Home Blog Page 3056

ವಿಜಯ್ ದೇವರಕೊಂಡ ಜೊತೆ ತೆರೆಹಂಚಿಕೊಳ್ಳಲಿರುವ ಕತ್ರಿನಾ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ದೇವರಕೊಂಡ ಅವರು ಬಾಲಿವುಡ್ ಬೆಡಗಿಯೊಂದಿಗೆ ರೋಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ದೇವರಕೊಂಡ ಸದ್ಯ ಲೈಗರ್ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಸದ್ಯ ಈ ಚಿತ್ರದ ಮೇಲೆ ಹೆಚ್ಚಿನ ನಿಗಾ ಇಟ್ಟುಕೊಂಡಿದ್ದಾರೆ. ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಲೈಗರ್ ಚಿತ್ರ ಮೂಡಿ ಬಂದಿದೆ.

ಇತ್ತೀಚಿಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿರುವ ವಿಜಯ್, ಅಭಿಮಾನಿಗಳಿಗೆ ಲೈಗರ್ ಟೀಸರ್ ಗಿಫ್ಟ್ ನೀಡಲಿದ್ದಾರೆ ಎಂದೇ ಎಲ್ಲ ಅಭಿಮಾನಿಗಳು ಭಾವಿಸಿದ್ದರು. ಆದರೆ, ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಟೀಸರ್ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ.
ಇದರ ಮಧ್ಯೆ ವಿಜಯ್ ಅವರ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ಮತ್ತೊಂದು ಪ್ಯಾನ್ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

ನಿರ್ದೇಶಕ ಕೊರಟಾಲ ಶಿವ ಅವರ ಮುಂದಿನ ಸಿನಿಮಾದಲ್ಲಿ ವಿಜಯ್ ನಾಯಕನಾಗಿ ಮಿಂಚಲಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರದಾಡುತ್ತಿದೆ. ಬಿಗ್ ಬಜೆಟ್ ನಲ್ಲಿ ಸಿನಿಮಾ ತಯಾರಾಗಲಿದೆ.

ವಿಜಯ್ ಮತ್ತು ಕತ್ರಿನಾ ಕೈಫ್ ಒಂದಾಗಲಿದ್ದಾರೆ ಎಂಬ ಸುದ್ದಿ ಸದ್ಯ ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸುತ್ತಿದೆ. ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಲೈಗರ್ ಸಿನಿಮಾ ಮುಗಿಯುತ್ತಿದ್ದಂತೆ ವಿಜಯ್, ಕೊರಟಾಲ ಶಿವ ಜೊತೆ ಹೊಸ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ಇನ್ನೊಂದೆಡೆ ಕತ್ರಿನಾ ಕೈಫ್ ಕೂಡ ಹಲವು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ.

ಪವಿತ್ರ ಗಂಗೆಯಲ್ಲಿ ತೇಲಿ ಬರುತ್ತಿದೆ ಹೆಣಗಳ ರಾಶಿ!

ವಿಜಯಸಾಕ್ಷಿ ಸುದ್ದಿ, ಪಟನಾ

ದೇಶದಲ್ಲಿ ಕೊರೊನಾದಿಂದಾಗಿ ಸೋಂಕಿತರ ಅಂತ್ಯ ಸಂಸ್ಕಾರಕ್ಕಾಗಿ ದಿನಪೂರ್ತಿ ಕಾಯಬೇಕಾದ ಪರಿಸ್ಥಿತಿ ಬಂದೋದಗಿದೆ. ಇಂತಹ ಪರಿಸ್ಥಿತಿಯ ನಡುವೆಯೇ ಗಂಗಾ ನದಿಯಲ್ಲಿ ಹೆಣದ ರಾಶಿಗಳು ಹರಿದು ಬರುತ್ತಿದ್ದ ಆತಂಕ ಮನೆ ಮಾಡುತ್ತಿದೆ.
ಗಂಗಾ ನದಿಯಲ್ಲಿ 150ಕ್ಕೂ ಹೆಚ್ಚು ಮೃತದೇಹಗಳ ರಾಶಿ ಪತ್ತೆಯಾಗಿದೆ.

ಬಿಹಾರದ ಬಕ್ಸಾರ್‌ ಜಿಲ್ಲೆಯ ಚೌಸಾ ಗ್ರಾಮದ ಹತ್ತಿರದ ಗಂಗಾ ಮಹಾದೇವ್‌ ಘಾಟ್‌ ಬಳಿ ನೂರಾರು ಹೆಣಗಳು ತೇಲಿಬಂದಿದ್ದು, ತೀರ ಸೇರಿವೆ. ನಾಯಿ, ಹದ್ದು, ಕಾಗೆಗಳು ಹೆಣಗಳನ್ನು ಕಿತ್ತು ತಿನ್ನುವ ಭಯಾನಕ ದೃಶ್ಯ ಕಂಡು ಅಲ್ಲಿಯ ಜನ ಭಯಭೀತರಾಗಿದ್ದಾರೆ.

ಈ ಮೃತದೇಹಗಳು ಕೊರೊನಾ ಸೋಂಕಿತರದ್ದು ಎಂದು ಹೇಳಲಾಗಿದೆ. ಕಾರಣ, ಹರಿದು ಬಂದ ಮೃತ ದೇಹಗಳು ಸೀಲ್ ಮಾಡಿದ ಸ್ಥಿತಿಯಲ್ಲಿ ಇವೆ. ಸ್ಮಶಾನಗಳಲ್ಲಿ ದಿನಗಟ್ಟಲೆ ಕಾಯುವ ಹಾಗೂ ಅಂತ್ಯ ಸಂಸ್ಕಾರಕ್ಕೆ ದುಬಾರಿ ವೆಚ್ಚ ಇರುವ ಹಿನ್ನೆಲೆಯಲ್ಲಿ ಈ ರೀತಿ ಹೆಣಗಳನ್ನು ನದಿಗಳಿಗೆ ಎಸೆಯಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಸದ್ಯ ಗಂಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಹೆಣಗಳು ದಡಕ್ಕೆ ಬಂದು ಸೇರುತ್ತಿವೆ. ಈ ಬೆಳವಣಿಗೆಯ ನಂತರ ದಡದ ಜನರ ಆತಂಕ ಹೆಚ್ಚಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ನದಿಯಲ್ಲಿ ಸುಮಾರು 400 ರಿಂದ 500 ಮೃತ ದೇಹಗಳನ್ನು ಕಂಡಿದ್ದಾಗಿ ಗ್ರಾಮಸ್ಥರೊಬ್ಬರು ಹೇಳಿದ್ದರೆ, ಅಧಿಕಾರಿಗಳು 40 ರಿಂದ 50ರಷ್ಟು ಹೆಣ ಪತ್ತೆಯಾಗಿವೆ ಎಂದು ಹೇಳಿದ್ದಾರೆ.

ಈ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಈ ನಡುವೆ ಕೊರೊನಾದಿಂದ ಮೃತಪಟ್ಟವರ ಶವಗಳನ್ನು ನಿರ್ವಹಣೆ ಮಾಡುವ ವಿಚಾರದಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶದ ನಡುವೆ ಆರೋಪ – ಪ್ರತ್ಯಾರೋಪ ಕೇಳಿ ಬಂದಿದೆ. ಬಕ್ಸರ್‌ ನ ಮಹಾದೇವ್‌ ಘಾಟ್‌ ಗೆ ಬರುವುದಕ್ಕೂ ಮುನ್ನ ಗಂಗಾ ನದಿಯು ಉತ್ತರ ಪ್ರದೇಶದ ಬಿರ್‌ ಪುರ್‌ ಹಾಗೂ ಬರೆಗಾಮ್‌ ನಗರಗಳ ಮೂಲಕ ಹಾಯ್ದು ಬರುತ್ತದೆ. ಆ ನಂತರವೇ ಮೃತ ದೇಹಗಳು ಮಹಾದೇವ್‌ ಘಾಟ್‌ ನ ದಡಕ್ಕೆ ಸೇರುತ್ತಿವೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

ಉತ್ತರ ಪ್ರದೇಶದ ಯಮುನಾ ನದಿಯಲ್ಲಿಯೂ ಇದೇ ರೀತಿ ಹೆಣಗಳ ರಾಶಿ ಹರಿದು ಬಂದಿತ್ತು. ಸದ್ಯ ಸ್ಥಿತಿಯಲ್ಲಿ ಹೆಣವನ್ನು ಸ್ಮಶಾನಕ್ಕೆ ಸಾಗಿಸಿ ಅಂತ್ಯ ಸಂಸ್ಕಾರ ಮಾಡಿದರೆ ಸುಮಾರು ರೂ. 30 ಸಾವಿರದಿಂದ ರೂ. 40 ಸಾವಿರದಷ್ಟು ಖರ್ಚಾಗುತ್ತದೆ. ಹೀಗಾಗಿ ಈ ರೀತಿ ಹೆಣಗಳನ್ನು ಎಸೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಬೈಕ್ ಸೀಜ್ ಭಯ, ಮನೆಯಿಂದ ಬರುತ್ತಿಲ್ಲ ಜನ – ಚಿಲ್ಲರೆ ವ್ಯಾಪಾರಸ್ಥರ ಗೋಳಾಟ!

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ನಿನ್ನೆಯಿಂದ ಕೊರೊನಾ ಲಾಕ್ ಡೌನ್ ಘೋಷಣೆಯಾಗಿದೆ. ಮೊದಲ ದಿನ ವಾಹನ ಹೊರಗೆ ತಂದವರಿಗೆ ಪೊಲೀಸರು ಬೆತ್ತದ ರುಚಿ ತೋರಿಸಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಲಾಠಿ ಬಳಸದಂತೆ ಪೊಲೀಸರಿಗೆ ಸೂಚಿಸಲಾಗಿದೆ. ಆದರೆ, ಅನಗತ್ಯವಾಗಿ ಹೊರ ಬಂದವರ ಬೈಕ್ ಸೀಜ್ ಆಗುವ ಭಯದಿಂದಾಗಿ ನಗರದಲ್ಲಿ ಜನ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.

ಬೈಕ್ ಸೀಜ್ ಆಗುವ ಭಯದಲ್ಲಿ ಜನರು ಮನೆಯಿಂದ ಆಚೆ ಬಂದಿಲ್ಲ. ಸುಮ್ಮನೆ ಏಕೆ ಪೊಲೀಸರೊಂದಿಗೆ ಕಿರಿಕ್ ಎಂಬ ಉದ್ಧೇಶದಿಂದ ಜನರೇ ಮನೆಯಿಂದ ಆಚೆ ಬಂದಿಲ್ಲ. ಹೀಗಾಗಿ ವ್ಯಾಪಾರ- ವಹಿವಾಟು ಸರಿಯಾಗಿ ನಡೆದಿಲ್ಲ.

ಹೀಗಾಗಿ ನಗರದ ಪ್ರಮುಖ ಮಾರುಕಟ್ಟೆಗಳು ಬೀಕೋ ಎನ್ನುತ್ತಿವೆ. ವ್ಯಾಪಾರ ಆದರೆ ಹೂವು ಮಾರಾಟ ಮಾಡುತ್ತೇನೆ. ಇಲ್ಲವಾದರೆ ದೇವರಿಗೆ ಅರ್ಪಿಸಿ ಹೋಗುತ್ತೇನೆ ಎಂದು ಮಾರುಕಟ್ಟೆಗೆ ಹೂವು ತಂದಿದ್ದ ವ್ಯಾಪಾರಸ್ಥ ಅಳಲು ತೋಡಿಕೊಳ್ಳುತ್ತಿದ್ದ.

ವಾಲೇಶ್ ಪೂಜಾರ್ ಎಂಬ ವ್ಯಕ್ತಿ ಬೆಳಿಗ್ಗೆ 4ಕ್ಕೆ ಮಾರುಕಟ್ಟೆಗೆ ಹೂವು ತಂದಿದ್ದರು. ವಾಹನ ವ್ಯವಸ್ಥೆ ಇಲ್ಲದ ಕಾರಣ ನಡೆದುಕೊಂಡೇ ಅವರು ಮಾರುಕಟ್ಟೆಗೆ ಹೂವು ತಂದಿದ್ದರು. ಆದರೆ, ಬೈಕ್ ಸೀಜ್ ಆಗುತ್ತದೆಂದು ಜನ ಮಾರುಕಟ್ಟೆಯತ್ತ ಬರಲಿಲ್ಲ. 2 ಸಾವಿರ ರೂ, ಕೊಟ್ಟು ಹೂವು ತಂದಿದ್ದೇನೆ. ಆದರೆ ವ್ಯಾಪಾರವಾಗುತ್ತಿಲ್ಲ ಎಂದು ವಾಲೇಶ್ ಕಣ್ಣೀರು ಸುರಿಸಿದ್ದಾರೆ. ಜನ ಬಾರದ ಕಾರಣ ಚಿಲ್ಲರೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಕೂಡಲೇ ಸರ್ಕಾರ, ಚಿಲ್ಲರೇ ವ್ಯಾಪಾರಸ್ಥರ ಸಹಾಯಕ್ಕೆ ನಿಲ್ಲಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಬಿಗ್ ಬಾಸ್ ಗೆ ಸಾಷ್ಟಾಂಗ ನಮಸ್ಕಾರ ಹಾಕಿದ ಮನೆಯ ಸದಸ್ಯರು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಎರಡನೇ ಅಲೆಯಿಂದಾಗಿ ದೇಶ ಹಾಗೂ ರಾಜ್ಯದ ಜನತೆ ಕಂಗಾಲಾಗಿದ್ದಾರೆ. ದಿನಕ್ಕೊಂದು ಸಮಸ್ಯೆಗಳು ತಲೆದೋರುತ್ತಿವೆ. ಹೀಗಾಗಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಾಗೂ ಜನರ ಮನ ಗೆದ್ದಿದ್ದ ರಿಯಾಲಿಟಿ ಶೋ 72 ದಿನಕ್ಕೆ ಬಾಗಿಲು ಹಾಕಿಕೊಂಡಿದೆ. ಹೊರಗೆಡೆ ಏನು ನಡೆಯುತ್ತಿದೆ ಎನ್ನುವುದೇ ತಿಳಿಯದ ಸ್ಪರ್ಧಿಗಳು ಈ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.

ಕೊರೊನಾ ಅಲೆ ಹೆಚ್ಚಾಗಿ ಶೂಟಿಂಗ್ ನಿಲ್ಲಿಸುವಂತೆ ಸರ್ಕಾರ ಸೂಟಿಸುತ್ತಿದ್ದಂತೆ, ಸ್ಪರ್ಧಿಗಳಿಗೆ ಶೋ ನಿಲ್ಲಿಸುವ ಕುರಿತು ಮಾಹಿತಿಯನ್ನು ಬಿಗ್ ಬಾಸ್ ನೀಡಿದ್ದಾರೆ. ಕೊರೊನಾ ಮಾಹಿತಿ ಹಾಗೂ ಲಾಕ್ ಡೌನ್ ಹೇರಿರುವ ತುಣುಕನ್ನು ಬಿಗ್ ಬಾಸ್ ಮನೆಯ ಒಳಗಡೆ ಪ್ರಸಾರ ಮಾಡಲಾಯಿತು. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಪರ್ಧಿಗಳಲ್ಲಿ ದುಃಖ ಹಾಗೂ ಅಚ್ಚರಿ ಹೊರ ಬಂದಿದೆ.
ಈ ಸಂದರ್ಭದಲ್ಲಿ ಚಕ್ರವರ್ತಿ, ವ್ಯವಸ್ಥೆಯಲ್ಲಿ ದೊಡ್ಡ ಪ್ರಾಬ್ಲಂ ಆಗಿದೆ. ಇದಕ್ಕೆ ವ್ಯವಸ್ಥೆಯೇ ಕಾರಣ ಎಂದು ಹೇಳದರು. ಕೆಲವರು ಸಖತ್ ಭಯ ಆಗುತ್ತಿದೆ ಎಂದು ಕಣ್ಣೀರು ಹಾಕಿದರು. ಇನ್ನೂ ಕೆಲವರು ಈಗ ತಿಳಿಯುತ್ತಿದೆ. ಪ್ರಾಪರ್ಟಿಯನ್ನು ಏಕೆ ಮುಟ್ಟಬೇಡಿ ಎಂದು ಹೇಳುತ್ತಿದ್ದರು ಎಂದು. ಆದರೆ ಈ ಮನೆಯನ್ನ ತುಂಬ ಮಿಸ್ ಮಾಡಿಕೊಳ್ಳುತ್ತೇನೆ ಎಂದು ರಘು ಜೊತೆ ಶಮಂತ್ ಕಣ್ಣೀರು ಹಾಕಿದರು.

ಭಾನುವಾರವೇ ಶೋ ಮುಗಿದಿದೆ. ಆದರೆ ವಿದಾಯದ ಎಪಿಸೋಡ್ ಇನ್ನೂ ಪ್ರಸಾರವಾಗಿಲ್ಲ. ಸ್ಪರ್ಧಿಗಳೆಲ್ಲ ಕಣ್ಮಣಿ ಜೊತೆಗೆ ಚರ್ಚೆ ಮಾಡುತ್ತಾ ಸಂತೋಷದಿಂದಲೇ ಸಮಯ ಕಳೆದಿದ್ದಾರೆ. ಇಂದು ಹಾಗೂ ನಾಳೆ ರಾತ್ರಿ 7.30ಕ್ಕೆ ಕೊನೆಯ ಕ್ಷಣಗಳ ಸಂಚಿಕೆಗಳು ಪ್ರಸಾರವಾಗಲಿವೆ. ಸದ್ಯ ಸಿಕ್ಕಿರುವ ಪ್ರಮೋದಲ್ಲಿ ಪ್ರಶಾಂತ್ ಸಂಬರಗಿ ಅವರು, ನಮ್ಮ ಸುರಕ್ಷತೆಗಾಗಿ ಶೋ ಎಂಡ್ ಮಾಡುತ್ತಿದ್ದೀರಾ? ಬಿಗ್ ಬಾಸ್ ನಿಮಗೆ ಸಾಷ್ಟಾಂಗ ನಮಸ್ಕಾರಗಳು ಎಂದು ಹೇಳಿದ್ದಾರೆ.

ಅಸಂಘಟಿತ ವರ್ಗಕ್ಕೆ ಪ್ಯಾಕೇಜ್‌ ಘೋಷಿಸಲು ದಲಿತ ಮುಖಂಡ ಮೈಲಾರಪ್ಪ ಚಳಮರದ ಒತ್ತಾಯ

ದುಡಿಯುವ ವರ್ಗ ಹಸಿವಿನಿಂದ ಕಂಗಾಲು

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರ ಜೀವ ಉಳಿಸಲು ದುಡಿಯುತ್ತಿರುವ ಅಸಂಘಟಿತ ವರ್ಗಕ್ಕೆ ಸರ್ಕಾರ ಪ್ಯಾಕೇಜ್‌ ಘೋಷಿಸಬೇಕು ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ಮೈಲಾರಪ್ಪ ಚಳಮರದ ಒತ್ತಾಯಿಸಿದ್ದಾರೆ.

ಕೊರೊನಾ ಎರಡನೇ ಅಲೆ ಅಪಾಯಕಾರಿಯಾಗಿದೆ. ಹಳ್ಳಿ ಹಳ್ಳಿಗೂ ಸೋಂಕು ವ್ಯಾಪಿಸಿದೆ. ಸಾವು, ನೋವು ನಿತ್ಯ ನಡೆಯುತ್ತಿವೆ. ಸೋಂಕು ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ದುಡಿಯುವ ವರ್ಗ ಹಸಿವಿನಿಂದ ಕಂಗಾಲಾಗಿದೆ. ಸರ್ಕಾರ ಕೂಡಲೇ ದುಡಿಯುವ ವರ್ಗಕ್ಕೆ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಟಿ.ವಿಗಳಲ್ಲಿ ಪ್ರಸಾರವಾಗುವ ಸಾವು, ನೋವು, ಶವ ಸುಡುವ ದೃಶ್ಯ ನೋಡುತ್ತಿರುವ ಸಾರ್ವಜನಿಕರು ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಸುಸ್ತು ಕಾಣಿಸಿಕೊಂಡರೂ ಮೆಡಿಕಲ್ ಸ್ಟೋರ್‌ಗಳಲ್ಲಿ ಮಾತ್ರೆ ನುಂಗಿ ಮನೆಯಲ್ಲಿ ಉಳಿದು ಸೋಂಕು ಹಬ್ಬಿಸುತ್ತಿರುವ ಘಟನೆಗಳು ನಡೆಯುತ್ತಿವೆ ಎಂದರು.

ಕೊರೊನಾ ಸೇನಾನಿಗಳು ಪಟ್ಟಣದಲ್ಲಿ ಕೂರದೆ ಹಳ್ಳಿ, ಹಳ್ಳಿ ಸುತ್ತಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಮಾಡಬೇಕಿದೆ. ಫ್ಯಾಕ್ಟರಿಗಳಲ್ಲಿ ದುಡಿಯುತ್ತಿದ್ದ ಅಸಂಘಟಿತ ಕಾರ್ಮಿಕರು, ಕೊರೊನಾ ಕಂಟಕದಿಂದ ಪಾರಾಗಲು ಗ್ರಾಮೀಣ ಪ್ರದೇಶಕ್ಕೆ ಬಂದಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ಅನ್ನಕ್ಕೆ ಮಾರ್ಗ ಮಾಡಬೇಕಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಭೂರಹಿತ ಕೂಲಿಕಾರರ ಸ್ಥಿತಿ, ತೀರಾ ಸಂಕಟಕ್ಕೆ ಸಿಲುಕಿದೆ. ಪ್ಯಾಕೇಜ್‌ ನೀಡುವ ಮೂಲಕ ಅನ್ನದ ಮಾರ್ಗ ತೋರಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಹೇಳಿದರು.

ಅವಧಿ ಮೀರಿ ಅಂಗಡಿ ತೆರದರೆ 25 ಸಾವಿರ ದಂಡ; ಪವಾರ

ವಿಜಯಸಾಕ್ಷಿ ಸುದ್ದಿ, ನರಗುಂದ

ಮಹಾಮಾರಿ ಕೊರೊನಾ ತಡೆಗಟ್ಟಲು ಸರಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಒಂದು ವೇಳೆ ಅವಧಿ ಮೀರಿ ಅಂಗಡಿ ತೆರದರೆ 25 ಸಾವಿರದಿಂದ 50 ಸಾವಿರದವರೆಗೆ ದಂಡ ವಿಧಿಸಿ ಕೇಸ್ ಹಾಕಲಾಗುವುದು ಎಂದು ಗ್ರಾಮದ ವರ್ತಕರಿಗೆ ನರಗುಂದ ಠಾಣೆಯ ಎಎಸ್ ಐ ವಿ ಜಿ ಪವಾರ್ ಎಚ್ಚರಿಕೆ ನೀಡಿದರು.

ಅವರು ತಾಲೂಕಿನ ಚಿಕ್ಕನರಗುಂದ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಎಚ್ಚರಿಕೆ ನೀಡಿದರು.

ಗ್ರಾಮದಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನಗತ್ಯವಾಗಿ ವಾಹನಗಳನ್ನು ತೆಗೆದುಕೊಂಡು ಓಡಾಡದಂತೆ ಮನವಿ ಮಾಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ, ತಾ.ಪಂ.ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ಗ್ರಾ.ಪಂ ಪಿ.ಡಿ.ಓ ಶೈನಾಜ್ ಮುಜಾವರ್, ಗ್ರಾ.ಪಂ ಸದಸ್ಯ ಬಾಪು ಹಿರೇಗೌಡ್ರ, ಗ್ರಾ.ಪಂ ಸಿಬ್ಬಂದಿಗಳು ಇದ್ದರು.

ಚಿಕ್ಕನರಗುಂದದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾ.ಪಂ.ಕಾರ್ಯಾಲಯದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಿಸಲಾಯಿತು.

ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ಮಾತನಾಡಿ, ಶ್ರೇಷ್ಠ ಶಿವಶರಣೆ, ಯೋಗಿ ವೇಮನರ ಮನ ಪರಿವರ್ತನೆ ಮಾಡಿದ ಮಹಾತಾಯಿ ಸಿರಿತನ ಬಂದ ಕಾಲಕ್ಕೆ ಮೈಮರೆತು ಹಿಗ್ಗದೇ, ದಾನದರ್ಮ ಮಾಡುವದರ ಮೂಲಕ ತನ್ನ ಬಳಗದವರು ದಾನ ಗುಣಗಳನ್ನು ಬೆಳಸಿಕೊಳ್ಳಬೇಕು ಎಂದು ಸಾರಿದ ಹೇಮರಡ್ಡಿ ಮಲ್ಲಮ್ಮನವರ ಜೀವನದ ಮೌಲ್ಯಗಳು ಮನುಕುಲಕ್ಕೆ ಅದರಲ್ಲೂ ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಗಳಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಬಾಪು ಹಿರೇಗೌಡ್ರ, ಶರಣಪ್ಪ ಹಳೇಮನಿ, ಪಿಡಿಓ ಶೈನಾಜ್ ಮುಜಾವರ್, ಈರಣ್ಣ ಬ್ಯಾಳಿ, ಮಹಾದೇವಪ್ಪ ಹಳಕಟ್ಟಿ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬೈಕ್ ಸೀಜ್ ಆಗುತ್ತದೆ ಎಂದು ಸೈಕಲ್ ಏರಿ ಬಂದ ಆಸಾಮಿಗಳು!

ವಿಜಯಸಾಕ್ಷಿ ಸುದ್ದಿ, ಗದಗ

ಸೈಕಲ್ ಏರಿದವನೇ ಮಹಾ ಶೂರ ಎಂದು ಜಿಲ್ಲೆಯಲ್ಲಿ ಜನ ಮಾತನಾಡಿಕೊಳ್ಳುವಂತಾಗಿದೆ. ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗಿರುವುದರಿಂದಾಗಿ ಸರ್ಕಾರ, ಲಾಕ್ ಡೌನ್ ಘೋಷಣೆ ಮಾಡಿದೆ. ಹೀಗಾಗಿ ವಾಹನಗಳನ್ನು ರಸ್ತೆಗೆ ಇಳಿಸದಂತೆ ಸರ್ಕಾರ ಖಡಕ್ ವಾರ್ನಿಂಗ್ ಮಾಡಿದೆ. ಇದರಿಂದಾಗಿ ಜನರು ಸೈಕಲ್ ನ ಮೊರೆ ಹೋಗಿದ್ದಾರೆ.

ಹೀಗಾಗಿ ನಗರದ ಬಹುತೇಕ ಕಡೆ ಸೈಕಲ್ ಗಳದ್ದೇ ದರ್ಬಾರ್ ಎನ್ನುವಂತಾಗಿದೆ. ಸೈಕಲ್ ಏರಿ ಮಾರುಕಟ್ಟೆಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಇನ್ನೊಂದೆಡೆ ವ್ಯಾಪಾರಸ್ಥರು ಕೂಡ ಸೈಕಲ್ ಏರಿ ಮಾರುಕಟ್ಟೆಗೆ ಬಂದಿದ್ದಾರೆ.

ಬೈಕ್ ಭೀತಿಯ ಹಿನ್ನೆಲೆಯಲ್ಲಿ ಈ ಜನರು ಸೈಕಲ್ ಏರಿ ಬಂದಿದ್ದಾರೆ. ಆದರೆ, ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಹೀಗಾಗಿ ಅವರನ್ನೂ ಒಳಗೆ ಬಿಡಲಿಲ್ಲ. ನಾಮಜೋಶಿ ರಸ್ತೆ, ಟಾಂಗಾ ಕೂಟ, ಹಳೆಯ ಬಸ್ ನಿಲ್ದಾಣದ ಬಳಿ ಸೈಕಲ್ ಸವಾರರು ಸೈಕಲ್ ಸವಾರರು ಎಂಟ್ರಿ ಕೊಟ್ಟಿದ್ದರು.

ಹಿರಿಯ ನಟ ರಾಜಾರಾಂ ಮಹಾಮಾರಿಗೆ ಬಲಿ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ರಾಜಾರಾಂ ಅವರು ಮಹಾಮಾರಿಗೆ ಬಲಿಯಾಗಿದ್ದಾರೆ.
ರಾಜಾರಾಂ (84) ಅವರು ಸಿನಿಮಾ, ಧಾರಾವಾಹಿ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಇವರು ಸಿನಿಮಾಗಿಂತ ಹೆಚ್ಚಾಗಿ ರಂಗಭೂಮಿಯಲ್ಲಿಯೇ ಸಕ್ರೀಯರಾಗಿದ್ದರು.

ಕೊರೊನಾ ಸೋಂಕು ಧೃಡವಾಗಿತ್ತು ಎಂದು ತಿಳಿದು ಬಂದಿದೆ. ಆದರೆ, ಮನೆಯವರು ಮಾತ್ರ ಈ ಕುರಿತು ಬಹಿರಂಗ ಪಡಿಸಿಲ್ಲ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಇವರು 1971ರಿಂದ ಇಲ್ಲಿಯವರೆಗೆ 62 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿರಂಗದಲ್ಲಿ ರಾಜಕುಮಾರ್ ಸೇರಿದಂತೆ ಬಹುತೇಕ ಎಲ್ಲ ನಾಯಕರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ನೂರಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದರು. ಸದ್ಯ ಇವರ ಸಾವಿಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

1971ರಲ್ಲಿ ಕೃಷ್ಣಸ್ವಾಮಿ ನಿರ್ದೇಶಕ ಪಾಪಪುಣ್ಯ ಸಿನಿಮಾ ರಾಜಾರಾಂ ಅವರ ಅಭಿನಯದ ಮೊದಲ ಸಿನಿಮಾವಾಗಿತ್ತು. ಸರೋಜಾ ದೇವಿ, ಕಲ್ಯಾಣ್ ಕುಮಾರ್ ಅಶ್ವತ್ಥ್ ಪ್ರಮುಖ ಪಾತ್ರದಲ್ಲಿದ್ದರು. ವಿಧಾನಸೌಧದಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡಿಕೊಂಡೇ ಸಿನಿಮಾ ಹಾಗೂ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದರು ರಾಜಾರಾಂ.

ಕೋವಿಡ್ ನಿರ್ವಹಣೆಯ ಹೊಣೆ ಹೊತ್ತ ಸಚಿವರೊಂದಿಗೆ ಸಭೆ ನಡೆಸಿದ ಸಿಎಂ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ನಿರ್ವಹಣೆಯ ಹೊಣೆ ಹೊತ್ತಿರುವ ಐವರು ಸಚಿವರು ಮತ್ತು ಅಧಿಕಾರಿಗಳ ಜೊತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಸೋಂಕು ನಿರ್ವಹಣಾ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಸಚಿವರುಗಳಿಗೆ ನೀಡಿರುವ ಜವಾಬ್ದಾರಿಯಂತೆ ಎಲ್ಲಿಯೂ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಜನರು ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಬೇಕು. ತುರ್ತು ಅಗತ್ಯವಿರುವ ರೋಗಿಗಳಿಗೆ ಬೆಡ್ ಹಂಚಿಕೆಗೆ ಕ್ರಮವಹಿಸಬೇಕು. ರೆಮಿಡಿಸಿವಿಯರ್ ಡ್ರಗ್ ಪೂರೈಕೆ ಅಗತ್ಯತೆಗನುಸಾರವಾಗಿ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ಅಲ್ಲದೇ, ಖಾಸಗಿ ಆಸ್ಪತ್ರೆ ಗಳಲ್ಲಿನ ಬೆಡ್ ಗಳ ಮೇಲೆ ನಿಗಾ ಇಡಬೇಕು. ಅಲ್ಲದೆ ಆಕ್ಸಿಜನ್, ರೆಮಿಡಿಸಿವಿಯರ್ ಹಾಗೂ ಬೆಡ್ ಸೇರಿದಂತೆ ಇತರೆ ವಿಷಯಗಳಲ್ಲಿ ಅಕ್ರಮ ಉಂಟಾದರೆ ಕೂಡಲೇ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.
ವಾರ್ ರೂಮ್ ಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಹಂತ ಹಂತವಾಗಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು ಆಸ್ಪತ್ರೆ ಗಳಿಗೆ ಆಕ್ಸಿಜನ್ ಜನರೇಟರ್ ಪ್ಲಾಂಟ್ ಹಾಕಲು ಈಗಿನಿಂದಾನೆ ಕೆಲಸ ಶುರು ಮಾಡಲು ಸೂಚಿಸಲಾಯಿತು. ಮೂರನೇ ಅಲೆಗೆ ಈಗಿನಿಂದಲೇ ಸಿದ್ಧರಾಗಬೇಕು ಎಂದು ಸೂಚಿಸಿದ್ದಾರೆ.


ಶಾಸಕರು ಹಾಗೂ ಸಚಿವರು ಕೊರೊನಾ ಹತೋಟಿಗೆ ಬರುವವರೆಗೂ ತಮ್ಮ ತಮ್ಮ ಕ್ಷೇತ್ರಗಳಲ್ಲಿಯೇ ವಾಸ್ತವ್ಯೂ ಹೂಡಬೇಕು ಎಂದು ಹೇಳಿದ್ದಾರೆ.

error: Content is protected !!