ಬೆಂಗಳೂರು: ಮನೆಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡಲು ಬಂದಿದ್ದ ಸಿಬ್ಬಂದಿ, ಸಿಲಿಂಡರ್ ಕೆಳಗಿಳಿಸಿ ಇಡುತ್ತಿದ್ದಂತೆಯೇ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.
ಅದೃಷ್ಟವಶಾತ್ ಡೆಲಿವರಿ ಬಾಯ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆಯ ಬಾಗಿಲಿನ ಹೊಸ್ತಿಲನ್ನು ಸ್ವಚ್ಛಗೊಳಿಸಿ, ಅಲ್ಲಿ ದೀಪ ಹಚ್ಚಿ ಇಡಲಾಗಿತ್ತು. ಈ ವಿಚಾರವನ್ನು ಗಮನಿಸದ ಡೆಲಿವರಿ ಸಿಬ್ಬಂದಿ ಗ್ಯಾಸ್ ಸಿಲಿಂಡರ್ ಅನ್ನು ಹೊಸ್ತಿಲಿನ ಬಳಿ ಕೆಳಗಿಳಿಸಿ ಇಡಲು ಮುಂದಾಗಿದ್ದಾರೆ.
ಈ ವೇಳೆ ಸಿಲಿಂಡರ್ನಿಂದ ಸೋರಿಕೆಯಾಗಿದ್ದ ಗ್ಯಾಸ್ ದೀಪದ ಜ್ವಾಲೆಗೆ ತಗುಲಿ ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಸಿಲಿಂಡರ್ ಇಡುತ್ತಿದ್ದ ಕ್ಷಣದಲ್ಲೇ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಆದರೆ ಡೆಲಿವರಿ ಬಾಯ್ ತಕ್ಷಣವೇ ಅಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಿಲಿಂಡರ್ ಗ್ಯಾಸ್ ಸೋರಿಕೆ ಹಾಗೂ ಹೊಸ್ತಿಲಿನಲ್ಲಿ ಹಚ್ಚಿಟ್ಟಿದ್ದ ದೀಪ ಬೆಂಕಿ ಅವಘಡಕ್ಕೆ ಕಾರಣವಾಗಿದೆ ಎನ್ನಲಾಗಿದೆ.









