Home Blog Page 31

ವಿಚ್ಛೇದನದ ಬೆನ್ನಲ್ಲೆ ಅಭಿಮಾನಿಗಳಲ್ಲಿ ಮನವಿ ಮಾಡಿದ ದುನಿಯಾ ವಿಜಯ್

ಬೆಂಗಳೂರು: ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ದಾಂಪತ್ಯಕ್ಕೆ ನ್ಯಾಯಾಲಯದ ಮೂಲಕ ಅಧಿಕೃತ ಅಂತ್ಯ ಸಿಕ್ಕಿದೆ. ಸುದೀರ್ಘ ಕಾನೂನು ಹೋರಾಟದ ಬಳಿಕ ಹೈಕೋರ್ಟ್ ವಿಭಾಗೀಯ ಪೀಠ ವಿಚ್ಛೇದನ ಮಂಜೂರು ಮಾಡಿದ್ದು, ನಾಗರತ್ನ ಅವರಿಗೆ ₹2 ಕೋಟಿ ಜೀವನಾಂಶ ನೀಡುವಂತೆ ವಿಜಯ್ ಅವರಿಗೆ ಆದೇಶಿಸಿದೆ. ತೀರ್ಪಿನ ಬಳಿಕ ನಟ ದುನಿಯಾ ವಿಜಯ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಭಾವನಾತ್ಮಕ ಹೇಳಿಕೆ ಹಂಚಿಕೊಂಡಿದ್ದಾರೆ.

ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇನೆ ಎಂದು ಹೇಳಿರುವ ವಿಜಯ್, ಆದೇಶಕ್ಕೆ ಶಿರಸಾಷ್ಟಾಂಗ ಪ್ರಣಾಮಗಳೊಂದಿಗೆ ಶರಣಾಗಿದ್ದೇನೆ ಎಂದು ತಿಳಿಸಿದ್ದಾರೆ. ಕಾನೂನಿನ ಮೇಲಿನ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ ಎಂದಿರುವ ಅವರು, ತಮ್ಮ ಮೇಲಿನ ಮಾನಸಿಕ ಕ್ರೌರ್ಯವನ್ನು ಪರಿಗಣಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಹಾಗೂ ಶಾಂತಿಭೂಷಣ್ ಅವರಿಗೆ ಗೌರವಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.

ತಮ್ಮ ಪರ ವಾದ ಮಂಡಿಸಿದ ಹಿರಿಯ ಕೌನ್ಸಿಲ್ ಶ್ರೀವತ್ಸ ಹಾಗೂ ಯುಕ್ತ ಅನಿಲ್ ಅವರಿಗೂ ವಿಜಯ್ ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ಮಾಧ್ಯಮ ಅಥವಾ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಹೆಣ್ಣುಮಕ್ಕಳು ವಯಸ್ಕರಾಗಿದ್ದು, ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನ ಹೊಂದಿದ್ದಾರೆ. ಅವರಿಗೆ ಯಾವುದೇ ಮುಜುಗರವಾಗಬಾರದು ಎಂಬ ಉದ್ದೇಶದಿಂದ ತಮ್ಮ ವೈಯಕ್ತಿಕ ಸಾಂಸಾರಿಕ ವಿಚಾರಕ್ಕೆ ನ್ಯಾಯಾಲಯ ನೀಡಿರುವ ಆದೇಶವನ್ನು ಆತ್ಮಸಾಕ್ಷಿಯಿಂದ ಸ್ವೀಕರಿಸಿದ್ದೇನೆ ಎಂದು ವಿಜಯ್ ಹೇಳಿದ್ದಾರೆ. ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿರುವುದಾಗಿ ತಿಳಿಸಿರುವ ಅವರು, ಅಭಿಮಾನಿಗಳ ಆಶೀರ್ವಾದ ಹಾಗೂ ಹಾರೈಕೆ ಕೋರಿದ್ದಾರೆ.

1999ರಲ್ಲಿ ನಾಗರತ್ನ ಅವರನ್ನು ವಿವಾಹವಾಗಿದ್ದ ದುನಿಯಾ ವಿಜಯ್ ಅವರಿಗೆ ಮೂವರು ಮಕ್ಕಳಿದ್ದಾರೆ. ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ 2013ರಲ್ಲಿ ಮೊದಲ ಬಾರಿಗೆ ವಿಚ್ಛೇದನ ಅರ್ಜಿ ಸಲ್ಲಿಸಿ, ಬಳಿಕ ಅದನ್ನು ಹಿಂಪಡೆದಿದ್ದರು. 2018ರಲ್ಲಿ ಮಾನಸಿಕ ಕ್ರೌರ್ಯ ಆಧಾರದ ಮೇಲೆ ಮತ್ತೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು.

2024ರಲ್ಲಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ತೀರ್ಪಿನಿಂದಾಗಿ ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ನಡುವಿನ ಸುದೀರ್ಘ ಕಾನೂನು ಹೋರಾಟ ಅಂತ್ಯಗೊಂಡಿದೆ.

ಸ್ಟಾಲಿನ್ʼಗೆ ಹಿನ್ನಡೆ: TVK ಶಾಸಕ ವಿ.ಎಸ್. ಬಾಬು ಗೆಲುವು ರದ್ದು ಕೋರಿದ್ದ ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್!

0

ಚೆನ್ನೈ: ತಾನು ಪ್ರತಿನಿಧಿಸುತ್ತಿದ್ದ ಕೊಳತ್ತೂರು ಕ್ಷೇತ್ರದಲ್ಲಿ ಟಿವಿಕೆ ಶಾಸಕ ವಿ.ಎಸ್. ಬಾಬು ಅವರ ಗೆಲುವನ್ನು ಅಸಿಂಧುಗೊಳಿಸುವಂತೆ ಕೋರಿ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರಿದ್ದ ಪೀಠ, ಸ್ಟಾಲಿನ್ ಅವರ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು.

ಈಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಾಬು ಅವರು ಸ್ಟಾಲಿನ್ ಅವರನ್ನು 8,795 ಮತಗಳಿಂದ ಸೋಲಿಸಿದ್ದರು. ಬಾಬು 82,997 ಮತಗಳನ್ನು ಗಳಿಸಿದರೆ, ಸ್ಟಾಲಿನ್ 74,202 ಮತಗಳನ್ನು ಗಳಿಸಿದ್ದರು. 2011ರಲ್ಲಿ ಕೊಳತ್ತೂರು ಕ್ಷೇತ್ರ ರಚನೆಯಾದಾಗಿನಿಂದ ಸತತ ಮೂರು ಚುನಾವಣೆಗಳಲ್ಲಿ ಗೆದ್ದಿದ್ದ ಸ್ಟಾಲಿನ್, ಈ ಬಾರಿ ಮುಖಭಂಗ ಅನುಭವಿಸಿದ್ದರು.

ವಿವಿಪ್ಯಾಟ್, ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್‌ಗಳಲ್ಲಿ ದಾಖಲಾದ ಮತಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳಿವೆಯೆಂದೂ, ಪರಿಶೀಲನೆ ವೇಳೆ ಇವಿಎಂಗಳಲ್ಲಿ ಕಂಡುಬಂದ ತಾಂತ್ರಿಕ ದೋಷಗಳನ್ನು ಚುನಾವಣಾ ಅಧಿಕಾರಿಗಳು ಬಗೆಹರಿಸಿಲ್ಲವೆಂದೂ ಆರೋಪಿಸಿ ಸ್ಟಾಲಿನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿತ್ತು. ಸ್ಟಾಲಿನ್ ಮೇ 7ರಂದು 14 ಇವಿಎಂ ಸೆಟ್‌ಗಳ ಪರಿಶೀಲನೆಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪರಿಶೀಲನಾ ಕಾರ್ಯ ಜುಲೈ 29ರಂದು ಆರಂಭಗೊಂಡು ಆಗಸ್ಟ್ 5ರಂದು ಪೂರ್ಣಗೊಂಡಿತ್ತು. ಚುನಾವಣಾ ಆಯೋಗದ ವಿಳಂಬ, ಚುನಾವಣೆಯನ್ನು ಪ್ರಶ್ನಿಸಲು ನಿಗದಿತ ಅವಧಿಯೊಳಗೆ ಕಾನೂನು ಪರಿಹಾರ ಅನುಸರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ ಎಂದು ಸ್ಟಾಲಿನ್ ವಾದಿಸಿದ್ದರು.

ATMಗೆ ಹಣ ತುಂಬಲು ತೆರಳುತ್ತಿದ್ದ ಬೊಲೆರೋಗೆ KSRTC ಬಸ್ ಡಿಕ್ಕಿ; ಸ್ಥಳದಲ್ಲೇ ವ್ಯಕ್ತಿ ಸಾವು

0

ಹಾಸನ: ಮಂಗಳೂರಿನಿಂದ ಬೆಂಗಳೂರಿನತ್ತ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಎಟಿಎಂಗಳಿಗೆ ಹಣ ತುಂಬಲು ತೆರಳುತ್ತಿದ್ದ ಬೊಲೆರೋ ಪಿಕಪ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪ ನಡೆದ ಅಪಘಾತದಲ್ಲಿ ದಿನೇಶ್ (38) ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಐಸಿಐಸಿಐ ಬ್ಯಾಂಕ್‌ಗೆ ಸೇರಿದ ಬೊಲೆರೋ ಪಿಕಪ್‌ನಲ್ಲಿ ಎಟಿಎಂಗಳಿಗೆ ಹಣ ತುಂಬಲು ತೆರಳಲಾಗುತ್ತಿತ್ತು. ಮಾರನಹಳ್ಳಿ ಬಳಿ ಬಸ್ ಹಾಗೂ ಪಿಕಪ್ ನಡುವೆ ಅಪಘಾತ ಸಂಭವಿಸಿದ್ದು, ವಾಹನದಲ್ಲಿದ್ದ ದಿನೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುಬ್ರಮಣ್ಯ, ವೆಂಕಟರಮಣ, ಜಿತೇಂದ್ರ ಮತ್ತು ದುರ್ಗಾಪ್ರಸಾದ್ ಗಾಯಗೊಂಡಿದ್ದು, ಇವರೆಲ್ಲರೂ ಕೊಡಗು ಹಾಗೂ ಮಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಫುಟ್ ಪಾತ್ ಪಾದಚಾರಿಗಳಿಗಷ್ಟೇ ಮೀಸಲು; ಅತಿಕ್ರಮಣಕ್ಕೆ ಯಾವುದೇ ಅವಕಾಶವಿಲ್ಲ ಎಂದು ದೆಹಲಿ ಹೈಕೋರ್ಟ್

0

ನವದೆಹಲಿ: ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರು ನಡೆದುಹೋಗಲು ಮಾತ್ರ ನಿರ್ಮಿಸಲಾಗಿದ್ದು, ಅವುಗಳನ್ನು ಯಾವುದೇ ರೀತಿಯಲ್ಲಿ ಅತಿಕ್ರಮಿಸಲು ಅವಕಾಶವಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ದೆಹಲಿಯ ಬಸ್ತಿ ನಿವಾಸಿಗಳ ಗುಂಪಾದ ಲೋಹರ್ ಬಸ್ತಿ ಲಾಲ್ ಬಾಗ್ ಆಜಾದ್‌ಪುರ್ ವಿಕಾಸ್ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ಪೀಠ ಇತ್ತೀಚೆಗೆ ನಡೆಸಿತ್ತು. ಸಾರ್ವಜನಿಕ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ನಿರ್ಮಿಸಲಾಗಿದೆ ಎಂದು ಗುರುತಿಸಲಾದ ಕೆಲವು ಜೋಪಡಿಗಳ ತೆರವು ಕಾರ್ಯಾಚರಣೆಗೆ ತಡೆ ನೀಡಲು ನಿರಾಕರಿಸಿದ ಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿತು.

ಜೋಪಡಿಗಳನ್ನು ತೆರವುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದ ಡೆಮಾಲಿಷನ್ ನೋಟಿಸ್ ಪ್ರಶ್ನಿಸಿ ವಿಕಾಸ್ ಸಮಿತಿ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ಅರ್ಜಿದಾರರೇ ಪಾದಚಾರಿ ಮಾರ್ಗದ ಮೇಲೆ ಬಸ್ತಿಗಳನ್ನು ನಿರ್ಮಿಸಿರುವುದನ್ನು ಗಮನಿಸಿದ ಕೋರ್ಟ್, ತಕ್ಷಣದ ಪರಿಹಾರ ನೀಡಲು ನಿರಾಕರಿಸಿತಲ್ಲದೆ, ಪಾದಚಾರಿ ಮಾರ್ಗ ಪಾದಚಾರಿಗಳಿಗಷ್ಟೇ ಸೀಮಿತ ಎಂದು ಸ್ಪಷ್ಟಪಡಿಸಿತು.

ಪಾದಚಾರಿ ಮಾರ್ಗಗಳನ್ನು ವಾಹನ ಸಂಚಾರದಿಂದ ದೂರವಾಗಿ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸಲಾಗುತ್ತದೆಯೇ ಹೊರತು ಅತಿಕ್ರಮಿಸಲು ಅಲ್ಲ ಎಂದು ಹೇಳಿದ ಕೋರ್ಟ್, ಈ ಕಾರಣಗಳಿಂದ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದಿತು.

ಆಗಸ್ಟ್ 7ರಂದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಹೊರಡಿಸಿದ್ದ ತೆರವು ನೋಟಿಸ್ ರದ್ದುಪಡಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು. ಜೋಪಡಿ ನಿವಾಸಿಗಳು ಸರ್ಕಾರಿ ಜಾಗವನ್ನು ಅಕ್ರಮವಾಗಿ ಅತಿಕ್ರಮಿಸಿ ಜೋಪಡಿಗಳನ್ನು ನಿರ್ಮಿಸಿದ್ದಲ್ಲದೆ, ವಿವಿಧ ವ್ಯಾಪಾರ ಚಟುವಟಿಕೆಗಳನ್ನೂ ನಡೆಸುತ್ತಿದ್ದಾರೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಅದೇ ವೇಳೆ, ಬಸ್ತಿಯ ನಿವಾಸಿಗಳ ಸಮೀಕ್ಷೆ ನಡೆಸಿ, ಪುನರ್ವಸತಿಗೆ ಯಾರು ಅರ್ಹರು ಎಂಬುದನ್ನು ನಿರ್ಧರಿಸುವಂತೆ ಹಾಗೂ ಆ ಕ್ರಮಗಳನ್ನು ಕೈಗೊಳ್ಳುವವರೆಗೆ ತೆರವು ನೋಟಿಸ್ ಜಾರಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಅರ್ಜಿದಾರರು ಮಧ್ಯಂತರ ನಿರ್ದೇಶನ ಕೋರಿದ್ದರು. ಆದರೆ ತೆರವು ನೋಟಿಸ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತು. ಆದಾಗ್ಯೂ, ಪುನರ್ವಸತಿ ಕುರಿತ ಅರ್ಜಿದಾರರ ಮನವಿಯನ್ನು 4 ವಾರಗಳೊಳಗೆ ಪರಿಗಣಿಸಿ ನಿರ್ಧಾರ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ನ್ಯಾಯಾಲಯ ನಿರ್ದೇಶನ ನೀಡಿತು. ಇದರ ಹೊರತಾಗಿ ಯಾವುದೇ ಪರಿಹಾರ ಅಥವಾ ಇತರೆ ಆದೇಶ ಪಡೆಯಲು ಅರ್ಜಿದಾರರು ಅರ್ಹರಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

‘ದುನಿಯಾ’ ವಿಜಯ್ – ನಾಗರತ್ನ ದಾಂಪತ್ಯ ಅಂತ್ಯ: 2 ಕೋಟಿ ರೂ. ಜೀವನಾಂಶ ನೀಡಲು ಕೋರ್ಟ್ ಆದೇಶ

ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ದುನಿಯಾ’ ವಿಜಯ್ ಹಾಗೂ ನಾಗರತ್ನ ಅವರ ನಡುವಿನ ಸುದೀರ್ಘ ವೈವಾಹಿಕ ವಿವಾದಕ್ಕೆ ಕರ್ನಾಟಕ ಹೈಕೋರ್ಟ್ ಅಂತಿಮ ತೀರ್ಪು ನೀಡಿದೆ. ಹೈಕೋರ್ಟ್ ವಿಭಾಗೀಯ ಪೀಠ ದಂಪತಿಗೆ ವಿಚ್ಛೇದನ ಮಂಜೂರು ಮಾಡಿದ್ದು, ನಾಗರತ್ನ ಅವರಿಗೆ ₹2 ಕೋಟಿ ಜೀವನಾಂಶ ನೀಡುವಂತೆ ನಟ ವಿಜಯ್ ಅವರಿಗೆ ಆದೇಶಿಸಿದೆ.

ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಹಲವು ವರ್ಷಗಳ ಕಾನೂನು ಹೋರಾಟಕ್ಕೆ ತೆರೆ ಎಳೆಯಲಾಗಿದೆ. ವಿಚಾರಣೆ ವೇಳೆ ಪತ್ನಿ ಹಾಗೂ ಮೂವರು ಮಕ್ಕಳ ಭವಿಷ್ಯವನ್ನು ನ್ಯಾಯಾಲಯ ಪ್ರಮುಖವಾಗಿ ಪರಿಗಣಿಸಿದೆ.

ವಿಜಯ್ ಅವರ ಪ್ರಸ್ತುತ ಸಾಮಾಜಿಕ ಸ್ಥಾನಮಾನ, ವೃತ್ತಿಜೀವನದಿಂದ ಬರುವ ಆದಾಯ ಹಾಗೂ ಹಣಕಾಸಿನ ಪರಿಸ್ಥಿತಿಯನ್ನು ಪರಿಶೀಲಿಸಿ ಜೀವನಾಂಶದ ಮೊತ್ತವನ್ನು ₹2 ಕೋಟಿಗೆ ನಿಗದಿಪಡಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

‘ದುನಿಯಾ’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ ವಿಜಯ್ ಅವರ ವೈಯಕ್ತಿಕ ಜೀವನದ ಈ ವಿವಾದ ದೀರ್ಘಕಾಲದಿಂದ ಕಾನೂನು ಹೋರಾಟದ ಹಂತದಲ್ಲಿತ್ತು. ಇದೀಗ ಹೈಕೋರ್ಟ್ ಆದೇಶದೊಂದಿಗೆ ದಾಂಪತ್ಯ ಸಂಬಂಧ ಅಧಿಕೃತವಾಗಿ ಅಂತ್ಯಗೊಂಡಿದೆ.

1999ರಲ್ಲಿ ನಾಗರತ್ನ ಅವರನ್ನು ವಿವಾಹವಾಗಿದ್ದ ದುನಿಯಾ ವಿಜಯ್, ಬಳಿಕ ವಿಚ್ಛೇದನ ಕೋರಿ 2013ರಲ್ಲಿ ಅರ್ಜಿ ಸಲ್ಲಿಸಿದ್ದರು. ಹಲವು ವರ್ಷಗಳ ವಿಚಾರಣೆ ಮತ್ತು ಕಾನೂನು ಹೋರಾಟದ ಬಳಿಕ ಇದೀಗ ವಿಚ್ಛೇದನ ಮಂಜೂರಾಗಿದೆ.

KPSC ಹಗರಣ: ಗ್ಯಾನೇಂದ್ರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೇಸ್ ದಾಖಲು!

0

ಬೆಂಗಳೂರು: ಕೆಪಿಎಸ್‌ಸಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಅವರಿಗೆ ಮತ್ತೊಂದು ಹಿನ್ನಡೆ ಎದುರಾಗಿದೆ. ಸರ್ಕಾರಿ ಹುದ್ದೆ ಮತ್ತು ಕಚೇರಿಯ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಹಣದ ಆಮಿಷಕ್ಕೆ ಒಳಗಾಗಿ ಸರ್ಕಾರಿ ಹುದ್ದೆಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಎಫ್‌ಐಆರ್‌ನಲ್ಲಿ ಸಂಬಂಧಿತ ಸೆಕ್ಷನ್‌ಗಳನ್ನು ಸೇರಿಸಲಾಗಿದೆ. ಕೆಪಿಎಸ್‌ಸಿ ಕಚೇರಿಯಲ್ಲಿ ಸಿಐಡಿ ಅಧಿಕಾರಿಗಳು ಇಂದು (ಸೆಪ್ಟೆಂಬರ್ 3) ಮಹಜರು ನಡೆಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ಗ್ಯಾನೇಂದ್ರ ಅವರ ಕೊಠಡಿಯಲ್ಲಿ ಈ ಮಹಜರು ನಡೆದಿದ್ದು, ಬಳಿಕ ಸಿಐಡಿ ಅಧಿಕಾರಿಗಳು ಗ್ಯಾನೇಂದ್ರ ಅವರನ್ನು ಕರೆದೊಯ್ದಿದ್ದಾರೆ.

ಹಜ್ ಯಾತ್ರೆಯ ಆಸೆ ವ್ಯಕ್ತಪಡಿಸಿದ ಸಚಿವ ರಾಯರೆಡ್ಡಿ: ಭಿಕ್ಷಾಟನೆಗಿಳಿದ ಹಿಂದೂ ಕಾರ್ಯಕರ್ತರು!

0

ಗದಗ: ಹಜ್ ಯಾತ್ರೆಗೆ ತೆರಳುವ ಆಸೆ ವ್ಯಕ್ತಪಡಿಸಿದ್ದ ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆಯನ್ನು ಖಂಡಿಸಿ ಹಿಂದೂ ಕಾರ್ಯಕರ್ತರು ಗದಗದಲ್ಲಿ ವಿನೂತನ ರೀತಿಯ ಪ್ರತಿಭಟನೆ ನಡೆಸಿದ್ದಾರೆ.

ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಶಿವರಾಮಕೃಷ್ಣ ಸೇವಾ ಸಮಿತಿ ವತಿಯಿಂದ ಭಿಕ್ಷಾಟನೆ ನಡೆಸಿ, ರಾಯರೆಡ್ಡಿ ಅವರ ಹಜ್ ಯಾತ್ರೆಗೆ ಹಣ ಸಂಗ್ರಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಮಾರುಕಟ್ಟೆ ಪ್ರದೇಶದ ವಿವಿಧ ಅಂಗಡಿಗಳಿಗೆ ತೆರಳಿ ಹಣ ಸಂಗ್ರಹಿಸಿದರು. ಸಚಿವ ಬಸವರಾಜ ರಾಯರೆಡ್ಡಿ ಅವರು ಹಜ್ ಯಾತ್ರೆಗೆ ಹೋಗುವ ಆಸೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಅವರ ಯಾತ್ರೆಗೆ ಹಣ ಹೊಂದಿಸುವ ಉದ್ದೇಶದಿಂದ ಈ ರೀತಿಯ ಬಿಕ್ಷಾಟನೆ ನಡೆಸುತ್ತಿದ್ದೇವೆ ಎಂದು ಕಾರ್ಯಕರ್ತರು ವ್ಯಂಗ್ಯವಾಗಿ ಪ್ರತಿಭಟನೆ ನಡೆಸಿದರು.

ಕೊಪ್ಪಳ ಜಿಲ್ಲೆಯಲ್ಲಿ ನಡೆದ ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಅವರು ಹಜ್ ಯಾತ್ರೆಗೆ ತೆರಳುವ ಕುರಿತು ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಸಚಿವರ ಈ ಹೇಳಿಕೆ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಗದಗದಲ್ಲೂ ಅದರ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

ಮುಸ್ಲಿಂ ಓಲೈಕೆಯ ಭರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸಚಿವ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಸಚಿವ ಬಸವರಾಜ ರಾಯರೆಡ್ಡಿ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ರಾಯರೆಡ್ಡಿ ಅವರು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು, ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ವೇಳೆ ಶಿವರಾಮಕೃಷ್ಣ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದು, ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಾಲಾಕೋಟ್ ದಾಳಿ ಹೀರೋ ಅಭಿನಂದನ್ ವರ್ಧಮಾನ್ʼಗೆ ಹೊಸ ಜವಾಬ್ದಾರಿ; ಈಗ FLY91 ಏರ್ʼಲೈನ್ಸ್ ಪೈಲಟ್!

0

ನವದೆಹಲಿ: ಪಾಕಿಸ್ತಾನದ ವಿರುದ್ಧದ ಕಾರ್ಯಾಚರಣೆ ವೇಳೆ ಮಿಗ್-21 ಸಮೇತ ಶತ್ರು ರಾಷ್ಟ್ರದ ಗಡಿಯೊಳಗೆ ನುಗ್ಗಿ ಪಾಕಿಸ್ತಾನ ವಾಯುಪಡೆಯ ವಿಮಾನ ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ ಮಾಜಿ ಗ್ರೂಪ್ ಕ್ಯಾಪ್ಟನ್ ಹಾಗೂ ವೀರಚಕ್ರ ಪುರಸ್ಕೃತ ಅಭಿನಂದನ್ ವರ್ಧಮಾನ್ ಇದೀಗ ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ ಫ್ಲೈ91ಗೆ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ.

ಸದ್ಯ ಅವರು ಗೋವಾ ಮತ್ತು ಹೈದರಾಬಾದ್ ಮಾರ್ಗದಲ್ಲಿ ಎಟಿಆರ್ ವಿಮಾನ ಸಂಚರಿಸುವ ಕುರಿತು ತರಬೇತಿಯಲ್ಲಿ ನಿರತರಾಗಿದ್ದು, ತರಬೇತಿ ಪೂರ್ಣಗೊಂಡ ಬಳಿಕ ವಿಮಾನ ಸಂಚಾರ ನಡೆಸಲಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ಅಭಿನಂದನ್ ಅವರು 2026ರ ಆಗಸ್ಟ್‌ನಲ್ಲಿ ಫ್ಲೈ91 ಸಂಸ್ಥೆಗೆ ಸೇರ್ಪಡೆಯಾಗಿದ್ದಾರೆ.

ಅಭಿನಂದನ್ ವರ್ಧಮಾನ್ ಅವರು 2019ರ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ವೈಮಾನಿಕ ಸಂಘರ್ಷದ ಬಳಿಕ ದೇಶಾದ್ಯಂತ ಅತ್ಯಂತ ಪರಿಚಿತ ಮುಖವಾಗಿ ಗುರುತಿಸಿಕೊಂಡಿದ್ದರು. ಅಭಿನಂದನ್ ಭಾಗವಹಿಸಿದ್ದ ಈ ವೈಮಾನಿಕ ಕಾಳಗ, ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಯೋತ್ಪಾದಕ ಗುರಿಗಳ ಮೇಲೆ ವಾಯುದಾಳಿ ನಡೆಸಿದ ಒಂದು ದಿನದ ಬಳಿಕ ನಡೆದಿತ್ತು. 2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 40 ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಬಾಲಾಕೋಟ್‌ನಲ್ಲಿ ವಾಯುದಾಳಿ ನಡೆಸಿತ್ತು.

2019ರ ಫೆಬ್ರವರಿ 27ರಂದು ಪಾಕಿಸ್ತಾನದ ವಿಮಾನಗಳೊಂದಿಗೆ ನಡೆದ ವೈಮಾನಿಕ ಕಾಳಗದಲ್ಲಿ ಮಿಗ್-21 ಬೈಸನ್ ಯುದ್ಧವಿಮಾನ ಹಾರಿಸುತ್ತಿದ್ದ ಅಭಿನಂದನ್, ಪಾಕಿಸ್ತಾನದ ಒಂದು ಯುದ್ಧವಿಮಾನ ಹೊಡೆದುರುಳಿಸಿದ್ದರು. ಈ ವೇಳೆ ಅವರ ವಿಮಾನಕ್ಕೂ ಕ್ಷಿಪಣಿ ಅಪ್ಪಳಿಸಿ ಹಾನಿಗೊಳಗಾಗಿದ್ದರಿಂದ ಅಭಿನಂದನ್ ಪ್ಯಾರಾಶೂಟ್ ಮೂಲಕ ಹೊರಗೆ ಜಿಗಿಯಬೇಕಾಯಿತು. ಬಳಿಕ ಪಾಕಿಸ್ತಾನದ ಭೂಪ್ರದೇಶದಲ್ಲಿ ಇಳಿದ ಅವರು ಅಲ್ಲಿನ ಸೇನೆಯ ವಶಕ್ಕೆ ಸಿಲುಕಿದ್ದರು. ಸುಮಾರು 60 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್ ಅವರನ್ನು 2019ರ ಮಾರ್ಚ್ 1ರಂದು ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಯಿತು.

2019ರ ವೈಮಾನಿಕ ಕಾರ್ಯಾಚರಣೆಯಲ್ಲಿ ತೋರಿದ ಶೌರ್ಯ ಮತ್ತು ಕರ್ತವ್ಯಪ್ರಜ್ಞೆಗಾಗಿ ಅಭಿನಂದನ್ ವರ್ಧಮಾನ್ ಅವರಿಗೆ 2021ರಲ್ಲಿ ವೀರಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗೋವಾ ಮೂಲದ ಫ್ಲೈ91 ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾಗಿದ್ದು, 2024ರ ಮಾರ್ಚ್‌ನಲ್ಲಿ ವಾಣಿಜ್ಯ ವಿಮಾನಯಾನ ಸೇವೆ ಆರಂಭಿಸಿತು. ಸಂಸ್ಥೆ ಪ್ರಸ್ತುತ ಆರು ಎಟಿಆರ್ 72-600 ವಿಮಾನಗಳನ್ನು ಹೊಂದಿದ್ದು, ಗೋವಾ ಮತ್ತು ಹೈದರಾಬಾದ್‌ನಲ್ಲಿ ಕಾರ್ಯಾಚರಣಾ ನೆಲೆಗಳನ್ನು ಹೊಂದಿದೆ. ಸಣ್ಣ ನಗರಗಳನ್ನು ಪ್ರಮುಖ ವಿಮಾನಯಾನ ಕೇಂದ್ರಗಳೊಂದಿಗೆ ಸಂಪರ್ಕಿಸುವ ಮೂಲಕ ಪ್ರಾದೇಶಿಕ ವಾಯುಸಂಪರ್ಕ ಹೆಚ್ಚಿಸುವುದೇ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.

KPSC ಹಗರಣಕ್ಕೆ ಬಿಗ್ ಟ್ವಿಸ್ಟ್; ಕನ್ನಾಳೆ ಮನೆಯಲ್ಲಿ 15 ಗ್ರೂಪ್-ಬಿ ಹಾಲ್ ಟಿಕೆಟ್ ಪತ್ತೆ, KAS ಪರೀಕ್ಷೆಗಳಲ್ಲೂ ಅಕ್ರಮದ ಶಂಕೆ

0

ಬೆಂಗಳೂರು: ಕೆಪಿಎಸ್‌ಸಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ದಾಳಿ ನಡೆಸಿದ ವೇಳೆ 15 ಗ್ರೂಪ್ ಬಿ ಹಾಲ್ ಟಿಕೆಟ್‌ಗಳು ಪತ್ತೆಯಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದ ಸಿಐಡಿ ಅಧಿಕಾರಿಗಳು, ಬಸವರಾಜ್ ಕನ್ನಾಳೆ ಮನೆಯಲ್ಲಿ ಸಿಕ್ಕ ಸಾಕ್ಷ್ಯಗಳನ್ನು ಕಂಡು ದಂಗಾಗಿದ್ದಾರೆ. ಶೋಧದ ವೇಳೆ ಬಸವರಾಜ್ ಮನೆಯಲ್ಲಿ ಬರೋಬ್ಬರಿ 15 ಪರೀಕ್ಷೆಗಳ ಹಾಲ್ ಟಿಕೆಟ್‌ಗಳು ಪತ್ತೆಯಾಗಿದ್ದು, ಕೇವಲ ಪಶು ವೈದ್ಯಾಧಿಕಾರಿ ಹುದ್ದೆ ಮಾತ್ರವಲ್ಲದೆ ಬಿ-ಗ್ರೂಪ್ ಹುದ್ದೆಗಳು ಹಾಗೂ ಕೆಎಎಸ್ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳೂ ಡೀಲ್ ಆಗಿರುವ ಅನುಮಾನ ಸಿಐಡಿಗೆ ಕಾಡುತ್ತಿದೆ.

ಕೆಎಎಸ್ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ ಹೀಗೆ ಮೂರೂ ಹಂತಗಳಿಗೆ ಒಂದೇ ಪ್ಯಾಕೇಜ್ ದರ ನಿಗದಿಪಡಿಸಿ ಅಕ್ರಮ ಎಸಗಿರುವ ಸಾಧ್ಯತೆಯಿದೆ ಎಂದು ಸಿಐಡಿ ಶಂಕಿಸಿದೆ. ಸದ್ಯ ಪಶು ವೈದ್ಯಾಧಿಕಾರಿ ಹುದ್ದೆಯ ಅಕ್ರಮ ತನಿಖೆ ಮುಗಿಯುತ್ತಿದ್ದಂತೆ, ಉಳಿದ ಪರೀಕ್ಷೆಗಳ ಹಗರಣದ ಜಾಡು ಹಿಡಿಯಲು ಸಿಐಡಿ ಮುಂದಾಗಿದೆ. ರಾಜ್ಯ ಸರ್ಕಾರದಿಂದ ಅನುಮತಿ ದೊರೆತರೆ ಕೆಎಎಸ್ ಹುದ್ದೆಗಳ ನೇಮಕಾತಿ ಅಕ್ರಮದ ಕುರಿತು ಪೂರ್ಣ ಪ್ರಮಾಣದ ತನಿಖೆ ನಡೆಸಲು ಸಿಐಡಿ ಯೋಜಿಸಿದೆ.

ಗ್ರಾಚ್ಯುಟಿ ಹಣದಿಂದ ಬಾಕಿ ಕಡಿತ ಸಲ್ಲದು: ಕೆಎಸ್‌ಆರ್‌ಟಿಸಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್

0

ಬೆಂಗಳೂರು: ನೌಕರರಿಗೆ ಪಾವತಿಸಬೇಕಾದ ಗ್ರಾಚ್ಯುಟಿ ಮೊತ್ತದಿಂದ ಸಂಸ್ಥೆಗೆ ಬರಬೇಕಾದ ಬಾಕಿ, ಬಡ್ಡಿ ಸೇರಿದಂತೆ ಯಾವುದೇ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಸ್ಥೆಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಕಾರ್ಮಿಕ ಇಲಾಖೆಯ ಮೇಲ್ಮನವಿ ಪ್ರಾಧಿಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮಂಡ್ಯ ವಿಭಾಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ ಹಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

1972ರ ಗ್ರಾಚ್ಯುಟಿ ಪಾವತಿ ಕಾಯ್ದೆಯ ಸೆಕ್ಷನ್ 4(6)ರ ಪ್ರಕಾರ, ಸಂಸ್ಥೆಗೆ ನೌಕರನಿಂದ ತೀವ್ರ ಆರ್ಥಿಕ ನಷ್ಟವಾಗಿದ್ದರೆ ಅಥವಾ ನೌಕರ ಸಮಾಜಘಾತುಕ ನಡವಳಿಕೆಯಿಂದ ವಜಾಗೊಂಡಿದ್ದರೆ ಮಾತ್ರ ಗ್ರಾಚ್ಯುಟಿ ತಡೆಯಲು ಅವಕಾಶವಿದೆ ಎಂದು ಪೀಠ ಸ್ಪಷ್ಟಪಡಿಸಿದೆ. ಸಂಸ್ಥೆ ಹೊರಡಿಸುವ ಆಂತರಿಕ ಸುತ್ತೋಲೆಗಳು ಮೂಲ ಕಾಯ್ದೆಯ ಶಾಸನಬದ್ಧ ನಿಯಮಗಳನ್ನು ಉಲ್ಲಂಘಿಸಲು ಅವಕಾಶವಿಲ್ಲ ಎಂದು ಹೇಳಿರುವ ಪೀಠ, ಮರುಸೇರ್ಪಡೆಯಾದ ನೌಕರನಿಂದ ಬಡ್ಡಿ ವಸೂಲಿ ಮಾಡುವ ಸಂಸ್ಥೆಯ 2007ರ ಸುತ್ತೋಲೆ ಕಾನೂನುಬದ್ಧವಾಗಿದ್ದರೂ, ಆ ಬಡ್ಡಿ ಬಾಕಿಯನ್ನು ಶಾಸನಬದ್ಧವಾಗಿ ರಕ್ಷಿಸಲ್ಪಟ್ಟಿರುವ ಗ್ರಾಚ್ಯುಟಿ ಹಣದಿಂದ ಕಡಿತಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಸಂಸ್ಥೆಗೆ ನೌಕರನಿಂದ ಯಾವುದೇ ಬಡ್ಡಿ ಅಥವಾ ಬಾಕಿ ಬರಬೇಕಿದ್ದರೆ, ಅದನ್ನು ಗ್ರಾಚ್ಯುಟಿ ಹೊರತುಪಡಿಸಿ ನೌಕರನಿಗೆ ಸಿಗಬೇಕಾದ ಇತರ ಸೌಲಭ್ಯಗಳಿಂದ ಅಥವಾ ಕಾನೂನುಬದ್ಧ ಇತರ ಮಾರ್ಗಗಳ ಮೂಲಕ ವಸೂಲಿ ಮಾಡಬಹುದೇ ಹೊರತು ಗ್ರಾಚ್ಯುಟಿ ಹಣ ಕಡಿತಗೊಳಿಸುವಂತಿಲ್ಲ ಎಂದು ತಿಳಿಸಿರುವ ಪೀಠ, ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ, ಕಾರ್ಮಿಕ ಇಲಾಖೆಯ ನಿಯಂತ್ರಣ ಪ್ರಾಧಿಕಾರ ನೀಡಿದ್ದ 1,00,248 ರೂಪಾಯಿ ಗ್ರಾಚ್ಯುಟಿ ಬಾಕಿ ಮತ್ತು ಬಡ್ಡಿ ಪಾವತಿ ಆದೇಶವನ್ನು ಪೀಠ ಎತ್ತಿಹಿಡಿದಿದೆ.

ಪ್ರಕರಣದ ಹಿನ್ನೆಲೆ: ಮಂಡ್ಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರಾಚಾರಿ ಅವರನ್ನು 1997ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಸಂಸ್ಥೆ 46,910 ರೂಪಾಯಿ ಗ್ರಾಚ್ಯುಟಿ ಪಾವತಿಸಿತ್ತು.

ಬಳಿಕ ವಜಾ ಆದೇಶವನ್ನು ಚಂದ್ರಶೇಖರಾಚಾರಿ ಕಾರ್ಮಿಕ ಇಲಾಖೆಯ ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ ಪ್ರಾಧಿಕಾರ ಮತ್ತೆ ಸೇವೆಗೆ ನಿಯೋಜಿಸಿಕೊಳ್ಳುವಂತೆ ಸೂಚಿಸಿತ್ತು. ಪರಿಣಾಮ 2000ನೇ ಇಸವಿಯಲ್ಲಿ ಅವರು ಮರಳಿ ಸೇವೆಗೆ ಸೇರಿಕೊಂಡಿದ್ದರು. ಸಂಸ್ಥೆಯ ನಿಯಮಾವಳಿ ಹಾಗೂ 2007ರ ಸುತ್ತೋಲೆಯಂತೆ, ಮರುಸೇರ್ಪಡೆಯಾದಾಗ ಮೊದಲು ಪಡೆದ ಗ್ರಾಚ್ಯುಟಿ ಮೊತ್ತವನ್ನು ಶೇ. 11ರಷ್ಟು ಬಡ್ಡಿಯೊಂದಿಗೆ ಸಂಸ್ಥೆಗೆ ಮರುಪಾವತಿಸಬೇಕಿತ್ತು. ಆದರೆ ನೌಕರ ಈ ಮೊತ್ತವನ್ನು ಪಾವತಿಸದೆ 2008ರಲ್ಲಿ ವಯೋನಿವೃತ್ತಿ ಹೊಂದಿದ್ದರು. ಸಂಸ್ಥೆ ನಿವೃತ್ತಿ ಬಳಿಕ ಪಾವತಿಸಬೇಕಿದ್ದ ಒಟ್ಟು ಗ್ರಾಚ್ಯುಟಿ ಮೊತ್ತದಿಂದ ನೌಕರ ಪಾವತಿಸಬೇಕಿದ್ದ 43,048 ರೂಪಾಯಿ ಬಡ್ಡಿ ಹಣವನ್ನು ಕಡಿತಗೊಳಿಸಿತ್ತು.

ಇದನ್ನು ಪ್ರಶ್ನಿಸಿ ನೌಕರ ಗ್ರಾಚ್ಯುಟಿ ಪಾವತಿ ಕಾಯ್ದೆಯ ನಿಯಂತ್ರಣ ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರವನ್ನು ಸಂಪರ್ಕಿಸಿದ್ದರು. ಎರಡೂ ಪ್ರಾಧಿಕಾರಗಳು ಕಡಿತಗೊಳಿಸಿದ ಹಣವನ್ನು ಶೇ. 10ರಷ್ಟು ಬಡ್ಡಿಯೊಂದಿಗೆ ನೌಕರನಿಗೆ ಪಾವತಿಸುವಂತೆ ಕೆಎಸ್‌ಆರ್‌ಟಿಸಿಗೆ ಆದೇಶಿಸಿದ್ದವು. ಈ ಆದೇಶವನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.