ಬಹಳಷ್ಟು ಜನ ಲಿಂಗಾಯತ ಶಾಸಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಗೆ ಬರಲು ಸಿದ್ಧರಾಗಿದ್ದಾರೆ. ಎಂ.ಬಿ. ಪಾಟೀಲ, ಈಶ್ವರ್ ಖಂಡ್ರೆ ಸೇರಿದಂತೆ ಅನೇಕರು ಆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಲಿಂಗಾಯತ ಸಮುದಾಯವನ್ನು ತಮ್ಮ ಆಸ್ತಿ ಎಂದು ತಿಳಿದುಕೊಂಡಿದ್ದಾರೆ. ಕಾಂಗ್ರೆಸ್ ನಲ್ಲಿ ಬಹಳಷ್ಟು ಜನ ಲಿಂಗಾಯತರಿದ್ದಾರೆ ಎಂದು ಹೇಳಿದರು.
ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಮ್ಯೂಜಿಕಲ್ ಚೇರ್ ಆಟ ನಡೆದಿಲ್ಲಾ, ಅದು ಬಿಜೆಪಿಯಲ್ಲಿ ನಡೆದಿದೆ ಎಂದರು.
ಸದ್ಯ ಚುನಾವಣೆ ಹತ್ತಿರವಿಲ್ಲ. ಕೊರೊನಾದಿಂದ ರಾಜಕೀಯ ಸಭೆಗಳಿಗೆ ಅವಕಾಶವಿಲ್ಲ. ಹೀಗಾಗಿ ಜನರ ಬಳಿ ಹೋಗಿ ಅವರ ಸಮಸ್ಯೆ ಕೇಳುತ್ತಿದ್ದೇನೆ. ಸರ್ಕಾರದ ಕೊವಿಡ್ ಪರಿಹಾರ ಜನರಿಗೆ ಸಿಕ್ಕಿಲ್ಲ ಎಂದು ಹೇಳಿದರು.
ರಾಜೀನಾಮೆ ವಿಚಾರವೇ ಪ್ರಸ್ತಾಪ ಆಗಿಲ್ಲ ಎನ್ನುತ್ತಿದ್ದರೂ ಆಗಸ್ಟ್ ನಲ್ಲಿ ಮತ್ತೆ ದೆಹಲಿಗೆ ಬರುವುದಾಗಿ ಹೇಳಿರುವುದು ಊಹಾಪೋಹಕ್ಕೆ ಕಾರಣ
ವಿಜಯಸಾಕ್ಷಿ ಸುದ್ದಿ, ನವದೆಹಲಿ
ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎರಡನೇ ದಿನವಾದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯದ ಕುರಿತು ಚರ್ಚೆ ನಡೆಸಿದರು.
ನವದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿರುವ ನಡ್ಡಾ ನಿವಾಸಕ್ಕೆ ತೆರಳಿದ ಸಿಎಂ ಬಿ.ಎಸ್.ವೈ, ಜೆ.ಪಿ.ನಡ್ಡಾ ಅವರೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿದರು. ಜೆ.ಪಿ. ನಡ್ಡಾ ಭೇಟಿ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಎಂಬುದು ಸುಳ್ಳು. ರಾಜೀನಾಮೆ ನೀಡಿದ್ದರೆ ಮುಚ್ಚಿಡುವ ಪ್ರಶ್ನೆಯೇ ಇಲ್ಲ. ರಾಜೀನಾಮೆ ನೀಡುವಂತೆ ನನಗೆ ಯಾರೊಬ್ಬರೂ ಸೂಚಿಸಿಲ್ಲ. ರಾಜೀನಾಮೆ ಎಂಬ ಒಂದೇ ಒದು ಪದ ಕೂಡ ಚರ್ಚೆಯಾಗಿಲ್ಲ. ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ನಡ್ಡಾ ಭೇಟಿ ವೇಳೆ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಿತು. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಂತೆ ಸೂಚನೆ ನೀಡಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಎಂ ಅವರನ್ನು ಭೇಟಿಯಾಗುತ್ತಿದ್ದು, ಅವರೊಂದಿಗೂ ಚರ್ಚೆ ನಡೆಸುವುದಾಗಿ ತಿಳಿಸಿದ ಅವರು ಮುಂದಿನ ತಿಂಗಳು ಮತ್ತೆ ದೆಹಲಿಗೆ ಬರುವುದಾಗಿ ತಿಳಿಸಿದರು.
ನಿನ್ನೆ ಸಂಜೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿರುವ ಸಿಎಂ ಬಿಎಸ್ ವೈ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣ, ಮೂರನೆ ಅಲೆ ಎದುರಿಸಲು ನಡೆಸಿರುವ ತಯಾರಿ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದ್ದಾರೆ. ಯಾವುದೇ ರಾಜಕೀಯ ವಿಚಾರದ ಬಗ್ಗೆ ಚರ್ಚೆ ನಡೆದಿಲ್ಲ ಎನ್ನಲಾಗಿದೆ.
ಒಂದು ಮೂಲಗಳ ಪ್ರಕಾರ ಆಗಸ್ಟ್ ತಿಂಗಳಲ್ಲಿ ಸಿಎಂ ಯಡಿಯೂರಪ್ಪ ಪದತ್ಯಾಗಕ್ಕೆ ಒಪ್ಪಿಕೊಂಡಿದ್ದು, ತಾವು ಹೇಳಿದವರಿಗೆ ಸಿಎಂ ಪಟ್ಟ ಹಾಗೂ ತಮ್ಮ ಪುತ್ರ ವಿಜಯೇಂದ್ರನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಬಿಎಸ್ ವೈ ಅವರನ್ನು ಆಂಧ್ರಪ್ರದೇಶ ರಾಜ್ಯಪಾಲರನ್ನಾಗಿಸುವ ಮೂಲಕ ಅವರಿಗೆ ಗೌರವದ ಬೀಳ್ಕೊಡುಗೆ ನೀಡಲು ವರಿಷ್ಠರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮನೆ ಬಿಲ್ ಕ್ಲಿಯರ್ ಮಾಡಿಸಿ ಅಂತ ಸಮಸ್ಯೆ ಹೇಳಿಕೊಂಡು ಕರೆ ಮಾಡಿದ್ದ ಗ್ರಾಮ ಪಂಚಾಯತಿ ಸದಸ್ಯರೊಬ್ಬರಿಗೆ ವಸತಿ ಸಚಿವರು ನೀನೇನು ದೇವರಾ ಎಂದು ಅವಾಜ್ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿ 2016 ರಿಂದ ಸುಮಾರು 100 ಕ್ಕೂ ಹೆಚ್ಚು ವಸತಿ ಯೋಜನೆಗಳ ಬಿಲ್ ಕ್ಲೀಯರ್ ಆಗದ ಹಿನ್ನೆಲೆ ಗ್ರಾಮ ಪಂಚಾಯತಿ ಸದಸ್ಯ ಮೊಹಮ್ಮದ್ ರಫೀಕ್ ಕರ್ನಾಚಿ, ಸಚಿವರಿಗೆ ಫೋನ್ ಕರೆ ಮಾಡಿದ್ದರು. ಕರ್ನಾಚಿಗೆ ಏಕವಚನದಲ್ಲೇ ವಸತಿ ಸಚಿವ ವಿ. ಸೋಮಣ್ಣ ಗದರಿದ್ದಾರೆ.
ಇದಕ್ಕೆ ಸದಸ್ಯ, ನಾನೊಬ್ಬ ಗ್ರಾಮ ಪಂಚಾಯತಿ ಸದಸ್ಯ. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದು ಮತ್ತು ಬಗೆಹರಿಸುವುದು ನನ್ನ ಜವಾಬ್ದಾರಿ ಸರ್ ಎಂದು ಮರು ಉತ್ತರ ನೀಡಿದ್ದಾರೆ. ಗ್ರಾಮ ಪಂಚಾಯ್ತಿ ಮೇಂಬರ್ ಆದ್ರೆ ನೀನೇನು ದೇವರಾ ? ಏನು ಸಮಸ್ಯೆ ಬರೆದು ಕಳುಹಿಸು ದಡ್ಡ ಎಂದು ಸಚಿವರು ಆವಾಜ್ ಹಾಕಿ ಕರೆ ಕಟ್ ಮಾಡಿದ್ದಾರೆ. ಸಚಿವರ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕೇವಲ 22 ರೂ. ಶುಲ್ಕ ಭರಿಸದ್ದಕ್ಕೆ ಬಡಕುಟುಂಬದ ಪ್ರತಿಭಾಂತ ವಿದ್ಯಾರ್ಥಿನಿಯೋರ್ವಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತಳಾಗಿದ್ದಾಳೆ. ಹೌದು, ರಾಜ್ಯದ ಪ್ರಭಾವಿ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿರುವ ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಾಲೆ ವಿದ್ಯಾರ್ಥಿನಿ, ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆಯ ಗ್ರೀಷ್ಮ ನಾಯಕ್ ಎನ್. ಪರೀಕ್ಷೆಯಿಂದ ವಂಚಿತಳಾದ ನೃತದೃಷ್ಟಳು.
ಈಕೆ ತನ್ನ 9ನೇ ತರಗತಿಯ ಶಾಲಾ ಶುಲ್ಕದಲ್ಲಿ ಸ್ವಲ್ಪ ಹಣವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಭರಿಸಬೇಕಾಗಿತ್ತು. ಆದರೆ ಕೊರೊನಾ ಲಾಕ್‌ಡೌನ್ ನಿಂದಾಗಿ ಶುಲ್ಕ ಭರಿಸಲು ಆಗಿರಲಿಲ್ಲ. ಶೇ. 96 ಅಂಕ ಪಡೆದು 9ನೇ ತರಗತಿಯನ್ನೂ ವಿದ್ಯಾರ್ಥಿನಿ ಪಾಸ್ ಮಾಡಿದ್ದಳು.
ಹೀಗಾಗಿ ಸರ್ಕಾರದ ಸುತ್ತೊಲೆಯಂತೆ 9ನೇ ತರಗತಿ ಪಾಸ್ ಆಗಿರುವ ಎಲ್ಲ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಸುವುದು ಶಾಲೆಯ ಜವಾಬ್ದಾರಿಯೂ ಆಗಿತ್ತು. ಜುಲೈ 19 ಹಾಗೂ 22 ರಂದು ನಡೆಯಲಿರುವ ಪರೀಕ್ಷೆಗೆ ಈ ವಿದ್ಯಾರ್ಥಿನಿ ಹಾಜರಾಗಲು ಅವಕಾಶ ಇಲ್ಲದಂತಾಗಿದೆ.
ಸಂಪೂರ್ಣ ಶುಲ್ಕ ಭರಿಸಲು ಸಮಯಾವಕಾಶ ಬೇಕು ಎಂದು ವಿದ್ಯಾರ್ಥಿನಿ ಲಿಖಿತ ಪತ್ರವನ್ನೂ ಶಾಲೆಗೆ ಕೊಟ್ಟಿದ್ದಳು. ಅದ್ಯಾವುದಕ್ಕೂ ಆಳ್ವಾಸ್ ಶಾಲೆ ಮನ್ನಣೆ ಕೊಟ್ಟಿಲ್ಲ ಎಂಬುದು ವಿದ್ಯಾರ್ಥಿನಿಯ ತಂದೆ ನರಸಿಂಹ ಮೂರ್ತಿ ಅವರ ಆರೋಪ. ಈ ಬಗ್ಗೆ ಸ್ವತಃ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಆ ವಿದ್ಯಾರ್ಥಿನಿ ಎರಡು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ.
ಕಳೆದ ಡಿಸೆಂಬರ್ 2020ರಲ್ಲಿಯೇ ಈ ವಿದ್ಯಾರ್ಥಿನಿ ಇ-ಮೇಲ್ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿರುದ್ಧ ದೂರು ಕೊಟ್ಟಿದ್ದರು. ಜೊತೆಗೆ ನಿನ್ನೆ(ಜು.15)ಯೂ ಕೂಡ ತನ್ನ ಸಮಸ್ಯೆಯನ್ನು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಗಮನಕ್ಕೆ ತಂದಿದ್ದಾರೆ.
ವಿದ್ಯಾರ್ಥಿನಿಯ ಮನವಿಗೆ ಸ್ಪಂದಿಸಿದ್ದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು, ತಮ್ಮ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ “ನಾನೇ ಗ್ರೀಷ್ಮ ಜೊತೆ ಮಾತನಾಡಿದ್ದೇನೆ. ಪರಿಹಾರ ಸೂಚಿಸಿದ್ದೇನೆ” ಎಂದು ಸ್ಪಷ್ಟನೆ ಕೊಟ್ಟಿದ್ದರು. ಆದರೆ, ಅಷ್ಟಕ್ಕೂ ಸಚಿವ ಸುರೇಶ್ ಕುಮಾರ್ ಆ ವಿದ್ಯಾರ್ಥಿನಿಗೆ ಹೇಳಿದ್ದೇನು? ಗೊತ್ತಾ, ಈಗ ಬೇಡ. ಆಗಸ್ಟ್ ತಿಂಗಳಲ್ಲಿ ನಡೆಯುವ ಸೆಪ್ಲಿಮೆಂಟರಿ ಪರೀಕ್ಷೆ ಬರೆಯುವಂತೆ ತಿಳಿಸಿದ್ದನ್ನು ಕಂಡು ವಿದ್ಯಾರ್ಥಿನಿ ವಿಚಲಿತಳಾಗಿದ್ದಾರೆ.
ಕಳೆದ ಡಿಸೆಂಬರ್ ತಿಂಗಳಿನಲ್ಲೇ ತನ್ನ ಸಮಸ್ಯೆಯನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದಿದ್ದ ವಿದ್ಯಾರ್ಥಿನಿ ಗ್ರೀಷ್ಮ ಅವರು, ಇ-ಮೇಲ್ ಮೂಲಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿರುದ್ಧ ದೂರು ಕೊಟ್ಟಿದ್ದರು. “ನಮ್ಮ ಶಾಲೆಯವರು ಸಂಪೂರ್ಣ ಶುಲ್ಕ ತುಂಬಲು ಕೇಳುತ್ತಿದ್ದಾರೆ. ಫೀಸ್ ತುಂಬಲು ನಮಗೆ ಸಮಯಾವಕಾಶ ಕೊಡಿಸಿ ಸರ್. ಯಾವುದೇ ರಿಯಾಯತಿ ನಮಗೆ ಬೇಡ. ಕಷ್ಟದಲ್ಲಿದ್ದೇವೆ, ನಮಗೆ ಸಮಯ ಕೊಡಿಸುವ ಸಹಾಯ ಮಾಡಿ” ಎಂದು ವಿನಂತಿಸಿಕೊಂಡಿದ್ದಳು.
ಆ ದೂರು ಆಧರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸುರೇಶ್ ಕುಮಾರ್ ಸೂಚಿಸಿದ್ದರು. ಆದರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಆಳ್ವಾಸ್ ಶಾಲೆ ವಿದ್ಯಾರ್ಥಿಯನಿಯ ನೋಂದಣಿ ಮಾಡಿಸಿಲ್ಲ. ತನ್ನದಲ್ಲದ ತಪ್ಪಿದೆ ಒಂದು ವರ್ಷ ಹಿಂದೆ ಉಳಿಯಬೇಕಾಗಿದೆ. ಇಡೀ ಪ್ರಕರಣದ ಕುರಿತು ರಾಜ್ಯ ಶಿಕ್ಷಣ ಇಲಾಖೆ ಸಮಗ್ರ ತನಿಖೆ ನಡೆಸುವ ಅಗತ್ಯವಿದೆ. ಇದೇ ರೀತಿ ಎಷ್ಟು ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ ಎಂಬುದನ್ನು ಸ್ಪಷ್ಟಪಡಿಸುವ ಜವಾಬ್ದಾರಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಮೇಲಿದೆ.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆಯೊಂದಿಗೆ ನಗರದಿಂದ ಗೋವಾ ರಾಜ್ಯಕ್ಕೆ ಸಾರಿಗೆ ಬಸ್ಸುಗಳ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ. ಈ ಬಸ್ಸುಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ.
ಗೋವಾ ಸರ್ಕಾರದ ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಆ ರಾಜ್ಯಕ್ಕೆ ಪ್ರವೇಶಿಸುವ ಅನ್ಯ ರಾಜ್ಯಗಳ ಪ್ರಯಾಣಿಕರು 72 ಗಂಟೆಗಳ ಮುಂಚಿತವಾಗಿ ಪಡೆದಿರುವ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. ನಮ್ಮ ರಾಜ್ಯದಿಂದ ನಿತ್ಯ ನೂರಾರು ಜನರು ಕೆಲಸ ಕಾರ್ಯಗಳಿಗಾಗಿ ಗೋವಾಕ್ಕೆ ತೆರಳುತ್ತಾರೆ. ಆದರೆ ಪ್ರಯಾಣಕ್ಕೆ ಮೊದಲು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗದ ಕಾರಣ ಬಹಳಷ್ಟು ತೊಂದರೆಯಾಗಿತ್ತು.
ಪರೀಕ್ಷೆ ಮಾಡಿಸಿಕೊಳ್ಳದೆ ತೆರಳುವವರಿಗೆ ಗೋವಾ ರಾಜ್ಯದ ಗಡಿಯಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿತ್ತು. ಅದಕ್ಕೆ 270 ರೂ.ಪಾವತಿಸಬೇಕಾಗಿತ್ತು. ಸೋಂಕು ದೃಢಪಟ್ಟರೆ ಪ್ರವೇಶ ನಿರಾಕರಿಸಲಾಗುತ್ತಿತ್ತು. ಇದರಿಂದ ಅಲ್ಲಿಯವರೆಗೂ ಪ್ರಯಾಣ ಮಾಡಿದವರು ತೀವ್ರ ಸಂಕಷ್ಟ ಅನುಭವಿಸಬೇಕಾಗಿತ್ತು. ಅಂತಹವರ ಅನುಕೂಲಕ್ಕಾಗಿ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ.
ನೆಗೆಟಿವ್ ವರದಿ ಇರುವ ಪ್ರಯಾಣಿಕರಿಗೆ ಗೋವಾಕ್ಕೆ ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ವಿಶೇಷ ಬಸ್ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಗೋವಾಕ್ಕೆ ಹೋಗುವ ಪ್ರಯಾಣಿಕರು ಬೆಳಗ್ಗೆ ೧೦ ಗಂಟೆಯ ಒಳಗೆ ಗೋಕುಲ ರಸ್ತೆ ಬಸ್ ನಿಲ್ದಾಣಕ್ಕೆ ಬರಬೇಕು. ಅಲ್ಲಿ ಅವರಿಗೆ ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಲು ತಾಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಯಾಣಿಕರಿಗೆ ಮೊದಲು ರಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲಾಗುತ್ತದೆ. ಅದರಲ್ಲಿ ನೆಗೆಟಿವ್ ವರದಿ ಬಂದವರಿಗೆ ಮಾತ್ರವೇ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿ ಮುಂದಿನ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸೋಂಕು ದೃಢಪಟ್ಟರೆ ಪ್ರಯಾಣಕ್ಕೆ ಅನುಮತಿ ನೀಡುವುದಿಲ್ಲ.
ಲಾಕ್‌ಡೌನ್ ಪೂರ್ವದಲ್ಲಿ ಹುಬ್ಬಳ್ಳಿಯಿಂದ ಪ್ರತಿ ನಿತ್ಯ ಪಣಜಿಗೆ ಒಂದು ರಾಜಹಂಸ ಮತ್ತು 8 ವೇಗದೂತ ಬಸ್, ವಾಸ್ಕೋಗೆ 1 ಮತ್ತು ಮಡಗಾಂವ್‌ಗೆ 1 – ಒಟ್ಟು 11 ಬಸ್ಸುಗಳು ಸಂಚರಿಸುತ್ತಿದ್ದವು. ಕೋವಿಡ್ ಎರಡನೆ ಅಲೆ ಲಾಕ್‌ಡೌನ್ ಕಾರಣದಿಂದಾಗಿ ಏಪ್ರಿಲ್ 27ರಿಂದ ಈ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಭಾಗಶಃ ನಿರ್ಬಂಧಗಳ ತೆರವು ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಪಣಜಿಗೆ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಈ ಬಸ್ಸುಗಳು ಧಾರವಾಡ, ಕಿತ್ತೂರು, ಖಾನಾಪುರ, ಚೋರ್ಲಾ ಮಾರ್ಗವಾಗಿ ಸಂಚರಿಸುತ್ತವೆ. ಪ್ರಯಾಣಿಕರ ಬೇಡಿಕೆ ಗಮನಿಸಿ ಮುಂದಿನ ದಿನಗಳಲ್ಲಿ ವಾಸ್ಕೋ ಮತ್ತು ಮಡಗಾಂವಗೆ ಬಸ್ ಗಳನ್ನು ಓಡಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕುಡಿತದ ಅಮಲಿನಲ್ಲಿ ಅಂಬ್ಯುಲೆನ್ಸ್ ಚಾಲನೆ ಮಾಡಿ ಕಾರಿಗೆ ಡಿಕ್ಕಿ ಹೊಡೆಸಿದ ಚಾಲಕನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗದಗ ನಗರದ ಮಲ್ಲಸಮುದ್ರ ಬಳಿ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಗೋವಿಂದಪ್ಪ ಲಮಾಣಿಗೆ ಗಂಭೀರ ಗಾಯವಾಗಿದೆ.
ಶಿರಹಟ್ಟಿ ಕಡೆಗೆ ಹೊರಟಿದ್ದ ಅಂಬ್ಯುಲೆನ್ಸ್ ಡಿಕ್ಕಿಯಾಗಿದೆ. ಪಾನಮತ್ತನಾಗಿ ಅಂಬ್ಯುಲೆನ್ಸ್ ಚಲಾಯಿಸುತ್ತಿದ್ದ ಚಾಲಕ ವಿಶ್ವನಾಥ್ ಬೋರಸೆಟ್ಟಿಯ ನಿರ್ಲಕ್ಷ್ಯ ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಿದ ಸ್ಥಳೀಯರು, ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇನ್ನೋರ್ವ ಸ್ನೇಹಿತನೂ ನಶೆಯಲ್ಲೇ ಅಂಬ್ಯುಲೆನ್ಸ್ ಓಡಿಸಿ, ಘಟನೆಗೆ ಕಾರಣನಾಗಿದ್ದಾನೆ.
ಘಟನೆ ಬಳಿಕ ಸ್ಥಳಕ್ಕೆ ಬಂದ ಹೈವೇ ಪೊಲೀಸರು ಅಂಬ್ಯುಲೆನ್ಸ್ ಚಾಲಕನನ್ನ ವಶಕ್ಕೆ ಪಡೆದು, ಗ್ರಾಮೀಣ ಠಾಣೆಗೆ ಕರೆದೊಯ್ದಿದ್ದಾರೆ. ಗಾಯಾಳು ಕಾರು ಚಾಲಕ ಗೋವಿಂದಪ್ಪ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಅಂಬ್ಯುಲೆನ್ಸ್ ಶಿರಹಟ್ಟಿ ತಾಲೂಕು ಆಸ್ಪತ್ರೆಗೆ ಸೇರಿದ್ದು, ಚಾಲಕ ವಿಶ್ವನಾಥ್ ಶಿರಹಟ್ಟಿ ಪಟ್ಟಣದ ನಿವಾಸಿಯಾಗಿದ್ದಾನೆ. ಘಟನೆಗೆ ಕಾರಣನಾದ ಚಾಲಕನ ಮೇಲೆ ಸ್ಥಳೀಯರು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮೈಮೇಲೆ ದೇವರು ಬರುತ್ತದೆ ಕೈ ನೋವು ವಾಸಿ ಮಾಡುವುದಾಗಿ ನಂಬಿಸಿ ವಂಚನೆ ಮಾಡಿದ ಹಾಗೂ ಧರ್ಮನಿಂದನೆ ಮಾಡಿದ್ದಾನೆಂದು ಆರೋಪಿಸಿ ಡೋಂಗಿ ಬಾಬಾನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆಗೆ ಸಂಬಂಧಿಸಿದಂತೆ, ಬಾಬಾನ ಪತ್ನಿ ಗದಗ ಗ್ರಾಮೀಣ ಠಾಣೆಯಲ್ಲಿ ಐವರ ವಿರುದ್ದ ದೂರು ದಾಖಲಿಸಿದ್ದಾರೆ.
ಕಳೆದ ಜು.12ರಂದು ಗದಗ ಎಸ್.ಎಂ.ಕೃಷ್ಣ ನಗರ ಕಾಲೊನಿ ನಿವಾಸಿ ಆಸೀಫ್ ಜಾಗಿರದಾರ ಎಂಬಾತ ತನ್ನ ಮೈಮೇಲೆ ದೇವರು ಬರುತ್ತದೆ. ನಿಮ್ಮ ಕೈ ನೋವು ವಾಸಿ ಮಾಡುವುದಾಗಿ ನಂಬಿಸಿ ಗದಗ ನಗರದ ಈರಣ್ಣ ನಿಂಗಪ್ಪ ಮುರ್ಲಾಪೂರ ಅವರಿಂದ 40 ಸಾವಿರ ರೂಪಾಯಿ ಹಣ ಪಡೆದು ಲಿಂಬೆ ಹಣ್ಣು, ಬೂದಿ, ಕೈಗೆ ಹಚ್ಚಲು ಎಣ್ಣೆ ನೀಡಿದ್ದರು. ಆದರೆ ಅವರು ಹೇಳಿದಂತೆ ಮಾಡಿದರೂ ಕೈ ನೋವು ವಾಸಿ ಆಗಿರಲಿಲ್ಲ.
ಈ ಬಗ್ಗೆ ವಿಚಾರಿಸಲು ಗಂಗಿಮಡಿ ಆಶ್ರಯ ಕಾಲೊನಿಗೆ ಕರೆಸಿ ಆತನನ್ನು ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೆ, ಐದಾರು ಜನರು ಸೇರಿ ಸಾರ್ವಜನಿಕವಾಗಿ ರಸ್ತೆಯಲ್ಲಿ ಥಳಿಸಿ ಗೂಂಡಾಗಿರಿ ಪ್ರದರ್ಶನ ಮಾಡಿದ್ದರು. ಅದರ ವಿಡಿಯೋ ಕೂಡಾ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಕಲಿ ಬಾಬಾನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿಲಾಗಿತ್ತು.
ಈ ಕುರಿತು ಶಿವಾನಂದ ಕುರಿ ಎಂಬುವವರು ಗದಗ ಗ್ರಾಮೀಣ ಠಾಣೆಯಲ್ಲಿ ವಂಚನೆ ಹಾಗೂ ದೇವರ ನಿಂದನೆ ದೂರು ದಾಖಲಿಸಿದ್ದರು.
ಪ್ರತಿ ದೂರು ನೀಡಿದ ಪತ್ನಿ
ಥಳಿತಕ್ಕೊಳಗಾದ ಅಸೀಪ್ ಜಾಗಿರದಾರನ ಪತ್ನಿ ಫರಿದಾ ಜಾಗಿರದಾರ ಎಂಬುವವರು ಶಿವಾನಂದ ಕುರಿ, ಮಹೇಶ ರೋಖಡೆ, ಈಶ್ವರ ಕಾಟವಾ, ಮಹಾಂತೇಶ ಪಾಟೀಲ ಹಾಗೂ ಪ್ರೇಮಾ ಗುಡಿ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು, ಐಪಿಸಿ 1860 (u/s- 143, 147, 341, 323, 504, 506, 149)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ರಚಿಸಲಾಗಿದ್ದ ಎಸ್ಐಟಿ ವಿರುದ್ಧ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಆರೋಪಿ ಮನವಿ ಮೇರೆಗೆ ಎಸ್ಐಟಿ ರಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವಿಚಾರಣೆಗೂ ಮುನ್ನ ತನಿಖಾ ವರದಿ ಪರಿಶೀಲಿಸುವುದು ಅಗತ್ಯವಿದೆ. ಎಲ್ಲಾ ಎಫ್ಐಆರ್ ಗಳ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವಂತೆ ಎಜಿ ಗೆ ನ್ಯಾಯಾಲಯ ಸೂಚಿಸಿದೆ.
ಜುಲೈ 19ರಂದು ಮುಚ್ಚಿದ ಲಕೋಟೆಯಲ್ಲಿ ತನಿಖೆ ಮುಕ್ತಾಯದ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜುಲೈ 20ಕ್ಕೆ ಮುಂದೂಡಿದೆ ಎಂದು ಎಜಿ ಪ್ರಭುಲಿಂಗ ನಾವದಗಿ ತಿಳಿಸಿದ್ದಾರೆ.
ಟಾಟಾ ಏಸ್ ವಾಹನ ಹಾಗೂ ಗೂಡ್ಸ್ ವಾಹನ ಮಧ್ಯೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ವಿಜಯಪುರ ತಾಲೂಕಿನ ಅರಕೇರಿ ಬಳಿ ನಡೆದಿದೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಗ್ರಾಮದ ನಿವಾಸಿಗಳಾದ ಶ್ರೀಶೈಲ ಮೇತ್ರಿ, ಬುದ್ದಯ್ಯ ಹಿರೇಮಠ, ಪ್ರತೀಕ(ಪಿಂಟೂ) ಹಿರೇಮಠ ಮೃತ ದುರ್ದೈವಿಗಳು. ಸಿದ್ದಯ್ಯ ಹಿರೇಮಠ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿ ಸಂಚಾರ ಸುಗಮಗೊಳಿಸಿದರು. ಪಿಎಸ್ಐ ಜಿ. ಎಸ್ ಉಪ್ಪಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಬಗ್ಗೆ ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ. ವಿರೇಂದ್ರ ಪಾಟೀಲ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ 186 ಸ್ಥಾನ ಪಡೆದುಕೊಂಡಿತ್ತು. ಆಗಿನ ಗತವೈಭವ ಮರಳಿಸಲು ಪ್ರಯತ್ನಿಸುತ್ತೇವೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಹೇಳಿದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿದ್ದೇವೆ ಎಂದರು.
ಯಡಿಯೂರಪ್ಪ ನಂತರ ಲಿಂಗಾಯತರ ಪ್ರಮುಖ ನಾಯಕ ಎಂ.ಬಿ.ಪಾಟೀಲ್ ರೆಂಬ ಸುದ್ದಿಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ನನಗೆ ನಾನೇ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾ..? ಜನ ಸರ್ಟಿಫಿಕೇಟ್ ಕೊಡಬೇಕಾಗುತ್ತೆ. ನಮಗೆ ನಾವೇ ಸ್ವಯಂ ಘೋಷಿತ ನಾನೇ ನಾಯಕ, ನೀನೇ ನಾಯಕ, ನಾನೇ ಸಿಎಂ, ನೀನೇ ಸಿಎಂ ಎಂದು ಆಗುವುದಿಲ್ಲ. ಜನ ಏನು ಬಯಸುತ್ತಾರೆ ಅದು ಆಗುತ್ತದೆ. ಜನ ಹೇಳಿದ್ರೆ ಮಾತ್ರ ನಾಯಕರಾಗಲು ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಲಿಂಗಾಯತರಲ್ಲಿ ಯಡಿಯೂರಪ್ಪ ಅತ್ಯಂತ ಎತ್ತರದ ನಾಯಕರು. ಕಾಂಗ್ರೆಸ್‍ನಲ್ಲಿ ಪ್ರಕಾಶ ಹುಕ್ಕೇರಿ, ಎ.ಬಿ.ಪಾಟೀಲ್ ಅವರು ನಮಗಿಂತ ಬಹಳ ಹಿರಿಯ ನಾಯಕರಿದ್ದಾರೆ ಎಂದು ಹೇಳಿದರು. ಮುಂಬರುವ ಸಿಎಂ ವಿಚಾರಕ್ಕೆ ಪ್ರತಿಕ್ರಯಿಸಿದ ಎಂ.ಬಿ.ಪಾಟೀಲ್, ಯಾರು ಸ್ವಯಂ ಘೋಷಿತ ಸಿಎಂ ಆಗಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಸಿಎಂ ಆಗಲು ಮೊದಲು ಜನಾದೇಶ ಬರಬೇಕು. ಕನಿಷ್ಠ ಪಕ್ಷ 125 ಸ್ಥಾನ ಗೆಲ್ಲಬೇಕು. ನಮ್ಮ ಟಾರ್ಗೆಟ್ 150 ಇದೆ. 125 ಗೆದ್ದು ಬಹುಮತ ಪಡೆಯಬೇಕು. ಆಮೇಲೆ ವೀಕ್ಷಕರು ಬರುತ್ತಾರೆ, ಶಾಸಕರ ಅಭಿಪ್ರಾಯ ಪಡೆದುಕೊಂಡು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.