Home Blog Page 30

ಅರಿಯರ್ಸ್ ಮತ್ತು ವೇತನ ಪರಿಷ್ಕರಣೆಗಾಗಿ ಸಿಡಿದೆದ್ದ ನೌಕರರು: ಫ್ರೀಡಂ ಪಾರ್ಕ್‌ನಲ್ಲಿ ಮಹಾ ಪ್ರತಿಭಟನೆ, ಬಸ್ ಸಂಚಾರ ಸ್ಥಗಿತ ಭೀತಿ

0

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಡಿದೆದ್ದಿರುವ ಸಾರಿಗೆ ನೌಕರರನ್ನು ಸರ್ಕಾರ ಎಷ್ಟೇ ಮನವೊಲಿಸಲು ಯತ್ನಿಸಿದರೂ ಫಲಕಾರಿಯಾಗಿಲ್ಲ. ಸರ್ಕಾರ ನೀಡಿರುವ ಹೊಸ ಆಫರ್‌ಗೂ ಬಗ್ಗದ ನೌಕರರು ಅದನ್ನು ತಿರಸ್ಕರಿಸಿ, ಪ್ರತಿಭಟನೆ ಮಾಡಿಯೇ ತೀರುತ್ತೇವೆ ಎಂಬ ಹಠಕ್ಕೆ ಬಿದ್ದಿದ್ದಾರೆ.

ಸಾರಿಗೆ ನೌಕರರು ಮತ್ತು ಸರ್ಕಾರದ ನಡುವಿನ ಜಗ್ಗಾಟ ಹೊಂದಾಣಿಕೆ ಹಂತ ತಲುಪದೆ ಮುಂದುವರಿದಿದೆ. ತಮ್ಮ ಸಂಪೂರ್ಣ ಬೇಡಿಕೆ ಈಡೇರಲೇಬೇಕು ಎಂಬ ಒತ್ತಾಯದೊಂದಿಗೆ ನೌಕರರು ಇಂದು ‘ಬೆಂಗಳೂರು ಚಲೋ’ಗೆ ಕರೆ ನೀಡಿದ್ದಾರೆ.

ನೌಕರರ ಬೇಡಿಕೆ ಪ್ರಕಾರ 38 ತಿಂಗಳ ಅರಿಯರ್ಸ್ ಹಾಗೂ 2024ರಿಂದಲೇ ವೇತನ ಪರಿಷ್ಕರಣೆ ಜಾರಿಗೊಳಿಸಬೇಕೆಂದು ಆಗ್ರಹಿಸಲಾಗಿದೆ. ಆದರೆ ಸರ್ಕಾರ 26 ತಿಂಗಳ ಅರಿಯರ್ಸ್ ನೀಡುವ ಜೊತೆಗೆ 2025ರಿಂದ ವೇತನ ಪರಿಷ್ಕರಣೆ ಜಾರಿಗೊಳಿಸುವ ಪ್ರಸ್ತಾವವನ್ನು ಮುಂದಿಟ್ಟಿತ್ತು. ಈ ಆಫರ್ ಅನ್ನು ನೌಕರರು ತಿರಸ್ಕರಿಸಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೌಕರರು ಪ್ರತಿಭಟನೆ ನಡೆಸಲಿದ್ದಾರೆ. ಸಂಜೆ 4 ಗಂಟೆಯವರೆಗೆ ಸರ್ಕಾರಕ್ಕೆ ಬೇಡಿಕೆ ಈಡೇರಿಸಲು ಅವಕಾಶ ನೀಡಲಾಗಿದೆ. ಸಂಜೆ ಒಳಗಾಗಿ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ, ಇಂದು ರಾತ್ರಿ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸುವ ಸಾಧ್ಯತೆ ಇದೆ.

ಈ ಬೆಳವಣಿಗೆಯಿಂದ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಎದುರಾಗಿದೆ.

 

ಬೆಂಗಳೂರಿನ ಹೊರವಲಯದಲ್ಲಿ ಭೀಕರ ಕೃತ್ಯ: ಚಿನ್ನಾಭರಣಕ್ಕಾಗಿ ವೃದ್ಧೆಯ ಕೊಲೆ, ಆರೋಪಿಗಳು ಪರಾರಿ

0

ನೆಲಮಂಗಲ: ನಗರದ ಪೇಟೆ ಬೀದಿಯಲ್ಲಿ ಕತ್ತು ಹಿಸುಕಿ ವೃದ್ಧೆಯನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿ ಆರೋಪಿಗಳು ಪರಾರಿಯಾಗಿರುವ ಘಟನೆ ನಡೆದಿದೆ.

ಶೋಭಾ (69) ಮೃತ ಮಹಿಳೆ. ವೃದ್ಧ ದಂಪತಿ ಇಬ್ಬರೇ ಮನೆಯಲ್ಲಿದ್ದ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿದ್ದಾರೆ. ಮೃತ ಮಹಿಳೆಯ ಪತಿ ರಂಗನಾಥ್ ವೀಲ್ ಚೇರ್‌ನಲ್ಲಿ ಇದ್ದರು ಎಂದು ತಿಳಿದುಬಂದಿದೆ.

ಮನೆಯಲ್ಲಿ ವೃದ್ಧ ದಂಪತಿ ಮಾತ್ರ ಇರುವುದನ್ನು ಗಮನಿಸಿದ್ದ ದರೋಡೆಕೋರರು ಚಿನ್ನಾಭರಣದ ಮೇಲೆ ಕಣ್ಣು ಹಾಕಿದ್ದರು ಎನ್ನಲಾಗಿದೆ. ಬುಧವಾರ (ಫೆ.18) ಸಂಜೆ ಮನೆಗೆ ನುಗ್ಗಿ ವೃದ್ಧೆಯ ಕತ್ತು ಹಿಸುಕಿ, ತಲೆಗೆ ಹೊಡೆದು ಕೊಲೆ ಮಾಡಿ ಬಳಿಕ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಚಿನ್ನಾಭರಣ ದೋಚಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆನೆಲಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳವನ್ನು ಕರೆಸಲಾಗಿದೆ. ದರೋಡೆ ಕುರಿತ ಮಾಹಿತಿ ಸಂಗ್ರಹಿಸಲು ಪೊಲೀ

 

ಹಾಸನ ಫ್ಯಾಕ್ಟರಿಯಲ್ಲಿ ಅನುಮಾನಾಸ್ಪದ ಸಾವು: ನೀರಿನ ಸಂಪ್‌ನಲ್ಲಿ ಎಲೆಕ್ಟ್ರಿಷಿಯನ್ ಮೃತದೇಹ ಪತ್ತೆ

0

ಹಾಸನ: ಹಾಸನ ಹೊರವಲಯದ ಹನುಮಂತಪುರ ಬಳಿಯ ಕಾರ್ಖಾನೆಯಲ್ಲಿ ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಪುನೀತ್ (27) ಮೃತ ಯುವಕ. ಕಳೆದ 6 ತಿಂಗಳಿನಿಂದ ಅವರು ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ಎಂದಿನಂತೆ ಸಮವಸ್ತ್ರ ಧರಿಸಿ ಕೆಲಸಕ್ಕೆ ತೆರಳಿದ್ದರು. ಆದರೆ ಮಧ್ಯಾಹ್ನ ವೇಳೆಗೆ ಕಾರ್ಖಾನೆಯ ನೀರಿನ ಸಂಪ್‌ನಲ್ಲಿ ನಿಂತಿರುವ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ರಾತ್ರಿ ಪುನೀತ್ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಪೊಲೀಸರು ಸಾಗಿಸಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಶವಾಗಾರದ ಬಳಿ ನೂರಾರು ಮಂದಿ ಜಮಾಯಿಸಿದರು.

ಘಟನೆ ಕುರಿತು ಕಾರ್ಖಾನೆ ಮೇಲಾಧಿಕಾರಿಗಳ ವಿರುದ್ಧ ಕುಟುಂಬಸ್ಥರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನವೇ ಮೃತದೇಹ ಪತ್ತೆಯಾದರೂ ತಕ್ಷಣ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ. ಬೆಳಿಗ್ಗೆ ಸಮವಸ್ತ್ರದಲ್ಲೇ ಕೆಲಸಕ್ಕೆ ತೆರಳಿದ್ದ ಪುನೀತ್ ಮೃತಪಟ್ಟ ಬಳಿಕ ಸಮವಸ್ತ್ರ ಬದಲಾಯಿಸಲಾಗಿದೆ ಎಂದು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಇದು ಸಹಜ ಸಾವು ಅಲ್ಲ, ಕೊಲೆ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆಯಲ್ಲಿ ಶೇ.80ಕ್ಕೂ ಹೆಚ್ಚು ಹೊರರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಪದೇ ಪದೇ ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪುನೀತ್ ಸ್ಥಳೀಯರಾಗಿರುವುದರಿಂದ ಪ್ರಕರಣವನ್ನು ಮುಚ್ಚಿಹಾಕಲು ಸಾಧ್ಯವಾಗದೇ ನಾಟಕವಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಮೃತ ಪುನೀತ್ ಕಳೆದ ವಾರ ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ದೇವಸ್ಥಾನದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಫೆ.15ರಂದು ಗ್ರಾಮಕ್ಕೆ ಮರಳಿದ್ದರು. ಅವರಿಗೆ ಯಾವುದೇ ದುಶ್ಚಟಗಳೂ ಇರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಒಬ್ಬನೇ ಮಗನನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

ಅಹಿಂದ ಸಂಘಟನೆಯ ಜಿಲ್ಲಾ ಅಧ್ಯಕ್ಷರಾಗಿ ಇಮಾಮ್ ಕಲೇಗಾರ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ಅಲ್ಪಸಂಖ್ಯಾತರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ರಾಜ್ಯ ಘಟಕ ರಾಜ್ಯ ಸಮಿತಿಯು ಇಮಾಮಸಾಬ ಬಿ. ಕಲೇಗಾರ ಅವರನ್ನು ರಾಷ್ಟ್ರೀಯ ಅಹಿಂದ ಸಂಘಟನೆ ಗದಗ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಮುತ್ತಣ್ಣ ಎಸ್. ಶಿವಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾಜಮುಖಿ ಕಾರ್ಯದಿಂದ ಸಂತೃಪ್ತಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜನಮುಖಿ ಹಾಗೂ ಸಮಾಜಮುಖಿಯಾಗಿ ಕಾರ್ಯ ಮಾಡುವ ವ್ಯಕ್ತಿ ವೈಯಕ್ತಿಕವಾಗಿ ಸಂತೃಪ್ತಿಯ ಭಾವವನ್ನು ಹೊಂದಿದ್ದರೆ, ಅಂತಹ ವ್ಯಕ್ತಿ ಸಮಾಜದಲ್ಲಿ ಜನಮನ್ನಣೆಗೆ ಪಾತ್ರನಾಗುತ್ತಾನೆ ಎಂದು ಗದುಗಿನ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಶಿವಪ್ಪ ಕುರಿ ಹೇಳಿದರು.

ಅವರು ಬುಧವಾರ ಬೆಟಗೇರಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆರ್.ಆರ್. ಕಾಶಪ್ಪನವರ ಅವರು ಸೇವಾ ನಿವೃತ್ತರಾದ ನಿಮಿತ್ತ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರಿ ಸೇವೆಯಲ್ಲಿರುವವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವ ಮೂಲಕ ಆತ್ಮತೃಪ್ತಿಯನ್ನು ಹೊಂದಬೇಕು. ಕರ್ತವ್ಯದೊಂದಿಗೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ಆಸಕ್ತಿ ಹೊಂದಿ ಕಾರ್ಯ ನಿರ್ವಹಿಸಬೇಕು. ಆರ್.ಆರ್. ಕಾಶಪ್ಪನವರ ಆರಂಭದಲ್ಲಿ ಇಲ್ಲಿ ಸೇವೆ ಸಲ್ಲಿಸಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾದವರು. ಅವರಿನ್ನು ಸಂಪೂರ್ಣವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಂತಾಗಲಿ ಎಂದರು.

ಪ್ರೊ. ಪಿ. ಕೇಶವ, ಡಾ. ವಿರೂಪಾಕ್ಷಿ ಮುಳಗುಂದ, ಡಾ. ಕಸ್ತೂರಿ ದಳವಾಯಿ, ಡಾ. ಹನಮಂತಪ್ಪ ಕಲ್ಮನಿ, ಪ್ರೊ. ಖಲೀಲಅಹ್ಮದ್ ಚಿಕ್ಕೇರೂರ, ಆರ್.ಆರ್. ಕಾಶಪ್ಪನವರರ ಕರ್ತವ್ಯ ನಿರ್ವಹಣೆ, ವ್ಯಕ್ತಿತ್ವವನ್ನು ಬಣ್ಣಿಸಿದರು.

ಆರ್.ಆರ್. ಕಾಶಪ್ಪನವರ ಹಾಗೂ ಸುಮಿತ್ರಾ ದಂಪತಿಯನ್ನು ಕಾಲೇಜಿನ ಆಡಳಿತ ಸಿಬ್ಬಂದಿ ವರ್ಗದವರು ಹಾಗೂ ಗೆಳೆಯರ ಬಳಗದವರು ಸನ್ಮಾನಿಸಿ ಗೌರವಿಸಿದರು. ಕವಿತಾ ಜಂಗವಾಡ ಪ್ರಾರ್ಥಿಸಿದರು, ಅಶ್ವಿನಿ ಉಪ್ಪಿನ ಸ್ವಾಗತಿಸಿ ಪರಿಚಯಿಸಿದರು. ಡಾ. ಕಸ್ತೂರಿ ದಳವಾಯಿ ನಿರೂಪಿಸಿದರು. ಜ್ಯೋತಿ ಬೋಳಣ್ಣವರ ವಂದಿಸಿದರು.

ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್

0

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಗಳ ಸಹಯೋಗದಲ್ಲಿ ಧಾರವಾಡ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದ್ದು, ಉದ್ಯೋಗ ಆಕಾಂಕ್ಷಿಗಳು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಯಶಸ್ವಿಗೆ ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಹೇಳಿದರು.

ಅವರು ಬುಧವಾರ ಸಂಜೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜನೆ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ಜರುಗಿಸಿ ಮಾತನಾಡಿದರು.

ಧಾರವಾಡ ಜಿಲ್ಲಾ ಉದ್ಯೋಗ ಮೇಳದಲ್ಲಿ ಜಿಲ್ಲೆಯ ಎಲ್ಲ ಪದವಿ, ಐಟಿಐ ಕಾಲೇಜುಗಳ ಪದವೀಧರ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮಾಹಿತಿ ನೀಡಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅರ್ಹತೆ ಇರುವ ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗ ದೊರೆಯಬೇಕು. ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲವಾಗಲು ಸರ್ಕಾರದಿಂದಲೇ ಉದ್ಯೋಗ ಮೇಳ ಆಯೋಜಿಸಿ, ಖಾಸಗಿ ಕೈಗಾರಿಕೆಗಳಲ್ಲಿ ಉದ್ಯೋಗ ಕಲ್ಪಿಸಲು ಈ ಉದ್ಯೋಗ ಮೇಳ ಸಂಘಟಿಸಲಾಗುತ್ತಿದೆ ಎಂದು ಹೇಳಿದರು.

ಉದ್ಯೋಗ ಮೇಳಕ್ಕೆ ಆಗಮಿಸುವವರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಕೊಳ್ಳಲು ಪ್ರೋತ್ಸಾಹಿಸಬೇಕು. ಮೇಳಕ್ಕೆ ಆಗಮಿಸುವವರಿಗೆ ಸರಿಯಾದ ಮಾಹಿತಿ ಸಿಗುವಂತೆ ಸಹಾಯ ಕೇಂದ್ರಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಲಲಿತಾ ಲಮಾಣಿ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಇದ್ದರು. ಸಭೆಯಲ್ಲಿ ಉದ್ಯೋಗ ಮೇಳದ ಸಿದ್ಧತೆಗಳ ಕುರಿತು ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿದರು. ಜಿ.ಪಂ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ ಸ್ವಾಗತಿಸಿದರು. ಜಿಲ್ಲಾ ಯೋಜನಾ ವ್ಯವಸ್ಥಾಪಕ ವಿನೋದ ಕಂಠಿ ನಿರ್ವಹಿಸಿದರು. ವಿನೋದ ಗಾಮನಗಟ್ಟಿ ವಂದಿಸಿದರು.

ಸಭೆಯಲ್ಲಿ ಎಲ್ಲ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಕೈಗಾರಿಕಾ ಇಲಾಖೆ, ಕಾರ್ಮಿಕ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಐಟಿಐ, ಇಂಜಿನಿಯರಿಂಗ್ ಕಾಲೇಜುಗಳು, ತಾರಿಹಾಳ ಮತ್ತು ಬೇಲೂರು ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಉದ್ಯೋಗ ಮೇಳದ ಯಶಸ್ವಿ ಆಯೋಜನೆಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿದಿನ ಪ್ರತ್ಯೇಕವಾಗಿ ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಹಾಗೂ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ಜರುಗಿಸಿ, ಅಗತ್ಯ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಪಂಚ ಗ್ಯಾರಂಟಿ ಯೋಜನೆಯಿಂದ ಕ್ರಾಂತಿಕಾರಕ ಬದಲಾವಣೆ: ಸಚಿವ ಎಚ್.ಕೆ. ಪಾಟೀಲ

0

ವಿಜಯಸಾಕ್ಷಿ ಸುದ್ದಿ, ಗದಗ: ಬಡಜನರ ಬದುಕು ಬದಲಾಯಿಸಿದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಬಡತನವನ್ನು ಬೇರು ಸಹಿತ ಕಿತ್ತೊಗೆಯುವ ಕ್ರಾಂತಿಕಾರಕ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಬುಧವಾರ ಜರುಗಿದ ಗ್ಯಾರಂಟಿ ಕಾರ್ಯಾಗಾರ ಹಾಗೂ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ಜಾರಿಯಿಂದಾಗಿ ಸಮಾಜವನ್ನು ಸುಧಾರಿಸಿ, ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ರಾಜ್ಯದ ಪ್ರತಿ ಬಡ ಕುಟುಂಬಕ್ಕೆ 5 ಸಾವಿರ ರೂಪಾಯಿ ಪ್ರತಿ ತಿಂಗಳು ತಲುಪಿಸುವ ಕಾರ್ಯವಾಗುತ್ತಿದೆ. ಜಿಲ್ಲೆಯಲ್ಲಿ 2.28 ಲಕ್ಷ ಕುಟುಂಬಗಳನ್ನು ತಲುಪಿದ್ದೇವೆ. 1 ಕೋಟಿ 10 ಸಾವಿರ ಹಣ ಜನರ ಕೈಮುಟ್ಟಿದೆ ಎಂದರು.

ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ರಾಜ್ಯದ ಪ್ರತಿಯೊಂದು ಕುಟುಂಬವನ್ನು ತಲುಪಿರುವುದು ತೃಪ್ತಿಕರವಾಗಿದೆ ಎಂದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಇಂದು ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಗಳು ಪ್ರತಿಯೊಬ್ಬ ಅರ್ಹರಿಗೆ ತಲುಪಿಸುವ ಕಾರ್ಯವಾಗಬೇಕು ಎಂದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮುತ್ತುರಾಜ್ ಮಾತನಾಡಿ, ಸಾಕಷ್ಟು ಟೀಕೆಗಳ ನಡುವೆಯೂ ರಾಜ್ಯ ಸರ್ಕಾರವು ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಎಲ್ಲ ಟೀಕೆಗಳಿಗೆ ಉತ್ತರ ದೊರಕಿದಂತಾಗಿದೆ ಎಂದರು.

ರಾಜ್ಯದ ತಲಾ ಆದಾಯದ ಹೆಚ್ಚಳದಿಂದಾಗಿ ಕೇಂದ್ರಕ್ಕೆ ರಾಜ್ಯದಿಂದ ಹೆಚ್ಚಿನ ತೆರಿಗೆಯನ್ನು ನೀಡಲಾಗುತ್ತಿದೆ. ರಾಜ್ಯದ ಅಂದಾಜು ಒಂದೂವರೆ ಕೋಟಿ ಜನ ಈ ಪಂಚಗ್ಯಾರಂಟಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಪಂಚಗ್ಯಾರಂಟಿ ಯೋಜನೆ ಜಾರಿಯಿಂದಾಗಿ ತಲಾದಾಯದಲ್ಲಿಯೂ ಕೂಡ ರಾಜ್ಯವು ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಸಭೆಗಳನ್ನು ನಿರಂತರವಾಗಿ ಜರುಗಿಸಿ ಅರ್ಹ ಎಲ್ಲ ಫಲಾನುಭವಿಗಳನ್ನು ಗ್ಯಾರಂಟಿ ಯೋಜನೆಗೆ ಒಳಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಉಪಾಧ್ಯಕ್ಷರುಗಳಾದ ನೀಲಮ್ಮ ಬೋಳನವರ, ದೀಪಕ ಲಮಾಣಿ, ಹೇಮಂತಗೌಡ ಪಾಟೀಲ, ಪಿ.ಬಿ. ಅಳಗವಾಡಿ, ಫಕ್ರುಸಾಬ ಚಿಕ್ಕಮಣ್ಣೂರ, ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷರುಗಳಾದ ಅಶೋಕ ಮಂದಾಲಿ, ಸಂಗನಗೌಡ ಪಾಟೀಲ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ನಾಗರಾಜ ಶಿವಪ್ಪ ಮಡಿವಾಳರ, ಶರಣಪ್ಪ ಬೆಟಗೇರಿ, ವೀರಯ್ಯ ಮಠಪತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯರುಗಳಾದ ಪುಲಕೇಶಗೌಡ ಪಾಟೀಲ, ಈಶಣ್ಣ ಹುಣಸಿಕಟ್ಟಿ, ಶರೀಫ್ ಬೆಳೆಯಲಿ, ರಾಜೀವ ಗೊಡಚಪ್ಪ ಕುಂಬಿ, ಶಿವನಗೌಡ ಪಾಟೀಲ, ಆರ್.ಆರ್. ಗಡ್ಡದೇವರಮಠ, ಗೀತಾ ಬೀರಣ್ಣವರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ್, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಜಿ.ಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ ಮುಂತಾದವರು ಉಪಸ್ಥಿತರಿದ್ದರು.

ಪ್ರೊ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಡೋಣಿ ಗ್ರಾಮದ ನಿಂಗಣ್ಣ ಗಡಾದ ಹಾಗೂ ತಂಡದವರು ಪಂಚ ಗ್ಯಾರಂಟಿ ಕುರಿತು ಜನಪದ ಗೀತೆ, ವೆಂಕಟೇಶ ಅಲ್ಕೋಡ ಹಾಗೂ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು.

ಇದೇ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಗದಗ ಜಿಲ್ಲೆಯ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಲಾಯಿತು.

ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಗದಗ ಜಿಲ್ಲೆಯ ಇಂದಿನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನರು ಸ್ವಾಭಿಮಾನದ ಜೀವನ ಸಾಗಿಸುವ ಉದ್ದೇಶದೊಂದಿಗೆ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಇಂತಹ ಕಾರ್ಯಕ್ರಮವನ್ನು ಪಂಚಾಯತ ಮಟ್ಟದಲ್ಲಿಯೂ ಆಯೋಜಿಸುವ ಮೂಲಕ ಪಂಚ ಗ್ಯಾರಂಟಿ ಯೋಜನೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಮುಂದಾಗಬೇಕು ಎಂದರು.

“ಪಂಚ ಗ್ಯಾರಂಟಿಗಳನ್ನು ಮಾನವ ಹಕ್ಕುಗಳನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಗದಗ ಜನತೆ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ವಿಶ್ವಾಸ ಇಟ್ಟಿದ್ದು, ಬಡಜನರಿಗೆ ದಕ್ಕಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಲಾಗಿತ್ತು. ಆದರೆ ಈ ಮಹತ್ವಾಕಾಂಕ್ಷೆ ಯೋಜನೆಗಳನ್ನು ಅಧಿಕಾರ ವಹಿಸಿದ ಕೆಲ ದಿನಗಳಲ್ಲಿ ಜಾರಿಗೊಳಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಎಲ್ಲ ಟೀಕೆಗಳಿಗೆ ಪ್ರತ್ಯುತ್ತರ ನೀಡಲಾಗಿದೆ”

  • ಎಚ್.ಕೆ. ಪಾಟೀಲ.
    ಜಿಲ್ಲಾ ಉಸ್ತುವಾರಿ ಸಚಿವರು.

ಗ್ಯಾರಂಟಿ ಸಮಾವೇಶದಲ್ಲಿ ಆಕರ್ಷಿಸಿದ ಮಳಿಗೆಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಮಳಿಗೆಗಳೊಂದಿಗೆ ರಾಜ್ಯ ಸರ್ಕಾರ ರೂಪಿಸಿರುವ ಜನಪರ ಕಾರ್ಯಕ್ರಮಗಳ ವಿವಿಧ ಇಲಾಖೆಯ ಮಳಿಗೆಗಳನ್ನು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಬುಧವಾರ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೇರಿದಂತೆ ಗಣ್ಯರು, ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಮುಂದಿನ 6 ತಿಂಗಳಲ್ಲಿ ಮೇಲ್ಸೇತುವೆ ಕಾಮಗಾರಿ ಪೂರ್ಣ: ಶಾಸಕ ಮಹೇಶ ಟೆಂಗಿನಕಾಯಿ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಹೊಸುರು ವೃತ್ತದಲ್ಲಿ 4 ಪಿಲ್ಲರ್‌ಗಳನ್ನು ಅಳವಡಿಸುವ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಟ್ರಾಫಿಕ್ ಸಮಸ್ಯೆಯಾಗದಂತೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಮುಂದಿನ ಒಂದು ವಾರದಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ಮುಂದಿನ 6 ತಿಂಗಳಲ್ಲಿ ಮೇಲ್ಸೇತುವೆ ಕಾಮಗಾರಿಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹಿಂದೂ ಸ್ವರಾಜ್ಯದ ಅಪ್ರತಿಮ ವೀರ ಶಿವಾಜಿ ಮಹಾರಾಜ್!

ಭಾರತದ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಅದರಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟ ಹೆಸರು ಛತ್ರಪತಿ ಶಿವಾಜಿ ಮಹಾರಾಜ'. ಅವರು ಕೇವಲ ಒಬ್ಬ ರಾಜನಾಗಿರಲಿಲ್ಲ, ಬದಲಿಗೆ ಭಾರತೀಯರ ಸ್ವಾಭಿಮಾನದ ಸಂಕೇತವಾಗಿದ್ದರು. ಮೊಘಲರ ಮತ್ತು ಆದಿಲ್ ಶಾಹಿಗಳ ದಬ್ಬಾಳಿಕೆಯಲ್ಲಿ ನಲುಗುತ್ತಿದ್ದ ಜನರಿಗೆ ಸ್ವರಾಜ್ಯ’ದ ಕನಸು ತೋರಿಸಿ, ಅದನ್ನು ನನಸು ಮಾಡಿದ ಧೀಮಂತ ನಾಯಕ ಶಿವಾಜಿ.

ಶಿವಾಜಿಯವರ ವ್ಯಕ್ತಿತ್ವ ರೂಪಿತವಾಗಿದ್ದು ಅವರ ಬಾಲ್ಯದಲ್ಲಿಯೇ. ಪುಣೆಯ ಶಿವನೇರಿ ಕೋಟೆಯಲ್ಲಿ 1630ರಲ್ಲಿ ಜನಿಸಿದ ಶಿವಾಜಿಗೆ, ತಾಯಿ ಜೀಜಾಬಾಯಿಯೇ ಮೊದಲ ಗುರು. ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಾ, ಅನ್ಯಾಯದ ವಿರುದ್ಧ ಹೋರಾಡುವ ಕೆಚ್ಚೆದೆಯನ್ನು ತಾಯಿಯೇ ಮಗನ ಮನಸ್ಸಿನಲ್ಲಿ ಬಿತ್ತಿದರು. ತಂದೆ ಶಹಾಜಿರಾಜೆ ಭೋಸ್ಲೆ ದೂರದ ಊರಿನಲ್ಲಿದ್ದರೂ, ತಾಯಿ ಜೀಜಾಬಾಯಿ ಮತ್ತು ಗುರು ದಾದಾಜಿ ಕೊಂಡದೇವ ಅವರ ಮಾರ್ಗದರ್ಶನದಲ್ಲಿ ಶಿವಾಜಿ ಒಬ್ಬ ಅಪ್ರತಿಮ ಯೋಧನಾಗಿ ಬೆಳೆದರು.

ಶಿವಾಜಿ ಮಹಾರಾಜರು ತಮ್ಮ 16ನೇ ವಯಸ್ಸಿನಲ್ಲಿಯೇ ತೋರಣ ಕೋಟೆಯನ್ನು ಗೆಲ್ಲುವ ಮೂಲಕ ಸ್ವರಾಜ್ಯ ಸ್ಥಾಪನೆಯ ಮೊದಲ ಹೆಜ್ಜೆ ಇಟ್ಟರು. ಅವರ ಬಳಿ ಬೃಹತ್ ಸೈನ್ಯವಿರಲಿಲ್ಲ. ಆದರೆ ಬುದ್ಧಿವಂತಿಕೆ ಇತ್ತು. ಸಹ್ಯಾದ್ರಿ ಬೆಟ್ಟಗಳ ಭೌಗೋಳಿಕ ರಚನೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರು. ಇದನ್ನೇ ಇತಿಹಾಸದಲ್ಲಿ `ಗನಿಮಿ ಕಾವಾ’ ಎಂದು ಕರೆಯಲಾಗುತ್ತದೆ. ಹಠಾತ್ ದಾಳಿ ಮಾಡುವುದು ಮತ್ತು ಶತ್ರುಗಳು ಚೇತರಿಸಿಕೊಳ್ಳುವ ಮುನ್ನವೇ ಮಾಯವಾಗುವುದು ಅವರ ತಂತ್ರವಾಗಿತ್ತು.

ಶಿವಾಜಿಯವರ ಜೀವನದಲ್ಲಿ ಅಫಜಲ್ ಖಾನ್ ನೊಂದಿಗಿನ ಮುಖಾಮುಖಿ ರೋಚಕವಾದದ್ದು. ಬಿಜಾಪುರದ ಬಲಿಷ್ಠ ಸೇನಾಪತಿ ಅಫಜಲ್ ಖಾನ್, ಶಿವಾಜಿಯನ್ನು ಕೊಲ್ಲಲು ಬಂದಾಗ, ಶಿವಾಜಿ ತಮ್ಮ ಬುದ್ಧಿವಂತಿಕೆಯಿಂದ ‘ವ್ಯಾಘ್ರ ನಖ’ (ಹುಲಿಯ ಉಗುರು) ಬಳಸಿ ಆತನನ್ನು ಸಂಹರಿಸಿದರು. ಇದು ಕೇವಲ ದೈಹಿಕ ಬಲದ ಪ್ರದರ್ಶನವಾಗಿರದೆ, ಸಮಯಪ್ರಜ್ಞೆ ಮತ್ತು ಎಚ್ಚರಿಕೆಯ ಪಾಠವಾಗಿತ್ತು.

ಔರಂಗಜೇಬನು ಒಪ್ಪಂದದ ನೆಪದಲ್ಲಿ ಶಿವಾಜಿಯನ್ನು ಆಗ್ರಾಕ್ಕೆ ಕರೆಸಿ ಬಂಧಿಸಿದನು. ಆದರೆ, ಚಾಣಾಕ್ಷ ಶಿವಾಜಿ ಅನಾರೋಗ್ಯದ ನಾಟಕವಾಡಿ, ಸಿಹಿ ಹಂಚುವ ನೆಪದಲ್ಲಿ ಹಣ್ಣಿನ ಬುಟ್ಟಿಗಳಲ್ಲಿ ಕುಳಿತು ಅಲ್ಲಿಂದ ಪಾರಾದರು. ಈ ಘಟನೆ ಮೊಘಲ್ ಸಾಮ್ರಾಜ್ಯಕ್ಕೆ ದೊಡ್ಡ ಅವಮಾನ ಮತ್ತು ಮರಾಠರಿಗೆ ದೊಡ್ಡ ಗೆಲುವಾಯಿತು.

1674ರಲ್ಲಿ ರಾಯಗಡದಲ್ಲಿ ಶಿವಾಜಿಯವರಿಗೆ ಪಟ್ಟಾಭಿಷೇಕವಾಯಿತು. ಅವರು `ಛತ್ರಪತಿ’ ಎಂದು ಘೋಷಿಸಿಕೊಂಡರು. ಇದು ಕೇವಲ ಒಬ್ಬ ವ್ಯಕ್ತಿಯ ಪಟ್ಟಾಭಿಷೇಕವಾಗಿರಲಿಲ್ಲ, ಶತಮಾನಗಳ ಪರಕೀಯರ ಆಳ್ವಿಕೆಯ ನಂತರ ಹಿಂದೂ ಸಾಮ್ರಾಜ್ಯವೊಂದು ತಲೆ ಎತ್ತಿ ನಿಂತ ಐತಿಹಾಸಿಕ ಕ್ಷಣವಾಗಿತ್ತು.

ಶಿವಾಜಿ ಕೇವಲ ಯುದ್ಧವೀರನಾಗಿರದೆ, ಒಬ್ಬ ದಕ್ಷ ಆಡಳಿತಗಾರನೂ ಆಗಿದ್ದರು. ರಾಜ್ಯಭಾರವನ್ನು ಸುಗಮವಾಗಿ ನಡೆಸಲು ಎಂಟು ಜನ ಮಂತ್ರಿಗಳಿದ್ದ ಅಷ್ಟಪ್ರಧಾನ ಮಂಡಲವನ್ನು ರಚಿಸಿದರು. ಸಮುದ್ರದ ಮೇಲಿನ ಹಿಡಿತದ ಮಹತ್ವವನ್ನು ಅರಿತ ಮೊದಲ ಭಾರತೀಯ ರಾಜ ಶಿವಾಜಿ. ಸಿಂಧುದುರ್ಗದಂತಹ ಜಲದುರ್ಗಗಳನ್ನು ಕಟ್ಟಿ, ಬಲಿಷ್ಠ ನೌಕಾಪಡೆಯನ್ನು ಸ್ಥಾಪಿಸಿದ ಅವರನ್ನು ಭಾರತೀಯ ನೌಕಾಪಡೆಯ ಪಿತಾಮಹ’ ಎಂದು ಕರೆಯಲಾಗುತ್ತದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ರೈತರಿಂದ ನೇರವಾಗಿ ಕಂದಾಯ ಸಂಗ್ರಹಿಸುವ ಪದ್ಧತಿ ಜಾರಿಗೆ ತಂದರು. ಬರಗಾಲದ ಸಮಯದಲ್ಲಿ ರೈತರಿಗೆ ಧಾನ್ಯ ಮತ್ತು ಸಾಲದ ನೆರವು ನೀಡುತ್ತಿದ್ದರು. ಯುದ್ಧದಲ್ಲಿ ಶತ್ರುಗಳ ಕೋಟೆಯನ್ನು ಗೆದ್ದಾಗ, ಅಲ್ಲಿ ಸಿಗುವ ಮಹಿಳೆಯರನ್ನು ಅತ್ಯಂತ ಗೌರವದಿಂದ, ತಾಯಿಯಂತೆ ಕಂಡು ಅವರನ್ನು ಸುರಕ್ಷಿತವಾಗಿ ಅವರ ಮನೆಗೆ ಕಳುಹಿಸುತ್ತಿದ್ದರು. ಅವರ ಸೈನ್ಯದಲ್ಲಿ ಮಹಿಳೆಯರಿಗೆ ಅಗೌರವ ತೋರುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತಿತ್ತು. ಮಹಾರಾಜರು ಹಿಂದೂ ಧರ್ಮದ ರಕ್ಷಕರಾಗಿದ್ದರು.

1680ರಲ್ಲಿ ಶಿವಾಜಿ ಮಹಾರಾಜರು ದೈವಾಧೀನರಾದರು. ಆದರೆ ಅವರು ಬೆಳಗಿಸಿದ ಸ್ವರಾಜ್ಯದ ಜ್ಯೋತಿ ನಂದಲಿಲ್ಲ. ಅವರ ಮರಣದ ನಂತರವೂ ಮರಾಠರು ಅದೇ ಸ್ಫೂರ್ತಿಯಿಂದ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ದುರ್ಬಲಗೊಳಿಸಿದರು. ಇಂದಿಗೂ ಛತ್ರಪತಿ ಶಿವಾಜಿ ಮಹಾರಾಜರು ಶಕ್ತಿ, ಯುಕ್ತಿ ಮತ್ತು ದೇಶಭಕ್ತಿಯ ಮೂರ್ತರೂಪವಾಗಿದ್ದಾರೆ. ಕಠಿಣ ಪರಿಸ್ಥಿತಿಗಳಲ್ಲಿಯೂ ಹೇಗೆ ಎದೆಗುಂದದೆ ಹೋರಾಡಬೇಕು ಎಂಬುದಕ್ಕೆ ಶಿವಾಜಿ ಮಹಾರಾಜರ ಜೀವನವೇ ಒಂದು ತೆರೆದ ಪುಸ್ತಕ. ಅವರ ಆದರ್ಶಗಳು ಇಂದಿನ ಯುವಪೀಳಿಗೆಗೆ ದಾರಿದೀಪ.

  • ಹನುಮಂತ ಬೆಂತೂರ.
    ಅಪ್ರೆಂಟಿಸ್, ವಾರ್ತಾ ಮತ್ತು ಸಾ.ಸಂ.ಇಲಾಖೆ-ಗದಗ.

error: Content is protected !!