Home Blog Page 3025

ತಹಸೀಲ್ದಾರ ಮಜ್ಜಿಗಿ ದಾಳಿ; ಅಕ್ರಮ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಜಪ್ತಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಅನಧಿಕೃತವಾಗಿ ಮುರಂ ಸಾಗಿಸುತ್ತಿದ್ದ ಟಿಪ್ಪರ್ ಗಳ ಮೇಲೆ ದಾಳಿ ಮಾಡಿದ ತಹಸೀಲ್ದಾರ ಜೆ ಬಿ ಮಜ್ಜಿಗಿ 5 ಟಿಪ್ಪರ್ ಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ತಾಲೂಕಿನ ಛಬ್ಬಿ ಗ್ರಾಮದ ಮುಖ್ಯರಸ್ತೆಯಲ್ಲಿ 5 ಟಿಪ್ಪರ್ ಗಳು ಪರವಾನಿಗೆ ಇಲ್ಲದೆ ಯಾವುದೇ ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯದೆ ಅನಧಿಕೃತವಾಗಿ ಮುರಂ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಿದ್ದರಿಂದ ಈ ಐದು ಟಿಪ್ಪರ್ ಗಳನ್ನು ವಶಪಡಿಸಿಕೊಂಡು ಪೊಲೀಸರ ಸುಪರ್ದಿಗೆ ನೀಡಿದ್ದಾರೆ.

ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮುರಂ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವಂತಹ ಐದು ಟಿಪ್ಪರ್ ಗಳಿಗೆ ನಿಯಮಾನುಸಾರ ದಂಡ ವಿಧಿಸಬೇಕೆಂದು ಗದಗನ ನ ಹಿರಿಯ ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ತಹಸೀಲ್ದಾರ್ ಪತ್ರವನ್ನು ಬರೆದಿದ್ದಾರೆ.

ಸರಕಾರದ ಬೊಕ್ಕಸಕ್ಕೆ ಅಪಾರ ನಷ್ಟ

ತಾಲೂಕಿನಾದ್ಯಂತ ವಿವಿಧ ರಸ್ತೆ ಕಾಮಗಾರಿಗಳಿ ಅನಧಿಕೃತವಾಗಿ ಮುರಂ ತುಂಬಿಕೊಂಡು ಹೋಗುವುದು ಸಾಮಾನ್ಯವಾಗಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದರೂ ಸಹ ಇದನ್ನು ಯಾವೊಬ್ಬ ಅಧಿಕಾರಿಗಳು ತಡೆಯುವುದಕ್ಕೆ ಮುಂದಾಗಿರಲಿಲ್ಲ. ಇದೀಗ ತಹಸಿಲ್ದಾರ್ ಜೆ ಬಿ ಮಜ್ಜಿಗಿ ಸಾಹೇಬರ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಎಲ್ಲವನ್ನೂ ಜಿಲ್ಲಾಡಳಿತದ ಹೆಗಲಿಗೆ ಹಾಕಿ ಕೈ ತೊಳೆದುಕೊಂಡ ಮೋದಿ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಲಾಕ್ ಡೌನ್ ಘೋಷಿಸುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಯಾ ಜಿಲ್ಲಾಧಿಕಾರಿಗಳ ಅಧಿಕಾರಕ್ಕೆ ಒಪ್ಪಿಸಿದ್ದಾರೆ.
ರಾಜ್ಯದಲ್ಲಿ ಮಹಾಮಾರಿಯ ಅಟ್ಟಹಾಸ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಸಿದ್ದರು.
ಆ ನಂತರ ಮಾತನಾಡಿದ ಪ್ರಧಾನಿ, ಲಾಕ್ ಡೌನ್ ನಿರ್ಧಾರವು ಜಿಲ್ಲಾಡಳಿತದ ಕೈಯಲ್ಲಿದೆ. ಜಿಲ್ಲೆಯ ಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

ಜಿಲ್ಲಾಡಳಿತಕ್ಕೆ ಜಿಲ್ಲೆಯ ಪರಿಸ್ಥಿತಿ ಚೆನ್ನಾಗಿ ಗೊತ್ತಿರುತ್ತದೆ. ಹೀಗಾಗಿ ಜಿಲ್ಲೆಗೆ ಅನುಗುಣವಾಗಿ ನೀವೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ಮೋದಿ ಸಲಹೆ ನೀಡಿದ್ದಾರೆ. ಪ್ರತಿಯೊಂದು ಜಿಲ್ಲೆಗಳಲ್ಲಿಯೂ ಕೊರೊನಾ ನಿಯಂತ್ರಣಕ್ಕೆ ಬಂದರೆ ಇಡೀ ದೇಶವೇ ಗೆದ್ದಂತೆ. ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ. ಈಗಾಗಲೇ ಹಲವು ಅಧಿಕಾರಿಗಳು ತಮ್ಮ ಆಪ್ತರನ್ನು ಕಳೆದುಕೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಮೈಸೂರು, ಕೋಲಾರ, ಮಂಡ್ಯ, ತುಮಕೂರು, ಕೊಡಗು, ಉತ್ತರ ಕನ್ನಡ, ಹಾಸನ, ಬಳ್ಳಾರಿ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ ಸೇರಿದಂತೆ ಇನ್ನಿತರ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಅವರು ಇಂದು ಸಂವಾದ ನಡೆಸಿದ್ದರು.

ಐಪಿಎಲ್ ನಲ್ಲಿ ಅತೀ ಹೆಚ್ಚು ಜನ ವೀಕ್ಷಿಸಿದ ಪಂದ್ಯ ಯಾವುದು?

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಾವಳಿ ಕೊರೊನಾದಿಂದಾಗಿ ಅರ್ಧಕ್ಕೆ ನಿಂತಿದೆ. ಆದರೆ, ಕೆಲವು ಪಂದ್ಯಗಳ ದಾಖಲೆಗಳು ಮಾತ್ರ ಅಭಿಮಾನಿಗಳ ಮನಸ್ಮೃತಿಯಿಂದ ಇನ್ನೂ ಮರೆಯಾಗುತ್ತಿಲ್ಲ.

ಏ. 21ರಂದು ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯವನ್ನು ಅಭಿಮಾನಿಗಳು ಇನ್ನೂ ಮೆಲುಕು ಹಾಕುತ್ತಿದ್ದಾರೆ. ಅಲ್ಲದೇ, ಈ ಪಂದ್ಯ ಪ್ರಕ್ಷಕರ ದೃಷ್ಟಿಯಿಂದ ಹೊಸ ಇತಿಹಾಸವನ್ನೇ ನಿರ್ಮಿಸಿದೆ.

ಈ ಪಂದ್ಯದಲ್ಲಿ ರನ್ ಹೊಳೆಯೇ ಹರಿದಿತ್ತು. ಈ ನಿಟ್ಟಿನಲ್ಲಿ ಈ ಪಂದ್ಯವನ್ನು ಹೆಚ್ಚು ಜನರು ವೀಕ್ಷಿಸಿದ್ದಾರೆ. ಹೀಗಾಗಿ 2021ರ ಟೂರ್ನಿಯಲ್ಲಿ ಅತಿ ಹೆಚ್ಚು ವೀಕ್ಷಿಸಿದ ಪಂದ್ಯ ಎಂಬ ದಾಖಲೆಗೆ ಈ ಪಂದ್ಯ ಸೇರ್ಪಡೆಗೊಂಡಿದೆ. ಆ ಆಟವನ್ನು ಡಿಸ್ನಿ ಹಾಟ್‌ ಸ್ಟಾರ್‌ ನಲ್ಲಿ 7 ದಶ ಲಕ್ಷ ಜನರು ನೇರ ಪ್ರಸಾರದಲ್ಲಿ ವೀಕ್ಷಿಸಿದ್ದಾರೆ.

ಕಳೆದ 2020ರ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಮುಂಬಯಿ ಇಂಡಿಯನ್ಸ್ ನಡುವಿನ ಪಂದ್ಯವನ್ನು 8 ಮಿಲಿಯನ್‌ ಜನರು ಡಿಸ್ನಿ- ಹಾಟ್‌ ಸ್ಟಾರ್‌ನಲ್ಲಿ ನೋಡಿದ್ದರು. ಐಪಿಎಲ್ ನ ಇತಿಹಾಸದಲ್ಲಿಯೇ ಅತೀ ಹೆಚ್ಚು ಜನರು ವೀಕ್ಷಿಸಿದ ಪಂದ್ಯಗಳು ಇವು ಎಂದು ದಾಖಲಾಗಿವೆ.

2021ರ ಉದ್ಘಾಟನಾ ಪಂದ್ಯವು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬಯಿ ಇಂಡಿಯನ್ಸ್ ನಡುವೆ ನಡೆದಿತ್ತು. ಈ ಪಂದ್ಯವನ್ನು ಡಿಸ್ನಿ- ಹಾಟ್‌ ಸ್ಟಾರ್‌ನಲ್ಲಿ 6.7 ಮಿಲಿಯನ್‌ ಜನರು ವೀಕ್ಷಿಸಿದ್ದರು.

ನಟ ಸೋನು ಸೂದ್ ಹೆಸರಿನಲ್ಲಿ ಜನರಿಗೆ ವಂಚಿಸುತ್ತಿರುವ ದುಷ್ಕರ್ಮಿಗಳು!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಕೊರೊನಾದ ಸಂಕಷ್ಟ ಕಾಲದಲ್ಲಿ ನಟ ಸೋನು ಸೂದ್ ಅವರು ಬಡವರ ಪಾಲಿಗೆ ಆಶಾಕಿರಣವಾಗಿದ್ದಾರೆ. ಹಸಿದ ಹೊಟ್ಟೆಗೆ ಅನ್ನ ನೀಡುವ ದೇವರಾಗಿದ್ದಾರೆ. ಆದರೆ, ಪಾಪಿಗಳು ಅವರ ಹೆಸರನ್ನೇ ಬಳಸಿಕೊಂಡು ಜನರಿಗೆ ಯಾಮಾರಿಸಿರುವ ಘಟನೆ ನಡೆದಿದೆ.

ಈ ಕುರಿತಾಗಿ ಸೋನು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ. ಆಕ್ಸಿಜನ್, ಔಷಧಿ, ಬೆಡ್ ವ್ಯವಸ್ಥೆ ಸೇರಿದಂತೆ ಅನೇಕ ಸಹಾಯಗಳನ್ನು ಅವರು ಮಾಡುತ್ತಿದ್ದಾರೆ. ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರಿಂದ ಹಣ ಕಬಳಿಸಲು ಕೆಲವರು ಸ್ಕೆಚ್ ಹಾಕಿದ್ದಾರೆ. ಈ ಮೋಸದ ಜಾಲದ ಬಗ್ಗೆ ಸ್ವತಃ ಸೋನು ಸೂದ್ಗೆೊ ಈಗ ಮಾಹಿತಿ ಸಿಕ್ಕಿದ್ದು ಜನರಿಗೆ ಮಾಹಿತಿ ತಿಳಿಸಿದ್ದಾರೆ.

ಸೋನು ಸೂದ್ ಅವರ ತಂಡಕ್ಕೆ ನೀವು ದೇಣಿಗೆ ನೀಡಬಹುದು. ಒಂದು ರೂಪಾಯಿಯಿಂದ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹಣ ನೀಡಬಹುದು. ಈ ಕೆಳಗಿನ ನಂಬರ್ ಗೆ ಫೋನ್ ಪೇ ಮಾಡಿ ಎಂದು ಬರೆದಿರುವ ಫೋಸ್ಟರ್ ಇಂಟರ್ ನೆಟ್ನಲ್ಲಿ ಹರಿದಾಡುತ್ತಿದೆ. ಸೋನು ಸೂದ್ ಅವರ ಫೋಟೋ ಕೂಡ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅದರ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಸೋನು ಸೂದ್ ಅವರು, ಇದು ಫೇಕ್ ಎಂದು ಹೇಳಿಕೊಂಡಿದ್ದಾರೆ. ಇಂತಹ ಜಾಲದ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಜನರಿಗೆ ಕಿವಿ ಮಾತು ಹೇಳಿದ್ದಾರೆ.

ಸ್ವಂತ ಜಮೀನನ್ನೇ ಅಡ ಇಟ್ಟು ಬಡವರಿಗೆ ಔಷಧಿ ತರಿಸಿರುವ ಶಾಸಕ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕ್ಷೇತ್ರದ ಜನರಿಗಾಗಿ ಸ್ವಂತ ಜಮೀನನ್ನೇ ಶಾಸಕ ಅಡಮಾನ ಇಟ್ಟು ಹೃದಯ ಸ್ಪರ್ಶಿ ಘಟನೆಗೆ ಸಾಕ್ಷಿಯಾಗಿದ್ದಾರೆ. ಜಿಲ್ಲೆಯ ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಈ ರೀತಿ ಮಾದರಿಯ ಜನ ಸೇವೆ ಮಾಡುತ್ತಿರುವ ವ್ಯಕ್ತಿ.

ಕ್ಷೇತ್ರದ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಔಷದಿ ಸಂಪೂರ್ಣವಾಗಿ ಖಾಲಿಯಾಗಿದೆ. ಸಣ್ಷಪುಟ್ಟ ಕಾಯಿಲೆಗೂ ಔಷಧಿ ಸಿಗದೆ ಜನರ ಪರದಾಟ ನಡೆಸುತ್ತಿದ್ದಾರೆ. ಆದರೆ, ಇದಕ್ಕೆ ರಾಜ್ಯ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕರು ಈ ನಿರ್ಧಾರ ಕೈಗೊಂಡಿದ್ದಾರೆ.

ಹಣ ಇಲ್ಲದ ಕಾರಣಕ್ಕೆ ಶಾಸಕರು, ತಮ್ಮ 30 ಎಕರೆ ಜಮೀನನ್ನೇ ಕೇರಳ ಮೂಲದವರಿಗೆ ಅಡಮಾನ ಇಟ್ಟಿದ್ದಾರೆ. ಆ ನಂತರ ಮುಕ್ತ ಮಾರುಕಟ್ಟೆಯಲ್ಲಿ ರೂ. 10 ಲಕ್ಷಕ್ಕೆ ಔಷಧಿ ಖರೀದಿಸಿ ಆಸ್ಪತ್ರೆಗಳಿಗೆ ನೀಡಿದ್ದಾರೆ. ಇದರೊಂದಿಗೆ ಕ್ಷೇತ್ರದ ಜನರ ಸಮಸ್ಯೆ ತೀರಿಸಲು ಈ ಹಣ ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಈ ಶಾಸಕರು ಈಗಾಗಲೇ 3 ಅಂಬ್ಯುಲೆನ್ಸ್, ನೂರು ಬೆಡ್ ಗಳನ್ನು ನೀಡಿದ್ದಾರೆ.
ಕೊರೊನಾದ ಈ ಕಷ್ಟ ಕಾಲದಲ್ಲಿ ಜನರಿಗೆ ಸ್ಪಂದಿಸಲೇಬೇಕೆಂದು ಟೊಂಕ ಕಟ್ಟಿ ಈ ಶಾಸಕ ನಿಂತಿದ್ದಾರೆ. ಕಷ್ಟ ಕಾಲದಲ್ಲಿ ಜನ ನನ್ನ ಕೈಹಿಡಿದಿದ್ದಾರೆ. ನನ್ನ ಜನರು ಕಷ್ಟದಲ್ಲಿದ್ದಾಗ ಕೈಹಿಡಿಯುವುದು ನನ್ನ ಧರ್ಮ. ನನ್ನ ಆಸ್ತಿ ಮಾರಿಯಾದರೂ ಜನರ ಕಷ್ಟ ತೀರಿಸುವೆ ಎನ್ನುತ್ತಿದ್ದಾರೆ ಶಾಸಕ ಅನಿಲ್ ಚಿಕ್ಕಮಾದು.

ಹಸಿದವರ ಹೊಟ್ಟೆ ತುಂಬಿಸುತ್ತಿರುವ ಶಿವಣ್ಣ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿ ಮೆಟ್ಟಿ ನಿಲ್ಲುವುದಕ್ಕಾಗಿ ಸದ್ಯ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದೆ. ಹೀಗಾಗಿ ಬಡವರ ಬದುಕು ಬೀದಿಗೆ ಬಂದು ನಿಂತಿದೆ. ಸೆಲೆಬ್ರಿಟಿಗಳು ಇಂತಹ ಜನರ ಬದುಕಿಗೆ ಆಸರೆಯಾಗಿ ನಿಲ್ಲುತ್ತಿದ್ದಾರೆ. ಸದ್ಯ ಈ ಸಾಲಿಗೆ ನಟ ಶಿವರಾಜ್ ಕುಮಾರ್ ಸೇರಿದ್ದಾರೆ.
ಹಸಿವಿನಿಂದ ಪರಿತಪಿಸುತ್ತಿರುವ ಕಾರ್ಮಿಕರಿಗೆ ಹಾಗೂ ಬಡವರಿಗೆ ಶಿವರಾಜ್ ಕುಮಾರ್ ಪ್ರತಿ ದಿನ ಊಟ ಹಾಕಿ ಹಸಿವು ನೀಗಿಸುತ್ತಿದ್ದಾರೆ.

ನಾಗವಾರದಲ್ಲಿನ ತಮ್ಮ ನಿವಾಸದ ಸುತ್ತಮುತ್ತಲಿನ ಏರಿಯಾದಲ್ಲಿರುವ ನೂರಾರು ಜನರಿಗೆ ನಿತ್ಯವು ಆಹಾರ ಒದಗಿಸುವ ಕೆಲಸ ಶಿವರಾಜ್ ಕುಮಾರ್ ಹಾಗೂ ಗೀತಾ ದಂಪತಿಯಿಂದ ನಡೆಯುತ್ತಿದೆ.
ಶಿವರಾಜ್‌ ಕುಮಾರ್ ಅವರು ‘ಆಸರೆ’ ಎಂಬ ಹೆಸರಿನಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಶಿವಣ್ಣ ಬಾಯ್ಸ್ ಹೆಸರಿನ ತಂಡವೊಂದು ಪ್ರತಿ ದಿನ ಅಗತ್ಯವಿದ್ದವರಿಗೆ ಊಟ ತಲುಪಿಸುವ ಕಾರ್ಯ ಮಾಡುತ್ತಿದೆ. ಈ ಪ್ರದೇಶದ ಸುತ್ತಮುತ್ತಲಿನ ಸುಮಾರು 500 ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಲಾಕ್ ಡೌನ್ ಜಾರಿಯಾದ ದಿನದಿಂದಲೂ ಶಿವರಾಜ್ ಕುಮಾರ್ ಅವರು ಸುಮಾರು 500 ಜನರಿಗೆ ಊಟ, ತಿಂಡಿ ಹಾಗೂ ಟೀ ವ್ಯವಸ್ಥೆ ಮಾಡಿದ್ದಾರೆ. ಈ ಕಾರ್ಯಕ್ಕೆ ಬೊಲೇರೋ ಕ್ಯಾಂಟ್ರೋವೊಂದನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜನರ ಬಳಿಯೇ ಊಟ, ತಿಂಡಿ ವಿತರಿಸಲಾಗುತ್ತಿದೆ. ‘ಆಸರೆ’- ‘ಹಸಿದ ಹೊಟ್ಟೆಗೆ ಕೈ ತುತ್ತು’ ಅನ್ನೋ ಶೀರ್ಷಿಕೆಯಡಿಯಲ್ಲಿ ಈ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಡ ಜನರಿಗೆ ಸಹಾಯ ಮಾಡಲು ಶಿವಣ್ಣ ಮುಂದಾಗಿದ್ದಾರೆ.

ದೇಶದಲ್ಲಿ ಒಂದೇ ದಿನ ನಾಲ್ಕು ಸಾವಿರದ ಗಡಿ ದಾಟಿದ ಬಲಿಯಾದವರ ಸಂಖ್ಯೆ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದಲ್ಲಿ ಒಂದೇ ದಿನ ಮಹಾಮಾರಿಗೆ ನಾಲ್ಕು ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 2,63,533 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 2,52,28,996ಕ್ಕೆ ಏರಿಕೆ ಕಂಡಿದೆ. ನಿನ್ನೆ ಒಂದೇ ದಿನ 4,329 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಅಲ್ಲದೇ, ದೇಶದಲ್ಲಿ ಇಲ್ಲಿಯವರೆಗೆ 2,78,719 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ದೇಶದಲ್ಲಿ 33,53,765 ಸಕ್ರಿಯ ಪ್ರಕರಣಗಳಿವೆ. 2,15,96,512 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 18,44,53,149 ಜನ ದೇಶದಲ್ಲಿ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.

ಕೇವಲ ಎರಡೇ ತಿಂಗಳಲ್ಲಿ ಎಷ್ಟು ಜನ ವೈದ್ಯರು ಮಹಾಮಾರಿಗೆ ಬಲಿಯಾಗಿದ್ದಾರೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶದಲ್ಲಿ ಮಹಾಮಾರಿ ಮಿತಿ ಮೀರಿ ತನ್ನ ಅಟ್ಟಹಾಸ ಪ್ರದರ್ಶಿಸುತ್ತಿದೆ. ಸಾಮಾನ್ಯ ಜನರ ಸೇವೆಗೆ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ನಿಸ್ವಾರ್ಥ ಸೇವೆ ನೀಡುತ್ತಿರುವ ವೈದ್ಯರನ್ನೂ ಈ ಸೋಂಕು ಬಿಡುತ್ತಿಲ್ಲ. ಕಳೆದ ವರ್ಷ ಮಹಾಮಾರಿಗೆ ಬರೋಬ್ಬರಿ 800ಕ್ಕೂ ಅಧಿಕ ವೈದ್ಯರು ಬಲಿಯಾಗಿದ್ದರು.

ಸದ್ಯ ಎರಡನೇ ಅಲೆಯ ಭಯಾನಕತೆ ಶುರುವಾಗಿದ್ದು, ಏಪ್ರೀಲ್ ಹಾಗೂ ಮೇ ತಿಂಗಳ ವೇಳೆಗೆ ದೇಶದಲ್ಲಿ ಸುಮಾರು 269 ವೈದ್ಯರು ಈಗಾಗಲೇ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರಿಂದಾಗಿ ಹಲವು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸೇವೆ ಮಾಡುತ್ತ ಪ್ರಾಣ ಬಿಟ್ಟ ವೈದ್ಯರ ಕುಟುಂಬಸ್ಥರು ಮಾತ್ರ ಕಣ್ಣೀರಿನಲ್ಲಿ ದಿನ ಕಳೆಯುತ್ತಿದ್ದಾರೆ.

ಎರಡನೇ ಅಲೆಯ ಏಪ್ರೀಲ್ ಹಾಗೂ ಮೇ ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ 22, ಆಸ್ಸಾಂ 3, ಬಿಹಾರ 78, ಛತ್ತೀಸಗಢ 3, ದೆಹಲಿ 28, ಗುಜರಾತ್ 2, ಗೋ 1, ಹರಿಯಾಣ 2, ಜಮ್ಮು ಮತ್ತು ಕಾಶ್ಮೀರ 3, ಕರ್ನಾಟಕ 8, ಕೇರಳ 2, ಮಧ್ಯಪ್ರದೇಶ 5, ಮಹಾರಾಷ್ಟ್ರ 14, ಓಡಿಶಾ 10, ಪುದುಚೇರಿ 1, ತಮಿಳುನಾಡು 11, ತೆಲಂಗಾಣ 19, ಉತ್ತರ ಪ್ರದೇಶ 37, ಉತ್ತರಖಾಂಡ 2, ಪಶ್ಚಿಮ ಬಂಗಾಳ 14 ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಇಬ್ಬರು ವೈದ್ಯರು ಸೇವೆ ಮಾಡುತ್ತ ಮಹಾಮಾರಿಗೆ ಬಲಿಯಾಗಿದ್ದಾರೆ.

ಬಿಹಾರ ರಾಜ್ಯದಲ್ಲಿಯೇ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ. ಇನ್ನುಳಿದಂತೆ ಉತ್ತರ ಪ್ರದೇಶ, ದೆಹಲಿ, ಆಂಧ್ರಪ್ರದೇಶದಲ್ಲಿ ಹೆಚ್ಚಿನ ವೈದ್ಯರು ಬಲಿಯಾಗಿದ್ದಾರೆ. ಸರ್ಕಾರ ವೈದ್ಯರ ಆರೋಗ್ಯದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಬ್ಲ್ಯಾಕ್ ಫಂಗಸ್ ಕಾಟ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸುತ್ತಿದ್ದು, ರಾಜ್ಯದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.

ಕೋಲಾರ, ವಿಜಯಪುರ, ಮಂಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಕೊಪ್ಪಳ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ, ಮೈಸೂರಿನ ಎಂಎಂಸಿ, ಶಿವಮೊಗ್ಗದ ಎಸ್ಐಎಂಎಸ್, ಕಲಬುರಗಿಯ ಜಿಮ್ಸ್, ಹುಬ್ಬಳ್ಳಿಯ ಕಿಮ್ಸ್ ಮತ್ತು ಮಣಿಪಾಲದ ಕೆಎಂಸಿಯಲ್ಲಿ ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಗಾಗಿ ಪ್ರಾದೇಶಿಕ ಕೇಂದ್ರಗಳಾಗಿ ಗುರುತಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು 26 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದರೆ, ಬೆಂಗಳೂರು ನಗರದಲ್ಲಿ 12, ಕಲಬುರಗಿ, ಗದಗಗಳಲ್ಲಿ ತಲಾ ಇಬ್ಬರು, ಬಳ್ಳಾರಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.

ನವಜಾತ ಶಿಶುಗಳ ಕಾಲು ಕಚ್ಚಿ ತಿಂದ ಇಲಿಗಳು!

ವಿಜಯಸಾಕ್ಷಿ ಸುದ್ದಿ, ಭೋಪಾಲ್

ಮಧ್ಯಪ್ರದೇಶದಲ್ಲಿನ ಇಂದೋರ್ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ್ನು ಇಲಿಗಳು ಕಚ್ಚಿ ತಿಂದಿರುವ ಘಟನೆ ನಡೆದಿದೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಹೀಗಾಗಿ ಆಸ್ಪತ್ರೆಯ ಆಡಳಿತ ಮಂಡಳಿಯು ತನಿಖೆಗೆ ಆದೇಶಿಸಿದೆ.

ಈ ಕುರಿತು ಆಸ್ಪತ್ರೆಯ ಅಧೀಕ್ಷಕ ಡಾ. ಪ್ರಮೇಂದ್ರ ಠಾಕೂರ್ ಪ್ರತಿಕ್ರಿಯಿಸಿ, ಸರ್ಕಾರದ ಅಧೀನದಲ್ಲಿರುವ ಮಹಾರಾಜ ಯಶವಂತರಾವ್(ಎಂವೈ) ಆಸ್ಪತ್ರೆಯಲ್ಲಿ ಇಲಿಗಳು, ನವಜಾತ ಶಿಶುಗಳ ಕಾಲುಗಳನ್ನು ಕಚ್ಚಿ ತಿಂದಿರುವ ಪ್ರಕಣ ಬೆಳಕಿಗೆ ಬಂದಿದೆ. ಆದರೆ, ಹೆಚ್ಚಿನ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಈ ಕುರಿತು ತನಿಖೆ ಮಾಡುವುದಾಗಿ ಅವರು ಹೇಳಿದ್ದಾರೆ.

ಪ್ರಕರಣದ ತನಿಖೆ ನಡೆಸುವುದಕ್ಕಾಗಿ ಇಬ್ಬರು ವೈದ್ಯರು ಮತ್ತು ಆಡಳಿತಾಧಿಕಾರಿಯನ್ನು ಒಳಗೊಂಡ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಠಾಕೂರ್ ತಿಳಿಸಿದ್ದಾರೆ.

error: Content is protected !!