Home Blog Page 3099

ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆ: ಶಾಸಕ ಯತ್ನಾಳ್

ವಿಜಯಸಾಕ್ಷಿ ಸುದ್ದಿ, ವಿಜಯಪುರ

ಮಕರ ಸಂಕ್ರಾಂತಿಗೆ ರಾಜ್ಯದಲ್ಲಿ ಐತಿಹಾಸಿಕ ಬದಲಾವಣೆಗಳಾಗಲಿದ್ದು, ಉತ್ತರ ಕರ್ನಾಟಕಕ್ಕೆ ಉತ್ತರಾಯಣ ಆಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಶಯ ವ್ಯಕ್ತಪಡಿಸಿದರು.

ವಿಜಯಪುರದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗುತ್ತದೆಯೋ ಪುನರ್ ರಚನೆಯಾಗುತ್ತೋ ಖಚಿತ ಮಾಹಿತಿ ಇಲ್ಲಾ. ಎಲ್ಲವೂ ಗೋಡಾರ್ಥವಿದೆ ಎಂದು ತಿಳಿಸಿದರು.

ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂಬುದನ್ನು ನಾನು ಹೇಳುವುದಿಲ್ಲ, ನಾನದರಲ್ಲಿಲ್ಲ್ಲ. ನಾನು ಮಂತ್ರಿಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಮಂತ್ರಿಯಾಗಲೂ ಮನಸ್ಸಿಲ್ಲ. ಹಣೆಬರಹ ಯಾರದ್ದೂ ಯಾರಿಗೂ ಗೊತ್ತಿಲ್ಲ, ಹಣೆಬರಹದಲ್ಲಿದ್ದರೆ ಸಿಎಂ ಆಗಬಹುದು. ಆಗಬಾರದು ಅಂತೆಲ್ಲಿದೆ? ಎಂದು ಹೇಳುವ ಮೂಲಕ ಸಿಎಂ ಆಗಬೇಕೆಂಬ ಕನಸನ್ನು ಯತ್ನಾಳ್ ಪರೋಕ್ಷವಾಗಿ ಬಿಚ್ಚಿಟ್ಟರು.

ಕೇಂದ್ರ ಹೈಕಮಾಂಡ್ ನೂರಕ್ಕೆ ನೂರರಷ್ಟು ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ವಿಜಯಪುರ ಜಿಲ್ಲೆಗೆ ಇಷ್ಟುದಿನ ಆದ ಅನ್ಯಾಯಕ್ಕೆ ನ್ಯಾಯ ಕೊಡುವ ಕೆಲಸ ಕೇಂದ್ರ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಶಾಲೆ ಆರಂಭದಲ್ಲಿ ಅವಸರ ಬೇಡ

ಮಕ್ಕಳ ಆರೋಗ್ಯ ಹಾಗೂ ಭವಿಷ್ಯ ಮುಖ್ಯ. ನಾನು ಶಿಕ್ಷಣ ಸಂಸ್ಥೆಯ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಒಂದು ವರ್ಷ ಶಿಕ್ಷಣ ಸಂಸ್ಥೆಗಳಿಗೆ ಹಾನಿಯಾದರೂ ನಾವು ಸಹಿಸಿಕೊಳ್ಳಬಹುದು. ಆದರೆ, ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಆಗಬಾರದು. ಹಿಂದಿನಂತೆ ಈಗ ನಾಲ್ಕೈದು ಮಕ್ಕಳ ಬದಲು, ಒಂದೆರಡು ಮಕ್ಕಳಿದ್ದು, ಪಾಲಕರು ಜೋಪಾನದಿಂದ ಬೆಳೆಸಿರುತ್ತಾರೆ. ಹಾಗಾಗಿ ಶಾಲೆ ಆರಂಭದಲ್ಲಿ ಅವಸರ ಮಾಡುವ ಅವಶ್ಯಕತೆ ಇಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ

ಸಿಎಂ ಯಡಿಯೂರಪ್ಪ ಕರ್ಫ್ಯೂ ವಾಪಸ್ ತೆಗೆದುಕೊಂಡಿದ್ದು ಸ್ವಾಗತಾರ್ಹ. ಯಾರೋ ಒಬ್ಬರ ಮಾತು ಕೇಳಿ ತೀರ್ಮಾನ ತೆಗೆದುಕೊಳ್ಳುವ ಬದಲು, ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ಯತ್ನಾಳ ಒತ್ತಾಯಿಸಿದರು.

ಬೀದಿ ಬದಿ ವ್ಯಾಪಾರಸ್ಥರಿಂದ ಹಣ ವಸೂಲಿ; ಇಬ್ಬರು ಪೊಲೀಸರು ಅಮಾನತು

ವಿಜಯಸಾಕ್ಷಿ ಸುದ್ದಿ, ಮೈಸೂರು

ರಸ್ತೆ ಬದಿ ವ್ಯಾಪಾರಿಗಳಿಂದ ಹಣ ವಸೂಲಿ ಆರೋಪದ ಹಿನ್ನೆಲೆಯಲ್ಲಿ ಪೊಲೀಸರಿಬ್ಬರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತಾ ಆದೇಶ ಹೊರಡಿಸಿದ್ದಾರೆ.

ಎಎಸ್ಐ ಕುಮಾರಸ್ವಾಮಿ ಹಾಗೂ ಪಿಸಿಆರ್ ವಾಹನ ಚಾಲಕ ಪೇದೆ ಮಣಿಕಂಠ ಅಮಾನತು ಆಗಿದ್ದಾರೆ.

ನಗರದ ಗಾಂಧಿ ಚೌಕ ವ್ಯಾಪ್ತಿಯಲ್ಲಿ ವ್ಯಾಪಾರಸ್ಥರಿಂದ ಇಬ್ಬರು ಪೊಲೀಸರು ಹಣ ವಸೂಲಿ ಮಾಡುತ್ತಿದ್ದುದ್ದನ್ನು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವೀಡಿಯೋ ವೈರಲ್ ಮಾಡಿದ್ದರು. ಹಣ ಪೀಕುತ್ತಿದ್ದ ವಿಡಿಯೋ ವೈರಲ್ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತ ಚಂದ್ರಗುಪ್ತಾ ಅವರು ಸಸ್ಪೆಂಡ್ ಮಾಡಿ ಆದೇಶಿಸಿದ್ದಾರೆ.

ನಂಜನಗೂಡು ದೇವಾಲಯದ ಹುಂಡಿ ಎಣಿಕೆ; ಹುಂಡಿಯಲ್ಲಿ ನಿಷೇಧಿತ ನೋಟುಗಳು ಪತ್ತೆ!

ವಿಜಯಸಾಕ್ಷಿ ಸುದ್ದಿ, ಮೈಸೂರು

ದಕ್ಷಿಣ ಕಾಶಿ ನಂಜನಗೂಡು ದೇವಾಲಯದ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆದಿದ್ದು, ಎರಡು ತಿಂಗಳ ಅವಧಿಯಲ್ಲಿ ಕೊರೊನಾ ಭೀತಿಯ ನಡುವೆಯೂ ಒಟ್ಟು 1,98,47,290 ರೂ. ನಗದು, 77 ಗ್ರಾಂ. ಚಿನ್ನ ಹಾಗೂ 5 ಕೆಜಿ 700 ಗ್ರಾಂ. ಬೆಳ್ಳಿ ಸಂಗ್ರಹವಾಗಿದೆ.

ಬ್ಯಾಂಕ್ ಆಫ್ ಬರೋಡ ದ ಹಿರಿಯ ಅಧಿಕಾರಿ ಹರ್ಷ ಹಾಗೂ ನಂಜುಂಡೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು.

ಹುಂಡಿ ಎಣಿಕೆ ಕಾರ್ಯ ವೇಳೆ
79,700 ರೂ. ನಿಷೇಧಿತ ನೋಟುಗಳು ಪತ್ತೆಯಾಗಿದ್ದು, 1000 ರೂ.ಮುಖಬೆಲೆಯ ಹನ್ನೆರಡು, 500 ರೂ.ಮೌಲ್ಯದ 170 ನೋಟುಗಳು ಹುಂಡಿಯಲ್ಲಿ ಸಂಗ್ರಹವಾಗಿವೆ.

1000 ಮತ್ತು 500 ರೂ. ಮೌಲ್ಯದ ನೋಟು ನೀಷೇಧವಾಗಿ ನಾಲ್ಕು ವರ್ಷ ಕಳೆದರೂ ನಂಜನಗೂಡು ಭಕ್ತರ ಬಳಿ ಚಲಾವಣೆ ಆಗದ ನೋಟುಗಳು ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ದೇವಾಲಯದ 37 ಹುಂಡಿಗಳ ಪೈಕಿ 31 ಹುಂಡಿಗಳ ಎಣಿಕೆ ಮಾಡಲಾಗಿದ್ದು, 200 ಸ್ವಸಹಾಯ ಸಂಘದ ಮಹಿಳೆಯರು ಹಾಗೂ 50 ಜನ ದೇವಾಲಯದ ಸಿಬ್ಬಂದಿ ಸೇರಿದಂತೆ 250 ಸಿಬ್ಬಂದಿಗಳಿಂದ ಎಣಿಕೆ ಕಾರ್ಯ ನಡೆಸಿದ್ದರು.

ಅಕ್ಟೋಬರ್ ನಲ್ಲಿ 73,09,620 ರೂ. ಸಂಗ್ರಹವಾಗಿತ್ತು.

ಜೀವಹಾನಿ ತಡೆಯುವ ಸಲುವಾಗಿ ನೈಟ್ ಕರ್ಪ್ಯೂ ಜಾರಿ; ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ

ವಿಜಯಸಾಕ್ಷಿ ಸುದ್ದಿ, ಗದಗ

ಸಾರ್ವಜನಿಕರಿಗೆ ತೊಂದರೆ ಆಗಬಾರದು ಹಾಗೂ ಜೀವ ಹಾನಿ ತಡೆಯುವ ಉದ್ದೇಶದಿಂದ ಮುಂಜಾಗೃತ ಕ್ರಮವಾಗಿ ನೈಟ್ ಕರ್ಪ್ಯೂ ಜಾರಿ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದರು.

ನಗರದಲ್ಲಿ ಮಾತನಾಡಿದ ಅವರು,
ವಿರೋಧ ಪಕ್ಷದವರು ಸಂಪೂರ್ಣ ಲಾಕ್ ಡೌನ್ ಮಾಡಿದರೆ, ಜನರಿಗೆ ತೊಂದರೆ ಮಾಡುತ್ತಾರೆ ಅಂತಾ ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲೂ ಲಾಕ್ ಡೌನ್ ಮಾಡಿದ್ದಾರೆ. ಅಲ್ಲಿ ಯಾವ ಸರ್ಕಾರ ಇದೆ ಎಂದು ಪ್ರಶ್ನಿಸಿದರು.

ಜನರು ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಗುಂಪು ಸೇರುತ್ತಾರೆ. ಹಾಗಾಗಿ ಒಬ್ಬರಿಂದ ಒಬ್ಬರಿಗೆ ಎರಡನೇಯ ಅಲೆ ವಿಸ್ತರಣೆ ಆಗಬಾರದು
ಎಂಬ ಕಾರಣಕ್ಕೆ ನೈಟ್ ಕರ್ಫ್ಯೂ ಜಾರಿ ಮಾಡಿದೆ ಎಂದರು.

ನೈಟ್ ಕರ್ಫ್ಯೂ ಕುರಿತು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ವಿಶ್ವನಾಥ ಅವರದ್ದು ವೈಯಕ್ತಿಕ ವಿಚಾರ. ವಿಶ್ವನಾಥ್ ಅವರ ನಿಲುವು ಪಕ್ಷದ ನಿಲುವಲ್ಲ.
ನಾವು ಮಾಡಿರುವುದು ನಮ್ಮ ಪಕ್ಷದ ನಿಲುವು ಮತ್ತು ಸರ್ಕಾರದ ನಿಲುವು ಎಂದು ಹೇಳುವ ಮೂಲಕ ನೈಟ್ ಕರ್ಫ್ಯೂ ಮಾಡಿರುವುದನ್ನು ಸಮರ್ಥಿಸಿಕೊಂಡರು.

ವಿದೇಶದಿಂದ ಬಂದವರನ್ನು ಕ್ವಾರಟೈನ್ ಮಾಡಲಾಗಿದೆ.
ಸಾರಿಗೆ ಸಂಸ್ಥೆ ಬಸ್ ಪ್ರಯಾಣದಲ್ಲಿ ಯಾವುದೇ ಬದಲಾವಣೆ ಇಲ್ಲ. ಜನರು ಜವಾಬ್ದಾರಿತನದಿಂದ ವರ್ತನೆ ಮಾಡಬೇಕು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಿವಿ ಮಾತು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ,  ಬಿಜೆಪಿ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ,  ಹಿರಿಯ ಮುಖಂಡ ಎಂ ಎಸ್ ಕರಿಗೌಡ್ರ, ಮಾಧವ ಗಣಾಚಾರಿ, ಶ್ರೀಪತಿ ಉಡುಪಿ, ರಾಜು ಕುರಡಗಿ, ಸಿದ್ದು ಪಲ್ಲೇದ, ರವಿ ದಂಡಿನ, ಬಾಬು ಯಲಿಗಾರ ಸೇರಿದಂತೆ ಇತರರು ಇದ್ದರು.

ವಿರೋಧ ಪಕ್ಷಗಳ ಒಕ್ಕೂಟ ರೈತರನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿದೆ; ಸಚಿವ ಸವದಿ ಆರೋಪ

ವಿಜಯಸಾಕ್ಷಿ ಸುದ್ದಿ, ಗದಗ

ನಾನು ಕೂಡಾ ರೈತ ಕುಟುಂಬದಿಂದ ಬಂದಿದ್ದೇನೆ. ನಾನೂ ಮೊದಲು ಹತ್ತಿ, ಬೆಲ್ಲ ಎಪಿಎಂಸಿ ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಿದ್ದೇನೆ. ದಲ್ಲಾಳಿಗಳಿಂದ ಸುಲಿಗೆ ಆಗುತ್ತಿತ್ತು. ರೈತರಿಗೆ ಅನುಕೂಲವಾಗುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿಗೆ ಉಪಯೋಗಿಸುವ ಜಮೀನಿನನ್ನು ಕೈಗಾರಿಕೆಗೆ ಒಳಸುವಂತಿಲ್ಲಾ ಎಂಬುವುದು ಕೃಷಿ ಕಾನೂನಿನಲ್ಲಿ ಸ್ಪಷ್ಟವಾಗಿದೆ.ವಿರೋಧ ಪಕ್ಷಗಳ ಒಕ್ಕೂಟ ರೈತರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ರಾಜ್ಯದ ರೈತರಿಗೆ ಮನವಿ ಮಾಡುತ್ತೇನೆ. ಇದು ರೈತರ ಪರವಾಗಿ ಇರುವ ಕಾನೂನು. ಪ್ರತಿಭಟನೆ ಮಾಡುವವರಿಗೆ ಬುದ್ದಿವಾದ ಹೇಳಬೇಕು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಬುದ್ಧಿವಾದ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ಹಿರಿಯ ಮುಖಂಡ ಎಂ ಎಸ್ ಕರಿಗೌಡ್ರ, ಮಾಧವ ಗಣಾಚಾರಿ, ಶ್ರೀಪತಿ ಉಡುಪಿ, ರಾಜು ಕುರಡಗಿ, ಸಿದ್ದು ಪಲ್ಲೇದ, ರವಿ ದಂಡಿನ, ಬಾಬು ಯಲಿಗಾರ ಸೇರಿದಂತೆ ಇತರರು ಇದ್ದರು.

ನಕ್ಕು ನಲಿದಾಡಿದ ಪೋಲಿಸರು: ಪೋಲಿಸರ ಮಾನಸಿಕ ಒತ್ತಡ ದೂರ ಮಾಡಿದ ಹೌದ್ದ ಹುಲಿಯಾ ನಾಟಕ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕಳೆದ ಹಲವಾರು ದಿನಗಳಿಂದ ಸತತವಾಗಿ ಬಂದೋಬಸ್ತಿನಲ್ಲಿದ್ದ ಇಡೀ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಂದು ನಕ್ಕು ನಲಿದಾಡಿದರು. ಅದಕ್ಕೆ ಕಾರಣವಾಗಿದ್ದು ಹೌದ್ದ ಹುಲಿಯಾ ನಾಟಕ.

ಕೊಪ್ಪಳದ ಬುಧವಾರ 50ನೇ ಪ್ರದರ್ಶನ ಪೂರ್ಣಗೊಂಡ ನಿಮಿತ್ತ ವಿಶೇಷ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಅಂದ್ರೆ ಈ ನಾಟಕದ ಪ್ರೇಕ್ಷಕರೆಲ್ಲರೂ ಪೋಲಿಸ್ ಇಲಾಖೆಯವರು. ಮಹಿಳಾ ಸಿಬ್ಬಂದಿ, ಟ್ರೇನಿಂಗ್ ನಲ್ಲಿರುವ ಪೋಲಿಸರು ಸೇರಿದಂತೆ ಅಂದಾಜು ನೂರಕ್ಕೂ ಹೆಚ್ಚು ಪೋಲಿಸರು ಇಂದು ಹೌದ್ದ ಹುಲಿಯಾ ನಾಟಕ ನೋಡಿ ನಕ್ಕು ನಕ್ಕು ಸುಸ್ತಾದರು.

ಡಿವೈಎಸ್ಪಿ ವೆಂಕಟಪ್ಪ ನಾಯಕ ಇಡೀ ಇಲಾಖೆಯ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಗಳನ್ನು ಕರೆತಂದು ನಾಟಕ ತೋರಿಸಿದರು. ಕರೋನಾ, ಚುನಾವಣೆ ಬಂದೋಬಸ್ತ್‌ನಿಂದ ಸತತವಾಗಿ ಒತ್ತಡದಲ್ಲಿ ಪೋಲಿಸರು ರಿಲ್ಯಾಕ್ಸ್ ಆದರು.

ನಾಟಕದ ಕೊನೆಯ ಸನ್ನಿವೇಶಕ್ಕೂ ಮೊದಲು ಡಿವೈಎಸ್ಪಿ ವೆಂಕಟಪ್ಪ ನಾಯಕ ನೇತೃತ್ವದಲ್ಲಿ ಡಿಆರ್ ಡಿಎಸ್ಪಿ ಶಶಿಕಾಂತ, ಸಿಪಿಐಗಳಾದ ವಿಶ್ವನಾಥ ಹಿರೇಗೌಡರ, ಮಾರುತಿ ಗುಳ್ಳಾರಿ, ಮೌನೇಶ್ವರ ಮಾಲಿಪಾಟೀಲ್, ನಾಗಿರೆಡ್ಡಿ, ಸೇರಿದಂತೆ ಇತರ ಅಧಿಕಾರಿಗಳು ವೇದಿಕೆಯ ಮೇಲೆ ನಟ ನಟಿಯರನ್ನು ಆತ್ಮೀಯವಾಗಿ ಸನ್ಮಾನಿಸಿ , ಕಾಣಿಕೆ ನೀಡಿದರು.

ಇಡೀ ಸಿಬ್ಬಂದಿ ವರ್ಗ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅವರಿಗೆ ಸ್ವಲ್ಪಮಟ್ಟಿಗೆ ರಿಲೀಪ್ ಸಿಗಲಿ ಎನ್ನುವ ಕಾರಣಕ್ಕೆ ಇವತ್ತು ಈ ಪ್ರದರ್ಶನ ಆಯೋಜನೆ ಮಾಡಿದ್ದೇವೆ. ಕಲಾವಿದರಾದ ಭರತ್ ತಾಳಿಕೋಟೆಯವರ ತಂದೆ ರಾಜು ತಾಳಿಕೋಟೆಯವರು ಅತ್ಯುತ್ತಮ ಕಲಾವಿದರು. ಇಂತಹ ಕಲೆಗೆ ಯಾವತ್ತೂ ಪ್ರೋತ್ಸಾಹ ನೀಡುತ್ತೇವೆ ಎಂದು ಡಿಎಸ್ಪಿ ವೆಂಕಟಪ್ಪ ನಾಯಕ ಹೇಳಿದರು.

ನಾಟಕ ನೋಡಲು ಪಿಎಸ್ಐ‌ಗಳಾದ ನಾಗರಾಜ ಮೇಕಾ, ಅಮರೇಶ ಹುಬ್ಬಳ್ಳಿ, ವೆಂಕಟೇಶ ,ಚಂದ್ರಪ್ಪ, ಬಸವರಾಜ್, ಸುಪ್ರಿತ್,ಹನುಮಂತ ತಳವಾರ ಸೇರಿದಂತೆ ಇತರ ಅಧಿಕಾರಿಗಳು , ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೊವಿಡ್-19: ಗದಗ ಜಿಲ್ಲೆಯ ಬುಧವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಡಿಸೆಂಬರ್‌ 23 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 159807 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 165458 ಮಾದರಿಗಳಲ್ಲಿ 154350 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 233 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 07 (ಗದಗ-05, ಮುಂಡರಗಿ-01, ಹೊರ ಜಿಲ್ಲೆಯ-01) ಪ್ರಕರಣಗಳು ಸೇರಿದಂತೆ ಒಟ್ಟು 10875 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 05 ಜನ ಸೇರಿದಂತೆ ಒಟ್ಟು 10703 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 31 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಇಂದಲ್ಲ, ನಾಳೆಯಿಂದ ನೈಟ್ ಕರ್ಪ್ಯೂ ಜಾರಿ; ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದಿಢೀರ್ ರಾತ್ರಿ ಕರ್ಪ್ಯೂ ಘೋಷಣೆಯಿಂದ ರಾಜ್ಯದ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಬುಧವಾರ ಘೋಷಿಸಿರುವ ನೈಟ್ ಕರ್ಪ್ಯೂ ನಾಳೆಯಿಂದ ಜಾರಿಯಾಗಲಿದೆ ಎಂದಿರುವ ರಾಜ್ಯ ಸರ್ಕಾರ ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕೆಲವು ಬದಲಾವಣೆ ಮಾಡಿದೆ.

ಗುರುವಾರ (ಡಿ.24) ರಂದು ರಾತ್ರಿ 11 ರಿಂದ 5 ರವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ ಕೊರೋನಾ ಹೊಸ ವೈರಸ್; ಇಂದಿನಿಂದ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ

ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆಗೆ ಅವಕಾಶ ಕಲ್ಪಿಸಿದ್ದು,
ಯಾವುದೇ ಧಾರ್ಮಿಕ ಕಾರ್ಯಕರ್ಮಗಳಿಗೆ ಅಡಚಣೆ ಇಲ್ಲದೇ ಪ್ರಾರ್ಥನೆ ಸಲ್ಲಿಸಬಹುದು.

ನೈಟ್ ಕರ್ಪ್ಯೂ ಸಂದರ್ಭದಲ್ಲಿ ಬಸ್, ರೈಲು ಸಂಚಾರಕ್ಕೆ ಯಾವುದೇ ಅಡತಡೆ ಇರುವುದಿಲ್ಲ. ಬಸ್ ಸಂಚಾರ ನಿರಂತರವಾಗಿ ಓಡಾಡುವುದಕ್ಕೆ ಅವಕಾಶವಿದೆ. ಆಟೋ, ಟ್ಯಾಕ್ಸಿಗಳಿಗೂ ಅವಕಾಶ ಕಲ್ಪಿಸಿದ್ದು, ಪ್ರಯಾಣಿಕರನ್ನು ಕರೆದುಕೊಂಡು ಹೋಗಬಹುದು. ರೈಲು, ಬಸ್, ವಿಮಾನ ನಿಲ್ದಾಣಗಳಲ್ಲಿ ಸೇವೆ ಒದಗಿಸಬಹುದು.

ಬ್ರಿಟನ್ ಹೈಸ್ಪೀಡ್ ಕೊರೋನಾ ವೈರಸ್ ; ಜನವರಿ 1 ರಿಂದ ಶಾಲಾ-ಕಾಲೇಜು ಆರಂಭ ಅನುಮಾನ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಚೀನಾ ವೈರಸ್ ತಡೆಗಟ್ಟಿದ ಬೆನ್ನಲ್ಲೇ ಮತ್ತೊಂದು ಬ್ರಿಟನ್ ಹೈಸ್ಪೀಡ್ ಕೊರೋನಾ ವೈರಸ್ ತಡೆಗಟ್ಟಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ರಾತ್ರಿ ಕರ್ಪ್ಯೂ ಜಾರಿ ಮಾಡಿದೆ‌.

ಇದರಿಂದ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ತುರ್ತು ಸೇವೆ ಹೊರತುಪಡಿಸಿ ಇನ್ನುಳಿದ ಎಲ್ಲಾ ಸೇವೆಗಳು ಬಂದ್ ಆಗಿರಲಿವೆ. ರಾಜ್ಯದಲ್ಲಿ ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಲಿದೆ.

ಶಾಲಾ- ಕಾಲೇಜು ಆರಂಭದ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕಳೆದ ಡಿ.19 ರಂದು ಜನವರಿ 1 ರಿಂದ 10 ಮತ್ತು 12ನೇ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಪ್ರಾರಂಭಿಸಲಾಗುವುದು. ಅದರಂತೆ ಜ.1 ರಿಂದ 6 ರಿಂದ 9 ತರಗತಿ ಮಕ್ಕಳಿಗೆ ವಿದ್ಯಾಗಮ ತರಗತಿಗಳನ್ನು ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದರು.

ಇದೀಗ ಬ್ರಿಟನ್ ಹೈಸ್ಪೀಡ್ ಕೊರೋನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲಾ- ಕಾಲೇಜು ಪುನರಾರಂಭದ ಬಗ್ಗೆ ಸರ್ಕಾರ ಇನ್ನೂ ಎರಡು ದಿನಗಳವರೆಗೆ ಕಾದು ನೋಡುವ ನಿರ್ಧಾರಕ್ಕೆ ಬಂದಿದೆ. ಈ ಕುರಿತು ಡಿ.28 ರಂದು ಮತ್ತೊಂದು ಸುತ್ತಿನ ತಜ್ಞರ ಸಭೆ ನಡೆಸಿ ಶಾಲೆ ಆರಂಭದ ಕುರಿತು ತೀರ್ಮಾನ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

ಹಾಗಾಗಿ ಜನವರಿ 1 ರಿಂದ ಶಾಲಾ ಕಾಲೇಜುಗಳು ಆರಂಭವಾಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.

ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನ್ಯಾಪ್ ಕೇಸ್: ಆರೋಪಿ ಕವಿರಾಜ್ ಸೇರಿ ಐವರ ಬಂಧನ

ವಿಜಯಸಾಕ್ಷಿ ಸುದ್ದಿ, ಕೋಲಾರ

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣಕ್ಕೆ ಸಂಬಧಿಸಿದಂತೆ ಅಪಹರಿಸಿದ್ದ ಆರು ಜನ ಅಪಹರಣಕಾರರನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಗಳಿಂದ ಮಾರಕಾಸ್ತ್ರ, ಮೊಬೈಲ್ ಸೇರಿದಂತೆ ಸುಮಾರು 20 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಕವಿರಾಜ್(43), ಲಿಖಿತ್(20), ಉಲ್ಲಾಸ್(21), ಮನೋಜ್(20), ರಾಘವೇಂದ್ರ(34), ಪ್ರವೀಣ್(20) ಬಂಧಿತ ಆರೋಪಿಗಳಾಗಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿದ ಐಜಿ ಸೀಮಂತ್ ಕುಮಾರ್ ಸಿಂಗ್ ಅವರು, ಆರೋಪಿಗಳ ಪತ್ತೆಗಾಗಿ ಕರ್ನಾಟಕ, ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡು ಅಲೆದಾಡಿದ್ದು, ಪ್ರಕರಣದ ಎ1 ಆರೋಪಿಯಾಗಿರುವ ಕವಿರಾಜ್ ಎಂಬುವವನನ್ನು ತಮಿಳುನಾಡಿನ ಮಧುರೈನಲ್ಲಿ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಅಲ್ಲಿಂದಲೇ ತಪ್ಪಿಸಿಕೊಂಡಿದ್ದು, ಅವನ ಪತ್ತೆಗೆ ಹುಡುಕಾಟ ನಡೆದಿದೆ. ಕವಿರಾಜ್ ವಿರುದ್ಧ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ 10 ಪ್ರಕರಣಗಳಿವೆ. ತಮಿಳುನಾಡು ಮತ್ತು ಬೆಂಗಳೂರಿನಲ್ಲೂ ಕೇಸ್‌ಗಳಿವೆ ಎಂದು ಮಾಹಿತಿ ನೀಡಿದರು.

ನ.25 ರಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿದ್ದ ಆರೋಪಿಗಳು ನ.28 ರಂದು ಮೂರು ದಿನಗಳ ಬಳಿಕ ಹೊಸಕೋಟೆ ತಾಲೂಕಿನ ನಂದಗುಡಿಯ ಶಿವನಾಪುರ ಬಳಿ ಬಿಟ್ಟಿದ್ದರು. ಈ ಅವಧಿಯಲ್ಲಿ ಅಪಹರಣಕಾರರು ಒಟ್ಟು 48 ಲಕ್ಷ ತೆಗೆದುಕೊಂಡಿದ್ದರು. ಅದರಲ್ಲಿ ಸದ್ಯ 20,50,000 ರೂ. ಹಣ ಮರಳಿ ಪಡೆದಿದ್ದು, ಇನ್ನುಳಿದ ಹಣವನ್ನು ವಾಪಾಸ್ ಪಡೆಯಲಾಗುವುದು ಎಂದು ಐಜಿ ತಿಳಿಸಿದರು.

ಮಾಜಿ ಸಚಿವರ ಕಿಡ್ನ್ಯಾಪ್ ಪ್ರಕರಣದ ತನಿಖೆಯನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಾಯಿಲ್ ಅವರ ನೇತೃತ್ವದ ತಂಡ ಕಾರ್ಯಚರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಈ ಕಾರ್ಯಾಚರಣೆಗೆ ಇಬ್ಬರು ಎಎಸ್‌ಪಿ, 3 ಸಿಪಿಐ, 3 ಪಿಎಸ್‌ಐ, 2 ಎಎಸ್‌ಐ, 4 ಹೆಚ್‌ಸಿ, 6 ಜನ ಪಿಸಿ ಅವರನ್ನು ಬಳಸಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.

ಈ ಕೃತ್ಯಕ್ಕೆ ಎರಡು ಮಾರುತಿ ಶಿಫ್ಟ್, ಒಂದು ಮಾರುತಿ ರಿಟ್ಜ್, ಇನೋವಾ, ಕೆಟಿಎಂ ಡ್ಯುಕ್, ಡ್ರಾಗರ್, ಕಬ್ಬಿಣದ ಲಾಂಗ್, ಬೇಸ್ ಬಾಲ್ ಬ್ಯಾಟ್, ಮಚ್ಚು, ಕಾರಿನ ನಂಬರ್ ಪ್ಲೇಟ್, ಮಂಕಿ ಟೋಪಿ ಬಳಸಿದ್ದರು ಎಂದು ತಿಳಿಸಿದ ಅವರು, ತನಿಖೆಯ ಸಿಬ್ಬಂದಿಗಳಿಗೆ 50 ಸಾವಿರ ನಗದು ಹಾಗೂ ಪ್ರಮಾಣಪತ್ರ ನೀಡುವ ಮೂಲಕ ಐಜಿ ಸೀಮಂತ್ ಕುಮಾರ್ ಸಿಂಗ್ ಅಭಿನಂದಿಸಿದರು.

error: Content is protected !!