Home Blog Page 3053

ಜಿಲ್ಲಾಸ್ಪತ್ರೆಯಲ್ಲಿ ಆತ್ಮಹತ್ಯೆಗೆ ಶರಣಾದ ಕೋವಿಡ್ ಸೋಂಕಿತ!

ವಿಜಯಸಾಕ್ಷಿ ಸುದ್ದಿ, ಹಾವೇರಿ

ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಯಲ್ಲಪ್ಪ ಲಮಾಣಿ(70) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.

ಈ ವ್ಯಕ್ತಿ ಜಿಲ್ಲೆಯ ರಾಣೆ ಬೆನ್ನೂರು ತಾಲೂಕಿನ ಗಂಗಾಜಲ ತಾಂಡದ ನಿವಾಸಿ. ಕೊರೊನಾ ಹಿನ್ನೆಲೆಯಲ್ಲಿ ಮೃತ ವ್ಯಕ್ತಿ ಮೇ. 3ರಂದು ರಾಣೆಬೆನ್ನೂರಿನ ಅಮೃತಂ ಆಸ್ಪತ್ರೆಗೆ ದಾಖಲಾಗಿದ್ದರು. ಆ ನಂತರ ಅವರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಲ್ಲಪ್ಪ ಲಮಾಣಿ ಇಂದು ಬೆಳಗಿನ ಜಾವ ಕೊಠಡಿಯ ಬಾಗಿಲ ಬಳಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಹಾವೇರಿ ಶಹರ ಸಿಪಿಐ ಪ್ರಹ್ಲಾದ್ ಚನ್ನಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತುಮಕೂರಲ್ಲಿ ಬಶೀರ್ ಅಹಮ್ಮದ್ ಅವರಿಂದ ರಂಜಾನ್‌ ಕಿಟ್‌ ವಿತರಣೆ

ವಿಜಯಸಾಕ್ಷಿ ಸುದ್ದಿ, ತುಮಕೂರು

ನಗರದಲ್ಲಿ ಗುರುವಾರ ಸಂಜೆ ಪಿಂಜಾರ್ ಸಮಾಜದ ಅಧ್ಯಕ್ಷ ಬಶೀರ್ ಅಹಮ್ಮದ್ ರಂಜಾನ್‌ ಕಿಟ್‌ ವಿತರಣೆ ಮಾಡಿದರು.

ಉಮರ್ ಫಾರೂಕ್ ಅಧ್ಯಕ್ಷರು ಹೋಮ್ ವೆಲ್ ಫೌಂಡೇಶನ್ ತುಮಕೂರ್ ಇವರು ಕೊಡಮಾಡಿದ ಕಿಟ್‌ನ್ನು ಆರ್ಥಿಕವಾಗಿ ಹಿಂದುಳಿದ ಪಿಂಜಾರ್ ಸಮುದಾಯದ ಕುಟುಂಬಕ್ಕೆ ವಿತರಿಸಿದರು.

ಪಿಂಜಾರ್ ಸಮುದಾಯದ ಅಧ್ಯಕ್ಷ ಬಶೀರ್ ಅಹಮ್ಮದ್ ಮಾತನಾಡಿ, ಪವಿತ್ರ ರಂಜಾನ್‌ ಹಬ್ಬವನ್ನು ಕೊರೋನಾ ಸಮಯದಲ್ಲಿಯೂ ಎಲ್ಲರು ಸಮಾನ ಭಾವದಿಂದ ಆಚರಿಸಬೇಕೆಂಬ ಉದ್ದೇಶದಿಂದ ಕಿಟ್‌ ವಿತರಿಸಲಾಯಿತು ಎಂದರು.

ಕಿಟ್‌ನಲ್ಲಿ ಅಕ್ಕಿ, ಎಣ್ಣೆ ಮತ್ತಿತರ ದಿನನಿತ್ಯ ಉಪಯೋಗಿಸಬಹುದಾದ ವಸ್ತುವಿದೆ. ಇದನ್ನು ದಾನವಾಗಿ ನೀಡುವ ಮೂಲಕ ಅಧ್ಯಕ್ಷರು ಹೋಮ್ ವೆಲ್ ಫೌಂಡೇಶನ್ ತುಮಕೂರ ಇವರು ಮಾನವೀಯತೆ ಮೆರೆದಿದ್ದಾರೆ ಎಂದು ಪಿಂಜಾರ್ ಸಮುದಾಯದ ಅಧ್ಯಕ್ಷ ಬಶೀರ್ ಅಹಮ್ಮದ್ ಹೇಳಿದರು.

ಈ ಸಮಯದಲ್ಲಿ ಅಹಮ್ಮದ್ ಭಾಷ್, ಮಲ್ಲಿಕ್ ಸಾಬ್, ಶಬ್ಬೀರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.

ಕೊರೋನಾ ; ಜಿಲ್ಲೆಯಲ್ಲಿ ನಿಲ್ಲದ ಸೋಂಕಿನ ಸ್ಫೋಟ; 467 ಜನರಿಗೆ ಸೋಂಕು; ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಸೋಂಕಿನ ರುದ್ರನರ್ತನ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ನಾಲ್ಕು ನೂರರ ಗಡಿ ದಾಟಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.

ಮೇ 13 ಗುರುವಾರ ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 467 ಜನರಿಗೆ ಸೋಂಕು ತಗುಲಿದೆ. ನಾಲ್ವರು ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ.

ಇಂದು 467 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 16453 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -208, ಮುಂಡರಗಿ-53, ನರಗುಂದ-60, ರೋಣ-71, ಶಿರಹಟ್ಟಿ-67, ಹೊರಜಿಲ್ಲೆಯ-08 ಸೇರಿದಂತೆ 467 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಕೊಟ್ಟಿರುವ ಪ್ರಕಾರ ಜಿಲ್ಲೆಯಲ್ಲಿ ಇಂದು ನಾಲ್ಕು ಜನ ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ 62 ವರ್ಷದ ವ್ಯಕ್ತಿ ಮೇ 11ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ನಿವಾಸಿ 40 ವರ್ಷದ ಮಹಿಳೆ ಮೇ 11 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಕದಡಿ ಗ್ರಾಮದ 77 ವರ್ಷದ ವೃದ್ಧೆ ಮೇ 12 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಗದಗನ ಹುಡ್ಕೋ ಕಾಲೋನಿಯ ನಿವಾಸಿ 73 ವರ್ಷದ ಮೇ 12 ರಂದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹೇಳಿದ್ದಾರೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
171 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 296 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 14205 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2077 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 168 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅಪ್ರಾಪ್ತೆ ಜೊತೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ ಎಎಸ್ಐ; ಎರಡು ಲಕ್ಷ ದಂಡ!

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತ ಬಾಲಕಿಯೊಂದಿಗೆ ಚಕ್ಕಂದ ಆಡಲು ಹೋಗಿ ಸಿಕ್ಕಿ ಬಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಒಬ್ಬನ ಅಸಲಿ ಕಥೆಯಿದು. ಆತ‌ ಗದಗನ ಠಾಣೆಯೊಂದರಲ್ಲಿ ಎಎಸ್ ಐ. ವಯಸ್ಸು 50 ಕ್ಕೂ ಹೆಚ್ಚು ಇರಬಹುದು. ಅಮಾಯಕರಿಗೆ, ಅಭಲೆಯರಿಗೆ,‌ನ್ಯಾಯ ಕೇಳಿ ಬಂದವರಿಗೆ ನ್ಯಾಯ ಕೊಡಿಸುವ ‌ಮಹತ್ವದ ಜವಬ್ದಾರಿ ಹೊತ್ತ ಪೊಲೀಸ್ ಅಧಿಕಾರಿ.

ಈ ಪೊಲೀಸ್ ಅಧಿಕಾರಿ ಮಾತ್ರ ಇದನ್ನೆಲ್ಲ ಮರೆತು ಏನೂ ಅರಿಯದ, ಬಾಲಕಿಯೊಂದಿಗೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದು ಬಾಲಕಿಯ ಪೋಷಕರೊಂದಿಗೆ ಮಂಗಳಾರತಿ ಮಾಡಿಸಿಕೊಂಡಿದ್ದಾನೆ.

ಗದಗನ ಸಮೀಪ ಇರುವ ತಾಂಡಾವೊಂದರಲ್ಲಿ ಈ ಘಟನೆ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.‌ ಅಂದು ಸಾಹೇಬರು‌ ತಾಂಡಾದ ಹೊರವಲಯದಲ್ಲಿ ಇತ್ತೀಚೆಗೆ ಕಟ್ಟಿಸಿರುವ ಹೊಸ ಮನೆಯಲ್ಲಿ ಒಬ್ಬರೇ ಇದ್ದಾರೆ. ಮಟ ಮಟ‌ ಮಧ್ಯಾಹ್ನ ಅಪ್ರಾಪ್ತ ಬಾಲಕಿ ಸಮೇತ ಮೂವರು ಬಹಿರ್ದೆಸೆಗೆ ಬಂದಿದ್ದಾರೆ. ಅದೂ ಈ‌ ಪೊಲೀಸ್ ಪ್ಪನ ಮನೆಯ ಕೂಗಳತೆಯಲ್ಲಿ.

ಸಾಹೇಬರು‌ ಮೂವರನ್ನು ಕರೆದು ಚಾಕಲೇಟ್, ಚಿಪ್ಸ್ ಆಶೆ ತೋರಿಸಿ ಒಳಗೆ ಕರೆದಿದ್ದಾರೆ ಅಂತೆ. ಅದರಲ್ಲಿ ಇಬ್ಬರು ಸಣ್ಣ ಮಕ್ಕಳನ್ನು ನೀವು ಮನೆಗೆ ಹೋಗಿ ಅಂದಿದ್ದಾನೆ.

ಇಬ್ಬರೇ ಮನೆಗೆ ಬಂದ ಮಕ್ಕಳನ್ನು ಪೋಷಕರು ಇನ್ನೊಬಳು ಎಲ್ಲಿ ಎಂದಾಗ, ಆ ಮಕ್ಕಳು ಪೊಲೀಸಪ್ಪನ ವೃತ್ತಾಂತ ಹೇಳಿದ್ದಾರೆ. ಆಗ ಪೋಷಕರು ಎದ್ನೋ….ಬಿದ್ನೋ ಅಂತ ಎಎಸ್ ಐ ಸಾಹೇಬರ ಮನೆಗೆ ಬಂದಾಗ ಸಾಹೇಬರು ತುಂಡುಡಗೆಯಲ್ಲಿ‌ ಇದ್ದರು. ಗಾಬರಿ ಬಿದ್ದ ಬಾಲಕಿಯ ಪೋಷಕರು ಪೊಲೀಸಪ್ಪನ ತರಾಟೆಗೆ ತಗೆದುಕೊಂಡಿದ್ದಾರೆ. ಆದರೆ ಅಷ್ಟರಲ್ಲೇ ಸಾಹೇಬರ ಚಪಲ ಸ್ವಲ್ಪವೇ ತೀರಿದೆ. ಆದರೆ ಅಂತಹ‌ ಅನಾಹುತ ಆಗಿಲ್ಲ. ಇದರಿಂದಾಗಿ ಆಕ್ರೋಶಗೊಂಡ ಪೋಷಕರು ಸಾಹೇಬರಿಗೆ ಮಂಗಳಾರತಿ ಮಾಡಿ ಮನೆ ಕಡೆ ಹೋಗಿದ್ದಾರೆ.

ಈ ಘಟನೆ ಆದ ನಂತರ ಸಾಹೇಬರ ವರಸೆಯೇ‌ ಬದಲಾಗಿದೆ. ಖಾಕಿ ಡ್ರೆಸ್ ಮೈ‌ಮೇಲೆ ಹಾಕಿಕೊಂಡು ಆ ಬಾಲಕಿ ಮನೆಗೆ ಹೋಗಿ ದೊಡ್ಡ ರಾದ್ದಾಂತ ಮಾಡಿದ್ದಾನೆ. ಅವರಿಗೆ ಹೆದರಿಸಿದ್ದಾನೆ.‌ಅದರೆ ಆ ಪೋಷಕರು ಪೊಲೀಸಪ್ಪನ ಯಾವುದೇ ಬೆದರಿಕೆಗೆ ಬಗ್ಗದೇ ಸೀದಾ ತಾಂಡಾದ ಹಿರಿಯರ ಹತ್ರ ಹೋಗಿ ನ್ಯಾಯ ಕೇಳಿದ್ದಾರೆ.

ತಾಂಡಾದ ಪ್ರಮುಖರು ಸೋಮವಾರ ಮಧ್ಯಾಹ್ನ ಸಭೆ ಸೇರಿ ಎಎಸ್ ಐ ಸಾಹೇಬರನ ಕರೆಸಿ ನೀವು ಮಾಡಿದ್ದು ಖರೇನಾ ಅಂತ ಕೇಳಿದ್ದಾರೆ. ಸಾಹೇಬರು ತಲೆ ತಗ್ಗಿಸಿದ್ದಾರೆ. ಇದರಿಂದ ತಾಂಡಾದ ಹಿರಿಯರಿಗೂ ಖಾತ್ರಿಯಾಗಿದೆ ಪೊಲೀಸಪ್ಪನ ಲೈಂಗಿಕ ಕಿರುಕುಳ. ಆಗ ನಾಲ್ಕು ಲಕ್ಷ ರೂ, ದಂಡ ಕೊಡಬೇಕು ಅಂದವರೇ. ಇಲ್ಲ ಅಷ್ಟು ಆಗಲ್ಲ…ಇಷ್ಟು ಆಗಲ್ಲ ಅಂದವನೇ ಎರಡು ಲಕ್ಷ ರೂಪಾಯಿ ಕೊಡ್ತೀನಿ ಅಂತ ಒಪ್ಪಕೊಂಡು‌ ಶುಕ್ರವಾರ ಯಾವುದೇ ಕಾರಣಕ್ಕೂ ಮಿಸ್ ಮಾಡಂಗಿಲ್ಲ ಅಂತ ಮಾತು ಕೊಟ್ಟು ಆ‌ ಸಭೆಯಿಂದ ಎದ್ದು ಬಂದು ಡ್ಯೂಟಿ ಮಾಡ್ತಾ ಇದ್ದಾರೆ. ಇದೀಗ ಈ ಸುದ್ದಿ ಇಡೀ ತಾಂಡಾದಲ್ಲಿ….ಶಹರ ಠಾಣೆಯಲ್ಲಿ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿದೆ ಎಂದು ಕೆಲ ಮೂಲಗಳು ತಿಳಿಸಿವೆ.

ಆದರೆ ಸಾಹೇಬರು ಮಾತ್ರ ತಮ್ಮ ಪಟಾಲಂ ಬಳಿ ಅಂತಹ ಯಾವುದೇ ಕೆಲಸ ಮಾಡಿಲ್ಲ, ನಾ ಯಾಕೆ ದುಡ್ಡು ಕೊಡಲಿ ಅಂತ ಮೀಸೆ ಮೇಲೆ ಕೈ ಹಾಕ್ತಾ ಇದ್ದಾರೆ.

ಅಂದಹಾಗೆ ಎಎಸ್ಐ ಸಾಹೇಬರು ಆ ತಾಂಡಾಕ್ಕೆ ಅಳಿಯದೇವರು. ಪತ್ನಿಯ ತವರುಮನೆ ಅಂತೆ. ಆತನದು ಸೊರಟೂರು ಬಳಿ ಇರುವ ತಾಂಡಾ ಅಂತೆ.

ಆತಂಕ ಮೂಡಿಸುತ್ತಿದೆ ಇಸ್ರೇಲ್, ಪ್ಯಾಲಿಸ್ತೈನ್ ಸಂಘರ್ಷ

ವಿಜಯಸಾಕ್ಷಿ ಸುದ್ದಿ, ಇಸ್ರೇಲ್

ಇಸ್ರೇಲ್ ಹಾಗೂ ಪ್ಯಾಲಿಸ್ತೈನ್ ನಡುವಿನ ಭಿನ್ನಾಭಿಪ್ರಾಯ ಭೀಕರ ಸ್ವರೂಪ ಪಡೆದಿದೆ.
ಎರಡೂ ರಾಷ್ಟ್ರಗಳು ಸದ್ಯ ಪರಸ್ಪರರ ಮೇಲೆ ರಾಕೆಟ್ ದಾಳಿ ನಡೆಸುತ್ತಿವೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಡೆಸಿದ ರಾಕೆಟ್ ದಾಳಿಯಲ್ಲಿ 32 ಜನ ಪ್ಯಾಲಿಸ್ತೈನ್ ನಾಗರಿಕರು ಸಾವನ್ನಪ್ಪಿದ್ದಾರೆ.

ಅಲ್ಲದೇ, ಈ ಘಟನೆಯಲ್ಲಿ 220 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಮಾಸ್ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಈ ಘಟನೆಗೆ ವಿರೋಧ ವ್ಯಕ್ತವಾಗುತ್ತಿದೆ. ಗಾಜಾ ಬಳಿಯ ಬೀರ್‌ ಶೆಬಾದ ಬಳಿ ಭಾರೀ ಪ್ರಮಾಣದಲ್ಲಿ ರಾಕೆಟ್ ದಾಳಿ ನಡೆಸಲಾಗಿದೆ. ಅಶ್ಕೆಲಾನ್, ಮೋದಿನ್ ಮತ್ತು ಟೆಲ್ ಅವೀವ್‌ ನಲ್ಲಿಯೂ ರಾಕೆಟ್ ದಾಳಿ ನಡೆದಿದೆ.

ಕೇಂದ್ರದ ತಾರತಮ್ಯ; ಮಾಜಿ ಸಿ ಎಮ್ ಎಚ್ಡಿಕೆ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕನ್ನಡಿಗರೇನು ತಬ್ಬಲಿಗಳಾ? ಕನ್ನಡಿಗರು ಏನು ಅನ್ಯಾಯ ಮಾಡಿದ್ದಾರೆ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಕನ್ನಡಿಗರೇನು ತಬ್ಬಲಿ ಮಕ್ಕಳೇ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯಕ್ಕೆ ನಿತ್ಯ 1200 ಮೆಟ್ರಿಕ್ ಟನ್(MT) ಆಮ್ಲಜನಕ ಪೂರೈಸಬೇಕು ಎಂಬ ಕೋರ್ಟ್ ಆದೇಶದ ನಂತರವೂ ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇವಲ 120 ಮೆಟ್ರಿಕ್ ಟನ್ ನಷ್ಟು ಕಳಹಿಸುತ್ತಿದೆ. ಆದರೆ, ನಮಗಿಂತ ಕಡಿಮೆ ಪ್ರಕರಣಗಳಿರುವ ಉತ್ತರ ಪ್ರದೇಶಕ್ಕೆ 1680MT ಪೂರೈಸಿರುವ ಕೇಂದ್ರ ಸರ್ಕಾರ ತಾರತಮ್ಯದಲ್ಲಿ ಪಾರಮ್ಯ ಮೆರೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರ ವಿಚಾರದಲ್ಲಿ ಕೇಂದ್ರಕ್ಕೆ ಈ ಮಟ್ಟಿಗಿನ ತಾತ್ಸಾರ ಏಕೆ? ಇಲ್ಲಿ ಬಿಜೆಪಿಯದ್ದೇ ಸರ್ಕಾರ ಇರುವುದಕ್ಕೋ? ಅಥವಾ ಅತಿ ಹೆಚ್ಚು ಸಂಸದರು ಆಯ್ಕೆಯಾಗಿರುವುದಕ್ಕೋ? ಅಥವಾ ಯಡಿಯೂರಪ್ಪರನ್ನು ಖಳನಾಯಕರಾಗಿಸಲೋ? ಎಂದು ಗುಡುಗಿದ್ದಾರೆ.

ಇದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ಸರ್ಕಾರ ನಡೆಸುತ್ತಿರುವವರು ಎಲ್ಲ ರಾಜ್ಯಗಳಿಗೂ ಸಮಾನ ಆದ್ಯತೆ ನೀಡಬೇಕು. ಅನಿವಾರ್ಯದಲ್ಲಿರುವವರ ಅಗತ್ಯಗಳನ್ನು ಮೊದಲು ಪೂರೈಸಬೇಕು. ಅದನ್ನು ಬಿಟ್ಟು ತಾತ್ಸಾರ ಮಾಡಿದರೆ ಜನ ದಂಗೆ ಎದ್ದಾರು ಎಂದು ಕಿಡಿಕಾರಿದ್ದಾರೆ.

ಬಿಜೆಪಿಯ ಪ್ರತಿಯೊಂದು ಧೋರಣೆಯನ್ನೂ ಬೆಂಬಲಿಸುವವರು, ಸಮರ್ಥಿಸಿಕೊಳ್ಳುತ್ತಿರುವವರು, ವಿರೋಧ ಪಕ್ಷಗಳ ನ್ಯಾಯಯುತ ಸಲಹೆ, ಬೇಡಿಕೆಗಳನ್ನು ಅಡಿಗಡಿಗೂ ಟೀಕಿಸುವವರು ಕರ್ನಾಟಕಕ್ಕೆ, ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯವನ್ನು ಸಮರ್ಥಿಸಿಕೊಳ್ಳುವರೇ? ಆಮ್ಲಜನಕವಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕನ್ನಡಿಗರ ಸಾವಿನ ಹೊಣೆ ಹೊರುವರೇ? ಎಂದು ಪ್ರಶ್ನಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯ ಆರೋಪ; ತಂದೆಯ ಸಾವಿಗೆ ಪ್ರತೀಕಾರ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇಲ್ಲಿಯ ರೈಲ್ವೆ ಆಸ್ಪತ್ರೆಯಲ್ಲಿ ತಮ್ಮ ತಂದೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಸಮಾಧಾನಗೊಂಡಿದ್ದ ಮಕ್ಕಳು ಐಸಿಯು ವಾರ್ಡ್‌ ನಲ್ಲಿದ್ದ ಸುಮಾರು ರೂ. 4 ಲಕ್ಷ ಮೌಲ್ಯದ ಆಕ್ಸಿಜನ್ ಯಂತ್ರ ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ನಿವೃತ್ತರಾಗಿದ್ದ 61 ವರ್ಷದ ವ್ಯಕ್ತಿ ಸೋಂಕಿಗೆ ತುತ್ತಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳವಾರ ರೈಲ್ವೆ ಆಸ್ಪತ್ರೆಯ ಐಸಿಯು ವಾರ್ಡ್‌ ಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ತಂದೆಯ ಸಾವಿನ ನೋವು ಜೀರ್ಣಿಸಿಕೊಳ್ಳಲಾಗದ ಅವರ ಪುತ್ರಿಯರು ಮತ್ತು ಕುಟುಂಬಸ್ಥರು ಐಸಿಯು ವಾರ್ಡ್ ಗೆ ನುಗ್ಗಿ ಆಕ್ಸಿಜನ್ ಯಂತ್ರ ಧ್ವಂಸ ಮಾಡಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದಲೇ ನಮ್ಮ ತಂದೆ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಮೃತ ವ್ಯಕ್ತಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಪತ್ನಿ ಇದ್ದು, ತಂದೆ ಸಾವಿನ ವಿಚಾರವಾಗಿ ಹೆಣ್ಣು ಮಕ್ಕಳಿಬ್ಬರೂ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಜಗಳ ಮಾಡಿದ್ದರು ಎಂದು ತಿಳಿದು ಬಂದಿದೆ.

ಮೂಗಿನ ಮೂಲಕ ಆಮ್ಲಜನಕ ಸರಬರಾಜು ಮಾಡುವ ಹೈ ಫ್ಲೋ ಆಕ್ಸಿಜನ್ ಉಪಕರಣವನ್ನು ಧ್ವಂಸ ಮಾಡಿದ್ದಾರೆ. ಇದರ ಬೆಲೆ ಸುಮಾರು ರೂ. 4 ಲಕ್ಷ ಎಂದು ಹೇಳಲಾಗಿದೆ.

ಆಕ್ಸಿಜನ್ ದುರಂತ – ರೋಹಿಣಿ ಸಿಂಧೂರಿಗೆ ಕ್ಲಿನ್ ಚಿಟ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಚಾಮರಾಜನಗರ ಆಸ್ಪತ್ರೆಯಲ್ಲಿ ಮೇ 2 ರಂದು 24 ರೋಗಿಗಳ ಸಾವಿಗೀಡಾಗಿರುವುದಕ್ಕೆ ಆಕ್ಸಿಜನ್ ಕೊರತೆಯೇ ಕಾರಣ ಎಂದು ನಿವೃತ್ತ ನ್ಯಾಯಮೂರ್ತಿಗಳ ಸಮಿತಿ ಹೈಕೋರ್ಟ್ ಗೆ ವರದಿ ಸಲ್ಲಿಸಿದೆ.

ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನರು ಸಾವಿಗೀಡಾಗಿದ್ದರೂ, ಅಲ್ಲಿಯ ವೈದ್ಯರು ಮಾತ್ರ ಕೇವಲ ಮೂವರು ಸೋಂಕಿತರು ಮಾತ್ರ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.

ನಿವೃತ್ತ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ನೇತೃತ್ವದ ಸಮಿತಿ ರಚಿಸಿ ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಇದೀಗ ಸಮಿತಿಯು ಹೈಕೋರ್ಟ್ ಗೆ ವರದಿ ಸಲ್ಲಿಸಿದ್ದು, ಚಾಮರಾಜನಗರದ ಜಿಲ್ಲಾಧಿಕಾರಿ ಎಂ.ಆರ್. ರವಿ ಅವರ ನಿರ್ಲಕ್ಷ್ಯದಿಂದ ಆಕ್ಸಿಜನ್ ಕೊರತೆಯುಂಟಾಗಿ 24 ರೋಗಿಗಳು ಮೃತಪಟ್ಟಿದ್ದಾರೆ ಎಂದು ಹೇಳಿದೆ. ಇನ್ನೂ ಮೈಸೂರು ಜಿಲ್ಲಾಧಿಕಾರಿ ರೋಹಿನಿ ಸಿಂಧೂರಿ ಅವರ ಮೇಲೂ ಆರೋಪಗಳು ಕೇಳಿಬಂದಿದ್ದರೂ ಕ್ಲೀನ್ ಚಿಟ್ ನೀಡಲಾಗಿದೆ.

24 ಜನರ ಕೊಲೆಗೆ ಕಾರಣವಾದ ಸರ್ಕಾರ – ಡಿಕೆಶಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಆಕ್ಸಿಜನ್ ಕೊರತೆಯಿಂದಾಗಿ ಚಾಮರಾಜನಗರದಲ್ಲಿ ಸಾವನ್ನಪ್ಪಿರುವ 24 ಜನರ ಸಾವಿಗೆ ಸರ್ಕಾರವೇ ನೇರ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮರ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಾಮಾರಿಯಿಂದಾಗಿ ಕಂಗಾಲಾಗಿದ್ದಾರೆ. ಸದ್ಯದ ಈ ಸ್ಥಿತಿಗೆ ಬಿಜೆಪಿ ಸರ್ಕಾರವೇ ಕಾರಣ.ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಜನರ ಕೊಲೆಗೆ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದಾರೆ.

ಈ ಸಾವಿನ ಹೊಣೆ ಯಾರು ಹೊತ್ತಿಕೊಳ್ಳುತ್ತಾರೆ? ಎಂದು ಪ್ರಶ್ನಿಸಿದ ಅವರು, ಸರ್ಕಾರ ಈ ವಿಷಯವಾಗಿ ಮಿಸ್ ಗೈಡ್ ಮಾಡುವ ಕಾರ್ಯ ಮಾಡುತ್ತಿದೆ. 24 ಜನ ಸತ್ತಿದ್ದಕ್ಕೆ ಸರ್ಕಾರವೇ ಹೊಣೆ ಹೊರಬೇಕು ಎಂದು ನ್ಯಾಯಮೂರ್ತಿಗಳೇ ಗರಂ ಆಗಿದ್ದಾರೆ.

ಜನ ಬೀದಿಗೆ ಬಂದಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಪ್ರತಿ ಬಡ ಕುಟುಂಬಕ್ಕೆ ರೂ. 10 ಸಾವಿರ ಆರ್ಥಿಕ ನೆರವು ಘೋಷಿಸಬೇಕು. ಬ್ಯಾಂಕ್ ಗಳ ಸಭೆ ಕರೆಯಬೇಕು. ಇಎಂಐ ಹಾಗೂ ಬಡ್ಡಿ ವಿಚಾರದಲ್ಲಿ ಬ್ಯಾಂಕ್ ಗಳ ಜೊತೆ ಮಾತನಾಡಿ, ಜನರ ನೆರವಿಗೆ ನಿಲ್ಲಬೇಕು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಲಸಿಕೆ ಅಭಾವ – ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೋವಿಡ್ ಲಸಿಕೆಯ ಅಭಾವದಿಂದ ಜನರು ಪರದಾಡುತ್ತಿದ್ದಾರೆ. ಸಮರ್ಪಕವಾಗಿ ಲಸಿಕೆ ಪೂರೈಸಲಾಗದ ಸರ್ಕಾರದ ನಡೆಗೆ ಹೈಕೋರ್ಟ್ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿದೆ. ‘ನಿಮ್ಮಿಂದ ವ್ಯಾಕ್ಸಿನ್ ನೀಡಲು ಸಾಧ್ಯವೇ ಇಲ್ಲ ಎಂದಾದರೆ ಹೇಳಿ ನಾವು ಸರ್ಕಾರದಿಂದ ವ್ಯಾಕ್ಸಿನ್ ಒದಗಿಸಲಾಗದು’ ಎಂದೇ ದಾಖಲಿಸಿಕೊಳ್ಳುತ್ತೇವೆ ಎಂದು ಹೇಳಿದೆ.

ಲಸಿಕೆ ಪಡೆದರೆ ಕೊರೊನಾದಿಂದ ಪ್ರಾಣ ಉಳಿಸಿಕೊಳ್ಳಬಹುದು ಇದೀಗ ಸಾಕಷ್ಟು ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಉಳಿದವರ ಜೀವರಕ್ಷಿಸಲಾದರೂ ಸರ್ಕಾರ ಲಸಿಕೆ ನೀಡಬೇಕಿದೆ. ಕರ್ನಾಟಕದ ಜನಸಂಖ್ಯೆ 6 ಕೋಟಿಗೂ ಅಧಿಕವಾಗಿದ್ದು, ಈವರೆಗೆ ಒಂದೇಒಂದು ಪರ್ಸ್ಂಟ್ ನಷ್ಟು ಜನರಿಗೂ ಲಸಿಕೆ ನೀಡಲು ಸಾಧ್ಯವಾಗಿಲ್ಲ ವೆಂದರೆ ಇದೆಂತಹ ವ್ಯಾಕ್ಸಿನ್ ಅಭಿಯಾನ, ಇದೆಂತಹ ಲಸಿಕಾ ಉತ್ಸವ ಎಂದು ಕ್ಲಾಸ್ ತಗೆದುಕೊಂಡಿದೆ.

ಮೊದಲ ಡೋಸ್ ಲಸಿಕೆ ಪಡೆಯುವವರ ಕಥೆ ಬಿಡಿ, ಎರಡನೇ ಡೋಸ್ ಲಸಿಕೆ ಪಡೆಯವವರಿಗೂ ಲಸಿಕೆ ಸಿಗುತ್ತಿಲ್ಲವೆಂದರೆ ಹೇಗೆ..? 2 ನೇ ಡೋಸ್ ಪಡೆಯುವುದು ಅವರ ಹಕ್ಕಲ್ಲವೇ? 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದ್ದು, ಈ ಗ್ಯಾಪ್ ನ್ನು ನೀವು ಹೇಗೆ ಸರಿಪಡಿಸುತ್ತೀರಿ? ಇದೇ ರೀತಿ ಮುಂದುವರೆದರೆ, ಎರಡೇ ದಿನಗಳಲ್ಲಿ ವ್ಯಾಕ್ಸಿನೇಷನ್ ನೀಡುವಂತೆ ಆದೇಶ ನೀಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ವ್ಯಾಕ್ಸಿನ್ 2ನೇ ಡೋಸ್ ಗೆ 6 ವಾರಗಳ ಕಾಲಾವಕಾಶವಿದೆ. ವ್ಯಾಕ್ಸಿನ್ ನೀಡುವುದು ವಿಳಂಬವಾದರೂ 1ನೇ ಡೋಸ್ ವ್ಯರ್ಥವಾಗಲ್ಲ. ಕೋವಿಶೀಲ್ಡ್ ಗೆ 8 ವಾರ ಕಾಲಾವಕಾಶವಿದೆ ಎಂದು ಕೇಂದ್ರ ಸರ್ಕಾರದ ಎಎಸ್ಜಿ ಐಶ್ವರ್ಯಾ ಭಾಟಿ ಉತ್ತರ ನೀಡಿದ್ದಾರೆ.

error: Content is protected !!