Home Blog Page 3034

ಬುಧವಾರ ಮತ್ತೆ ಸೋಂಕು ಸ್ಫೋಟ; ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಮೂರು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿತ್ತು. ಆದರೆ ಇವತ್ತು ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಾಗಿದ್ದು, ತುಸು ಆತಂಕಕ್ಕೆ ಕಾರಣವಾಗಿದೆ. ಸೋಂಕಿತರಕ್ಕಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರು ಕೇವಲ 11 ಜನ ಮಾತ್ರ ಹೆಚ್ಚು.

ಇಂದಿನ 393 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 22058 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -177, ಮುಂಡರಗಿ-41, ನರಗುಂದ-25, ರೋಣ-73, ಶಿರಹಟ್ಟಿ-73, ಹೊರಜಿಲ್ಲೆಯ-04 ಸೇರಿದಂತೆ 393 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 226 ಕ್ಕೇರಿದೆ.

ಮುಂಡರಗಿ ತಾಲೂಕಿನ ಹೈತಾಪೂರ‌ ನಿವಾಸಿ
60 ವರ್ಷದ ಮಹಿಳೆ ಮೇ-22 ರಂದು ಮುಂಡರಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 2,4 ರಂದು ಮೃತಪಟ್ಟಿದ್ದಾರೆ.

ಗದಗ ಶಹರ ನಿವಾಸಿ 68 ವರ್ಷದ ವ್ಯಕ್ತಿ ಮೇ -18 ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 25 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಬೆಟಗೇರಿ ನಿವಾಸಿ 56 ವರ್ಷದ ಮಹಿಳೆ ಮೇ 21 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 26 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಕುರ್ತಕೋಟಿ ನಿವಾಸಿ 80 ವರ್ಷದ ಮಹಿಳೆ ಮೇ 22 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೇ 26 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 404 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 18792 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3040 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 193 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಕೋವಿಡ್ ನಿಯಮ ಉಲ್ಲಂಘನೆ; ಚೌಧರಿ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ನರಗುಂದ

ಕೋವಿಡ್ ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಿ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಲಾಕ್ ಡೌನ್ ಜಾರಿ ಮಾಡಿದ್ದು, ಅಗತ್ಯ ‌ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.

ಆದರೆ ಸರಕಾರದ ‌ನಿಯಮಾವಳಿಗಳನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿದ್ದ ಮಹಾಲಕ್ಷ್ಮಿ ಟ್ರೇಡರ್ಸ್ ಮಾಲೀಕ ಶಂಕರ್ ಭೀಮರಾವ್ ಚೌಧರಿ ಎಂಬುವವರು ಮೇಲೆ ಪೊಲೀಸರು, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾರತದ ಗೋಡೆ, ದಾದಾ ಬರೆದ ದಾಖಲೆಗೆ ಇಂದಿಗೆ 22 ವರ್ಷ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬಹುಶಃ ಈ ಪಂದ್ಯವನ್ನು ಭಾರತೀಯರ ತಮ್ಮ ಮನದಾಳದಲ್ಲಿ ಅಚ್ಚಳಿಯದೆ ಉಳಿಸಿಕೊಂಡಿದ್ದಾರೆ. ಅಂತಹದೊಂದು ಜೊತೆಯಾಟವನ್ನು ಕನ್ನಡಿಗ ಹಾಗೂ ಭಾರತ ತಂಡದ ಗೋಡೆ ಎಂದೆ ಖ್ಯಾತಿಯಾಗಿದ್ದ ರಾಹುಲ್ ದ್ರಾವಿಡ್ ಹಾಗೂ ಇಂದಿನ ಐಸಿಸಿ ಅಧ್ಯಕ್ಷ ಸೌರವ್ ಗಂಗೂಲಿ ನೀಡಿದ್ದರು.
ಅದು 1999ರ ವಿಶ್ವಕಪ್‌. ಅಂದರೆ, ಇಂದಿಗೆ ಬರೋಬ್ಬರಿ 22 ವರ್ಷಗಳ ಹಿಂದೆ ನಡೆದ ಸಂದರ್ಭ.

ಈ ಇಬ್ಬರೂ ಆಟಗಾರರು ಭಾರತೀಯರಿಗೆ ರನ್ ಗಳ ರಾಶಿಯನ್ನೇ ಉಡುಗೊರೆಯಾಗಿ ನೀಡಿದ್ದರು. ಆಗ ವಿಶ್ವದಾಖಲೆ ನಿರ್ಮಿಸಿ ಬ್ಯಾಟ್ ಎತ್ತಿದ್ದರೆ, ನೂರು ಕೋಟಿ ಅಭಿಮಾನಗಳು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದರು.

ಶ್ರೀಲಂಕಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರು ಎರಡನೇ ವಿಕೆಟ್‌ ಗೆ ಜೊತೆಯಾಗಿದ್ದರು. ಆರಂಭಿಕ ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 6 ರನ್ ಗಳಿಸುವಷ್ಟರಲ್ಲಿಯೇ ಆರಂಭಕ ಆಟಗಾರ ಎಸ್. ರಮೇಶ್ ಅವರನ್ನು ಕಳೆದುಕೊಂಡು ಆತಂಕದಲ್ಲಿತ್ತು. ಚಾಮಿಂದ್ ವಾಸ್ ಎಸೆದ ಬೌಲ್ ಗೆ ಅವರು ಬೌಲ್ಡ್ ಆಗಿ ಫೆವಲೀಯನ್ ಹಾದಿ ಹಿಡಿದಿದ್ದರು. ಮೊದಲ ವಿಕೆಟ್ ಪತನವಾಗುತ್ತಿದ್ದಂತೆ ಈ ಪಂದ್ಯದಲ್ಲಿ ರನ್ ಹರಿಯುವುದು ಕಷ್ಟ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ನಂತರ ನಡೆದದ್ದೇ ದಾಖಲೆ.

22 ವರ್ಷಗಳ ಹಿಂದೆ ಈ ಇಬ್ಬರೂ ಯುವ ಆಟಗಾರರು. ಲಂಕಾ ಬೌಲರ್ ಗಳ ಬೆವರು ಇಳಿಸಿದ್ದರು. ಮೈದಾನದ ಪ್ರತಿಯೊಂದು ಮೂಲೆ ಮೂಲೆಗೂ ಚೆಂಡು ಅಟ್ಟಿ, ರನ್ ಸುರಿಮಳೆಗೈದಿದ್ದರು. ಇಬ್ಬರೂ ತಂಡದ 46ನೇ ಓವರ್ ವರೆಗೂ ಜೊತೆಯಾಗಿಯೇ ಆಡಿ ಟೀಂ ಇಂಡಿಯಾದಲ್ಲಿ ಅತ್ಮವಿಶ್ವಾಸ ಮೂಡಿಸಿದ್ದರು.

ಅಂದಿನ ಈ ಇಬ್ಬರು ಆಟಗಾರರು ಈಗಿನ ಟಿ20 ರೀತಿಯಲ್ಲಿಯೇ ಆಟವಾಡಿದ್ದರು. ಅಂದು ಇವರು ಬರೋಬ್ಬರಿ 318 ರನ್ ಗಳನ್ನು ಕಲೆ ಹಾಕಿದ್ದರು. ಭಾರತೀಯ ಕ್ರಿಕೆಟ್ ತಂಡದ ದಾದಾ ಎಂದೆ ಖ್ಯಾತಿಯಾಗಿರುವ ಸೌರವ್ ಅಂದು ತಮ್ಮ ಕ್ರಿಕೆಟ್ ಬದುಕಿನ ಶ್ರೇಷ್ಠ 183 ರನ್ ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ಸೌರವ್ ಬರೋಬ್ಬರಿ 17 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿದ್ದರು.

ಇನ್ನೊಂದು ಬದಿಯಲ್ಲಿ ಗೋಡೆಯಂತೆ ನಿಂತಿದ್ದ ರಾಹುಲ್ ದ್ರಾವಿಡ್ 145 ರನ್ ಕಲೆ ಹಾಕಿದ್ದರು. ಅವರು ಕೂಡ ಬರೋಬ್ಬರಿ 17 ಬೌಂಡರಿ ಸಿಡಿಸಿದ್ದರು. ಇದರೊಂದಿಗೆ ಒಂದು ಸಿಕ್ಸ್ ರನ್ನು ಕೂಡ ಅಟ್ಟಿದ್ದರು.ಅಂದು ಎರಡನೇ ವಿಕೆಟ್ ಗೆ ಇದೇ ದಾಖಲೆಯಾಗಿ ಉಳಿಯಿತು. ಆದರೆ, ಈ ದಾಖಲೆಯನ್ನು ಕೆಲವೇ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡವೇ ಮುರಿಯಿತು.

ಆ ದಾಖಲೆಯಲ್ಲಿಯೂ ಹೆಮ್ಮೆಯ ಕನ್ನಡಿಗ ಹಾಗೂ ಭಾರತದ ಗೋಡೆ ರಾಹುಲ್ ದ್ರಾವಿಡ್ ಕೂಡ ಇದ್ದರು. ಇನ್ನೊಂದೆಡೆ ಸಚಿನ್ ತೆಂಡೂಲ್ಕರ್ ಇದ್ದರು. ಆಗ ಸಚಿನ್ ಅಜೇಯ 186 ರನ್ ಸಿಡಿಸಿದ್ದರೆ, ರಾಹುಲ್ 153 ರನ್ ಗಳಿಸಿದರು. ಈ ದಾಖಲೆ ಬರೋಬ್ಬರಿ 14 ವರ್ಷಗಳ ಕಾಲ ಅಳೆಯದೆ ಉಳಿದಿತ್ತು.

ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ ವಾಟ್ಸಪ್!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ವಾಟ್ಸಪ್, ಬುಧವಾರದಿಂದ ಜಾರಿಗೆ ಬರುತ್ತಿರುವ ತಡೆ ನಿಯಂತ್ರಣದ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ತಜ್ಞರ ಅಭಿಪ್ರಾಯದಂತೆ, ಕ್ಯಾಲಿಫೋರ್ನಿಯಾ ಮೂಲದ- ಫೇಸ್ಬುಕ್ ನ ಘಟಕವಾಗಿರುವ ವಾಟ್ಸಾಪ್ ನಿಂದ ಖಾಸಗಿತನ ಸುರಕ್ಷತೆ ಕಸಿದುಕೊಳ್ಳಲು ಬಲವಂತ ಮಾಡಲಾಗುತ್ತಿದೆ ಎಂದು ದೂರಿರುವುದಾಗಿ ಮೂಲಗಳು ತಿಳಿಸಿವೆ.

ಒಂದು ಮಾಹಿತಿಯು ಎಲ್ಲಿಂದ ಹರಡಿದೆ ಎಂಬುವುದನ್ನು ತಿಳಿದುಕೊಳ್ಳಲು ಅಧಿಕಾರಿಗಳು ಮುಂದಾದ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಕಂಪೆನಿಗಳು ಆ ವಿವರ ನೀಡಬೇಕು. ಇದು ಭಾರತೀಯ ಸಂವಿಧಾನ ರೀತಿಯಲ್ಲಿ ಖಾಸಗಿತನ ಹಕ್ಕಿನ ಉಲ್ಲಂಘನೆಯಾಗುತ್ತಿದೆ ಎಂದು ವಾದ ಮಂಡಿಸಲಾಗಿದೆ ಎಂದು ತಿಳಿದು ಬಂದಿದೆ.

ಆದರೆ, ಸರ್ಕಾರ ಮಾತ್ರ, ಯಾರು ತಪ್ಪು ಮಾಡುತ್ತಾರೆಯೋ ಅಂತಹ ವ್ಯಕ್ತಿಗಳ ಮಾಹಿತಿ ಮಾತ್ರ ಬಹಿರಂಗಪಡಿಸುವುಕ್ಕೆ ಕಾನೂನು ತರಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಒಬ್ಬರಿಗೆ ಒಂದು ಹಾಗೂ ಇನ್ನೊಬ್ಬರಿಗೆ ಒಂದು ಇರುವ ರೀತಿಯಲ್ಲಿ ಕಾನೂನು ತರಲು ಸಾಧ್ಯವಿಲ್ಲ. ಕಾರಣ, ಸಂದೇಶಗಳು ಎಂಡ್-ಟು-ಎಂಡ್ ಎನ್ ಕ್ರಿಪ್ಟೆಡ್.

ಒಂದು ವೇಳೆ ನಿಯಮದಂತೆ ಕಾನೂನು ಜಾರಿಗೆ ತಂದರೆ, ಸಂದೇಶ ಪಡೆದುಕೊಳ್ಳುವವರ ಎನ್ ಕ್ರಿಪ್ಷನ್ ಮುರಿಯಬೇಕಾಗುತ್ತದೆ. ಮಾಹಿತಿಯ ಮೂಲ ತಿಳಿದುಕೊಳ್ಳಲು ಇದು ಅನ್ವಯವಾಗುತ್ತದೆ. 

ದೇಶದಲ್ಲಿ 40 ಕೋಟಿಯಷ್ಟು ವಾಟ್ಸಪ್ ಬಳಕೆದಾರರು ಇದ್ದಾರೆ. ವಾಟ್ಸಾಪ್ ಕಾನೂನು ಸಮರಕ್ಕೆ ಮುಂದಾಗಿರುವುದೇ ಖಾತ್ರಿಯಾದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮತ್ತು ಫೇಸ್ಬುಕ್, ಗೂಗಲ್, ಟ್ವಿಟ್ಟರ್ನಂಥ ಟೆಕ್ ದೈತ್ಯ ಕಂಪೆನಿಗಳ ನಡುವಿನ ತಿಕ್ಕಾಟ ಹೆಚ್ಚಾಗಲಿದೆ.

ಕಳ್ಳನನ್ನು ಹಿಡಿಯಲು ಸಹಾಯ ಮಾಡಿದ ಲಾಕ್ ಡೌನ್!

ವಿಜಯಸಾಕ್ಷಿ ಸುದ್ದಿ, ಕಾರವಾರ

ಎರಡು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕಾರು ಕಳ್ಳ ಲಾಕ್ ಡೌನ್ ನಿಂದಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ವ್ಯಕ್ತಿ ಕಳೆದ ಎರಡು ವರ್ಷಗಳ ಹಿಂದೆ ನಗರದ ವಕೀಲ ವಿವೇಕ ಪ್ರಭು ಎಂಬುವವರ ಕಾರಿನ ಚಾಲಕನಾಗಿದ್ದ. ಈ ವ್ಯಕ್ತಿಯ ಸಿದ್ದರ ಮೂಲದ ಸಂದೀಪ್ ಗಾಂವಕರ್(40) ಎಂದು ಗುರುತಿಸಲಾಗಿದೆ.

ಈತ ಮಾಲೀಕರ ಕಾರನ್ನೇ ಕದ್ದು ಪರಾರಿಯಾಗಿದ್ದ. ಆ ನಂತರ ಮುಂಬಿಯಲ್ಲಿ ತಲೆ ಮರೆಸಿಕೊಂಡಿದ್ದ. ಅಲ್ಲಿ ಲಾಕ್ ಡೌನ್ ಆಗಿದ್ದರಿಂದಾಗಿ ಮರಳಿ ನಗರಕ್ಕೆ ಬಂದಿದ್ದ. ಆತನ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಬಂಧಿಸಿದ್ದಾರೆ.

ನಗರದ ಪಿ.ಎಸ್.ಐ ಸಂತೋಷ್ ನೇತೃತ್ವದ ತಂಡ ಅವನನ್ನು ಹಿಡಿದಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರುಗಳ ಬಿಡಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕೊರೊನಾ ನಿಯಮ ಉಲ್ಲಂಘಿಸಿ ಸಭೆ ಆಯೋಜಿಸಿದ್ದಕ್ಕೆ ದಂಡ ಮಾತ್ರ ಏಕೆ? ಎಪ್ ಐಆರ್ ಇಲ್ಲವಾ? ಸಭೆಯಲ್ಲಿ ಭಾಗಿಯಾಗಿದ್ದವರು ಯಾರು?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ನಿಯಮ ಉಲ್ಲಂಘಿಸಿ ಜ. 17ರಂದು ಬೆಳಗಾವಿಯಲ್ಲಿ ನಡೆಸಿದ್ದ ಬಿಜೆಪಿ ಸಮಾವೇಶದ ಆಯೋಜಕರ ವಿರುದ್ಧ ಕ್ರಮ ತೆಗೆದುಕೊಳ್ಳದ ಬಗ್ಗೆ ಜಿಲ್ಲಾ ಪೊಲೀಸ್ ಆಯುಕ್ತರ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕೊರೊನಾ ನಿಯಮ ಉಲ್ಲಂಘಿಸಿ ಕಾರ್ಯಕ್ರಮ ಆಯೋಜಿಸಿದ್ದ ತಪ್ಪಿತಸ್ಥರ ವಿರುದ್ಧ ಪೊಲೀಸರು ದಂಡ ವಿಧಿಸಿದ್ದರು.

ಕೇವಲ ದಂಡ ವಿಧಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಕೋರ್ಟ್, ಪೊಲೀಸ್ ಆಯುಕ್ತರಿಗೆ ಕಾಯ್ದೆಯ ಬಗ್ಗೆ ಅರಿವಿದ್ದಂತೆ ಕಾಣಿಸುತ್ತಿಲ್ಲ. ಆಯೋಜಕರ ವಿರುದ್ಧ ಎಫ್‌ ಐಆರ್ ದಾಖಲಿಸಿಲ್ಲ. ಕಾಯ್ದೆಯ ನಿಯಮಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಈ ಪ್ರಮಾಣ ಪತ್ರ ಒಪ್ಪಲು ಆಗುವುದಿಲ್ಲ. ಜೂ. 3ರೊಳಗಾಗಿ ಹೊಸ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ತಿಳಿಸಿದೆ.

ಅಲ್ಲದೇ, ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರತಿಯೊಬ್ಬರ ವಿರುದ್ಧ ಎಫ್‌ ಐಆರ್ ದಾಖಲಿಸುವಂತೆ ಈ ಹಿಂದೆ ನೀಡಿದ್ದ ಆದೇಶ ಪಾಲಿಸಿರುವ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಪೀಠ ತಿಳಿಸಿದೆ. ಹೀಗಾಗಿ ವಿಚಾರಣೆಯನ್ನು ಜೂ. 4ಕ್ಕೆ ಮುಂದೂಡಲಾಗಿದೆ. ಜನವರಿ 17 ರಂದು ನಡೆದ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಯಡಿಯೂರಪ್ಪ ಭಾಗಿಯಾಗಿದ್ದರು.

ಸನ್ನಡತೆಯ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 18 ಜನರ ಬಿಡುಗಡೆ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಸನ್ನಡತೆಯ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 18 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಸೆಂಟ್ರಲ್‌ ಜೈಲಿನಿಂದ 16 ಜನ ಪುರುಷರು ಹಾಗೂ ಇಬ್ಬರು ಮಹಿಳಾ ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.

ಸನ್ನಡತೆಯ ಆಧಾರದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 125 ಕೈದಿಗಳ ಬಿಡುಗಡೆಗೆ ಸರ್ಕಾರ ಆದೇಶ ನೀಡಿತ್ತು. ಸರ್ಕಾರದ ಆದೇಶದಂತೆ‌ ಕಲಬುರಗಿ ಸೆಂಟ್ರಲ್‌ ಜೈಲಿನಿಂದ 18 ಜನ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.

ಜಿಲ್ಲೆಯ ಹೊರವಲಯದ ನಂದಿಕೂರ ಗ್ರಾಮದ ಬಳಿಯಿರುವ ಸೆಂಟ್ರಲ್ ಜೈಲ್ ನಲ್ಲಿ ಕೈದಿಗಳಿಗೆ ಬಿಡುಗಡೆ ಪ್ರಮಾಣ ಪತ್ರವನ್ನು ಕಾರಾಗೃಹದ ಮುಖ್ಯ ಅಧೀಕ್ಷಕ ಅಧೀಕ್ಷಕ ಪಿ.ಎಸ್. ರಮೇಶ್ ನೀಡಿದ್ದಾರೆ.

ಒಂದೇ ಕುಟುಂಬದ ಮೂವರು ಮಹಾಮಾರಿಗೆ ಬಲಿ!

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಕೊರೊನಾ ಮಹಾಮಾರಿಗೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಜಿಲ್ಲೆಯ ಕುರುಗೋಡು ತಾಲೂಕಿನ ಮದೀರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದೇ ಗ್ರಾಮದ ನಿವಾಸಿಗಳಾಗಿದ್ದ ಸನೀತಮ್ಮ(45)ರುದ್ರಪ್ಪ(56) ನಂದಿನಿ (18) ಸೋಂಕಿಗೆ ಬಲಿಯಾದ ಒಂದೇ ಕುಟುಂಬದ ದುರ್ದೈವಿಗಳು.

ಪ್ರಾರಂಭದಲ್ಲಿ ರುದ್ರಪ್ಪ ಅವರ ಮಗ ತಿಪ್ಪೇಸ್ವಾಮಿಗೆ ಕೋವಿಡ್ ಲಕ್ಷಣ ಕಂಡು ಬಂದಿತ್ತು. ಇವರು ಹೈದ್ರಾಬಾದ್ ನ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೊರೊನಾ ಲಾಕ್ ಡೌನ್ ನಿಂದಾಗಿ ಊರಿಗೆ ಆಗಮಿಸಿದ್ದರು. ಅವರಿಗೆ ಸೋಂಕು ಕಾಣಿಸಿಕೊಂಡ ನಂತರ ಅವರ ತಾಯಿ ಸುನಿತಮ್ಮಳಿಗೆ ಸೋಂಕು ತಗುಲಿದೆ. ಆ ನಂತರ ಅವರ ತಂದೆ ರುದ್ರಪ್ಪ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಮೂರನೇಯದಾಗಿ ಸಹೋದರಿ ನಂದಿನಿಗೆ ಕಾಣಿಸಿಕೊಂಡಿದೆ. ಆದರೆ, ಮಗ ತಿಪ್ಪೇಸ್ವಾಮಿ(22) ಸೋಂಕಿನಿಂದ ಗುಣಮುಖವಾಗಿದ್ದು, ಉಳಿದ ಮೂವರು ಸಾವನ್ನಪ್ಪಿದ್ದಾರೆ. ಸದ್ಯ ಇಡೀ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಒಂದೇ ಕುಟುಂಬದ ಮೂವರ ಸಾವಿಗೆ ಗ್ರಾಮಸ್ಥರು ಕಂಬನಿ ಮಿಡಿಯುತ್ತಿದ್ದಾರೆ.

ಕೊರೊನಾ ಸಮಯದಲ್ಲಿ ಮಾರಿ ಹಬ್ಬ – ಪ್ರಶ್ನಿಸಿದ್ದಕ್ಕೆ ಅಂಗನವಾಡಿ ಕಾರ್ಯಕರ್ತೆ ಮನೆಗೆ ನುಗ್ಗಿ ಹಲ್ಲೆ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೊರೊನಾ ಲಾಕ್ ಡೌನ್ ನಡುವೆ ಮಾರಿ ಹಬ್ಬ ಆಚ್ಚರಿಸುತ್ತಿರುವುದನ್ನು ತಡೆಯಲು ಯತ್ನಿಸಿದ ಅಂಗನವಾಡಿ ಕಾರ್ಯಕರ್ತೆಯ ಮೇಲೆಯೇ ಹಲ್ಲೆ ನಡೆದಿರುವ ಘಟನೆ ನಡೆದಿದೆ. ಜಿಲ್ಲೆಯ ಹುಣಸೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಈ ಗ್ರಾಮದಲ್ಲಿ ಕೊರೊನಾ ಲಾಕ್ ಡೌನ್ ಜಾರಿಯಲ್ಲಿದ್ದರೂ ಜನರು ಮಾರಿ ಹಬ್ಬ ಆಚರಿಸುತ್ತಿದ್ದರು. ಇದನ್ನು ಅಂಗನವಾಡಿ ಕಾರ್ಯಕರ್ತೆ ಮಂಗಳಗೌರಿ ತಡೆಯಲು ಪ್ರಯತ್ನಿಸಿದ್ದರು. ಹೀಗಾಗಿ ಇದರಿಂದ ಕೋಪಗೊಂಡ ಗ್ರಾಮಸ್ಥರು, ಕಾರ್ಯಕರ್ತೆಯ ಮನೆಗೆ ನುಗ್ಗಿ ಮಂಗಳಗೌರಿ ಸೇರಿದಂತೆ ಅವರ ಸಹೋದರಿ ಸರೋಜಮ್ಮ, ಪುತ್ರ ಶರತ್ ಅವರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಇದರಿಂದ ಅವರಿಗೆ ಗಾಯವಾಗಿವೆ.

ಹೊಸೂರು ಗ್ರಾಮದಲ್ಲಿ ನಿನ್ನೆ ಗ್ರಾಮ ದೇವತೆಯ ಹಬ್ಬವಿತ್ತು. ಹೀಗಾಗಿ ದೇವಾಲಯದ ಮುಂಭಾಗದಲ್ಲಿ ಮೇಕೆ ಬಲಿ ಕೊಡುವ ಮೂಲಕ ಹಬ್ಬ ಆಚರಿಸಲಾಗಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಅಂಗನವಾಡಿ ಕಾರ್ಯಕರ್ತೆ ಮಂಗಳಗೌರಿ, ಸದ್ಯ ರಾಜ್ಯದಲ್ಲಿ ಕೊರೊನಾ ಹರಡುತ್ತಿದೆ. ಗುಂಪುಗೂಡಬೇಡಿ ಎಂದು ಮನವಿ ಮಾಡಿದ್ದಾರೆ.

ಇದರಿಂದ ಕೋಪಗೊಂಡ ಜನ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಸದ್ಯ ಗಾಯಾಳುಗಳನ್ನು ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೋವಿಡ್ ನಿಯಮ ಉಲ್ಲಂಘನೆ; ಮೂವರು ಅರ್ಚಕರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ ಡೌನ್ ಸೇರಿದಂತೆ ಹತ್ತು ಹಲವು ನಿರ್ಬಂಧಗಳನ್ನು ಹೇರಿದೆ. ಜಿಲ್ಲಾಧಿಕಾರಿಗಳು ಕೂಡ ದೇವಸ್ಥಾನ, ಪ್ರಾರ್ಥನಾ ಮಂದಿರಗಳಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.‌ ದೇವಸ್ಥಾನಗಳಲ್ಲಿ ಕೇವಲ ಅರ್ಚಕರು ಮಾತ್ರ ಪೂಜೆ-ಪುನಸ್ಕಾರ ಮಾಡಬೇಕು, ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅವಕಾಶ ಕೊಡಬಾರದು ಎಂದು ಆದೇಶ ಹೊರಡಿಸಲಾಗಿದೆ.

ಹೀಗೆ ಭಕ್ತರ ಕೋರಿಕೆಯ ಮೇರೆಗೆ ದೇವಸ್ಥಾನದ ಬಾಗಿಲು ತಗೆದು ದರ್ಶನಕ್ಕೆ ಅವಕಾಶ ಕಲ್ಪಿಸಿದ ಆರೋಪದ ಮೇಲೆ ಮೂವರು ಅರ್ಚಕರನ್ನು ಬಂಧಿಸಲಾಗಿದೆ.

ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನಿನ್ನೆ ಗ್ರಾಮದಲ್ಲಿ ಆಚರಿಸುವ ಕೊನೆ ಮಂಗಳವಾರದ ಹಿನ್ನೆಲೆಯಲ್ಲಿ ಯಲ್ಲಮ್ಮದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ಗಮನಿಸಿದ ಪೊಲೀಸರು ಪ್ರಕರಣ ದಾಖಲಿಸಿ ಮೂರು ‌ಜನ ಅರ್ಚಕರನ್ನು ಬಂಧಿಸಿದ್ದಾರೆ.

ಫಕ್ಕೀರಪ್ಪ ಚನ್ನಪ್ಪ ಬಾರಕೇರ, ಚನ್ನಪ್ಪ ಫಕ್ಕೀರಪ್ಪ ಬಾರಕೇರ ಹಾಗೂ ಸಂತೋಷ ಫಕ್ಕೀರಪ್ಪ ಬಾರಕೇರ ಎಂಬುವವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಈ ಕುರಿತು ನಾಗಾವಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗಣೇಶ ಹನಮಪ್ಪ ಪೂಜಾರ ಎಂಬುವವರು ದೂರು ದಾಖಲು ಮಾಡಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯ ಪಿಎಸ್ಐ ಅಜಿತಕುಮಾರ್ ಹೊಸಮನಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

error: Content is protected !!