ಚಿತ್ರದುರ್ಗ: ಜಿಲ್ಲೆಯ ದೊಡ್ಡಚೆಲ್ಲೂರು ಗ್ರಾಮದ ಬಳಿ ಚಿರತೆ ದಾಳಿಗೆ 50 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಬುಧವಾರ ಬೆಳಗಿನ ಜಾವ ಸುಮಾರು 5 ಗಂಟೆಗೆ ಈ ಘಟನೆ ನಡೆದಿದೆ. ಮೃತರನ್ನು ಚಂದ್ರಪ್ಪ ಎಂದು ಗುರುತಿಸಲಾಗಿದೆ.
ಚಂದ್ರಪ್ಪ ಅವರು ಮನೆಯ ಮುಂದೆ ಮಲಗಿದ್ದ ವೇಳೆ ಚಿರತೆ ಮೇಕೆಯ ಮೇಲೆ ದಾಳಿ ಮಾಡಿದೆ. ಈ ವೇಳೆ ಎಚ್ಚರಗೊಂಡ ಚಂದ್ರಪ್ಪ ಚಿರತೆಯನ್ನು ಕಂಡು ಕೂಗಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಚಿರತೆ ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ.
ಚಿರತೆ ಚಂದ್ರಪ್ಪ ಅವರ ತಲೆಗೆ ಬಲವಾಗಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ದೊಡ್ಡಚೆಲ್ಲೂರು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.










