Home Blog Page 3089

ಸಂಚು ಮಾಡಿ ಅಂಬೇಡ್ಕರ್ ಅವರನ್ನೇ ಸೋಲಿಸಲಿಲ್ಲವೇ?; ಕಾಂಗ್ರೆಸ್ ವಿರುದ್ಧ ಸಾರಾ ಮಹೇಶ್ ವಾಗ್ದಾಳಿ

ವಿಜಯಸಾಕ್ಷಿ ಸುದ್ದಿ, ಮೈಸೂರು

ರಾಜಕೀಯವೇ ಒಂದು ಸಂಚು.
ಸಂಚನ್ನು ಒಬ್ಬರೇ ಮಾಡಲ್ಲ.
ಸಂವಿಧಾನ ರಚಿಸಿದ ಅಂಬೇಡ್ಕರ್‌ರನ್ನೇ ಸೋಲಿಸಲಿಲ್ಲವೇ ? ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಚಾಮುಂಡೇಶ್ವರಿ ಸೋಲಿಗೆ ಬಿಜೆಪಿ- ಜೆಡಿಎಸ್ ಸಂಚು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,
ಪ್ರಧಾನಿಯಾಗಿದ್ದ ದೇವೇಗೌಡರನ್ನು ತುಮಕೂರಿನಲ್ಲಿ ಸಂಚು ಮಾಡಿ ಸೋಲಿಸಲಿಲ್ಲವೇ?
ಮಂಡ್ಯದಲ್ಲಿ ನಿಖಿಲ್ ವಿರುದ್ಧ ಸಂಚು ಆಗಲಿಲ್ಲವೇ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ರಾಜಕಾರಣದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಅಂತಹ ಮನಸ್ಥಿತಿ ಸಿದ್ದರಾಮಯ್ಯಗೆ ಇದೆ. ಆದರೆ, ಅದನ್ನು ಅವರು ಅರ್ಥ ಮಾಡಿಕೊಂಡು ಸ್ವೀಕರಿಸಲಿ ಎಂದು ಸಾ.ರಾ.ಮಹೇಶ್ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದರು.

ಆಪ್ತ ಗೆಳೆಯನಿಗೆ ಮಾಜಿ ಸಿದ್ದರಾಮಯ್ಯ ಟಾಂಗ್; ವೇದಿಕೆ ಹಂಚಿಕೊಳ್ಳದ ಎಚ್.ಸಿ.ಮಹದೇವಪ್ಪ

ವಿಜಯಸಾಕ್ಷಿ ಸುದ್ದಿ, ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಬಳಿಕ ಅಂತರ ಕಾಯ್ದುಕೊಂಡಿರುವ ಬಹುಕಾಲದ ಆಪ್ತ ಗೆಳೆಯ ಮಾಜಿ‌ ಸಚಿವ ಎಚ್.ಸಿ.ಮಹದೇವಪ್ಪಗೆ ಮಾಜಿ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಶುಕ್ರವಾರ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದಿದ್ದ ಗ್ರಾ.ಪಂ. ಜನಾಧಿಕಾರ ಸಭೆಗೆ ಸಿದ್ದರಾಮಯ್ಯ ಜೊತೆ ಮಹದೇವಪ್ಪ ವೇದಿಕೆ ಹಂಚಿಕೊಂಡಿರಲಿಲ್ಲ. ಅಲ್ಲದೇ, ಇತ್ತೀಚಿನ ದಿನಗಳಲ್ಲಿ ಮಹದೇವಪ್ಪ ಕಾಂಗ್ರೆಸ್ ಪಕ್ಷದಲ್ಲಿ ಅಷ್ಟೊಂದು ಸಕ್ರಿಯವಾಗಿ ಕಾಣಿಸುತ್ತಿಲ್ಲ.

ಚಾಮುಂಡೇಶ್ವರಿಯಲ್ಲಿ ನಾನು ಸೋಲಲು ಜೆಡಿಎಸ್ ಬಿಜೆಪಿ ಜೊತೆ ನಮ್ಮ ಪಕ್ಷದವರೂ ಕಾರಣ. ಪಕ್ಷ ವಿರೋಧಿಗಳು ಆತ್ಮಾವಲೋಕನ ಮಾಡಿಕೊಂಡು ಅವರಾಗಿ ಅವರೇ ಪಕ್ಷ ಬಿಟ್ಟು ಹೋಗಬೇಕು. ಯಾರು ಪಕ್ಷಕ್ಕೆ ವಿರುದ್ಧ ಕೆಲಸ ಮಾಡುತ್ತಾರೋ ಅವರಂತ ಖಳನಾಯಕರು ಯಾರು ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದರು.

ಪಕ್ಷ ತಾಯಿ ಸಮಾನ. ಅಂತಹ ತಾಯಿಗೆ ದ್ರೋಹ ಮಾಡಬಾರದು. ಅಂತಹವರು ಪಕ್ಷ ಬಿಟ್ಟು ಹೋಗಬೇಕು.ಯಾರು ಪಕ್ಷಗಳಿಗೆ ಅನಿವಾರ್ಯವಲ್ಲ, ವ್ಯಕ್ತಿಗಳಿಗೆ ಪಕ್ಷ ಅನಿವಾರ್ಯ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ‌ ಅವರ ಹೆಸರು ಹೇಳದೆ ಸಿದ್ದರಾಮಯ್ಯ ಕುಟುಕಿದ್ದರು.

ಮೈತ್ರಿಯಲ್ಲಿ ಹೊಂದಾಣಿಕೆ ಇರಲಿಲ್ಲ: ಸಚಿವ ಬಿ.ಸಿ.ಪಾಟೀಲ್

ವಿಜಯಸಾಕ್ಷಿ ಸುದ್ದಿ, ಹಾವೇರಿ

‘ಮೀರ್ ಸಾಧಿಕ್‌ರು ಎಲ್ಲಿಲ್ಲ, ಎಲ್ಲ ಕಡೆಗಳಲ್ಲೂ ಇದ್ದಾರೆ. ಇವರಿಂದಲೇ ಎಲ್ಲರ ಸೋಲು. ನಿಂದಕರು ಇರಬೇಕು ಹಂದಿಯಂತೆ, ದುಷ್ಮನ್ ಕಿದರ್ ಹೈ ಅಂದರೆ ಬಗಲ್ ಮೇ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕಟುವಾಗಿ ಹೇಳಿದರು.

ಹಾವೇರಿಯಲ್ಲಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು,
ಸಿದ್ದರಾಮಯ್ಯನವರು ತಮ್ಮ ಅನುಭವ ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯರ ನಡುವೆ ಪರಸ್ಪರ ಹೊಂದಾಣಿಕೆ ಇರಲಿಲ್ಲ. ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅಂದಿನ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿ ಇರಲಿಲ್ಲವೆಂಬುವುದನ್ನು ಮತ್ತೊಮ್ಮೆ ಮೆಲುಕು ಹಾಕಿದರು.

ಮೈತ್ರಿ ಸರ್ಕಾರವಿದ್ದಾಗ ಒಬ್ಬರನ್ನೊಬ್ಬರು ನೋಡಿ ಒಂದೊಂದು ಹೇಳಿಕೆ ನೀಡಿದರು. ಇದರಿಂದ ದಾರಿ ತಪ್ಪಿಸುವ ಕೆಲಸವಾಯಿತು. ಯಾರಿಗೆ ಕೆಲಸವಾಗಿಲ್ಲ ಅವರೆಲ್ಲ ತಿರುಗಿ ಬೀಳುತ್ತಾರೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಚಾಮುಂಡೇಶ್ವರಿ ಕ್ಷೇತ್ರದ ಜನಸಂಪರ್ಕ ಕಡಿಮೆ ಆಗಿತ್ತು. ಅಧಿಕಾರವಿದ್ದಾಗ ಎಲ್ಲರೂ ಹಿಂದೆ ಬಂದು ಕೆಲಸ ಮಾಡಿಸಿಕೊಂಡಿರುತ್ತಾರೆ. ಅದರಲ್ಲಿ ತೊಂಬತ್ತೊಂಬತ್ತು ಕೆಲಸವಾಗಿ ಒಂದು ಕೆಲಸವಾಗದಿದ್ದರೂ ಜನ ತಿರುಗಿ ಬೀಳುತ್ತಾರೆ. ಸಿದ್ದರಾಮಯ್ಯನವರ ಪರಿಸ್ಥಿತಿಯೂ ಹಾಗೆ ಆಗಿರಬಹುದು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ರೈತರ ಅಭ್ಯುದಯವೇ ನಮ್ಮ ಕರ್ತವ್ಯ; ಪ್ರಧಾನಿ ಮೋದಿ

ವಿಜಯಸಾಕ್ಷಿ ಸುದ್ದಿ, ದೆಹಲಿ/ಮಧ್ಯಪ್ರದೇಶ

‘ರೈತರ ಕಲ್ಯಾಣವೇ ನಮ್ಮ ಸರ್ಕಾರದ ಆದ್ಯತೆ. ನೂತನ ಕೃಷಿ ಕಾಯ್ದೆಗಳ ಸುತ್ತಲಿನ ಸುಳ್ಳುಗಳನ್ನು ನಂಬಬೇಡಿ. ರೈತರ ಅಭ್ಯುದಯವೇ ನಮ್ಮ ಪ್ರದಾನ ಕರ್ತವ್ಯವಾಗಿದೆ. ನಾವು ಮಾಡುವ ಸುಧಾರಣೆ ರೈತರಿಗೆ ನೆರವಾದರೆ ಸಾಕು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟರು.

ಮಧ್ಯಪ್ರದೇಶದಲ್ಲಿ ನಡೆದ ಕಿಸಾನ್ ಸಮಾವೇಶದಲ್ಲಿ ರೈತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು, ‘ಕೃಷಿ ಕಾಯ್ದೆ ರಾತ್ರೋರಾತ್ರಿ ಜಾರಿಗೆ ಬಂದಿಲ್ಲ. ಈ ಕಾಯ್ದೆಗಳನ್ನು ತರಾತುರಿಯಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಿಲ್ಲ, ಬದಲಿಗೆ ದಶಕಗಳ ಕಾಲ ಚರ್ಚೆ ನಡೆಸಿದ್ದೇವೆ. ಎಲ್ಲಾ ಆಯಾಮಗಳಲ್ಲೂ ಚಿಂತನೆ ನಡೆಸಿ ಕ್ರಮಕೈಗೊಂಡಿದ್ದೇವೆ. ರೈತರೊಡನೆ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಿದ್ದನಿದ್ದೇನೆ’ ಎಂದು ತಿಳಿಸಿದರು.

‘ಈ ಕೃಷಿ ಕಾಯ್ದೆಗಳಿಂದ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಕಳೆದು ಹೋಗುತ್ತದೆ ಎಂದು ಸುಳ್ಳು ಹೇಳಲಾಗುತ್ತಿದೆ. ಕೆಲವರು ರೈತರ ಹೆಗಲ ಮೇಲೆ ಬಂದೂಕಿಟ್ಟು ಯುದ್ಧ ಮಾಡುತ್ತಿದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳು ರೈತರನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಕೆಲವು ಪಕ್ಷಗಳು ರಾಜಕೀಯ ಮಾಡುತ್ತಿವೆ. ರೈತರ ಭೂಮಿ ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

‘ಕಳೆದ ೨೨ ವರ್ಷಗಳಿಂದ ಎಲ್ಲಾ ರಾಜ್ಯ ಸರ್ಕಾರಗಳು ಈ ಕುರಿತು ಚರ್ಚಿಸಿವೆ. ರೈತ ಸಂಘಟನೆಗಳು, ಕೃಷಿ ತಜ್ಞರು, ಆರ್ಥಶಾಸ್ತ್ರಜ್ಞರು, ವಿಜ್ಞಾನಿಗಳು ಸೇರಿ ಚರ್ಚೆ ನಡೆಸಿದ್ದಾರೆ. ಈ ಕಾಯ್ದೆಗಳುಬೇಕೆಂದು ರೈತರು ಆಗ್ರಹಿಸಿದ್ದಾರೆ. ಈ ಕಾಯ್ದೆಗಳನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿಯೂ ಇದೇ ಅಂಶಗಳಿವೆ. ಆದರೆ, ಅವರು ಚುನಾವಣಾ ಪ್ರಣಾಳಿಕೆ ಈಡೇರಿಸಿಲ್ಲ. ಆ ಪಕ್ಷಗಳಿಗೆ ಇಂದು ನೋವಾಗಿದೆ. ನಾವು ತರಲಾಗದ್ದನ್ನು ಮೋದಿ ಹೇಗೆ ತರುತ್ತಾರೆ ಎಂದು ಅವರು ಕೇಳಿಕೊಳ್ಳುತ್ತಿದ್ದಾರೆ. ಮೋದಿ ಏಕೆ ಇದರ ಲಾಭ ಪಡೆಯಬೇಕೆಂಬುದು ಅವರ ಹುನ್ನಾರ. ನಾನು ಇದರ ಲಾಭ ಪಡೆಯುವುದಿಲ್ಲ. ಲಾಭವನ್ನು ನಿಮಗೆ ಮತ್ತು ನಿಮ್ಮ ಪ್ರಣಾಳಿಕೆಗಳಿಗೆ ನೀಡುತ್ತೇನೆ. ನನಗೆ ರೈತರ ಅಭ್ಯುದಯ ಮುಖ್ಯ. ಸುಳ್ಳು ಹರಡುವುದನ್ನು ನಿಲ್ಲಿಸಿ’ ಎಂದು ಕಿವಿಮಾತು ಹೇಳಿದರು.

‘ಪ್ರಪಂಚದ ರೈತರು ಅತ್ಯಾಧುನಿಕ ತಂತ್ರಜ್ಞಾನದಿಂದ ಮುಂದುವರೆಯುತ್ತಿರುವಾಗ ನಮ್ಮ ದೇಶದ ರೈತರನ್ನು ಹಿಂದುಳಿಯಲು ನಾವು ಬಿಡುವುದಿಲ್ಲ. ಅವರು ಸ್ವಾಮಿನಾಥನ್ ವರದಿ ಜಾರಿಗೊಳಿಸಲಿಲ್ಲ. ನಮ್ಮ ಸರ್ಕಾರ ಸ್ವಾಮಿನಾಥನ್ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡಿದೆ. ಮಧ್ಯಪ್ರದೇಶದ ಜನರಿಗೆ ಅವರ ಬಗ್ಗೆ ತಿಳಿದಿದೆ. ಅವರು ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಅದರ ಪ್ರಯೋಜನ ನಿಮಗೆ ಸಿಕ್ಕಿದೆಯೇ? ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಎರಡು ವರ್ಷಗಳ ಬಳಿಕ ಸೋಲಿನ ಸತ್ಯ ಬಾಯ್ಬಿಟ್ಟ ಸಿದ್ದರಾಮಯ್ಯ: ಕಾಂಗ್ರೆಸ್‌ನವರೇ ನನ್ನನ್ನು ಸೋಲಿಸಿದರು!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಮೈಸೂರು

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಗತಿಸಿ ಎರಡು ವರ್ಷಗಳ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಕುರಿತು ಬಹಿರಂಗವಾಗಿಯೇ ಸತ್ಯ ಬಾಯ್ಬಿಟ್ಟಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಗ್ರಾಮ ಜನಾಧಿಕಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಜನ ಪ್ರೀತಿ, ವಿಶ್ವಾಸ ತೋರಿಸಿದರು. ಆದರೆ, ಮತ ಹಾಕಲಿಲ್ಲ. ಹಾಗಾಗಿ ಬಿಜೆಪಿ ಜೆಡಿಎಸ್ ಜೊತೆ ನಮ್ಮ ಪಕ್ಷದವರೂ ಸೇರಿ ನನ್ನನ್ನು ಸೋಲಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಪಕ್ಷಕ್ಕೆ ವಿರುದ್ಧವಾಗಿ ಕೆಲಸ ಮಾಡಿದವರು ಆತ್ಮಾವಲೋಕನ ಮಾಡಿಕೊಂಡು ಅವರಿಂದವರೇ ಪಕ್ಷ ಬಿಟ್ಟು ಹೊರ ಹೋಗಬೇಕು. ಪಕ್ಷದ್ರೋಹ ಕೆಲಸ ಮಾಡುವವರಂತಹ ಖಳನಾಯಕರು ಯಾರೂ ಇಲ್ಲ. ನಾಯಕತ್ವದಲ್ಲಿ ನಂಬಿಕೆ ಇಲ್ಲವೆಂದರೆ, ಬಿಟ್ಟು ಹೋಗಬೇಕು. ಪಕ್ಷಕ್ಕೆ ಯಾರು ಅನಿವಾರ್ಯವಲ್ಲ. ವ್ಯಕ್ತಿಗಳಿಗೆ ಪಕ್ಷ ಅನಿವಾರ್ಯವಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿತ್ತು. ಪಕ್ಷದಲ್ಲಿ ಕೆಲವರಿಗೆ ನನ್ನನ್ನು ಕಂಡರೆ ಹೊಟ್ಟೆಕಿಚ್ಚು. ಹಾಗಾಗಿ ನಮ್ಮ ಪಕ್ಷದವರೇ ನನ್ನನ್ನು ಸೋಲಿಸಿದರು. ನಾನು ಬಾದಾಮಿಗೆ ಹೋಗದಿದ್ದರೂ ಅಲ್ಲಿನ ಜನ ನನ್ನನ್ನು ಗೆಲ್ಲಿಸಿದರು. ನಾನು ಮತ್ತೆ ಚುನಾವಣೆಗೆ ನಿಲ್ಲುತೇನೋ ಇಲ್ವೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಸೋಲಿಗೆ ನಮ್ಮ ಪಕ್ಷದವರೇ ಕಾರಣ. ಎರಡನೇ ಬಾರಿಗೆ ಸಿಎಂ ಆಗುವುದು ಕೆಲವರಿಗೆ ಇಷ್ಟವಿರಲಿಲ್ಲ. ನಾನು ಕಳೆದ ಚುನಾವಣೆಯಲ್ಲಿ ಇಷ್ಟೊಂದು ಕೆಟ್ಟದಾಗಿ ಸೋಲುತ್ತೇನೆ ಅಂದುಕೊಂಡಿರಲಿಲ್ಲ. ನನ್ನ ಸೋಲಿಗೆ ಅನೇಕ ಕಾರಣಗಳಿವೆ.
ಅದನ್ನು ಈಗ ಹೇಳೋದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿದ್ದರಾಮಯ್ಯ ಎರಡು ವರ್ಷಗಳ ಹಿಂದಿನ ಸೋಲಿನ ರಹಸ್ಯ ಬಿಚ್ಚಿದ್ದಾರೆ.

2018 ರಲ್ಲಿ ನಡೆದ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಸೋತಿದ್ದ ಅವರು ಬಾದಾಮಿ ಕ್ಷೇತ್ರದಲ್ಲಿ ಗೆದ್ದಿದ್ದರು.

ಸದ್ಯ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಮುನ್ನುಡಿ ಬರೆದಿದ್ದಂತು ಸುಳ್ಳಲ್ಲ.

ಎರಡನೇ ಹಂತದ ಗ್ರಾ.ಪಂ. ಚುನಾವಣೆ: 119 ನಾಮಪತ್ರ ತಿರಸ್ಕೃತ, 3072 ಉಮೇದುವಾರಿಕೆ ಅಂತಿಮ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಎರಡನೇ ಹಂತದ ಚುನಾವಣೆಯ ನಾಲ್ಕು ತಾಲ್ಲೂಕುಗಳ 64 ಗ್ರಾ.ಪಂ.ಗಳ 895 ಕ್ಷೇತ್ರಗಳಿಗೆ ಒಟ್ಟು 3203 ನಾಮಪತ್ರಗಳು ಸ್ವೀಕೃತವಾಗಿದ್ದು, ಗುರುವಾರ ನಾಮಮತ್ರ ಪರಿಶೀಲನೆ ನಡೆಯಿತು. ಇದರಲ್ಲಿ 119 ನಾಮಪತ್ರಗಳು ತಿರಸ್ಕೃತವಾಗಿದ್ದು, 3072 ಉಮೇದುವಾರಿಕೆಗಳ ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆ ತಿಳಿಸಿದೆ.

ಮುಂಡರಗಿ ತಾಲ್ಲೂಕಿನ 18 ಗ್ರಾಮ ಪಂಚಾಯತಿಗಳ 264 ಸ್ಥಾನಗಳಿಗೆ ಒಟ್ಟು 925 ನಾಮಪತ್ರಗಳು ಸ್ವೀಕೃತವಾಗಿದ್ದವು. ಅದರಲ್ಲಿ 38 ನಾಮಪತ್ರಗಳು ತಿರಸ್ಕೃತವಾಗಿ ಒಟ್ಟು 887 ಕ್ರಮಬದ್ಧವಾಗಿವೆ.

ಅದರಂತೆ, ನರಗುಂದ ತಾಲ್ಲೂಕಿನ 13 ಗ್ರಾ.ಪಂ. 166 ಸ್ಥಾನಗಳಿಗೆ ಒಟ್ಟು 545 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 3 ನಾಮಪತ್ರಗಳು ತಿರಸ್ಕೃತವಾಗಿ ಒಟ್ಟು 530, ರೋಣ ತಾಲ್ಲೂಕಿನ 24 ಗ್ರಾ.ಪಂ. 331 ಸ್ಥಾನಗಳಿಗೆ ಒಟ್ಟು 1244 ನಾಮಪತ್ರಗಳು ಸ್ವೀಕೃತವಾಗಿದ್ದವು.

ಪರಿಶೀಲನೆ ವೇಳೆ 72 ನಾಮಪತ್ರಗಳು ತಿರಸ್ಕೃತವಾಗಿದ್ದು, 1172 ಕ್ರಮಬದ್ಧವಾಗಿವೆ.

ಗಜೇಂದ್ರಗಡ ತಾಲ್ಲೂಕಿನ 9 ಗ್ರಾಮ ಪಂಚಾಯತಿಗಳ 134 ಸ್ಥಾನಗಳಲ್ಲಿ ಒಂದನ್ನು ಹೊರತುಪಡಿಸಿ 133 ಸ್ಥಾನಗಳಿಗೆ 489 ನಾಮಪತ್ರಗಳು ಸ್ವೀಕೃತವಾಗಿದ್ದು, 6 ನಾಮಪತ್ರಗಳು ತಿರಸ್ಕೃತವಾಗಿವೆ. ಹಾಗಾಗಿ 483 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆ ತಿಳಿಸಿದೆ.

ಕ್ಷಮಿಸು ಬಿಡು ಮೈಲಾರಲಿಂಗೇಶ್ವರ; ಬೆಳ್ಳಿ ಹೆಲಿಕಾಪ್ಟರ್ ನೀಡಿ ಹರಕೆ ತೀರಿಸಿದ ಡಿಕೆಶಿ

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಹರಕೆ ಹನ್ನೆರಡು ವರ್ಷವೆಂಬಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಭೇಟಿ‌ ನೀಡಿ ಒಂದು ಕೆಜಿ ತೂಕದ ಬೆಳ್ಳಿಯ ಹೆಲಿಕ್ಯಾಪ್ಟರ್ ಕಾಣಿಕೆ ಅರ್ಪಿಸಿ ಹರಕೆ ತೀರಿಸಿದ್ದಾರೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಡಿಕೆಶಿ ಕಾಣಿಕೆ ನೀಡಿದ್ದಾರೆ.

ದೇವಸ್ಥಾನದ ಮೇಲೆ ಹೆಲಿಕಾಪ್ಟರ್ ನಲ್ಲಿ ಹಾದು ಹೋದವರಿಗೆ ಸಂಕಷ್ಟ ಎದುರಿಸುತ್ತಾರೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ದೀಡ ನಮಸ್ಕಾರ ಹಾಕಿ, ರುದ್ರಸ್ನಾನ ವಿಧಿ ನೆರವೇರಿಸಿ,ಮೈಲಾರಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ ಬೆಳ್ಳಿಯ ಹೆಲಿಕ್ಯಾಪ್ಟರ್ ನೀಡಿ ಹರಕೆ ತೀರಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2018ರಲ್ಲಿ ಹೆಲಿಕ್ಯಾಪ್ಟರ್ ನಲ್ಲಿ ದೇವಸ್ಥಾನಕ್ಕೆ ಬಂದಿದ್ದರಿಂದ ಅಪಚಾರ ಆಗಿತ್ತು. ಬಂದು ಹೋದ ನಂತರ ಕೆಲವೊಂದು ಸಮಸ್ಯೆಗಳು ಎದುರಾಗಿದ್ದವು. ಹಾಗಾಗಿ ಕಾರ್ಯಕರ್ತರು ಹಾಗೂ ದೇವಸ್ಥಾನದ ಗುರುಗಳ ಸಲಹೆ ಮೇರೆಗೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದೇನೆ ಎಂದು ಶಿವಕುಮಾರ್ ಹೇಳಿದರು.

ದೇವಸ್ಥಾನದ ಮೇಲ್ಭಾಗದಲ್ಲಿ ಹೆಲಿಕ್ಯಾಪ್ಟರ್ ಹಾಯ್ದು ಹೋಗಿದ್ದರಿಂದ ಡಿಕೆಶಿ ಹಲವು ಸಂಕಷ್ಟ ಎದುರಿಸಿದ್ದರು. ಇಡಿ, ಜೈಲುವಾಸದಂಥ ಸಂಕಷ್ಟಕ್ಕೆ‌ ಸಿಲುಕಿದ್ದರು.

ಬಾಲೆಹೊಸೂರಿನ ದಿಂಗಾಲೇಶ್ವರ ಮಠಕ್ಕೆ ಡಿಕೆಶಿ ಭೇಟಿ; ಅಂಗರಕ್ಷಕನಿಗೆ ತರಾಟೆ

ವಿಜಯಸಾಕ್ಷಿ ಸುದ್ದಿ, ಗದಗ

ಮೊದಲ ಬಾರಿಗೆ ಬಾಲೆಹೊಸೂರಿನ ಶ್ರೀದಿಂಗಾಲೇಶ್ವರ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ‌.ಕೆ.ಶಿವಕುಮಾರ್ ಭೇಟಿ ನೀಡಿ ದಿಂಗಾಲೇಶ್ವರ ಶ್ರೀಗಳ ಆಶೀರ್ವಾದ ಪಡೆದರು.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರ ಗ್ರಾಮದ ದಿಂಗಾಲೇಶ್ವರ ಮಠಕ್ಕೆ ಆಗಮಿಸಿದ ಡಿಕೆಶಿ ಅವರನ್ನು ಆರತಿ ಬೆಳಗಿ ಕಳಶದೊಂದಿಗೆ‌ ದಿಂಗಾಲೇಶ್ವರ ಮಠದ ಕಿರಿಯ ಶ್ರೀಗಳು ಸ್ವಾಗತಿಸಿದರು. ಅಭಿಮಾನಿಗಳು ಜಯ ಘೋಷ ಕೂಗಿದರು.

ಡಿಕೆಶಿ ಮಠಕ್ಕೆ ಆಗಮನದಿಂದ ನೂಕು ನುಗ್ಗಲು ಉಂಟಾಯಿತು. ಇದರಿಂದ ಕೋಪಗೊಂಡ ಡಿಕೆಶಿ
ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಂಗರಕ್ಷಕನಿಗೆ ತರಾಟೆ ತೆಗೆದುಕೊಂಡರು. ಜನರ ನೂಕಾಟ ನಿಯಂತ್ರಿಸುವಂತೆ ತಿಳಿಸಿದರು.

ಡಿ.ಕೆ.ಶಿವಕುಮಾರ್ ದಿಂಗಾಲೇಶ್ವರ ಮಠಕ್ಕೆ ಭೇಟಿ ನೀಡಿದ್ದು, ಶ್ರೀಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಇವರಿಬ್ಬರ ಭೇಟಿ ಮತ್ತು ಮಾತುಕತೆ ತೀವ್ರ ಕುತೂಹಲ ಮೂಡಿಸಿದೆ.

ಮರಳು ಅಕ್ರಮಕ್ಕೆ ಲಂಚ ಪಡೆದ್ರಾ ತಹಶೀಲ್ದಾರರು? ಲಂಚ ಪಡೆಯುತ್ತಿರೋ ದೃಶ್ಯ ವೈರಲ್

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಕೊಪ್ಪಳ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಕೊರತೆ ಏನಿಲ್ಲ. ಇಲ್ಲಿನ ಮರಳು ದೂರದ ಹುಬ್ಬಳ್ಳಿ, ಬಳ್ಳಾರಿಗೂ ಹೋಗುತ್ತಿತ್ತು. ಆದರೆ ಇತ್ತೀಚಿನ ಕಠಿಣ ಕಾನೂನುಗಳಿಂದ ಮರಳು ಅಕ್ರಮ ಅವ್ಯಾಹತವಾಗಿ ನಡೆಯುತ್ತಿದೆ ಎನ್ನಬಹುದು.

ಜಿಲ್ಲೆಯ ಗಂಗಾವತಿ ತಹಶೀಲ್ದಾರ್ ರೇಣುಕಾ ಅವರು ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ, ದರ್ಪ ತೋರುತ್ತಾರೆ ಎಂಬ ಆರೋಪಗಳಿದ್ದವು. ಜೊತೆಗೆ ಮರಳು ಅಕ್ರಮಕ್ಕೆ ರೇಣುಕಾ ಮೇಡಂ ಅಭಯಹಸ್ತ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಈ ಬಗ್ಗೆ ಸಾಮಾಜಿಕ ಹೋರಾಟಗಾರರು ತಹಶೀಲ್ದಾರ್ ಅವರಿಗೆ ಅಕ್ರಮಕ್ಕೆ ಬ್ರೆಕ್ ಹಾಕುವಂತೆ ಮೌಖಿಕವಾಗಿ, ಲಿಖಿತವಾಗಿ ದೂರು ನೀಡಿದರೂ ಕ್ರಮ ಕೈಗೊಳ್ಳದ ತಹಶೀಲ್ದಾರರು, ಅಕ್ರಮ ನಡೆಸುವವರು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದರು‌ ಎನ್ನಲಾಗಿದೆ.

ಮೂರ್ನಾಲ್ಕು ದಿನಗಳ ಹಿಂದೆ ಕಚೇರಿಯಲ್ಲೇ ಕುಲ್ಲಂಕುಲ್ಲಾ ಡೀಲ್‌ಗೆ ಇಳಿದ ತಹಶೀಲ್ದಾರರು ಮರಳು ಅಕ್ರಮಕ್ಕೆ ಲಂಚ ಪಡೆಯುತ್ತಿರೊ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ.

ಪ್ರತಿ ಟ್ರ್ಯಾಕ್ಟರ್‌ಗೆ 20 ಸಾವಿರ ರೂಪಾಯಿ ಕೊಡಬೇಕು. ಅಡ್ವಾನ್ಸ್ ಆಗಿ 10 ಸಾವಿರ ಕೊಡುವಂತೆ ಬೇಡಿಕೆ ಇಟ್ಟಿರೊ, ಎದುರಿಗಿದ್ದ ವ್ಯಕ್ತಿ 5 ಸಾವಿರ ರೂಪಾಯಿ ಅಡ್ವಾನ್ಸ್ ಎಂದು ಹೇಳುತ್ತಾನೆ. ಆಗ ತಹಶೀಲ್ದಾರರು ಇನ್ನೂ 15 ಸಾವಿರ ರೂಪಾಯಿ? ಅಂತ ಕೇಳುವ ದೃಶ್ಯ ವಿಡಿಯೋದಲ್ಲಿದೆ.

ಗಂಗಾವತಿ ತಹಶೀಲ್ದಾರರ ಬಗ್ಗೆ ನಿನ್ನೆಯಷ್ಟೇ ಈ ಕುರಿತು ದೂರು ಬಂದಿತ್ತು. ಈಗಾಗಲೇ ಎಚ್ಚರಿಕೆ ನೀಡಿದ್ದೇನೆ. ನನ್ನ ಬಳಿ ವಿಡಿಯೊ ಇಲ್ಲ. ವಿಡಿಯೋ ನೋಡಿದ ನಂತರ ಸರಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯುತ್ತೇನೆ.

-ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾಧಿಕಾರಿ, ಕೊಪ್ಪಳ

ಸಂಗಾಪುರದಲ್ಲಿ ನರಭಕ್ಷಕ ಹುಲಿ!!? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋ ವಿಡಿಯೊ

-ಚಿರತೆ ಇರೋ ಪ್ರದೇಶದಲ್ಲಿ ಹುಲಿಗಳ ಕಾಟ ಎಲ್ಲಿಂದ?ಸುಳ್ಳು ಸುದ್ದಿ ವೈರಲ್ ಮಾಡೋರ ವಿರುದ್ಧ ಕಠಿಣ ಕ್ರಮ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜನ ಚಿರತೆಯೊಂದು ಶುಕ್ರವಾರ ನಸುಕಿನ ವೇಳೆ ಸೆರೆ ಸಿಕ್ಕಿದ್ದಕ್ಕೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಇನ್ನೂ ಮೂರ್ನಾಲ್ಕು ಚಿರತೆಗಳು ಸಂಗಾಪುರ, ಆನೆಗೊಂದಿ ಸುತ್ತಮುತ್ತಲಿನ‌ ಗುಡ್ಡಗಾಡು ಪ್ರದೇಶದಲ್ಲಿ ಬೀಡು ಬಿಟ್ಟಿರುವ ಭಯ ಆವರಿಸಿಕೊಂಡಿರುವ ಈ ಹೊತ್ತಲ್ಲಿ ಮೂರ್ನಾಲ್ಕು ಹುಲಿಗಳು ಕೂಡಿಕೊಂಡು ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿರುವ, ಆ ಹುಲಿಗಳನ್ನು ಓಡಿಸಲು ಗುಂಡು ಹೊಡೆಯುತ್ತಿರುವ ಘಟನೆ ಗಂಗಾವತಿ ತಾಲೂಕಿನ ಸಂಗಾಪುರದಲ್ಲಿ ನಡೆಯುತ್ತಿದೆ ಎಂಬರ್ಥದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರನ್ನು ಮತ್ತಷ್ಟೂ ಆತಂಕಕ್ಕೆ ತಳ್ಳಿದೆ.

ಇಡೀ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 526. ಬಂಡೀಪುರ, ದಾಂಡೇಲಿಯಂಥ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡದ್ದನ್ನ ಒಪ್ಪಬಹುದು. ದಟ್ಟ ಕಾನನ ಹುಲಿಗಳ ಮೆಚ್ಚಿನ ತಾಣ. ಗುಡ್ಡಗಾಡು ಪ್ರದೇಶದಲ್ಲಿ ಹುಲಿಗಳು ಬರಲಾರವು. ಅಂಥದ್ದರಲ್ಲಿ ಏಕಾಏಕಿ ವ್ಯಕ್ತಿಯೊಬ್ಬನ ಮೇಲೆ ಹುಲಿ ದಾಳಿ, ಹುಲಿ ಓಡಿಸಲು ಗುಂಡಿನ ಪ್ರತಿ ದಾಳಿ ಕೊಪ್ಪಳ ಜಿಲ್ಲೆಯಲ್ಲಿ ನಡೆಯಲು ಸಾಧ್ಯವೇ ಇಲ್ಲ. ಇದೆಲ್ಲ ಶುದ್ಧ ಸುಳ್ಳು. ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ. ಜಿಲ್ಲೆಯ ಸಾರ್ವಜನಿಕರು ಈ ಬಗ್ಗೆ ಆತಂಕಗೊಳ್ಳುವ ಅಗತ್ಯ ಇಲ್ಲ. ಚಿರತೆ ಕಾಟದ ಬಗ್ಗೆ ಮೈ ಮರೆಯುವಂತಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರದಲ್ಲಿ ನಡೆದಿದೆ ಎನ್ನಲಾದ ಹುಲಿ ದಾಳಿಯ ವಿಡಿಯೊ ಫೇಕ್. ಅದು ಬೇರೆ ರಾಜ್ಯದಲ್ಲೊ ಅಥವಾ ಬೇರೆ ದೇಶದಲ್ಲೋ ಹಿಂದೆಂದೊ ನಡೆದಿರುವ ಘಟನೆ ಇರಬಹುದು. ಕೆಲವರು ಅದನ್ನು ಎಡಿಟ್ ಮಾಡಿ ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿರುವ ಶಂಕೆ ಇದೆ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಸೈಬರ್ ಕ್ರೈಮ್‌ನವರಿಗೆ ಸೋಶಿಯಲ್ ಮೀಡಿಯಾ ಮೇಲೆ ಹದ್ದಿನ ಕಣ್ಣು ಇಡುವಂತೆಯೂ, ಈ ವಿಡಿಯೊ ಹರಿಬಿಟ್ಟಿರುವ ಆರೋಪಿಗಳನ್ನು ಪತ್ತೆ ಹಚ್ಚುವಂತೆಯೂ ಸೂಚಿಸಲಾಗುವುದು.

ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾಧಿಕಾರಿ, ಕೊಪ್ಪಳ
error: Content is protected !!