Home Blog Page 3097

ಬಾಕ್ಸರ್ ಡಿಂಕೊ ಸಿಂಗ್ ನಿಧನ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಏಷ್ಯನ್ ಗೇಮ್ಸ್ ಪದಕ ವಿಜೇತ ಹಾಗೂ ಪದ್ಮಶ್ರೀ ವಿಜೇತ ಬಾಕ್ಸರ್ ಡಿಂಕೊ ಸಿಂಗ್ ಅವರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ.
ಮಣಿಪುರ ಮೂಲದ 42 ವರ್ಷದ ಡಿಂಕೊ ಸಿಂಗ್ ಅವರಲ್ಲಿ ಇತ್ತೀಚೆಗಷ್ಟೇ ಕೊರೊನಾ ಸೋಂಕು ಕಂಡು ಬಂದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಕೊರೋನಾ ವಿರುದ್ಧ ಗೆದ್ದು ಬಂದ ನಂತರವೂ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ.
ಡಿಂಕೊ ಸಿಂಗ್ 2017ರಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾದಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಡಿಂಕೊ 1998ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಡಿಂಕೊ ನಿಧನಕ್ಕೆ ಕ್ರೀಡಾ ಸಚಿವ ಕಿರಣ್ ರಿಜಿಜು, ಬಾಕ್ಸರ್ ವಿಜೇಂದರ್ ಸಿಂಗ್ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೊರೊನಾ ಚಿಕಿತ್ಸೆಗೆಂದು ಬಂದವ ರಕ್ತ ಕಾರಿ ಸತ್ತ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಚಿಕಿತ್ಸೆಗೆಂದು ದಾಖಲಾದ ವ್ಯಕ್ತಿಯೊಬ್ಬರು ಹೃದಯ ಸಂಬಂಧಿ ಸಮಸ್ಯೆಯಿಂದ ರಕ್ತಕಾರಿ ಸಾವನ್ನಪ್ಪಿರುವ ಘಟನೆ ನಡೆದಿದೆ. 26 ವರ್ಷದ ವ್ಯಕ್ತಿಯೊಬ್ಬರು ಆರ್‌ ಟಿ ನಗರದ ಅಂಬೇಡ್ಕರ್ ಆಸ್ಪತ್ರೆಗೆ ಕೊರೊನಾ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿ 20 ದಿನ ಕಳೆದರೂ ಚೇತರಿಕೆ ಕಂಡಿರಲಿಲ್ಲ. ಅವರಲ್ಲಿ ಎದೆ ನೋವು ಶುರುವಾಗಿ ವೈದ್ಯರ ಸಲಹೆ ಮೇರೆಗೆ ಜಯದೇವ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು.

ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿತ ಚಿಕಿತ್ಸೆ ನಡೆಯುತ್ತಿತ್ತು. ಆದರೆ, ಏಕಾಏಕಿ ರಕ್ತಕಾರಿ ಸಾವನ್ನಪ್ಪಿದ್ದಾರೆ.
ಈ ವ್ಯಕ್ತಿ ಗಾರೆ ಕೆಲಸ ಮಾಡುತ್ತಿದ್ದರು. ಸಾವನ್ನಪ್ಪಿರುವ ವ್ಯಕ್ತಿಗೆ 7 ವರ್ಷದ ಮಗನಿದ್ದಾನೆ. ಇವರ ಪತ್ನಿ ಗರ್ಭಿಣಿಯಾಗಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಬನಶಂಕರಿಯ ಚಿತಾಗಾರದಲ್ಲಿ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸಿಎಂ ರಾಜೀನಾಮೆ ವದಂತಿ ವಿಚಾರಕ್ಕೆ ಬಲಿಯಾಗೋದು ಬೇಡ; ಜೊಲ್ಲೆ

ವಿಜಯಸಾಕ್ಷಿ ಸುದ್ದಿ, ಗದಗ

ಸಿಎಂ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತ ಪ್ರತಿಕ್ರಿಯೆ ನೀಡಿರುವ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಉಹಾಪೋಹಗಳಿಗೆ ನಾವು ಬಲಿ ಆಗೋದು ಬೇಡ ಎಂದಿದ್ದಾರೆ.

ಗದಗ ಜಿಲ್ಲಾ ಪ್ರವಾಸದಲ್ಲಿರುವ ಅವರು, ಸಿಎಂ ಬಿ ಎಸ್ ಯಡಿಯೂರಪ್ಪ ಅವರು, ನಮ್ಮ ಸರ್ಕಾರ ಬಂದ ಮೇಲೆ ಬಹಳ ಚಾಲೆಂಜ್ ಎದುರಿಸಿದ್ದಾರೆ. ಅತಿವೃಷ್ಟಿ ಅನಾವೃಷ್ಟಿ, ಕೋವಿಡ್ ಕಾಲದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರೇ‌ ಪೂರ್ಣಾವಧಿ ಸಿಎಮ್ ಆಗಿರುವುದಲ್ಲದೆ, ಮುಂದಿನ ಚುನಾವಣೆಯೂ ಸಹ ಅವರ ನೇತೃತ್ವದಲ್ಲಿಯೇ ನಡೆಯುತ್ತದೆ ಎಂದರು.

ಮನೆಯೆಂದ ಮೇಲೆ ಕೆಲವು ಜಗಳಗಳು ಇರುತ್ತವೆ, ಸ್ವಲ್ಪ ಕಿರಿಕಿರಿ ಇರುತ್ತೇ, ಮತ್ತೆ ಸಾಲ್ವ್ ಆಗುತ್ತವೆ. ಯಾರೋ ಏನೋ ಹೇಳಿದ್ರು ಅಂತಾ ಗಾಬರಿ ಪಡಬೇಕಾಗಿಲ್ಲಾ. ನಾನು ಯಾವುದಕ್ಕೂ ಸಹಿ ಮಾಡಿಲ್ಲ, ಸಹಿ ಸಂಗ್ರಹಣೆ ನಡೆಯುತ್ತಿರುವ ಕುರಿತು ಮಾಹಿತಿ ಇಲ್ಲ ಎಂದ್ರು.

ಇನ್ನು ಹೈಕಮಾಂಡ್ ಇರುತ್ತದೆ ಅವರು ಎಲ್ಲವನ್ನೂ ನೋಡುತ್ತಿರುತ್ತಾರೆ. ಕೋವಿಡ್ ಸಂದರ್ಭದಲ್ಲಿ ಸಿಎಂ ಅವರಿಗೆ ಬೇಜಾರಾಗಿರಬಹುದು. ಹಾಗಾಗಿ ರಾಜೀನಾಮೆ ನೀಡಲು ಸಿದ್ದ ಅಂತಾ ಹೇಳಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ಕೊರತೆಯಿದೆ, ಖಾಸಗಿ ವೈದ್ಯರ ಜೊತೆಗೆ ಚರ್ಚೆ ಮಾಡುತ್ತಿದ್ದೇವೆ.

ಮೂರನೇಯ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ದೇಶದಲ್ಲಿ ಒಂದೇ ದಿನ ಕೋವಿಡ್ ಗೆ ದಾಖಲೆಯ ಬಲಿ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದಲ್ಲಿ ಕೊರೊನಾ ಮಹಾಮಾರಿಯ ಹಾವಳಿ ಕಡಿಮೆಯಾಗುತ್ತಿದೆ. ಆದರೆ, ಸಾವಿನ ಸಂಖ್ಯೆಯಲ್ಲಿ ಮಾತ್ರ ಆತಂಕ ಹೆಚ್ಚಾಗುತ್ತಿದೆ. ಸದ್ಯ ಒಂದೇ ದಿನ ದಾಖಲೆಯ ಸೋಂಕಿತರು ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 94,052 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಈ ಅವಧಿಯಲ್ಲಿ ಬರೋಬ್ಬರಿ 6,148 ಜನ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,91,83,121ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,59,676ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ದಿನಗಳಲ್ಲಿಯೇ ನಿನ್ನೆಯ ಸಾವು ಆತಂಕ ಮೂಡಿಸಿದೆ.
ನಡುವೆ ಕಳೆದ 24 ಗಂಟೆಗಳಲ್ಲಿ 1,51,367 ಜನರು ಗುಣಮುಖರಾಗುವುದರೊಂದಿಗೆ ಇಲ್ಲಿಯವರೆಗೆ 2,76,55,493 ಜನ ಸೋಂಕಿತರು ಚೇತರಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 23,90,58,360 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

148 ವರ್ಷಗಳ ನಂತರ ಶನಿ ಜಯಂತಿಯಂದೆಯೇ ನಡೆಯುತ್ತಿದೆ ಸೂರ್ಯಗ್ರಹಣ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಈ ವರ್ಷದ ಮೊದಲ ಸೂರ್ಯಗ್ರಹಣವು ಅಮಾವಾಸ್ಯೆಯ ದಿನ ಅಂದರೆ ಶನಿ ಜಯಂತಿಯಂದೇ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಇದರ ಪ್ರಾಮುಖ್ಯತೆ ಇನ್ನೂ ಹೆಚ್ಚಾಗಿದೆ. ಶನಿ ಜಯಂತಿಯಂದೇ ಸೂರ್ಯಗ್ರಹಣವೂ ಸಂಭವಿಸುತ್ತಿರುವುದು 148 ವರ್ಷದ ಬಳಿಕ ನಡೆಯುತ್ತಿರುವ ಅಪರೂಪದ ವಿದ್ಯಮಾನವಾಗಿದೆ. ಹೀಗಾಗಿ ಇವತ್ತಿನ ಸೂರ್ಯಗ್ರಹಣಕ್ಕೆ ಇನ್ನಿಲ್ಲದ ಪ್ರಾಮುಖ್ಯತೆ ಬಂದಿದೆ.

ಇವತ್ತು ಸೂರ್ಯ ಮತ್ತು ಶನಿಯ ಅದ್ಭುತ ಸಂಯೋಜನೆಯನ್ನು ನಾವು ಕಾಣಬಹುದಾಗಿದೆ. ಈ ಗ್ರಹಣವನ್ನು ಕಂಕಣ ಗ್ರಹಣ ಅಥವಾ ವಾರ್ಷಿಕ ಸೂರ್ಯಗ್ರಹಣ ಎನ್ನಲಾಗುತ್ತದೆ. ಭಾರತೀಯ ಪಂಚಾಂಗದ ಪ್ರಕಾರ ಸೂರ್ಯಗ್ರಹಣದ ಅವಧಿಯನ್ನು ಸೂತಕದ ಅವಧಿ ಎಂದು ನಂಬಲಾಗುತ್ತದೆ. ಇದು ವೈಜ್ಞಾನಿಕವಾಗಿ ಎಷ್ಟು ಸರಿ ಎನ್ನುವ ವಿಷಯ ಚರ್ಚೆಯಲ್ಲಿ ಇದ್ದೇ ಇದೆ.

ಇನ್ನು ಈ ದಿನದ ಸೂರ್ಯಗ್ರಹಣ ಸಂಜೆ 3.42ರಿಂದ 5.52ರ ಅವಧಿಯೊಳಗೆ ಸಂಭವಿಸುತ್ತದೆ. ಈ ಅಪರೂಪದ ಸೂರ್ಯನ ಉಂಗುರ ನೋಡಲು ವಿಶ್ವಾದ್ಯಂತ ಜನ ಕಾತರರಾಗಿದ್ದಾರೆ. ಈ ದಿನ ಸೂರ್ಯ ಮತ್ತು ಶನಿಯ ಅದ್ಭುತ ಸಂಯೋಜನೆಯನ್ನು ಕಾಣಬಹುದು. ಈ ಗ್ರಹಣವು ಕಂಕಣ ಗ್ರಹಣ ಅಥವಾ ವಾರ್ಷಿಕ ಸೂರ್ಯಗ್ರಹಣವಾಗಿರುತ್ತದೆ. ಈ ಸಂದರ್ಭದಲ್ಲಿ ಚಂದ್ರನು ಸುಮಾರು ಶೇ. 97ರಷ್ಟು ಸೂರ್ಯನನ್ನು ಆವರಿಸಿರುತ್ತಾನೆ. ದೇಶದ ಈಶಾನ್ಯದ ಭಾಗಗಳಲ್ಲಿ ಮತ್ತು ಭಾಗಶಃ ಜಮ್ಮು ಮತ್ತು ಕಾಶ್ಮೀರದಲ್ಲಿ ಸೂರ್ಯಗ್ರಹಣ ಗೋಚರಿಸುತ್ತದೆ.

ಈ ಬಾರಿ ಸೂರ್ಯಗ್ರಹಣ ವೃಷಭ ಹಾಗೂ ಮೃಗಶಿರಾ ನಕ್ಷತ್ರದಲ್ಲಿ ನಡೆಯಲಿದೆ. ವರ್ಷದ ಈ ಮೊದಲ ಸೂರ್ಯಗ್ರಹಣ ಏಷ್ಯಾ, ಯುರೋಪ್, ಮಂಗೋಲಿಯಾ, ಈಶಾನ್ಯ ಅಮೆರಿಕ, ಅಟ್ಲಾಂಟಿಕ್ ಸಾಗರದ ಉತ್ತರ ಭಾಗ ಮತ್ತು ಉತ್ತರ ಕೆನಡಾ, ರಷ್ಯಾ, ಗ್ರೀನ್‌ಲ್ಯಾಂಡ್‌ನಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ. ಈ ದೇಶಗಳಲ್ಲಿ ಸೂರ್ಯಗ್ರಹಣದ ಸೂತಕ ಮಾನ್ಯವಾಗಿರುತ್ತದೆ.

ವಸತಿ ಕಟ್ಟಡ ಕುಸಿತ – 11 ಸಾವು, 8 ಜನರಿಗೆ ಗಾಯ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ನಗರದಲ್ಲಿನ ಎರಡು ಅಂತಸ್ತಿನ ವಸತಿ ಕಟ್ಟಡವೊಂದು ಕುಸಿತಗೊಂಡ ಪರಿಣಾಮ 11 ಜನ ಸಾವನ್ನಪ್ಪಿದ್ದು, 8 ಜನ ಗಾಯಗೊಂಡಿರುವ ಘಟನೆ ಮಲಾಡ್ ವೆಸ್ಟ್ ಪ್ರದೇಶದ ನ್ಯೂ ಕಲೆಕ್ಟರ್ ಕಾಂಪೌಂಡ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಈಗಾಗಲೇ 11 ಜನ ಸಾವನ್ನಪ್ಪಿದ್ದು, 8 ಜನ ಗಾಯಗೊಂಡವರನ್ನು ರಕ್ಷಿಸಲಾಗಿದೆ. ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾತ್ರಿ 11 ಗಂಟೆ ಸುಮಾರಿಗೆ ಈ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪಕ್ಕದ 3 ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಹಲವರು ಕಟ್ಟಡದ ಅವಶೇಷದಡಿಯಲ್ಲಿ ಸಿಲುಕಿ ಹಾಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ಮತ್ತು ರಕ್ಷಣಾ ತಂಡಗಳ ಸಿಬ್ಬಂದಿ ಆಗಮಿಸಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.

ರಾಜ್ಯ ಮುಕ್ತ ವಿವಿಯ ಸಹಾಯಕ ಕುಲಸಚಿವ ಆತ್ಮಹತ್ಯೆಗೆ ಶರಣು!

ವಿಜಯಸಾಕ್ಷಿ ಸುದ್ದಿ, ಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿವಿಯ ಸಹಾಯಕ ಕುಲಸಚಿವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಚಾಮುಂಡಿಪುರಂ ನಿವಾಸಿ ಮಂಜು ಪ್ರಸಾದ್(55) ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬುಧವಾರ ಮಧ್ಯಾಹ್ನ 12ಗಂಟೆಯ ಸಮಯದಲ್ಲಿ ಮನೆಯಲ್ಲಿ ಹೆಂಡತಿ, ಮಕ್ಕಳು ಇಲ್ಲದ ಸಂದರ್ಭದಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ ನೋಟ್‌ ನಲ್ಲಿ ರಿಯಾಜ್ ಮತ್ತು ಜಾವಿದ್ ಎಂಬುವರಿಂದ ನಾನು ಜಯಲಕ್ಷ್ಮೀಪುರಂ ನಿವೇಶನ ಖರೀದಿಸಿದ್ದೆ. ಅದನ್ನು ನಾನು ಬೇರೆಯವರಿಗೆ ಮಾರಾಟ ಮಾಡಿದ್ದಾಗ, ಅವರಿಬ್ಬರು ನನಗೆ ನೀಡಿರುವ ದಾಖಲೆಗಳು ಸುಳ್ಳು ಎಂಬುವುದು ತಿಳಿದು ಬಂದಿದೆ. ಅಲ್ಲದೇ, ಈ ಸಂಬಂಧ ದೂರು ಕೂಡ ದಾಖಲಾಗಿದೆ. ಹಾಗಾಗಿ, ಈ ಸಾವಿಗೆ ರಿಯಾಜ್ ಮತ್ತು ಜಾವಿದ್ ಅವರೇ ಕಾರಣ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ನಗರದ ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೋವಿಡ್ ನಿಂದ ಬಳಲುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾಕ್ಕೆ ಯತ್ನ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕೋವಿಡ್ ನಿಂದ ಬಳಲುತ್ತಿದ್ದ ಮಹಿಳಾ ರೋಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.
ಈ ಘಟನೆ ನಗರದ ಜಿಮ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ. ಕೋವಿಡ್ ಮಹಿಳಾ ರೋಗಿಯ ಮೇಲೆ ಪಿಂಟು ಎಂಬುವನಿಂದ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಪಿಂಟು ಖಾಸಗಿ ಆಂಬ್ಯುಲೇನ್ಸ್ ಚಾಲಕನಾಗಿದ್ದಾನೆ. ಜಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 25 ವರ್ಷದ ರೋಗಿಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳೆ ಮಲಗಿದ್ದ ಸಂದರ್ಭದಲ್ಲಿ ಡೈಪರ್ ಮತ್ತು ಯೂರಿನ್ ಪೈಪ್ ನ್ನು ದುಷ್ಕರ್ಮಿ ತೆಗೆದಿದ್ದಾನೆ ಎನ್ನಲಾಗಿದೆ.
ಈ ಕೃತ್ಯಕ್ಕೆ ಎಚ್ಚರಗೊಳ್ಳುತ್ತಿದ್ದಂತೆ ಮಹಿಳೆ ಚೀರಾಟ ನಡೆಸಿದ್ದಾರೆ. ಅಕ್ಕ-ಪಕ್ಕದ ರೋಗಿಗಳು ಕೂಡ ಎಚ್ಚರಗೊಂಡಿದ್ದರಿಂದ ಆರೋಪಿ ಓಡಿ ಹೋಗಿದ್ದಾನೆ. ಸದ್ಯ ಆರೋಪಿ ಪಿಂಟುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ತನಿಖೆ ನಡೆಸಿದ್ದಾರೆ.

ಪ್ರಾಣಿಗಳಲ್ಲಿಯೂ ಕಾಣಿಸಿಕೊಳ್ಳುತ್ತಿರುವ ಸೋಂಕು – ಸಾಕಾನೆಗಳಿಗೆ ಕೊರೊನಾ ಟೆಸ್ಟ್!

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಸಾಕಾನೆಗಳಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಈ ಪರೀಕ್ಷೆಯನ್ನ ಇಲ್ಲಿಯ ಬಂಡೀಪುರಕ್ಕೆ ಹೊಂದಿಕೊಂಡಿರುವ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಅರಣ್ಯ ಇಲಾಖೆಯು ಇಲ್ಲಿ ಸಾಕಿರುವ ಆನೆಗಳಿಗೆ ಕೊರೊನಾ ಟೆಸ್ಟ್ ನಡೆಸಿದೆ.

ಮಧುಮಲೈ ಸಾಕಾನೆ ಶಿಬಿರದಲ್ಲಿ 28 ಆನೆಗಳಿದ್ದು, ಎಲ್ಲ ಆನೆಗಳನ್ನೂ ಪರೀಕ್ಷೆಗೆ ಒಳಪಡಿಸಲಾಯಿತು. ಆನೆಗಳ ಸೊಂಡಿಲಿನಿಂದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಉತ್ತರ ಪ್ರದೇಶದ ಇಜತ್ನಗರದಲ್ಲಿನ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ರವಾನಿಸಲಾಯಿತು.

ದೇಶದಲ್ಲಿ ಕೊರೊನಾ 2ನೇ ಅಲೆಯ ಭೀಕರತೆ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ತಮಿಳುನಾಡಿನ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಮಧುಮಲೈ ಹುಲಿ ರಕ್ಷಿತಾರಣ್ಯದ 28 ಆನೆಗಳ ಮಾದರಿ ಸಂಗ್ರಹ ಮಾಡಲಾಗಿದೆ.
ತಮಿಳುನಾಡಿನಲ್ಲಿ ಕೊರೊನಾಗೆ ಸಿಂಹ ಬಲಿಯಾಗಿತ್ತು. ಜೂ. 3 ರಿಂದ ತಮಿಳುನಾಡಿನ ವಂದಲೂರು ಝೂನಲ್ಲಿ 9 ಸಿಂಹಗಳಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಸರ್ಕಾರ ಆನೆಗಳಿಗೂ ಕೊರೊನಾ ಪರೀಕ್ಷೆಗೆ ಸೂಚನೆ ನೀಡಿತ್ತು.

2 ಬೌಲ್ ಗೆ 21 ರನ್ ಸಿಡಿಸಿದ ವೀರೂನ ಆರ್ಭಟ ನೆನಪಿಸಿಕೊಂಡ ಅಭಿಮಾನಿಗಳು!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ವೀರೇಂದ್ರ ಸೆಹ್ವಾಗ್ ಭಾರತ ಕಂಡ ಶ್ರೇಷ್ಠ ಆಟಗಾರ. ವೀರೂ ಮೈದಾನದಲ್ಲಿ ಇದ್ದರೆ ಸಾಕು, ಬೌಲರ್ ಗಳು ಬೆವರುತ್ತಿದ್ದರು. ಭಾರತದ ಸ್ಕೋರ್ ಬೋರ್ಡ್ ನಲ್ಲಿ ರನ್ ಗಳು ವೇಗವಾಗಿ ಹೆಚ್ಚಾಗುತ್ತಿದ್ದವು. ಇಂತಹ ಸೆಹ್ವಾಗ್ ಅದೊಮ್ಮೆ ಕೇವಲ ಎರಡೇ ಎರಡು ಎಸೆತಗಳಲ್ಲಿ 21 ರನ್ ಗಳನ್ನು ಬಾರಿಸಿದ್ದರು. ಕೇವಲ ಎರಡೇ ಬೌಲ್ ನಲ್ಲಿ 21 ರನ್ ಕದಿಯುವುದು ಹೇಗೆ? ಅನಿಸುತ್ತಿದೆಯೇ ಹಾಗಾದರೆ ಈ ಸ್ಟೋರಿ ಓದಿ.

ಪಾಕ್ ನ ಬೌಲರ್ ರಾಣಾ ನವೇದ್ ಉಲ್ ಹಸನ್ ಅವರ ಬೌಲ್ ನಲ್ಲಿಯೇ ವೀರೂ ಈ ಚಮತ್ಕಾರ ಮಾಡಿದ್ದಾರೆ. ಭಾರತದ ಬದ್ಧ ವೈರಿ ಪಾಕ್ ವಿರುದ್ಧ 2004ರಲ್ಲಿ ಪಂದ್ಯ ನಡೆದ ಸಂದರ್ಭದಲ್ಲಿಯೇ ವೀರೂ ಇಂತಹ ವೀರಾವೇಶ ತೋರ್ಪಡಿಸಿದ್ದಾರೆ.

ವೇಗಿ ರಾಣಾ ಮಾಡಿದ ತಪ್ಪು ಏನೆಂದರೆ, ಎರಡೇ ಬೌಲ್ ಎಸೆದು, ಇತರೆ ಲೆಕ್ಕಾಚಾರದಲ್ಲಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಗೆ ದಾಖಲೆಯ 21ರನ್ ಕದಿಯಲು ಅವಕಾಶ ನೀಡಿದ್ದಾರೆ. ಆ ಇನ್ನಿಂಗ್ಸ್ ನ 11ನೇ ಓವರ್ ನಲ್ಲಿ ವೇಗಿ ರಾಣಾ ಬೌಲಿಂಗ್ ಮಾಡುತ್ತಿದ್ದರು. ಮೊದಲ ಬೌಲ್ ನೋಬಾಲ್ ಆಗಿತ್ತು. ಈ ಬೌಲ್ ನ್ನು ಸೆಹ್ವಾಗ್ ಬೌಂಡರಿಗೆ ಅಟ್ಟಿದ್ದರು. ಎರಡನೇ ಬೌಲ್ ನ್ನೂ ರಾಣಾ ಮತ್ತೆ ನೋ ಬಾಲ್ ಎಸೆದಿದ್ದರು. ಅದನ್ನು ಕೂಡ ಸೆಹ್ವಾಗ್ ಬೌಂಡರಿಗೆ ನೂಕಿದ್ದರು. ಮೂರನೆಯ ಎಸೆತ ಕೂಡ ಹ್ಯಾಟ್ರಿಕ್ ನೋ ಬೌಲ್ ಗೆ ಸಾಕ್ಷಿಯಾಯಿತು. ಆದರೆ, ಮೂರನೇ ಬೌಲ್ ನಲ್ಲಿ ಸೆಹ್ವಾಗ್ ರನ್ ಕದಿಯಲಿಲ್ಲ. ಆ ನಂತರ ಸರಿಯಾದ ಬೌಲ್ ನ್ನು ಎಸೆದರು. ಆಗಲೂ ಸೆಹ್ವಾಗ್ ರನ್ ಕದಿಯುವ ಪ್ರಯತ್ನ ಮಾಡಲಿಲ್ಲ. ಆ ನಂತರ ಬೌಲ್ ನ್ನು ಮತ್ತೆ ರಾಣಾ ನೋ ಬೌಲ್ ಎಸೆದರು. ಆಗ ಬಿಡ್ತಾರಾ ಸೆಹ್ವಾಗ್? ಮತ್ತೆ ಬೌಂಡರಿ ಬಾರಿಸಿದರು.

ಹೀಗೆ ಬೌಂಡರಿ ಮೇಲೆ ಬೌಂಡರಿ ಬಾರಿಸುತ್ತಿದ್ದರೆ, ಬೌಲರ್ ಕಂಗಾಲಾಗಿ ನಂತರದ ಬೌಲ್ ನ್ನು ನೋ ಬೌಲ್ ಹಾಕಿದರು. ಮತ್ತೊಂದು ಬೌಂಡರಿ ವೀರು ಬ್ಯಾಟಿಂಗ್ ನಿಂದ ಮೂಡಿ ಬಂತು.
ಆಗ ಬೌಲರ್ ನಿನ್ನ ಸಹವಾಸವೇ ಸಾಕಪ್ಪ ಎನ್ನುವಂತೆ ಕೈ ಮುಗಿದರು. ಹೀಗಾಗಿ ಒಟ್ಟು 2 ಸರಿಯಾದ ಬೌಲ್ ಹಾಗೂ 5 ನೋ ಬೌಲ್ ಲೆಕ್ಕಾಚಾರದಲ್ಲಿ, ನಾಲ್ಕು ಬೌಂಡರಿ ಅಂದ್ರೆ 16ರನ್ ಹಾಗೂ 5 ನೋ ಬೌಲ್ ನಿಂದ ಒಟ್ಟು 21ರನ್ ಗಳನ್ನು ವೀರು ಗಳಿಸಿದ್ದರು. ಈ ವಿಡಿಯೋವನ್ನು ಈಗಲೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತ ಮೆಲುಕು ಹಾಕುತ್ತಿದ್ದಾರೆ.

error: Content is protected !!