ಇಲ್ಲಿನ ದತ್ತಾತ್ರೇಯ ಪೀಠದ ದರ್ಶನ ಪಡೆದು ಕೊರೋನಾ ನಿರ್ಮೂಲನೆಗೆಗಾಗಿ ಸಂಸದೆ ಶೋಭಾ ಕರಂದ್ಲಾಜೆ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಸಂಸದೆ, ಅಯೋಧ್ಯೆಯ ರಾಮಮಂದಿರದಂತೆ ದತ್ತಪೀಠದಲ್ಲಿ ದತ್ತಮಂದಿರ ನಿರ್ಮಿಸಲಾಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲೇ ದತ್ತಪೀಠಕ್ಕೆ ಮುಕ್ತಿ ಸಿಗುತ್ತದೆ. ಈ ಪೀಠದಲ್ಲಿ ದತ್ತಾತ್ರೇಯ ಮಂದಿರ ನಿರ್ಮಾಣವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದತ್ತಪೀಠದ ಮುಕ್ತಿಗೆ ಕಾನೂನಿನ ಅಡೆತಡೆಗಳಿದ್ದು, ತಜ್ಞರು ಪರಿಶೀಲಿಸುತ್ತಿದ್ದಾರೆ. ಜಗತ್ತಿನಲ್ಲಿ ದತ್ತ ಭಕ್ತರಿದ್ದು, ಚಿಕ್ಕಮಗಳೂರಿನಲ್ಲಿ ದತ್ತಪಾದುಕೆ ಇದೆ. ದತ್ತಪೀಠ ನಮ್ಮದಾಗಬೇಕೆಂಬುವುದೇ ನಮ್ಮ ಸಂಕಲ್ಪ ಎಂದು ಸಂಸದೆ ಶೋಭಾ ಕರಂದ್ಲಾಜೆ ಶಪತಗೈದರು.
ಕುರುಬ ಸಮುದಾಯ ಎಸ್‌ಟಿ ಪಟ್ಟಿಗೆ ಸೇರಿಸುವ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕರೆದಿದ್ದೇನೆ. ಅವರು ನಮ್ಮ ಜೊತೆಗೆ ಇದ್ದಾರೆ. ಇದಕ್ಕೆ ಅವರ ವಿರೋಧವಿಲ್ಲ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಿದ್ದರಾಮಯ್ಯ, ರೇವಣ್ಣ, ಈಶ್ವರಪ್ಪ, ವಿಶ್ವನಾಥ್ ಪ್ರಶ್ನೆ ಅಲ್ಲ. ಇದು ಸಮುದಾಯದ ಪ್ರಶ್ನೆ. ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ವಿಚಾರದಲ್ಲಿ ಎಲ್ಲಾ ಸಂಘಟನೆ, ಪಕ್ಷಗಳ ಬೆಂಬಲ ಕೇಳಿದ್ದೇವೆ. ಅದರಲ್ಲಿ ಆರ್ ಎಸ್ ಎಸ್ ಸಹವಿದೆ. ದೇಶದಲ್ಲಿರುವ ಎಲ್ಲಾ ಕುರುಬ ಅಧಿಕಾರಿಗಳಿಗೆ ಪತ್ರ. ಪತ್ರದ ಮೂಲಕ ಹೋರಾಟಕ್ಕೆ ಬೆಂಬಲ ಕೇಳುತ್ತೇವೆ. ಈ ನಿಟ್ಟಿನಲ್ಲಿ ಡಿ.29 ರಂದು ಕುರುಬ ನಾಯಕರ ಸಭೆ ನಡೆಸುವ ಮೂಲಕ ಹೋರಾಟದ ರೂಪುರೇಷೆ ಸಿದ್ಧಮಾಡಿಕೊಳ್ಳಲಾಗುವು ಎಂದು ವಿಶ್ವನಾಥ್ ತಿಳಿಸಿದರು.
ನಿರಂಜನಾನಂದಪುರಿ ಶ್ರೀಗಳ ಮೂಲಕ ಸರ್ಕಾರಕ್ಕೆ ನಾನು ಹಾಗೂ ಸೋಮಶೇಖರ್ ವರದಿ ಕೊಟ್ಟಿದ್ದೇವೆ. ಆ ಮೂಲಕ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಇಡೀ ಸಮುದಾಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ಇದರ ಬಗ್ಗೆ ಪತ್ರ ಚಳುವಳಿ ಮಾಡುತ್ತೇವೆ ಎಂದು ವಿಶ್ವನಾಥ್ ಹೇಳಿದರು
ದೇಶದಲ್ಲಿ RSS ಸಂಘಟನೆಯನ್ನು ಬ್ಯಾನ್ ಮಾಡಿದ್ದಾರಾ? RSS ಅಂದರೆ ಮೈಲಿಗೆ ಏಕೆ? ಎಲ್ಲರ ಬೆಂಬಲ ನಮಗೆ ಬೇಕಾಗಿದೆ. ಬರೀ ಇದರೊಂದರ ಬಗ್ಗೆ ಏಕೆ ಹೇಳಬೇಕು. ಎಚ್ ವಿಶ್ವನಾಥ್, ಎಮ್ ಎಲ್ ಸಿ
ಜಿಲ್ಲೆಯ ಎರಡನೇ ಹಂತದ ಗ್ರಾ. ಪಂ.ಚುನಾವಣೆಯು ತಾರಕ್ಕೇರಿದೆ. ಒಂದನೆಯ ಹಂತದ ಚುನಾವಣೆ ಶಾಂತಿಯುತವಾಗಿ ನಡೆದಿತ್ತು. ಆದರೆ ಇಂದು ನಡೆಯುತ್ತಿರುವ ಚುನಾವಣೆ ಕಾಂಗ್ರೆಸ್ ಬಿಜೆಪಿ ಪಕ್ಷಗಳ ಬೆಂಬಲಿಗರ ಮಧ್ಯ ಜಟಾಪಟಿ ನಡೆದಿದ್ದು, ಮತದಾನ ಸ್ಥಗಿತಗೊಂಡಿತ್ತು. ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆಯಿಂದಾಗಿ ಮತಗಟ್ಟೆ 1ರಲ್ಲಿ ಎರಡು ಗಂಟೆಗಳ ಕಾಲ ಮತದಾನ ಸ್ಥಗಿತಗೊಂಡಿತ್ತು.
ಮೆಣಸಗಿ ಗ್ರಾಮ ಪಂಚಾಯತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಜಿ.ಪಂ.ಸದಸ್ಯ ಶಿವಕುಮಾರ್ ನೀಲಗುಂದ ಮತಗಟ್ಟೆ ಒಂದರಲ್ಲಿ ಮತದಾನ ಮಾಡಲು ಹೋಗಿದ್ದ ವೇಳೆ ಮತಗಟ್ಟೆಯ ಏಜೆಂಟರ್ ಅಲ್ಲದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮತಗಟ್ಟೆಯಲ್ಲಿ ಮತದಾನ ಮಾಡಲು ಹೋದಾಗ ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಶಿವಕುಮಾರ್ ಆರೋಪ ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೂ ಕೂಡ ಗಲಾಟೆಗೆ ಕಾರಣ ಎನ್ನಲಾಗುತ್ತಿದೆ.
ನಮ್ಮ ಬೆಂಬಲಿತ ಅಭ್ಯರ್ಥಿಗೆ ಮತ ಹಾಕುವಂತೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟವಾಗಿದೆ.
ಇದರಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಸಂಖ್ಯೆಯ ಪೊಲೀಸರು ಗ್ರಾಮಕ್ಕೆ ದೌಡಾಯಿಸಿದ್ದು, ಸೂಕ್ತ ಬಂದೋಬಸ್ತ್ ಮಾಡಿದ್ದಾರೆ.
ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರಿಂದ ಮತ್ತೆ ಮತದಾನ ಆರಂಭವಾಗಿದೆ.
ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ ಶನಿವಾರ ಮೈಸೂರಿಗೆ ಆಗಮಿಸಿದರು. ಈ ವೇಳೆ ಆಟೋಗ್ರಾಫ್, ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದರು.
ಈ ಸಂದರ್ಭದಲ್ಲಿ 1790ರಲ್ಲಿ ತಮಿಳುನಾಡಿನ ಶಿವಗಂಗೆಯಯಲ್ಲಿ 16 ಬಾಲೆ ಕುಯಿಲಿ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ ಯಶೋಗಾಥೆ ಬೆಂಕಿ ಚೆಂಡು ಕುಯಿಲಿ ಕುರಿತ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನೈಜ ಇತಿಹಾಸ ಮರೆಮಾಚುವಿಕೆಯಿಂದ ದೇಶದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ. ಇತಿಹಾಸದ ತಿಳಿವಳಿಕೆಯಲ್ಲಿ ಹಿಂದೆ ಸಾಗಿ ಪ್ರತಿ 6 ತಿಂಗಳಿಗೊಮ್ಮೆ ದೇಶದಲ್ಲಿ ಅಶಾಂತಿ ಉಂಟಾಗುತ್ತಿದೆ ಎಂದು ತಿಳಿಸಿದರು.
CAA ಮತ್ತು ಕೃಷಿ ಕಾಯ್ದೆಗಳ ಮೂಲಕ ಅಶಾಂತಿ ಉಂಟಾಗುತ್ತಿದೆ. ಪಂಜಾಬ್ ಮತ್ತು ಹರಿಯಾಣ ಭಾಗದ ಗಡಿಯಲ್ಲಿ 7 ಲಕ್ಷ ರೈತರನ್ನು ತಂದು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಇತಿಹಾಸ ತಿಳಿಯುವವರಾಗಿ ಹಾಗೂ ನಿಜವಾದ ಭಾರತೀಯರಾಗಿ ಈ ಕಾಯ್ದೆಗಳನ್ನು ಬೆಂಬಲಿಸುವುದು ಸೂಕ್ತ ಎಂದು ಕೃಷಿ ಕಾಯ್ದೆಯ ಬಗ್ಗೆ ದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಕುರಿತು ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಭಿಪ್ರಾಯಪಟ್ಟರು.
ತಮಿಳುನಾಡು ಇತಿಹಾಸ ಪುಸ್ತಕದಲ್ಲಿ ಬ್ರಿಟಿಷರಿಗೆ ಸಹಕಾರ ನೀಡಿ ಅಧಿಕಾರ ನಡೆಸಿದ ವ್ಯಕ್ತಿಗಳ ಬಗ್ಗೆ ಶಾಲಾ ಪಠ್ಯ ಪುಸ್ತಕದಲ್ಲಿ ಉಲ್ಲೇಖಿಸಿದೆ.ಆದರೆ, ಕುಯಿಲಿ, ಮುರುದನ್ ಸಹೋದರರು ಮತ್ತು ವೇಲುನಾಚಿಯರ್, ವೀರಪಾಂಡ್ಯ, ರಾಜ ರಾಜ ಚೋಳ ಅವರಂತಹ ನಾಯಕರನ್ನ ತಮಿಳುನಾಡು ಇತಿಹಾಸ ಪುಸ್ತಕದಲ್ಲಿ ಮೆರೆಮಾಚಿದೆ ಎಂದು ಸಾಂಸ್ಕೃತಿಕ ನಗರದಲ್ಲಿ ನಿಂತು ದ್ರಾವಿಡ್ ರಾಜಕಾರಣ ಟೀಕಿಸಿದರು.
ಕುಯಿಲಿ ಪುಸ್ತಕವನ್ನು ಕನ್ನಡ ಭಾಷೆಯಿಂದ ತಮಿಳಿಗೆ ಅನುವಾದ ಮಾಡುತ್ತೇನೆ. ಇದು ನನ್ನ ವೈಯಕ್ತಿಕ ಜವಾಬ್ದಾರಿ. ಕುಯಿಲಿ, ಅಮೃತಯ್ಯ ಅಂತಹ ವೀರ ಹೋರಾಟಗಾರರು ಪ್ರತಿ ಹಳ್ಳಿಗಳಲ್ಲೂ ಇದ್ದಾರೆ. ಅಂತವರನ್ನ ಗುರುತಿಸುವ ಕಾರ್ಯ ಮುಂದುವರಿಯಲಿ ಎಂದು ಅಣ್ಣಾಮಲೈ ಭರವಸೆ ನೀಡಿದರು.
ಕೆಎಸ್ ಆರ್ ಟಿಸಿ ಬಸ್ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮಹಿಳೆ ಸೇರಿ ಐವರು ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಬಿಜಿ ಕೆರೆ ಗ್ರಾಮದ ಬಳಿ ನಡೆದಿದೆ. ಬೆಳಗಿನ ಜಾವ ಜವರಾಯ ಅಟ್ಟಹಾಸ ಮೆರೆದಿದ್ದು, KSRTC ಚಾಲಕನ ನಿರ್ಲಕ್ಷಕ್ಕೆ ಐವರ ಬಲಿಯಾಗಿದ್ದಾರೆ.
ಅಪಘಾತದಲ್ಲಿ ಕ್ರೂಸರ್ ನಲ್ಲಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಹೊಸೂರು ಗ್ರಾಮದ ತಿಮ್ಮಣ್ಣ (40), ರತ್ನಮ್ಮ (38), ಸೋಮನ ಮರಡಿ ಗ್ರಾಮದ ದುರುಗಪ್ಪ (16), ಗಜಿಲಿ ಗ್ರಾಮದ ಮಹೇಶ (19) ಹಾಗೂ 55 ವರ್ಷದ ಓರ್ವ ವ್ಯಕ್ತಿ ಮೃತ ಪಟ್ಟಿದ್ದಾನೆ.
ಇವರು ಕೂಲಿ ಕಾರ್ಮಿಕರಾಗಿದ್ದು, ರಾಯಚೂರಿನಿಂದ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದರು.
ಘಟನೆಯಲ್ಲಿ ಗಾಯಗೊಂಡಿರುವವರನ್ನು ಚಿಕಿತ್ಸೆಗಾಗಿ ಚಳ್ಳಕೆರೆ, ಚಿತ್ರದುರ್ಗ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಮೊಳಕಾಲ್ಮೂರು ಠಾಣೆಯ ಪಿಎಸ್ಐ ಬಸವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಟಿಕೆಟ್ ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ಒಳ್ಳೆಯದು. ಆದರೆ, ಆ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಅವರ ತೀರ್ಮಾನಕ್ಕೆ ಬದ್ಧವಾಗಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಬಸವರಾಜ್ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಇಲ್ಲಾ. ಮುಂದಿನ ಎರಡೊರ್ಷ ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು, ಮಂಗಳೂರು ಸಮಸ್ಯೆಗಳೇ ಬೇರೆ, ಬೆಳಗಾವಿ ಸಮಸ್ಯೆಯೇ ಬೇರೆ ಇದೆ. ಇದರ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದ ಸಚಿವರು, ಬೆಳಗಾವಿಯಲ್ಲಿ ಕಾಂಗ್ರೆಸ್ ಮರಾಠಿಗರ ಓಲೈಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಪ್ರತಿಕ್ರಿಯೆ ಮಾಡುವುದಿಲ್ಲ ಎಂದರು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಸಾಹುಕಾರ ಪಡೆ ಕ್ಯಾಲೆಂಡರ್ ವಿತರಣೆ ಕುರಿತು ಪ್ರತಿಕ್ರಿಸಿದ ಅವರು, ಕ್ಯಾಲೆಂಡರ್ ವಿತರಿಸಿದರೆ ಅದೇನು ಮಹಾ ಅಪರಾಧವೇ? ಎಂದು ಪ್ರಶ್ನಿಸಿದ ಸಚಿವರು, ಮುಂಬರುವ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಬಿಜೆಪಿಗೆ ವಶಪಡಿಸಿಕೊಳ್ಳುತ್ತೇವೆ. ಅಲ್ಲಿ ಗೆಲ್ಲಲೇಬೇಕೆಂಬ ಸಂಕಲ್ಪ ಮಾಡಿದ್ದೇವೆ. ಪಕ್ಷದಲ್ಲಿನ ಅಡೆ ತಡೆಗಳನ್ನು ಸಿಎಂ ನೋಡಿಕೊಳ್ಳುತ್ತಾರೆ. ಸ್ಥಳೀಯ ಶಾಸಕರ ಜೊತೆ ಸೇರಿ ಎಲ್ಲ ಕಡೆ ಸಂಚರಿಸಿ ನೀರಾವರಿಗೆ ಒತ್ತು ಕೊಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಪಿಎಫ್‌ಐ ಬಾಲ ಬಿಚ್ಚಿದರೆ ಬಾಲನೂ ಕಟ್, ತಲೆನೂ ಕಟ್ ಮಾಡಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಕಚೇರಿ ಮೇಲೆ ಪಿಎಫ್‌ಐ ಕಾರ್ಯಕರ್ತರ ಮುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಜಾರಿ ನಿದೇಶನಾಲಯಕ್ಕೆ (ಇಡಿ) ತನಿಖೆ ಮಾಡಬೇಡವೆನ್ನಲೂ ಪಿಎಫ್‌ಐ ಯಾರು? ಎಂದು ಪ್ರಶ್ನಿಸಿದರು.
ಕುಂಬಳಕಾಯಿ ಕಳ್ಳ ಎಂದರೆ ಏಕೆ ಹೆಗಲು ಮುಟ್ಟಿಕೊಳ್ಳುವುದು. ಭಾರತವಿರುವುದು ಭಯೋತ್ಪಾದನೆ ಮಾಡಲು ಅಲ್ಲ ಎಂದು ಹೇಳಿದ ಅವರು, ಭಯೋತ್ಪಾದನೆಗೆ ವಿದೇಶದಿಂದ ಹಣ ಬರುವುದನ್ನು ತಡೆಯಲು ತನಿಖೆ ನೆಡೆಯಬೇಕಿದೆ ಎಂದು ಸಿ.ಟಿ.ರವಿ ಸ್ಪಷ್ಟಪಡಿಸಿದರು.
ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯತಿಗೆ ಅವಿರೋಧ ಆಯ್ಕೆಯಾಗುವ ಮೂಲಕ ಪೌರಕಾರ್ಮಿಕ ಪಿ.ನಂಜುಂಡ ಅವರ ಅದೃಷ್ಟದ ಬಾಗಿಲು ತೆರೆದಿದೆ.
ಸ್ವಂತ ನೆಲೆ ಇಲ್ಲದೇ ಗುಡಿಸಿಲಿನಲ್ಲಿ ವಾಸವಿರುವ ಪೌರಕಾರ್ಮಿಕ ನಂಜುಂಡನಿಗೆ ಭಾಗ್ಯದ ಬಾಗಿಲು ಒಲೆದು ಬಂದಿದೆ.
ಅವಿರೋಧ ಆಯ್ಕೆಯಾಗಿರುವ ನಂಜುಂಡ ಕೆಂಪಿಸಿದ್ದನಹುಂಡಿ ಗ್ರಾಮದ ಪೌರಕಾರ್ಮಿಕನಾಗಿದ್ದ ಪಿ.ನಂಜುಂಡ ಗ್ರಾಮದ ರಸ್ತೆಗಳನ್ನು ಸ್ವಚ್ಛ ಮಾಡುತ್ತಿದ್ದ. ಆದರೆ ಇದೀಗ ಅದೇ ಗ್ರಾ.ಪಂ.ಸದಸ್ಯನಾಗಿ ಆಯ್ಕೆಯಾಗಿದ್ದಾನೆ.
ಕೆಂಪಿಸಿದ್ದನಹುಂಡಿ ಗ್ರಾಮದ ಮೂರನೇ ವಾರ್ಡ್ ನಿಂದ ಸ್ಪರ್ಧೆಗಿಳಿದಿದ್ದ. ಇವನ ಪ್ರತಿಸ್ಪರ್ಧಿಗಾಗಿ ನಾಮಪತ್ರ ಸಲ್ಲಿಸಿದ್ದ ಬಸವರಾಜನ ಮನವೊಲಿಸಿ ನಾಮಪತ್ರ ಹಿಂಪಡೆಸಿ ನಂಜುಂಡನನ್ನು ಗ್ರಾಮದ ಮುಖಂಡರೇ ಸೇರಿ ಅವಿರೋಧ ಮಾಡಿದ್ದಾರೆ.
ವಿನಾಕಾರಣ ಪತಿ ಮಹಾಶಯನೊಬ್ಬ ಹೆಂಡತಿ ಮೇಲೆ ಸಂಶಯ ಪಟ್ಟು ಕೊಲೆ ಮಾಡಿರುವ ಘಟನೆ ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪರಶುರಾಮ ಹುಚ್ಚೀರಪ್ಪ ಹಳ್ಳಿಕೇರಿ ಎಂಬ ವ್ಯಕ್ತಿ ಕೊಲೆಗೈದಿದ್ದು, ಪತ್ನಿ ರೇಖಾ ಪರಶುರಾಮ ಹಳ್ಳಿಕೇರಿ ಮೃತ ದುರ್ದೈವಿಯಾಗಿದ್ದಾಳೆ.
ನಿನ್ನೆ ಪರಶುರಾಮ ಹೆಂಡತಿ ರೇಖಾಳನ್ನು ಕರೆದುಕೊಂಡು ಕುರಿ ಮೇಯಿಸಲು ಹೋಗಿದ್ದಾನೆ. ಈ ವೇಳೆ ಹೆಂಡತಿ ಜೊತೆ ಮಾತಿಗೆ ಮಾತು ಬೆಳೆದು ಇಬ್ಬರು ಜಗಳವಾಡಿದ್ದಾರೆ.
ಜಗಳದಲ್ಲಿ ಹೆಂಡತಿಗೆ ಒಂದೇಟು ಹೊಡೆದಿದ್ದು, ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ಹೋಗಿದೆ. ಈ ವೇಳೆ ಪರಶುರಾಮ ಹೆಂಡತಿಗೆ ಬಲವಾಗಿ ಆಯಕಟ್ಟಿನ ಜಾಗಕ್ಕೆ ಕಾಲಿನಿಂದ ಒದ್ದಿದ್ದು, ಹೆಂಡತಿ ರೇಖಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಪರುಶುರಾಮನಿಗೆ ವಿನಾಕಾರಣ ಅನುಮಾನ ಪಡದಂತೆ ಅನೇಕ ಬಾರಿ ಬುದ್ದಿ ಮಾತು ಹೇಳಲಾಗಿತ್ತಂತೆ. ಆದರೂ, ಪರಶುರಾಮ ತನ್ನ ಹಳೆ ಚಾಳಿ ಬಿಟ್ಟಿರಲಿಲ್ಲವಂತೆ.
ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಪರಶುರಾಮ ನನ್ನು ಬಂಧಿಸಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಗರದ ಹೃದಯ ಭಾಗದಲ್ಲಿ ಸಾರ್ವಜನಿಕ ಸೇವೆಗೆ ಸಿದ್ಧಗೊಂಡು ಸುಮಾರು ಒಂಬತ್ತು ತಿಂಗಳು ಕಳೆದರೂ, ಜಿಲ್ಲೆಯ ಜನರಿಗೆ ನವೀಕೃತ ಬಸ್ ನಿಲ್ದಾಣ ಬಳಕೆಗೆ ಮುಕ್ತವಾಗಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗಂಡ-ಹೆಂಡತಿ ಜಗಳದ ನಡುವೆ ಕೂಸು ಬಡವಾದಿತು ಎಂಬಂತೆ ಜನಪ್ರತಿನಿಧಿಗಳ ಮುಸುಕಿನ ಗುದ್ದಾಟದಿಂದ ಜಿಲ್ಲೆಯ ಜನರು ರೋಸಿ ಹೋಗಿದ್ದಾರೆ.
ಸ್ಥಳೀಯ ಶಾಸಕ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ನಡುವೆ ಪ್ರತಿಷ್ಠೆಯ ಟ್ರೋಫಿಗಾಗಿ ತ್ರಿಕೋನ ಸರಣಿ ಏರ್ಪಟ್ಟಿದೆ.
ಡಿ.24 ರಂದು ಬಸ್ ನಿಲ್ದಾಣ ಉದ್ಘಾಟನೆಗೆಂದೇ ನಗರಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟನೆ ಮಾಡದೇ, ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ಮಾಡಿ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ವಾಪಸ್ ಹೋಗಿದ್ದಾರೆ.
ಸಾರಿಗೆ ಸಚಿವರು ಗದಗ ಜನತೆಯ ಬಹು ದಿನಗಳ ಬೇಡಿಕೆಯಾದ ನಿಲ್ದಾಣಕ್ಕೆ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಅವರ ಹೆಸರು ನಾಮಕರಣ ಮಾಡಬೇಕೆಂಬ ಬೇಡಿಕೆ ಈಡೇರಿಸಿದರೂ, ಬಸ್ ನಿಲ್ದಾಣ ಇಲ್ಲಿಯವರೆಗೂ ಲೋಕಾರ್ಪಣೆಗೊಂಡಿಲ್ಲ. ಉದ್ಘಾಟನೆಗಾಗಿ ಜಿಲ್ಲಾ ಕಾಂಗ್ರೆಸ್, ಬಿಜೆಪಿ ಹಾಗೂ ಸಾರಿಗೆ ಸಚಿವರ ನಡುವೆ ಜಿದ್ದಾಜಿದ್ದಿ ನಡೆದಂತಿದೆ.
ಸುಮಾರು 5 ಕೋಟಿ ರೂ. ವೆಚ್ಚದಲ್ಲಿ 2018 ರ ಜನವರಿಯಿಂದ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭವಾಗಿದೆ. ಅಂದು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಇಂದಿನ ಶಾಸಕ ಎಚ್.ಕೆ.ಪಾಟೀಲ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಹಾಗಾಗಿ ಉದ್ಘಾಟನೆಯನ್ನು ನಾವೇ ಮಾಡ್ತೀವಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಇತ್ತ ಬಿಜೆಪಿ, ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು ನಾವೇ ಉದ್ಘಾಟನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರಂತೆ.
ಶಾಸಕ ಎಚ್.ಕೆ.ಪಾಟೀಲ್ ಅವರು ತರಾತುರಿಯಲ್ಲಿ ಜು.7 ತಾರೀಖಿಗೆ ಉದ್ಘಾಟನೆ ಮಾಡುತ್ತೇವೆ ಎಂದು ಸಿದ್ಧ ಮಾಡಿದ್ದರಂತೆ. ಇದಕ್ಕೆ ಜಿಲ್ಲಾ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಉದ್ಘಾಟನೆಯನ್ನು ಮುಂದೂಡಿದ್ದರಂತೆ. ಅಲ್ಲಿಂದ ಇಲ್ಲಿಯವರೆಗೂ ಲೋಕಾರ್ಪಣೆಗೊಳ್ಳದೇ ಉದ್ಘಾಟನಾ ಕಾರ್ಯ ನನೆಗುದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಸ್ಥಳೀಯ ಶಾಸಕರಿಲ್ಲದ್ದಕ್ಕೆ ಉದ್ಘಾಟನೆ ರದ್ದು?
ನೂತನವಾಗಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣ ಡಿ.24 ರಂದು ಉದ್ಘಾಟನೆಯಾಗಲು ಸಿದ್ಧಗೊಂಡಿತ್ತಲ್ಲದೇ, ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿತ್ತು. ಆದರೆ, ಸ್ಥಳೀಯ ಶಾಸಕ ಎಚ್.ಕೆ.ಪಾಟೀಲ್ ಅವರು ಜಿಲ್ಲೆಯಲ್ಲಿ ಇರದಿದ್ದಕ್ಕೆ ಲೋಕಾರ್ಪಣೆ ರದ್ದಾಗಿದೆ ಎನ್ನಲಾಗುತ್ತಿದೆ.
ನೂತನವಾಗಿರುವ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡುವ ಮೂಲಕ, ಸಾರ್ವಜನಿಕ ಸೇವೆಗೆ ಮುಕ್ತವಾಗಿಸಬೇಕು.