ಪಾಟ್ನಾ: ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಸಾಮ್ರಾಟ್ ಚೌಧರಿ ಅವರನ್ನು ಭಾರತೀಯ ಜನತಾ ಪಕ್ಷ ಆಯ್ಕೆ ಮಾಡಿದೆ. ಅವರು ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
57 ವರ್ಷದ ಸಾಮ್ರಾಟ್ ಚೌಧರಿ ರಾಜ್ಯದ ಪ್ರಮುಖ ಒಬಿಸಿ ಸಮುದಾಯವಾದ ಕೊಯೇರಿ ಅಥವಾ ಕುಶ್ವಾಹ ಜಾತಿಗೆ ಸೇರಿದವರಾಗಿದ್ದು, ಈ ಸಮುದಾಯವು ಹಿಂದುಳಿದ ವರ್ಗಗಳಲ್ಲಿ ಮಹತ್ವದ ಸ್ಥಾನ ಹೊಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನದೇ ನಾಯಕನನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸುತ್ತಿರುವುದು ವಿಶೇಷವಾಗಿದ್ದು, ಇದುವರೆಗೆ ಮೈತ್ರಿ ಸರ್ಕಾರದಲ್ಲೇ ಭಾಗಿಯಾಗಿದ್ದ ಬಿಜೆಪಿ ಈಗ ಸ್ವತಂತ್ರ ನಾಯಕತ್ವದತ್ತ ಹೆಜ್ಜೆ ಇಟ್ಟಿದೆ.
ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯುನೈಟೆಡ್) ಈ ಬಾರಿ ಸಿಎಂ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ ಎನ್ನಲಾಗಿದೆ. ಜೆಡಿಯು ಪಕ್ಷವು ಇದೇ ಸಮುದಾಯದಿಂದ ನಾಯಕನನ್ನು ಆಯ್ಕೆ ಮಾಡುವಂತೆ ಸೂಚನೆ ನೀಡಿದ್ದುದೂ ತಿಳಿದುಬಂದಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಜೆಡಿಯು 85 ಶಾಸಕರನ್ನು ಹೊಂದಿದ್ದು, ಬಿಜೆಪಿಗಿಂತ ಕೇವಲ ನಾಲ್ಕು ಸ್ಥಾನಗಳು ಕಡಿಮೆ ಇವೆ. 2005ರಿಂದ ಮೈತ್ರಿಯಲ್ಲಿ ಕಿರಿಯ ಪಾಲುದಾರನಾಗಿದ್ದ ಬಿಜೆಪಿ, ಈಗ ಮೊದಲ ಬಾರಿಗೆ ರಾಜ್ಯದ ಉನ್ನತ ಹುದ್ದೆಯನ್ನು ತನ್ನದಾಗಿಸಿಕೊಂಡಿದೆ.



