬ್ಲ್ಯಾಕ್ ಫಂಗಸ್ ಕಾಡಲಿದೆ ಎಂಬ ಸಂಗತಿಯ ಮಧ್ಯೆಯೇ ಚಿಕಿತ್ಸೆ ಪಡೆಯುತ್ತಿರುವಾಗಲೇ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ, ಜಿಲ್ಲೆಯಲ್ಲಿ ಮೊದಲ ಬ್ಲ್ಯಾಕ್ ಫಂಗಸ್ ಕೇಸ್ ಇದಾಗಿದೆ.

ಇಂಡಿಯಾ ಗೇಟ್ ವರೆಗೂ ಹಬ್ಬಿದೆ ತೌಖ್ತೆ ಆರ್ಭಟ

ವಿಜಯಸಾಕ್ಷಿ ಸುದ್ದಿ, ಮುಂಬಯಿ

ತೌಖ್ತೆಯ ಚಂಡಮಾರುತಕ್ಕೆ ಸದ್ಯ ಕರಾವಳಿ ಭಾಗದ ಜನರು ಸೇರಿದಂತೆ ಕೆಲವು ರಾಜ್ಯಗಳು ಜನರು ಕಂಗಾಲಾಗಿದ್ದಾರೆ. ಇದರ ಆರ್ಭಟ ಸದ್ಯ ಹಲವು ಭಾಗಗಳಿಗೂ ತಟ್ಟಿದೆ.

ಈ ಚಂಡಮಾರುತದಿಂದ ದೇಶದಲ್ಲಿ ಹಲವು ಭಾಗಗಳಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. ಅರಬ್ಬಿ ಸಮುದ್ರದ ಬಲವಾದ ಅಲೆಗಳು ಗೇಟ್ ವೇ ಆಫ್ ಇಂಡಿಯಾಗೆ ಅಪ್ಪಳಿಸಿದ್ದು, ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಯಾರೋ ಸೆರ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅಲೆಗಳು ಗೇಟ್ ವೇ ಆಫ್ ಇಂಡಿಯಾದ ಗೋಡೆಗಳಿಗೆ ಜೋರಾಗಿ ಬಂದು ಅಪ್ಪಳಿಸುತ್ತಿರುವುದನ್ನು ಕಾಣಬಹುದು.

ವೀಡಿಯೋದಲ್ಲಿ ಅಲೆಗಳು ಸ್ಮಾರಕದ ಗೋಡೆಗಳ ಮೇಲೆ ರಭಸದಿಂದ ಅಪ್ಪಳಿಸುತ್ತಿವೆ. ಇದರೊಂದಿಗೆ ಗಾಳಿ ಕೂಡ ಜೋರಾಗಿ ಬೀಸುತ್ತಿದೆ. ಸೋಮವಾರ ಮಧ್ಯಾಹ್ನ ಮುಂಬಯಿಯಲ್ಲಿ 114 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸಂಚರಿಸುತ್ತಿವೆ ಆಕ್ಸಿಜನ್ ಬಸ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಜನರ ಸೇವೆಗಾಗಿ ಆಕ್ಸಿಜನ್ ಬಸ್ ಸಿದ್ಧಪಡಿಸಲಾಗಿದೆ. ಈ ಬಸ್ ನ್ನು ಸರ್ಕಾರದ ಸಹಭಾಗಿತ್ವದಲ್ಲಿ ಕೆ.ಆರ್ ಪುರ ಕ್ಷೇತ್ರದ ರಾಮಮೂರ್ತಿನಗರದಲ್ಲಿ ಶಾಂತಾ ಕೃಷ್ಣಮೂರ್ತಿ ಫೌಂಡೇಶನ್ ಹಾಗೂ ಇಂಡಿಯಾ ನ್ಯಾಚುರಲ್ ರೆಮಿಡೀಸ್ ಸಹಕಾರದಲ್ಲಿ ಸಿದ್ಧಪಡಿಸಲಾಗಿದೆ.

ಇದು ಮೂರು ದಿನಗಳ ಕಾಲ ರಾಮಮೂರ್ತಿ ನಗರದಲ್ಲಿ ಸಂಚರಿಸಲಾಗಿದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ, ಬಸ್ಗಳಿಗೆ ಆಕ್ಸಿಜನ್ ಅಳವಡಿಸಿ ಆಕ್ಸಿಜನ್ ಬಸ್ ಗಳಾಗಿ ಪರಿವರ್ತಿಸಲಾಗಿದೆ. ನಗರಗಳಲ್ಲಿ ಹಾಗೂ ಆಸ್ಪತ್ರೆಯ ಮುಂಭಾಗಗಳಲ್ಲಿ ಅವಶ್ಯಕ ಇರುವ ಸೋಂಕಿತರಿಗೆ ಆಕ್ಸಿಜನ್ ನೀಡುವ ಕಾರ್ಯವನ್ನು ಈ ಮೂಲಕ ಮಾಡಲಾಗಿದೆ.

ಈ ಬಸ್ ನಲ್ಲಿ ಒಂದೇ ಬಾರಿಗೆ 8 ಜನರಿಗೆ ಆಕ್ಸಿಜನ್ ನೀಡುವ ಸೌಲಭ್ಯವಿದೆ. ಹೆಚ್ಚಿನ ಅವಶ್ಯಕತೆ ಕಂಡು ಬಂದರೆ, ಅಂತಹ ರೋಗಿಗಳನ್ನು ಈ ಬಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗುತ್ತದೆ. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಅಭಾವ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯ ಮಾಡಿದೆ.

ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ ಎಬಿಡಿ ವಿಲಿಯರ್ಸ್!

ವಿಜಯಸಾಕ್ಷಿ ಸುದ್ದಿ, ಕೇಪ್‌ ಟೌನ್

360 ಡಿಗ್ರಿ ಬ್ಯಾಟ್ಸಮನ್ ಎಂದೇ ಖ್ಯಾತಿ ಪಡೆದಿರುವ ಹಾಗೂ ಜಗತ್ತಿನ ಮೂಲೆ ಮೂಲೆಯಲ್ಲಿ ಅಭಿಮಾನಿಗಳ ಪಡೆಯನ್ನೇ ಹೊಂದಿರುವ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸಮನ್ ಎಬಿ ಡಿ ವಿಲಿಯರ್ಸ್ ತಮ್ಮ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದಾರೆ.

ಇನ್ನು ಮುಂದೆ ಅವರ ಅಭಿಮಾನಿಗಳು, ಕ್ರಿಕೆಟ್ ಅಂಗಳದ ಮೂಲೆ ಮೂಲೆಯಲ್ಲಿಯೂ ಚೆಂಡನ್ನು ಅಟ್ಟುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಏಕೆಂದರೆ ಎಬಿಡಿ ವಿಲಿಯರ್ಸ್ ಅವರು ಇನ್ನು ಮುಂದೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಿಲ್ಲ. ಇದರೊಂದಿಗೆ ಎಬಿಡಿ ಆಟವನ್ನು ಇನ್ನು ಮುಂದೆ ಟಿ20ಯಲ್ಲಿಯೂ ನೋಡಲಾಗುವುದಿಲ್ಲ. ಈ ಬಾರಿಯ ಟಿ20 ವಿಶ್ವಕಪ್ ನಲ್ಲಿಯೂ ಅವರು ಆಡುತ್ತಿಲ್ಲ.

ಈ ಹಿಂದೆಯೇ ನಿವೃತ್ತಿ ಘೋಷಿಸಿದ್ದ ಎಬಿ ಡಿ ವಿಲಿಯರ್ಸ್ ಮತ್ತೆ ನಿವೃತ್ತಿ ಹಿಂಪಡೆದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಬಲ ತುಂಬುವ ಆಸೆ ಮೂಡಿಸಿದ್ದರು. ಆದರೆ ಎಬಿಡಿ ಮತ್ತೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡ ಪ್ರತಿನಿಧಿಸುತ್ತಿಲ್ಲ ಎಂದು ಅಲ್ಲಿನ ಕ್ರಿಕೆಟ್ ಬೋರ್ಡ್ ತಿಳಿಸಿದೆ.

2018 ಮೇ. 23ರಂದು ಎಬಿ ಡಿವಿಲಿಯರ್ಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಆದರೆ, ಆ ನಂತರ ವಿಶ್ವಕಪ್ ನಲ್ಲಿ ಆಡುವ ಬಯಕೆಯಿಂದಾಗಿ ನಿವೃತ್ತಿ ಹಿಂಪಡೆದಿದ್ದರು. ಆದರೆ, ಏಕದಿನ ವಿಶ್ವಕಪ್‌ ತಂಡದಲ್ಲಿ ಎಬಿಡಿಗೆ ಸ್ಥಾನ ಸಿಕ್ಕಿರಲಿಲ್ಲ. ಮತ್ತೆ ಈ ಬಾರಿಯ ಟಿ20ಐ ವಿಶ್ವಕಪ್‌ ನಲ್ಲಿ ಎಬಿಡಿ ಆಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಆ ಸಂಗತಿಯೂ ಸದ್ಯ ಸುಳ್ಳಾಗಿದೆ.

ಎಬಿಡಿಯ ಅಂತಾರಾಷ್ಟ್ರೀಯ ನಿವೃತ್ತಿ ಹಾಗೆಯೇ ಇರಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿದೆ. 37 ವರ್ಷದ ಎಬಿ ಡಿ ವಿಲಿಯರ್ಸ್ 114 ಟೆಸ್ಟ್‌ ಪಂದ್ಯಗಳಲ್ಲಿ 8,765 ರನ್, 228 ಏಕದಿನ ಪಂದ್ಯಗಳಲ್ಲಿ 9,577 ರನ್, 78 ಟಿ20ಐ ಪಂದ್ಯಗಳಲ್ಲಿ 1,672 ರನ್ ಬಾರಿಸಿದ್ದಾರೆ. ಅತೀ ವೇಗದ ಏಕದಿನ ಶತಕ ಸಿಡಿಸಿದಿ ವಿಶ್ವದಾಖಲೆ ಈಗಲೂ ಎಬಿಡಿ ಅವರ ಹೆಸರಿನಲ್ಲಿಯೇ ಇದೆ. ಅವರು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 31 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಕೋವಿಡ್ ಲಕ್ಷಣ ಕೇಳಿದ ವೈದ್ಯರ ಕಪಾಳಕ್ಕೆ ಹೊಡೆದ ಯುವಕ!

ವಿಜಯಸಾಕ್ಷಿ ಸುದ್ದಿ, ಗದಗ

ಗಾಯವಾಗಿದ್ದ ತಲೆಗೆ ಬ್ಯಾಂಡೇಜ್ ಮಾಡಿಸಿಕೊಳ್ಳಲು ಬಂದಿದ್ದ ಯುವಕನಿಗೆ ಕೋವಿಡ್ ಲಕ್ಷಣಗಳಿವೆಯೇ ಎಂದು  ಕೇಳಿದ ವೈದ್ಯನಿಗೆ ಕಪಾಳಕ್ಕೆ ಬಾರಿಸಿ, ಅವಾಚ್ಯ ಶಬ್ದಗಳಿಂದ ಬೈದಾಡಿದ ಘಟನೆ ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯುವಕ ಮಲ್ಲಪ್ಪ ದುರಗಪ್ಪ ದೊಡ್ಡಮನಿ ಎಂಬಾತ ಕರ್ತವ್ಯ ನಿರತ ವೈದ್ಯ ಹಾಗೂ ಸಿಬ್ಬಂದಿಗೆ ಜೀವದ ಬೆದರಿಕೆ ಹಾಕಿದ್ದಾನೆ.

ಕುರ್ತಕೋಟಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ದಯಾನಂದ ರಾಮಚಂದ್ರಸಾ ಕಬಾಡಿ ಸೋಮವಾರ ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆರೋಪಿ ಯುವಕನ ಮೇಲೆ ಸರಕಾರಿ ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದಗಳಿಂದ ನಿಂದನೆ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮತ್ತು ವೈದ್ಯಕೀಯ ಸಂಸ್ಥೆಯ ಆಸ್ತಿ ಹಾನಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ

ಸೋಮವಾರ ಯುವಕ ಮಲ್ಲಪ್ಪ ದುರ್ಗಪ್ಪ ದೊಡ್ಡಮನಿ ತನ್ನ ತಲೆಗೆ ಆಗಿದ್ದ ಗಾಯಕ್ಕೆ ಬ್ಯಾಂಡೇಜ್ ಮಾಡಿಸಲು ಆರೋಗ್ಯ ಕೇಂದ್ರಕ್ಕೆ ಹೋಗಿದ್ದ. ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ದಯಾನಂದ ರಾಮಚಂದ್ರಸಾ ಕಬಾಡಿ ಎಂಬುವರು ನೆಗಡಿ, ಕೆಮ್ಮು ಇದೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಸಹಜವಾಗಿ ಕೊರೊನಾ ಲಕ್ಷಣಗಳ ಬಗ್ಗೆ ಕೇಳಿದಾಗ, ‘ಅಂತಹ ಯಾವುದೇ ಲಕ್ಷಣಗಳು ಇಲ್ಲ’ ಎಂದು ಯುವಕ, ಚಿಕಿತ್ಸೆ ಪಡೆದು ವಾಪಸ್ ಮನೆಗೆ ಹೋಗಿದ್ದಾನೆ. ಆಮೇಲೆ ವೈದ್ಯರು ಕೇಳಿದ ಪ್ರಶ್ನೆಯಿಂದ ಯುವಕನ ತಲೆ ಗಿರ್ ಅಂದಿದೆ. ಕೊರೊನಾ ಬಗ್ಗೆ ನನ್ನನ್ನೇಕೆ ಪ್ರಶ್ನಿಸಿದರು ಎಂದು ಯೋಚಿಸಿದವನೇ ಸೀದಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು, ‘ನನಗ್ಯಾಕ ಕೊರೊನಾ ಬಗ್ಗೆ ಕೇಳಿದ್ರೀ? ನನಗೆ ಕೊರೊನಾ ಇಲ್ಲ ಏನಿಲ್ಲ’ ಎಂದು ಡಾ| ದಯಾನಂದ ಅವರನ್ನು ಪ್ರಶ್ನಿಸಿದವನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ವೈದ್ಯರ ಕಪಾಳಕ್ಕೆ ಹೊಡೆದು ಕಚೇರಿಯೊಳಗಿದ್ದ ಕುರ್ಚಿ ಮುರಿದಿದ್ದಾನೆ. ಗಲಾಟೆ ಏಕೆ ಮಾಡುತ್ತಿದ್ದಿ? ಸುಮ್ಮನಿರು ಎಂದು ವೈದ್ಯರು, ಆಸ್ಪತ್ರೆ ಸಿಬ್ಬಂದಿ ಹೇಳಿದರೂ ಕೇಳಿಸಿಕೊಳ್ಳದ ಯುವಕ ವೈದ್ಯರಿಗೆ ಅಶ್ಲೀಲ ಪದಗಳನ್ನು ಬಳಸಿದ್ದಾನೆ. ಇದನ್ನು ಸಹಿಸದೆ ವೈದ್ಯರೂ ಆತನಿಗೆ ಸೂಕ್ತ ಉತ್ತರ ನೀಡಿದ್ದಾರೆ.

ಯುವಕ ಮಲ್ಲಪ್ಪ ದೊಡ್ಡಮನಿಯ ರಂಪಾಟ ಕೇಳಿ ಸ್ಥಳೀಯರೂ ಆರೋಗ್ಯ ಕೇಂದ್ರಕ್ಕೆ ಬಂದು, ಆತನಿಗೆ ಬುದ್ಧಿ ಹೇಳಿದ್ದಾರೆ. ಆದರೆ, ಯುವಕ ಅವರೊಂದಿಗೂ ವಾದಿಸಿದ್ದಾನೆ. ‘ಇನ್ನೊಮ್ಮೆ ನಾನು ದವಾಖಾನೆಗೆ ಬಂದರೆ ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮನ್ನು ಕೊಂದು ಬಿಡುವೆ’ ಎಂದು ಸಿಬ್ಬಂದಿಗೆ ಬೆದರಿಸಿದ್ದಲ್ಲದೆ, ‘ನನ್ನ ಮೇಲೆ ಕಂಪ್ಲೇಂಟ್ ಕೊಟ್ರ ಇನ್ನೂ ಮೂರು ಜನ ಇದ್ದಾರ… ನಿನ್ನ ನೋಡ್ಕೋತ್ತಾರ’ ಅಂತ ಧಮ್ಕಿ ಹಾಕಿದ್ದಾನೆ. ಇದರಿಂದಾಗಿ ವಿಚಲಿತರಾದ ವೈದ್ಯ ದಯಾನಂದ ಕಬಾಡಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

ಕೊರೊನಾ; ಗದಗ ಜಿಲ್ಲೆಯಲ್ಲಿ ಸೋಂಕಿನ ‌ಆರ್ಭಟ; 543 ಜನರಿಗೆ ಸೋಂಕು, ಐವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕು ತನ್ನ ಅಟಾಟೋಪ ಮುಂದುವರೆಸಿದೆ. ಹಳ್ಳಿ ಹಳ್ಳಿಗೂ ಸೋಂಕು ವ್ಯಾಪಿಸಿದ್ದರಿಂದ ಗ್ರಾಮೀಣ ಭಾಗದಲ್ಲಿ ಜನ ಆತಂಕದಿಂದ ಕಾಲ ಕಳೆಯುವಂತೆ‌ ಆಗಿದೆ. ಇವತ್ತು ಸೋಂಕು ಸ್ಫೋಟವಾಗಿದ್ದು, ಐದು ನೂರರ ಗಡಿ ದಾಟಿದೆ.

ಇವತ್ತಿನ ಜಿಲ್ಲಾಡಳಿತದ ವರದಿಯಂತೆ ಐದು ಜನ ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 543 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 18830 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -237, ಮುಂಡರಗಿ-50, ನರಗುಂದ-50 ರೋಣ-108, ಶಿರಹಟ್ಟಿ-88, ಹೊರಜಿಲ್ಲೆಯ-10 ಸೇರಿದಂತೆ 543 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 192 ಕ್ಕೇರಿದೆ.

ಬೆಳಗಾವಿ ಜಿಲ್ಲೆಯ ನಿವಾಸಿ 57 ವರ್ಷದ ವ್ಯಕ್ತಿ ಮೇ -11 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 13 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ನರೇಗಲ್ ನಿವಾಸಿ 70 ವರ್ಷದ ಮಹಿಳೆ ಮೇ -09 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 16 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಮುಳಗುಂದ ನಿವಾಸಿ 45 ವರ್ಷದ ಮಹಿಳೆ ಮೇ 10 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 16 ರಂದು ಮೃತಪಟ್ಟಿದ್ದಾರೆ.

ಗಜೇಂದ್ರಗಡ ನಿವಾಸಿ 68 ವರ್ಷದ ಮಹಿಳೆ ಮೇ 12 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 16 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಹೊಳೆ ಆಲೂರ ನಿವಾಸಿ 76 ವರ್ಷದ ವ್ಯಕ್ತಿ, ರೋಣ ತಾಲೂಕು ಆಸ್ಪತ್ರೆಗೆ ಮೇ-10 ರಂದು ದಾಖಲಾಗಿದ್ದರು. ಇವರು ಮೇ -17 ರಂದು ಮೃತಪಟ್ಟಿದ್ದಾರೆ
ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 243 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 15631 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3007 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 180 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ ಹಳ್ಳಿಯ ಜನ!

ವಿಜಯಸಾಕ್ಷಿ ಸುದ್ದಿ, ಬೀದರ್

ಕೊರೊನಾ ಯಾವ ರೀತಿಯಲ್ಲಿ ಜನರನ್ನು ಬಲಿ ಪಡೆಯುತ್ತಿದೆ ಎಂಬುವುದೇ ತಿಳಿಯದಂತಾಗಿದೆ. ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ಜನರು ನಿಗೂಢವಾಗಿ ಸಾವನ್ನಪ್ಪುತ್ತಿದ್ದು, ಜನ ಆತಂಕದಲ್ಲಿ ಬದುಕು ಸಾಗಿಸುವಂತಾಗಿದೆ.
ಈ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಬರೋಬ್ಬರಿ 20 ಜನ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಉಸಿರಾಟ ಸಮಸ್ಯೆ, ಕೆಮ್ಮು ಇರುವ ವಯೋವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಗ್ರಾಮದ ಯುವಕರು ಸಹ ಸಾವನ್ನಪ್ಪುತ್ತಿರುವುದು ಗ್ರಾಮದ ಜನರ ಆತಂಕಕ್ಕೆ ಕಾರಣವಾಗಿದೆ.
ಈ ಸಾವುಗಳು ಕೊರೊನಾದಿಂದಲೇ ನಡೆಯುತ್ತಿವೆಯೇ ಅಥವಾ ಬೇರೆ ಕಾರಣಕ್ಕೋ ಎಂಬುವುದೇ ತಿಳಿಯುತ್ತಿಲ್ಲ.

ಜನರು ಸಾವನ್ನಪ್ಪುತ್ತಿರುವುದಕ್ಕೆ ಕಾರಣ ತಿಳಿಯಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೊರೊನಾ ಟೆಸ್ಟಿಂಗ್ ಗೆ ಮುಂದಾಗಿದೆ. ಒಂದೇ ತಿಂಗಳಲ್ಲಿ ನಮ್ಮ ಗ್ರಾಮದಲ್ಲಿ 20 ಜನರು ಸಾವನ್ನಪ್ಪಿದ್ದು, ಯಾವು ಕಾರಣಕ್ಕೆ ಎಂಬುವುದೇ ತಿಳಿಯುತ್ತಿಲ್ಲ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮೈಸೂರಿನಲ್ಲಿ ಕೊರೊನಾ ಚೈನ್ ಕಟ್ ಮಾಡಲು ಹೊಸ ನಿಯಮ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಜಿಲ್ಲೆಯಲ್ಲಿ ಮಹಾಮಾರಿ ಕಟ್ಟಿ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತೊಂದು ನಿರ್ಧಾರ ಕೈಗೊಂಡಿದೆ. ಶೂನ್ಯ ಕೋವಿಡ್ ಹೊಂದುವ ಗ್ರಾಮಗಳಿಗೆ ಪ್ರಶಸ್ತಿ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಈ ಕುರಿತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದ್ದಾರೆ.

ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್ ಮುಕ್ತ ಮಾಡಿದರೆ ಪ್ರಶಸ್ತಿ ನೀಡಲಾಗುವುದು. ಈ ಮೂಲಕ ಕೊರೊನಾ ನಿಯಂತ್ರಣಕ್ಕೆ ಮುಂದಾಗಿದ್ದೇವೆ. ಅಲ್ಲದೇ, ಅಗತ್ಯ ವಸ್ತುಗಳ ಖರೀದಿಗೆ ಸಮಯ ಕಡಿತಗೊಳಿಸಲಾಗುವುದು.

ಬೆಳಗ್ಗೆ 6 ರಿಂದ 8 ಗಂಟೆವರೆಗೆ ಮಾತ್ರ ಅವಕಾಶ ನೀಡುವುದರ‌ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ಮುಂದಿನ ಹತ್ತು ದಿನಗಳಲ್ಲಿ ಕೋವಿಡ್ ಕಂಟ್ರೋಲ್ ಗೆ ಸಿಗುವ ಸಾಧ್ಯತೆ ಇದೆ. ಇದಕ್ಕೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವುದರ ಬಗ್ಗೆ ಚಿಂತನೆ ಮಾಡಲಾಗುವುದು.

ಸದ್ಯ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 40ರ ಸರಾಸರಿಯಲ್ಲಿದೆ. ಮೈಸೂರು ತಾಲೂಕಿನಲ್ಲಿ ಶೇ. 80ರಷ್ಟಿದೆ. ನಗರ ಪ್ರದೇಶದಲ್ಲಿ ಶೇ. 35 ರಷ್ಟಿದೆ. ನಂಜನಗೂಡಿನಲ್ಲಿ ಶೇ. 80 ರಷ್ಟಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ಮಾಡಿದರೆ, ಅದರ ಮಾಹಿತಿ ನೀಡುವಂತೆ ಪ್ರಧಾನಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಮಿತ್ರ ಮಾಡಿದ್ದೇವೆ. ಕೋವಿಡ್ ಚೆನ್ನಾಗಿ ವರ್ಕ್ ಆಗುತ್ತಿದೆ. ಜಿಲ್ಲೆಯ 175 ಪ್ರಾಥಮಿಕ ಕೇಂದ್ರಗಳು ಕೋವಿಡ್ ಮಿತ್ರ ಆಗಿವೆ. ಸೋಂಕಿನ ಲಕ್ಷಣ ಇದ್ದವರು‌ ಅಲ್ಲಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ.

ಸೋಂಕಿತರಿಗೆ ಮೊದಲ 5 ದಿನ ಮುಖ್ಯವಾದದ್ದು, ತಕ್ಷಣ ಅಗತ್ಯ ಮೆಡಿಸಿನ್ ಕೊಡುವ ಕೆಲಸವಾಗುತ್ತಿದೆ. ಇದರಿಂದ ನಗರ ಆಸ್ಪತ್ರೆಗಳನ್ನು ಅವಲಂಬನೆ ಮಾಡುವುದು ಕಡಿಮೆಯಾಗಿದೆ. ಇದೇ ರೀತಿ ನಗರದಲ್ಲಿಯೂ ಕೋವಿಡ್ ಸೆಂಟರ್ ತೆರೆಯುತ್ತಿದ್ದೇವೆ ಎಂದು ಹೇಳಿದ್ದಾರೆ.

ನಾಳೆಯಿಂದ ಹಳ್ಳಿಗಳು ಆಗಲಿವೆ ಸಂಪೂರ್ಣ ಲಾಕ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇಲ್ಲಿಯವರೆಗೂ ನಗರ ಪ್ರದೇಶದಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದ್ದ ಮಹಾಮಾರಿ ಸದ್ಯ ಗ್ರಾಮೀಣ ಭಾಗದಲ್ಲಿ ಸದ್ದು ಮಾಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಹಳ್ಳಿಗಳನ್ನು ಸಂಪೂರ್ಣವಾಗಿ ಲಾಕ್ ಮಾಡಲು ಮುಂದಾಗಿವೆ.

ಇಂದು ರಾಜ್ಯದ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸ್ಥಳೀಯ ಆಡಳಿತಕ್ಕೆ ನೀಡಿದ್ದಾರೆ. ಹೀಗಾಗಿ ಹಳ್ಳಿಗಳಲ್ಲಿ ಕೊರೊನಾ ಕಟ್ಟಿ ಹಾಕುವ ಪ್ರಯತ್ನ ಜಿಲ್ಲಾಡಳಿತದಿಂದ ನಡೆಯುತ್ತಿದೆ.

ಈಗಾಗಲೇ ಹಾಸನ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಜಿಲ್ಲೆಯಲ್ಲಿ 4 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದಾರೆ. ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಜಿಲ್ಲೆಯಲ್ಲಿ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಮೇ. 20 ರಿಂದ 23ರ ವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಹಾಲಿನ ಬೂತ್‌ ಗಳಿಗೆ ಮಾತ್ರ ಬೆಳಿಗ್ಗೆ 6ರಿಂದ 10ರ ವರೆಗೆ ಅವಕಾಶ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ದೀನಸಿ ಅಂಗಡಿಗಳಿಗೆ ಇದ್ದ ಅನುಮತಿ ಕೂಡ ರದ್ದು ಮಾಡಲಾಗಿದೆ. ಮೇ. 24 ರ ಬೆಳಿಗ್ಗೆ 1ರ ವರೆಗೆ ಅಂಗಡಿ ತೆರೆಯುವಂತಿಲ್ಲ.

ಬಳ್ಳಾರಿಯಲ್ಲಿ ಕೂಡ 5 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.
ಕಲಬುರಗಿಯಲ್ಲಿ 3 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದ್ದರೆ, ರಾಯಚೂರು ಜಿಲ್ಲೆಯಲ್ಲಿ 6 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಮೇ. 22ರ ನಂರ ಒಂದು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುವುದು ಎಂದು ಜನರಿಗೆ ಹೇಳಲಾಗಿದೆ.

error: Content is protected !!