Home Blog Page 3028

ಹುಷಾರ್..! ಸದ್ದಿಲ್ಲದೆ ಯುವಕರ ಪ್ರಾಣವಾಯುವನ್ನೇ ನಿಲ್ಲಿಸುತ್ತಿದೆ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶಾದ್ಯಂತ ಸದ್ಯ ಕೊರೊನಾ ಎರಡನೇ ಅಲೆ ಜೋರಾಗಿದೆ. ಈ ಅಲೆಗೆ ಯುವ ಸಮುದಾಯವೇ ಹೆಚ್ಚಾಗಿ ಸೋಂಕಿಗೆ ಬಲಿಯಾಗುತ್ತಿದೆ. ಸುಮಾರು 35 ರಿಂದ 45 ವರ್ಷ ವಯಸ್ಸಿನೊಳಗಿನವರಲ್ಲಿಯೇ ಸೋಂಕಿನ ಗಂಭೀರತೆ ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ರೂಪಾಂತರಿ ಕೊರಾನಾದಿಂದಾಗಿ ಯುವಕರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ.

ಯುವಕರ ರಕ್ತದಲ್ಲಿ ಅಥವಾ ದೇಹದಲ್ಲಿ ಆಮ್ಲಜನಕದ ಪ್ರಮಾಣ ದಿಢೀರ್‌ ಕುಸಿಯುವ ‘ಹ್ಯಾಪಿ ಹೈಪೊಕ್ಸಿಯಾ’ದಿಂದ ಯುವಕರು ಸಾವನ್ನಪ್ಪುವಂತಾಗುತ್ತಿದೆ. ಆಕ್ಸಿಮೀಟರ್‌ ನಿಂದ ಸೋಂಕಿತರು ನಿಯಮಿತವಾಗಿ ತಮ್ಮ ಆಮ್ಲಜನಕ ಪ್ರಮಾಣ ಚೆಕ್‌ ಮಾಡಿಕೊಳ್ಳುವುದೊಂದೇ ಸದ್ಯದ ಪರಿಹಾರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಹಳಷ್ಟು ಯುವಕರಿಗೆ ತಮ್ಮ ದೇಹದ ಆಮ್ಲಜನಕ ಪ್ರಮಾಣ ಇಳಿಕೆಯಾಗುತ್ತಿರುವುದು ತಕ್ಷಣಕ್ಕೆ ಗೊತ್ತಾಗುತ್ತಿಲ್ಲ. ಆಮ್ಲಜನಕದ ಪ್ರಮಾಣ ಶೇ. 20 ರಿಂದ 30ರಷ್ಟು ಇಳಿಕೆ ಕಂಡಾಗಲೇ ತಿಳಿಯುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಯುವಕರ ತುಟಿಗಳ ಬಣ್ಣ ಬದಲಾಗಿ ನೀಲಿಗೆ ತಿರುಗುವುದು. ಕೈ -ಕಾಲುಗಳ ಚರ್ಮದ ಬಣ್ಣ ಕೆಂಪಾಗುವುದು. ಏಕಾಏಕಿಯಾಗಿ ವಿಪರೀತ ಬೆವರುವುದು ಕಂಡು ಬರುತ್ತಿದ್ದರೆ, ಯುವಕರು ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಅಂತ್ಯಕ್ರಿಯೆ ನಡೆಯಬೇಕು ಎನ್ನುವಷ್ಟರಲ್ಲಿಯೇ ಕಣ್ಣು ತೆರೆದ ಸೋಂಕಿತ ಮಹಿಳೆ

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಸೋಂಕಿತ ಮಹಿಳೆಯೊಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆಂದು ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ನಡೆದಿತ್ತು. ಕುಟುಂಬದವರ ಆಕ್ರಂದನ ಕೂಡ ಮುಗಿಲು ಮುಟ್ಟಿತು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಇನ್ನೇನು ಅಂತ್ಯಕ್ರಿಯೆ ನಡೆಯಬೇಕು ಎನ್ನುವಷ್ಟರಲ್ಲಿಯೇ ಮಹಿಳೆ ಎದ್ದು ಕುಳಿತಿರುವ ಘಟನೆ ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದಿದೆ.

76 ವರ್ಷದ ಮಹಿಳೆ ಈ ರೀತಿಯಾಗಿ ಎದ್ದು ಕುಳಿತಿದ್ದಾರೆ. ಅಂತ್ಯಸಂಸ್ಕಾರಕ್ಕೂ ಕೆಲವೇ ನಿಮಿಷಗಳಿರುವಾಗ ಎಚ್ಚರಗೊಂಡು ಎದ್ದು ಕುಳಿತಿದ್ದಾರೆ. ಶಕುಂತಲಾ ಗಾಯಕ್‌ವಾಡ್ ಅವರಿಗೆ ಇತ್ತೀಚೆಗಷ್ಟೇ ಸೋಂಕು ತಗುಲಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ. ಅವರನ್ನು ಕಾರಿನಲ್ಲಿಯೇ ಇರಿಸಿಕೊಳ್ಳಲಾಗಿತ್ತು. ಆದರೆ, ಅವರು ಕಾರಿನಲ್ಲಿ ಕುಸಿದು ಬಿದ್ದಿದ್ದರು. ಹೀಗಾಗಿ ಕುಟುಂಬದವರು ಮಹಿಳೆ ಮೃತಪಟ್ಟಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದರು.

ಕೆಲವು ಸಮಯದ ನಂತರ ಮಹಿಳೆ ಕಣ್ಣು ತೆರೆದು ಅಳಲು ಪ್ರಾರಂಭಿಸಿದ್ದಾರೆ. ಕೂಡಲೇ ಕುಟುಂಬಸ್ಥರು ಚಿಕಿತ್ಸೆಗಾಗಿ ಮಹಿಳೆಯನ್ನು ಸಿಲ್ವರ್ ಜುಬ್ಲೀ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತೌಖ್ತೆ ಅಬ್ಬರ – ಎಲ್ಲೆಡೆ ಮಳೆರಾಯನ ಅಟ್ಟಹಾಸ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ತೌಖ್ತೆ ಅಬ್ಬರ ಈಗ ಶುರುವಾಗಿದೆ. ದೇವರ ನಾಡಿನಲ್ಲಿ ಅಲೆಗಳು ಮನೆಗಳತ್ತ ನುಗ್ಗಿ ಬರುತ್ತಿವೆ. ಪರಿಣಾಮ ರಾಜ್ಯದ ಕರಾವಳಿ ಪ್ರದೇಶದಲ್ಲಿಯೂ ಮಳೆಯ ಅವಾಂತರ ಮುಂದುವರೆದಿದೆ. ಕೊರೊನಾ ಕಾಟದ ಮಧ್ಯೆ ಸದ್ಯ ಜನರಿಗೆ ತೌಖ್ತೆ ಕಾಟ ನುಂಗಲಾರದ ತುತ್ತಾಗಿದೆ.

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ 165ರಿಂದ 175 ಕೀಮೀ ವೇಗದಲ್ಲಿ ಚಂಡಮಾರುತ ಕೇರಳ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಈಗಾಗಲೇ ಕೇರಳದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇರಳದ ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಮಲಪುರಂ, ಕೊಯಿಕ್ಕೋಡ್, ವಯನಾಡು, ಕಣ್ಣೂರಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಅರಬ್ಬೀ ಸಮುದ್ರದಲ್ಲಿ ದೊಡ್ಡ ದೊಡ್ಡ ಅಲೆಗಳು ಏಳುತ್ತಿವೆ. ತಿರುವನಂತಪುರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ ಅರ್ಧದಷ್ಟು ರಸ್ತೆ ಸಮುದ್ರಪಾಲಾಗಿವೆ. ಮನೆಗಳಿಗೆ ನೀರು ನುಗ್ಗುತ್ತಿದೆ. ತ್ರಿಶೂರ್ ಕೂಡ ತೌಖ್ತೆ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿದೆ. ಅಲಪುಜ್ಜದಲ್ಲಿ ತೌಕ್ತೆ ಎಫೆಕ್ಟ್ ಜೋರಾಗಿದೆ. ಇಲ್ಲಿನ ಮನೆ, ಶಾಲೆಯ ಮೇಲೆ ಮರ, ವಿದ್ಯುತ್ ಕಂಬಗಳು ಉರುಳಿಬಿದ್ದಿವೆ.
ಕರ್ನಾಟಕದ ಕರಾವಳಿಗೂ ತೌಖ್ತೆ ಹಾನಿ ಮಾಡುತ್ತಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡದ ಕಡಲತೀರದಲ್ಲಿ ಮಳೆ ಅಬ್ಬರಕ್ಕೆ ಸೋಮೇಶ್ವರ ಕಡಲತೀರದಲ್ಲಿದ್ದ ಸ್ಮಶಾನದ ತಡೆಗೋಡೆ ಕೊಚ್ಚಿಹೋಗಿದೆ. ಉಳ್ಳಾಲ, ಕೋಟೆಪುರ, ಕೈಕೊ, ಸಸಿಹಿತ್ಲು ಪ್ರದೇಶದಲ್ಲಿ ಕಡಲ ಕೊರೆತ ಆತಂಕ ಶುರುವಾಗಿದೆ.
ಉಡುಪಿಯ ಸಮುದ್ರ ತೀರದಲ್ಲಿಯೂ ಪ್ರವಾಹ ಅಬ್ಬರ ಜೋರಾಗಿದೆ.

ಉಪ್ಪುಂದದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಮೀನುಗಾರಿಕಾ ಶೆಡ್, ಜನರನ್ನು ಶಿಫ್ಟ್ ಮಾಡಲಾಗಿದೆ. ಈಗಾಗಲೇ ಕಡಲತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕೊಡಗು, ಮೈಸೂರು, ಹಾಸನ, ಕೋಲಾರದಲ್ಲಿ ಮಳೆ ರಭಸವಾಗಿ ಸುರಿಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಜನರ ರಕ್ಷಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ ಯೋಧರು ಬಂದಿದ್ದಾರೆ.

ಶನಿವಾರವೂ ಶನಿದೇವರ ಕಾಟ; ಗದಗ ಜಿಲ್ಲೆಯಲ್ಲಿ 459 ಜನರಿಗೆ ಸೋಂಕು, ಮತ್ತೆ ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 15 ಶನಿವಾರವೂ ಪಾಸಿಟಿವ್ ಪ್ರಕರಣಗಳು ನಾಲ್ಕು ನೂರರ ಗಡಿ ದಾಟಿದೆ. ಸೋಂಕು ಹಳ್ಳಿ ಹಳ್ಳಿಗೂ‌ ವ್ಯಾಪಿಸುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜನ‌ ಆತಂಕದಿಂದ ಕಾಲ ಕಳೆಯುವಂತಾಗಿದೆ.

ಇವತ್ತಿನ ವರದಿಯಂತೆ ಮತ್ತೆ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 459 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 17359ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -197, ಮುಂಡರಗಿ-77, ನರಗುಂದ-21, ರೋಣ-117, ಶಿರಹಟ್ಟಿ-36 ಹೊರಜಿಲ್ಲೆಯ-11 ಸೇರಿದಂತೆ 459 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 179 ಕ್ಕೇರಿದೆ.

ಧಾರವಾಡ ಜಿಲ್ಲೆಯ ನವಲಗುಂದ ನಿವಾಸಿ 60 ವರ್ಷದ ಮಹಿಳೆ ಮೇ 04 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ದೃಢಪಟ್ಟಿತ್ತು, ಮೇ 12 ರಂದು ಮೃತಪಟ್ಟಿರುತ್ತಾರೆ.

ಗದಗನ 42 ವರ್ಷದ ಮಹಿಳೆ ಮೇ 10 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 12 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

58 ವರ್ಷದ ಮಹಿಳೆ ಮೇ 09 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 12 ರಂದು ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಆದ್ರಹಳ್ಳಿ ಗ್ರಾಮದ ನಿವಾಸಿ 64 ವರ್ಷದ ಮಹಿಳೆ ಮೇ 04 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 13 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 273 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 14769 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2411 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 195 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಬಿಜೆಪಿ ಮುಖಂಡನ ಮೊಂಡಾಟಕ್ಕೆ ಬ್ರೇಕ್ ಹಾಕಿದ ಖಡಕ್ ರಾಮರಾಜನ್

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಲಾಕ್ ಡೌನ್ ಇರುವುದರಿಂದಾಗಿ ಪೊಲೀಸರು ಓಡಾಡುತ್ತಿರುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪಾಲಿಕೆಯ ಮಾಜಿ ಸದಸ್ಯರೊಬ್ಬರು ಡಿಸಿಪಿಗೆ ಅವಾಜ್ ಹಾಕಿರುವ ಘಟನೆ ನಡೆದಿದೆ.
ಈ ಘಟನೆ ಇಲ್ಲಿಯ ಚನ್ನಮ್ಮ ವೃತ್ತದಲ್ಲಿ ನಡೆದಿದೆ. ಸೀಟ್ ಬೆಲ್ಟ್ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಡಿಸಿಪಿ ರಾಮರಾಜನ್ ಅವರಿಗೆ ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ ಅವಾಜ್ ಹಾಕಿದ್ದಾರೆ.

ನಗರದ ಚೆನ್ನಮ್ಮ ವೃತ್ತದಲ್ಲಿ ತಮ್ಮ ಕಾರು ಚಾಲಕನೊಂದಿಗೆ ರಾಜಣ್ಣ ಕೊರವಿ ಆಗಮಿಸುತ್ತಿದ್ದರು. ಸೀಟ್ ಬೆಲ್ಟ್ ಹಾಕದಿರುವ ಹಿನ್ನೆಲೆಯಲ್ಲಿ‌ ಡಿಸಿಪಿ ಸೀಟ್ ಬೆಲ್ಟ್ ಏಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ ಡಿಸಿಪಿ ಜೊತೆಗೆ ರಾಜಣ್ಣ ಕೊರವಿ ವಾಗ್ವಾದಕ್ಕಿಳಿದಿದ್ದಾರೆ‌.
ನಾನು ಮಾಜಿ ಕಾರ್ಪೊರೇಟರ್. ನಾನ್ಯಾರು ಅಂತಾ ಪರಿಚಯ ಮಾಡಿಕೊಳ್ಳಬೇಕಲ್ಲ ಎಂದು ಅವಾಜ್ ಹಾಕಿದ್ದಾರೆ. ಆಗ ಡಿಸಿಪಿ ನಮಗೆ ಯಾರಾದರೇನು? ಎಂದಿದ್ದಾರೆ. ಅಷ್ಟಕ್ಕೆ ರಾಜಣ್ಣ ಕೊರವಿ ಹಾಗೂ ಅವರ ಕಾರು ಚಾಲಕ ಡಿಸಿಪಿ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಕೊನೆಗೂ ಸೀಟ್ ಬೆಲ್ಟ್ ಹಾಕದ ರಾಜಣ್ಣ ಕೊರವಿಗೆ ದಂಡ ಕಟ್ಟುವಂತೆ ಸೂಚನೆ ನೀಡಿದ್ದಾರೆ.

ನಿಯಮಗಳನ್ನು ಉಲ್ಲಂಘಿಸಿದ ರಾಜಣ್ಣ ಕೊರವಿಗೆ ರೂ. 500 ರೂ ದಂಡ ಹಾಕಲಾಗಿದೆ. ರಾಜಣ್ಣ ಕೊರವಿ ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಪಿ ರಾಮರಾಜನ್, ಇದು ‌ಪೊಲೀಸರಿಗೆ ಕಾಮನ್. ಜನಸಾಮಾನ್ಯರು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿಯುತ್ತಾರೆ. ಆದರೆ, ನಾವು ಕಾನೂನು ಪ್ರಕಾರ ತಪ್ಪು ಮಾಡಿದವರಿಗೆ ದಂಡ ವಿಧಿಸುತ್ತೇವೆ. ರಾಜಕೀಯ ವ್ಯಕ್ತಿ, ಸಾಮಾನ್ಯ ವ್ಯಕ್ತಿ ಆದರೂ ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಹೇಳಿದ್ದಾರೆ.

ಸದ್ದಿಲ್ಲದೆ ಅಲೆಮಾರಿಗಳ ಹಸಿವು ನೀಗಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ !

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆಯಾದಾಗಿನಿಂದ ಜನ- ಜೀವನ ಅಸ್ತವ್ಯಸ್ಥಗೊಂಡಿದೆ. ಇದರಿಂದಾಗಿ ಬಡವರ ಬದುಕು ಬೀದಿಗೆ ಬಂದಿದೆ. ಹೊರ ರಾಜ್ಯದಿಂದ ಬಂದು ನಗರದ ಕೋರ್ಟ್ ಬಳಿ ನೆಲೆ ಊರಿರುವ ಅಲೆಮಾರಿ ಕುಟುಂಬಗಳು ರಸ್ತೆ ಪಕ್ಕದಲ್ಲಿ ಕರಕುಶಲ ವ್ಯಾಪಾರ ಮಾಡುತ್ತ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.

ಆದರೆ, ಕೊರೊನಾದಿಂದಾಗಿ ಅವರು ಸಂಕಷ್ಟ ಪಡುವಂತಾಗಿತ್ತು. ಪೊಲೀಸರ ಆದೇಶದಂತೆ ಈ ಕುಟುಂಬಸ್ಥರು ತಮ್ಮ ವ್ಯಾಪಾರ – ವಹಿವಾಟು ಮೊಟಕುಗೊಳಿಸಿದ್ದರು. ಕೈಯಲ್ಲಿ ಹಣ ಕೂಡ ಇರಲಿಲ್ಲ. ಹೀಗಾಗಿ ಹಸಿವಿನಿಂದ ಕಂಗಾಲಾಗಿದ್ದರು.

ಈ ಕುಟುಂಬದ ಮಾಹಿತಿ ಪಡೆದಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು, ಇಂದು ಸದ್ದಿಲ್ಲದೆ ಸ್ಥಳಕ್ಕೆ ಭೇಟಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಆ ಕುಟುಂಬಸ್ಥರಿಗೆ ದಿನ ಬಳಕೆಯ ದಿನಸಿ ವಸ್ತುಗಳನ್ನು ನೀಡಿದ್ದಾರೆ. ಲಘು ಉಪಹಾರಗಳನ್ನು ವಿತರಿಸಿದ್ದಾರೆ. ಅಲ್ಲದೇ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಆ ಕುಟುಂಬಗಳಿಗೆ ಆತ್ಮ ಸ್ಥೈರ್ಯ ತುಂಬುವ ಮೂಲಕ ಅಧಿಕಾರಕ್ಕಿಂತ ಮಾನವಿಯತೆ ದೊಡ್ಡದೆಂದು ತೊರಿಸಿ ಕೊಟ್ಟಿದ್ದಾರೆ.

ಆಹಾರ ಪದಾರ್ಥಗಳನ್ನು ಪಡೆದ ಅಲೆಮಾರಿ ಕುಟುಂಬಸ್ಥರು ಮಾತನಾಡಿ, ಕಳೆದ ಕೆಲವು ದಿನಗಳಿಂದ ವ್ಯಾಪಾರವಿಲ್ಲ. ಹೀಗಾಗಿ ದಿನಸಿ ಪದಾರ್ಥಗಳನ್ನು ಖರೀದಿಸಲು ಕೈಯಲ್ಲಿ ಹಣವಿರಲಿಲ್ಲ. ಆದರೆ, ಇಂದು ದೈವ ಸ್ವರೂಪದಲ್ಲಿ ಆಗಮಿಸಿದ ಬಡಾ ಸಾಹೇಬ್ (ಎಸ್ಪಿ) ನಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ತಿಂಗಳಿಗಾಗುವಷ್ಟು ದಿನ ಬಳಕೆಯ ಆಹಾರ ವಸ್ತುಗಳನ್ನು ನೀಡಿದ್ದಾರೆ. ಇದರೊಂದಿಗೆ ನಮಗೆ ಧೈರ್ಯ ತುಂಬಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಷ್ಟದಲ್ಲಿರುವ ಜನರಿಗಾಗಿ ನಿಧಿ ಸಂಗ್ರಹಕ್ಕೆ ಮುಂದಾದ ಕೊಹ್ಲಿ ದಂಪತಿ

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಕೊರೊನಾದಿಂದಾಗಿ ಸದ್ಯ ಇಡೀ ದೇಶವೇ ಪರಿತಪಿಸುತ್ತಿದೆ. ಈ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಹಲವಾರು ಸೆಲೆಬ್ರಿಟಿಗಳು ಮನ ಮಿಡಿಯುತ್ತಿದ್ದಾರೆ. ಸೋನು ಸೂದ್, ಅಕ್ಷಯ್ ಕುಮಾರ್ ಸೇರಿದಂತೆ ತಾರೆಯರ ದಂಡೇ ಜನರ ಸೇವೆಗೆ ನಿಂತಿದೆ. ಇವರ ಸಾಲಿಗೆ ಸದ್ಯ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಸೇರಿದ್ದಾರೆ.

ಜನರ ಕಷ್ಟ ಕಂಡು ಸದ್ಯ ವಿರಾಟ್ ಕೊಹ್ಲಿ ಅವರು ಪತ್ನಿಯೊಂದಿಗೆ ಸಹಾಯ ಹಸ್ತ ಚಾಚಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಕಷ್ಟಕ್ಕೆ ಬಂದಿರುವ ಜನರ ನೆರವಿಗಾಗಿ ಬಾಲಿವುಡ್ ನಟಿ ಅನುಷ್ಕಾ ಹಾಗೂ ವಿರಾಟ್ ಕೊಹ್ಲಿ ಅವರು ರೂ. 2 ಕೋಟಿ ದೇಣಿಗೆ ನೀಡಿದ್ದಾರೆ. ಅಲ್ಲದೇ, ಇದರೊಂದಿಗೆ ನಿಧಿ ಸಂಗ್ರಹ ಮಾಡಲು ಮುಂದಾಗಿದ್ದಾರೆ.

ಕೆಟ್ಟೋ ಎಂಬ ಸ್ವಯಂ ಸೇವಾ ಸಂಸ್ಥೆಯೊಂದರ ಜೊತೆ ಕೈ ಜೋಡಿಸಿ ನಿಧಿ ಸಂಗ್ರಹ ಮಾಡುತ್ತಿದ್ದಾರೆ. ಇದು ಕಷ್ಟದ ಸಮಯ. ಕಷ್ಟದಲ್ಲಿರುವವರೊಂದಿಗೆ ನಿಂತು ಕೈಲಾದ ಸಹಾಯ ಮಾಡಬೇಕು. ಪ್ರತಿಯೊಬ್ಬರು ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಈ ದಂಪತಿ ಸದ್ಯ ಮನವಿ ಮಾಡಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಲ್ಲರೂ ತಮ್ಮ ಹಾಗೂ ತಮ್ಮ ಸುತ್ತಮುತ್ತಲಿರುವವರ ಬಗ್ಗೆ ಕಾಳಜಿ ವಹಿಸಿ ಎಂದು ಜನರಲ್ಲಿ ಈ ದಂಪತಿ ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಅಂದರೆ ಮೇ. 1ರಂದು ಅನುಷ್ಕಾ ಅವರ ಹುಟ್ಟು ಹಬ್ಬವಿತ್ತು. ಆದರೆ, ಜನ ನೋವಿನಲ್ಲಿದ್ದ ಈ ಸಮಯದಲ್ಲಿ ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು.

ಡಿಸಿ ರೋಹಿಣಿ ಸಿಂಧೂರಿ ಅವರ ಕುಟುಂಬಸ್ಥರೆಲ್ಲರಿಗೂ ಸೋಂಕು

ವಿಜಯಸಾಕ್ಷಿ ಸುದ್ದಿ, ಮೈಸೂರು

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕುಟುಂಬಸ್ಥರೆಲ್ಲ ಕೊರೊನಾದಿಂದ ಬಳಲುತ್ತಿದ್ದಾರೆ. ಆದರೆ, ರೋಹಿಣಿ ಅವರಿಗೆ ಮಾತ್ರ ನೆಗೆಟಿವ್ ವರದಿ ಬಂದಿದೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ತಂದೆ – ತಾಯಿ, ಅತ್ತೆ – ಮಾವ ಹಾಗೂ ಪತಿ ಸೇರಿದಂತೆ ಎಲ್ಲರಿಗೂ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಎಲ್ಲರೂ ಹೋಂ ಐಸೋಲೇಷನ್ ನಲ್ಲಿದ್ದಾರೆ.

ಕುಟುಂಬಸ್ಥರಿಗೆಲ್ಲ ಪಾಸಿಟಿವ್ ಬಂದ ಕಾರಣದಿಂದಾಗಿ ಜಿಲ್ಲಾಧಿಕಾರಿ ರೋಹಿಣಿ ಅವರು ಕೂಡ ಟೆಸ್ಟ್ ಗೆ ಒಳಪಟ್ಟಿದ್ದರು. ಆದರೆ, ಅವರ ವರದಿ ನೆಗೆಟಿವ್ ಎಂದು ಬಂದಿದೆ.

ಕುಟುಂಬಸ್ಥರೆಲ್ಲ ಮುಂಜಾಗ್ರತೆ ವಹಿಸಿದ ಹಿನ್ನೆಲೆಯಲ್ಲಿ ಯಾರಿಗೂ ಸಮಸ್ಯೆಯಾಗಿಲ್ಲ. ಎಲ್ಲರೂ ಹೋಮ್ ಐಸೋಲೇಶನ್ ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಹಿಣಿ ಸಿಂಧೂರಿ ಅವರು ಜಿಲ್ಲೆಯಲ್ಲಿಯೂ ಕೊರೊನಾ ನಿಭಾಯಿಸುತ್ತಿದ್ದು, ಮನೆಯಲ್ಲಿಯೂ ಕುಟುಂಬಸ್ಥರನ್ನು ನೋಡಿಕೊಳ್ಳುತ್ತಿದ್ದಾರೆ.

ಎರಡೇ ವಾರದಲ್ಲಿ 13 ಜನರ ಸಾವು; ದೇವರ ಮೊರೆ ಹೋದ ಗ್ರಾಮಸ್ಥರು!

ವಿಜಯಸಾಕ್ಷಿ ಸುದ್ದಿ, ಧಾರವಾಡ

ಕೇವಲ ಎರಡೇ ವಾರದಲ್ಲಿ ಒಂದೇ ಗ್ರಾಮದ ಬರೋಬ್ಬರಿ 13 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಇಡೀ ಗ್ರಾಮ ಹಾಗೂ ಸುತ್ತಮುತ್ತಲಿನ ಜನ ಆತಂಕದಲ್ಲಿದ್ದು, ಸದ್ಯ ದೇವರ ಮೊರೆ ಹೋಗಿದ್ದಾರೆ.

ತಾಲೂಕಿನ ಮನಸೂರ ಗ್ರಾಮದಲ್ಲಿ ಕೇವಲ ಎರಡು ವಾರದಲ್ಲಿ ಬರೋಬ್ಬರಿ 13 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ ಇಬ್ಬರು ಕೋವಿಡ್‍ ನಿಂದ ಸಾವನ್ನಪ್ಪಿದ್ದರೆ, 11 ಜನ ಇತರೆ ಖಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಆದರೆ, ಹಲವರು ಮಾತ್ರ ಕೋವಿಡ್ ನತ್ತ ಬೊಟ್ಟು ತೋರಿಸುತ್ತಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಗ್ರಾಮಸ್ಥರು ಮನೆಯಿಂದ ಹೊರಗೆ ಬರಲು ಭಯ ಪಡುತಿದ್ದಾರೆ. ಮನೆ ಬಾಗಿಲು ಹಾಕಿಕೊಂಡೇ ಸದ್ಯ ಜನರು ಮನೆಯಲ್ಲಿಯೇ ಉಳಿದಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಪಂ ಸದಸ್ಯರು ಹಾಗೂ ಗ್ರಾಮದ ಹಲವರು ದೇವರ ಮೊರೆ ಹೋಗಿದ್ದಾರೆ. ಗ್ರಾಮದ ಜನರನ್ನು ಉಳಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಕಳೆದ 7 ವರ್ಷಗಳ ಹಿಂದೆ ಈ ಗ್ರಾಮದಲ್ಲಿ ಡೋಣಿ ಕರೆಮ್ಮ ದೇವಸ್ಥಾನ ಕಟ್ಟಲಾಗುತ್ತಿತ್ತು. ಆದರೆ, ಅದು ಹಲವು ಕಾರಣಗಳಿಂದ ಅರ್ಧಕ್ಕೆ ನಿಂತಿತ್ತು. ಹೀಗಾಗಿ ಹಳ್ಳದ ಕರೆಮ್ಮ ದೇವಸ್ಥಾನದಲ್ಲಿ ಡೋಣಿ ಕರೆಮ್ಮ ದೇವಸ್ಥಾನ ಕಟ್ಟಿಸುವುದಾಗಿ ಗ್ರಾಮಸ್ಥರು ದೇವಿಯಲ್ಲಿ ಹರಕೆ ಹೊತ್ತಿದ್ದಾರೆ.
ಈಗಾಗಲೇ ಈ ಕಾರ್ಯ ಕೂಡ ಪ್ರಾರಂಭವಾಗಿದೆ.

ಹಿಂದಿನ ವಾರವಷ್ಟೇ ಒಂದೇ ಓಣಿಯಲ್ಲಿ 4 ಜನ ಎರಡು ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದರು. ಆದರೆ, ದೇವರ ಮೊರೆ ಹೋಗುತ್ತಿದ್ದಂತೆ ಗ್ರಾಮದಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಕಲಬುರಗಿಯಲ್ಲಿ ಮಹಾಮಾರಿಗೆ ಹೆಡ್ ಕಾನ್ಸಟೇಬಲ್ ಬಲಿ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಮಹಾಮಾರಿಗೆ ಜಿಲ್ಲೆಯಲ್ಲಿ ಹೆಡ್ ಕಾನ್ಸಟೇಬಲ್ ಬಲಿಯಾಗಿದ್ದಾರೆ.
ಇಲ್ಲಿಯ ಅಶೋಕ ನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಎಚ್.ಸಿ. ಮಲ್ಲಿಕಾರ್ಜುನ ಬೆಳಗುಂಪಿ (45) ಬಲಿಯಾದ ಪೊಲೀಸ್.

ಇವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಹೈ ಶುಗರ್, ಪಾರ್ಶ್ವವಾಯು ಬಾಧಿಸಿ ಸಾವನ್ನಪ್ಪಿದ್ದಾರೆ. ಆ ನಂತರ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದ ಎರಡನೇ ಪೊಲೀಸ್ ಆಗಿದ್ದಾರೆ. ಈ ಹಿಂದೆ ಮಹಾಮಾರಿಗೆ ನಗರದ ರೋಜಾ ಎಂಬ ಎಎಸ್ ಐ ಸಾವನ್ನಪ್ಪಿದ್ದಾರೆ.
ಪೊಲೀಸರಲ್ಲಿಯೂ ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕ ವ್ಯಕ್ತವಾಗುತ್ತಿದೆ.

error: Content is protected !!