ಬೆಂಗಳೂರು: ದೇಶಕ್ಕೆ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ತಂದುಕೊಟ್ಟ ಖ್ಯಾತ ಹಾಕಿ ಕ್ರೀಡಾಪಟು ಎಂ.ಎಂ. ಸೋಮಯ್ಯ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
1980ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಗೆದ್ದಿದ್ದ ಚಿನ್ನದ ಪದಕ ಸೇರಿದಂತೆ ಹಲವು ಪ್ರಮುಖ ಕ್ರೀಡಾ ಪದಕಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಭಾನುವಾರ ಸೋಮಯ್ಯ ಅವರು ಬೆಂಗಳೂರಿನಿಂದ ಕೊಡಗಿಗೆ ತೆರಳಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಖದೀಮರು ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
1980ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಹಾಕಿ ಕ್ರೀಡೆಯಲ್ಲಿ ಗೆದ್ದಿದ್ದ ಚಿನ್ನದ ಪದಕ, 1982ರ ನವದೆಹಲಿ ಏಷ್ಯನ್ ಗೇಮ್ಸ್ನಲ್ಲಿ ಪಡೆದ ಬೆಳ್ಳಿ ಪದಕ ಹಾಗೂ 1986ರ ಸಿಯೋಲ್ ಏಷ್ಯನ್ ಗೇಮ್ಸ್ನಲ್ಲಿ ಗೆದ್ದ ಕಂಚಿನ ಪದಕವನ್ನು ಕಳ್ಳರು ದೋಚಿದ್ದಾರೆ. ಇದರ ಜೊತೆಗೆ 1982ರ ಆಮ್ಸ್ಟರ್ಡ್ಯಾಮ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆದ್ದಿದ್ದ ಕಂಚಿನ ಪದಕವೂ ಕಳುವಾಗಿದೆ.
ಕ್ರೀಡಾ ಪದಕಗಳ ಜೊತೆಗೆ ಬೆಳ್ಳಿ ಕಪ್ಗಳು, ಬಳೆಗಳು, ಬೆಳ್ಳಿ ಚಮಚಗಳು ಹಾಗೂ ಚಿನ್ನದ ನಾಣ್ಯಗಳನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಘಟನೆ ಸಂಬಂಧ ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.










