Home Blog Page 3060

ವಾಣಿಜ್ಯನಗರಿಯಲ್ಲಿ ಹಾಡುಹಗಲೇ ಚಾಕು ಇರಿತ; ಗಾಯಾಳು ಕಿಮ್ಸ್ ಗೆ ದಾಖಲು

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬನಿಗೆ ಹಾಡುಹಗಲೇ ಚಾಕು ಹಾಕಿರುವ ಘಟನೆ ಹಳೇ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ನರೇಗಲ್ ಗ್ರಾಮದ ಬಷೀರ್ ಅಹ್ಮದ ಹಂಚಿನಮನಿ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಈತ ಹಳೇ ಬಸ್ ನಿಲ್ದಾಣದ ಬಳಿ ಎಳೆನೀರು ಮಾರಾಟ ಮಾಡುತ್ತಿದ್ದ.

ಆದ್ರೆ ಇಂದು ಮಧ್ಯಾಹ್ನ ಎಳನೀರು ಮಾರಾಟ ಮಾಡುತ್ತಿದ್ದ ಸಮಯದಲ್ಲಿ ಬಂದು ದುಷ್ಕರ್ಮಿಗಳು ಎದೆಯ ಕೆಳಭಾಗದಲ್ಲಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾರು, ಯಾಕೆ ಚಾಕು ಹಾಕಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಹಳೇ ವೈಷಮ್ಯದಿಂದ ಚಾಕು ಹಾಕಿರಬೇಕು ಎನ್ನಲಾಗುತ್ತಿದೆ. ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಶಾಸಕ ಶರ್ಟ್ ಬಿಚ್ಚಿದ್ದು ಸರಿಯಲ್ಲ, ಸಾರ್ವಜನಿಕ ಬದುಕಿನಲ್ಲಿದ್ದವರು ಸರಿಯಾಗಿ ಇರಬೇಕು; ಹೊರಟ್ಟಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಸದನದಲ್ಲಿ ಭದ್ರಾವತಿ ಶಾಸಕ ಶರ್ಟ್ ಬಿಚ್ಚಿದ ಪ್ರಕರಣ ನನಗೆ ವೈಯಕ್ತಿಕವಾಗಿ ಬಹಳ ನೋವಾಗಿದೆ.
ಶಾಸಕರ ಸ್ಥಾನದಲ್ಲಿದ್ದವರು ಘನತೆಯಿಂದ ಇರಬೇಕು
ಸದನದ ಗೌರವ ಉಳಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿಂದು ಕೋವಿಶಿಲ್ಡ್ ವ್ಯಾಕ್ಸಿನ್ ಪಡೆದ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಜನಪ್ರತಿನಿಧಿಗಳಾದವರು ಕೆಲವು ವಿಷಯದಲ್ಲಿ ಸಮಾಧಾನದಿಂದ ವರ್ತಿಸಬೇಕು. ಸಭಾಪತಿ ಅಥವಾ ಸ್ಪೀಕರ್ ಗೆ ಹೋಗಿ ಮನವಿ ಮಾಡಬೇಕು. ಅದನ್ನು ಹೊರತುಪಡಿಸಿ ಈ ರೀತಿ ಮಾಡುವುದು ಸರಿ ಅನಿಸಲ್ಲ ಎಂದರು.

ಸಿಡಿ ಪ್ರಕರಣ ಹಿನ್ನೆಲೆ 6 ಸಚಿವರಿಂದ ಮತ್ತೆ ಕೋರ್ಟ್ ನಲ್ಲಿ ಸ್ಟೇ ತಂದ ಹಿನ್ನೆಲೆಯಲ್ಲಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜನಪ್ರತಿನಿಧಿಗಳಾದವರು ಎಚ್ಚರಿಕೆಯಿಂದ ಇರಬೇಕು. ಪರಿಷತ್ ಕಲಾಪದಲ್ಲಿ ಮಾಧ್ಯಮವನ್ನು ಬ್ಯಾನ್ ಮಾಡಿ ಎಂದರು. ಆದರೆ ನಾನು ಮಾತ್ರ ಬ್ಯಾನ್ ಮಾಡಿಲ್ಲ. ಮಾಧ್ಯಮದವರು ಎಷ್ಟು ಜನ ಇರುತ್ತಾರೋ ನಮಗೆ ಒಳ್ಳೆಯದು ಎಂದು ಅವರು ಹೇಳಿದರು.

ಸಾರ್ವಜನಿಕ ಬದುಕಿನಲ್ಲಿದ್ದವರು ಸರಿಯಾಗಿ ಇರಬೇಕು. ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಜನರು ನೀಡಿರುವ ಕರ್ತವ್ಯವನ್ನು ನಾವು ಸರಿಯಾಗಿ ನಿಭಾಯಿಸಬೇಕು ಎಂದು ಅವರು ಸಲಹೆ ನೀಡಿದರು.

ಸಿಡಿ ಪ್ರಕರಣ ಕೂಲಂಕಷ ತನಿಖೆ ಮಾಡಲಿ; ಗುರುನಾಥ ಉಳ್ಳಿಕಾಶಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಜಲಸಂಪನ್ಮೂಲ ಖಾತೆಯ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಅವರದು ಎನ್ನಲಾದ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಒಂದು ಪ್ರಕರಣ ಹನಿಟ್ರ್ಯಾಫ್ ಪ್ರಕರಣವೋ, ಲೈಂಗಿಕ ಕಿರುಕುಳವೋ, ಬ್ಲಾಕ್ ಮೇಲ್ ಅಥವಾ ನೌಕರಿ ಕೊಡಿಸುವುದಾಗಿ ಮಾಡಿರುವುದೋ ಅನ್ನೋದನ್ನು ಸರ್ಕಾರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗ ಪಡೆಸಬೇಕಿದೆ ಎಂದು ಸಮತಾ ಸೇನೆಯ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಆಗ್ರಹಿಸಿದರು.

ನಗರದಲ್ಲಿಂದು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಹಿಳೆಯನ್ನು ಸಂತ್ರಸ್ತೆ ಎಂದು ಹೇಳಲಾಗುತ್ತಿದೆ. ಆದರೇ ಇದುವರೆಗೂ ಯಾರು ಆ ಸಂತ್ರಸ್ತೆ ಎಂದು ಗೊತ್ತಾಗುತ್ತಿಲ್ಲ. ಸಂತ್ರಸ್ತೆ ಇದುವರೆಗೂ ಹೊರಗೆ ಬಂದಿಲ್ಲ ಎಂದರು.

ಇನ್ನೂ ಯಾರು ಆ ಸಿಡಿಯನ್ನು ಬಿಡುಗಡೆ ಮಾಡಿದ್ದಾರೋ ಆ ವ್ಯಕ್ತಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾನೆ. ಮೊದಲ ದಿನ ಸಂತ್ರಸ್ತೆಯ ಕುಟುಂಬದವರು ನನಗೆ ಸಿಡಿ ನೀಡಿದ್ದಾರೆ. ನಂತರದ ದಿನಗಳಲ್ಲಿ ನಮ್ಮ ಸ್ನೇಹಿತರೊಬ್ಬರು ನೀಡಿದ್ದಾರೆ ಆ ಮಹಿಳೆಗೆ ನನಗೆ ಯಾವುದೇ ಸಂಬಂಧವಿಲ್ಲ ಎಂಬುವಂತ ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಬೇಕು. ಇದರಲ್ಲಿ ಹನಿಟ್ರ್ಯಾಫ್ ಆಗಿದೆಯೋ, ಲೈಂಗಿಕ ದೌರ್ಜನ್ಯವೋ ಅಥವಾ ಬ್ಲಾಕ್ ಮೇಲ್ ಮಾಡಲಾಗಿದೆಯೋ ಎಂಬುವುದನ್ನು ಸರ್ಕಾರ ತನಿಖೆ ನಂತರ ಬಹಿರಂಗ ಪಡೆಸಬೇಕು ಎಂದು ಸಮತಾ ಸೇನಾ ಸಂಘಟನೆ ಒತ್ತಾಯಿಸುತ್ತಿದೆ ಎಂದರು.

ಸ್ಥಳೀಯ ಸಂಸ್ಥೆಗಳ ಹುದ್ದೆ ಖಾಲಿ… ಖಾಲಿ!
ಗದಗ ಜಿಲ್ಲೆಯ ಮುನ್ಸಿಪಾಲಿಟಿಗಳಲ್ಲಿ 437 ಹುದ್ದೆಗಳು ಖಾಲಿ

ದುರ್ಗಪ್ಪ ಹೊಸಮನಿ

ವಿಜಯಸಾಕ್ಷಿ ವಿಶೇಷ, ಗದಗ:
ರಾಜ್ಯದ ಬಹುತೇಕ ಸರಕಾರಿ ಕಚೇರಿಗಳಲ್ಲಿ ನೌಕರರ ಕೊರತೆ ಸಾಮಾನ್ಯ. ಆದರೆ ಪಟ್ಟಣ, ನಗರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಬಹುವಾಗಿ ಕಾಡುತ್ತಿದ್ದು, ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎ ವೃಂದ ಹೊರತುಪಡಿಸಿ ಬಿ, ಸಿ ಹಾಗೂ ಡಿ ವೃಂದದ ನೌಕರರ ಕೊರತೆ ಇದೆ.

ಗದಗ-ಬೆಟಗೇರಿ ನಗರಸಭೆ, ಐದು ಪುರಸಭೆಗಳು, ಮೂರು ಪಟ್ಟಣ ಪಂಚಾಯತಿ ಸಹಿತ ಒಟ್ಟು 9 ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 1275 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 838 ಜನ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂಬತ್ತು ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 457 ಜನ ಖಾಯಂ ನೌಕರರಿದ್ದು, ಒಟ್ಟು 525 ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.

199 ಹುದ್ದೆ ಖಾಲಿ

ಗದಗ-ಬೆಟಗೇರಿ ನಗರಸಭೆ ಒಂದರಲ್ಲೇ ಸಿ ಮತ್ತು ಡಿ ವೃಂದದಲ್ಲಿ ಒಟ್ಟು 199 ಹುದ್ದೆಗಳು ಖಾಲಿ ಇವೆ. ಅದರಲ್ಲಿ ಸೀನಿಯರ್ ಪ್ರೋಗ್ರಾಮರ್-1, ಸಹಾಯಕ ಅಭಿಯಂತರರು-1, ಕಂದಾಯ ಅಧಿಕಾರಿ-1, ಅಕೌಂಟಂಟ್-1, ಕಿರಿಯ ಅಭಿಯಂತರರು-1, ಹಿರಿಯ ಆರೋಗ್ಯ ನಿರೀಕ್ಷಕರು-1, ಸ್ಟೆನೋಗ್ರಾಫರ್-2, ಪ್ರಥಮ ದರ್ಜೆ ಸಹಾಯಕ ಕಂದಾಯ ನಿರೀಕ್ಷಕರು-2, ಸಮುದಾಯ ಸಂಘಟಕರು-2, ವಾಟರ್ ಸಪ್ಲಾಯ್ ಆಪರೇಟರ್-16, ಡಾಟಾ ಎಂಟ್ರಿ ಆಪರೇಟರ್-4, ಕಿರಿಯ ಆರೋಗ್ಯ ನಿರೀಕ್ಷಕರು-3, ದ್ವಿತಿಯ ದರ್ಜೆ ಸಹಾಯಕರು-3, ಕ.ವ.ಸಹಾಯಕ-1, ವಾಹನ ಚಾಲಕರು-8, ಇಲೆಕ್ಟ್ರೀಶಿಯನ್ ಗ್ರೇಡ್-2 -1, ಲ್ಯಾಬ್ ಟೆಕ್ನಿಷಿಯನ್-1, ಪ್ಲಂಬರ್-1, ಸ್ಯಾನಿಟರಿ ಸುಫರವೈಸರ್-3 ಹಾಗೂ ಪೌರಕಾರ್ಮಿಕರು-126 ಹುದ್ದೆಗಳು ಖಾಲಿ ಇವೆ.

ಅದರಂತೆ ಗಜೇಂದ್ರಗಡ-36, ಲಕ್ಷ್ಮೇಶ್ವರ-52, ಮುಂಡರಗಿ-26, ನರಗುಂದ-39, ರೋಣ ಪುರಸಭೆಯಲ್ಲಿ-46 ಹಾಗೂ ಮುಳಗುಂದ-9, ನರೇಗಲ್-17 ಹಾಗೂ ಶಿರಹಟ್ಟಿ ಪಟ್ಟಣ ಪಂಚಾಯತಿಗಳಲ್ಲಿ 21 ಹುದ್ದೆಗಳು ಖಾಲಿ ಇವೆ.

ಗದಗ-ಬೆಟಗೇರಿ ನಗರಸಭೆ ಗ್ರೇಡ್-1 ಸಂಸ್ಥೆಯಾಗಿದೆ. ಇಲ್ಲಿ ಇಬ್ಬರಾದರೂ ಕಂದಾಯ ನಿರೀಕ್ಷಕರ ಆವಶ್ಯಕತೆ ಇದೆ. ಆದರೆ, ಒಬ್ಬನೇ ಒಬ್ಬ ಕಂದಾಯ ನಿರೀಕ್ಷಕರಿಲ್ಲ. ಮೂವರು ಎಂಜಿನಿಯರ್ ಬೇಕಾದಲ್ಲಿ, ಕೇವಲ ಒಬ್ಬರು ಎಂಜಿನಿಯರ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಗ್ರೇಡ್-1 ಸಂಸ್ಥೆಯದ್ದೇ ಈ ಗತಿಯಾದರೆ, ಇನ್ನುಳಿದ ಸಂಸ್ಥೆಗಳ ಪರಿಸ್ಥಿತಿ ಹೇಗೆ ಎಂಬ ಚಿಂತೆ ಜನರನ್ನು ಕಾಡುತ್ತಿದೆ.

ಸಿಬ್ಬಂದಿ ಕೊರತೆ

ಇನ್ನು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರ ಜೊತೆಗೆ ಕಚೇರಿ ಸಿಬ್ಬಂದಿ ಕೊರತೆಯೂ ಕಾಡುತಿದ್ದು, ಇದ್ದಿದ್ದರಲ್ಲೇ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ಖಾಲಿಯಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನನುಕೂಲಗಳು ಆಗುತ್ತಿವೆ. ನೌಕರರ ಕೊರತೆಯಿಂದಾಗಿ ಸಮಯಕ್ಕೆ ಸರಿಯಾಗಿ ಕೆಲಸಗಳು ಆಗದೇ ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿನ ಸಿಬ್ಬಂದಿ ಕೊರತೆಯ ಕುರಿತು ಪ್ರತಿ ತಿಂಗಳು ಸರಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಹೀಗಾಗಿ ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳುವುದು ಸರಕಾರಕ್ಕೆ ಬಿಟ್ಟ ವಿಷಯವಾಗಿದೆ.

ರಮೇಶ್ ಜಾಧವ್, ಪೌರಾಯುಕ್ತರು, ಗದಗ-ಬೆಟಗೇರಿ ನಗರಸಭೆ

ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೂ ನಮ್ಮಿಂದ ಸಾದ್ಯವಾದಷ್ಟು ಸಾರ್ವಜನಿಕರಿಗೆ ಕೆಲಸ ಮಾಡಿ ಕೊಡುತ್ತೇವೆ. ಸ್ಥಳೀಯ ಸಂಸ್ಥೆಗಳಲ್ಲಿ ಬಿ ಮತ್ತು ಸಿ ವೃಂದದ ಸಿಬ್ಬಂದಿಗಳ ಅವಶ್ಯಕತೆ ತುಂಬಾ ಇದೆ. ಕಚೇರಿ ಸಿಬ್ಬಂದಿಯೇ ಕಡಿಮೆಯಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ.

ಅನಿಲ್ ಕುಮಾರ್ ಮುದ್ದಾ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ

ಸರಕಾರ ಪ್ರತಿಯೊಂದನ್ನು ಆನ್‌ಲೈನ್ ಮೂಲಕವೇ ಅರ್ಜಿ ಹಾಕಿ ಪಡೆಯುವಂತಹ ವ್ಯವಸ್ಥೆ ಜಾರಿಯಲ್ಲಿದ್ದು, ಕಚೇರಿಯಲ್ಲಿ ಸರಿಯಾಗಿ ಸಿಬ್ಬಂದಿ ಇಲ್ಲದೆ ಜನರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ. ಪೂರ್ಣ ಪ್ರಮಾಣದ ಸಿಬ್ಬಂದಿ ಇಲ್ಲದಿರುವುದರಿಂದ ಜನರ ಅಲೆದಾಟ ನಿತ್ಯ ತಪ್ಪುತ್ತಿಲ್ಲ. ಯಾವುದೇ ಕೆಲಸಗಳು ಸರಾಗವಾಗಿ ಆಗುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗಿದೆ.

ರಾಘವೇಂದ್ರ ಯಳವತ್ತಿ, ನಗರಸಭೆ ಮಾಜಿ ಸದಸ್ಯ

ಇಲ್ಲಿ ಗೆದ್ದದ್ದು ಮಾತ್ರ ಹೀರೋ ಅಲ್ಲ, ಹೀರೋಯಿನ್!

-ಬಸವರಾಜ ಕರುಗಲ್
ರಿಷಬ್ ಶೆಟ್ಟಿ ಸಿನಿಮಾ ಅಂದ ಮೇಲೆ ಒಂದು ಲೆವೆಲ್‌ಗೆ ನಿರೀಕ್ಷೆ ಇರುತ್ತೆ. ಆದರೆ ಹೀರೋ ಒಂದು ಅನಿರೀಕ್ಷಿತ ಸಿನಿಮಾ. ರಿಷಬ್ ಸಿನಿಮಾಗಳು ಇದುವರೆಗೂ ಕ್ಲಾಸ್ ಆಡಿಯನ್ಸ್ ಕೇಂದ್ರೀಕೃತ. ಆದರೆ ಈ ಬಾರಿ ಮಾಸ್ ಪ್ರೇಕ್ಷಕರನ್ನೇ ಗಮನದಲ್ಲಿಟ್ಟುಕೊಂಡು ಹೀರೋ ಹೆಸರಿನ ಸಿನಿಮಾ ನಿರ್ಮಿಸಿದ್ದಾರೆ ರಿಷಬ್ ಶೆಟ್ಟಿ. ಸಿನಿಮಾ ನೋಡಿದಾಗ ಇಲ್ಲಿ ಗೆದ್ದದ್ದು ಮಾತ್ರ ಹೀರೋ ಅಲ್ಲ, ಹೀರೋಯಿನ್ ಎಂಬುದು ಸ್ಪಷ್ಟ.

ಮಾಸ್ ಪ್ರೇಕ್ಷಕರು ನಮ್ಮ ಸಿನಿಮಾ ನೋಡಲಿ ಅಂತ ಸಿನಿಮಾ ಟೈಟಲ್‌ನ್ನ ಹೀರೋ ಅಂತ ಇಟ್ಟ ಲೆಕ್ಕಾಚಾರ ವರ್ಕ್ ಔಟ್ ಆಗೋದು ಕಷ್ಟ. ಹಾಗಂತ ಹೀರೋ ಸಿನಿಮಾ ನೋಡಲು ಕ್ಲಾಸ್ ಪ್ರೇಕ್ಷಕರು ಬರೋದು ಸಹ ಅನುಮಾನವೇ. ಸಿನಿಮಾದ ಟೈಟಲ್ ನೋಡಿ ಭರ್ಜರಿ ಫೈಟ್‌ಗಳಿವೆ ಎಂದು ಊಹಿಸಿಕೊಂಡು ಥೇಡರ್‌ಗೆ ಬಂದ್ರೆ ಮಾಸ್ ಆಡಿಯನ್ಸ್‌ಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಹಾಗಂತ ಸಿನಿಮಾದಲ್ಲಿ ಫೈಟ್‌ಗಳಿಲ್ಲ ಅಂತಲ್ಲ, ಫೈಟ್‌ಗಳು ನಿರೀಕ್ಷೆಗೆ ತಕ್ಕಂತಿಲ್ಲ. ಹೀರೋ ಹೋಡಿತಾನೆ ಅಂದುಕೊಂಡಾಗೆಲ್ಲ ಕಾಮಿಡಿ ಮಾಡ್ತಾನೆ. ಕಾಮಿಡಿ ಮಾಡ್ತಾನೆ ಅಂದುಕೊಂಡಾಗೆಲ್ಲ ಹೊಡೆದುಬಿಡುತ್ತಾನೆ.

ಸಿನಿಮಾ ಸ್ಟೋರಿಯ ಒನ್ ಲೈನ್ ಹೇಳಬೇಕಂದ್ರೆ ಡಾನ್ ಒಬ್ಬನನ್ನು ಮದುವೆಯಾದ ಲವ್ವರ್‌ ಕೊಲ್ಲಲು ಎಅನ್ ಮನೆಗೆ ಹೋಗುವ ಹೀರೋ ಒಂದು ಬಂಗಲೆ, ಸುತ್ತಲಿನ ಕಾಡಿನಲ್ಲಿ ಬಂಧಿಯಾಗಿ ನಿರೀಕ್ಷೆಗೂ ಮೀರಿದ ಘಟನೆಗಳ ಸುಖಾಂತ್ಯದ ಸಿನಿಮಾ ಹೀರೋ..

ಹೀರೋ ತನ್ನ ಪ್ರೇಯಸಿಯನ್ನು ಕೊಲ್ತಾನಾ? ಅಥವಾ ತನ್ನ ಹೆಂಡತಿಯನ್ನು ಕೊಲ್ಲಲು ನೆಪವೊಂದನ್ನು ಮುಂದಿಟ್ಟುಕೊಂಡು ತನ್ನ ಅಶೋಕ ವನ ಎಸ್ಟೇಟ್‌ಗೆ ಕಾಲಿಡುವ ಹೀರೋವನ್ನು ಡಾನ್ ಮತ್ತು ಆತನ ಸಹಚರರು ಏನು ಮಾಡುತ್ತಾರೆ ಎಂಬುದೇ ಕಥೆ. ಇದನ್ನ ಥೇಟರ್‌ನಲ್ಲೇ ನೋಡಿದರೆ ಚಂದ.

ರಿಷಬ್ ಶೆಟ್ಟಿ, ನಿರ್ದೇಶಕರಾಗಿ ಹಲವು ಸಿನಿಮಾಗಳನ್ನು ಗೆಲ್ಲಿಸಿದ್ದಾರೆ. ಅವರು ಮೊದಲ ಬಾರಿಗೆ ನಾಯಕರಾಗಿ ನಟಿಸಿದ ಬೆಲ್ ಬಾಟಮ್ ಸಿನಿಮಾ ಸಹ ವಿಶಿಷ್ಟ ಮ್ಯಾನರೀಸಂ ಹಾಗೂ ಗಟ್ಟಿ ಕಥೆಯಿಂದ ಗೆದ್ದಿದೆ. ಆದರೆ ಈ ಬಾರಿ ಭರತ್ ಶೆಟ್ಟಿ ನಿರ್ದೇಶನದಲ್ಲಿ ಹೀರೋ ಆಗಿ ತೆರೆ ಮೇಲೆ ಬಂದಿದ್ದಾರೆ. ಬೆಲ್ ಬಾಟಮ್‌ನಂತೆ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನಬಹುದಾದರೂ ಡಿಟೇಕ್ಟಿವ್ ದಿವಾಕರ್ ಎಂಬ ಪಾತ್ರದಂತೆ ಹೀರೋ ನೆನಪಲ್ಲಿ ಉಳಿಯೋದು ಕಷ್ಟ.

ಇಡೀ ಸಿನಿಮಾದಲ್ಲಿ ಗೆದ್ದದ್ದು ಹೀರೋ ಅಲ್ಲ, ನಾಯಕಿಯಾಗಿ ನಟಿಸಿದ ಗಾನವಿ ಲಕ್ಷ್ಮಣ. ಹೀರೋ ಸಿನಿಮಾದಲ್ಲಿ ಹೆಚ್ಚು ಸ್ಕೋಪ್ ಇರೋದೇ ನಾಯಕಿ ಪಾತ್ರಕ್ಕೆ. ಅಳು, ಕಾಮಿಡಿ, ಗಂಭೀರತೆ, ಆಕ್ರೋಶ… ಹೀಗೇ ಎಲ್ಲ ಭಾವಗಳನ್ನು ಅವರು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಮಗಳು ಜಾನಕಿ ಧಾರಾವಾಹಿ ಮೂಲಕ ನಟಿಯಾಗಿ ಗುರುತಿಸಿಕೊಂಡ ಗಾನವಿ, ಈ ಚಿತ್ರದ ಮೂಲಕ ಚಿತ್ರರಂಗದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಲಕ್ಷಣ ತೋರಿಸಿದ್ದಾರೆ.

ನಿರ್ದೇಶಕ ಎಂ.ಭರತ್ ಲಾಕ್‌ಡೌನ್‌ನ ಇತಿಮಿತಿಗಳ ನಡುವೆ ಸಿನಿಮಾ ಚಿತ್ರೀಕರಣ ನಡೆಸಿರೋದು ನಿಜಕ್ಕೂ ಪ್ರಶಂಸನಾರ್ಹ. ಆದರೆ ಅಂತಿಮವಾಗಿ ಪ್ರೇಕ್ಷಕ ಬಯಸೋದು ಒಂದೊಳ್ಳೆ ಸಿನಿಮಾವನ್ನೇ ಹೊರತು ನಿರ್ದೇಶಕನ ಪರಿಸ್ಥಿತಿಯಲ್ಲ.

ಪ್ರಮುಖ ವಿಲನ್ ಆಗಿ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಾಗೆಯೇ ಉಗ್ರಂ ಮಂಜು ಸಹ ಮತ್ತೊಬ್ಬ ವಿಲನ್ ಆಗಿ ಗಮನ ಸೆಳೆಯುತ್ತಾರೆ. ಅಜನೀಶ್ ಸಂಗೀತದಲ್ಲಿ ಮೂಡಿ ಬಂದಿರುವ ಮೂರು ಇಂಪಾದ ಹಾಡುಗಳ ಪೈಕಿ ಯೋಗರಾಜ್ ಭಟ್ ಬರೆದ ನೆನಪಿನ ಹುಡುಗಿಯೇ… ಹಾಡು ಕೆಲ ಕ್ಷಣ ನೆನಪಲ್ಲಿ ಉಳಿಯುವ ಶಕ್ತಿ ಹೊಂದಿದೆ.

ಇಡೀ ಸಿನಿಮಾ ಒಂದು ಬಂಗಲೆ, ಬಂಗಲೆಗೆ ಹತ್ತಿರದ ಒಂದು ದಟ್ಟ ಕಾನನದ ನಡುವೆ ಬೆಳಗಿನಿಂದ ರಾತ್ರಿವರೆಗೂ ನಡೆಯುವ ಘಟನೆಗಳ ಕಥಾಹಂದರವನ್ನು ಛಾಯಾಗ್ರಾಹಕ ಅರವಿಂದ ಕಶ್ಯಪ್ ಚನ್ನಾಗಿ ಹಿಡಿದಿಟ್ಟಿದ್ದಾರೆ. ಸಿನಿಮಾದ ಕೊನೆಯ ಅರ್ಧ ಗಂಟೆ ಬಿಟ್ಟರೆ ಉಳಿದ ಅವಧಿಯ ಈ ಸಿನಿಮಾದ ದೃಶ್ಯಗಳಿಗೆ ನೋಡಿಸಿಕೊಂಡು ಹೋಗುವ ಗುಣವಿದೆ.

ಕೊನೆಯ‌ ಕಿಕ್ಕರ್ ಎಂದರೆ ದೃಶ್ಯವೊಂದರಲ್ಲಿ‌ ನಾಯಕ ಹೇಳುವ ಮಾತು…

“ಚಿಕ್ಕವರಿದ್ದಾಗ ಮೆಮೊರಿ‌ ಪವರ್ ಹೆಚ್ಚಾಗಲಿ ಅಂತ ಹಾರ್ಲಿಕ್ಸ್, ಕಾಂಪ್ಲೆನ್ ಕುಡಿಸ್ತಾರೆ. ಅದರ ಎಫೆಕ್ಟ್ ಗೊತ್ತಾಗೋದು ಹುಡುಗಿ ಬಿಟ್ಟು ಹೋದಾಗ…”

ರೇಟಿಂಗ್: ***

*: ಚನ್ನಾಗಿಲ್ಲ.
**: ಪರವಾಗಿಲ್ಲ
***: ನೋಡಬಹುದು
****: ನೋಡಬೇಕು
*****: ಮಿಸ್ ಮಾಡ್ಕೊಬೇಡಿ.

ಹೈಟೆಕ್ ವೇಶ್ಯಾವಾಟಿಕೆ ದಂಧೆ; ಮೂವರ ಬಂಧನ.!

ವಿಜಯಸಾಕ್ಷಿ ಸುದ್ದಿ, ಗಂಗಾವತಿ

ಹೊಸಳ್ಳಿ ರಸ್ತೆಯ ಲಕ್ಷ್ಮಿ ವೆಂಕಟೇಶ್ವರ ಕಾಲೋನಿಯಲ್ಲಿ ಹೈಟೆಕ್ ವೈಶ್ಯವಾಟಿಕೆ ದಂಧೆ ನಡೆಸಲಾಗುತ್ತಿದೆ ಎಂದು ಖಚಿತ ದೂರು ಬಂದ ಹಿನ್ನೆಲೆಯಲ್ಲಿ ನಗರ ಪೋಲಿಸರು ದಾಳಿ ಮಾಡಿ ಇಬ್ಬರು ಮಹಿಳೆಯರು ಸೇರಿ ಐವರನ್ನು ವಶಕ್ಕೆ ಪಡೆದುಕೊಂಡ ಘಟನೆ ಶುಕ್ರವಾರ‌ ನಡೆದಿದೆ.

DYSP ರುದ್ರೇಶ ಉಜ್ಜನಕೊಪ್ಪ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಪೋಲಿಸ್ ಠಾಣೆಯ PI ವೆಂಕಟಸ್ವಾಮಿ, ನಗರದ ಹೊಸಳ್ಳಿ ರಸ್ತೆಯಲ್ಲಿ ಬರುವ ಲಕ್ಷ್ಮೀ ವೆಂಕಟೇಶ್ವರ ಕಾಲೋನಿಯ ಸಿದ್ದಲಿಂಗಯ್ಯ ಸಿದ್ದಪ್ಪ ಎನ್ನುವವರ ಮನೆಯನ್ನು ವಿಜಯಪುರ ಜಿಲ್ಲೆಯ ಬಸವರಾಜ ವಕ್ಕಲಿಗ ಎಂಬ ವ್ಯಕ್ತಿ ಕಳೆದ ಫೆ.20ರಂದು ಮನೆ ಬಾಡಿಗೆಗೆ ತೆಗೆದುಕೊಂಡು ವೈಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

ಮೂವರು ಅಂದರ್

ಮೂಲತಃ ವಿಜಯಪುರ ಜಿಲ್ಲೆಯವನಾದ ಬಸವರಾಜ ವಕ್ಕಲಿಗ, ಮಹಾರಾಷ್ಟ್ರದ ಪುಣೆ ಹಾಗು ವಿಜಯಪುರದ ಕಡೆಯಿಂದ ಮಹಿಳೆಯರನ್ನು ಕರೆ ತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂದು ತಿಳಿದು ಬಂದಿದ್ದು, ಸಧ್ಯಕ್ಕೆ ಮಹಾರಾಷ್ಟ್ರ ಮೂಲದ ಒಬ್ಬ ಸಂತ್ರಸ್ತೆ ಮತ್ತು ವಿಜಯಪುರ ಜಿಲ್ಲೆಯ ಒಬ್ಬ ಸಂತ್ರಸ್ತೆ ಸೇರಿ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದೆ.

ಬಸವರಾಜ ವಿಜಯಪುರ,
ಸುರೇಶ್ ಸಿಂಧನೂರು ಹಾಗೂ ಬಸವರಾಜ ತೋಟದ ಮಸ್ಕಿ ಎಂಬುವವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಗದಗ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ: ಪರಿಶಿಷ್ಟ ಜಾತಿಯವ್ರು ಕುಡಿದ ಚಹಾ ಗ್ಲಾಸ್ ತೊಳೆದ ತಹಶೀಲ್ದಾರ್

ವಿಜಯಸಾಕ್ಷಿ ಸುದ್ದಿ, ಗದಗ

21ನೇ ಶತಮಾನಕ್ಕೆ ಪಾದಾರ್ಪಣೆ ಮಾಡಿದ್ದರೂ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿದೆ. ಮೇಲು ಕೀಳೆಂಬ ಬೇಧ ಭಾವ ತಾಂಡವಾಡುತ್ತಿದೆ.

ಈ ನಡುವೆ ಅಸ್ಪೃಶ್ಯತೆ ನಿವಾರಣೆಗೆ ಜಿಲ್ಲೆಯ ಮುಂಡರಗಿ ತಾಲೂಕು ತಹಶೀಲ್ದಾರ ಆಶಪ್ಪ ಪೂಜಾರ ಅವರು ಸ್ವತಃ ಪರಿಶಿಷ್ಟ ಜಾತಿ ಜನಾಂಗದವರು ಕುಡಿದ ಚಹಾ ಕಪ್ಪನ್ನು(ಗ್ಲಾಸ್) ತೊಳೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದು, ತಹಶೀಲ್ದಾರ್ ರ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ವಿಷಯ ತಿಳಿದ ಆಶಪ್ಪ ಪೂಜಾರ ಅವರು ಗುರುವಾರ ಗ್ರಾಮಕ್ಕೆ ತೆರಳಿ ಗ್ರಾಮದಲ್ಲಿರುವ ಸವರ್ಣಿಯರಿಗೆ ತಿಳುವಳಿಕೆ ನೀಡಿದರು.

ಹಾರೋಗೇರಿ ಗ್ರಾಮದಲ್ಲಿ ಬಹಳ ದಿನಗಳ ಹಿಂದೆ ದಲಿತರಿಗೆ ಚಹಾ ಅಂಗಡಿ ಒಳಗೆ ಪ್ರವೇಶ ಹಾಗೂ ಕ್ಷೌರ ಮಾಡುವುದನ್ನು ನಿಷೇಧಿಸಲಾಗಿತ್ತು. ಪರಿಶಿಷ್ಟ ಜಾತಿಯವರ ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೆ ಸರ್ವರ್ಣಿಯರು ಊರಲ್ಲಿರುವ ಚಹಾ ಅಂಗಡಿಗಳನ್ನು ಬಂದ್ ಮಾಡುತ್ತಿದ್ದರು.

ಹೀಗಾಗಿ ಗ್ರಾಮದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ತಹಶೀಲ್ದಾರ್ ಆಶಪ್ಪ ಪೂಜಾರಿ, ಸಿಪಿಐ ಸುಧೀರ್ ಕುಮಾರ್ ಬೆಂಕಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಅವರು ಜಾಗೃತಿ ಸಭೆ ನಡೆಸಿ, ಗ್ರಾಮಸ್ಥರೊಂದಿಗೆ ಚಹಾದ ಅಂಗಡಿಗೆ ಹೋಗಿ ಚಹಾ ಗ್ಲಾಸ್ ತೊಳೆಯುವ ಮೂಲಕ ಜಾಗೃತಿ ಮೂಡಿಸಿದರಲ್ಲದೇ, ಮತ್ತೊಬ್ಬರಿಗೆ ಮಾದರಿಯಾದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಎಂ.ಎ.ನದಾಫ್, ಹಾರೋಗೇರಿ ಗ್ರಾಪಂ ಪಿಡಿಒ ಮಹೇಶ್ ಅಲ್ಲಿಪೂರ ಅವರು ಇದ್ದರು.

ಜಿಮ್ಸ್ ವೈದ್ಯರ ಹೆಸರಲಿ ನಕಲಿ ಫೇಸ್‍ಬುಕ್ ಖಾತೆ: ಹಣಕ್ಕಾಗಿ ಸ್ನೇಹಿತರಿಗೆ ಬೇಡಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಸರಕಾರಿ ವೈದ್ಯರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ವೈದ್ಯರ ಸ್ನೇಹಿತರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.

ನಗರದ ಜಿಲ್ಲಾಸ್ಪತ್ರೆ ವೈದ್ಯ ಡಾ. ಪ್ರಕಾಶ ಹೊಸಮನಿ ಎಂಬುವವರ ಫೇಸ್ಬುಕ್ ಖಾತೆಯನ್ನು‌ ಫೇಕ್ ಮಾಡಿ ಹಣ ದರೋಡೆಗೆ ಮುಂದಾಗಿದ್ದಾರೆ.

ಡಾ.ಪ್ರಕಾಶ ಅವರು ನಗರದಲ್ಲಿ ಪ್ರತಿಷ್ಠಿತ ನ್ಯೂರೋ ಸರ್ಜನ್ ಸ್ಪೆಶಲಿಸ್ಟ್ ಆಗಿದ್ದು, ನಕಲಿ ಫೇಸ್ಬುಕ್ ಖಾತೆ ಮೂಲಕ ಸ್ನೇಹಿತರಿಗೆ ತುರ್ತಾಗಿ 15,000 ಬೇಕಿತ್ತು ಅಂತಾ ಸೈಬರ್ ದರೋಡೆಕೋರರು ಪೇಸ್ಬುಕ್ ಸಂದೇಶ ಕಳುಹಿಸಿದ್ದಾರೆ.

ಈ ವಿಷಯ ಸ್ನೇಹಿತರಿಂದ ಡಾ.ಪ್ರಕಾಶ ಅವರ ಗಮನಕ್ಕೆ ಬಂದಿದ್ದು, ತಮ್ಮೆಲ್ಲಾ ಸ್ನೇಹಿತರಿಗೆ ಖಾತೆ ಫೇಕ್ ಆಗಿರೋ ವಿಚಾರ ತಿಳಿಸಿದ್ದಾರೆ. ಅಲ್ಲದೇ, ಯಾರೂ ಕೂಡಾ ಹಣ ನೀಡದಂತೆ ತಮ್ಮ ವಿವಿಧ ವಾಟ್ಸಪ್ ಗ್ರುಪ್ ಗಳಲ್ಲಿ ಮನವಿ ಮಾಡಿದ್ದಾರೆ.

ಅಲ್ಲದೇ, ವೈದ್ಯರ ಸಹೋದರ ಸಂಭಂಧಿಗೂ ಈ ರೀತಿ ಪ್ರಕಾಶ ಅವರ ನಕಲಿ‌ ಖಾತೆಯಿಂದ ಹಣದ ಬೇಡಿಕೆ ಬಂದಾಗ ದರೋಡೆಕೋರರಿಂದ ಮೊದಲು ಕೇವಲ ೧ ರೂ ಹಾಕಿಸಿಕೊಂಡಿದ್ದಾರೆ. ಈ ವೇಳೆ ಹಣ ಸಂದಾಯವಾಗಿ ದರೋಡೆಕೋರರ ಯುಟಿಐ ಸಂಖ್ಯೆ ಟ್ರೇಸ್ ಮಾಡಿದಾಗ ದರೋಡೆಕೋರರ ಹೆಸರನ್ನು ಸಹ ತೋರಿಸಿದೆ‌. ಈ ರೀತಿ ಸೈಬರ್ ಕ್ರೈಂ ದರೋಡೆಕೋರರನ್ನು ಪತ್ತೆ ಹಚ್ಚಬಹುದು ಎಂಬುವುದು ಪ್ರಕಾಶ ಅವರ ಅಭಿಪ್ರಾಯವಾಗಿದೆ.

ಜಿಲ್ಲೆಯಲ್ಲಿಯೂ ಸೈಬರ್ ಕ್ರೈಂ ದಂಧೆ ಹಬ್ಬಿದ್ದು, ಈ ಹಿಂದೆ ಪೊಲೀಸರನ್ನೂ ಬಿಡದೇ ಫೇಕ್ ಅಕೌಂಟ್ ಬಳಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದೀಗ ವೈದ್ಯರಿಗೂ ನಕಲಿ ಜಾಲತಾಣದ ತಲೆನೋವು ಶುರುವಾಗಿದೆ.
ಈ ನಿಟ್ಟಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುವಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಾ.ಪ್ರಕಾಶ ಹೊಸಮನಿ ಒತ್ತಾಯಿಸಿದ್ದಾರೆ.

ರಾಜಸ್ಥಾನದಲ್ಲಿ ಪ್ರೇಯಸಿಯೊಂದಿಗೆ ಐಶಾರಾಮಿ ಜೀವನ: ಕೊನೆಗೂ ಪೊಲೀಸರ ಕೈಗೆ ಸಿಕ್ಕ ಬಿದ್ದ ಆರೋಪಿ

ವಿಜಯಸಾಕ್ಷಿ ಸುದ್ದಿ, ಗದಗ

ಬ್ಯಾಂಕ್ ಗೆ ಹಣ ಕಟ್ಟಲು ಹೋಗಿ ಬೈಕ್ ಸಮೇತ 7 ಲಕ್ಷ ರೂ. ಹಣ ದೋಚಿಕೊಂಡು ಪರಾರಿಯಾಗಿ ಪ್ರೇಯಸಿಯೊಂದಿಗೆ ರಾಜಸ್ಥಾನದಲ್ಲಿ ಐಶಾರಾಮಿ ಜೀವನ ಕಳೆಯುತ್ತಿದ್ದ ಆರೋಪಿ ರಾಮಸಿಂಗ್ ನನ್ನು ಬಂಧಿಸುವಲ್ಲಿ ಗದಗ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ವಿಕಾಸ್ ಜೈನ್ ಎಂಬುವವರ ಮಾಲೀಕತ್ವದ ಜೈನ್ ಟ್ರೇಡರ್ಸ್ ಎಂಬ ಹೋಲ್ ಸೇಲ್ ಕಿರಾಣಿ ಅಂಗಡಿಯಲ್ಲಿ ಆರೋಪಿ ರಾಮಸಿಂಗ್ ಕೆಲಸ ಮಾಡುತ್ತಿದ್ದ. ಈತನನ್ನು ಮಾಲೀಕರು ಮನೆಯ ಮಗನಂತೆ ನೋಡಿಕೊಂಡಿದ್ದರು. ಮನೆಯಲ್ಲಿಯೇ ಊಟ, ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಆದರೆ, ರಾಮಸಿಂಗ್ ಉಂಡ ಮನೆಯ ಜಂತಿ ಎಣಿಸಿದ್ದ.

ಕಳೆದ ತಿಂಗಳು ಜನೆವರಿ 19 ರಂದು ಜೈನ್ ಟ್ರೇಡರ್ಸ್ ಮಾಲೀಕ ವಿಕಾಸ್ ಜೈನ್ 7 ಲಕ್ಷ ರೂ. ಹಣ ಹಾಗೂ ಬೈಕ್ ಕೊಟ್ಟು ಏಕ್ಸಿಸ್ ಬ್ಯಾಂಕಿಗೆ ಹಣ ಕಟ್ಟಲು ಕಳುಹಿಸಿದ್ದರು. ಆದರೆ, ನಯವಂಚಕ ರಾಮಸಿಂಗ್, ಹಣ ಹಾಗೂ ದ್ವಿಚಕ್ರ ವಾಹನ ಸಮೇತ ನಾಪತ್ತೆಯಾಗಿದ್ದ.

ಹಣದೊಂದಿಗೆ ಪರಾರಿಯಾಗಿದ್ದ ರಾಮಸಿಂಗ್ ಕದ್ದ ಹಣವನ್ನೆಲ್ಲಾ ತನ್ನ ಪ್ರೇಯಸಿಯೊಂದಿಗೆ ಕಾಲ ಕಳೆಯಲು ಬಳಸಿಕೊಳ್ಳಲು ನಿರ್ಧರಿಸಿದ್ದನು‌. ಈ ನಿಟ್ಟಿನಲ್ಲಿ ರಾಜಸ್ಥಾನಕ್ಕೆ ಹೋಗಿ ತಾನು ಇದ್ದಲ್ಲಿಗೆ ತನ್ನ ಹುಡುಗಿಯನ್ನು ಕರೆಸಿಕೊಂಡು ಅಲ್ಲಲ್ಲಿ ಜಾಲಿ ರೇಡ್ ನಡೆಸುತ್ತಾ ಪಾರ್ಕ್ ಅದು-ಇದು ಎಂದು ಸುತ್ತಾಡುತ್ತಾ ಪ್ರಿಯತಮೆಯೊಂದಿಗೆ ಸುಖಿಯ ಜೀವನ ಕಳೆಯುತ್ತಿದ್ದ.

ಆದರೆ, ಪ್ರಕರಣದ ಬೆನ್ನಟ್ಟಿದ್ದ ಪೊಲೀಸರು ರಾಮಸಿಂಗ್ ನ ಕಾಲ್ ಡಿಟೇಲ್ಸ್ ಪಡೆದುಕೊಂಡು ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಯ ಸುಳಿವು ಸಿಕ್ಕಿದ್ದು, ಅಹ್ಮದಾಬಾದ್ ರೈಲು ನಿಲ್ದಾಣದಲ್ಲಿ ಆರೋಪಿ ರಾಮಸಿಂಗ್ ನನ್ನು ಬಂಧಿಸಿ ಕರೆ ತಂದಿದ್ದಾರೆ. ಪ್ರಿಯತಮೆ ಮೆಚ್ಚಿಸಲು ಆಕೆಗೆ ಖರ್ಚು ಮಾಡಿ ತೃಪ್ತಿ ಪಡಿಸಲು ಕಳ್ಳತನವೆಂಬ ದುರ್ಮಾರ್ಗ ಹಿಡಿದಿದ್ದ ರಾಮಸಿಂಗ್ ಸದ್ಯ ಜೈಲಿನಲ್ಲಿ‌ ಮುದ್ದೆ ಮುರಿಯುತ್ತಿದ್ದಾನೆ.

ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ಹಣ ಕಳೆದುಕೊಂಡಿದ್ದ ಜೈನ್ ಟ್ರೇಡರ್ಸ್ ಮಾಲೀಕ ವಿಕಾಸ್ ಜೈನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಹಣ ವಾಪಸ್ ನೀಡಿದ್ದಕ್ಕೆ ಅಂಗಡಿ ಮಾಲೀಕ ವಿಕಾಸ್ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕೊಪ್ಪಳ; ಎಸ್‌ಕೆ‌ಎನ್‌ಜಿ ಕಾಲೇಜು ವಿದ್ಯಾರ್ಥಿ ಸಾವು

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ (ಗಂಗಾವತಿ): ಇಂದು ನಸುಕಿನ ಜಾವ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿದ್ದರಿಂದ ಗಂಗಾವತಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಮ್ಮ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಮೂರನೇ ಸೆಮೆಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಹನುಮೇಶ್ ಹಂಚಿನಾಳ (20) ಸಾವನ್ನಪ್ಪಿದ್ದಾನೆ. ಆಸ್ಪತ್ರೆ ತಲುಪುವಷ್ಟರಲ್ಲಿ ವಿದ್ಯಾರ್ಥಿ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಬಾಯಲ್ಲಿ ನೊರೆ ಕಾಣಸಿಕೊಂಡಿದ್ದರಿಂದ ಸಾವಿಗೆ ನಿಖರ ಕಾರಣಗಳು ತಿಳಿಯಲು ಶವಪರೀಕ್ಷೆ ಮಾಡಬೇಕು. ಬಳಿಕವಷ್ಟೇ ವಿದ್ಯಾರ್ಥಿಯ ಸಾವಿಗೆ ಕಾರಣ ಗೊತ್ತಾಗುತ್ತದೆ ಎಂದು ಆಸ್ಪತ್ರೆಯ ವೈದ್ಯಸಿಬ್ಬಂದಿ ತಿಳಿಸಿದ್ದಾರೆ. ಮೃತ ವಿದ್ಯಾರ್ಥಿ ಆತ್ಮಕ್ಕೆ ಶಾಂತಿ ಕೋರಿ ಕಾಲೇಜಿನಲ್ಲಿ ಮೌನ ಆಚರಿಸಲಾಯಿತು.

error: Content is protected !!