Home Blog Page 3066

ಅಂದರ್-ಬಾಹರ್ ಜೂಜಾಟ: ಉದ್ಯಮಿ ಸೇರಿ 12 ಜನರ ಬಂಧನ, ಇಬ್ಬರು ಪರಾರಿ

ವಿಜಯಸಾಕ್ಷಿ ಸುದ್ದಿ, ಗದಗ

ಇಸ್ಪೀಟು ಎಲೆಗಳ ಸಹಾಯದಿಂದ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಗದಗ ನಗರ ಹಾಗೂ ಗಜೇಂದ್ರಗಡ ಪೊಲೀಸರು ದಾಳಿ ಮಾಡಿ ಉದ್ಯಮಿ ಸೇರಿದಂತೆ 12 ಜನರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಗಜೇಂದ್ರಗಡ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

ಗದಗನ ನಗರ ಠಾಣೆಯ ಸಮೀಪದಲ್ಲಿಯೇ ಇರುವ ಆನಂದ ಮಾಂಸಾಹಾರಿ ಹೊಟೇಲ್ ಬಳಿಯ ಬಟಾ ಬಯಲು ಜಾಗೆಯಲ್ಲಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಮಲ್ಲಿಕಾರ್ಜುನ ಬಸಪ್ಪ ಕುರ್ತಕೋಟಿ, ಫಕ್ಕಿರೇಶ್ ಸಿದ್ದಪ್ಪ ನ್ಯಾವಳ್ಳಿ, ಮಲ್ಲೇಶ್ ಲಕ್ಷ್ಮಣ್ ಚವ್ಹಾಣ, ಮಲ್ಲಿಕಾರ್ಜುನ ಪ್ರಭುಲಿಂಗಪ್ಪ ಕುಸುಗಲ್, ಮಾಬುಸಾಬ ದಾವಲಸಾಬ ಡಂಬಳ, ಅಶೋಕ ಶಂಕ್ರಪ್ಪ ಕೋಳಿವಾಡ, ಯಲ್ಲಪ್ಪ ಗವಿಯಪ್ಪ ಕೆಂಚಣ್ಣವರ, ಸಿದ್ದಲಿಂಗಯ್ಯ ಪ್ರಭಯ್ಯ ಮರಿಯಣ್ಣವರ, ಈರಣ್ಣ ಬಸಪ್ಪ ಹವಳಣ್ಣವರ್, ಹಾಗೂ ಅಶೋಕ ಬಸವರಾಜ್ ಉಳವಿ ಪೊಲೀಸರ ಬಲೆಗೆ ಬಿದ್ದವರು. ಬಂಧಿತರಿಂದ 11200 ರೂ,ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಗಜೇಂದ್ರಗಡ ತಾಲೂಕಿನ ಚಿಲಝರಿ ಗ್ರಾಮದ ಸರಕಾರಿ ಹಳ್ಳದ ಬಳಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ಬೆನ್ನತ್ತಿದ್ದ ಪೊಲೀಸರ ಕೈಗೆ ಇಬ್ಬರು ಸಿಕ್ಕಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಟೇಲರ್ ರೇವಣಸಿದ್ದಯ್ಯ ಚನ್ನಬಸಯ್ಯ ಚೌಕಿಮಠ, ಕೆಂಪಜಂಬಣ್ಣ ಮಾರಿಯಪ್ಪ ರಾಹುಲ್ ಅವರಿಂದ 7100 ವಶಪಡಿಸಿಕೊಂಡಿದ್ದಾರೆ. ಪರಶಪ್ಪ ದುರಗಪ್ಪ ದಾರೋತ್ತರ ಹಾಗೂ ಕುಮಾರ್ ದಾರಪ್ಪ ರಾಠೋಡ ಪರಾರಿಯಾಗಿದ್ದಾರೆ.

ಕೆಪಿಎಸ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕ ಪ್ರಕಟ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಹಾಯಕ/ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಮುಹೂರ್ತ ನಿಗದಿಪಡಿಸಿದೆ.

ಮುಂದೂಡಲಾಗಿದ್ದ ಪರೀಕ್ಷೆಗಳಿಗೆ ಮರು ದಿನಾಂಕ ನಿಗದಿ ಪಡಿಸಿದ್ದು, ಫೆಬ್ರುವರಿ 28 ರ ಭಾನುವಾರದಂದು ಪರೀಕ್ಷೆಗಳು ಜರುಗಲಿವೆ ಎಂದು ಕೆಪಿ ಎಸ್ ಸಿ ಪ್ರಕಟಣೆ ತಿಳಿಸಿದೆ.

ಜನವರಿ 24 ರಂದು ನಡೆಯಬೇಕಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಮುಂದೂಡಿತ್ತು. ಇದು ಪರೀಕ್ಷಾರ್ಥಿಗಳಲ್ಲಿ ನಿರಾಸೆಯನ್ನುಂಟು ಮಾಡಿತ್ತು.

ಶಿರಹಟ್ಟಿಯಲ್ಲಿ ಎಸಿಬಿ ದಾಳಿ: ಕಂಪ್ಯೂಟರ್ ಆಪರೇಟರ್ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ: ಖಾತಾ ಬದಲಾವಣೆಗೆ ಲಂಚದ ಬೇಡಿಕೆ ಇಟ್ಟು ಲಂಚ ಪಡೆಯುವಾಗ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ನಡೆದಿದೆ.

ಶಿರಹಟ್ಟಿ ಪಟ್ಟಣದ ಮಹೇಶ್ ಡಿ ಆರ್ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಶಿರಹಟ್ಟಿ ಪಟ್ಟಣ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ಶರಣಪ್ಪ ಮಹದೇವಪ್ಪ ಗೌಳಿ ಎಂಬುವರನ್ನು ಲಂಚದ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿ ವಂಶಕ್ಕೆ ಪಡೆದಿದ್ದಾರೆ.

ಆರೋಪಿ ಶರಣಪ್ಪ ಗೌಳಿ ಖಾತಾ ಬದಲಾವಣೆ ಮಾಡಿ ಕಂಪ್ಯೂಟರ್ ಉತಾರ ನೀಡಲು ಮಹೇಶ್ ಅವರಿಗೆ 3500 ಲಂಚದ ಬೇಡಿಕೆ ಇಟ್ಟಿದ್ದ. ಈ ಕುರಿತು ಮಹೇಶ್ ಎಸಿಬಿಗೆ ದೂರು ನೀಡಿದ್ದರು. ಇಂದು ಲಂಚದ ಹಣ ನೀಡುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಆರೋಪಿತ ಶರಣಪ್ಪನನ್ನು ವಶಕ್ಕೆ ಪಡೆದಿದ್ದಾರೆ‌.

ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ಎನ್ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಗಳಾದ ಆರ್ ಎಫ್ ದೇಸಾಯಿ, ವೈ ಎಸ್ ಧರಣಾ ನಾಯಕ್, ಸಿಬ್ಬಂದಿಗಳಾದ ಎಂ ಎಂ ಅಯ್ಯನಗೌಡರ್, ಆರ್ ಎಚ್ ಹೆಬಸೂರು, ಎನ್ ಎಸ್ ತಾಯಣ್ಣವರ್, ವೀರೇಶ್ ಜೋಳದ್, ಐ ಸಿ ಕರಿಗಾರ ಹಾಗೂ ತಾರಪ್ಪ ದಾಳಿಯಲ್ಲಿ ಭಾಗವಹಿಸಿದ್ದರು.

ಬಾಲೇಹೊಸೂರು ಗ್ರಾಪಂ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ: ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ಗದಗ

ಖೊಟ್ಟಿ ದಾಖಲೆ ಸಲ್ಲಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಇದರಿಂದ ಮೂಲ ದಲಿತರಿಗೆ ಅನ್ಯಾಯವಾಗಿದೆ ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ ನೂರಾರು ಕಾರ್ಯಕರ್ತರು ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರು ಪಂಚಾಯತಿಗೆ ಬೀಗ ಹಾಕಿ ಪ್ರತಿಭಟಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಮೀಸಲು ಬಂದಿರುವ ಬಾಲೇಹೊಸೂರು ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಡಿಎಸ್ಎಸ್ ಮುಖಂಡ ಸುರೇಶ್ ನಂದೆಣ್ಣವರ ನೇತೃತ್ವದಲ್ಲಿ ಬೆಳ್ಳಂಬೆಳಗ್ಗೆ ಗ್ರಾಪಂಗೆ ಬೀಗ ಜಡಿದು ಧರಣಿ ನಡೆಸುತ್ತಿದ್ದಾರೆ.

ಖೊಟ್ಟಿ ದಾಖಲೆಗೆ ಸಂಬಂಧಿಸಿದಂತೆ
ಧಾರವಾಡ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಪ್ರಕರಣ ಇತ್ಯರ್ಥವಾಗುವವರೆಗೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.

ಖೊಟ್ಟಿ ದಾಖಲೆ ಸಲ್ಲಿಸಿ ಸ್ಪರ್ಧಿಸುತ್ತಿರುವವರಿಗೆ ಈಗಾಗಲೇ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದ್ದು, ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ರದ್ದುಗೊಳಿಸಿ ನ್ಯಾಯ ಒದಗಿಸಿಕೊಡಬೇಕು
ಎಂದು ಪಟ್ಟು ಹಿಡಿದಿದ್ದಾರೆ.

ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡ ವ್ಯಕ್ತಿ : ಸಾವು ಬದುಕಿನ ಮಧ್ಯೆ ಸೆಣಸಾಡುತ್ತಿದವನ ಜೀವ ರಕ್ಷಿಸಿದ 108 ಸಿಬ್ಬಂದಿ

0

ವಿಜಯಸಾಕ್ಷಿ ಸುದ್ದಿ, ಗದಗ: ಬ್ಲೇಡ್ ನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು 108 ಸಿಬ್ಬಂದಿಗಳು ರಕ್ಷಿಸಿರುವ ಘಟನೆ ನಗರದ ರಾಜೀವ್ ಗಾಂಧಿ ನಗರದಲ್ಲಿ ರವಿವಾರ ನಡೆದಿದೆ.

ರಾಜೀವ್ ಗಾಂಧಿ ನಗರದ ನಿವಾಸಿ ಚನ್ನಬಸಪ್ಪ ವೀರಪ್ಪ ತಳಕಲ್(35) ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು, 108 ಸಿಬ್ಬಂದಿಗಳಾದ ಇಎಂಟಿ ಮಹೇಶ್ ಭಜಂತ್ರಿ ಹಾಗೂ ಪೈಲೆಟ್ ಅಶೋಕ ನೀಲಗಾರ ರಕ್ಷಿಸಿದ್ದಾರೆ.

ಮನೆಯ ಒಂದನೇ ಮಹಡಿಯಲ್ಲಿ ಚನ್ನಬಸಪ್ಪ ಬ್ಲೇಡ್ ನಿಂದ ಕುತ್ತಿಗೆ ಭಾಗದ ಶ್ವಾಸನಾಳದವರೆಗೆ (ಟ್ರಾಕಿಯಾ) ಕೊಯ್ದುಕೊಂಡ ಪರಿಣಾಮ, ತೀವ್ರ ರಕ್ತಸ್ರಾವದಿಂದ ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಬಳಲುತ್ತಿದ್ದ. ತಕ್ಷಣವೇ ಕುತ್ತಿಗೆಯ ಭಾಗಕ್ಕೆ ಡ್ರೆಸ್ಸಿಂಗ್ ಮಾಡಿ ರಕ್ತಸ್ರಾವ ಹತೋಟಿಗೆ ತಂದಿದ್ದಾರೆ.

ಬಳಿಕ ಸ್ಥಳೀಯರ ನೆರವಿನಿಂದ 1 ನೇ ಮಹಡಿಯಿಂದ ಸ್ಪೈನ್ ಬೋರ್ಡ್ ಮುಖಾಂತರ 108 ಒಳಗೆ ಸ್ಥಳಾಂತರಿಸಿದ್ದಾರೆ. ಆ್ಯಂಬುಲೆನ್ಸ್ ನಲ್ಲಿಯೇ ಇಎಂಟಿ ಮಹೇಶ್ ಅವರು ಐವಿ ಫ್ಲೂಯಿಡ್, ಎನ್ಎಸ್, ಆಕ್ಸಿಜನ್, ರಕ್ತದೊತ್ತಡ ಪರೀಕ್ಷಿಸಿ ಆಸ್ಪತ್ರೆಯವರೆಗೂ ಆಂಬುಲೆನ್ಸ್ ನಲ್ಲಿ ಆರೈಕೆ ಮಾಡಿದ್ದು, ಚಿಕಿತ್ಸೆಗಾಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಚನ್ನಬಸಪ್ಪ ಮಾತನಾಡಲಾಗದ ಸ್ಥಿತಿಯಲ್ಲಿ ಇರುವುದರಿಂದ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಕುಟುಂಬದವರು ಹೇಳುವ ಪ್ರಕಾರ ಕೌಟುಂಬಿಕ ಕಲಹವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಾರವ್ಯಾಸ ಸ್ಮಾರಕ ಗದಗನಲ್ಲಿ ನಿರ್ಮಾಣವಾಗಲಿ: ಪಂ. ಅನಂತ ಕುಲಕರ್ಣಿ

0

ವಿಜಯಸಾಕ್ಷಿ ಸುದ್ದಿ, ಗದಗ

ಕುಮಾರವ್ಯಾಸನ ಕರ್ಮಭೂಮಿ ಗದಗನಲ್ಲಿ ಕುಮಾರವ್ಯಾಸ ಸ್ಮಾರಕ ನಿರ್ಮಾಣವಾಗಲಿ ಎಂದು ಖ್ಯಾತ ದಾಸವಾಣಿ ಕಲಾವಿದರಾದ ಅನಂತ ಕುಲಕರ್ಣಿ ಹೇಳಿದರು.
ಅವರು ಶ್ರೀ ವೀರನಾರಾಯಣ ದೇವಸ್ಥಾನದ ಆವರಣದಲ್ಲಿ ಕುಮಾರವ್ಯಾಸ ಕಲಾನಯನ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಪ್ರತಿಷ್ಠಾನ ಹಾಗೂ ಹೊಂಬಾಳಿ ಕಲಾ ಅಕಾಡೆಮಿ ಯೂಟ್ಯೂಬ್ ಚಾನಲ್ ಉದ್ಘಾಟಿಸಿ ಮಾತನಾಡಿದರು.

ಗದಗ ವೀರನಾರಾಯಣ ಹಾಗೂ ಕುಮಾರವ್ಯಾಸರಿಂದ ನಾಡಿನಲ್ಲಿಯೇ ಪ್ರಖ್ಯಾತಿ ಪಡೆದಿದೆ. ಇಲ್ಲಿ ಗಮಕ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಯುವಂತೆ ಸ್ಮಾರಕ ಭವನ ನಿರ್ಮಾಣವಾಗಲಿ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ವೀರನಾರಾಯಣ, ತ್ರಿಕೂಟೇಶ್ವರ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಡಾ: ಕುಶಾಲ ಗೋಡಖಿಂಡಿ ಮಾತನಾಡಿ, ಕುಮಾರವ್ಯಾಸ ಕುರಿತಾದ ವಿಚಾರ ಸಂಕೀರ್ಣ ಹಾಗೂ ಗಮಕ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಕುಮಾರವ್ಯಾಸ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ. ಪಾಟೀಲ ಉಪಸ್ಥಿತರಿದ್ದರು. ಆರಂಭದಲ್ಲಿ ಶಂಕರಭಟ್ ಸೊರಟೂರ, ಪ್ರಲ್ಹಾದಾಚಾರ್ಯ ನಿಲೂಗಲ್ ವೇದಘೋಷಗೈದರು. ಶ್ರೀನಿವಾಸ ಕುಲಕರ್ಣಿ ಪ್ರಾರ್ಥಿಸಿದರು. ಹೊಂಬಾಳಿ ಅಕಾಡೆಮಿ ಅಧ್ಯಕ್ಷೆ ಮಂಜರಿ ಹೊಂಬಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕೃಷ್ಣಾಜಿ ನಾಡಿಗೇರ ವಂದಿಸಿದರು.

ನಂತರ ವಿಶ್ವನಾಥ ಕುಲಕರ್ಣಿಯವರಿಂದ ಗಮಕವಾಚನ ಪಂ. ಅನಂತ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಪ್ರತಿಷ್ಠಾನದ ಪ್ರಾ. ಎಸ್.ಜಿ. ಪಾಟೀಲ, ಜಿ.ಎ. ದೇಶಪಾಂಡೆ, ಶಂಕರಭಟ್ ಸೊರಟೂರ, ರವೀಂದ್ರ ಜೋಶಿ, ದತ್ತಪ್ರಸನ್ನ ಪಾಟೀಲ, ಆರ್.ಎಸ್. ಕುಲಕರ್ಣಿ, ಕೃಷ್ಣಾಜಿ ನಾಡಿಗೇರ, ಪ್ರಾ. ಅನಿಲ ವೈದ್ಯ, ರಾಘವೇಂದ್ರ ಜೋಶಿ, ಪ್ರಾ. ಶ್ರೀಧರ ದೇಶಪಾಂಡೆ, ವಿ.ಪಿ. ಪಾಟೀಲ, ಅರುಣ ಕುಲಕರ್ಣಿ, ರಾಜೇಶ ಕುಲಕರ್ಣಿ, ಗಿರೀಶ ಪಂತರ, ಹೂಲಿ ವಾಸುದೇವಾಚಾರ್ಯ, ಎಸ್.ಎ. ಹುಯಿಲಗೋಳ, ಮುರಳಿಧರ ಸಂಕನೂರ, ವಿತ್ತಿ ಪಾಠಕ, ಪ್ರಾಣೇಶ ಕುಲಕರ್ಣಿ, ನಂದಾ ಜಹಾಗೀರದಾರ, ಅಂಜನಾ ಕುಬೇರ ಉಪಸ್ಥಿತರಿದ್ದರು

ದಕ್ಷಿಣ ಭಾರತದಲ್ಲಿ ಯಡಿಯೂರಪ್ಪಗೆ ಗೋಲ್ಡನ್ ಟೈಮ್ ಸಿಕ್ಕಿತ್ತು: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಅಭಿಮತ

ವಿಜಯಸಾಕ್ಷಿ ಸುದ್ದಿ, ಮೈಸೂರು

ಬಿಜೆಪಿ ಸರ್ಕಾರಕ್ಕೆ ಹಾಗೂ ನಾಯಕರಿಗೆ ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣ ಬೇಕಿಲ್ಲ. ಅಲ್ಲದೇ, ಅಭಿವೃದ್ಧಿಗೊಳಿಸಬೇಕೆಂಬ ಇಚ್ಛಾಶಕ್ತಿಯೂ ಇಲ್ಲವೆಂದು
ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಬಿಜೆಪಿ ವಿರುದ್ಧ
ಕಿಡಿಕಾರಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪರಿಶಿಷ್ಟ ಜಾತಿ, ಪಂಗಡಕ್ಕೆ ವಿಶೇಷ ಘಟಕ ಯೋಜನೆ ಜಾರಿಗೆ ತಂದಿದ್ದರು. ಪ್ರತಿವರ್ಷ ಅವರಿಗೆ ಆಯವ್ಯಯದಲ್ಲಿ ಹಣವಿಡುತ್ತಿದ್ದ ಅವರು, ಮೀಸಲಿಟ್ಟ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿದರು ಎಂದರು.

ಆದರೆ, ಈ ಸರ್ಕಾರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸರಿಯಾದ ರೀತಿಯಲ್ಲಿ ಹಣ ಖರ್ಚು ಮಾಡುತ್ತಿಲ್ಲ. ಬೇರೆ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಈ ವಿಷಯ ಅಸೆಂಬ್ಲಿಯಲ್ಲಿಯೂ ಚರ್ಚೆ ಆಗಿದೆ. ಈ ಇಲಾಖೆಯ ಹಣವನ್ನು ಪರಿಶಿಷ್ಟರಿಗೆ ಬಳಸಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರದ ಮಂತ್ರಿ ಮಂಡಲದಲ್ಲಿ ಹೊಂದಾಣಿಕೆ ಇಲ್ಲ. ಅಲ್ಲದೇ, ಇಂತಹ ಕೆಲಸಕ್ಕೆ ಬಾರದ ಸರ್ಕಾರವನ್ನು ನಾನು ನೋಡಿಲ್ಲ. ಅವರ ಸಚಿವರು, ಶಾಸಕರೇ ಮಾತನಾಡುತ್ತಿರುವುದನ್ನು ನೋಡಿದ್ದೇವೆ. ದಕ್ಷಿಣ ಭಾರತದಲ್ಲಿ ಯಡಿಯೂರಪ್ಪಗೆ ಗೋಲ್ಡನ್‌ ಸಮಯ ಸಿಕ್ಕಿತ್ತು. ಆದರೆ, ಅವರು ಅದನ್ನ ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ನನಗೆ ಜೀವನ ಕೊಟ್ಟ ಪಕ್ಷ. ‌ನಮಗೆ ಯಾವುದೆ ಆಸೆ ಇಲ್ಲ.
ಪಕ್ಷದಿಂದ‌ ಯಾವುದನ್ನೂ ನಿರೀಕ್ಷಿಸಿಲ್ಲ. ನಾನು ಸೋತಾಗಲೂ ಪಕ್ಷ ನನ್ನ‌ ಬಿಟ್ಟಿಲ್ಲ. ನಾನು ಸೋತೆ ಅಂತಾ ಕೆಲಸ‌ ಮಾಡುವುದನ್ನೂ ನಿಲ್ಲಿಸಿಲ್ಲ. ನಾನು ಸದಾ ಜನರ ಜೊತೆ ಇದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಪೋಲೀಯೋ ಲಸಿಕಾ ಕಾರ್ಯಕ್ರಮ: ಗ್ರಾಪಂ ಸದಸ್ಯ ನಿಂಗರಡ್ಡಿ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ

ಸಮೀಪದ ಚಿಂಚಲಿ ಗ್ರಾಮದಲ್ಲಿ ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಸದಸ್ಯ ನಿಂಗರಡ್ಡಿ ತೇರಿನಗಡ್ಡಿ ಚಾಲನೆ ನೀಡಿದರು.

ಸದಸ್ಯರಾದ ಗೌರಮ್ಮ ಕರಿಗಾರ ರೂಪಾ ಕುರುಬರ,‌ ಮುಖಂಡರಾದ ನಾಗೇಶ್ ಕುರುಬರ, ಶರಣಪ್ಪ ನಂದಿಕೋಲಮಠ, ಬಸಪ್ಪ ಗುಡಸಲಮನಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಗೋವಾ ಸಿಎಂ ಮಹದಾಯಿ ಕ್ಯಾತೆ: ಬೆಂಗಳೂರು ಚಲೋಗೆ ನಿರ್ಧರಿಸಿದ ರೈತರು

ವಿಜಯಸಾಕ್ಷಿ ಸುದ್ದಿ, ನರಗುಂದ

ಗೋವಾ ಸಿಎಂ ಮಹದಾಯಿ ಕ್ಯಾತೆ ಬೆನ್ನಲ್ಲೇ, ರೈತರು ಹೋರಾಟದ ಎಚ್ಚರಿಕೆ ನೀಡಿದ್ದು, ಬೆಂಗಳೂರು ಚಲೋ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.

ಜಿಲ್ಲೆಯ ನರಗುಂದ ಮಹದಾಯಿ ಹೋರಾಟ ವೇದಿಕೆಯಲ್ಲಿ
ರೈತ ಸೇನಾ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದಲ್ಲಿ ಈ ಕುರಿತು ನಿರ್ಧಾರ ಕೈಗೊಂಡಿದ್ದಾರೆ.

ಮಹದಾಯಿ ನೀರಿಗಾಗಿ ಡ್ಯಾಂ ಕಾಮಗಾರಿ ಆರಂಭಿಸಬೇಕು.
ಮಹಾರಾಷ್ಟ್ರ ಗಡಿ ವಿಚಾರದಲ್ಲಿ ರಾಜ್ಯದಲ್ಲಿ ಅಶಾಂತಿ ಹುಟ್ಟಿಸುವ ಕೆಲಸ ಮಾಡುತ್ತಿದೆ. ಕೂಡಲೇ ಅದಕ್ಕೆ ಕಡಿವಾಣ ಹಾಕಬೇಕು.
ಅಲ್ಲದೇ, ನಂಜುಂಡಪ್ಪ ವರದಿಯನ್ನು ಕೂಡಲೇ ಜಾರಿಗೊಳಿಸಬೇಕೆಂದು ವೀರೇಶ ಸೊಬರದಮಠ ಒತ್ತಾಯಿಸಿದರು.

ಈ ತಿಂಗಳಲ್ಲಿ ಬೆಂಗಳೂರು ಚಲೋ ಸಮಯ ನಿಗದಿ ಮಾಡುತ್ತೇವೆ. ಅಲ್ಲದೇ, ನಮ್ಮ ಮೂರೂ ಬೇಡಿಕೆಗಳು ಈಡೇರುವವರಿಗೆ ಬೆಂಗಳೂರು ಬಿಟ್ಟು ಬರುವುದಿಲ್ಲವೆಂದು ಎಚ್ಚರಿಕೆ ನೀಡಿದ ಸೊಬರದಮಠ ಅವರು, ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಮುತ್ತು ರಾಯರಡ್ಡಿ ಚಾಲನೆ

0

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ರವಿವಾರ ನಡೆದ ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯ ಮುತ್ತು ರಾಯರಡ್ಡಿ ಮಗುವಿಗೆ ಪೋಲಿಯೋ ಹನಿ ಹಾಕುವುದರೊಂದಿಗೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಡಾ.ಪ್ರಶಾಂತ ಮಲ್ಲಾಪೂರ, ಶರಾವತಿ ಹಿರೇಮಠ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

error: Content is protected !!