Home Blog Page 3075

ಅಧಿವೇಶನ ಹಿನ್ನಲೆ ಸಿಎಂ ದೆಹಲಿಗೆ; ಬಿಜೆಪಿಯಲ್ಲಿ ಯಾವುದೇ ಗೊಂದಲಗಳಿಲ್ಲ

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಅಧಿವೇಶನ ಸಂದರ್ಭದಲ್ಲಿ
ಮುಖ್ಯಮಂತ್ರಿಗಳು ದೆಹಲಿಗೆ ಹೋಗುವ ಪರಿಪಾಟವಿದೆ. ಹೀಗಾಗಿ ಸಿಎಂ ದೆಹಲಿಗೆ ಹೋಗುತ್ತಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಮಂತ್ರಿ ಮಂಡಲದ ರಚನೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಶಾಸಕರು ದೆಹಲಿಗೆ ಹೋಗುವದರಲ್ಲಿ ತಪ್ಪೇನಿದೆ.
ತಮ್ಮ ಕೆಲಸ ಕಾರ್ಯಗಳಿಗಾಗಿ ದೆಹಲಿಗೆ ಹೋಗಿ ಬರ್ತಾರೆ. ಸದ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲಗಳು ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿಎಂ ಆಗಲು ಕಾಂಗ್ರೆಸ್ ನಾಯಕರ ಮಧ್ಯೆ ಮ್ಯೂಜಿಕಲ್ ಚೇರ್ ಆಟ

ರಾಜ್ಯದಲ್ಲಿ ಚುನಾವಣೆ ಗೆ ಇನ್ನು ಎರಡು ವರ್ಷವಿದೆ. ಆದರೆ ಈಗಲೇ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ‌ ಸ್ಪರ್ಧೆ ನಡೆದಿದೆ. ಸಿಎಂ ಹುದ್ದೆಗೆ ಸಂಗೀತ ಖುರ್ಚಿ ಆಟ ಜೋರಾಗಿ ನಡೆದಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ರಾಜ್ಯದ ಜನರಿಗೆ ಬಹುದೊಡ್ಡ ವಂಚನೆ ಮಾಡಿದ್ದಾರೆ. ಮೊದಲು ಅಹಿಂದದ ಹೆಸರು ಹೇಳಿ ಸಿಎಂ ಆದರು. ಸಿಎಂ ಆದ ನಂತರ ಅಹಿಂದ ಮರೆತುಬಿಟ್ಟಿದ್ದರು. ಈಗ ಮತ್ತೆ ಅಹಿಂದ ಜಪ ಮಾಡುವ ತಯಾರಿ ನಡೆಸಿದ್ದಾರೆ ಎಂದು ಆರೋಪಿಸಿದರು.

ಡಿಸೆಂಬರ್ ಒಳಗೆ ಎಲ್ಲರಿಗೂ ಲಸಿಕೆ

ಜಗತ್ತಿನಲ್ಲಿ ಅತಿ ಹೆಚ್ಚು ಲಸಿಕೆಯನ್ನು ಭಾರತ ನೀಡಿದೆ. ಎಲ್ಲಾ ಕಡೆ ಲಸಿಕೆ ಲಭ್ಯವಿದ್ದು, ಇದೀಗ ಐದು ಕಂಪನಿಗಳು ಲಸಿಕೆ ನೀಡುತ್ತಿವೆ. ಡಿಸೆಂಬರ್ ನೊಳಗಾಗಿ ಎಲ್ಲರಿಗೂ ಲಸಿಕೆ ನೀಡುವ ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದರು.

ಅಂಬರೀಶ್ ಬಗ್ಗೆ ಮಾತನಾಡಿದರೆ ಹುಷಾರ್!

ವಿಜಯಸಾಕ್ಷಿ ಸುದ್ದಿ, ಮೈಸೂರು

ಬೀದಿಗಿಳಿದು ಪ್ರತಿಭಟನೆ ನಡೆಸುತ್ತೇವೆ ಮಾಜಿ ಸಿಎಂ ಎಚ್ಡಿಕೆಗೆ ಅಂಬರೀಶ್ ಅಭಿಮಾನಿ ಎಚ್ಚರಿಕೆ

ಕಳೆದ ಒಂದು ವಾರದಿಂದ ಅಕ್ರಮ ಗಣಿಗಾರಿಕೆ ಕುರಿತಂತೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ ಮತ್ತು ದಳ ನಾಯಕರ ನಡುವೆ ಟಾಕ್ ವಾರ್ ನಡೆದಿರುವ ಮಧ್ಯೆಯೇ ಬನ್ನೂರಿನಲ್ಲಿ ಅಂಬರೀಶ್ ಅಭಿಮಾನಿಗಳು ಸುದ್ದಿಗೋಷ್ಠಿ ನಡೆಸಿ ಎಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬನ್ನೂರಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅಂಬರೀಶ್ ಅಭಿಮಾನಿಗಳು,
ಅಂಬಿರೀಶ್ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಕೂಡಲೆ ನಿಲ್ಲಿಸುವಂತೆ ಮನವಿ ಮಾಡಿದ್ದು, ಇಲ್ಲವಾದಲ್ಲಿ ರಾಜ್ಯದಾದ್ಯಂತ ಅಂಬಿ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

ಅಂಬಿ ಅಭಿಮಾನಿಗಳು ಜೇನು ಗೂಡಿನಂತೆ. ಜೇನಿಗೆ ಆಸೆ ಪಟ್ಟು ಕಲ್ಲೆಸೆದರೆ ಜೇನಿನ ದಾಳಿಗೆ ಸಿದ್ದರಾಗಿ ಎಂದು ಕುಮಾರಸ್ವಾಮಿ ಅವರಿಗೆ ಅಂಬರೀಶ್ ಅಭಿಮಾನಿ ಸಂಘದ ಅಧ್ಯಕ್ಷ ನಂದೀಶ್ ಎಚ್ಚರಿಕೆ ನೀಡಿದ್ದಾರೆ.

ನಿರ್ಮಲಾನಂದ ಶ್ರೀಗಳ ಮಧ್ಯ ಪ್ರವೇಶಕ್ಕೆ ಒತ್ತಾಯ

ಮತ್ತೊಂದೆಡೆ ಬನ್ನೂರಿನಲ್ಲಿ ಜೆಡಿಎಸ್ ರೈತದಳ ಅಧ್ಯಕ್ಷ ಗಿರೀಶ್ ಸಾತ್ವಿಕ ಮಾತನಾಡಿ, ರಾಜಕೀಯಕ್ಕಾಗಿ ಅಂಬರೀಶ್ ಹೆಸರಿಗೆ ಕಳಂಕ ತರಬೇಡಿ . ಈಗಾಗಲೇ ನಿಮ್ಮ ನಡೆಯಿಂದ ಪಕ್ಷಕ್ಕೆ ನಷ್ಟ ಉಂಟಾಗಿದೆ.
ಹೀಗೆಯೇ ಮುಂದುವರಿದರೆ ನಿಮ್ಮದೇ ಪಕ್ಷದಲ್ಲಿರುವ ಅಂಬರೀಶ್ ಅಭಿಮಾನಿಗಳ ಬಂಡಾಯಕ್ಕೆ ಕಾರಣವಾಗುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಳ್ಳಂಬೆಳಿಗ್ಗೆ ಭೃಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್

ರಾಜ್ಯದ ವಿವಿಧ ಜಿಲ್ಲೆಗಳ 40 ಕಡೆ ಒಂಬತ್ತು ಅಧಿಕಾರಿಗಳಿಗೆ ಸೇರಿದ ಮನೆ, ಕಚೇರಿಗಳ ಮೇಲೆ ದಾಳಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಂಭತ್ತು ಭೃಷ್ಟ ಅಧಿಕಾರಿಗಳಿಗೆ ಎಸಿಬಿ ಇಂದು ಬೆಳ್ಳಂಬೆಳಿಗ್ಗೆಯೇ ಬೆವರಿಳಿಸಿದೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳ 40 ಕಡೆ 9 ಅಧಿಕಾರಿಗಳಿಗೆ ಸೇರಿದ ಕಚೇರಿ, ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ತಡಕಾಡಿದ್ದಾರೆ.

ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತಕುಮಾರ್ ಸಿಂಗ್ ನೇತೃತ್ವದಲ್ಲಿ ಒಟ್ಟು 300 ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ಬಳ್ಳಾರಿ,ಬೀದರ್, ಕೋಲಾರ, ದಾವಣಗೆರೆ, ಮಂಗಳೂರು, ಶಿವಮೊಗ್ಗ, ಉಡಪಿ, ಬೆಂಗಳೂರು, ಮಂಡ್ಯ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಡಿವೈಎಸ್ಪಿ ಸೂರ್ಯನಾರಾಯಣ ನೇತೃತ್ವದಲ್ಲಿ ಬಳ್ಳಾರಿಯ ಜಿಸ್ಕಾಂನ ಎಲೆಕ್ಟ್ರಿಕ್ ಇನ್ಸ್ ಪೆಕ್ಟರ್ ಎ.ಎನ್.ವಿಜಯ್ ಕುಮಾರ್ ಅವರ ಅಹಂಬಾವಿಯಲ್ಲಿನ ಮನೆ ಹಾಗೂ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

8 ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಓರ್ವ ವಿಡಿಯೋಗ್ರಾಫರ್ ಜೊತೆಗೆ ಬೆಂಗಳೂರಿನಿಂದ ಆಗಮಿಸಿರುವ ಎಸಿಬಿ ಅಧಿಕಾರಿಗಳು ದಾಳಿಯ ಇಂಚಿಂಚೂ ವಿಡಿಯೋ ಫೋಟೊ ಶೂಟ್ ಮಾಡಿಕೊಂಡಿದ್ದಾರೆ. ದಾಳಿಯಲ್ಲಿ ಸ್ಥಳೀಯ ಎಸಿಬಿ ಅಧಿಕಾರಿಗಳನ್ನು ಬಳಸಿಕೊಂಡಿಲ್ಲ.

ಕೋಲಾರ ಜಿಲ್ಲೆಯ ಮಾಲೂರು ನಗರಸಭೆ ಯೋಜನಾ ಪ್ರಾಧಿಕಾರದ ಸಹಾಯಕ‌ ನಿರ್ದೇಶಕ ಎಚ್.ಆರ್. ಕೃಷ್ಣಪ್ಪ ಅವರ ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿರುವ ಮನೆ, ಕೋಲಾರ ಜಿಲ್ಲೆಯ ಮಾಲೂರಿನಲ್ಲಿರುವ ಮನೆ ಹಾಗೂ ಬೆಂಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿರುವ ಮನೆ, ಕಚೇರಿ ಸೇರಿದಂತೆ 5 ಕಡೆಗಳಲ್ಲಿ ಏಕಕಾಲಕ್ಕೆ ಎಸಿಬಿಯ ದಾವಣಗೆರೆ ಎಸಿಪಿ ಎನ್.ಪಿ.ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದ ಜಿಪಂ ಜೆಇ ಸುರೇಶ್ ಮೋರೆ ಅವರಿಗೆ ಸೇರಿದ ಮೂರು ಸ್ಥಳಗಳ ಮೇಲೆ ಏಕಕಾಲಕ್ಕೆ ಕಲಬುರಗಿ ಎಸಿಬಿ ಎಸ್ಪಿ ಮಹೇಶ ಮೆಗ್ಗನ್ನವರ ಮಾರ್ಗದರ್ಶನದಲ್ಲಿ ಬೀದರ ಎಸಿಬಿ ಡಿಎಸ್ಪಿ ಹಣಮಂತರಾಯ ಮತ್ತು ತಂಡ ದಾಳಿ ನಡೆಸಿದೆ.

ಬಸವಕಲ್ಯಾಣದ ಶಿವಾಜಿ ನಗರದಲ್ಲಿರುವ ಮನೆ ಹಾಗೂ ಬಾಲ್ಕಿ ತಾಲೂಕಿನ ಮೆಹಕರ್ ನಲ್ಲಿರುವ ಪೆಟ್ರೊಲ್ ಬಂಕ್
ಹಾಗೂ ಮನೆಯ ಮೇಲೆ ದಾಳಿ ನಡೆಸಿ ದಾಖಲೆಗಳ ತಪಾಸಣೆ ಆರಂಭಿಸಿದ್ದಾರೆ.
ಮಂಗಳೂರಿನ ನಗರ ಅಭಿವೃದ್ಧಿ ಘಟಕದ ಇಂಜಿನಿಯರ್ ಜಿ.ಶ್ರೀಧರ್, ಉಡಪಿಯ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಇಂಜಿನಿಯರ್ ಕೃಷ್ಣ, ಕೆಆರ್ ಡಿಎಲ್ ಅಧಿಕಾರಿ, ಆರ್.ಪಿ. ಕುಲಕರ್ಣಿ, ಮಂಡ್ಯದ ಅರಣ್ಯ ಅಧಿಕಾರಿ ವೆಂಕಟೇಶ, ವಿಜಯಪುರ ಹೆಸ್ಕಾಂ ಇಂಜಿನಿಯರ್ ಸಿದ್ಧರಾಮ ಮಲ್ಲಿಕಾರ್ಜುನ, ಕೋರಮಂಗಲ ಆರ್ ಟಿಒ ಅಧಿಕಾರಿ ಕೃಷ್ಣಮೂರ್ತಿ ಅವರ ಕಚೇರಿ ಹಾಗೂ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಈ ಎಲ್ಲ ಅಧಿಕಾರಿಗಳ ವಿರುದ್ಧ ಭೃಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ ಐಆರ್ ದಾಖಲಿಸಲಾಗಿದೆ.

ಬೆಳ್ಳಂಬೆಳಿಗ್ಗೆ ರಾಜ್ಯದ 40 ಕಡೆ ಎಸಿಬಿ ರೇಡ್

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

  • ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಒಂಭತ್ತು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ

ಬೆಳ್ಳಂಬೆಳಿಗ್ಗೆಯೇ ರಾಜ್ಯದ 40 ಕಡೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು 9 ಭೃಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಒಟ್ಟು 300 ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.
ಬಳ್ಳಾರಿಯ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಎ.ಎನ್.ವಿಜಯ್ ಕುಮಾರ್ ಅವರ ಅಹಂಬಾವಿಯಲ್ಲಿನ
ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಡಿವೈಎಸ್ಪಿ ಸೂರ್ಯನಾರಾಯಣ ನೇತೃತ್ವದಲ್ಲಿ ವಿಜಯ್ ಅವರ ಮನೆ ಹಾಗೂ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

8ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಓರ್ವ ವಿಡಿಯೋಗ್ರಾಫರ್ ಜೊತೆಗೆ ಬೆಂಗಳೂರಿನಿಂದ ಆಗಮಿಸಿರುವ ಎಸಿಬಿ ಅಧಿಕಾರಿಗಳು ದಾಳಿಯ ಇಂಚಿಂಚೂ ವಿಡಿಯೋ ಫೋಟೊ ಶೂಟ್ ಮಾಡಿಕೊಳ್ಳುತ್ತಿದ್ದಾರೆ. ದಾಳಿಯಲ್ಲಿ ಸ್ಥಳೀಯ ಎಸಿಬಿ ಅಧಿಕಾರಿಗಳನ್ನು ಬಳಸಿಕೊಳ್ಳದಿರುವುದು ವಿಶೇಷ.

ಕೋಲಾರದ ಮಾಲೂರು ಯೋಜನಾ ಪ್ರಾಧಿಕಾರದ ಸಹಾಯಕ‌ ನಿರ್ದೇಶಕ ಎಚ್.ಆರ್. ಕೃಷ್ಣಪ್ಪ ಅವರ ಬೆಂಗಳೂರಿನ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಎಚ್.ಆರ್. ಕೃಷ್ಣಪ್ಪ ಮಾಲೂರಿನಲ್ಲಿ ಕಳೆದ 3 ತಿಂಗಳಿಂದ ಕರ್ತವ್ಯದಲ್ಲಿದ್ದಾರೆ.

ಮತ್ತೊಂದೆಡೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಜಿಪಂ ಜೆಇ ಸುರೇಶ್ ಮೋರೆ ಅವರಿಗೆ ಸೇರಿದ ಮೂರು ಸ್ಥಳಗಳ ಮೇಲೆ ಏಕಕಾಲಕ್ಕೆ ಕಲಬುರಗಿ ಎಸಿಬಿ ಎಸ್ಪಿ ಮಹೇಶ ಮೆಗ್ಗನ್ನವರ ಮಾರ್ಗದರ್ಶನದಲ್ಲಿ ಬೀದರ ಎಸಿಬಿ ಡಿಎಸ್ಪಿ ಹಣಮಂತರಾಯ ಮತ್ತು ತಂಡ ದಾಳಿ ನಡೆಸಿದೆ. ಬಸವಕಲ್ಯಾಣದ ಶಿವಾಜಿ ನಗರದಲ್ಲಿರುವ ಮನೆ ಹಾಗೂ ಬಾಲ್ಕಿ ತಾಲೂಕಿನ ಮೆಹಕರ್ ನಲ್ಲಿರುವ ಪೆಟ್ರೊಲ್ ಬಂಕ್
ಹಾಗೂ ಮನೆಯ ಮೇಲೆ ದಾಳಿ ನಡೆಸಿ ತಪಾಸಣೆ ಆರಂಭಿಸಿದ್ದಾರೆ.

ಎಸಿಬಿ ದಾಳಿ ಪ್ರಕರಣಕ್ಕೆ ಟ್ವಿಸ್ಟ್; ನಗರಸಭೆ ಕಮಿಷನರ್, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ವಿಚಾರಣೆ

ವಿಜಯಸಾಕ್ಷಿ ಸುದ್ದಿ, ಗದಗ

ಘನತ್ಯಾಜ್ಯ ವಿಲೇವಾರಿ ಮಾಡಿದ ಕಾಮಗಾರಿಯ ಬಿಲ್ ಕೊಡಲು ಕಮಿಷನ್ ಹಣಕ್ಕೆ‌ ಬೇಡಿಕೆ ಇಟ್ಟಿದ್ದ ನಗರಸಭೆ ಎಇಇ ಎಸಿಬಿ ಬಲೆಗೆ ಬಿದ್ದ ಬೆನ್ನಲ್ಲೇ ಇಡೀ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಎಇಇ ವರ್ಧಮಾನ್ ಹುದ್ದಾರ್ 14 ಲಕ್ಷ ರೂ. ಮೌಲ್ಯದ ಬಿಲ್ ಗೆ 25 ಸಾವಿರ ಹಣ ಕಮಿಷನ್ ರೂಪದಲ್ಲಿ ಪಡೆಯುತ್ತಿದ್ದಾಗ ಬುಧವಾರ ಸಂಜೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿದ್ದರು.

ಇದನ್ನೂ ಓದಿ ನಗರಸಭೆ ಕಚೇರಿ ಮೇಲೆ ಎಸಿಬಿ ದಾಳಿ; ಕಮಿಷನ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಇಇ ಬಂಧನ

ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಕಮಿಷನರ್ ರಮೇಶ್ ಜಾಧವ್ ಹಾಗೂ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಅನಿಲಕುಮಾರ್ ಮುದ್ದಾ ಅವರನ್ನು ಎಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ, ಮಧ್ಯರಾತ್ರಿ ಬಿಟ್ಟು ಕಳುಹಿಸಿದ್ದಾರೆ.

ರಮೇಶ್ ಜಾಧವ್

ಐದು ಗಂಟೆಗಳ ಕಾಲ ಇಬ್ಬರೂ ಅಧಿಕಾರಿಗಳನ್ನು ಎಸಿಬಿ ಅಧಿಕಾರಿಗಳು, ಕಾಮಗಾರಿ, ಬಿಲ್, ಕಮಿಷನ್ ಸೇರಿದಂತೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು.

ಅನಿಲಕುಮಾರ್ ಮುದ್ದಾ

ಮುಂಜಾನೆ ಜಗಳ…ಸಂಜೆ ರೇಡ್

ಕಳೆದ ಹಲವು ದಿನಗಳಿಂದಲೂ ಈ ಕಾಮಗಾರಿಗೆ ಸಂಬಂಧಿಸಿದಂತೆ ಅಬ್ದುಲ್ ಸಲಾಮ್ ಮನಿಯಾರ್ ಅವರಿಗೆ ಬಿಲ್ ಮಾಡಿಕೊಡಲು ಸತಾಯಿಸುತ್ತಿದ್ದರು ಎನ್ನಲಾಗಿದೆ. ಬುಧವಾರ ಮುಂಜಾನೆಯೂ ಕಮಿಷನ್ ಹಣಕ್ಕೆ ಆಯುಕ್ತರ ಚೇಂಬರ್ ನಲ್ಲಿ ಜಗಳವಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿಯೊಂದು ಬಿಲ್ ಗೂ ಕಮಿಷನ್ ಕಡ್ಡಾಯವಾಗಿ ಕೊಡಲೆಬೇಕು ಅನ್ನೋ ರೂಲ್ಸ್ ನಗರಸಭೆಯಲ್ಲಿ‌ ಜಾರಿ ಇತ್ತು. ಈ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ 20, 30 ಲಕ್ಷ ಕೊಟ್ಟು ಇಲ್ಲಿಗೆ ಬಂದೀವಿ…ಹಂಗ ಬಂದಿಲ್ಲ ಅಂತ ಮರುತ್ತರ ಕೊಡುತ್ತಿದ್ದರು ಅನ್ನೋ ಮಾತುಗಳು ನಗರಸಭೆಯ ಪಡಸಾಲೆಯಲ್ಲಿ ಕೇಳಿ ಬರುತ್ತಿದ್ದವು.

ಬಾಯಿಬಿಟ್ಟರೆ ಕಮಿಷನ್….ಕಮಿಷನ್ ಇಲ್ದೇ ಯಾವುದೇ ಬಿಲ್ ಕೊಡ್ತಾ ಇಲ್ಲ. ಹಿಂಗಾದರ ಹೆಂಗ ಅಂತ ಕೆಲವು ಗುತ್ತಿಗೆದಾರರು ಗೊಣಗಾಡುತ್ತಿದ್ದರು ಎಂದು ಹೆಸರು ಹೇಳಲು ನಿರಾಕರಿಸಿದ ಬಿಜೆಪಿ ಮುಖಂಡರೊಬ್ಬರು ಮಾಹಿತಿ ‌ನೀಡಿದ್ದಾರೆ.

ನಗರಸಭೆ ಕಚೇರಿ ಮೇಲೆ ಎಸಿಬಿ ದಾಳಿ; ಕಮಿಷನ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಇಇ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಘನತ್ಯಾಜ್ಯ ವಿಲೇವಾರಿ ಮಾಡಿದ ಬಿಲ್ ಮಾಡಿ ಕೊಡಲು ಕಮಿಷನ್ ಹಣಕ್ಕೆ ಬೇಡಿಕೆ ಇಟ್ಟಿದ್ದ ಗದಗ ಬೆಟಗೇರಿ ನಗರಸಭೆ ಎಇಇ ಬುಧವಾರ ಸಂಜೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

14 ಲಕ್ಷದ ರೂ. ಕಾಮಗಾರಿಯನ್ನು ಗುತ್ತಿಗೆ ಪಡೆದಿದ್ದ ಅಬ್ದುಲ್ ಸಲಾಮ್ ಮನಿಯಾರ್ ಎಂಬುವರು, ಇಲ್ಲಿನ ಹೊಂಬಳ ರಸ್ತೆಯಲ್ಲಿನ ಹಳೆಯ ಕಸ ವಿಲೇವಾರಿ ಘಟಕದಿಂದ ಈಗಿನ ಬಳಗಾನೂರ ರಸ್ತೆಯಲ್ಲಿ ಇರುವ ಕಸ ವಿಲೇವಾರಿ ಘಟಕಕ್ಕೆ ಘನತ್ಯಾಜ್ಯ ಸಾಗಾಟ ಮಾಡಲು ಟೆಂಡರ್ ಪಡೆದು ಕೆಲಸ ಮುಗಿಸಿದ್ದರು ಎನ್ನಲಾಗಿದೆ.

ಆದರೆ ಕಮಿಷನ್ ಹಣ ಕೊಡದೇ ಬಿಲ್ ಪಾಸ್ ಮಾಡಲು ಹಿಂದೇಟು ಹಾಕಿದ ನಗರಸಭೆ ಎಇಇ ವರ್ಧಮಾನ್ ಎಸ್ ಹುದ್ದಾರ್ ಎಂಬುವವರು ನಗರಸಭೆಯಲ್ಲಿ‌ ಇರುವ ಶೌಚಾಲಯದ ಬಳಿ ಇಂದು ಸಂಜೆ ಕಮಿಷನ್ ಹಣ 25 ಸಾವಿರ ರೂ.ಗಳನ್ನು ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ‌ ಮಾಡಿ ಬಂಧಿಸಿದ್ದಾರೆ.

ಬೆಂಗಳೂರು, ಧಾರವಾಡ ಜಿಲ್ಲೆಯಿಂದ ಬಂದಿರುವ ಎಸಿಬಿ ಅಧಿಕಾರಿಗಳು ಈ ಕಾರ್ಯಚರಣೆ ನಡೆಸಿದ್ದು, ತನಿಖೆ ಮುಂದುವರೆದಿದೆ. ಕಮಿಷನ್ ಹಣಕ್ಕಾಗಿ ಕೆಲವೊಂದಿಷ್ಟು ಅಧಿಕಾರಿಗಳು ಮಾತಾನಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಎಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ದಾಳಿ ನಗರಸಭೆಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡು ತಂದ ರಾಜಕಾರಣಿಗಳಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಎಸಿಬಿ ಡಿವೈಎಸ್ಪಿ ವೇಣುಗೋಪಾಲ, ಇನ್ಸ್‌ಪೆಕ್ಟರ್ ಗಳಾದ ಆರ್ ಎಫ್ ದೇಸಾಯಿ, ವೀರೇಶ್ ಹಳ್ಳಿ, ಧಾರವಾಡ ಇನ್ಸ್‌ಪೆಕ್ಟರ್ ಶೇಖ, ಸಿಬ್ಬಂದಿಗಳಾದ ಎಮ್ ಎಮ್ ಅಯ್ಯನಗೌಡ್ರ, ಆರ್ ಎಸ್ ಹೆಬಸೂರು, ನಾರಾಯಣಗೌಡ ತಾಯಣ್ಣವರ್, ವೀರೇಶ್ ಜೋಳದ, ಶರೀಫ್ ಮುಲ್ಲಾ, ಮಂಜು ಮುಳಗುಂದ, ಐ ಸಿ ಜಾಲಿಹಾಳ ಹಾಗೂ ಬಿಸಿನಳ್ಳಿ ಕಾರ್ಯಾಚರಣೆಯಲ್ಲಿದ್ದರು.

ಕೊರೊನಾಗೆ ಬಲಿಯಾದ ಪೊಲೀಸರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ

  • ಪೊಲೀಸರಿಗೆ ಶಹಬ್ಬಾಗಿರಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ಮೈಸೂರು

ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ವೇಳೆಯಲ್ಲಿ ಇಲಾಖೆಯ ಪೊಲೀಸರು ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ 3 ರಿಂದ 4 ಸಾವಿರ ಮಂದಿ ಪೊಲೀಸರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಡೆತ್ ಅದವರ ಸಂಖ್ಯೆ ಕಡಿಮೆ ಇದೆ. ಎಂದು ತಿಳಿಸಿದರು.

ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗೆ ಲಂಚ ಪಡೆಯುವ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಂತಹ ಕೆಲಸಕ್ಕೆಲ್ಲ ಇದೀಗ ಕಡಿವಾಣ ಹಾಕಲಾಗುತ್ತಿದೆ. ಇದು ಹಳೆಯ ಪದ್ದತಿ, ಆದರೆ ಇದಕ್ಕೆ ನಮ್ಮ ಸರ್ಕಾರ ಕಡಿವಾಣ ಹಾಕಿದೆ ಎಂದು ಸಮರ್ಥಿಸಿಕೊಂಡರು. ಪೊಲೀಸ್ ಬೋರ್ಡ್‌ ಬಂದ ಬಳಿಕ ವರ್ಗಾವಣೆಯಲ್ಲಿ ವ್ಯವಹಾರಕ್ಕೆ ಕಡಿವಾಣ ಬೀಳಲಿದೆ ಎಂದು ಸಚಿವರು ಹೇಳಿದರು.

ಸಿಂಥೆಟಿಕ್ ಡ್ರಗ್ಸ್ ದಂಧೆಗೆ ಕಡಿವಾಣ

ಡ್ರಗ್ಸ್ ವಿದೇಶದಿಂದ ಡಾರ್ಕ್ ವೆಬ್ ನಲ್ಲಿ ಬರುತ್ತಿದೆ. ಬಹಳ ಸೆಕ್ಯೂರಿಟಿಯಲ್ಲಿ ಬರುತ್ತಿದೆ. ಇದನ್ನು ಕರ್ನಾಟಕ ಪೊಲೀಸರು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದಾರೆ. ವರ್ಷದಷ್ಟು ಡ್ರಗ್ ಕೇವಲ ಒಂದೇ ವರ್ಷದಲ್ಲಿ ಸಂಗ್ರಹವಾಗಿದೆ. ಬಹಳಷ್ಟು ಸಾರಿ ಸಾಮಾನ್ಯ ಪೋಸ್ಟ್ ನಲ್ಲಿ ಡ್ರಗ್ಸ್ ಸರಬರಾಜಗುತ್ತದೆ. ಡ್ರಗ್ಸ್ ಕೇಸ್ ಸಂಬಂಧಿಸಿದಂತೆ ವಿದೇಶಿಗರ ಬಂಧನ ವಾಗಿದೆ. ಕಳೆದ ವರ್ಷದಲ್ಲಿ 15 ರಿಂದ 20 ಮಂದಿ ಬಂಧನವಾಗಿದೆ. ಈ ಪೈಕಿ ಆಫ್ರಿಕನ್ಸ್ ನವರೆ ಹೆಚ್ಚಿದ್ದಾರೆ ಎಂದು ಗೃಹ ಸಚಿವರು ತಿಳಿಸಿದರು.

ಸಂಸದೆ ಸುಮಲತಾ ನಡೆಗೆ ಕಂದಾಯ ಸಚಿವ ಆರ್. ಅಶೋಕ ಸಿಡಿಮಿಡಿ

  • ಇಂತಹ ಹೇಳಿಕೆಯಿಂದ ರೈತರು, ಜನರಲ್ಲಿ ಅನಾವಶ್ಯಕ ಆತಂಕ ಸೃಷ್ಟಿ
  • ತಜ್ಞರ ವರದಿ ಬಳಿಕವೂ ಈ ಬಗ್ಗೆ ಮಾತನಾಡುವುದು ಸರಿಯಲ್ಲ

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೆಆರ್‌ಎಸ್ ಡ್ಯಾಂ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಸಂಸದೆ ಸುಮಲತಾ ನಡೆಯ ವಿರುದ್ಧ ಕಂದಾಯ ಸಚಿವ ಆರ್.ಅಶೋಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ನಮಗೆ ಯಾವ ವ್ಯಕ್ತಿಯೂ ಮುಖ್ಯ ಅಲ್ಲ, ಕೆಆರ್‌ಎಸ್ ಡ್ಯಾಂ ಮುಖ್ಯ. ಡ್ಯಾಂ ಸುರಕ್ಷತೆ ಬಗ್ಗೆ ಸರ್ಕಾರ ವರದಿ ಕೇಳಿತ್ತು. ಅಲ್ಲಿನ ಅಧಿಕಾರಿ ಬಿರುಕು ಇಲ್ಲ ಅಂತ ವರದಿ ಕೊಟ್ಟಿದ್ದಾರೆ. ಇದಾದ ಬಳಿಕ ಮುಖ್ಯಮಂತ್ರಿಗಳು, ನಾನು, ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದೇವೆ. ಇಷ್ಟಾದ ಮೇಲೂ ಪದೇ ಪದೇ ಬಿರುಕು ಇದೆ ಅನ್ನೋದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದರಿಂದಾಗಿ ಅಣೆಕಟ್ಟೆಯ ತಳಭಾಗದಲ್ಲಿರುವ ಜನರು ಮತ್ತು ರೈತರಿಗೆ ಅನಾವಶ್ಯಕ ಆತಂಕ ಉಂಟಾಗುತ್ತದೆ.
ಇಷ್ಟೆಲ್ಲ ಆಗುತ್ತಿರುವಾಗ ಸರ್ಕಾರವೂ ಸುಮ್ಮನಿರಲು ಸಾಧ್ಯವಿಲ್ಲ. ನಾನೂ ಇಂದು ಮಂಡ್ಯಕ್ಕೆ ಹೋಗುತ್ತಿದ್ದೇನೆ, ಜಿಲ್ಲಾಧಿಕಾರಿ ಭೇಟಿ ಮಾಡುತ್ತೇನೆ. ಕೆಆರ್‌ಎಸ್ ಡ್ಯಾಂ, ಬೇಬಿ ಬೆಟ್ಟದ ಸುತ್ತ ಏನಾಗಿದೆ ಎಂದು ವರದಿ ನೀಡುವಂತೆ ಡಿಸಿಗೆ ಸೂಚನೆ ಕೊಡುತ್ತೇನೆ ಎಂದು ಹೇಳಿದರು.

ಕೆಆರ್ ಎಸ್ ಬಿರುಕು ಬಿಟ್ಟಿದೆಂದು ನಾನು ಹೇಳಿಯೇ ಇಲ್ಲ; ಉಲ್ಟಾ ಹೊಡೆದ ಸುಮಲತಾ

ವಿಜಯಸಾಕ್ಷಿ ಸುದ್ದಿ, ಮೈಸೂರು

ಕೆಆರ್ ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ನಾನು ಹೇಳಿರಲಿಲ್ಲ, ದಿಶಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಾಗ ಅಣೆಕಟ್ಟು ಬಿರುಕು ಬಿಟ್ಟಿದೆಯೇ? ಎಂದು ಪ್ರಶ್ನಿಸಿದ್ದೆ, ಆ ವಿಷಯ ಹಲವು ತಿರುವುಗಳನ್ನು ಪಡೆದುಕೊಂಡು ಇಲ್ಲಿಗೆ ಬಂದು ನಿಂತಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಮರೀಶ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮೈಸೂರಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಅಣೆಕಟ್ಟು ಬಿರುಕು ಬಿಟ್ಟಿದೆಯೇ ಇಲ್ಲವೇ ಎಂದು ಹೇಳುವುದು, ನಿರ್ಧರಿಸುವುದು ನಾವ್ಯಾರು ಅಲ್ಲ, ಸಂಬಂಧಪಟ್ಟ ಅಧಿಕಾರಿಗಳು ಪ್ರಮಾಣಪತ್ರ ನೀಡಬೇಕು. ಮಂಡ್ಯ ಜಿಲ್ಲೆಯ ಗಣಿ ಅಧಿಕಾರಿಗಳು ಕೂಡ ಏನೂ ಆಗಿಲ್ಲವೆನ್ನುವಂತೆ ಮಾತನಾಡುತ್ತಾರೆ. ಅವರ ಮೇಲೆಯೂ ಒತ್ತಡಗಳು ಇರಬಹುದು. ಹೀಗಾಗಿ ಸ್ವತಂತ್ರ ತನಿಖೆಯಾಗಬೇಕು ರಾಜ್ಯದ ಅಧಿಕಾರಿಗಳಿಂದ ಸಾಧ್ಯವಾಗದಿದ್ದರೆ ಸಿಬಿಐ ತನಿಖೆ ಮಾಡಿಸಲಿ. ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ 1200ಕೋಟಿ ನಷ್ಟ ಆಗಿದೆ. ಇಷ್ಟು ರಾಜಧನ ವಸೂಲಿ ಮಾಡಿದರೆ ಮಂಡ್ಯ ಅಭಿವೃದ್ಧಿಗೆ ಬಳಸಬಹುದಿತ್ತು ಎಂದರು.

ಕೆಆರ್ ಎಸ್ ಸುತ್ತಮುತ್ತ ಆತಂಕದ ವಾತಾವರಣ ಇರುವ ಬಗ್ಗೆ ಎಲ್ಲೆಡೆ ವರದಿ ಆಗುತ್ತಿದೆ. ಈಗಾಗಲೇ ನಾನೂ ಕೂಡ ಸಭೆಯಲ್ಲಿ ಬಿರುಕಾಗಿದೆಯಾ ? ಎಂದು ಪ್ರಶ್ನೆ ಮಾಡಿದೆ. ಈಗ ಏನೂ ಆಗಿಲ್ಲವಾದರೆ ಸರಿ. ಹಾಗಂತ ಇನ್ನೂ 10 ವರ್ಷ ಬಳಿಕ ಕೆಆರ್ ಎಸ್ ಡ್ಯಾಂ ಒಡೆದರೆ ಪರವಾಗಿಲ್ವ. 50 ವರ್ಷ ಬಳಿಕವಾದರೂ ಓಕೆನಾ ? ಕೊರೊನಾ ಬರುವ ಮುಂದೆ ಮಾಸ್ಕ್ ಹಾಕೊಳ್ಳಿ, ಸ್ಯಾನಿಟೈಸ್ ಮಾಡ್ಕೊಳಿ ಅಂತ ಹೇಳ್ತಿವಿ. ಹಾಗಂತ ನಮಗೆ ಕೊರೊನಾ ಬಂದಿದೆ ಎಂದು ತಿಳಿದುಕೊಳ್ಳಲು ಆಗುತ್ತಾ ಎಂದು ಸುಮಲತಾ ತಿರುಗೇಟು ನೀಡಿದರು.

ಸಿಡಿ ಕೇಸ್ ವಿಚಾರಣೆ ಮುಕ್ತಾಯ ಭೀತಿ ಅನಗತ್ಯ; ಹೈಕೋರ್ಟ್

 ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಿಡಿ ಕೇಸ್ ಗೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ನೀಡಿದ್ದ ದೂರಿನ ವಿಚಾರಣೆ ಮುಕ್ತಾಯ ಭೀತಿ ಅನಗತ್ಯ ಎಂದು ನ್ಯಾಯಾಲಯ ಹೇಳಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಪರ ವಕೀಲರು ಸಲ್ಲಿಸಿದ್ದ ಪಿಐ ಎಲ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಸಿಡಿ ಕೇಸ್ ಗೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ನೀಡಿದ್ದ ದೂರಿನ ವಿಚಾರಣೆ ಮುಕ್ತಾಯ ಭೀತಿ ಹಿನ್ನೆಲೆಯಲ್ಲಿ ಹಾಗೂ ಎಸ್ ಐಟಿ ತನಿಖೆ ಪ್ರಶ್ನಿಸಿ ಯುವತಿ ಹಾಗೂ ವಕೀಲರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ದೂರಿನ ವಿಚಾರಣೆ ಮುಕ್ತಾಯ ಭೀತಿ ಅನಗತ್ಯ ಎಂದು ಅಭಿಪ್ರಾಯ ಪಟ್ಟಿದ್ದು, ವಿಚಾರಣೆ ಜುಲೈ 16ಕ್ಕೆ ಮುಂದೂಡಿದೆ.

ಯುವತಿ ಪರ ಖ್ಯಾತ ವಕೀಲೆ ಇಂದಿರಾ ಜೈಸಿಂಗ್ ವಾದ ಮಂಡಿಸಲಿದ್ದಾರೆ.

error: Content is protected !!