Home Blog Page 3076

ಕೂಡಲೇ ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸಿ

ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬೆಳಗಾವಿಯ ಸುವರ್ಣಸೌಧದಲ್ಲಿಯೇ ವಿಧಾನ ಮಂಡಲ ಅಧಿವೇಶನ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಸಂಬಂಧ ಸಿಎಂ ಯಡಿಯೂರಪ್ಪ ಹಾಗೂ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪತ್ರ ಬರೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಬೆಳಗಾವಿಯಲ್ಲಿ ಕೂಡಲೇ ವಿಧಾನ ಮಂಡಲ ಅಧಿವೇಶನ ನಡೆಸುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮದಂತೆ ಜುಲೈ ತಿಂಗಳಲ್ಲಿ ವಿಧಾನಸಭೆಯ ಅಧಿವೇಶನ ನಡೆಸಬೇಕಾಗಿತ್ತು. ಆದರೆ ಸರ್ಕಾರ ಇದುವರೆಗೂ ಅಧಿವೇಶನ ನಡೆಸಲು ಯಾವುದೇ ಕ್ರಮ ಕೈಗೊಳ್ಳದಿರುವುದು ನಿಯಮಬಾಹಿರ ಕ್ರಮವಾಗಿದೆ ಎಂದವರು ದೂರಿದ್ದಾರೆ.

ರಾಜ್ಯದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ರಾಜ್ಯದ ಆರ್ಥಿಕ, ರಾಜಕೀಯ, ಆಡಳಿತಾತ್ಮಕ ಮತ್ತು ಆರೋಗ್ಯ ಕ್ಷೇತ್ರಗಳ ಆರೋಗ್ಯ ಕುಸಿದು ಬಿದ್ದಿದೆ. ಕೋವಿಡ್ 2ನೇ ಅಲೆ ರಾಜ್ಯ ಸರ್ಕಾರ ನಿಭಾಯಿಸಿದ ರೀತಿ ಅತ್ಯಂತ ಅರಾಜಕವಾಗಿತ್ತು. ಜನರ ಪಾಲಿಗೆ ಮಾರಣಾಂತಿಕವಾಗಿತ್ತು. ಮತ್ತೆ 3ನೇ ಅಲೆಯ ಭೀತಿ ಜನರನ್ನು ಕಾಡುತ್ತಿದೆ. ಜನರಿಗೆ ಸಮರ್ಪಕವಾಗಿ ಲಸಿಕೆ ಸಿಕ್ಕಿಲ್ಲ. 3ನೇ ಅಲೆಯನ್ನೂ ನಿಭಾಯಿಸಲು ಸರ್ಕಾರ ಯಾವ ತಯಾರಿ ಮಾಡಿಕೊಂಡಿದೆ ಎಂಬ ಕುರಿತು ಮಾಹಿತಿ ಇಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತವಾದ ಹಣ ನೀಡದೇ ವಂಚಿಸುತ್ತಿದೆ. ಆದರೂ ರಾಜ್ಯ ಸರ್ಕಾರ ಕೈಕಟ್ಟಿ ಕೂತಿದೆ. ಇದರೆ ಜೊತೆಗೆ ರಾಜ್ಯ ಸರ್ಕಾರ ಭೀಕರ ಭ್ರಷ್ಟಾಚಾರದಲ್ಲಿ ಮುಳುಗಿರುವ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ.

ರಾಜ್ಯವನ್ನು ಮತ್ತೆ ಪ್ರವಾಹ ಭೀತಿ ಕಾಡುತ್ತಿದೆ. ಕಳೆದ 2 ವರ್ಷಗಳಲ್ಲಿ ಪ್ರವಾಹದಿಂದ ಸಂಭವಿಸಿದ ಹಾನಿಗೆ ಸಮರ್ಪಕ ಪರಿಹಾರ ನೀಡಿಲ್ಲ. ಕೃಷಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಶಿಕ್ಷಣ ವ್ಯವಸ್ಥೆಯೂ ಅಧೋಗತಿಗಿಳಿದಿದೆ ಎಂದು ಟೀಕಿಸಿದ್ದಾರೆ.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ದಲಿತ, ದಮನಿತ ಹೆಣ್ಣು ಮಕ್ಕಳ ಮೇಲೆ ಘೋರ ಅತ್ಯಾಚಾರ ಪ್ರಕರಣಗಳು, ಮರ್ಯಾದಾ ಹತ್ಯೆಗಳು, ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಕೃಷಿ ಕ್ಷೇತ್ರದ ಕುರಿತ ಸರ್ಕಾರದ ನಿರ್ಲಕ್ಷ್ಯ ಹೆಚ್ಚುತ್ತಿದೆ. ಮತ್ತೆ ಅಕ್ರಮ ಗಣಿಗಾರಿಕೆ ದಂಧೆ ಹೆಚ್ಚಿದೆ. ರಾಜ್ಯದ ಒಟ್ಟಾರೆ ಆಡಳಿತ ಅಂಧಕಾರದಲ್ಲಿ ಮುಳುಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಜನರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಚರ್ಚಿಸಿ ಅವುಗಳಿಗೆ ಸಮರ್ಪಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿಯಮ ಪ್ರಕಾರ ಪ್ರತಿ ವರ್ಷ ಕನಿಷ್ಟ 60 ದಿನಗಳ ಕಾಲ ಅಧಿವೇಶ ನಡೆಸಬೇಕು. ಮೇಲೆ ಉಲ್ಲೇಖಿಸಿದ ಕಾಯ್ದೆಯ ಪ್ರಕಾರ ವರ್ಷದಲ್ಲಿ ಕನಿಷ್ಠ 4 ಅಧಿವೇಶನಗಳನ್ನು ನಡೆಸಬೇಕು. ಜನೆವರಿಯಲ್ಲಿ 15, ಮಾರ್ಚ್‍ನಲ್ಲಿ 20, ಜುಲೈನಲ್ಲಿ 15 ಮತ್ತು ನವೆಂಬರ್‍ನಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಸಬೇಕು. ಆದರೆ, ಬಿಜೆಪಿ ಆಡಳಿತದ ಸರ್ಕಾರ ಈ ನಿಯಮಗಳನ್ನೆಲ್ಲ ಗಾಳಿಗೆ ತೂರುತ್ತಿದೆ.

2020ರಲ್ಲಿ ಒಟ್ಟಾರೆ 31 ದಿನಗಳ ಕಾಲ ಮತ್ತು 2021ರಲ್ಲಿ ಇದೂವರೆಗೆ 20 ದಿನಗಳ ಕಾಲ ಮಾತ್ರ ಅಧಿವೇಶನ ನಡೆಸಿದೆ. ಬೆಳಗಾವಿಯಲ್ಲಿ ಇದೂವರೆಗೆ ಒಂದು ಅಧಿವೇಶನವನ್ನೂ ನಡೆಸಿಲ್ಲ. ಸರ್ಕಾರದ ನಿಯಮ ಬಾಹಿರವಾದ ಈ ಕ್ರಮ ಅಕ್ಷಮ್ಯವಾಗುತ್ತದೆ. ಆದ್ದರಿಂದ ಕೂಡಲೇ ಅಧಿವೇಶನ ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಆಸ್ಪತ್ರೆಯಿಂದ ವಿಚಾರಾಧೀನ ಕೈದಿ ಎಸ್ಕೇಪ್

ವಿಜಯಸಾಕ್ಷಿ ಸುದ್ದಿ, ಕಲಬುರಗಿ

  • ಕಿಟಕಿಯಿಂದ ಜಿಗಿದು ಪರಾರಿಯಾದ ಸ್ನೇಹಿತನ ಕೊಲೆ ಆರೋಪಿ

ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯೋರ್ವ ಆಸ್ಪತ್ರೆಯ ಕಿಡಕಿಯಿಂದ ಜಿಗಿದು ಪರಾರಿಯಾದ ಘಟನೆ ಜರುಗಿದೆ.
ಸಿದ್ದಪ್ಪ ಅಲ್ಲೂರ್ (22) ಪರಾರಿಯಾದ ಕೈದಿ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರು ಬಿ ಗ್ರಾಮದ ನಿವಾಸಿಯಾದ ಸಿದ್ದಪ್ಪ ಎರಡು ತಿಂಗಳ ಹಿಂದಷ್ಟೇ ಸ್ನೇಹಿತನನ್ನು ಕೊಲೆ ಮಾಡಿ
ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಸೇರಿದ್ದ‌.

ನಾಲ್ಕು ದಿನದ ಹಿಂದೆ ಅಸಹಜ ವರ್ತನೆ ಹಿನ್ನೆಲೆಯಲ್ಲಿ ಜಿಮ್ಸ್ ಆಸ್ಪತ್ರೆ ಜೈಲು ವಾರ್ಡ್ ಗೆ ಶಿಫ್ಟ್ ಮಾಡಲಾಗಿತ್ತು ಇಂದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಕಿಡಕಿಯಿಂದ ಪರಾರಿಯಾಗಿದ್ದಾನೆ.
ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋವಿಡ್ ರಿಪೋರ್ಟ್ ಇಲ್ಲದಿದ್ದರೆ ರಾಜ್ಯಕ್ಕೆ ನೋ ಎಂಟ್ರಿ!

  • ಮಹಾರಾಷ್ಟ್ರ ಗಡಿಭಾಗದಲ್ಲಿ ಹೈ ಅಲರ್ಟ್

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆಯಾಗಿ 3ನೇ ಅಲೆಯ ಆತಂಕ ಸೃಷ್ಟಿಯಾದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿದೆ.
ಕರ್ನಾಟಕ ಸರ್ಕಾರ ಮತ್ತು ಬೆಳಗಾವಿ ಜಿಲ್ಲಾಡಳಿತದ ಆದೇಶದಂತೆ ನಿಪ್ಪಾಣಿ ಬಳಿಯ ಕೊಗನೊಳ್ಳಿ ಮತ್ತು ಕಾಗವಾಡ ಚೆಕ್ ಪೋಸ್ಟ ತೀವ್ರ ನಿಗಾ ವಹಿಸಲಾಗಿದೆ.

ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವ ಪ್ರತಿಯೊಬ್ಬರನ್ನು ಪೊಲೀಸರು, ಆರೋಗ್ಯ ಇಲಾಖೆ ಸಿಬ್ಬಂದಿ ವಿಚಾರಿಸುತ್ತಿದ್ದಾರೆ. ಕೆಎಸ್ಆರ್ಟಿಸಿ ಸೇರಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತಿದೆ. ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ರಿಪೋರ್ಟ ಇದ್ದವರನ್ನು ಮಾತ್ರ ಒಳಗೆ ಬಿಡಲಾಗುತ್ತಿದೆ. ನೆಗೆಟಿವ್ ರಿಪೋರ್ಟ ಇಲ್ಲದವರನ್ನು ವಾಪಸ್ಸು ಮಹಾರಾಷ್ಟ್ರಕ್ಕೆ ಕಳಿಸುವ ಮೂಲಕ ದಿಟ್ಟ ಕ್ರಮ ಕೈಗೊಳ್ಳಲಾಗುತ್ತಿದೆ.

ವಿಶೇಷವಾಗಿ ಬೆಳಗಾವಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ನಿಪ್ಪಾಣಿ ಬಳಿ ಇರುವ ಕೋಗನೋಳಿ ಚೆಕ್ ಪೋಸ್ಟ್ ನಲ್ಲಿ
ಮಹಾರಾಷ್ಟ್ರದಿಂದ ಕರ್ನಾಟಕ್ಕೆ ಬರುವ ಎಲ್ಲ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

 RTPCR ರಿಪೋರ್ಟ್ ಇಲ್ಲದೆ ಪ್ರಯಾಣಿಕರನ್ನು ಕರೆತಂದಿದ್ದ ಖಾಸಗಿ ಬಸ್ ಗಳನ್ನು ವಾಪಸ್ ಕಳುಹಿಸಲಾಗುತ್ತಿದೆ.

ಲಾಕ್ ಡೌನ್ ತೆರವು ನಂತರ ಅಪರಾಧಗಳ ಸಂಖ್ಯೆ ಹೆಚ್ಚಳ; ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಮೈಸೂರು

ರಾಜ್ಯದಲ್ಲಿ ಲಾಕ್‍ಡೌನ್ ತೆರವುಗೊಳಿಸಿದ ನಂತರ ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂದು ಕಾನೂನು ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬುಧವಾರ ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲಾಕ್‍ಡೌನ್ ಸಮಯದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಲಾಕ್‍ಡೌನ್ ತೆರವು ಮಾಡಿದ ನಂತರ ಸರಗಳ್ಳತನ, ದರೋಡೆಯಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ‌ ಎಂದರು.

ರಾಜ್ಯದಲ್ಲಿ 50 ಕೋಟಿ‌ ರೂ. ಮೌಲ್ಯದಷ್ಟು ಡ್ರಗ್ಸ್ ನಾಶ ಮಾಡಿದ್ದೇವೆ. 5 ವರ್ಷದಷ್ಟು ಡ್ರಗ್ಸ್ ಕೇವಲ ಒಂದೇ ವರ್ಷದಲ್ಲಿ ಸಂಗ್ರಹವಾಗಿದೆ. ಸಿಂಥೆಟಿಕ್ ಡ್ರಗ್ಸ್ ತಡೆಗಟ್ಟುವ ಕೆಲಸವಾಗುತ್ತಿದೆ. ಡ್ರಗ್ಸ್ ವಿದೇಶದಿಂದ ಡಾರ್ಕ್ ವೆಬ್‍ನಲ್ಲಿ ಬರುತ್ತಿದೆ. ಇದನ್ನು ಕರ್ನಾಟಕದ ಪೊಲೀಸರು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ ಎಂದು ಪೊಲೀಸರ ಕಾರ್ಯಕ್ಕೆ ಬಸವರಾಜ್ ಬೊಮ್ಮಾಯಿ ಶ್ಲಾಘನೆ ವ್ಯಕ್ತಪಡಿಸಿದರು.

ಗೆಳೆಯನಿಗೆ ಚಾಕು ಇರಿತ; ಆರೋಪಿ ಮಂಜುನಾಥ್ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಕ್ಷುಲ್ಲಕ ಕಾರಣಕ್ಕೆ ಹಾಲು ಮಾರಾಟ ಮಾಡುವ ವ್ಯಕ್ತಿಯೊಬ್ಬನಿಗೆ ಚಾಕು ಹಾಕಿದ ಘಟನೆ ಗದಗನಲ್ಲಿ ನಡೆದಿದೆ.

ಗದಗ ತಾಲೂಕಿನ ನರಸಾಪುರ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು. ಹಾಲು ಮಾರಾಟಗಾರ ಸೋಮನಗೌಡ ಕೊಳ್ಳಿ ಇರಿತಕ್ಕೊಳಗಾದ ವ್ಯಕ್ತಿ. ಆರೋಪಿ ಮಂಜುನಾಥ್ ಕುಬಸದ ಎಂಬಾತ ಚಾಕು ಹಾಕಿದಾತ.

ಒಂದೇ ಓಣಿಯ ನಿವಾಸಿಗಳಾದ ಸೋಮನಗೌಡ್ ಹಾಗೂ ಮಂಜುನಾಥ್ ನಿನ್ನೆ ತಡರಾತ್ರಿ ಕುಡಿದ ನಸೆಯಲ್ಲಿದ್ದಾಗ ಕ್ಷುಲ್ಲಕ ಕಾರಣಕ್ಕೆ ಜಗಳಕ್ಕೆ ಇಳಿದಿದ್ದಾರೆ. ಜಗಳ ವಿಕೋಪಕ್ಕೆ ಹೋಗಿದೆ. ಆಗ ಸಿಟ್ಟಿಗೆದ್ದ ಯುವಕ ಮಂಜುನಾಥ ಚಾಕು ಇರಿದು ಪರಾರಿಯಾಗಿದ್ದ.

ಘಟನೆಯ ಮಾಹಿತಿ ಪಡೆದ ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ನಂತರ ಪರಾರಿಯಾಗಿದ್ದ ಆರೋಪಿ ಮಂಜುನಾಥ್ ನನ್ನು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

ಚಾಕು ಇರಿತಕ್ಕೊಳಗಾದ ಸೋಮನಗೌಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಬೆಟಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೋ ಚಾಲಕರಿಗೆ ಧಮ್ಕಿ ಆರೋಪ; ಮರಿಪುಢಾರಿ ರೋಹಿತ್ ಕಟ್ಟಿಮನಿ ಅಂದರ್

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಎಸ್ ಎಂ ಕೃಷ್ಣ ಆಟೋ ಚಾಲಕರ ಮೇಲೆ ಧಮ್ಕಿ ಹಾಕಿ ದಬ್ಬಾಳಿಕೆ ನಡೆಸುತ್ತಿದ್ದ ಮರಿಪುಢಾರಿ ರೋಹಿತ್ ಕಟ್ಟಿಮನಿಗೆ ಕೊನೆಗೂ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ನಗರದ ಬಹುತೇಕ ಆಟೋ ಚಾಲಕರಿಗೆ ಧಮ್ಕಿ ಹಾಕಿ ದಿನನಿತ್ಯ ಕಿರುಕುಳ ನೀಡುತ್ತಿದ್ದ ರೋಹಿತ್ ಮೇಲೆ ಕಠಿಣ ಕ್ರಮಕ್ಕಾಗಿ ಆಗ್ರಹಿಸಿ ಆಟೋ ಚಾಲಕರು ನಿನ್ನೆ ಗ್ರಾಮೀಣ ಠಾಣೆಯ ಪೊಲೀಸರ ಮೊರೆ ಹೋಗಿದ್ದರು.

ಇದನ್ನೂ ಓದಿ ಮರಿ ಪುಢಾರಿಯ ಧಮ್ಕಿ; ಪೊಲೀಸರ ಮೊರೆ ಹೋದ ಆಟೋ ಚಾಲಕರು!

ನಗರದ ಸೆಟಲ್ಮೆಂಟ್ ಏರಿಯಾ ನಿವಾಸಿ ರೋಹಿತ್ ಕಟ್ಟಿಮನಿ ಎಸ್ ಎಮ್ ಕೃಷ್ಣ ನಗರದ ಆಟೋ ಸ್ಟ್ಯಾಂಡ್ ಗೆ ನುಗ್ಗಿ ಪುಂಡಾಟಿಕೆ ಮಾಡ್ತಾನಂತೆ. ಆಟೋ ಚಾಲಕರಿಗೆ ಧಮ್ಕಿ‌ ಹಾಕಿ ಹಣ ಕೀಳೋದು. ಆಟೋ ಚಾಲಕರನ್ನ ಪೀಡಿಸೋದೆ ಕಾಯಕ ಮಾಡ್ಕೊಂಡಿದ್ದನಂತೆ.

ರೋಹಿತ್ ನ ಉಪಟಳದಿಂದ ರೋಸಿ ಹೋದ ಎಸ್ ಎಮ್ ಕೃಷ್ಣ ಬಡಾವಣೆ ಆಟೋ ಚಾಲಕರು ಗ್ರಾಮೀಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ರೋಹಿತನ ಉಪಟಳಕ್ಕೆ ಬ್ರೇಕ್ ಹಾಕಿ ಅಂತಾ ಪಿಎಸ್ ಐ ಅಜಿತ್ ಹೊಸಮನಿ ಅವರಿಗೆ ಮನವಿ ಮಾಡಿಕೊಂಡಿದ್ದರು.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಬೆದರಿಕೆ; ಎಸ್ಪಿಗೆ ಮೊರೆ

ವಿಜಯಸಾಕ್ಷಿ ಸುದ್ದಿ, ಗದಗ

ಪ್ರೀತಿ ಮಾಡಿ ಮದುವೆಯಾದ ಜೋಡಿಯೊಂದು ಪೋಷಕರು ಜೀವ ಬೆದರಿಕೆ ಹಾಕ್ತಿದ್ದಾರೆ ಎಂದು ಆರೋಪಿಸಿ, ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮೊರೆ ಹೋಗಿದ್ದಾರೆ.
ಇಲ್ಲಿನ ರಾಜೀವ್ ಗಾಂಧಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಒಬ್ಬರ ಪುತ್ರಿ, ತನ್ನ ಪ್ರಿಯಕರನ ಜತೆಗೆ ಗದಗ ಎಸ್ಪಿ ಎನ್. ಯತೀಶ್ ಅವರನ್ನು ಭೇಟಿ ಮಾಡಿ, ರಕ್ಷಣೆ ಕೋರಿದ್ದಾಳೆ. ತಾಯಿ ಪಿಎಸ್ಐ ಆಗಿದ್ದು, ತಂದೆ ಅಗ್ನಿಶಾಮಕ ದಳದಲ್ಲಿ ಹವಾಲ್ದಾರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಮ್ಮನ್ನು ಕೊಂದು ಬಿಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ಕೀರ್ತಿನಾಥ ಸದಾಶಿವ ದಂಡಿನ (22) ಎಂಬ ಯುವಕನ ಜತೆಗೆ ಆರು ತಿಂಗಳ ಹಿಂದೆ ಮನೆಬಿಟ್ಟು ಹೋಗಿ ಸಬ್ ರಿಜಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ಆದರೆ, ಯುವತಿಯ ತಂದೆ-ತಾಯಿ ಪೊಲೀಸ್ ಇಲಾಖೆಯ ಪ್ರಮುಖ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಮಗೆ ರಕ್ಷಣೆ ಇಲ್ಲದಂತಾಗಿದೆ. ಎಲ್ಲಿ ನಮ್ಮಿಬ್ಬರನ್ನ ದೂರ ಮಾಡುತ್ತಾರೋ ಅನ್ನುವ ಭಯ ಕಾಡ್ತಿದೆ ಎಂದು ಆರೋಪಿಸಿದ್ದಾರೆ.

ಈ ಇಬ್ಬರೂ ಕಳೆದ 7 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರಂತೆ. ವಿಷಯ ಎರಡೂ ಮನೆಗಳಲ್ಲಿ ತಿಳಿದಿದ್ದರೂ ಅಂತರ್ಜಾತಿ ಮದುವೆಗೆ ವಿರೋಧವಿತ್ತು. ಹೀಗಾಗಿ ಕಳೆದ ಲಾಕ್‌ಡೌನ್ನಲ್ಲಿ ಯುವತಿಗೆ ಬೇರೆ ಕಡೆ ಸಂಬಂಧಕ್ಕೆ ಪ್ರಯತ್ನಿಸಿದ್ದರಂತೆ. ಆದರೆ, ಬೇರೆ ಹುಡುಗನನ್ನು ಮದುವೆಯಾಗಲು ಇಷ್ಟವಿಲ್ಲದ ಯುವತಿ ಪ್ರೀತಿಸಿದ ಯುವಕನ ಜೊತೆಗೆ ಮನೆ ಬಿಟ್ಟು ಹೋಗಿದ್ದರು.

ಡಿಸೆಂಬರ್ 2, 2020ರಂದು ಮದುವೆ ಮಾಡಿಕೊಂಡು ಬಳಿಕ ಮುಂಡರಗಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ 2021ರ ಜನವರಿ 5ರಂದು ನೋಂದಣಿ ಮಾಡಿಸಿದ್ದರು. ಬಳಿಕ ಗೋವಾದಲ್ಲಿ ತಂಗಿದ್ದರು. ಆಗಲೇ ಇಬ್ಬರಿಗೂ ಪದೇ ಪದೇ ಬೆದರಿಕೆ ಕರೆಗಳು ಬರುತ್ತಿದ್ದವು. ಹೀಗಾಗಿ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದೆವು. ಈಗ ಊರಿಗೆ ಬರಬೇಕಾದ ಅನಿವಾರ್ಯ ಇದೆ. ಹೀಗಾಗಿ ನಮಗೆ ರಕ್ಷಣೆ ಕೊಡಿ ಅಂತ ಮನವಿ ಮಾಡಿಕೊಂಡಿದ್ದಾರೆ.

ಈ ಮೊದಲು ಬೆಳಗವಾವಿಗೆ ಹೋಗಿ ಐಜಿಯವರಲ್ಲಿ ರಕ್ಷಣೆ ಕೋರಿ ಮನವಿ ಮಾಡಿದ್ದರು. ಬಳಿಕ ಅಲ್ಲಿಂದ ಗದಗ ಎಸ್ಪಿಯವರಿಗೆ ರಕ್ಷಣೆ ಕೋರಿದ್ದಾರೆ. ಸದ್ಯ ಎಸ್ಪಿ ಮತ್ತು ಐಜಿಯವರು ರಕ್ಷಣೆ ಕೊಡುವುದಾಗಿ ಭರವಸೆ ನೀಡಿದ್ದಾರೆ.

ಮೃತರ ದರ್ಶನಕ್ಕೆ, 9ನೇ ದಿನದ ಕಾರ್ಯಕ್ಕೆ ಆಗಮಿಸಿದ ವಾನರ!

ವಿಜಯಸಾಕ್ಷಿ ಸುದ್ದಿ, ಕಂಪ್ಲಿ

ಮೃತರ ಅಂತಿಮ ದರ್ಶನಕ್ಕೆ ಆಗಮಿಸಿದ ವಾನರವೊಂದು, 9ನೇ ದಿನದ ಅಸ್ಥಿ ವಿಸರ್ಜನೆ ಕಾರ್ಯಕ್ರಮಕ್ಕೂ ತುಂಗಭದ್ರಾ ನದಿ ತೀರಕ್ಕೆ ಆಗಮಿಸುವ ಮೂಲಕ ಕುಟುಂಬ ಸದಸ್ಯರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ.

ಕಂಪ್ಲಿ ತಾಲೂಕಿನ ಸಣಾಪುರ ಗ್ರಾ.ಪಂ. ವ್ಯಾಪ್ತಿಯ ಬಸವೇಶ್ವರ ಕ್ಯಾಂಪ್‌ನಲ್ಲಿ ಜೂ. 30ರಂದು ವಿಶ್ವನಾಥರಾಜು (70) ಮೃತರಾಗಿದ್ದರು. ಪಾರ್ಥಿವ ಶರೀರದ ಮುಂದೆ ಕುಟುಂಬದ ಸದಸ್ಯರು ರೋದಿಸುತ್ತಾ ಕುಳಿತಿರುವಾಗಲೇ ಬೃಹತ್ ಕರಿಕೋತಿಯೊಂದು (ವಾನರ) ಆಗಮಿಸಿ, ಶವದ ಮೇಲೆ ಹಾಕಿದ್ದ ವಸ್ತ್ರವನ್ನು ಸರಿಸಿ, ಮುತ್ತು ಕೊಟ್ಟು, ಮೃತರ ತಲೆಯ ಮೇಲೆ ತನ್ನ ಕೈಇಟ್ಟು, ಬಳಿಕ ತೆರಳಿತ್ತು.

9ನೇ ದಿನ ಮೃತರ ಅಸ್ಥಿ ವಿಸರ್ಜನೆ ಕಾರ್ಯಕ್ರಮವನ್ನು ಕುಟುಂಬಸ್ಥರು ತುಂಗಭದ್ರಾ ನದಿ ತೀರದಲ್ಲಿ ನೆರವೇರಿಸುತ್ತಿದ್ದರು. ಅಲ್ಲಿಗೂ ಬಂದ ವಾನರ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕುಟುಂಬಸ್ಥರು ನೀಡಿದ ಆಹಾರ ಸೇವಿಸಿ ನಿರ್ಗಮಿಸಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

ಜುಲೈ 16ರಂದು ಸಿಎಂ ಬಿಎಸ್ ವೈ ಜೊತೆಗೆ ಪ್ರಧಾನಿ ವಿಡಿಯೋ ಸಂವಾದ

  • ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಚರ್ಚೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ 3ನೇ ಅಲೆ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಜುಲೈ 16) 6 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ರಾಜ್ಯಗಳಲ್ಲಿನ ಸಧ್ಯದ ಕೊರೊನಾ ಪರಿಸ್ಥಿತಿ ಮತ್ತು ನಿರೀಕ್ಷಿತ 3ನೇ ಅಲೆ ತಡೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ.

ಮಂಗಳವಾರ ಈಶಾನ್ಯ ಭಾಗದ 8 ರಾಜ್ಯಗಳ ಜೊತೆ ಚರ್ಚೆ ನಡೆಸಿದ ಪ್ರಧಾನಿ ಕೊರೊನಾ ನಿರ್ಲಕ್ಷ ಮಾಡದಂತೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರದ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಪಾಲ್ಗೊಳ್ಳಲಿದ್ದಾರೆ. ಜೊತೆಗೆ ತಮಿಳುನಾಡು, ಕೇರಳ, ಆಂದ್ರಪ್ರದೇಶ, ಮಹಾರಾಷ್ಟ್ರ, ಓಡಿಸ್ಸಾ ಮುಖ್ಯಮಂತ್ರಿಗಳು ಸಹ ಭಾಗವಹಿಸುವರು.

ಜುಲೈ 19ರಂದು ಕರ್ನಾಟಕದಲ್ಲಿ ಅನ್ ಲಾಕ್ 3.O ಅಂತ್ಯಗೊಳ್ಳಲಿದ್ದು, ಮುಂದೇನು ಎನ್ನುವ ಪ್ರಶ್ನೆಗೂ ಮೋದಿ ಸಭೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರ ಪ್ರಕಟಿಸಲಿದ್ದಾರೆ.

ಅನ್ ಲಾಕ್ ನಂತರ ವಿವಿಧ ರಾಜ್ಯಗಳಲ್ಲಿ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ ಹೆಚ್ಚುತ್ತಿರುವ ಕುರಿತು ಪ್ರಧಾನಿ ಮೋದಿ ಈಗಾಗಲೆ ಆತಂಕ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮತ್ತೆ ಲಾಕ್ ಡೌನ್ ಅಥವಾ ಇನ್ನಷ್ಟು ಕಠಿಣ ಕ್ರಮದ ಕುರಿತು ಸಲಹೆ ನೀಡುವ ಸಾಧ್ಯತೆ ಇದೆ.

ನಿರ್ಲಕ್ಷ್ಯ ತೋರಿದರೆ ಮತ್ತೆ ಲಾಕ್ ಡೌನ್; ಸಚಿವ ಸುಧಾಕರ ಎಚ್ಚರಿಕೆ

ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ

ಕೊರೊನಾ ಬಗ್ಗೆ ಮೈ ಮರೆತರೆ ಮತ್ತೆ ಲಾಕ್‍ಡೌನ್ ಮತ್ತು ನೈಟ್ ಕರ್ಫ್ಯೂ ಮುಂದುವರಿಸಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಆರೋಗ್ಯ ಸಚಿವರು, ದೇವಸ್ಥಾನ, ಮಾರುಕಟ್ಟೆಗಳಲ್ಲಿ
ಜನಜಂಗುಳಿ ಕಂಡುಬರುತ್ತಿದೆ. ಜನದಟ್ಟಣೆ ಕಂಡು ಭಯವಾಗುತ್ತಿದೆ. ಮದುವೆಗೆ 100 ಜನರಿಗೆ ಅನುಮತಿ ನೀಡಿದ್ದರೂ 500 ಜನರು ಸೇರುತ್ತಿದ್ದಾರೆ. ಕೊರೊನಾ 2ನೇ ಅಲೆ ಕಡಿಮೆ ಆಗಿದ್ದರೂ ಮೂರನೇ ಅಲೆ ಬರೋದಿಲ್ಲ ಅಂತೇನಿಲ್ಲ. ಆದರೂ ಜನರು ಮುನ್ನೆಚ್ಚರಿಕೆ ವಹಿಸದೇ ನಿರ್ಲಕ್ಷ್ಯ ತೋರಿಸುತ್ತಿರುವುದು ಕಳವಳ ಮೂಡಿಸುತ್ತಿದೆ ಎಂದರು.

ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಬೇಕಾಬಿಟ್ಟಿಯಾಗಿ ಓಡಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರಾಜ್ಯದ ಜನತೆಗೆ ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ.

error: Content is protected !!