ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಮಾಜಿ ಸಚಿವ ಶಿವರಾಜ ತಂಗಡಗಿ ಶ್ರೀದೇವಿ ಮಟಕಾ ಕಂಪನಿ ವಿರುದ್ಧ ಮಾತ್ರ ಎಸ್ಪಿಯವರಿಗೆ ದೂರು ನೀಡಿರುವುದು ಸಮಂಜಸವಲ್ಲ, ಅವರ ಬೆಂಬಲಿಗ ವಿಶ್ವನಾಥ ಸಹ ಮಟ್ಕಾ ದಂಧೆಯಲ್ಲಿ ತೊಡಗಿದ್ದಾರೆ. ಕೂಡಲೇ ಎಲ್ಲ ಮಟಕಾ ಕಂಪನಿಗಳನ್ನು ಬಂದ್ ಮಾಡಿಸಿ ದಂಧೆಕೋರರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮಂಗಳವಾರ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆಯ ಮುಖಂಡರು ದೂರು ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರಿಗೆ ದೂರು ಸಲ್ಲಿಸಿದ ಅವರು, ತಂಗಡಗಿಯವರಿಗೆ ನಿಜವಾಗಲೂ ಮಟಕಾ ಬಂದ್ ಮಾಡಿಸುವ ಕಳಕಳಿ ಇದ್ದರೆ ಎಲ್ಲ ಮಟಕಾ ಕಂಪನಿಗಳನ್ನು ಬಂದ್ ಮಾಡಿಸುವಂತೆ ದೂರು ನೀಡಬೇಕಿತ್ತು. ಆದರೆ ಶಿವರಾಜ ಅವರ ಕಣ್ಣು ಶ್ರೀದೇವಿ ಕಂಪನಿ ಮೇಲಷ್ಟೇ ಯಾಕೆ ಎಂದು ಸಂಘಟನೆಯ ಗಂಗಾವತಿ ತಾಲೂಕಾಧ್ಯಕ್ಷ ಬಿ.ಕಿಶೋರ್ ಪ್ರಶ್ನಿಸಿದರು.
ಶಿವರಾಜ ತಂಗಡಗಿಯವರ ಬಲಗೈ ಭಂಟ ವಿಶ್ವನಾಥಸ್ವಾಮಿ ಕನಕಗಿರಿ 15-20 ವರ್ಷಗಳಿಂದ ಮಟ್ಕಾ ಆಡಿಸುತ್ತಿದ್ದಾರೆ. ಮೊದಲು ಅವರನ್ನು ಗಡಿಪಾರು ಮಾಡಬೇಕು. ಜೊತೆಗೆ ಜಿಲ್ಲೆಯ ಯಾವುದೇ ಭಾಗದಲ್ಲಾದರೂ, ಯಾವುದೇ ಮಟಕಾ ಕಂಪನಿಯಾದರೂ ಸರಿ ಎಲ್ಲವನ್ನೂ ಬಂದ್ ಮಾಡಿಸಬೇಕು ಎಂದು ಅವರು ಒತ್ತಾಯಿಸಿದರು.
ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ಕಳೆದ ಮೂರು ಗಂಟೆಯಿಂದ ಚಿರತೆ ಓಡಾಡುತ್ತಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ, ಗದಗ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವಿಜಯಸಾಕ್ಷಿಗೆ ಮಾಹಿತಿ ನೀಡಿರುವ ಅವರು, ಇದುವರೆಗೂ ಗದಗ ನಗರದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಚಿರತೆ ಕಾಣಿಸಿಕೊಂಡಿರುವ ಕುರಿತು ಯಾವುದೇ ಖಚಿತತೆ ಇಲ್ಲ. ಆದರೂ ಜನರ ಆತಂಕ ನಿವಾರಣೆಗಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಇರಬಹುದು ಎನ್ನಲಾಗಿರುವ ಸ್ಥಳದಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ಸೂರ್ಯಸೇನ್ ಸ್ಪಷ್ಟಪಡಿಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಹಂಪಿ ಝೂನಿಂದ ಅನಸ್ತೇಶಿಯಾ ಇಂಜೆಕ್ಷನ್ ತರಿಸಲಾಗುತ್ತಿದೆ. ಅದರ ಜೊತೆಗೆ ಡ್ರೋಣ್ ಕ್ಯಾಮೆರಾವನ್ನೂ ಸಹ ಬಳಸಿಕೊಳ್ಳಲಾಗುವುದು. ರಕ್ಷಣಾ ಕಾರ್ಯಾಚರಣೆ ನಡೆಸುವ ತಂಡವೂ ಸಹ ಸಿದ್ಧವಾಗಿದೆ ಎಂದು ಅವರು ವಿಜಯಸಾಕ್ಷಿಗೆ ತಿಳಿಸಿದ್ದಾರೆ.
ನಗರದ ರಿಂಗ್ ರೋಡ್ ನಲ್ಲಿರುವ ಅಂಬೇಡ್ಕರ್ ಭವನದ ಸುತ್ತಮುತ್ತ ಚಿರತೆ ನೋಡಿರುವುದಾಗಿ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದರಿಂದ ಚಿರತೆಯ ಸುದ್ದಿ ಹರಡಿದ್ದು, ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ನಡೆಸುತ್ತಿದ್ದಾರೆ.
ಇದರಿಂದಾಗಿ ಅಂಬೇಡ್ಕರ್ ಭವನದ ಹಿಂದೆ ಇರುವ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದು, ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.
-ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಎಸ್ಪಿ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯ ರೋಚಕ ಕ್ಷೇತ್ರ ಕನಕಗಿರಿ ವಿಧಾನಸಭಾ ಕ್ಷೇತ್ರದ ರಾಜಕೀಯ ಜಗಳ್‌ಬಂಧಿ ತಾರಕಕ್ಕೇರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಟ್ರ್ಯಾಕ್ಟರ್ ರ‌್ಯಾಲಿ ಮಾಡಿದರೆ, ವಿಜಯೇಂದ್ರ ಆಗಮನದ ಹಿನ್ನೆಲೆಯಲ್ಲಿ ಬಿಜೆಪಿ ಸಹ ಭಾರೀ ಪ್ರಮಾಣದ ರ‌್ಯಾಲಿ ನಡೆಸಿತು. ಈ ನಡುವೆ ಶ್ರೀದೇವಿ ಹೆಸರಿನ ಮಟಕಾ ದಂಧೆ ಕುರಿತು ದೊಡ್ಡ ಚರ್ಚೆಯೇ ಶುರುವಾಗಿದೆ.
ಜಿಲ್ಲೆಯಲ್ಲಿ ವಿಶೇಷವಾಗಿ ಕನಕಗಿರಿ ಕ್ಷೇತ್ರದಲ್ಲಿ ನಾನಾ ಹೆಸರಿನಲ್ಲಿ ಮಟಕಾ ಆಡಿದರೆ ಪೊಲೀಸ್ ಅತಿಥಿಯಾಗುವುದು ನಿಶ್ಚಿತ. ಆದರೆ ಶ್ರೀದೇವಿ ಹೆಸರಿನ ಮಟಕಾ ಆಡಿದರೆ ಯಾವ ಪೊಲೀಸರು ಏನೂ ಮಾಡಲ್ವಂತೆ…?
ಹೀಗಂತ ದೂರು ನೀಡಿದ್ದು ಮಾಜಿ ಸಚಿವ ಶಿವರಾಜ ತಂಗಡಗಿ. ಶ್ರೀದೇವಿ ಹೆಸರಿನಲ್ಲಿ ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ಮಟಕಾ ಆಡಿಸುತ್ತಿದ್ದಾರೆ. ಇದು ಶೇಕಡಾ ನೂರರಷ್ಟು ಸತ್ಯ. ಮೊದಲ ಹಂತವಾಗಿ ದೂರು ದಾಖಲಿಸುತ್ತಿದ್ದೇವೆ. ಪೊಲೀಸರು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿಯವರು, ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರಿಗೆ ಮನವಿ ಸಲ್ಲಿಸಿದರು.
ಮಟಕಾ ದಂಧೆ, ಮರಳು ಅಕ್ರಮ ನಾನು ಮಂತ್ರಿಯಾದಾಗಲೂ ಕನಕಗಿರಿ ಕ್ಷೇತ್ರದಲ್ಲಿ ಇತ್ತು. ಸಾಧ್ಯವಾದಷ್ಟು ಅಕ್ರಮ ನಿಯಂತ್ರಣಕ್ಕೆ ಶ್ರಮಿಸಿದ್ದೇನೆ. ಈಗ ನನ್ನ ಕ್ಷೇತ್ರದಲ್ಲೇ ಗಂಗಾವತಿಯ ಪೊಲೀಸ್ ಅಧಿಕಾರಿಯೊಬ್ಬರು ಮಟಕಾ ದಂಧೆ ನಡೆಸಲು ಕುಮ್ಮಕ್ಕು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಸತ್ಯಾಂಶ ಇಲ್ಲದ, ಸಮರ್ಪಕ ಸಾಕ್ಷಿಗಳಲ್ಲದ ಯಾವ ಸಂಗತಿಯ ಬೆನ್ನ ಹಿಂದೆ ಬೀಳಲ್ಲ. ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು. ತನಿಖೆ ಸರಿಯಾಗಿದ್ದರೆ ತಪ್ಪಿತಸ್ಥರು ಖಂಡಿತವಾಗಿ ಬಲೆಗೆ ಬೀಳ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ತಂಗಡಗಿ, ಒಂದೊಮ್ಮೆ ಈ ಪ್ರಕರಣವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಉದಾಸೀನ ಮಾಡಿದರೆ ಶ್ರೀದೇವಿ ಹೆಸರಿನ ಮಟಕಾ ದಂಧೆಗೆ ಪೊಲೀಸ್ ಅಧಿಕಾರಿ ಕುಮ್ಮಕ್ಕು ನೀಡುತ್ತಿರುವ ಆಡಿಯೊವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು. ಆನಂತರ ಬೀದಿಗಿಳಿದು ಹಂತ ಹಂತವಾಗಿ ಹೋರಾಟ ನಡೆಸಲಾಗುವುದು. ಈ ಬಗ್ಗೆ ಅಧಿವೇಶನದಲ್ಲೂ ನಮ್ಮ ಪಕ್ಷದ ಮುಖಂಡರು ಚರ್ಚಿಸುತ್ತಾರೆ ಎಂದು ತಿಳಿಸಿದರು.
“ಈಗಾಗಲೇ ಈ ಬಗ್ಗೆ ತನಿಖೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಮಟಕಾ ದಂಧೆಯಲ್ಲಿ ತೊಡಗಿದ್ದ ಸುಮಾರು 21 ಜನರನ್ನು ಗಡಿ ಪಾರು ಮಾಡಲಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿ ಭಾಗಿಯಾಗಿದ್ದಾರೆ ಎನ್ನುವ ಆರೋಪ ಬಂದಿದ್ದು, ಆರೋಪ ಸಾಬೀತಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.”
ಟಿ. ಶ್ರೀಧರ್, ಎಸ್ಪಿ, ಕೊಪ್ಪಳ
ಹ…. ದುಡ್ಡಿನಿಂದ ಬಿಜೆಪಿ ಅಧಿಕಾರಕ್ಕೆ “ಕನಕಗಿರಿ ಕ್ಷೇತ್ರದಲ್ಲೇ ಅಕ್ರಮಗಳು ಹೆಚ್ಚುತ್ತಿವೆ. ಜವಾಬ್ದಾರಿಯುತ ನಾಗರಿಕನಾಗಿ ಪೊಲೀಸರಿಗೆ ದೂರು ಕೊಟ್ಟಿದ್ದೇನರ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಹ… ದುಡ್ಡಿನಿಂದ. ನಮ್ಮ ಪಕ್ಷದಲ್ಲಿ ಶಾಸಕ, ಸಚಿವರಾಗಿದ್ದವರು ಬಿಜೆಪಿ ಜೊತೆ ಕೈ ಜೋಡಿಸಿದ್ದು ಹ…. ದುಡ್ಡಿಗಾಗಿ.”
ನಾವು ಪ್ರಮಾಣಿಕವಾಗಿ ಸರ್ಕಾರವನ್ನು ತಂದಿದ್ದೇವೆ. ಆದರೆ, ಯಾವುದೇ ಜೂಜಾಟದ ದುಡ್ಡಿನಿಂದ ಸರ್ಕಾರ ರಚನೆ ಮಾಡುವ ದರ್ದು ನಮಗಿಲ್ಲ ಎಂದು ತೋಟಗಾರಿಕೆ ಇಲಾಖೆ ಸಚಿವ ಆರ್. ಶಂಕರ್ ಅವರು ಹೆಚ್ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಸ್ಪೀಟ್, ಜೂಜಾಟದ ಹಡಬಿಟ್ಟಿ ದುಡ್ಡಿನಿಂದ ಬಿಜೆಪಿ ಸರ್ಕಾರ ತಂದಿದ್ದಾರೆ ಎಂಬ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರ ಹೇಳಿಕೆ ಪ್ರತಿಕ್ರಿಯಿಸಿ ಅವರು, ರಾಜಕಾರಣ ಅಂದರೆ ಆರೋಪ ಪ್ರತ್ಯಾರೋಪಗಳು ಇದ್ದದ್ದೆ. ಆದರೆ, ನಾವು ಯಾವುದೇ ಜೂಜಾಟದ ಹಣದಿಂದ ಸರ್ಕಾರ ತಂದಿಲ್ಲ. ಆ ದರ್ದು ನಮಗೆ ಇಲ್ಲ ಎಂದರು. ಇನ್ನು ಎಚ್. ವಿಶ್ವನಾಥ ಅವರ ಕುರಿತು ಯಾವುದೇ ಪ್ರತಿಕ್ರಿಯೆ ನೀಡದ ಸಚಿವ ಆರ್. ಶಂಕರ್ ಅವರು, ನನ್ನದು ದೊಡ್ಡ ಇಲಾಖೆ. ನಾನು ತೋಟಗಾರಿಕೆ ಇಲಾಖೆಯ ಸಚಿವನಾಗಿ ಅಧಿಕಾರ ವಹಿಸಿಕೊಂಡು ಈಗಷ್ಟೇ ಕೆಲ ದಿನಗಳಾಗಿವೆ. ಇಲಾಖೆಯ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳುತ್ತಿದ್ದೇನೆ. ಆದರೆ, ತೋಟಗಾರಿಕಾ ಇಲಾಖೆಗೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ ಎಂದರು.
ತೋಟಗಾರಿಕಾ ಬೆಳೆಗಳಿಗೆ ಶಿಥಿಲ ಘಟಕಗಳು ಸೇರಿದಂತೆ ಅನೇಕ ಸೌಲಭ್ಯಗಳು ಬೇಕು. ಇದಕ್ಕಾಗಿ ಹೆಚ್ಚಿನ ಅನುದಾನ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಲಾಖೆಗೆ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಸಿಎಂ ಅವರಿಗೆ ಮನವಿ ಮಾಡಿದ್ದೇನೆ ಎಂದರು.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎಂಬುದರ ಕುರಿತು ನನ್ನ ಮನವಿಯನ್ನು ಸಿಎಂ ಅವರಿಗೆ ನಾನು ಸಲ್ಲಿಸಿದ್ದೇನೆ. ಎಲ್ಲ ಸಮುದಾಯಗಳನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದು ಸಿಎಂ ಅವರಿಗೆ ಗೊತ್ತಿದೆ. ಅದನ್ನು ಅವರು ಸಮರ್ಪಕವಾಗಿ ನಿಭಾಯಿಸುತ್ತಾರೆ. ನಾನು ಪ್ರಾಮಾಣಿಕವಾಗಿ ನಮ್ಮ ಸಮುದಾಯದ ಅಹವಾಲನ್ನು ಸಿಎಂ ಅವರಿಗೆ ಸಲ್ಲಿಸಿದ್ದೇನೆ. ಉಳಿದಂತೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು
ನಗರದ ಕುಸನೂರು ರಸ್ತೆಯಲ್ಲಿರುವ ತಿಲಕನಗರ ಬಡಾವಣೆಯಲ್ಲಿ ನಳದ ಪೈಪುಗಳು ಒಡೆದು ಹೋಗಿದ್ದು , ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಕರ್ನಾಟಕ ವೆಲ್ಫೇರ್ ಪಾರ್ಟಿ ಕಲಬುರ್ಗಿ ದಕ್ಷಿಣ ದಕ್ಷಿಣ ವಲಯ ಅಧ್ಯಕ್ಷ ಪ್ರಕಾಶ್ ಪಾಟೀಲ್ ಆಗ್ರಹಿಸಿದ್ದಾರೆ.
ಕಲಬುರ್ಗಿ ಒಳಚರಂಡಿ ಮಂಡಳಿ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು, ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಮಾಡುವಾಗ ಕೆಲವು ಕಡೆಗಳಲ್ಲಿ ನಳದ ಪೈಪುಗಳು ಒಡೆದು ಹೋಗಿವೆ.
ಬೇಸಿಗೆಕಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಡಾವಣೆಯ ಜನರಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಕೂಡಲೇ ಒಳಚರಂಡಿ ಮಂಡಳಿ ದುರಸ್ತಿಗೆ ಮುಂದಾಗುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಸಲೀಂ ಅಹ್ಮದ್ ಚಿತಾಪುರ, ಜಿಲ್ಲಾ ಉಪಾಧ್ಯಕ್ಷರು ಸಿದ್ದಣ್ಣ ಚಕ್ರ ಜಿ, ಕಲಬುರ್ಗಿ ದಕ್ಷಿಣ ಮತಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಅಫ್ಜಲ್ ಖಾನ್ ಇನ್ನಿತರರು ಉಪಸ್ಥಿತರಿದ್ದರು.
ನಗರದ ಖಾನತೋಟದ ಸಂತೋಷ ಖಟವಟೆ ಅವರ ಮನೆಯ ಬಳಿಯಿರುವ ಸಾರ್ವಜನಿಕ ಸ್ಥಳವೊಂದರಲ್ಲಿ ಇಸ್ಪೀಟು ಆಡುತ್ತಿದ್ದ ಇಬ್ಬರು ವ್ಯಾಪಾರಸ್ಥರು ಸೇರಿದಂತೆ ಹತ್ತು ಜನರನ್ನು ಬಂಧಿಸಿ, ಸುಮಾರು 48,780 ರೂ. ಹಣ ವಶಪಡಿಸಿಕೊಂಡಿದ್ದಾರೆ.
ವ್ಯಾಪಾರಸ್ಥರಾದ ಗದಗ ಶಹರದ ವಿಎನ್ ಟಿ ರಸ್ತೆಯ ನಿವಾಸಿ ಸಂತೋಷ ಅಶೋಕ ಖಟವಟೆ, ಕಿಲ್ಲಾ ಓಣಿಯ ಪರಶುರಾಮ ಬೋಜರಾಜಸಾ ದಲ್ಬಂಜನ್ ಇಬ್ಬರು ಪ್ರಮುಖ ಆರೋಪಿಗಳಾಗಿದ್ದಾರೆ.
ಅದರಂತೆ, ಬಸವೇಶ್ವರ ನಗರದ ವಿಜಯಕುಮಾರ್ ಪಟದಯ್ಯ ಹಿರೇಮಠ, ಸೇವಾಲಾಲ್ ನಗರದ ಕಿರಣ್ ಶಿವಪ್ಪ ಅಂಗಡಿ, ಬೆಟಗೇರಿಯ ಅಂಬಾಭವಾನಿ ಸರ್ಕಲ್ ನಿವಾಸಿ ಬಸವರಾಜ್ ಮಲ್ಲಪ್ಪ ಬಾರಕೇರ್, ಹುಬ್ಬಳ್ಳಿ ರಸ್ತೆಯ ನಿವಾಸಿ ಬಸವರಾಜ್ ಪ್ರಬಯ್ಯ ಹಿರೇಮಠ, ಬೆಟಗೇರಿಯ ನಿವಾಸಿ ರಾಜು ಮೆಹರವಾಡೆ ಹಾಗೂ ದಾಸರ ಓಣಿಯ ಜಗ್ಗು ಪವಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿದ ವೇಳೆ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.
-ಅಪಾರ ಭಕ್ತರನ್ನು ಹೊಂದಿದ್ದರೂ ಕೈ ತಪ್ಪುತ್ತಿರುವ ಮಠಾಧಿಪತಿಯ ಹಿಡಿತ
-ಮಠಾಧೀಶರಾಗಿ ವರ್ಷ ತುಂಬಿದ್ದಕ್ಕೆ ಕೇಕ್ ಕತ್ತರಿಸಿದ ಸ್ವಾಮೀಜಿ!
-ಬಸವರಾಜ ಕರುಗಲ್. ಕೊಪ್ಪಳ: ಮಠ ಮಾನ್ಯಗಳು ಧಾರ್ಮಿಕ ಹಾಗೂ ಭಕ್ತಿಯ ಕೇಂದ್ರಗಳು ಎಂಬ ಭಾವ ಬಹುತೇಕರಲ್ಲಿದೆ. ಮಠಗಳೆಂದರೆ ಹಾಗಿರುವುದು ಸಹಜವೇ. ಆದರೆ ಕೊಪ್ಪಳ ಜಿಲ್ಲೆಯೊಂದರ ಮಠ ಸದಾ ವಿವಾದದ ಕೇಂದ್ರ ಬಿಂದು. ಇದಕ್ಕೆಲ್ಲ ಕಾರಣ ಮಠಾಧಿಪತಿಯ ಕುಟುಂಬಸ್ಥರು!
ಕೊಪ್ಪಳ ಜಿಲ್ಲೆಯ ಅಳವಂಡಿಯಲ್ಲಿರುವ ಶ್ರೀ ಸಿದ್ಧೇಶ್ವರ ಮಠ ಸದ್ಯ ವಿವಾದದ ತಾಣವಾಗಿದೆ. ಈಚೆಗಷ್ಟೇ ವಿಜೃಂಭಣೆಯಿಂದ ಜಾತ್ರಾಮಹೋತ್ಸವದ ಅಂಗವಾಗಿ ರಥೋತ್ಸವ ನಡೆಯಿತು. ರಥೋತ್ಸವದ ಕ್ಷಣಗಳು ಈಗ ಮಠದ ಭಕ್ತರಲ್ಲಿ ಮತ್ತು ಮಠಾಧಿಪತಿಯ ಕುಟುಂಬಸ್ಥರಲ್ಲಿ ಕೋಲಾಹಲ ಸೃಷ್ಟಿಯಾಗುವಂತೆ ಮಾಡಿವೆ!
ರಥದ ಗಾಲಿಗೆ ಹುಟ್ಟು ಮತ್ತು ಸೊನ್ನಿ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಯ ಕುಟುಂಬಸ್ಥರು ತಕರಾರು ಮಾಡಿಕೊಂಡಿದ್ದಾರೆ. ಪ್ರತಿ ವರ್ಷದಂತೆ ತೇರು ಎಳೆಯುವ ಸಂದರ್ಭದಲ್ಲಿ ರಥದ ಗಾಲಿಗೆ ಹುಟ್ಟು ಸೊನ್ನಿ ಹಾಕಲಾಗುತ್ತದೆ. ಒಂದು ಚಕ್ರಕ್ಕೆ ಬೈರಾಪುರ ಗ್ರಾಮದ ಭಕ್ತರು ಸೊನ್ನಿ ಹಾಕಿದ್ದಾರೆ. ಅದರಿಂದ ಯಾವ ತೊಂದರೆಯೂ ಆಗಿಲ್ಲ. ಇನ್ನೊಂದು ಚಕ್ರಕ್ಕೆ ಅಳವಂಡಿಯವರು (ಅವರು ಪ್ರತಿ ವರ್ಷ ಹಾಕುತ್ತಿದ್ದವರೇ) ಸೊನ್ನಿ ಹಾಕಿದ್ದಾರೆ. ಅದು ಸಡಿಲವಾಗಿದ್ದರಿಂದ ತೇರೆಳುವಾಗ ರಥ ಅಲುಗಾಡಿದೆಯೇ ಹೊರತು ಯಾವ ಅನಾಹುತವೂ ಸಂಭವಿಸಿಲ್ಲ. ಇದನ್ನೇ ನೆಪ ಮಾಡಿಕೊಂಡ ಸ್ವಾಮೀಜಿ ಕುಟುಂಬಸ್ಥರು “ಜಾತ್ರೆಗೆ ನಿಮ್ಮನ್ಯಾರು ಕರೆದವರು?” ಎಂದು ದರ್ಪ ಮೆರೆದಿದ್ದಾರೆ. ದರ್ಪದ ಈ ನುಡಿ, ಗ್ರಾಮಸ್ಥರ ಸ್ವಾಭಿಮಾನಕ್ಕೆ ಧಕ್ಕೆ ತಂದು ಆಕ್ರೋಶದ ಕಿಡಿಯಾಗಿ ಹೊತ್ತಿಕೊಂಡಿದೆ.
ಇದು ಮಠದ ಕೆಲಸ, ಮಾತನಾಡಬೇಕಾದವರು ಸ್ವಾಮೀಜಿಯೇ ಹೊರತು, ಸ್ವಾಮೀಜಿಯ ಕುಟುಂಬಸ್ಥರಲ್ಲ. ಕುಟುಂಬಸ್ಥರು ಮಠದ ಜಾಗವನ್ನು ಸ್ವಾಮೀಜಿಗೆ ಬಿಟ್ಟು ಕೊಟ್ಟು, ಬೇರೆಡೆ ಹೋಗಲಿ. ಮಠ ಎಂದರೆ ಭಕ್ತಿಕೇಂದ್ರವಾಗಬೇಕೇ ಹೊರತು ರಾಜಕೀಯ ಸಭೆ ನಡೆಸುವ ತಾಣವಾಗಬಾರದು. ಕುಟುಂಬಸ್ಥರು ರಾಜಕೀಯ ಪಕ್ಷವೊಂದರಲ್ಲಿ ಗುರುತಿಸಿಕೊಂಡಿದ್ದು, ಮೊದಲು ರಾಜಕೀಯ ಸಭೆಗಳನ್ನು ಮಠದಲ್ಲಿ ನಡೆಸುವ ಅನಿಷ್ಠ ಕೈ ಬಿಡಿ ಎಂಬ ಕೂಗು ಮಾರ್ದನಿಸುತ್ತಿದ್ದಂತೆ, ಗ್ರಾಮಸ್ಥರು ಮತ್ತು ಸ್ವಾಮೀಜಿ ಕುಟುಂಬಸ್ಥರ ನಡುವೆ ದೊಡ್ಡ ವಾಗ್ವಾದವೇ ನಡೆದಿದೆ.
ಕೊನೆಗೂ ಗ್ರಾಮದ ಹಿರಿಯ ಮುಖಂಡರು ಮಧ್ಯಸ್ಥಿಕೆ ವಹಿಸಿ ಸಂಧಾನ ಮಾಡಿದ್ದಾರೆ. ಈ ಸಂಧಾನ ತಾತ್ಕಾಲಿಕವಷ್ಟೇ. ಇಂಥ ಹತ್ತು ಹಲವು ಪಂಚಾಯಿತಿಗಳನ್ನು ಅಳವಂಡಿಯ ಶ್ರೀ ಸಿದ್ದೇಶ್ವರ ಮಠ ಕಂಡಿದೆ.
ಕೇಕ್ ಕತ್ತರಿಸಿ ಸಂಭ್ರಮಾಚರಣೆ ಅಳವಂಡಿಯ ಈಗಿನ ಸ್ವಾಮೀಜಿ ಕಳೆದ ವರ್ಷವಷ್ಟೇ ಪಟ್ಟಕ್ಕೆ ಬಂದಿದ್ದರು. ಅವರಿಗಿಂತ ಹಿಂದಿದ್ದ ಸ್ವಾಮೀಜಿ ಮುಂಡರಗಿ ಕಾಲೊಂದರಲ್ಲಿ ಪಾಠ ಮಾಡುತ್ತಿದ್ದರು. ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಪ್ರೇಮಾಂಕುರವಾಗಿ ಅವರು ಸನ್ಯಾಸತ್ಯ ತ್ಯಜಿಸಿದ್ದರು. ಈಗಿನ ಸ್ವಾಮೀಜಿ ಪೀಠಕ್ಕೆ ಬಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯ, ಕಾರ್ಯಕ್ರಮ ನಡೆಸುವ ಬದಲು ಕೇಕ್ ಕತ್ತರಿಸಿ ವರ್ಷಾಚರಣೆಯನ್ನು ಸಂಭ್ರಮಿಸಿದ್ದೂ ಸಹ ವಿವಾದವಾಗಿದ್ದನ್ನ ಸ್ಮರಿಸಬಹುದು…
ಮೊಬೈಲ್ ಕದ್ದು, ಎಸ್ಕೇಪ್ ಆಗುತ್ತಿದ್ದ ಕಳ್ಳನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಳ್ಳ ಸಿಕ್ಕಿಬಿದ್ದಿದ್ದು, ಬಸ್ ಹತ್ತುತ್ತಿದ್ದ ಸಾಲುಂಚಿಮರದ ಗ್ರಾಮದ ಪ್ರಯಾಣಿಕರೊಬ್ಬರ ಮೊಬೈಲ್ ಎಗರಿಸಿ ಓಡಿಹೋಗುತ್ತಿದ್ದ ವೇಳೆ ಬೆನ್ನತ್ತಿ ಹಿಡಿದ ಸಾರ್ವಜನಿಕರು ಗೂಸಾ ನೀಡಿದ್ದಾರೆ.
ಆಂದ್ರದಪ್ರದೇಶ ಕರ್ನೂಲ್ ನ ಮೂಲದ ನಾಣಿ ಎನ್ನುವವನು ಸಿಕ್ಕಿಬಿದ್ದ ಕಳ್ಳನಾಗಿದ್ದು, ಕದ್ದ ಎರಡು ಮೊಬೈಲ್ ಗಳನ್ನು ಬಸ್ ನಿಲ್ದಾಣ ಕಸದ ಬುಟ್ಟಿಯಲ್ಲಿ ಎಸೆದು ಹೋಗಿದ್ದಾನೆ. ಇನ್ನೂ ಈ ಹಿಂದೆಯೂ ಒಮ್ಮೆ ಸಿಕ್ಕಿಬಿದ್ದಿದ್ದ ನಾಣಿ ಮತ್ತೆ ಹಳೇ ಕಸಬುಗೆ ಕೈ ಹಾಕಿ ಸಿಕ್ಕಿಬಿದ್ದಿದ್ದಾನೆ. ಇನ್ನು ಸಾರ್ವಜನಿಕರು ನಾಣಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಸಾಪ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಲಿ ಎಂದು ಹೇಳಿರುವವರು ಕಸಾಪದ ಸ್ಥಾನಮಾನಗಳು ಕನ್ನಡ ನಾಡು-ನುಡಿಗೆ ಮಾಡಬೇಕಾದ ಸೇವೆ ಎಂಬುದನ್ನು ಮರೆತು ಅದನ್ನೊಂದು ನೌಕರಿ ಎಂದು ಭಾವಿಸಿದಂತಿದೆ. ನಿವೃತ್ತಿ ಹೊಂದಲು ಅದೇನು ನೌಕರಿಯಲ್ಲ, ಬದಲಾಗಿ ನುಡಿಸೇವೆಗಿರುವ ಸ್ಥಾನವಷ್ಟೇ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಶೇಖರಗೌಡ ಮಾಲೀಪಾಟೀಲ ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್‌ನಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿ ಅನುಭವ ಹೊಂದಿದ್ದೇನೆ. 90ಕ್ಕೂ ಹೆಚ್ಚು ವಯಸ್ಸಾದ ಗೋರುಚ ಅಂಥವರೆ ನುಡಿಸೇವೆಯಲ್ಲಿ ನಿರತರಾಗಿದ್ದಾರೆ. ನನಗೇನು ಮಗಾ ವಯಸ್ಸಾಗಿದೆ. ಅನನುಭವಿಗಳಿಂದ ನಾನೇನು ಪಾಠ ಕಲಿಯಬೇಕಿಲ್ಲ. ಅದು ಅವರ ಅಭಿಪ್ರಾಯವಷ್ಟೇ. ಇದುವರೆಗೂ ಚುನಾವಣೆಯಿಂದ ಹಿಂದೆ ಸರಿಯುವ ಕುರಿತು ಅವರು ನನ್ನೊಂದಿಗೆ ಚರ್ಚಿಸಿಲ್ಲ ಎಂದು ಹೆಸರು ಉಲ್ಲೇಖಿಸದೇ ರಾಜ್ಯಾಧ್ಯಕ್ಷ ಸ್ಥಾನದ ಮತ್ತೊಬ್ಬ ಆಕಾಂಕ್ಷಿ ರಾಜಶೇಖರ ಮುಲಾಲಿಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಸುಮಾರು 3.10 ಲಕ್ಷ ಜನ ಕಸಾಪ ಮತದಾರರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸರಿಸುಮಾರು 1.50 ಲಕ್ಷ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಸುಮಾರು 50 ಸಾವಿರ ಕಸಾಪ ಮತದಾರರಿದ್ದಾರೆ. ಇದುವರೆಗೂ ಉತ್ತರ ಕರ್ನಾಟಕದ ಇಬ್ಬರು ಮಹನೀಯರು ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ 20 ಜಿಲ್ಲೆಗಳಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಈ ಹಿಂದೆ ಎರಡು ಬಾರಿ ಜಿಲ್ಲಾಧ್ಯಕ್ಷರಾಗಿ ಸಾಹಿತ್ಯ ಪರಿಷತ್ತನ್ನು ಜನರಿಗೆ ಪರಿಚಯಿಸಿದ್ದೇನೆ. ಕೊಪ್ಪಳ ನನ್ನ ತವರು ಜಿಲ್ಲೆ. ನಾನು ಜಿಲ್ಲೆಗೆ ಮನೆ ಮಗ ಇದ್ದಂತೆ. ಜಿಲ್ಲೆಯ ಜನರು ಕಸಾಪ ಚುನಾವಣೆಯಲ್ಲಿ ನನ್ನ ಪರವಾಗಿರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಸಾಪ ಸ್ಥಾನಗಳಿಗೆ ಸ್ಪರ್ಧಿಸಲು ಸಾಹಿತಿಯೇ ಆಗಿರಬೇಕು ಎಂಬ ನಿಯಮಾವಳಿ ಇಲ್ಲ. ಓದು-ಬರಹ ಗೊತ್ತಿರುವ 18 ವರ್ಷ ತುಂಬಿರುವ ಯಾರಾದರೂ ಸ್ಪರ್ಧಿಸಬಹುದು. ಆದರೂ ನಾನು 3 ಪ್ರವಾಸ ಕಥನ ಸೇರಿದಂತೆ ಒಟ್ಟು 6 ಪುಸ್ತಕ ಹೊರತಂದಿದ್ದೇನೆ. ಹರಿಕೃಷ್ಣ ಪುನರೂರು ಅವರಂಥ ಉದ್ಯಮಿಗಳು, ಜಿ.ನಾರಾಯಣ ಅವರಂಥ ರಾಜಕಾರಣಿಗಳು ಕಸಾಪದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ರಾಜಕಾರಣಿ, ಉದ್ಯಮಿ, ಸಾಹಿತಿಯಲ್ಲ ಅನ್ನೋದು ಮುಖ್ಯವಲ್ಲ. ಸಂಘಟನಾ ಚತುರತೆ ಪ್ರಧಾನವಾದದ್ದು. ನಾನು ಪಕ್ಷವೊಂದರ ಜೊತೆ ಗುರುತಿಸಿಕೊಂಡಿರಬಹುದು, ಹಾಗೆಂದು ಈ ವಿಷಯದಲ್ಲಿ ರಾಜಕಾರಣ, ಜಾತಿ ಬೆರೆಸಲಾರೆ. ಕನ್ನಡ ನಾಡು-ನುಡಿ ಸೇವೆ ಮಾಡಲು ನಾನು ಸಮರ್ಥನಿದ್ದೇನೆ. ಜನ ನನ್ನ ಕೈ ಹಿಡಿತಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ್ ಅಂಗಡಿ, ಹಿರಿಯ ಸಾಹಿತಿಗಳಾದ ವಿ.ಬಿ.ರಡ್ಡೇರ್, ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ್ ಇತರರು ಇದ್ದರು.
ಅದೆಷ್ಟೋ ಗಂಡ-ಹೆಂಡಿರು ಮಕ್ಕಳು ಬೇಕೆಂದು ಮುಕ್ಕೋಟಿ ದೇವರಿಗೂ ಹರಕೆ ಹೊರುತ್ತಾರೆ. ಹುಟ್ಟಿದ ಮಗು ಅದು ಕಪ್ಪಗಿರಲಿ, ಬೆಳ್ಳಗಿರಲಿ ಹೆತ್ತರವರಿಗೆ ಹೆಗ್ಗಣವೇ ಮುದ್ದು ಎಂಬ ಗಾದೆಯಂತೆ ಮಕ್ಕಳನ್ನು ಅಪ್ಪಿಕೊಂಡು ಮುದ್ದಾಡುತ್ತಾರೆ. ಅದೇ ಮಕ್ಕಳ ಮದುವೆಯಾಗಿ ಮನೆಗೆ ಸೊಸೆ ಅಥವಾ ಅಳಿಯ ಬಂದರೂ ಮಕ್ಕಳ ಮೇಲಿನ ಮಮಕಾರ ಮಾತ್ರ ಕಡಿಮೆಯಾಗುವುದಿಲ್ಲ.
ಆದರೆ, ಇಲ್ಲೊಬ್ಬ ಪಾಪಿ ತಂದೆ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದ ಭುವನೇಶ್ವರಿ ಎಂಬ ತನ್ನ ಮೂರು ವರ್ಷದ ಕಂದಮ್ಮನ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ಗದಗ ತಾಲೂಕಿನಲ್ಲಿ ನಡೆದಿದ್ದು, ಪತಿಯ ವಿರುದ್ಧ ಪತ್ನಿ ಕವಿತಾ ಗಣೇಶ ಮಡಿವಾಳರ ದೂರು ನೀಡಿದ್ದಾಳೆ.
ಗದಗ ತಾಲೂಕಿನ ಹೊಸಹಳ್ಳಿ ಗ್ರಾಮದ ಗಣೇಶ ಬೂದಪ್ಪ ಮಡಿವಾಳರ(೩೩) ಎಂಬುವವನೇ ಮಗಳನ್ನು ಕೊಲೆ ಮಾಡಿದ ಕನಿಕರವಿಲ್ಲದ ನತದೃಷ್ಟ ತಂದೆಯಾಗಿದ್ದಾನೆ.
ಸತ್ರೆ ಮೂರು ದಿನದ ದುಃಖ!
ಆರೋಪಿ ಗಣೇಶ, ಹುಲಕೋಟಿಯ ಆರ್‌ಎಂಎಸ್ ಆಸ್ಪತ್ರೆಯಲ್ಲಿ ಮಗಳ ಫಿಟ್ಸ್ ಕಾಯಿಲೆಗೆ ಸಾಕಷ್ಟು ಹಣ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದಾನೆ. ಇವಳಿಗೆ ಹೀಗೆ ಚಿಕಿತ್ಸೆ ಕೊಡಿಸುತ್ತಾ ಹೋದರೆ, ಹೊಲ ಮನೆ ಮಾರಾಟ ಮಾಡಬೇಕಾಗುತ್ತದೆ. ಅಲ್ಲದೇ, ಇದರಿಂದ ಜೀವನವೂ ಹಾಳಾಗುತ್ತದೆ. ಸತ್ತರೆ ಮೂರು ದಿನದ ದುಃಖವೆಂದು ತಿಳಿದು ಕೊಲೆಗೈದಿದ್ದಾನೆ. ಈ ದುರುದ್ದೇಶದಿಂದಲೇ ಜ.11ರಂದು ಗದಗ ಜಿಲ್ಲಾಸ್ಪತ್ರೆಯಿಂದ ಆಟೋದಲ್ಲಿ ನಗರದ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಬರುವ ಮಾರ್ಗ ಮಧ್ಯೆ ಇರುವ ಮಲ್ಲಸಮುದ್ರ ಕ್ರಾಸ್ ಬಳಿ ಭುವನೇಶ್ವರಿ ಕುತ್ತಿಗೆಯಲ್ಲಿ ಕಟ್ಟಿದ್ದ ದಾರದಿಂದ ಕೊಲೆ ಮಾಡಿದ್ದಾನೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಕಳೆದ ಜ.11 ರಂದು ಭುವನೇಶ್ವರಿ ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಇದ್ದಾಗ ಇವಳಿಗೆ ಫಿಟ್ಸ್ ಬಂದಿದೆ. ಆಗ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿಗೆ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಆರೋಪಿ ತಂದೆ ಗಣೇಶ, ತನ್ನ ಮಗಳನ್ನು ಗದಗ ಜಿಲ್ಲಾ ಆಸತ್ರ್ರೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿನ ವೈದ್ಯರು ನಗರದ ತಾಲೂಕು ಹೆರಿಗೆ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ತಜ್ಞರಿದ್ದು, ಅವರ ಬಳಿ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಆಗ ಆರೋಪಿ ಗಣೇಶ ಚಿಕಿತ್ಸೆಗಾಗಿ ಮಗಳು ಭುವನೇಶ್ವರಿಯನ್ನು ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಕೆಯನ್ನು ಪರೀಕ್ಷೆ ಮಾಡಿದ ವೈದ್ಯರು ಭುವನೇಶ್ವರಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ, ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಶವ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ವೈದ್ಯರು ಹೇಳಿದಂತೆ ಶವಗಾರದಲ್ಲಿ ಮಗಳ ಮೃತದೇಹವನ್ನಿಟ್ಟು ಬಳಿಕ ತನ್ನ ಹೆಂಡತಿ ಹಾಗೂ ಮನೆಯವರಿಗೆ ಸುದ್ದಿ ತಿಳಿಸಿದ್ದಾನೆ. ತಾಯಿ ಬಂದು ಮಗಳ ಶವ ನೋಡಿ ಸಾವಿನಲ್ಲಿ ಸಂಶಯವಿರುವುದಾಗಿ ದೂರಿದಾಗ ಎಫ್‌ಐಆರ್‌ನಲ್ಲಿ ಈ ಮೇಲಿನ ಸಂಗತಿಗಳು ತಿಳಿದು ಬಂದಿವೆ.