Home Blog Page 3054

ಮಹಾರಾಷ್ಟ್ರದಲ್ಲಿ ಮತ್ತೆ ಮುಂದುವರೆದ ಲಾಕ್ ಡೌನ್!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಸದ್ಯದ ಲಾಕ್ ಡೌನ್ ನ್ನು ಜೂ. 1ರ ವರೆಗೆ ವಿಸ್ತರಿಸಿದೆ.
ಮಹಾರಾಷ್ಟ್ರಕ್ಕೆ ಪ್ರವೇಶಿಸುವವರು ಕಡ್ಡಾಯವಾಗಿ ನೆಗೆಟಿವ್ ಆರ್ ಟಿ-ಪಿಸಿಆರ್ ವರದಿ ತೋರಿಸಬೇಕು. ಈ ಹಿಂದೆ ಕೊರೊನಾ ಪ್ರಕರಣ ಹೆಚ್ಚಾಗಿರುವ ರಾಜ್ಯಗಳಿಂದ ಬರುವವರಿಗೆ ಮಾತ್ರ ಇದು ಕಡ್ಡಾಯವಾಗಿತ್ತು. ಆದರೆ ಇನ್ನು ಮುಂದೆ ದೇಶದ ಯಾವುದೇ ಭಾಗಗಳಿಂದ ಮಹಾರಾಷ್ಟ್ರ ಪ್ರವೇಶಿಸುವವರು ಕಡ್ಡಾಯವಾಗಿ ಆರ್ ಟಿ-ಪಿಸಿಆರ್ ನೆಗೆಟಿವ್ ವರದಿ ಒಯ್ಯಬೇಕು.

ಲಾಕ್ ಡೌನ್ ನಿರ್ಬಂಧ ನಿಯಮ ಜೂ. 1ರ ಬೆಳಿಗ್ಗೆ 7 ಗಂಟೆಯವರಿಗೆ ಅನ್ವಯವಾಗಲಿದೆ. ಅಲ್ಲಿನ ಹೊಸ ನಿಯಮದಲ್ಲಿ ಹಾಲು ಸಂಗ್ರಹ, ಸಾಗಾಟ ಮತ್ತು ಸಂಸ್ಕರಣೆಗೆ ಸಡಿಲವಿರುತ್ತದೆ. ಆದರೆ, ಇದರ ಚಿಲ್ಲರೆ ಮಾರಾಟಕ್ಕೆ ಸಮಯ ನಿಗದಿಯಿರುತ್ತದೆ.

ವಿಷ ಸೇವಿಸಿ ಯುವತಿ ಸಾವು: ಶವ ಸುಟ್ಟುಹಾಕಿ ಪ್ರಕರಣ ಮುಚ್ಚಿ ಹಾಕಲೆತ್ನಿಸಿದ 7 ಜನರ ವಿರುದ್ಧ ಕೇಸ್

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ

ತಾಲೂಕಿನ ಯಡಿಹಳ್ಳಿ ಗ್ರಾಮದಲ್ಲಿ ತಮ್ಮ ಮಗಳು ವಿಷಸೇವಿಸಿ ಮೃತಪಟ್ಟ ವಿಚಾರವನ್ನು ಬಹಿರಂಗಪಡಿಸದೆ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆಕೆಯ ಶವವನ್ನು ಸುಟ್ಟು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ೭ ಜನರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಗ್ರಾಮದ ಪೂಜಾ (೧೮) ಮೇ ೧೦ರಂದು ರಾತ್ರಿ ೧೦.೩೦ ಗಂಟೆಗೆ ಮನೆಯಲ್ಲಿ ವಿಷ ಸೇವಿಸಿ ಅಸ್ವಸ್ಥಗೊಂಡಿದದ್ದಳು. ಆಕೆಯನ್ನು ತಂದೆ ಸುರೇಶ್, ಚಿಕ್ಕಪ್ಪರಾದ ಅಂಜಿನಪ್ಪ, ನಾಗರಾಜ, ಸಂಬಂಧಿಗಳಾದ ಭೀಮಪ್ಪ, ಹನುಮಂತ, ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಕೊನೆಯುಸಿರು ಎಳೆದಿದ್ದಾಳೆ.

ಅನಂತರ ಆರೋಪಿತರು ಈ ವಿಷಯವನ್ನು ರಾತ್ರಿ ೧೧.೩೦ ಗಂಟೆ ಸಮಯದಲ್ಲಿ ತಮ್ಮ ಸಂಬಂಧಿಕರಿಗೆ ತಿಳಿಸಿದ್ದಾರೆ. ಇವರೆಲ್ಲರೂ ಸೇರಿಕೊಂಡು ಪೂಜಾಳ ಮೃತ ದೇಹವನ್ನು ಆಸ್ಪತ್ರೆಗೆ ಕರೆದೊಯ್ಯದೆ, ಪೊಲೀಸರಿಗೂ ಮಾಹಿತಿ ತಿಳಿಸದೆ, ತಮ್ಮ ಗ್ರಾಮದ ಕರೆಯ ಸಮೀಪ ಸ್ಮಶಾನದ ಬಳಿ ಸುಟ್ಟು ಹಾಕಿದ್ದಾರೆ. ಈ ಮಾಹಿತಿ ಆಧರಿಸಿ ಅದೇ ಮಾರ್ಗದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಸೊನ್ನದ ರಾಜೇಂದ್ರ ಅವರು ದೂರು ಸಲ್ಲಿಸಿದ್ದಾರೆ. ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಹಲುವಾಗಲು ಸಬ್ ಇನ್‌ಸ್ಪೆಕ್ಟರ್ ಎಚ್.ಎಸ್.ಪ್ರಶಾಂತ ಅವರು ತನಿಖೆ ಕೈಗೊಂಡಿದ್ದಾರೆ.

ಸಾವಿನ ಹಿಂದೆ ಪ್ರೇಮಕಥೆ?

ಮೃತ ಯುವತಿ ಮತ್ತು ಅನ್ಯ ಕೋಮಿನ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ನಾಲ್ಕು ದಿನಗಳ ಹಿಂದೆ ಮದುವೆಯಾಗಲು ಮನೆಬಿಟ್ಟು ಬೇರೆ ಸ್ಥಳಕ್ಕೆ ಹೋಗಿದ್ದರು. ಇವರು ತಂಗಿದ್ದ ಸ್ಥಳವನ್ನು ಹುಡುಗಿಯ ಪಾಲಕರು ಪತ್ತೆ ಹಚ್ಚಿದ್ದಾರೆ. ಆಗ ಹುಡುಗ ಪ್ರಾಣ ಭಯದಿಂದ ತಲೆಮರೆಸಿಕೊಂಡಿದ್ದ. ಹುಡುಗಿಯ ಪಾಲಕರು, ಸಂಬಂಧಿಕರು ಆಕೆಯನ್ನು ಸ್ವ-ಗ್ರಾಮಕ್ಕೆ ಕರೆತಂದು ಬಲವಂತವಾಗಿ ವಿಷ ಉಣಿಸಿದ್ದಾರೆ ಎನ್ನುವ ಗಾಳಿ ಸುದ್ದಿ ಗ್ರಾಮದಲ್ಲಿ ಹರಡಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬುಧವಾರವೂ ಸೋಂಕಿನ ಆರ್ಭಟ; 458 ಜನರಿಗೆ ಸೋಂಕು; ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕಿನ ಆರ್ಭಟ ಮುಂದುವರೆದಿದೆ. ನಿನ್ನೆ ಮತ್ತು ಇವತ್ತು ನಾಲ್ಕು ನೂರರ ಗಡಿ ದಾಟಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಅದರಲ್ಲೂ ಸೋಂಕು ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿದ್ದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಮೇ 12 ಬುಧವಾರ ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 458 ಜನರಿಗೆ ಸೋಂಕು ತಗುಲಿದೆ. ನಾಲ್ವರು ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ.

ಇಂದು 458 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 15986 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -221, ಮುಂಡರಗಿ-71, ನರಗುಂದ-19, ರೋಣ-89, ಶಿರಹಟ್ಟಿ-44, ಹೊರಜಿಲ್ಲೆಯ-10 ಸೇರಿದಂತೆ 458 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಮಾಹಿತಿ ಅಂತೆ ನಾಲ್ವರು ಮೃತಪಟ್ಟಿದ್ದಾರೆ.

ಮೃತ ನಾಲ್ವರು ಬೆಟಗೇರಿ ಭಾಗದ ನಿವಾಸಿಗಳು ಅನ್ನೋದು ಗಾಬರಿ ತರಿಸಿದೆ.

ಬೆಟಗೇರಿ ಭಾಗದ ನಿವಾಸಿ 69 ವರ್ಷ ವಯಸ್ಸಿನ ಮಹಿಳೆ, ಮೇ 06 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಬೆಟಗೇರಿಯ ನಿವಾಸಿ 60 ವರ್ಷದ ಮಹಿಳೆ ಮೇ 12 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಬೆಟಗೇರಿಯ 67 ವರ್ಷದ ಮಹಿಳೆ ಮೇ 11 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಬೆಟಗೇರಿ ಭಾಗದ 75 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಮೇ 09 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹೇಳಿದ್ದಾರೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
167 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 280 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 13986 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1910 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 169 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಹರ್ತಿ ಬಳಿ ಭೀಕರ ಅಪಘಾತ; ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಇನ್ನೊಬ್ಬ ಗಾಯಗೊಂಡಿದ್ದು ಜಿಮ್ಸ್ ಗೆ ದಾಖಲಾಗಿದ್ದಾರೆ.

ಗದಗ ತಾಲೂಕಿನ ಹರ್ತಿ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಕಾರು ಅರ್ಧ ಮರದಲ್ಲಿಯೇ ಸಿಲುಕಿಕೊಂಡಿದ್ದು, ಚಾಲಕ ಮರದಡಿಯಲ್ಲಿಯೇ ಸಿಲುಕಿಕೊಂಡಿದ್ದಾನೆ. ಕಾರಲ್ಲಿದ್ದವರು ಹೊಲದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ನೆರದವರ ಕಣ್ಣಲ್ಲಿ ನೀರು ತರಿಸಿದೆ. ಕಾರಿನ ಕೆಲ ಪಾರ್ಟ್ಸ್ ತುಂಡು ತುಂಡಾಗಿ ಬಿದ್ದಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.

ಗದಗ ತಾಲೂಕಿನ ಲಿಂಗದಾಳದಿಂದ ಲಕ್ಷ್ಮೇಶ್ವರಕ್ಕೆ ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳುವಾಗ ಈ ದುರ್ಘಟನೆ ನೆಡದಿದೆ.

ಗಾಯಗೊಂಡ ಶಂಕ್ರಪ್ಪ ಎನ್ನುವಾತ ಗ್ರಾಮಸ್ಥರಿಗೆ ಲಿಂಗದಾಳದಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ವೀ ಅಂತ ಮಾಹಿತಿ ನೀಡಿದ್ದಾನೆ.

ಮೃತರು ನವಲಗುಂದ ತಾಲೂಕಿನ ಆರಟ್ಟಿ ಗ್ರಾಮಸ್ಥರು ಎನ್ನಲಾಗಿದೆ. ವೀರೇಶ(26), ಶೇಖಪ್ಪ(45), ಬಾಪೂಗೌಡ (25),ಸಾವಿತ್ರಿ(50) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದವರು.

ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದಾರೆ.

ಲಸಿಕೆ ಸಮಸ್ಯೆ – ಜನರಿಂದ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಲಸಿಕೆ ಅಭಾವ ತೀವ್ರಗೊಂಡಿದೆ. ಅಲ್ಲದೇ, ಮೊದಲ ಡೋಸ್ ಪಡೆದವರಿಗೂ ಲಸಿಕೆ ಸಿಗುತ್ತಿಲ್ಲ. ಇದರಿಂದ ಜನ ಪರದಾಡುತ್ತಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.
ನಗರದ ಕೆ.ಸಿ ಜನರಲ್ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ಜನರು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಲಸಿಕೆ ಪಡೆಯುವವರು ಕೋವಿನ್ ಜಾಲತಾಣದ ಮೂಲಕ ಹೆಸರು ನೊಂದಾಯಿಸೇಕು. ಆದರೆ, ದಾಖಲೆ ಪ್ರಕ್ರಿಯೆ ಮುಗಿಸಿದರೂ ಲಸಿಕೆ ಸಿಗುತ್ತಿಲ್ಲ. ಹಲವರು ಬೆಳಿಗ್ಗೆ 6ರಿಂದಲೇ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ, ಲಸಿಕೆ ಇಲ್ಲದೆ ಮರಳಿ ಹೋಗುತ್ತಿದ್ದಾರೆ.

ಜಿಲ್ಲಾ ಕೇಂದ್ರಗಳಲ್ಲಿಯೋ ಲಸಿಕೆಯ ಸಮಸ್ಯೆ ಎದುರಾಗುತ್ತಿದೆ. ಕಲಬುರಗಿ, ಕೋಲಾರ, ಮೈಸೂರು ಸೇರಿದಂತೆ ವಿವಧಡೆ ಅಭಾವ ತಲೆದೋರಿದೆ. ಎರಡನೇ ಡೋಸ್ ಅವಧಿ ಮುಗಿದರೂ ಅಂತಹ ವ್ಯಕ್ತಿಗಳಿಗೆ ಲಸಿಕೆ ಸಿಗುತತಿಲ್ಲ. ಎರಡನೇ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಬಂದರೂ ಮರಳಿ ಹೋಗುತ್ತಿದ್ದಾರೆ. ಆಸ್ಪತ್ರೆಗಳ ಮುಂದೆ ಸ್ಟಾಕ್ ಖಾಲಿ ಆಗಿದೆ ಎಂದು ಬೋರ್ಡ್ ಹಾಕಲಾಗಿದೆ. ಹೀಗಾಗಿ ಆಪ್ ನಲ್ಲಿ ರಿಜಿಸ್ಟ್ರಾರ್ ಆದರೂ ಯಾವುದೇ ಪ್ರಯೋಜನ ಇಲ್ಲ ಎಂದು ಜನರು ಮರಳಿ ಹೋಗುತ್ತಿದ್ದಾರೆ.

ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸೇರಿದಂತೆ ದೇಶದಲ್ಲಿ ಮೂರನೇ ಅಲೆಯನ್ನು ನಿಯಂತ್ರಿಸಲು ಕೂಡ ಲಸಿಕೆಯ ಪಾತ್ರ ಸಾಕಷ್ಟಿದೆ. ಹೀಗಾಗಿ ಸಕಾಲದಲ್ಲಿ ಜನರಿಗೆ ಲಸಿಕೆ ತಲುಪಿಸಬೇಕು ಎನ್ನುವುದು ಎಲ್ಲರ ಬಯಕೆಯಾಗಿದೆ.

ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಾರಂತೆ ಬಿಗ್ ಬಾಸ್ ಸ್ಪರ್ಧಿಗಳು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸದ್ಯ ಅಂತ್ಯ ಕಂಡಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವಾಹಿನಿಯು ಬಿಗ್ ಬಾಸ್ ನ್ನು ಅರ್ಧಕ್ಕೆ ನಿಲ್ಲಿಸಿದೆ. ಸದ್ಯ ಮನೆಯಿಂದ ಅರ್ಧಕ್ಕೆ ಹೊರ ಬಂದಿರುವ ಸ್ಪರ್ಧಿಗಳು ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ.

ಬಿಗ್ ಬಾಸ್ ಮನೆ ಭಾನುವಾರದಂದು ಬಾಗಿಲು ಹಾಕಿಕೊಂಡಿದೆ. ಅದರ ಕೊನೆಯ ಸಂಚಿಕೆ ಇಂದು ಪ್ರಸಾರವಾಗಲಿದೆ. ಬಿಗ್ ಬಾಸ್ ಕೊನೆಯಾಗುವ ವಿಷಯ ತಿಳಿದುಕೊಂಡಿರುವ ಸ್ಪರ್ಧಿಗಳು, ಹೊರಗಡೆ ಕೊರೊನಾದಿಂದ ಜನ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆಯೂ ತಿಳಿದುಕೊಂಡಿದ್ದಾರೆ. ನಂತರ ಪ್ರತಿದಿನ ಸುರಕ್ಷಿತವಾಗಿ ನೋಡಿಕೊಂಡಿದ್ದಕ್ಕೆ ಬಿಗ್ ಬಾಸ್ ಗೆ ಧನ್ಯವಾದ ತಿಳಿಸಿದ್ದಾರೆ.

ಅಲ್ಲದೇ, ಮನೆಯಿಂದ ಹೊರ ಹೋದ ನಂತರ ಕೊರೊನಾ ವಾರಿಯರ್ಸ್ ಆಗಿ ತಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದು ಸ್ಪರ್ಧಿಗಳು ಹೇಳಿದ್ದಾರೆ. ಇದರೊಂದಿಗೆ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ. ಭಾರವಾದ ಹೃದಯದಿಂದಲೇ ಸ್ಪರ್ಧಿಗಳು ಮನೆಯಿಂದ ಹೊರ ನಡೆದಿದ್ದಾರೆ.

ಡಿಸಿಎಂ ಲಕ್ಷ್ಣ ಸವದಿ ಅವರ ಸಹೋದರನ ಮಗ ಸೋಂಕಿಗೆ ಬಲಿ!

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ರಾಜ್ಯದಲ್ಲಿ ಮಹಾಮಾರಿ ತಾಂಡವಾಡುತ್ತಿದ್ದು, ಪ್ರತಿ ದಿನ ಅನೇಕ ಜನರು ಬಲಿಯಾಗುತ್ತಿದ್ದಾರೆ. ಸದ್ಯ ಡಿಸಿಎಂ ಲಕ್ಷ್ಮಣ್ ಸವದಿ ಅವರ ಅಣ್ಣನ ಮಗ ಕೂಡ ಮಾಹಾಮಾರಿಗೆ ಬಲಿಯಾಗಿದ್ದಾರೆ.
ವಿನೋದ ಪರಪ್ಪ ಸವದಿ(36) ಮಹಾಮಾರಿಗೆ ಬಲಿಯಾದ ದುರ್ದೈವಿ. ಇವರು ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿರುವ ಪರಪ್ಪ ಸವದಿ ಅವರ ಪುತ್ರರಾಗಿದ್ದಾರೆ. ಸದ್ಯ ಇವರು ಪುತ್ರನ ವಿಯೋಗದಿಂದ ಸಂಕಟ ಪಡುತ್ತಿದ್ದಾರೆ.

ಕೊರೊನಾ ಅಂಟಿಕೊಂಡ ಹಿನ್ನೆಲೆಯಲ್ಲಿ ವಿನೋದ ಅವರು ಕಳೆದ ಒಂದು ವಾರದಿಂದ ಅಥಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸಾವಿನ ಸಂಖ್ಯೆಯಲ್ಲಿ ದೇಶದಲ್ಲಿ ದಾಖಲೆ ಬರೆದ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದಲ್ಲಿ ಮಹಾಮಾರಿ 2ನೇ ಅಲೆಯ ಆರ್ಭಟ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,48,421 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಅವಧಿಯಲ್ಲಿ 4,205 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,33,40,938ಕ್ಕೆ ಏರಿಕೆಯಾಗಿದೆ. ಅಲ್ಲದೇ, ಒಟ್ಟು ಸಾವನ್ನಪ್ಪಿದವರ ಸಂಖ್ಯೆ 2,54,197ಕ್ಕೆ ತಲುಪಿದೆ. ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 37,04,099ಕ್ಕೆ ಏರಿಕೆಯಾಗಿದೆ.

ಅಲ್ಲದೇ, ಮಹಮಾರಿಯಿಂದ ಕಳೆದ 24 ಗಂಟೆಗಳಲ್ಲಿ 3,55,338 ಜನ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಚೇತರಿಸಿಕೊಂಡವರ ಸಂಖ್ಯೆ 1,93,82,642ಕ್ಕೆ ತಲುಪಿದೆ.

ಅರಬ್ಬಿ ಸಮುದ್ರ, ರಾಜ್ಯದಲ್ಲಿ ಸುರಿಯಲಿದೆ ಮಳೆ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಜೋರಾಗಲಿದು, ನಾಲ್ಕು ರಾಜ್ಯಗಳಲ್ಲಿ ಮೇ. 14 ಹಾಗೂ 15ರಂದು ಭರ್ಜರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಲಕ್ಷದ್ವೀಪಗಳಲ್ಲಿ ಉತ್ತಮವಾಗಿ ಸುರಿಯಲಿದೆ. ಮೇ. 16ರಂದು ಚಂಡಮಾರುತ ಪ್ರಭಾವ ಬೀರಲಿದೆ. ಪ್ರಾರಂಭದಲ್ಲಿ ಇದು ಪಶ್ಚಿಮ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದೆ. ಇದಕ್ಕೆ ‘ತೌಕ್ಟೇ’ ಎಂದು ಹೆಸರಿಡಲಾಗಿದೆ.

ಮೇ. 14ರ ಬೆಳಿಗ್ಗೆ ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಹಾಗೂ ಪಕ್ಕದ ಲಕ್ಷದ್ವೀಪ ಪ್ರದೇಶದಲ್ಲಿ ಅಲ್ಲದೇ, ಉತ್ತರ ಹಾಗೂ ವಾಯವ್ಯ ದಿಕ್ಕಿಗೆ ಚಂಡಮಾರುತ ಚಲಿಸುವ ಸಾಧ್ಯತೆ ಇದೆ. ಮೇ 15ರ ಸುಮಾರಿಗೆ ಒತ್ತಡ ತೀವ್ರಗೊಳ್ಳುವ ಸಾಧ್ಯತೆ ಇದೆ. ಮೇ 16ರ ಸುಮಾರಿಗೆ ಅರಬ್ಬಿ ಸಮುದ್ರದ ಪೂರ್ವ ಮಧ್ಯ ಭಾಗದಲ್ಲಿ ಚಂಡಮಾರುತದ ಬಿರುಗಾಳಿ ತೀವ್ರವಾಗಬಹುದು.

ಉತ್ತರ – ವಾಯವ್ಯ ದಿಕ್ಕಿನಲ್ಲಿ ಸಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಗುರುವಾರದಿಂದ ಸಮುದ್ರದ ಸ್ಥಿತಿ ಒರಟಾಗಲಿದೆ. ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಕೂಡ ಎಚ್ಚರಿಕೆ ನೀಡಲಾಗಿದೆ.

ಇಡೀ ಗ್ರಾಮವನ್ನೇ ಆವರಿಸಿದೆ ಕೊರೊನಾ? ಪ್ರತಿಯೊಂದು ಮನೆಯಲ್ಲಿ ಇಬ್ಬರಾದರೂ ಜ್ವರದಿಂದ ಬಳಲುತ್ತಿದ್ದಾರೆ!

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾ ಆಲೂರು ಗ್ರಾಮದಲ್ಲಿ ಮಹಾಮಾರಿಯ ಆತಂಕ ಮನೆ ಮಾಡುತ್ತಿದೆ. ಇಲ್ಲಿ ಊರಿಗೆ ಊರೇ ರೋಗಗ್ರಸ್ಥವಾಗಿದೆ.
ಈ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಂದಿಬ್ಬರು ಜನರಾದರೂ ಜ್ವರದಿಂದ ಬಳಲುತ್ತಿದ್ದಾರೆ. ಈ ಗ್ರಾಮದಲ್ಲಿ 9 ಸಾವಿರ ಜನ ಸಂಖ್ಯೆ ಇದೆ. ಸದ್ಯ ಇಲ್ಲಿ 700ಕ್ಕೂ ಹೆಚ್ಚು ಜನರಲ್ಲಿ ಈ ನಿಗೂಢ ಜ್ವರ ಕಾಣಿಸಿಕೊಳ್ಳುತ್ತಿದೆ ಎಂಬ ಆತಂಕದ ಸಂಗತಿ ಬಹಿರಂಗವಾಗಿದೆ.

ಈ ಗ್ರಾಮದ ಜನರು ಸದ್ಯ ಕೊರೊನಾ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹಲವರು ಏನೂ ಆಗಲ್ಲ ಎಂಬ ಧೈರ್ಯದ ಮಾತುಗಳನ್ನು ಹೇಳುತ್ತಿದ್ದಾರೆಯಾದರೂ ಭಯ ಇಡೀ ಊರನ್ನೇ ಆವರಿಸಿ ಬಿಟ್ಟಿದೆ.
ಈಗಾಗಲೇ ಈ ನಿಗೂಢ ಜ್ವರಕ್ಕೆ ಮೂರು ದಿನಗಳ ಅಂತರದಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ‌ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಕೊರೊನಾ ಲಾಕ್ ಡೌನ್ ನಿಂದಾಗಿ ಬೆಂಗಳೂರಿನಿಂದ ಗ್ರಾಮಕ್ಕೆ ಹಲವು ಕಾರ್ಮಿಕರು ಆಗಮಿಸಿದ್ದರು. ಅವರಿಂದಲೇ ಈ ಗ್ರಾಮದೊಳಗೆ ಕೊರೊನಾ ಹೊಕ್ಕಿತೇ ಎಂಬ ಆತಂಕ ಮನೆ ಮಾಡುತ್ತಿದೆ.
ಲಾಕ್ ಡೌನ್ ಹಾಗೂ ಜನತಾ ಕರ್ಫ್ಯೂ ಇದ್ದ ಕಾರಣ ಇಲ್ಲಿಯ ಗ್ರಾಮಸ್ಥರು ಆಸ್ಪತ್ರೆಗೆ ಹೋಗಲು ಸಾಧ್ಯವಾಗಿಲ್ಲ. ಆದರೆ, ದಿನದಿಂದ ದಿನಕ್ಕೆ ಮಾತ್ರ ಇಡೀ ಗ್ರಾಮ ಜ್ವರದಿಂದ ಆವರಿಸುತ್ತಿದೆ.

ದಿನದಿಂದ ದಿನಕ್ಕೆ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಈ ಗ್ರಾಮದ ಜನರು ಕೈ ಮುಗಿದು ವೈದ್ಯರಿಗೆ ಮನವಿ ಮಾಡುತ್ತಿದ್ದಾರೆ. ಕೂಡಲೇ ಬಂದು ಇಡೀ ಗ್ರಾಮವನ್ನೇ ಚೆಕ್ ಮಾಡಿ. ಚಿಕಿತ್ಸೆ ಕೊಡಿ ಎಂದು ಗ್ರಾಮಸ್ಥರು ಅಂಗಲಾಚುತ್ತಿದ್ದಾರೆ.

error: Content is protected !!