Home Blog Page 3055

240 ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಲಸಿಕೆ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವವರನ್ನು ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಆಧ್ಯತೆ ಮೇರೆಗೆ ಕೋವಿಡ್ ಲಸಿಕೆಯನ್ನು ನೀಡಲು ಅನುಮತಿಸಿದೆ. ಈ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನಿರ್ದೇಶನದ ಮೇರೆಗೆ ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

240 ಮಾಧ್ಯಮ ಪ್ರತಿನಿಧಿಗಳು ಲಸಿಕೆಯನ್ನು ಪಡೆದುಕೊಂಡರು.

18 ರಿಂದ 45 ವಯೋಮಾನದ ಒಳಗಿನ 196 ಹಾಗೂ 45 ವಯೋಮಾನ ಮೇಲ್ಪಟ್ಟ 44 ಜನರಿಗೆ ಅಸ್ಟ್ರಜನಿಕಾ ಕೋವಿಶೀಲ್ಡ್ ಲಸಿಕೆ ನೀಡಲಾಯಿತು. ವಿದ್ಯುನ್ಮಾನ ಮಾಧ್ಯಮ ಕೆಲಸ ನಿರ್ವಹಿಸುವ ವರದಿಗಾರರು, ವಿಡಿಯೋ ಜರ್ನಲಿಸ್ಟ್, ಮುದ್ರಣ ಮಾಧ್ಯಮದ ವರದಿಗಾರರು, ಉಪಸ‌ಂಪಾದಕರು, ಪೋಟೊ ಜರ್ನಲಿಸ್ಟ್ ಹಾಗೂ ವಾರ್ತಾ ಇಲಾಖೆ ಸಿಬ್ಬಂದಿ ಲಸಿಕೆ ಪಡೆದುಕೊಂಡರು.

ಚಿಟಗುಪ್ಪಿ ವೈದ್ಯಾಧಿಕಾರಿಗಳಾದ ಶ್ರೀಧರ ದಂಡಪ್ಪನವರ‌ ಹಾಗೂ ಪ್ರಕಾಶ್ ನರಗುಂದ ಲಿಸಿಕೆ ಅಭಿಯಾನದ ಮೇಲು ಉಸ್ತುವಾರಿ ವಹಿಸಿದ್ದರು. ವೈದ್ಯಕೀಯ ಸಿಬ್ಬಂದಿಗಳಾದ ಆಶಾ ಯಡಳ್ಳಿ, ಕಾವ್ಯ ಗೊರವನಗೋಳ್, ಪ್ರವೀಣ್ ಎಸ್.ಎಮ್. ಮಲ್ಲಿಕಾರ್ಜುನ ಎನ್.ಎಮ್, ಪವಿತ್ರ ಎಸ್, ಶ್ವೇತಾ, ಲಸಿಕೆ ಕಾರ್ಯವನ್ನು ನಿರ್ವಹಿಸಿದರು.

ರಾಜ್ಯದಲ್ಲಿ ಇಂದು 40 ಸಾವಿರದ ಗಡಿಗೆ ಬಂದು ನಿಂತ ಸೋಂಕಿತರ ಸಂಖ್ಯೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಇಂದು ಮಹಾಮಾರಿಯ ಮರಣ ಮೃದಂಗ ಬಾರಿಸಿದೆ. ಮಹಾಮಾರಿಗೆ ಸೋಮವಾರ ಒಂದೇ ದಿನ ಬರೋಬ್ಬರಿ 480 ಜನ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 19,852ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 39,510 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ
20,13,193ಕ್ಕೆ ಏರಿಕೆ ಕಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಇಂದು 15,879 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 9,83,519ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 259 ಜನ ಬಲಿಯಾಗಿದ್ದಾರೆ.

ಕೊರೊನಾ; ಸೋಂಕಿನ ಸ್ಫೋಟ; 405 ಜನರಿಗೆ ಸೋಂಕು; ಮೂವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 11 ಮಂಗಳವಾರ ಸೋಂಕಿನ ಸ್ಫೋಟ ಮುಂದುವರೆದಿದೆ. ಕಳೆದ ಒಂದು ವಾರದಿಂದ ಸೋಂಕು ಪ್ರಮಾಣದಲ್ಲಿ ಹೆಚ್ಚಳವಾಗುತ್ತಾ ಸಾಗುತ್ತಿದೆ. ಮತ್ತೆ ಇಂದು
ಕೋವಿಡ್ ನಿಂದ ಮೂರು ಜನ ಮಹಿಳೆಯರು ಮೃತಪಟ್ಟಿದ್ದಾರೆ.

ಇಂದಿನ 405 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 15532 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -237, ಮುಂಡರಗಿ-54, ನರಗುಂದ-25, ರೋಣ-33, ಶಿರಹಟ್ಟಿ-48 ಹೊರಜಿಲ್ಲೆಯ-08 ಸೇರಿದಂತೆ 405 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದ ಮಾಹಿತಿ ಅಂತೆ ಮೂವರು ಮೃತಪಟ್ಟಿದ್ದಾರೆ.

ಬೆಟಗೇರಿ ಭಾಗದ ನಿವಾಸಿ 83 ವರ್ಷ ವಯಸ್ಸಿನ ಮಹಿಳೆ, ಮೇ 09 ರಂದು ಮೃತಪಟ್ಟಿದ್ದಾರೆ.

ಬೆಟಗೇರಿಯ ನಿವಾಸಿ 55 ವರ್ಷದ ಮಹಿಳೆ ಮೇ 10ಕ್ಕೆ ಮೃತಪಟ್ಟಿದ್ದಾರೆ.

ಬೆಟಗೇರಿಯ 40 ವರ್ಷದ ಮಹಿಳೆ ಮೇ 09 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹೇಳಿದ್ದಾರೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
163 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 212 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 13629 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 1740 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 193 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಕೋವಿಡ್ ನಿಯಮ ಉಲ್ಲಂಘನೆ; ಇಬ್ಬರು ವರ್ತಕರ ಮೇಲೆ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

ಮಹಾಮಾರಿ ಸೋಂಕು ನಿಯಂತ್ರಣಕ್ಕಾಗಿ ಸರಕಾರ ಹತ್ತು ಹಲವು ನಿರ್ಬಂಧಗಳನ್ನು ಹೇರಿದರೂ ಜನರು ಮಾತ್ರ ಸುದಾರಿಸುತ್ತಿಲ್ಲ. ಅದರಲ್ಲೂ ದುಡ್ಡಿನ ಆಸೆಗೆ ಬಿದ್ದಿರುವ ವರ್ತಕರದಂತೂ ಹೇಳತೀರದಾಗಿದೆ. ಯಾವುದೇ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಮಾತ್ರ ಕೊಡಲಾಗಿದೆ. ಆದರೆ ಬಟ್ಟೆಗಳನ್ನು ಮಾರಾಟ ಮಾಡಲು ಅವಕಾಶ ಇಲ್ಲ. ಆದರೂ ಬೆಟಗೇರಿಯ ರಜಪೂತಗಲ್ಲಿಯಲ್ಲಿ ಅಂಗಡಿ ತೆರದು ಭರ್ಜರಿ ವ್ಯಾಪಾರ ಮಾಡುತ್ತಿದ್ದ ಎಸ್ ಟಿ ವನ್ನಾಲ್ ಬಟ್ಟೆ ಅಂಗಡಿಯ ಮೇಲೆ ಪೊಲೀಸರು ದಾಳಿ ಮಾಡಿ ಮಾಲೀಕ ಹಾಗೂ ಮಗನ ಮೇಲೆ ಸೋಂಕು ಹರಡಲು ಕಾರಣವಾದ ಕೇಸ್ ಜಡಿದಿದ್ದಾರೆ.

ರಜಪೂತಗಲ್ಲಿಯ ಬಟ್ಟೆ ಅಂಗಡಿಯ ಮಾಲೀಕ ಶಿವರಾಮ್ ತಪ್ಪಣ್ಣ ವನ್ನಾಲ್ ಹಾಗೂ ಮಗ ನಾರಾಯಣ ಶಿವರಾಮ ವನ್ನಾಲ್ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಸರಕಾರದ ಆದೇಶ ಉಲ್ಲಂಘಿಸಿದ್ದು ಅಲ್ಲದೇ ಜನರು ಮಾಸ್ಕ್, ಸಾಮಾಜಿಕ ಅಂತರ ಮರೆತು ವ್ಯಾಪಾರದಲ್ಲಿ ತೊಡಗಿದ್ದು ಸೋಂಕು ಹರಡಲು ಅವಕಾಶ ಮಾಡಿಕೊಡಲಾಗಿತ್ತು.

ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ಮಾಹಿತಿ ನೀಡಿದ್ದಾರೆ.

ಪೊಲೀಸರ ದಾಳಿ; ಜೂಜಾಟದಲ್ಲಿ ತೊಡಗಿದ್ದ ಆರು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್ ನಿಯಮಾವಳಿ ಮೀರಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಆರು ಜನರ ಮೇಲೆ ಪೊಲೀಸರು ದಾಳಿ ಮಾಡಿ ಬಂಧಿಸಿದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹೈತಾಪೂರ‌ ಗ್ರಾಮದಲ್ಲಿ ನಡೆದಿದೆ.

ಹೈತಾಪೂರ ಗ್ರಾಮದ ಮೈಲಾಂಬಿಕಾ ದೇವಸ್ಥಾನದ ಮುಂದೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಮಂಜುನಾಥ್ ಬಸಪ್ಪ ಗೋಡಿ, ಬಸಪ್ಪ ಹೊನಕೇರಪ್ಪ ಪೂಜಾರ, ನಿಂಗನಗೌಡ್ ವಿರುಪಾಕ್ಷಗೌಡ್ ಪಾಟೀಲ್, ರಾಯನಗೌಡ್ ಈಶ್ವರಗೌಡ್ ಪಾಟೀಲ್, ನಾಗಪ್ಪ ಮಹಾದೇವಪ್ಪ ಪೂಜಾರ, ಲಕ್ಷ್ಮಣ್ಣ ಭರಮಪ್ಪ ಪೂಜಾರ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ ನಗದು 920 ರೂ, ಗಳನ್ನು ಜಪ್ತಿ ಮಾಡಲಾಗಿದೆ. ಮುಂಡರಗಿ ಪಿಎಸ್ಐ ನೂರಜಾನ್ ಸಬರ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.

ಮುಂಡರಗಿ ಠಾಣೆಯಲ್ಲಿ ಜೂಜಾಟ ಹಾಗೂ ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಪ್ರಕರಣ ದಾಖಲಾಗಿದೆ.

ಪತ್ನಿಯೊಂದಿಗೆ ಸಲುಗೆ; ಕೊಡಲಿಯಿಂದ ಹೊಡೆದು ಕೊಲೆಗೆ ಯತ್ನ

ವಿಜಯಸಾಕ್ಷಿ ಸುದ್ದಿ, ಗದಗ

ತನ್ನ ಪತ್ನಿಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ ಯುವಕನನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಘಟನೆ ಗದಗ ತಾಲೂಕಿನ ಗಾವರವಾಡ ಗ್ರಾಮದಲ್ಲಿ ನಡೆದಿದೆ.

ಮಲ್ಲಯ್ಯ ಮಲ್ಲಿಕಾರ್ಜುನಯ್ಯ ಕುಮಾರಗೊಪ್ಪ ಎಂಬ ಯುವಕನೇ ಕೊಲೆ ಯತ್ನದಲ್ಲಿ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿ ಮಲ್ಲಪ್ಪ ಚನ್ನಪ್ಪ ಅರಳಿ ಎಂಬಾತನೇ ಕೊಲೆಗೆ ಯತ್ನಿಸಿದಾತ.

ಗಾಯಾಳು ಮಲ್ಲಯ್ಯ ಎಂದಿನಂತೆ ತನ್ನ ಮನೆಯ ಮೇಲೆ ಮಲಗಿದ್ದಾಗ ಶನಿವಾರ ಬೆಳಗಿನ ಜಾವ ಆರೋಪಿ ಮಲ್ಲಪ್ಪ ಕೊಡಲಿಯಿಂದ ಹೊಡೆದಿದ್ದಾನೆ. ಸ್ವಲ್ಪದರಲ್ಲಿ ಗಾಯಾಳು ಮಲ್ಲಯ್ಯ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಟಗೇರಿ ಪೊಲೀಸರ ದಾಳಿ; 7 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ನಿತ್ಯವೂ ದುಡಿದು ಬದುಕೋ ಜನರೆಲ್ಲಾ ಒಂದಾಗಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದಾಗ ಬೆಟಗೇರಿ ಪೊಲೀಸರು ದಾಳಿ ಬಂಧಿಸಿದ್ದಾರೆ.

ಗದಗ ತಾಲೂಕಿನ ನಾಗಸಮುದ್ರ ಗ್ರಾಮದ ಬನ್ನಿಕೊಪ್ಪ ರಸ್ತೆಯಲ್ಲಿ ಇವರೆಲ್ಲರೂ ಇಸ್ಪೀಟು ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇಲೆ ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ.

ಬಂಧಿತರು ಪೊಲೀಸರ ಪ್ರಕಾರ ಡ್ರೈವರ್ ಕೆಲಸ ಮಾಡೋ ಈಶಪ್ಪ ಗೂಳಪ್ಪ ಭಾವಿ, ಗೌಂಡಿ ಕೆಲಸಗಾರ ಭವಾನಿಸಾಬ್ ಅಲ್ಲಾಸಾಬ್ ಹೊಸಳ್ಳಿ, ಕೂಲಿ ಕೆಲಸ ಮಾಡುವಾತ ಶರೀಫಸಾಬ್ ಅಲ್ಲಾಸಾಬ್ ನದಾಫ್, ಕೂಲಿ ಕೆಲಸ ಮಾಡುವಾತ ಬಸವರಾಜ್ ತೀರಬಸಪ್ಪ ಕಟಗಿ, ಗೌಂಡಿ ಕೆಲಸಗಾರ ಬಾಳನಗೌಡ್ ಹನಮಂತಗೌಡ್ ಮರಿಗೌಡ್ರ, ಹಮಾಲಿ ಮಾಡುವ
ರಮೇಶ್ ಬಸಪ್ಪ ಕೊಳ್ಳಿ, ಕೂಲಿ ಕೆಲಸ ಮಾಡುವ ಕುಬೇರಪ್ಪ ಫಕ್ಕೀರಪ್ಪ ದೇಸುಣಕಿ ಎನ್ನಲಾಗಿದೆ.

ಬಂಧಿತರಿಂದ 4000 ಸಾವಿರ ರೂ,ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಟಗೇರಿ ಠಾಣೆಯಲ್ಲಿ ಜೂಜಾಟದ ಪ್ರಕರಣ ಮಾತ್ರ ದಾಖಲು ಮಾಡಿಕೊಳ್ಳಲಾಗಿದೆ. ಇಲ್ಲಿ ಕೋವಿಡ್ ನಿಯಮಾವಳಿ ಉಲ್ಲಂಘನೆ ಆಗರಲಿಕ್ಕಿಲ್ಲ.

ಅಂದರ್-ಬಾಹರ್ ಜೂಜಾಟ; 12 ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

12 ಜನರ ಗುಂಪೊಂದು ಊರ ದ್ಯಾಮವ್ವನ ಗುಡಿ ಎದುರಿಗೆ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಲಕ್ಷ್ಮೇಶ್ವರ ಪೊಲೀಸರು ದಾಳಿ ಬಂಧಿಸಲಾಗಿದೆ.

ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮದ ದ್ಯಾಮವ್ವನ ಗುಡಿ ಎದುರಿಗೆ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಗ್ರಾಮದ ಪರಸಪ್ಪ ಹನಮಂತಪ್ಪ ಹುಣಸಿಮರದ, ಮಲ್ಲೇಶ್ ಈರಪ್ಪ ಕುಮಸಿ, ಬಸವಂತಪ್ಪ ಮಹಾದೇವಪ್ಪ ಕಾಳೆ, ರಾಮಪ್ಪ ಹನುಮಪ್ಪ ಹುಣಸಿಮರದ, ಮಹಾದೇವಪ್ಪ ಲಕ್ಷ್ಮಪ್ಪ ಪೂಜಾರ್, ನಿಂಗಪ್ಪ ಮೇಲಗಿರಿಯಪ್ಪ ಬನ್ನಿಕೊಪ್ಪ , ಶಿವಾನಂದ ಮಹಾದೇವಪ್ಪ ಮಾಯಣ್ಣವರ, ಈಶ್ವರಗೌಡ ಹನುಮಂತಗೌಡ ಪಾಟೀಲ್, ಯಲ್ಪಪ್ಪ ಬಸಪ್ಪ ಕಾಳೆ, ಬುಡ್ಡೆಸಾಬ್ ಇಮಾಮಸಾಬ್ ತೆಗ್ಗಿನಮನಿ, ಮಾಬುಸಾಬ ಮರ್ದಾನಸಾಬ್ ಗದಗಿನ, ಆನಂದ ಶಿವಪ್ಪ ಗೌಳಿ ಎಂಬುವವರನ್ನು ಬಂಧಿಸಲಾಗಿದೆ.

ಲಕ್ಷ್ಮೇಶ್ವರ ಪಿಎಸ್ಐ ಎಸ್ ವೈ ಲೋಹಾರ ಹಾಗೂ ಸಿಬ್ಬಂದಿ ಈ ದಾಳಿ ಮಾಡಿದ್ದರು. ಈ ಪ್ರಕರಣದಲ್ಲಿ ಯಾವುದೇ ಕೋವಿಡ್ ನಿಯಮಾವಳಿ ಉಲ್ಲಂಘನೆ ಆದ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋವಿಡ್ ನಿಯಮ ಉಲ್ಲಂಘಿಸಿ ಬಟ್ಟೆ ವ್ಯಾಪಾರ; ಪ್ರಕರಣ ದಾಖಲು

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಸೋಂಕು ತಡೆಗಟ್ಟಲು ಸರಕಾರ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಕೇವಲ ಅಗತ್ಯದ ವಸ್ತುಗಳ ಮಾರಾಟ ಹಾಗೂ ಖರೀದಿಸಲು ಮಾತ್ರ ಅವಕಾಶ ಮಾಡಿಕೊಟ್ಟಿದೆ. ಆದರೆ ಕೋವಿಡ್ ನಿಯಮಾವಳಿ ಉಲ್ಲಂಘಿಸಿದ ಬಟ್ಟೆ ವ್ಯಾಪಾರಿಯೊಬ್ಬನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಪವನಪುತ್ರ ಶೋ ರೂಮ್ ಮಾಲೀಕ ಹೇಮರಾಜ್ ಅಲಿಯಾಸ್ ಚಂದ್ರು ಕೀ‌ಮರಾಜ್ ರಾಜಪುರೋಹಿತ ಎಂಬಾತ ತನ್ನ ಅಂಗಡಿ ತೆರದು ವ್ಯಾಪಾರ ಮಾಡುತ್ತಿದ್ದಾಗ ನರೇಗಲ್ ಠಾಣೆಯ ಪಿಎಸ್ಐ ರಾಘವೇಂದ್ರ ಎಸ್ ಹಾಗೂ ಸಿಬ್ಬಂದಿ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ; 4 ಜನರ ಬಂಧನ, 50 ಸಾವಿರ ರೂ ವಶ

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್ ನಿಯಮಾವಳಿ ಉಲ್ಲಂಘಿಸಿ ನಡೆಯುತ್ತಿದ್ದ ಇಸ್ಪೀಟು ಜೂಜಾಟದ ಅಡ್ಡೆಯ ಮೇಲೆ ಶಿರಹಟ್ಟಿ
ಪೊಲೀಸರು ದಾಳಿ ಮಾಡಿ 4 ಜನರನ್ನು ಬಂಧಿಸಿದ್ದು, ನಾಲ್ಕು ಜನ ಪರಾರಿಯಾಗಿದ್ದಾರೆ.

ಶಿರಹಟ್ಟಿ ತಾಲೂಕಿನ ಕೆರಹಳ್ಳಿ ತಾಂಡದ ಬಸವಣ್ಣ ದೇವಸ್ಥಾನದ ಮುಂದೆ ಮಾಸ್ಕ್, ಸಾಮಾಜಿಕ ಅಂತರ ಮರೆತು ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಆರೋಪಿಗಳು ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದರು.

ಶಿರಹಟ್ಟಿ ಠಾಣೆಯ ಪಿಎಸ್ಐ ನವೀನ ಜಕ್ಕಲಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.

ಜೂಜಾಟದಲ್ಲಿ ತೊಡಗಿದ್ದ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದ ಯಲ್ಲಪ್ಪ ಬಸಪ್ಪ ಜೀವಿ, ಮುಂಡರಗಿಯ ರಾಜೇಸಾಬ್ ಸುಭಾನಸಾಬ್ ಡಂಬಳ, ಮುರಡಿತಾಂಡಾದ ಚನ್ನಪ್ಪ ದಾವಜಪ್ಪ ರಾಥೋಡ್, ಕೃಷ್ಣ ರಾಮಪ್ಪ ಅರ್ಕಸಾಲಿ, ಬಾಗೇವಾಡಿಯ ಚಿದಾನಂದ ಹಡಪದ, ಹಾಗೂ ಕೆರಹಳ್ಳ ತಾಂಡಾದ ಸುನಿಲ್ ಚಂದ್ರಪ್ಪ ಲಮಾಣಿ, ಕುಮಾರ್ ಶಿವಪ್ಪ ಲಮಾಣಿ, ಮಹಾಂತೇಶ್ ಲಮಾಣಿ ಇವರಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಉಳಿದ ನಾಲ್ವರು ಪೊಲೀಸರ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.

ಜೂಜಾಟ ಹಾಗೂ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣ ದಾಖಲಾಗಿದೆ.

error: Content is protected !!