ಒಂದೇ ದಿನದಲ್ಲಿ ಅಭ್ಯರ್ಥಿಯ ನಾಮಪತ್ರದ ಕ್ರಮ ಸಂಖ್ಯೆ ಅದಲು ಬದಲು ಮಾಡುವ ಮೂಲಕ ಚುನಾವಣಾಧಿಕಾರಿಗಳು ಅಭ್ಯರ್ಥಿಗೆ ಗೊಂದಲವುಂಟು ಮಾಡಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯ ಎರಡನೇಯ ಹಂತದಲ್ಲಿ ನಡೆಯುವ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮ ಪಂಚಾಯತಿಯಲ್ಲಿ ಈ ಎಡವಟ್ಟು ನಡೆದಿದೆ.
ಬನಹಟ್ಟಿ ಗ್ರಾ.ಪಂ.ನ ಮೂಗನೂರು ಮತಕ್ಷೇತ್ರಕ್ಕೆ ವೀರನಗೌಡ ಶಿವನಗೌಡ ಮೂಗನೂರ ಎಂಬ ವ್ಯಕ್ತಿ ಸ್ಪರ್ಧಿಸಿದ್ದಾರೆ. ಇವರಿಗೆ ಮೊದಲು ಕ್ರಮ ಸಂಖ್ಯೆ 06 ನೀಡಿದ್ದ ಚುನಾವಣಾ ಅಧಿಕಾರಿಗಳು, ಮರುದಿನ ಬೆಳಿಗ್ಗೆ ಕ್ರ.ಸಂ. 04 ನೀಡಿದ್ದಾರೆ ಇದರಿಂದ ಅಭ್ಯರ್ಥಿ ಗೊಂದಲಕ್ಕೀಡಾಗಿದ್ದಾರೆ.
ಅಭ್ಯರ್ಥಿ ವೀರನಗೌಡ ಅವರು ಮೊದಲು ನೀಡಿದ ಸಂಖ್ಯೆಯನ್ನೇ ನಮೂದಿಸಿ ಕರಪತ್ರ ಮುದ್ರಿಸಿದ್ದಾರೆ. ಈಗಾಗಲೇ ಮುದ್ರಿಸಿರುವ ಕರಪತ್ರಗಳನ್ನು ಪ್ರಚಾರ ಮಾಡುವ ಮೂಲಕ ಹಂಚಿದ್ದಾರೆ. ಇದೀಗ ಕ್ರಮ ಸಂಖ್ಯೆ ಅದಲು ಬದಲು ಮಾಡಿದ್ದಾರೆ.
ಕ್ರಮ ಸಂಖ್ಯೆ ಬದಲಾವಣೆಗೆ ಕಾರಣ ಕೇಳಿದರೆ ಚುನಾವಣಾಧಿಕಾರಿಗಳು ಮೇಲಾಧಿಕಾರಿಗಳತ್ತ ಬೊಟ್ಟು ಮಾಡಿ ತೋರಿಸಿತ್ತಿದ್ದಾರೆ ಎಂದು ವೀರನಗೌಡ ಆರೋಪಿಸಿದ್ದಾರೆ.
ಅಧಿಕಾರಿಗಳ ಎಡವಟ್ಟಿನಿಂದಲೋ ಅಥವಾ ತಪ್ಪಿನಿಂದಲೋ ಈಗಾಗಲೇ ಮೊದಲ ಕ್ರಮ ಸಂಖ್ಯೆಯಲ್ಲೇ ಪ್ರಚಾರ ಮಾಡಿರುವ ಗ್ರಾ.ಪಂ.ಚುನಾವಣಾ ಅಭ್ಯರ್ಥಿ ವೀರನಗೌಡ ಶಿವನಗೌಡ ಮೂಗನೂರ ಗೊಂದಲದಲ್ಲಿರುವುದಂತೂ ಸುಳ್ಳಲ್ಲ.
ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ಮಾಡಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಆರೋಪ ಮಾಡಿದ್ದಾರೆ.
ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶೋಕ್ ಕರೂರ ಅವರ ಮನೆ ಮುಂದೆ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಅನಿಲ್ ಮೆಣಸಿನಕಾಯಿ ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಬಿಂಕದಕಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ನೇರ ಪೈಪೋಟಿ ಒಡ್ಡಿದ್ದೇ ಈ ಘಟನೆಗೆ ಪ್ರಮುಖ ಕಾರಣ ಎಂದು ಅನಿಲ ಆರೋಪಿಸಿದ್ದಾರೆ.
ಸ್ಥಳದಲ್ಲಿ ಗದಗ ಡಿವೈಎಸ್ಪಿ ಪ್ರಹ್ಲಾದ್ ಕೆ., ಗ್ರಾಮೀಣ ಠಾಣೆ ಸಿಪಿಐ ರವಿ ಕಪ್ಪತ್ತನವರ್, ಪಿಎಸ್ಐ ಅಜಿತ್ ಕುಮಾರ್ ಹೊಸಮನಿ ಸ್ಥಳದಲ್ಲೇ ಮುಕ್ಕಾಂ ಹೂಡಿದ್ದಾರೆ.
ಅಲ್ಲದೆ, ಸ್ಥಳದಲ್ಲಿ ಒಂದು ಡಿಆರ್ ತುಕಡಿ ನಿಯೋಜನೆ ಮಾಡಲಾಗಿದ್ದು,ಗ್ರಾಮದಲ್ಲಿ ಪಥ ಸಂಚಲನ ನಡೆಸಲಾಗಿದೆ.
ಇನ್ನು ಈ ಕುರಿತು ಗ್ರಾಮೀಣ ಠಾಣೆ ಪಿಎಸ್ಐ ಅಜಿತ್ ಕುಮಾರ್ ಹೊಸಮನಿ ಅವರನ್ನು ಸಂಪರ್ಕಿಸಿದರೆ, ಯಾವುದೇ ಗೊಂದಲ ಗಲಾಟೆ ಇಲ್ಲವೆಂದಿದ್ದಾರೆ.
ಸದ್ಯ ಬಿಂಕದಕಟ್ಟಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮಾಗಡಿ ಗ್ರಾ.ಪಂ ವ್ಯಾಪ್ತಿಯ ಪರಸಾಪೂರ ಗ್ರಾಮದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದೇ ಇದಕ್ಕೆ ಕಾರಣ ಎಂದು ರೈತ ಹನುಮಂತ ಆರೋಪಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಒತ್ತಾಯಿಸಿದ್ದಾರೆ.
ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಶೇಂಗಾ ಹಾಗೂ ಹೊಟ್ಟು ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಿದರು. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸೆಂಬರ್ 20 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 156187 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 161750 ಮಾದರಿಗಳಲ್ಲಿ 150746 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 143 ಮಾದರಿಗಳ ವರದಿ ಬರಲು ಬಾಕಿ ಇದೆ.
ಜಿಲ್ಲೆಯಲ್ಲಿ ಇಂದಿನ 06 (ಗದಗ-02, ನರಗುಂದ-02, ರೋಣ-02) ಪ್ರಕರಣಗಳು ಸೇರಿದಂತೆ ಒಟ್ಟು 10861 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 05 ಜನ ಸೇರಿದಂತೆ ಒಟ್ಟು 10691 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 29 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಕ್ರಾಸ್ ಬಳಿ ನಡೆದಿದೆ.
ಗದಗನಿಂದ ಅಸುಂಡಿ ಗ್ರಾಮಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುವಾಗ ಜಿಲ್ಲಾ ಅಬಕಾರಿ ವಿಚಕ್ಷಣಾ ದಳದ ಅಬಕಾರಿ ನಿರೀಕ್ಷಕರಾದ ಶಹನಾಜ್ ಬೇಗಂ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಅಸುಂಡಿ ಗ್ರಾಮದ ಕಾರು ಚಾಲಕ ಮಂಜುನಾಥ ವೆಂಕಪ್ಪ ಪೂಜಾರ, ಈರಣ್ಣ ರಾಮಣ್ಣ ಬಡಿಗೇರ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ದಾಳಿ ವೇಳೆ 5 ಲಕ್ಷ 50 ಸಾವಿರ ಮೌಲ್ಯದ ಕಾರು ಹಾಗೂ 15 ಸಾವಿರ ಮೌಲ್ಯದ 35 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಅಕ್ರಮವಾಗಿ ಹಂಚಲು ಈ ಮದ್ಯ ತೆಗೆದುಕೊಂಡು ಹೋಗುವಾಗ ದಾಳಿ ನಡೆಸಿದ್ದು, ಈ ಕುರಿತು ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ವೇಳೆ ಜಿಲ್ಲಾ ಅಬಕಾರಿ ವಿಚಕ್ಷಣಾ ದಳದ ಅಬಕಾರಿ ನಿರೀಕ್ಷಕರಾದ ಶಹನಾಜ್ ಬೇಗಂ ಸೇರಿದಂತೆ ಅಬಕಾರಿ ಇಲಾಖೆ ಸಿಬ್ಬಂದಿಗಳು ಇದ್ದರು.
ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೊದಲ ಹಂತದ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲ್ಲೂಕುಗಳಲ್ಲಿ ಡಿ.22 ಮತ್ತು ಎರಡನೇ ಹಂತದ ನರಗುಂದ, ರೋಣ, ಗಜೇಂದ್ರಗಡ, ಮುಂಡರಗಿ ತಾಲೂಕುಗಳಲ್ಲಿ 27ರಂದು ಚುನಾವಣೆ ನಡೆಯಲಿವೆ.
ಈ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮತದಾನದ ಪಾವಿತ್ರ್ಯತೆ ಕಾಪಾಡುವ ಹಿತದೃಷ್ಟಿಯಿಂದ ಮೊದಲನೇ ಹಂತದ ಗ್ರಾ.ಪಂ.ವ್ಯಾಪ್ತಿಯಲ್ಲಿ ಡಿ.20 ರ ಸಂಜೆ 5 ಗಂಟೆಯಿಂದ ಡಿ.22 ರ ಮಧ್ಯರಾತ್ರಿಯವರೆಗೆ ಹಾಗೂ ಎರಡನೇ ಹಂತದ ಗ್ರಾ.ಪಂ.ವ್ಯಾಪ್ತಿಯಲ್ಲಿ ಡಿ.25 ರ ಸಂಜೆ 5 ಗಂಟೆಯಿಂದ ಪ್ರಾರಂಭಿಸಿ ಡಿಸೆಂಬರ್ 27 ರ ಮಧ್ಯರಾತ್ರಿಯವರೆಗೆ ಕೆಳಕಂಡ ಷರತ್ತು ವಿಧಿಸಿ ಪ್ರತಿಬಂಧಕಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶಿಸಿದ್ದಾರೆ.
ಜಿಲ್ಲೆಯ ಚುನಾವಣೆ ಜರುಗುವ ಗ್ರಾ.ಪಂ. ವ್ಯಾಪ್ತಿಯಲ್ಲಿ 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ನಿಷೇಧಿಸಿದೆ. ಚುನಾವಣಾ ಅಭ್ಯರ್ಥಿಗಳು/ ಬೆಂಬಲಿಗರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಬಹುದಾಗಿದ್ದು ಅದರಲ್ಲಿ 5 ಜನರಿಗಿಂತ ಹೆಚ್ಚು ಜನರು ಸೇರತಕ್ಕದ್ದಲ್ಲ. ದೇಹಕ್ಕೆ ಅಪಾಯವನ್ನುಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದು ಮತ್ತು ತಿರುಗಾಡುವುದನ್ನು ನಿಷೇಧಿಸಲಾಗಿದೆ. ಆ ಪ್ರದೇಶದಲ್ಲಿನ ಝೆರಾಕ್ಸ್ ಅಂಗಡಿ, ಬುಕ್ ಸ್ಟಾಲ್, ಫೋಟೋ ಕಾಪಿಯರ್ ಬಂದ್ ಮಾಡಲು ಆದೇಶಿಸಿದ್ದು, ಮತಗಟ್ಟೆಗಳ 200 ಮೀಟರ್ ಒಳಗೆ ಚುನಾವಣಾ ಪ್ರಚಾರ ನಿಷೇಧಿಸಿದೆ.
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಅಥವಾ ಸಾರ್ವಜನಿಕರ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ, ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಯಮಗಳನ್ನು ಪಾಲಿಸಬೇಕು. ಮತಗಟ್ಟೆಗಳ ಸುತ್ತ 200 ಮೀಟರ್ ಅಂತರದಲ್ಲಿ ಮೊಬೈಲ್ ಫೋನ್ , ಕಾರ್ಡಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಡಿಸಿ ಎಂ ಸುಂದರೇಶ್ ಬಾಬು
ಮತಗಟ್ಟೆಗಳ ಸುತ್ತ 200 ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್, ಬ್ಯಾನರ್, ವಾಹನಗಳ ಬಳಕೆ ಮತ್ತು ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಒಂದು ವೇಳೆ ಆದೇಶ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾ.ಪಂ.ಚುನಾವಣೆಯಲ್ಲಿ ಅಂತಿಮವಾಗಿ 64 ಗ್ರಾ.ಪಂ.ಗಳ 895 ಸ್ಥಾನಗಳಲ್ಲಿ 36 ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಸದೇ ಖಾಲಿ ಉಳಿದ 9 ಸ್ಥಾನಗಳನ್ನು ಹೊರತುಪಡಿಸಿ ಒಟ್ಟು 850 ಸ್ಥಾನಗಳಿಗೆ 2439 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ಎರಡನೇ ಹಂತದಲ್ಲಿ ಮುಂಡರಗಿ ತಾಲ್ಲೂಕಿನ 18 ಗ್ರಾ.ಪಂ.ಗಳ 253 ಸ್ಥಾನಗಳಿಗೆ ಅನುಸೂಚಿತ ಜಾತಿ 154, ಅನುಸೂಚಿತ ಪಂಗಡ 62, ಹಿಂದುಳಿದ ‘ಅ’ ವರ್ಗ 110, ಹಿಂದುಳಿದ ‘ಬ’ ವರ್ಗ 21, ಸಾಮಾನ್ಯ 355 ಸೇರಿ ಒಟ್ಟು 702 ಅಭ್ಯರ್ಥಿಗಳಿದ್ದಾರೆ.
ನರಗುಂದ ತಾಲ್ಲೂಕಿನ 13 ಗ್ರಾ.ಪಂ. 160 ಸ್ಥಾನಗಳಿಗೆ ಅನುಸೂಚಿತ ಜಾತಿ 43, ಅನುಸೂಚಿತ ಪಂಗಡ 30, ಹಿಂದುಳಿದ ‘ಅ’ ವರ್ಗ 77, ಹಿಂದುಳಿದ ‘ಬ’ ವರ್ಗ 22, ಸಾಮಾನ್ಯ 206 ಸೇರಿ ಒಟ್ಟು 378 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.
ರೋಣ ತಾಲ್ಲೂಕಿನ 24 ಗ್ರಾ.ಪಂ. 312 ಸ್ಥಾನಗಳಿಗೆ ಅನುಸೂಚಿತ ಜಾತಿ 132, ಅನುಸೂಚಿತ ಪಂಗಡ 62, ಹಿಂದುಳಿದ ‘ಅ’ ವರ್ಗ 184, ಹಿಂದುಳಿದ ‘ಬ’ ವರ್ಗ 58, ಸಾಮಾನ್ಯ 534 ಸೇರಿ ಒಟ್ಟು 970 ಅಭ್ಯರ್ಥಿಗಳಿದ್ದಾರೆ.
ಗಜೇಂದ್ರಗಡ ತಾಲ್ಲೂಕಿನ 9 ಗ್ರಾ.ಪಂ. 125 ಸ್ಥಾನಗಳಿಗೆ ಅನುಸೂಚಿತ ಜಾತಿ 88, ಅನುಸೂಚಿತ ಪಂಗಡ 27, ಹಿಂದುಳಿದ ‘ಅ’ ವರ್ಗ 52, ಹಿಂದುಳಿದ ‘ಬ’ ವರ್ಗ 18, ಸಾಮಾನ್ಯ 204 ಸೇರಿ ಒಟ್ಟು 389 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣೆ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಚುನಾವಣಾ ಶಾಖೆ ತಿಳಿಸಿದೆ.
ಜೆಡಿಎಸ್, ಬಿಜೆಪಿ ಜೊತೆ ಕೈ ಜೋಡಿಸಿದರೆ ಜೆಡಿಎಸ್ ಕೆಲ ಶಾಸಕರು ಪಕ್ಷ ತೋರೀತಾರಾ? ಎನ್ನುವ ಮೂಲಕ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಪ್ರಶ್ನೆ ಹುಟ್ಟು ಹಾಕಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಜೊತೆ ಕೈ ಜೋಡಿಸಿದರೆ ಪಕ್ಷ ತೊರೀತೀನಿ. ನಾನು ಬಿಜೆಪಿ ನಿಲುವುಗಳನ್ನು ವಿರೋಧಿಸಿದವನು. ವಾಮ ಮಾರ್ಗದಲ್ಲಿ ಅಧಿಕಾರ ಅನುಭವಿಸುವ ಆಸೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ನಿಲುವಿಗೆ ಅನೇಕ ಶಾಸಕರ ವಿರೋಧವಿದೆ. ನನ್ನ ಸ್ನೇಹಿತರೂ ಇದ್ದಾರೆ, ಅದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಶ್ರೀನಿವಾಸ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ನ ಇತರ ಶಾಸಕರಿಗೆ ಪಕ್ಷ ಬಿಡುವ ಒಲವಿದೆ. ಸುಮಾರು ಜನ ಶಾಸಕರುಗಳಿಗೆ ಆ ಮನಸ್ಥಿತಿ ಇದೆ. ಅಸಮಾಧಾನವಿದೆ ಎಂದಾಗ ಅನೇಕರು ಪಕ್ಷ ತೊರೆಯುವ ಬಗ್ಗೆ ಚರ್ಚೆಯಾಗಿದೆ ಅಂತಲೇ ಅರ್ಥ. ಕೆಲವರು ತಮ್ಮ ಅಭಿಪ್ರಾಯ ಹೇಳಿದ್ದಾರೆ ಎನ್ನುವ ಮೂಲಕ ರಾಜ್ಯ ರಾಜಕಾರಣದಲ್ಲಿ ಎಸ್.ಆರ್.ಶ್ರೀನಿವಾಸ್ ಹೊಸ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ.
ಮೈತ್ರಿ ಸರ್ಕಾರ ಪತನಕ್ಕೆ ಇಬ್ಬರೂ ಕಾರಣ. ಮೈತ್ರಿ ಸರ್ಕಾರ ಬೀಳುತ್ತೇ ಅಂತ ಗೊತ್ತಿತ್ತು.ಗೊತ್ತಿದ್ದರೂ ಕುಮಾರಸ್ವಾಮಿ ಅಮೆರಿಕಾಕ್ಕೆ ಹೋಗಿ ಕುಳಿತುಕೊಂಡರು ಎಂದು ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಹೇಳಿದರು.
ಮೈಸೂರು ತಾಲ್ಲೂಕಿನ ಸಿದ್ದಲಿಂಗಪುರದಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ನಡುವೆ ನಡೆದ ವಾಗ್ವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕರು ಪಕ್ಷ ಬಿಟ್ಟು ಹೋಗ್ತಾರೆ ಅಂತ ಸಿದ್ದರಾಮಯ್ಯ ಅವರಿಗೂ ಗೊತ್ತಿತ್ತು. ಮನಸ್ಸು ಮಾಡಿದ್ದರೆ ಅದನ್ನು ಸಿದ್ದರಾಮಯ್ಯ ತಡೆಯಬಹುದಿತ್ತು. ಆದರೆ ತಡೆಯುವ ಪ್ರಯತ್ನ ಮಾಡಲಿಲ್ಲ. ಆದ್ದರಿಂದ ಮೈತ್ರಿ ಸರ್ಕಾರ ಬೀಳುವುದಕ್ಕೆ ಇಬ್ಬರೂ ಕಾರಣಕರ್ತರು ಎಂದು ಆರೋಪಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಸೋಲು ಮರ್ಮಾಘಾತವೆಂದ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರು ಅವರ ಮನಸ್ಸಿನ ನೋವನ್ನು ಹೇಳಿಕೊಂಡಿದ್ದಾರೆ. ಈ ಮೊದಲು ವರುಣ ಚಾಮುಂಡೇಶ್ವರಿ ಒಂದೇ ಕ್ಷೇತ್ರವಾಗಿತ್ತು ಎಂದರು.
ತಾಲ್ಲೂಕು ಬೋರ್ಡ್ ಮೆಂಬರ್ ನಿಂದ ಹಿಡಿದು ಡಿಸಿಎಂ ಆಗುವವರೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಇದ್ದರು. ವರುಣಾ ಕ್ಷೇತ್ರ ಉದಯವಾದ ನಂತರ ಅಲ್ಲಿಗೆ ಹೋಗಿ ಗೆದ್ದು ಮುಖ್ಯಮಂತ್ರಿಯಾದರು. ಆದರೂ, ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಆಗಬೇಕೆಂದು ಬಯಸಿದ್ದರು.ಆದರೆ, ಜನ ಅವರನ್ನು ಕೈ ಹಿಡಿಯಲಿಲ್ಲ. ನೀವೇ ನನ್ನನ್ನು ಕೈ ಬಿಟ್ಟಿರಿ ಎಂದು ಕಾರ್ಯಕರ್ತರ ಬಳಿ ನೋವನ್ನು ಹೇಳಿಕೊಂಡಿದ್ದಾರೆ ಎಂದು ಜಿ.ಟಿ.ದೇವೇಗೌಡ ಹೇಳಿದರು.
ಸಿದ್ದರಾಮಯ್ಯ ಒಳ ಒಪ್ಪಂದಗಳ ಜನಕ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತಿರಿಸಿರುವ ಅವರು, ಅವನು ಹೇಳಿದ್ದಕ್ಕೆಲ್ಲಾ ನಾನು ಪ್ರತಿಕ್ರಿಯೆ ಕೊಡಲ್ಲ. ಚಾಮುಂಡೇಶ್ವರಿಯಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು ನಿಜ. ನಾನು ಅದನ್ನೇ ಹೇಳಿದ್ದೇನೆ. ಬಾದಾಮಿಯಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಆಯ್ಕೆ ಮಾಡಿಕೊಂಡ ಕೆಲವೇ ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದವು ಎಂದು ಆರೋಪಿಸಿದರು.
ಗೋಪಾಲ್ ಗೆ ಟಿಕೆಟ್ ಕೊಟ್ಟು ನಿಲ್ಲಿಸಿದ್ದು ಯಾರು? ಯಾರು ಒಳ ಒಪ್ಪಂದ ಮಾಡಿಕೊಂಡಿದ್ದರು ಎಂದು ಎಲ್ಲರಿಗೂ ಗೊತ್ತಿದೆ. ಅವರು ಹೇಳಿದ್ದಕ್ಕೆಲ್ಲಾ ನಾನು ಉತ್ತರ ಕೊಡಲ್ಲ ಎಂದರು.
ತಾಜ್ ವೆಸ್ಟೆಂಡ್ ನಲ್ಲಿ ಇರಲು ಸಿದ್ದರಾಮಯ್ಯ ಕಾರಣವೆಂಬ ಸಾರಾ ಮಹೇಶ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಸಿಎಂ ಆದ ಮೇಲೆ ತಾಜ್ ವೆಸ್ಟೆಂಡ್ ಗೆ ಹೋಗಿದ್ದಲ್ಲ. ಅದಕ್ಕಿಂತ ಮುಂಚೆಯೇ ಅಲ್ಲಿ ರೂಮ್ ಮಾಡಿಕೊಂಡಿದ್ದರು ಎಂದು ಮರುತ್ತರ ನೀಡಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಗೆ ಪಕ್ಷದ ಮುಖಂಡರು ಕಾರಣವೆಂದು ಹೇಳಿದ್ದೇನೆ. ಇದು ಚಾಮುಂಡೇಶ್ವರಿ ಕ್ಷೇತ್ರದ ವಿಚಾರ. ಅಲ್ಲಿಯವರ ಬಗ್ಗೆ ನಾನು ಹೇಳಿರುವುದು. ಪಕ್ಷದವರೇ ನನ್ನನ್ನು ಸೋಲಿಸಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.