ಇಂಡಿಯನ್ ರಿಜರ್ಸ್ ಬಟಾಲಿಯನ್‌ಗೆ (ಐಆರ್‌ಬಿ) ಬುಧವಾರ ಸಚಿವರಾದ ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ ಹಾಗೂ ಪ್ರಭು ಚಹ್ವಾಣ್ ಭೇಟಿ ನೀಡಿ, ಅಲ್ಲಿನ ಪ್ರಗತಿ ಕಾರ್ಯಗಳ ಕುರಿತು ಮೆಚ್ಚುಗೆ ಸೂಚಿಸಿದರು.
ಹೊಸಪೇಟೆಯಿಂದ ಕೊಪ್ಪಳಕ್ಕೆ ಹೋಗುವಾಗ ಸಂಸದ ಕರಡಿ ಸಂಗಣ್ಣ ಅವರ ಒತ್ತಾಸೆಗೆ ಮಣಿದು ಸಚಿವರಾದ ಜಗದೀಶ್ ಶೆಟ್ಟರ್, ಶಶಿಕಲಾ ಜೊಲ್ಲೆ, ಪ್ರಭು ಚವಾಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಡಾ.ಸಂದೀಪ್, ನೇಮಿರಾಜ್ ನಾಯಕ್ ಸೇರಿದಂತೆ ಇತರ ಮುಖಂಡರು ಐ ಆರ್ ಬಿ ಕೇಂದ್ರ ಮುನಿರಾಬಾದ್ ಗೆ ಭೇಟಿ ನೀಡಿದರು.
ಭೇಟಿ ನೀಡಿದ ಸವಿ ನೆನಪಿಗಾಗಿ ಐಆರ್‌ಬಿ ಸಿಬ್ಬಂದಿ ಸಸಿ ನೆಡುವಂತೆ ಮನವಿ ಮಾಡಿದ್ದರಿಂದ ಆಗಮಿಸಿದ ಗಣ್ಯರು ಐಆರ್‌ಬಿ ಆವರಣದಲ್ಲಿ ಸಸಿ ನೆಟ್ಟರು.
ಬಟಾಲಿಯನ್‌ನ ಆವರಣದೊಳಗೆ ನಡೆದ ಹಲವು ಅಭಿವೃದ್ಧಿ ಕೆಲಸಗಳ ಸ್ಥಳಗಳಿಗೆ ಭೇಟಿ ನೀಡಿ ಇದೊಂದು ಮಾದರಿ ಬಟಾಲಿಯನ್ ಎಂದು ಶೆಟ್ಟರ್ ಸೇರಿದಂತೆ ವಿವಿಧ ಗಣ್ಯರು ಶ್ಲಾಘಿಸಿದರು.
ಈ ವೇಳೆ ಮಾತನಾಡಿದ ಐಆರ್‌ಬಿಯ ಸಹಾಯಕ ಕಮಾಂಡೆಂಟ್ ಸತೀಶ್.ಇ. ಅವರು, ಹಲವು ದಾನಿಗಳ ಸಹಾಯ, ಸಹಕಾರದಿಂದ ಬಟಾಲಿಯನ್‌ನ ಸಿಬ್ಬಂದಿಯ ದೈಹಿಕ ಶ್ರಮದಿಂದ 5 ಎಕರೆ ಜಾಗದಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ ಎಂದು ವಿವರಿಸಿದರು.
ಐಆರ್‌ಬಿ ಯಲ್ಲಿ ರಸ್ತೆ ಸಮಸ್ಯೆ ಇದ್ದು, ಸರಕಾರದ ಸಹಕಾರ ಸಿಕ್ಕರೆ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಈ ರೀತಿ ಪೊಲೀಸರೇ ಸೇರಿ ಕೆರೆ ನಿರ್ಮಿಸಿರುವುದು ರಾಜ್ಯದಲ್ಲೇ ಮೊದಲು. ಸುತ್ತ ಮುತ್ತ ಗಿಡ-ಮರ ಬೆಳೆಸಿ, ಇಲ್ಲಿನ ಸಿಬ್ಬಂದಿಯೇ ವಿನ್ಯಾಸ ಮಾಡಿದ ಅಶೋಕ ಸ್ತಂಭ ಮನಮೋಹಕ. ರಸ್ತೆ ಅಭಿವೃದ್ಧಿ ಕುರಿತು ಅಂದಾಜು ಪಟ್ಟಿಸಮೇತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಐಆರ್‌ಬಿ ಕೇಂದ್ರದಲ್ಲಿ ಅಂಗನವಾಡಿ ಕೇಂದ್ರ ಸ್ಥಾಪಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಕಾರ್ಯ ಆರಂಭಿಸಲಾಗುವುದು ಎಂದರು.
ಕಮಾಂಡೆಂಟ್ ಬಾ.ರಾಮಕೃಷ್ಣ ಸ್ವಾಗತಿಸಿದರು. ಡಿ ಜಿ ಮತ್ತು ಐ.ಜಿಯವರು ಈ ಕೇಂದ್ರಕ್ಕೆ ಭೇಟಿ ನೀಡಿದಾಗ ಭಾರತದಲ್ಲಿರುವ ರಿಸರ್ವ್ ಕೇಂದ್ರಗಳಲ್ಲೇ ಒಂದು ಮಾದರಿ ಎಂದು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದನ್ನು ಐಆರ್‌ಬಿ ಸಿಬ್ಬಂದಿ ಸ್ಮರಿಸಿದರು.
ಎಲ್ಲರಿಗೂ ಹಾಗೆ ಬ್ಲಾಕ್ ಮೇಲ್ ಮಾಡೋಕೆ ಆಗಲ್ಲ. ವೀಕ್ ಚೀಫ್ ಮಿನಿಸ್ಟರ್ ಗೆ ಮಾತ್ರ ಬ್ಲಾಕ್ ಮೇಲ್ ಮಾಡ್ತಾರೆ. ಸಿಡಿ ಬ್ಲಾಕ್ ಮೇಲ್ ಬಗ್ಗೆ ಸಿಎಂ ಕ್ರಿಮಿನಲ್ ಕೇಸ್ ದಾಖಲು ಮಾಡಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಮಾತನಾಡಿರುವ ಅವರು, ನಾವೇನೂ ಆರೋಪ ಮಾಡ್ತಿಲ್ಲ. ಅವರ ಪಕ್ಷದವರೇ ಆರೋಪ ಮಾಡಿರೋದು. ಅದರಲ್ಲಿ ಸತ್ಯ ಇದೆ ಅಲ್ವಾ. ನಾವ್ ಮಾಡಿದ್ರೆ ವಿರೋಧ ಪಕ್ಷದವರು ಅಂತಾರೆ. ಹಾಗಾಗಿ ಅವರು ಬ್ಲಾಕ್ ಮೇಲ್ ಗೆ ಒಳಗಾಗಿದ್ದಾರೋ ಅಥವಾ ಒತ್ತಡಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ. ಅದಕ್ಕೆಲ್ಲಾ ತನಿಖೆ ಮಾಡಿ ಅಂತ ಹೇಳಲ್ಲ, ಕ್ರಿಮಿನಲ್ ಕೇಸ್ ಕೊಡಲಿ ಎಂದು ಹೇಳ್ತೀನಿ ಎಂದರು.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಬಗ್ಗೆ ಬಹಳ ಹಿಂದೆಯೇ ನಾನು ಹೇಳಿದ್ದೇನೆ. ಬಿಡಿಎ ಹಗರಣದಲ್ಲಿ 7 ಕೋಟಿ 40 ಲಕ್ಷ ಹಣ ಅವರ ಕುಟುಂಬದವರ ಖಾತೆಗೆ ಹೋಗಿದೆ. ಅದರ ಅರ್ಥ ಕುಟುಂಬ ರಾಜಕಾರಣ ಇದೆ ಅಂತ ಅಲ್ವಾ ಎಂದು ಪ್ರಶ್ನಿಸಿದರು.
ಈ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ, ಜನರೇ ಉತ್ತರ ಕೊಡುತ್ತಾರೆ. ನನ್ನ ಕಾಲದಲ್ಲಿ ಉಂಟಾಗಿದ್ದ ಎಲ್ಲ ಜನಪರ ಕೆಲಸಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಾಯಕತ್ವ ಬದಲಾವಣೆಗೆ ಸಿದ್ದರಾಮಯ್ಯ ದಿನಾಂಕ ನಿಗದಿ ಮಾಡಲಿ ಎಂಬ ಬಿಎಸ್ವೈ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಇಷ್ಟು ದಿನಗಳ ಕಾಲ ಮಂತ್ರಿ ಮಂಡಲ ವಿಸ್ತರಣೆ ಯಾಕೆ ಮಾಡಿರಲಿಲ್ಲ. ಮಂತ್ರಿ ಮಂಡಲ ವಿಸ್ತರಣೆಗೆ ಯಾಕೆ ತಡವಾಯಿತು, ಗೋಗರೆದು ಕೈಕಾಲು ಕಟ್ಟಿ ಮಂತ್ರಿ ಮಂಡಲ ವಿಸ್ತರಣೆ ಮಾಡಿಸಿಕೊಂಡಿರೋದು ಎಂದು ವ್ಯಂಗ್ಯವಾಡಿದರು.
ಸಚಿವ ಸಂಪುಟದಿಂದ ಪಕ್ಷೇತರನಾಗಿ ಕಾಂಗ್ರೆಸ್ ಪಕ್ಷದ ಸಹಾಯದೊಂದಿಗೆ ಗೆದ್ದಿದ್ದ ಶಾಸಕ ನಾಗೇಶ್ ರನ್ನ ಕೈಬಿಟ್ಟಿದ್ದಾರೆ. ಯಾವ ಕಾರಣಕ್ಕೆ ಬಿಟ್ಟಿದ್ದಾರೆ ಎಂದು ಕಾರಣ ಕೊಟ್ಟಿಲ್ಲ. ಅವರೂ ಆಪರೇಷನ್ ಕಮಲಕ್ಕೆ ಒಳಪಟ್ಟವರು. ಈಗ ಮುನಿರತ್ನನನ್ನು ಕೈ ಬಿಟ್ಟಿದ್ದಾರೆ. ಕಾನೂನು ತೊಡಕಿದೆ ಎಂದು ಗೊತ್ತಿದ್ದರೂ ಯಾಕೆ ಕರೆದುಕೊಂಡರು. ಅವನನ್ನು ಮಿನಿಸ್ಟರ್ ಮಾಡಲು ಆಗಲಿಲ್ಲ ಎಂದ ಮೇಲೆ ಯಾಕೆ ತಗೆದುಕೊಂಡ್ರು.? ವಿಶ್ವನಾಥ್ ಪಾಪ ಬಾಯಿ ಬಡ್ಕೊತ್ತಿದ್ದಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.
ಏಳು ಜನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರದ ಬಳಿಕ ಶಾಸಕ ಮುನಿರತ್ನ ಅವರು ಕಡೆಗೂ ಮೌನ ಮುರಿದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣೆ ಬರಹದಲ್ಲಿ ಬರೆದಿದ್ದರೆ ಸಚಿವನಾಗುವುದನ್ನ ತಪ್ಪಿಸಲು ಆಗುವುದಿಲ್ಲ ಎಂದಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಅವರು ಮಂತ್ರಿಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ನಾನು ಪಕ್ಷದ ಕಾರ್ಯಕರ್ತನಾಗಿದ್ದೇನೆ. ಮೂರು ಬಾರಿ ಶಾಸಕನಾಗಿರುವುದು ದೈವ ಕೃಪೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಪಕ್ಷ, ವರಿಷ್ಠರು, ಮುಖ್ಯಮಂತ್ರಿಗಳ ಬಗ್ಗೆ ತಪ್ಪಾಗಿ ಮಾತನಾಡುವುದಿಲ್ಲ. ಹಾಗೆ ಯಾರು ಮಾತನಾಡಬಾರದು ಎಂದರು.
ಅವರೆಲ್ಲಾ ಬಹಳಷ್ಟು ಜನ ಬ್ಯೂಸಿ ಇದ್ದಾರೆ. ಎಲ್ಲಾ ಸಚಿವರು ಬ್ಯೂಸಿ ಇದ್ದಾರೆ. ಒಬ್ಬರು ದಾವಣಗೆರೆ ಅಂತಾರೆ, ಇನ್ನೊಬ್ಬರು ಮತ್ತೊಂದು ಅಂತಾರೆ. ಅವರನ್ನ ನೋಡಿದರೆ ಬಿಜೆಪಿ ಪಕ್ಷಕ್ಕೆ ಪ್ರಮಾಣಿಕವಾಗಿ ಮತ್ತು ದಿನದ ಇಪ್ಪತ್ನಾಲ್ಕು ತಾಸು ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಮಿತ್ರ ಮಂಡಳಿಯ ಸದಸ್ಯ ಹಾಗೂ ಸಚಿವ ಬೈರತಿ ಬಸವರಾಜ್ ವಿರುದ್ಧ ಕಿಡಿಕಾರಿದರು.
ಯತ್ನಾಳ್ ಅವರ ಸಿಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಬಳಿ ಸಿಡಿ ಇದೆಯಾ, ಇದ್ರೆ ತೋರಿಸಿ. ಸುಮ್ಮನೆ ಗೊಂದಲ ಸೃಷ್ಟಿಸುವ ಅನಗತ್ಯ ಹೇಳಿಕೆ ನೀಡಬಾರದು. ರಾಜ್ಯದ ಮುಖ್ಯಮಂತ್ರಿಯವರ ಬಗ್ಗೆ ಆಧಾರ ರಹಿತ ಆರೋಪ ಮಾಡಬಾರದು ಎಂದು ಶಾಸಕ ಮುನಿರತ್ನ ಹೇಳಿದರು.
ಅಧಿಕಾರಿ ಹಾಗೂ ಶಿಕ್ಷಕರ ನಡುವಿನ ಕೊಂಡಿಯಾಗಿ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಕೆಲಸ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಪಾಟೀಲ ತಿಳಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ಶಿಕ್ಷಕರ ಶೈಕ್ಷಣಿಕ ಸಮಸ್ಯೆ, ಕುಂದು ಕೊರತೆಗಳಿಗೆ ಸ್ಪಂದಿಸಲಾಗುವುದು, ಶಿಕ್ಷಕರು ತಮ್ಮ ಕೆಲಸಗಳಿಗೆ ಬಿಇಓ ಕಚೇರಿಗೆ ವಿನಾಃ ಕಾರಣ ಅಲೆದಾಡದಂತೆ ಸಂಘಟನೆಗಳ ಪದಾಧಿಕಾರಿಗಳು ನೋಡಿಕೊಳ್ಳಬೇಕು ಜನರ ಕೆಂಗೆಣ್ಣಿಗೆ ಯಾವ ಶಿಕ್ಷಕರು ಗುರಿಯಾಗಬಾರದು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ವಿ. ವಿ. ಗೊಂಡಬಾಳ ಮಾತನಾಡಿ, ಶಿಕ್ಷಕರ ಆತ್ಮ ವಿಶ್ವಾಸ ಹೆಚ್ಚಿಸುವ ಹಾಗೂ ಧನಾತ್ಮಕ ಚಿಂತನೆ ಮೂಡಿಸುವ ಕಾರ್ಯಕ್ರಮಗಳನ್ನು ಶಿಕ್ಷಕರ ಸಂಘಟನೆಗಳು ಮಾಡಬೇಕು, ಶಿಕ್ಷಕರು ವೃತ್ತಿಯಲ್ಲಿ ಬದ್ದತೆ, ಪ್ರಾಮಾಣಿಕತೆ ರೂಢಿಸಿಕೊಂಡು ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕೆಂದು ತಿಳಿಸಿದರು.
ಎನ್.ಪಿ.ಎಸ್ ಶಿಕ್ಷಕರ ಪಾನ್ ಖಾತೆಯ ವಿವರಗಳನ್ನು ಸರಿ ಪಡಿಸುವುದು, ಎಜಿಟಿ ಹಾಗೂ ಕೃಪಾಂಕದಡಿಯಲ್ಲಿ ನೇಮಕಗೊಂಡಿರುವ ಮತ್ತು 10, 15 ಮತ್ತು 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಟೈಪ್ ಬಾಂಡ್ ನ ಬಾಕಿ ವೇತನ ಪಾವತಿಸುವುದು, ಮುಖ್ಯಶಿಕ್ಷಕರ ಬಡ್ತಿ ವೇತನ, ಮುಖ್ಯಶಿಕ್ಷಕರ ಹುದ್ದೆಗೆ ಪದೋನ್ನತಿ ಪಡೆದ ಶಿಕ್ಷಕರಿಗೆ ಚಾಲನಾ ಆದೇಶ ನೀಡುವುದು ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಜತೆಗೆ ಚರ್ಚಿಸಲಾಯಿತು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಅವರನ್ನು ಬುಧವಾರ ಸನ್ಮಾನಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗಂಗಾವತಿ ಘಟಕದ ಅಧ್ಯಕ್ಷ ಚಾಂದಪಾಷ, ಕನಕಗಿರಿ ತಾಲ್ಲೂಕು ಅಧ್ಯಕ್ಷೆ ಶಂಶಾದಬೇಗ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಡಿ. ಜಿ. ಸಂಗಮ್ಮನವರ್, ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜುಳಾ ಶಾವಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ರಾಮಚಂದ್ರ ಮಾಕಣ್ಣವರ್ (ಕನಕಗಿರಿ) , ರುದ್ರಗೌಡ ಪಾಟೀಲ( ಗಂಗಾವತಿ) ಖಜಾಂಚಿ ಎಚ್. ಎಸ್. ಚೇತನಕುಮಾರ, ಶಿಕ್ಷಕರಾದ ಶೇಖರಯ್ಯ ಹಿರೇಮಠ, ಉಮೇಶ, ಪರಶುರಾಮ ಇದ್ದರು.
ಸುಳ್ಯ ಶಾಸಕ ಎಸ್.ಅಂಗಾರ ಸಚಿವರಾಗಿರುವುದು ಖುಷಿ ತಂದಿದೆ. ಕೊನೆಗೂ ಸುಳ್ಯ ಜನತೆಯ ಬೇಡಿಕೆ ಈಡೇರಿದೆ. ಮಂಗಳೂರಿನ ಹೊಸ ಸಚಿವರಿಗೆ ನಾವು ಸದಾ ಬೆಂಬಲ ಕೊಡುತ್ತೇವೆ. ಆದರೆ, ದಕ್ಷಿಣ ಕನ್ನಡದ ಹಿರಿಯ ಉಸ್ತುವಾರಿ ಸಚಿವರ ಬದಲಾವಣೆ ಎಷ್ಟು ಸರಿ.? ಎಂದು ಮಾಜಿ ಸಚಿವ ಯುಟಿ ಖಾದರ್ ಪ್ರಶ್ನಿಸಿದರು.
ಮಂಗಳೂರಿನಲ್ಲಿ ಈ ಕುರಿತು ಮಾತನಾಡಿರುವ ಅವರು, ಬ್ಲಾಕ್ ಮೇಲ್ ಮಾಡಿ ಸಚಿವ ಸ್ಥಾನ ನೀಡಲಾಗಿದೆಯಾ? ಎಂಬ ಬಗ್ಗೆ ಜನರು ಈ ಎಲ್ಲಾ ವಿಚಾರ ಅರ್ಥ ಮಾಡಿಕೊಳ್ಳಬೇಕಾಗಿದೆ. ಆಡಳಿತದಲ್ಲಿರೋ ಸರ್ಕಾರದ ಸದಸ್ಯರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಮಂತ್ರಿ ದೂಷಿಸಿದರೆ ದೇಶದ್ರೋಹಿ ಎಂದಾದರೆ, ಸಿಎಂರನ್ನು ದೂಷಿಸಿದರೆ ದೇಶದ್ರೋಹಿ ಆಗಲ್ವಾ.?. ಇದಕ್ಕೆಲ್ಲಾ ಪಕ್ಷದ ರಾಜ್ಯಾಧ್ಯಕ್ಷರು ಸ್ಪಷ್ಟನೆ ನೀಡಬೇಕು. ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಯವರೇ ಮುನಿರತ್ನಗೆ ಸಚಿವ ಸ್ಥಾನ ಕೊಡದಿರುವುದ್ದಕ್ಕೆ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದರು.
ಯಡಿಯೂರಪ್ಪ ಮೇಲೆ ಅಪಾರ ನಂಬಿಕೆ ಇತ್ತು. ಅವರಿಗೆ ಸನ್ (ಮಗ ವಿಜಯೇಂದ್ರ ) ಸ್ಟ್ರೋಕ್ ಆಗಿದೆ. ಕಾಂಗ್ರೆಸ್, ಜನತಾ ಪರಿವಾರವೂ ಸನ್ ಸ್ಟ್ರೋಕ್ ನಲ್ಲಿ ಮುಗಿದಿತ್ತು, ಬಿಜೆಪಿಯೂ ಹಾಗೆ ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.
ರಾಯಚೂರಿನಲ್ಲಿ ಮಾತನಾಡಿದ ಅವರು, ಯಾರ ಭಿಕ್ಷೆ, ತ್ಯಾಗದಿಂದ ನೀವು ಸಿಎಂ ಆಗಿದ್ದಿರಿ ಎಂಬುವುದನ್ನ ಮರೆತಿದ್ದಿರಿ. ಸಂಪುಟ ರಚನೆಯಲ್ಲಿ ಹೈಕಮಾಂಡ್ ಒತ್ತಡವಿಲ್ಲ. ಹಣದ ಒತ್ತಡದಿಂದ ಮಂತ್ರಿ ಮಂಡಲ ರಚನೆಯಾಗಿದೆ. ಮಾತು ತಪ್ಪಿದ ಬಿಎಸ್ ವೈ, ನಾಲಿಗೆ ಇಲ್ಲದ ಯಡಿಯೂರಪ್ಪ ಅವರಿಂದ ದಲಿತ ನಾಗೇಶ್ ಹಿಂದುಳಿದ ವರ್ಗದ ಮುನಿರತ್ನಗೆ ಅನ್ಯಾಯವಾಗಿದೆ ಎಂದು ಯಡಿಯೂರಪ್ಪ ವಿರುದ್ಧ ಕಿಡಿಕಾರಿದರು.
ದಲ್ಲಾಳಿ, ಜೈಲು ಸೇರುವಂತಹ ಭ್ರಷ್ಟ ಸಿ.ಪಿ.ಯೋಗಿಶ್ವರ್ ಗೆ ಸಚಿವ ಸ್ಥಾನ ನೀಡಿದ್ದಾರೆ. ಯೋಗಿಶ್ ಮೇಲೆ 9731 ಜನರಿಗೆ ಮನೆ ನೀಡುವುದಾಗಿ ವಂಚನೆ ಮಾಡಿದ್ದಾನೆ. ಇವನ ವಿರುದ್ಧ ವಂಚನೆಗೊಳಗಾದವರು ಗ್ರಾಹಕರ ವೇದಿಕೆ ದೂರು ನೀಡಿದ್ದಾರೆ. ಅಲ್ಲದೇ, ಗ್ರಾಹಕ ವೇದಿಕೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಗಂಭೀರ ವಂಚನೆ ಪ್ರಕರಣದಲ್ಲಿ ಯೋಗೇಶ್ವರ್ ಜಾಮೀನು ಮೇಲೆ ಹೊರಗಿದ್ದಾರೆ. ಬೇಲ್ ವೆಕೆಂಟ್ ಆದ್ರೆ ಯೋಗಿಶ್ವರ್ ಜೈಲಿಗೆ ಹೋಗುತ್ತಾನೆ. ಹಾಗಾಗಿ ಸೈನಿಕ ಎಂದಿದ್ದೆ ತಪ್ಪಾಗಿದೆ, ಸೈನಿಕರಿಗೆ ಅವಮಾನ ಮಾಡಿದಂತಾಗಿದೆ ಎಂದು ಸಿಪಿ ಯೋಗಿಶ್ವರ್ ವಿರುದ್ಧ ಕೆಂಡಾಮಂಡಲವಾದರು.
ವಂಶ, ಕುಟುಂಬ ರಾಜಕಾರಣ ಗೆದ್ದಲಿದ್ದಂತೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಯಡಿಯೂರಪ್ಪ ಕುಟುಂಬ ರಾಜಕಾರಣ ಬಗ್ಗೆ ಹೈಕಮಾಂಡ್ ಗಮನಿಸಬೇಕು ಎಂದು ಎಂಎಲ್ ಸಿ ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಗದಗ-ಬೆಟಗೇರಿ ಅವಳಿ ನಗರದ ಹೃದಯ ಭಾಗವಾಗಿರುವ ಪಾಲಾ ಬಾದಾಮಿ ರಸ್ತೆಯ ಪಕ್ಕದ ರಿಜಿಸ್ಟರ್ ಸರ್ವೆ ನಂ. 6706/75ಎ ದಿಂದ 22/2ಎ1 ನೇದ್ದರಲ್ಲಿ ಸರ್ಕಾರದ ನಿಯಮಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ದಲಿಚಂದ ಮೇಘರಾಜ ಕೋಠಾರಿ ಸಹಿತ 31 ಮಾಲೀಕರು ಅಕ್ರಮ ವಾಣಿಜ್ಯ ಕಟ್ಟಡ ಕಟ್ಟುತ್ತಿದ್ದಾರೆ. ಕಾಮಗಾರಿಯೂ ಮುಕ್ತಾಯದ ಹಂತದಲ್ಲಿದೆ.
ನಗರಸಭೆಯ ಅಂದಿನ ಪೌರಾಯಕ್ತರು 16 ಅಕ್ಟೋಬರ್ 2015ರಲ್ಲಿ ಕಟ್ಟಡ ನಿರ್ಮಿಸುವುದಕ್ಕೆ ಪರವಾನಿಗಿ ನೀಡಿದ್ದಾರೆ. ಆದರೆ, ಐದು ವರ್ಷಗಳ ಅನಂತರ ಅಂದರೆ, 2020ರ ಸಪ್ಟೆಂಬರ್ 8 ಹಾಗೂ ಡಿಸೆಂಬರ್ 12ರಂದು ಎರಡು ನೋಟಿಸ್ ಜಾರಿ ಮಾಡಿದ್ದರು. ಈ ವೇಳೆ ಛಾಯಾಚಿತ್ರ ಸಮೇತ ಲಿಖಿತ ಉತ್ತರ ನೀಡಬೇಕು ಎಂದು ಮಾಲೀಕರಿಗೆ ಸೂಚಿಸಿದ್ದರು. ತಪ್ಪಿದರೆ ಸೂಕ್ತ ಕಾನೂನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು. ಆದರೆ, ಮೂರು ತಿಂಗಳು ಕಳೆದರೂ ಮಾಲೀಕರು ನಗರಸಭೆ ನೋಟಿಸ್‌ಗೆ ಉತ್ತರಿಸಿಲ್ಲ. ಅಲ್ಲಿ ಐತಿಹಾಸಿಕ ಬಾವಿಗಳು ಇದ್ದವೆಂದು ನಗರದ ಜನರೇ ಹೇಳುತ್ತಿದ್ದಾರೆ. ಆದರೂ ನಗರಸಭೆಯ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.
ನಗರಸಭೆ ಪೌರಾಯುಕ್ತ ರಮೇಶ್ ಪಾಂಡುರಂಗ ಜಾಧವ್, ಕಟ್ಟಡ ಮಾಲೀಕರಿಗೆ ಎರಡು ನೋಟಿಸ್ ನೀಡಿದ್ದೇವೆ. ನಗರ ಸ್ಥಳೀಯ ಸಂಸ್ಥೆಗಳ ನಿಯಮ 187 ಪ್ರಕಾರ ಇನ್ನೊಮ್ಮೆ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಅದರಲ್ಲಿ ಯಾವುದೇ ಮುಲಾಜಿಲ್ಲ. ಇದರ ಬಗ್ಗೆ ಸಾಕಷ್ಟು ಪ್ರಚಾರವೂ ಆಗಿದೆ. ಜನರಲ್ಲೂ ಕುತೂಹಲ ಹೆಚ್ಚಿದೆ. ಹಾಗಾಗಿ ಹೇಳುವುದಕ್ಕಿಂತ ಕೆಲಸ ಮಾಡುವುದೇ ನಮ್ಮ ವಿಚಾರವೆಂದು ವಿಜಯಸಾಕ್ಷಿ ಪತ್ರಿಕೆಗೆ ಒಂದು ವಾರದ ಹಿಂದೆಯೇ ಪ್ರತಿಕ್ರಿಯಿಸಿದ್ದರು.
ನೋಟಿಸ್‌ಗಿಲ್ಲ ಉತ್ತರ?:
ನಗರದ ರೋಟರಿ ವೃತ್ತದಲ್ಲಿ ಎರಡು ವರ್ಗಗಳಲ್ಲಿ ನಿರ್ಮಿಸುತ್ತಿರುವ ಅಕ್ರಮ ವಾಣಿಜ್ಯ ಕಟ್ಟಡ ಮಾಲೀಕರಿಗೆ ಎರಡು ನೋಟಿಸ್ ನೀಡಿದ್ದು, ಇನ್ನೊಂದು ನೋಟಿಸ್ ಅಷ್ಟೇ ಬಾಕಿ ಉಳಿದಿದೆ ಎನ್ನುವ ಅಧಿಕಾರಿಗಳು, ಈ ಹಿಂದೆ ಕೊಟ್ಟಿರುವ ಎರಡು ನೋಟಿಸ್ ಗಳಿಗೆ ಉತ್ತರ ಬಂದಿದೆಯೇ? ಬಂದಿದ್ದರೆ ಬಹಿರಂಗ ಪಡಿಸಬಹುದಲ್ಲವೇ? ಇನ್ನೂ ಉತ್ತರ ಬಂದಿಲ್ಲವೆಂದಾದರೆ ಉಳಿದಿರುವ ಇನ್ನೊಂದು ನೋಟಿಸ್ ಜಾರಿ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬಹುದಲ್ಲವೇ? ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದೀರಿ, ಕ್ರಮ ತೆಗೆದುಕೊಂಡಿರಾ ಅಥವಾ ಅವಘಡ ಸಂಭವಿಸಿ ಪ್ರಾಣ ಹಾನಿ ಆಗುವವರೆಗೆ ಕಾದು ಕುಳಿತಿದ್ದೀರಾ? ಎಂದು ಜಿಲ್ಲೆಯ ಜನರು ಪ್ರಶ್ನಿಸುತ್ತಿದ್ದು, ನಗರಸಭೆಯ ಪೌರಾಯುಕ್ತರು ಉತ್ತರಿಸಬೇಕಿದೆ.
ಅಧಿಕಾರಿಗಳಿಗೆ ಪ್ರಭಾವಿಗಳ ಒತ್ತಡ?:
ವಾಣಿಜ್ಯ ಕಟ್ಟಡ ನಿರ್ಮಾಣ ಮತ್ತು ಅನುಮತಿಯಲ್ಲಿ ಅಧಿಕಾರಿಗಳು, ಕೆಲ ಪ್ರಭಾವಿ ಜನಪ್ರತಿನಿಧಿಗಳು ಮಾಲೀಕರ ಅಕ್ರಮದಲ್ಲಿ ಭಾಗಿಯಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಲಂಚಗುಳಿ ಅಧಿಕಾರಿಗಳು ಮಾಲೀಕ ದಲಿಚಂದ ಹಾಗೂ ಉಳಿದ 31 ಜನರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು, ನಗರದ ಜನತಾ ಬಜಾರ್ ಹಾಗೂ ಸ್ಟೇಷನ್ ರಸ್ತೆ ಮಧ್ಯೆ ಬರುವ ನಂಬರ್ ಬಟ್ಟೆ ಅಂಗಡಿಗಳನ್ನು ಸ್ಥಳಾಂತರಿಸುವುದಕ್ಕಾಗಿಯೇ ಈ ಕಟ್ಟಡವನ್ನು ಕಟ್ಟಲಾಗುತ್ತಿದೆ ಎಂದು ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಿಳಿಸಿದರು.
ಮುಂದುವರೆದ ಕಾಮಗಾರಿ
ನಗರಸಭೆ ಅಧಿಕಾರಿಗಳು ನೋಟಿಸ್ ನೀಡಿದರೂ, ಉತ್ತರಿಸದ ಮಾಲೀಕರು ಕಟ್ಟಡ ಕಾಮಗಾರಿಯನ್ನು ಮಾತ್ರ ಯಾರ ಭಯವೂ ಇಲ್ಲದೆ ಮುಂದುವರೆಸಿದ್ದಾರೆ. ಕಟ್ಟಡ ಹೊರಗಿನ ಕೆಲಸ ಬಹುತೇಕ ಮುಗಿದಿದ್ದು, ಒಳಗಡೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪಾಲಾ ಬದಾಮಿ ಮುಖ್ಯರಸ್ತೆಯಲ್ಲಿರುವ ಕಟ್ಟಡದ ಪಕ್ಕದಲ್ಲೇ ಇವರದೇ ಎನ್ನಲಾಗುತ್ತಿರುವ ಇನ್ನೊಂದು ಬೃಹತ್ ಕಟ್ಟಡ ತಲೆ ಎತ್ತುತ್ತಿದೆ. ಇದೂ ನಿರ್ಮಾಣದ ಹಂತದಲ್ಲಿದೆ. ದಿನನಿತ್ಯ ನಗರಸಭೆ ಅಧಿಕಾರಿಗಳು ಕಟ್ಟಡ ಮುಂದೆಯೇ ಹಾದು ಹೋದರೂ ಅಕ್ರಮ ಕಟ್ಟಡ ಕುರಿತು ತುಟಿ ಬಿಚ್ಚಿ ಮಾತನಾಡುತ್ತಿಲ್ಲ ಎಂಬ ಮಾತುಗಳು ನಗರದಲ್ಲಿ ಹರಿದಾಡುತ್ತಿವೆ.
ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು: ರಾಜಕೀಯ ಎದುರಾಳಿಗಳು, ಒಂದೇ ಸಮುದಾಯದವರಾದ ಈಶ್ವರಪ್ಪ ಹಾಗೂ ಸಿದ್ದರಾಮಯ್ಯ ನಡುವೆ ವಾಗ್ದಾಳಿ ನಡೆಯುವುದು ಸಾಮಾನ್ಯ.
ಚಿಕ್ಕಮಗಳೂರಿನಲ್ಲಿ ನಡೆದ ಜನಸೇವಕ್ ಸಮಾವೇಶದಲ್ಲಿಯೂ ಸಹ ಈಶ್ವರಪ್ಪ ಸಿದ್ದರಾಮಯ್ಯ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.
ಸಿದ್ದರಾಮಯ್ಯ ಏನಾದರೂ ತಿಂದು ಸಾಯಲಿ, ನಮಗೂ ಅದಕ್ಕೂ ಸಂಬಂಧವಿಲ್ಲ. ಗೋಮಾಂಸ ತಿಂತೀನಿ, ನಾಟಿ ಕೋಳಿ ತಿಂತೀನಿ ಅಂತ ಸಿದ್ದರಾಮಯ್ಯ ಹೇಳ್ತಾರೆ. ಅವರು ಏನಾದ್ರು ತಿಂದು ಸಾಯಲಿ ಎಂದು ಇಲ್ಲಿ ನಡೆದ, ಜನಸೇವಕ ಸಮಾವೇಶದಲ್ಲಿ ವಾಗ್ದಾಳಿ ನಡೆಸಿದರು.
ಚಮಚಾಗಿರಿ ಮಾಡೋರಿಗೆ ಕಿಮ್ಮತ್ತು ನೀಡೋದು ಕಾಂಗ್ರೆಸ್. ಹೊಗಳುಭಟ್ಟರನ್ನ, ಬಾಲಬಡುಕರನ್ನು ಅಟ್ಟಕೇರಿಸುವ ಚಾಳಿ ಕಾಂಗ್ರೆಸ್‌ನಲ್ಲಿದೆ. ಇದು ಕಾಂಗ್ರೆಸ್‌ನಲ್ಲಿರುವ ಶಿಸ್ತು. ಬಿಜೆಪಿಯಲ್ಲಿ ಇದು ನಡೆಯೋದಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗುಡುಗಿದರು.
ಕೊಪ್ಪಳದ ಶಿವಶಾಂತ ಮಂಗಲಭವನದ ಆವರಣದಲ್ಲಿ ಬುಧವಾರ ನಡೆದ ಬಿಜೆಪಿಯ ಜನಸೇವಕ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಜಗಳ ಆರಂಭವಾಗಿದೆ. ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರು ಮಾತನಾಡುತ್ತಿರುವ ವೇಳೆ ಸಿದ್ದರಾಮಯ್ಯ ಗಡದ್ದಾಗಿ ನಿದ್ದೆ ಮಾಡ್ತಾರೆ. ಇದು ಕಾಂಗ್ರೆಸ್‌ನಲ್ಲಿರುವ ಶಿಸ್ತು. ಕಾರ್ಯಕರ್ತರಿಗೆ ಕಿಮ್ಮತ್ತು ಕೊಡದ ಕಾಂಗ್ರೆಸ್ ಅಧೋಗತಿಯಲ್ಲಿದೆ. ಬಿಜೆಪಿ ಆಕಾಶದೆತ್ತರಕ್ಕೆ ಬೆಳೆಯುತ್ತಾ ಹೊರಟಿದ್ದರೆ, ಕಾಂಗ್ರೆಸ್ ಪಾತಾಳದತ್ತ ಕುಸಿಯುತ್ತಿದೆ. ಅದಕ್ಕೆ ಮಾಲೀಕಯ್ಯ ಗುತ್ತೆದಾರ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ ಎಂದರು.
ಗೋಮಾತೆಗೆ ಅವಮಾನಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ನಾಚಿಕೆ ಆಗಬೇಕು. ಪಶು ಸಂಗೋಪನಾ ಸಚಿವ ಪ್ರಭು ಚಹ್ವಾಣ ಅವರು ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿ ದೊಡ್ಡ ಕೆಲಸ ಮಾಡಿದ್ದಾರೆ. ಗೋಹತ್ಯೆ ಮಾಡಿದರೆ 3 ಲಕ್ಷ ರೂಪಾಯಿ ದಂಡ, 3 ವರ್ಷ ಜೈಲು ಶಿಕ್ಷೆ ವಿಧಿಸುವಂತೆ ಗೋಮಾಂಸ ತಿನ್ನುತ್ತೇನೆ ಎನ್ನುವ ಹಿಂದೂಗಳ ಭಾವನೆಗೆ ಧಕ್ಕೆ ತರುವಂಥವರನ್ನು ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ಕಾಂಗ್ರೆಸ್‌ನವರು ಎಂದಿಗೂ ಭಾರತ್ ಮಾತಾ ಕೀ ಜೈ ಎನ್ನುವುದನ್ನು ಕಲಿಸಲೇ ಇಲ್ಲ. ಅಲ್ಲೇನಿದ್ದರೂ ಇಂದಿರಾ ಗಾಂಧಿ ಕೀ ಜೈ, ಈಗ ಪ್ರಿಯಾಂಕಾ ಗಾಂಧಿ ಕೀ ಜೈ ಎನ್ನುವ ಹೊಗಳುಭಟ್ಟರ ದಂಡಿದೆ. ಕಾಂಗ್ರೆಸ್ ಬಕೆಟ್ ಹಿಡಿಯೋರಿಗೆ, ಡೋರ್ ತೆಗೆಯೋರಿಗೆ ಮಣೆ ಹಾಕ್ತಾರೆ ಎಂದು ಕಿಡಿ ಕಾರಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾತನಾಡಿ, ಬಿಜೆಪಿ ಪಾರ್ಟಿ ವಿತ್ ಡಿಫರೆನ್ಸ್ ಅನ್ನೋದಕ್ಕೆ ಇಲ್ಲಿನ ಕಾರ್ಯಕ್ರಮ ಸಾಕ್ಷಿ. ಬೆಂಗಳೂರಿನಲ್ಲಿ ನೂತನ ಸಚಿವರ ಪ್ರಮಾಣ ವಚನ ನಡೆದಿದೆ. ಇಲ್ಲಿ ಸಮಾವೇಶ ನಡೆದಿದೆ. 11ನೇ ತಾರೀಖಿನಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನಸೇವಕದ ಸಮಾವೇಶ ಆರಂಭವಾಗಿದೆ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ. ಇದು ಬಿಜೆಪಿ ನಡೆದು ಬಂದಿರುವ ಹಾದಿ. 45 ಸಾವಿರಕ್ಕಿಂತ ಹೆಚ್ಚು ಜನ ಬಿಜೆಪಿ ಬೆಂಬಲಿತರು ಗ್ರಾಪಂ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಪ್ರಧಾನಿಯಂತೆ ಮುಂದಿನ 6 ವರ್ಷಗಳ ಕಾಲ ಕಪ್ಪುಚುಕ್ಕೆ ಇಲ್ಲದಂತೆ ಗ್ರಾಪಂ ನೂತನ ಸದಸ್ಯರು ಕೆಲಸ ಮಾಡಬೇಕಿದೆ. ಮುಂದಿನ ತಾಪಂ, ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸಲು ಶಪಥ ಮಾಡಬೇಕು ಎಂದರು.
ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಸ್ಥಾನಮಾನ ಇದೆ. ಸಾಮಾನ್ಯ ಕಾರ್ಯಕರ್ತನೂ ದುಡಿಯುವ ಪಕ್ಷ ಎಂದರೆ ಬಿಜೆಪಿ. ಗ್ರಾಪಂನ ಬಿಜೆಪಿ ಬೆಂಬಲಿತ ನೂತನ ಸದಸ್ಯರು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಕೆಲಸ ಮಾಡಿ, ಪಕ್ಷ ಬೆಳೆಸಿ ಎಂದು ಅವರು ಕರೆ ನೀಡಿದರು.
ಪಶು ಸಂಗೋಪನಾ ಸಚಿವ ಪ್ರಭು ಚಹ್ವಾಣ್ ಮಾತನಾಡಿ, ಗೋಹತ್ಯೆ ನಿಷೇಧ ಮಾಡಿದ್ರೆ ಕಾಂಗ್ರೆಸ್‌ನವರಿಗೆ ಸಹಿಸಲು ಆಗುತ್ತೆ. ಬಿಜೆಪಿಯವರಿಗೆ ಗೋವು ತಾಯಿ ಸಮಾನ. ಕಾಂಗ್ರೆಸ್‌ನವರಿಗೆ ಗೋವಿನ ಹಾಲು, ಮೊಸರು ಬೇಡ ಅನಿಸುತ್ತೆ. ಅದಕ್ಕೆ ಗೋವಧೆಗೆ ಪ್ರಚೋದನೆ ನೀಡ್ತಾರೆ. ಗೋಮಾತೆಯ ರಕ್ಷಣೆ ಆಗಬೇಕು. ಗೋಮಾತೆಯನ್ನು ನಾವೆಲ್ಲ ರಕ್ಷಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ಕಸಾಯಿಖಾನೆ ಬಂದ್ ಆಗ್ತವೆ. ಗೋವಧೆ ಮಾಡಿದ್ರೆ ಸುಮ್ಮನಿರಲ್ಲ ಎಂದ ಅವರು, ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬ ನಾಗರಿಕನ ಕೊಡುಗೆ ಇರಬೇಕೆಂಬ ಕಾರಣಕ್ಕಾಗಿ ಜನವರಿ 15ರಿಂದ ಹಣಸಂಗ್ರಹ ಅಭಿಯಾನ ಶುರುವಾಗುತ್ತೆ. ಸಾರ್ವಜನಿಕರು ಸಹಾಯ ಮಾಡಿ ಸಹಕರಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮಹಿಳೆಯರು ಸರಕಾರದ ಯೋಜನೆಗಳನ್ನು ಅರಿತುಕೊಳ್ಳಬೇಕು. ಆಡಳಿತ, ಅಧಿಕಾರದಲ್ಲಿ ಗಂಡಂದಿರ ಸಹಾಯ, ಸಹಕಾರ ಪಡೆಯಬೇಕೇ ಹೊರತು ಅವರನ್ನೇ ಅಧಿಕಾರ ನಡೆಸುವಂತೆ ಮಾಡಬಾರದು ಎಂದರು.
ಸಂಸದ ಕರಡಿ ಸಂಗಣ್ಣ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ ಮತ್ತಿತರರು ಮಾತನಾಡಿದರು. ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಬಿಜೆಪಿ ಬೆಂಬಲಿತ ನೂತನ ಸದಸ್ಯರಿಗೆ ಗಣ್ಯರಿಂದ ಪುಷ್ಪಮಳೆ ಸುರಿಸುವ ಮೂಲಕ ಅಭಿನಂದಿಸಲಾಯಿತು.
ಈ ವೇಳೆ ಶಾಸಕರಾದ ಬಸವರಾಜ ದಢೇಸೂಗೂರು, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಗಿರಿಗೌಡ, ಅಮರೇಶ ಕರಡಿ, ಎಂ.ಬಿ.ಪಾಟೀಲ, ಮಹಾಂತೇಶ ಮಾಲೀಪಾಟೀಲ್, ಸಿಂಗನಾಳ ವಿರೂಪಾಕ್ಷಪ್ಪ ಮತ್ತಿತರರು ಇದ್ದರು.
ಬಿಜೆಪಿಯ ಜನಸೇವಕ್ ಸಮಾವೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡುತ್ತಾ, ಗ್ರಾಪಂಗೆ ಸದಸ್ಯರಾಗಿ ಆಯ್ಕೆಯಾದ ಮಹಿಳೆಯರು ಕೈ ಎತ್ತಿ ಎಂದು ಮನವಿ ಮಾಡಿಕೊಂಡಾಗ ಬೆರಳೆಣಿಕೆಯಷ್ಟು ಕೈಗಳು ಮಾತ್ರ ಕಂಡವು. ಇಷ್ಟೇ ಜನನಾ ಎಂದು ಅಚ್ಚರಿಯಿಂದ ಸಚಿವೆ ಜೊಲ್ಲೆ ಕೇಳಿದಾಗ, ಗ್ರಾಪಂ ಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇರೋದ್ರಿಂದ ಎಲ್ರೂ ಟೂರ್‌ಗೆ ಹೋಗ್ಯಾರ್ರಿ ಮೇಡಂ ಎಂಬ ಕೂಗು ಮಹಿಳಾ ಗ್ಯಾಲರಿಯಿಂದ ಕೇಳಿ ಬಂತು.
ಶ್ವಾನಕಾಟ!
ವೇದಿಕೆ ಮೇಲೆ ಬಿಜೆಪಿ ನಾಯಕರು ಭಾಷಣದಲ್ಲಿ ಮುಳುಗಿದ್ದರೆ ಪೊಲೀಸರ, ಕಾರ್ಯಕರ್ತರ ಕಣ್ತಪ್ಪಿಸಿ ವೇದಿಕೆ ಮುಂಭಾಗದಲ್ಲೇ ಶ್ವಾನ ತಿನಿಸೊಂದನ್ನು ತಂದು ತಿನ್ನತೊಡಗಿತ್ತು. ಕಾರ್ಯಕರ್ತರು ಶ್ವಾನ ಓಡಿಸಲು ಪ್ರಯತ್ನಿಸಿದರೂ ಅದು ಅವರ ವಿರುದ್ಧವೇ ಗುರುಗುಟ್ಟಿತು. ಕೊನೆಗೆ ಹಿರಿಯ ಕಾರ್ಯಕರ್ತರ ಛಡಿ ಏಟಿಗೆ ಶ್ವಾನ ಬಾಲ ಮುದುರಿಸಿಕೊಂಡು ಓಡಿತು.
ರಾಜ್ಯದ ಕಾರ್ಮಿಕರಿಗೆ ನೀಡುವ ಸರ್ಕಾರದ ಸವಲತ್ತುಗಳನ್ನು ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರಿಗೂ ನೀಡಬೇಕು ಎಂದು ಕರ್ನಾಟಕ ಪಿಂಜಾರ, ನದಾಫ, ಮನ್ಸೂರಿ ಸಂಘಗಳ ಮಹಾಮಂಡಳವು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಕರ್ನಾಟಕ ಪಿಂಜಾರ, ನದಾಫ, ಮನ್ಸೂರಿ ಸಂಘಗಳ ಮಹಾಮಂಡಳ ರಾಜ್ಯಾದ್ಯಂತ ಪಿಂಜಾರ,ನದಾಫ್, ಮನ್ಸೂರಿ, ದೂದೆಕುಲಾ ಜನಾಂಗವು ಪೂರ್ವಜರ ಕಾಲದಿಂದಲೂ ಹಾಸಿಗೆ ಹೊಲೆಯುವ ಕೆಲಸ ಮಾಡುತ್ತಿವೆ. ಸಮುದಾಯದ ಮೂಲ ವೃತ್ತಿವೂ ಇದೆ ಆಗಿದ್ದು,
ಕೂಲಿ ಕಾರ್ಮಿಕರಿಗೆ ಸಿಗುವ ಸೌಲಭ್ಯ ಹಾಗೂ ಯೋಜನೆಗಳಿಂದ ಈ ಸಮುದಾಯ ವಂಚಿತವಾಗುತ್ತಿದೆ.
ಕಂಪ್ಯೂಟರ್ ತಂತ್ರಜ್ಞಾನಕ್ಕೂ ಮುನ್ನ ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಲ್ಲಿ ಪರಿಹಾರ, ಸವಲತ್ತು ನೀಡುತ್ತಿದ್ದರು. ಆದರೆ, ಇವತ್ತಿನ ಕಂಪ್ಯೂಟರ್ ತಂತ್ರಜ್ಞಾನದ ಆನ್‌ಲೈನ್ ಅರ್ಜಿಯಲ್ಲಿ ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರಿಗೆ ಯಾವುದೇ ಸವಲತ್ತುಗಳ ಕುರಿತು ಮಾಹಿತಿ ಇಲ್ಲ. ಹಾಗಾಗಿ ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರ ಕುಟುಂಬದ ಮಕ್ಕಳ ಶಿಕ್ಷಣ, ಪರಿಹಾರ ನೀಡಬೇಕು. ಅಲ್ಲದೇ, ಆನ್‌ಲೈನ್ ಅರ್ಜಿಯ ವೇಳೆ ಈ ಸಮುದಾಯ ಅರ್ಜಿ ತೆಗೆದುಕೊಂಡು ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಜಾಕ್ ನದಾಫ್, ಗ್ರಾಮೀಣ ಟಿವಿ ಮುಖ್ಯಸ್ಥ ದಾದಾಫೀರ ಕುನ್ನೂರ, ಸಲ್ಮಾ ಬೇಗಂ ಪಿಂಜಾರ, ಹುಸೇನ್ ಪಿಂಜಾರ್, ಜಾವಿದ್ ಗುತ್ತಲ ಸೇರಿದಂತೆ ಸಮಾಜದ ಅನೇಕ ಮುಖಂಡರು ಇದ್ದರು.