Home Blog Page 3113

ದುರ್ಗಾದೇವಿ ಬೆಟ್ಟದಲ್ಲಿ ಚಿರತೆ ಸೆರೆ

0

ಫಲಿಸಿತೇ ವಿಶೇಷ ತಂಡದ ಪ್ಲ್ಯಾನ್?

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯ ಆನೆಗೊಂದಿಯಲ್ಲಿ ಚಿರತೆಗಳ ಸುಳಿವಿಗಾಗಿ ವಿಶೇಷ ತಂಡ ನಡೆಸಿದ ಕಾರ್ಯಾಚರಣೆಗೆ ಚಿರತೆಯೊಂದು ಸೆರೆ ಸಿಕ್ಕಿದೆ. ಆದರೆ ಸೆರೆ ಸಿಕ್ಕ ಚಿರತೆ ನರಭಕ್ಷಕವೊ? ಅಥವಾ ಬೇರೊಂದು ಚಿರತೆಯೋ? ಎಂಬುದಿನ್ನೂ ದೃಢಪಟ್ಟಿಲ್ಲ.

ಚಿರತೆ ಪತ್ತೆಗಾಗಿ ನಾಲ್ವರ ವಿಶೇಷ ವನ್ಯ ಜೀವಿ ತಜ್ಞರ ತಂಡ ಭೇಟಿ ನೀಡಿತ್ತು. ತಂಡಕ್ಕೆ ಕೈ ಜೋಡಿಸಿದ ವೈಲ್ಡ್ ಲೈಫ್ ಎಸ್ ಎಸ್ ಓ ಸಂಸ್ಥೆ, ಈ ಹಿಂದೆ ಬಂಡಿಪುರ, ಬನ್ನೇರುಘಟ್ಟ, ನಾಗರಹೊಳೆ ಸೇರಿ ವಿವಿಧಡೆ ಪ್ರಾಣಿಗಳ ಸಂಶೋಧಿಸಿದೆ.

ಪ್ರಾಣಿಗಳ ಜೀವನ ಹಾಗೂ ಮಾನವ ಪ್ರಾಣಿಗಳ ಸಂಘರ್ಷದ ಕುರಿತು ಅಧ್ಯಯನ ಮಾಡುವ ವೈಲ್ಡ್ ಲೈಫ್ ಎಸ್ ಎಸ್ ಓ, ಚಿರತೆಗಳ‌ ಚಲವಲನ, ವಾಸವಿರುವ ಸ್ಥಳ, ಆಹಾರ ಪದ್ಧತಿ, ಬೇಟೆಯಾಡುವ ವಿಧಾನ, ಹೆಜ್ಜೆಗುರುತು ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿತ್ತು.

ವಿಶೇಷ ತಂಡದ ಕಾರ್ಯಾಚರಣೆಯಿಂದ ಒಂದು ಚಿರತೆ ಸೆರೆ ಸಿಕ್ಕಿದೆ. ನಿನ್ನೆಯಿಂದ ಚಲನವಲನ ಗುರುತಿಸಿ ಚಿರತೆ ಸೆರೆ ಹಿಡಿಯುವಲ್ಲಿ ವಿಶೇಷ ತಂಡವು ಯಶಸ್ವಿಯಾಗಿದೆ.

ಸೆರೆ ಸಿಕ್ಕಿರುವ ಚಿರತೆ ಈ ಹಿಂದೆ ಪೂಜಾರಿಯನ್ನು ಕೊಂದು ತಿಂದ ಚಿರತೆಯಾ? ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ‌ ಎಂದು ಡಿಎಫ್‌ಓ ಹರ್ಷಭಾನು ಮಾಹಿತಿ ನೀಡಿದ್ದಾರೆ.

ಬೋನ್‌ಗಳ ಇರಿಸುವಿಕೆಗೆ ಸೂಕ್ತ ಸ್ಥಳಗಳ ಆಯ್ಕೆಯ ಕಾರ್ಯಾಚರಣೆ ನಡೆದಿದ್ದು,
ಅತಿ ಹೆಚ್ಚು ಚಿರತೆಗಳು ಓಡಾಡುವ ಸ್ಥಳಗಳ ಮಾಹಿತಿಗಾಗಿ ಆನೆಗೊಂದಿ‌ ಸುತ್ತಮುತ್ತ ತಂಡಗಳು ಶೋಧನೆ ನಡೆಸುತ್ತಿವೆ.

ಆನೆಗೊಂದಿಯ ಚಿರತೆಗಳ ಚಲನವಲನ ಪತ್ತೆಗೆ 8 ಕ್ಕೂ ಹೆಚ್ಚು ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಇನ್ನೂ ಮೂರ್ನಾಲ್ಕು ಚಿರತೆಗಳು ಬೆಟ್ಟದ ಸುತ್ತ ಮುತ್ತ ಬೀಡು ಬಿಟ್ಟಿದ್ದು ಸಾರ್ವಜನಿಕರು ಸಂಜೆ 5ರ ಮೇಲೆ ಓಡಾಡದಂತೆ ಜಿಲ್ಲಾಡಳಿತ ಎಚ್ಚರಿಕೆ‌ ನೀಡಿದೆ.

ಕೊವಿಡ್-19: ಗದಗ ಜಿಲ್ಲೆಯ ಗುರುವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಡಿಸೆಂಬರ್‌ 17 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 151387 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 156825 ಮಾದರಿಗಳಲ್ಲಿ 145606 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 370 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 06 (ಗದಗ-04, ಮುಂಡರಗಿ-01, ಶಿರಹಟ್ಟಿ-01) ಪ್ರಕರಣಗಳು ಸೇರಿದಂತೆ ಒಟ್ಟು 10849 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 14 ಜನ ಸೇರಿದಂತೆ ಒಟ್ಟು 10679 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 29 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ದೇಶದಲ್ಲಿ ಲವ್ ಜಿಹಾದ್ ಕಾಯ್ದೆ‌ ಜಾರಿಯಾಗಲೇಬೇಕು; ಸಚಿವ ಬಿ.ಸಿ.ಪಾಟೀಲ್

ವಿಜಯಸಾಕ್ಷಿ ಸುದ್ದಿ, ಹಾವೇರಿ

ಲವ್ ಜಿಹಾದ್ ಕಾಯ್ದೆ ದೇಶದಲ್ಲಿ ಬರಲೇಬೇಕು. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ಬಗ್ಗೆ ಚಿಂತನೆ ಮಾಡಿ ಕಾಯ್ದೆ ಜಾರಿಗೊಳಿಸುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಹಾವೇರಿಯಲ್ಲಿ ಗುರುವಾರ ಮಾತನಾಡಿದ ಅವರು,
ವಿಧಾನ ಪರಿಷತ್ ರದ್ದು ಮಾಡುವುದು ದೊಡ್ಡ ವಿಷಯವಲ್ಲ. ಪರಿಷತ್ತಿನಲ್ಲಿ ಮೊನ್ನೆ ನಡೆದ ಘಟನೆ ಅಮಾನವೀಯ. ಅದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಮತ್ತು ಗೂಂಡಾಗಿರಿ ತೋರಿಸುತ್ತದೆ ಎಂದು ಲೇವಡಿ ಮಾಡಿದರು.

ಒಬ್ಬ ಉಪಸಭಾಪತಿಯನ್ನೇ ಎಳೆದು ಹಾಕ್ತಾರಂದ್ರೆ ಅವರು ಆ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ಈ ಕುರಿತು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ರಾಜ್ಯಪಾಲರು ದೂರಿನ ಮೇರೆಗೆ ಏನು ಕ್ರಮ ಕೈಗೊಳ್ಳುತ್ತಾರೆ ಅದರ ಮೇಲೆ‌ ಮುಂದಿನ ಯೋಜನೆ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರಧಾನಿ ಮೋದಿ ಜನ್ಮದಿನದ ಶುಭಾಶಯ ಕೋರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಸಿಪಿ, ಅದು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡತನ. ಜನ್ಮದಿನದ ದಿನ ಶುಭಾಶಯ ಕೋರುವುದು ಮಾನವೀಯತೆ.
ರಾಜಕೀಯ ವೈರಿಗಳಾಗಿ ಇರುತ್ತೇವೆ. ಆದರೆ ಮದುವೆ, ಜನ್ಮದಿನದ ಸಮಯದಲ್ಲಿ ಶುಭಾಶಯ ಕೋರುವುದರಲ್ಲಿ ತಪ್ಪೇನಿದೆ ಎಂದ ಅವರು, ನಾನೂ ಸಹ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತೇನೆ ಎಂದು ಶುಭಾಶಯ ಕೋರಿದರು.

ಜೆಡಿಎಸ್ ಪಕ್ಷ ಮಿಠಾಯಿ ಕೊಟ್ಟವರ ಬಳಿ ಹೋಗುತ್ತೆ ಎಂಬ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ವಿಚಾರ. ಅವರು ಅದೇ ಪಕ್ಷದವರಾಗಿದ್ದವರು. ಹಾಗಾಗಿ ಆ ರೀತಿ ಮಾತನಾಡುವುದು ಸರಿಯಲ್ಲ. ಗ್ರಾ.ಪಂ.ಚುನಾವಣೆಯ ಬಳಿಕ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಸಿಎಂ ಮತ್ತು ಪಕ್ಷದ ವರಿಷ್ಠರು ಕ್ರಮಕೈಗೊಳ್ಳುತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಬೆಂಗಳೂರು ಮಾದರಿಯಲ್ಲೇ ಮೈಸೂರಿನಲ್ಲೂ ಗುಂಪು ಮನೆ ನಿರ್ಮಾಣ; ಸೋಮಶೇಖರ್ ಭರವಸೆ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮೈಸೂರಿನಲ್ಲೂ ಬೆಂಗಳೂರು ಮಾದರಿಯಲ್ಲಿ ಸಿಂಗಲ್ ಬೆಡ್, ಡಬಲ್ ಬೆಡ್, ತ್ರಿಬಲ್ ಬೆಡ್ ಗಳ ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಮೈಸೂರಿನ ಮೊದಲ ಟೌನ್ ಶಿಪ್ ಗೆ ಈಗಾಗಲೇ ಭೂಮಿ ಗೊತ್ತುಪಡಿಸಿದ್ದೇವೆ ಎಂದು ಸಹಕಾರಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನಲ್ಲಿ ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸದ ಸಚಿವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ಸೇರಿದ 22 ಎಕರೆಯಲ್ಲಿ 2500 ಸೈಟ್ ನಿರ್ಮಿಸಲಾಗುತ್ತಿದೆ. ಈ ವಿಚಾರವಾಗಿ ನಗರಾಭಿವೃದ್ಧಿ ಸಚಿವರಾದ ಭೈರತಿ ಬಸವರಾಜ್ ಜೊತೆ ಮಾತನಾಡಿದ್ದೇನೆ. ಬಿಡಿಎ ಮಾದರಿಯಲ್ಲಿ ಮುಡಾದಿಂದಲೂ ಜನರಿಗೆ ಅನುಕೂಲವಾಗುವಂತೆ ಗುಂಪುಮನೆ ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಮೈಸೂರು ಮುಡಾವನ್ನು ದಲ್ಲಾಳಿ ಮುಕ್ತ ಮಾಡುತ್ತೇವೆ. ದಲ್ಲಾಳಿಗಳ ಮೇಲೆ‌ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಯಾರಾದರೂ ಅಧಿಕಾರಿ ದಲ್ಲಾಳಿಯನ್ನು ಸಂಪರ್ಕಿಸುವಂತೆ ಹೇಳಿದರೆ ತಕ್ಷಣ ಅಧ್ಯಕ್ಷರಿಗೆ, ಆಯುಕ್ತರಿಗೆ ದೂರು ನೀಡಿ. ಮುಡಾಗೆ ದಲ್ಲಾಳಿಗಳ ಪ್ರವೇಶ ತಡೆಯಲು ಪೊಲೀಸ್ ಟಾಸ್ಕ್ ಫೋರ್ಸ್ ರಚಿಸಲು ತಿಳಿಸಿದ್ದೇನೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಕೊರೋನಾ ನಿಯಮ ಎಲ್ಲರಿಗೂ ಒಂದೇ, ಪಾಲಿಸದ ಜನಪ್ರತಿನಿಧಿಗಳಿಗೆ ದಂಡ ಹಾಕಿ; ಸೋಮಶೇಖರ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಪರಿಷತ್ ಒಳಗೆ ಮಾಸ್ಕ್ ಹಾಕದವರಿಗೆ,
ಸಾಮಾಜಿಕ ಅಂತರ ಕಾಪಾಡಿಕೊಳ್ಳದವರಿಗೆ, ದಂಡ ಹಾಕಬೇಕು. ಸಭಾಪತಿಗಳೇ ಈ ನಿರ್ಣಯ ಕೈಗೊಳ್ಳಲಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಆಗ್ರಹಿಸಿದರು.

ವಿಧಾನ ಪರಿಷತ್ ನಲ್ಲಿ ಗದ್ದಲ ಮಾಡುವ ವೇಳೆ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು,
ನಿಯಮ ಜನರಿಗೂ, ಜನಪ್ರತಿನಿಧಿಗಳಿಗೂ ಎಲ್ಲರಿಗೂ ಒಂದೇ. ನಿಯಮ ಪಾಲಿಸದ ಜನಪ್ರತಿನಿಧಿಗಳಿಗೆ ದಂಡ ವಿಧಿಸಿ ಎಂದರು.

ಜನ ಸಾಮಾನ್ಯರು ಈ ವಿಚಾರದಲ್ಲಿ ಎತ್ತಿರುವ ಧ್ವನಿ ನ್ಯಾಯಸಮ್ಮತ. ನಾನು ಆ ಪಕ್ಷ ಈ ಪಕ್ಷ ಎಂದು ಮಾತಾನಾಡುತ್ತಿಲ್ಲ. ಎಲ್ಲರಿಗು ಒಂದೇ ನಿಯಮ ಅನ್ವಯ ಆಗಲಿ ಎಂದಷ್ಟೇ ಹೇಳುತ್ತಿದ್ದೇನೆ ಎಂದು ತಿಳಿಸಿದರು.

ಮೇಲ್ಮನೆ ರದ್ದತಿ ಮಾಡಿ ಎಂಬ ಚರ್ಚೆಯ ಬಗ್ಗೆ ಉತ್ತರಿಸಿ, ಅಂತಹ ಯಾವುದೇ ಚರ್ಚೆಗಳು ಇಲ್ಲ.
ಆಗಿರುವ ತಪ್ಪಿನ ಬಗ್ಗೆ ಸಭಾಪತಿಗಳು ಕ್ರಮ ಕೈಗೊಳ್ಳುತ್ತಾರೆ‌.ಈ ಬಗ್ಗೆ ಹೆಚ್ಚಿನ ಚರ್ಚೆಯೂ ಬೇಡ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಮ್ಮ ಮಾತಿಗೆ ತೆರೆ ಎಳೆದರು.

ಗದಗಗಿಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಭೇಟಿ

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ಪರಿಸರ ಲೇಔಟ್ ನಲ್ಲಿ ನೂತನ ಬಿಜೆಪಿ ಕಚೇರಿಯ ಶಿಲಾನ್ಯಾಸ ಕಾರ್ಯಕ್ರಮ ಹಿನ್ನೆಲೆಯಲ್ಲಿಂದು ಮಧ್ಯಾಹ್ನ 3 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗಮಿಸುತ್ತಿದ್ದು, ನಗರವು ಮಧುವನಗಿತ್ತಿಯಂತೆ ಸಿಂಗಾರಗೊಂಡಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಪ್ಲೇಕ್ಸ್, ಬ್ಯಾನರ್ ಅಳವಡಿಸಿ ತೆಂಗಿನಗರಿ ಕಟ್ಟಿ ಸಿಂಗಾರಗೊಳಿಸಿದ್ದಾರೆ. ಅಲ್ಲಲ್ಲಿ ಬಿಜೆಪಿ ಭಾವುಟ ರಾರಾಜಿಸುತ್ತಿವೆ. ನಗರದ ಜಿಲ್ಲಾಧಿಕಾರಿ ಭವನದ ಹತ್ತಿರವಿರುವ ಪರಿಸರ ಲೇಔಟ್ ನಲ್ಲಿ ವೇದಿಕೆ ಸಿದ್ಧಗೊಳಿಸಲಾಗಿದೆ.

ಗ್ರಾಮ ಪಂಚಾಯತಿ ಚುನಾವಣೆ ಹೊಸ್ತಿಲ್ಲಲ್ಲಿ ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಭೇಟಿ ನೀಡುತ್ತಿದ್ದು, ಚುನಾವಣಾ ಕಣದಲ್ಲಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಬಲ ತಂದುಕೊಟ್ಟರೆ, ನಾಯಕರಿಗೆ ಹುರುಪು ನೀಡಲಿದೆ ಎನ್ನಲಾಗುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಗ್ರಾ.ಪಂ.ಚುನಾವಣೆಗೆ ಇನ್ನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದ್ದು, ಈ ನಿಟ್ಟಿನಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾ ಬಿಜೆಪಿ ಶಿಲಾನ್ಯಾಸ ನೆಪದಲ್ಲಿ ನಳೀನ್ ಕುಮಾರ್ ಅವರನ್ನು ಕರೆಸಿಕೊಳ್ಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರು ಗೋ ಪೂಜೆ ಮಾಡುವ ಮೂಲಕ ನೂತನ ಬಿಜೆಪಿ ಜಿಲ್ಲಾ ಕಚೇರಿಯ ಭೂಮಿಪೂಜೆ ನೆರವೇರಿಸಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ರಾಜು ಕುರುಡಗಿ, ರಾಘವೇಂದ್ರ ಯಳವತ್ತಿ ಸೇರಿದಂತೆ ಹಲವರಿದ್ದರು.

ಇನ್ನು ಬಿಜೆಪಿ ರಾಜ್ಯಾಧ್ಯಕ್ಷರ ಜೊತೆಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಹಲವು ಸಚಿವರು, ಶಾಸಕರು ಭಾಗಿಯಾಗುವ ಸಾಧ್ಯತೆ ಇದೆ.

ಮತ ಮಾರಿಕೊಳ್ಳಬೇಡಿ; ಸೂಕ್ತ ನಾಯಕನನ್ನು ಆಯ್ದುಕೊಳ್ಳಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ

ಸುಮಾರು ದಿನಗಳಿಂದ ಕಾಯುತ್ತಾ ಕುಳಿತಿದ್ದ ಗ್ರಾಮ ಪಂಚಾಯತಿ ಚುನಾವಣೆಗೆ ಚುನಾವಣಾ ಆಯೋಗ ಮುಹೂರ್ತ ನಿಗದಿ ಪಡಿಸುತ್ತ್ತಿದ್ದಂತೆ ಚುನಾವಣಾ ತಯಾರಿಗಳು ಭರದಿಂದ ಸಾಗಿವೆ. ಆಯೋಗವು ಎರಡು ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದೆ. ಅದರಂತೆ ಡಿ.೨೨ ಹಾಗೂ ೨೭ ರಂದು ಮತದಾನ ನಡೆಯಲಿದ್ದು, ಡಿ.೩೦ ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

ಗ್ರಾ.ಪಂ.ಚುನಾವಣೆಗಳನ್ನು ಹಲವರು ಹಲವಾರು ರೀತಿ ಬಣ್ಣಿಸಿದ್ದಾರೆ. ಕೆಲವರು ಒಂದೇ ಕುಟುಂಬದಂತಿರುವ ಹಳ್ಳಿಯ ಜನರನ್ನು ಬೇರೆ ಬೇರೆಯಾಗಿಸಲು ಬರುವುದು. ಪ್ರತಿ ಗ್ರಾಮವು ತನ್ನ ಜನಪ್ರತಿನಿಧಿಗಳನ್ನು ತಾವೇ ಆಯ್ದುಕೊಂಡು ಗ್ರಾಮದ ಅಭಿವೃದ್ದಿಗೊಳಿಸಲಿಕ್ಕಾಗಿ ಜಾರಿಗೊಳಿಸಿರುವ ಯೋಜನೆಯೇ ಗ್ರಾಮ ಸ್ವರಾಜ್‌ಗೆ ಸಂಬಂದಿಸಿದ್ದಾಗಿದೆ ಎಂದು ಬಣ್ಣಿಸುತ್ತಾರೆ.ಅದೇನೇ ಇರಲಿ ಸಹಜವಾಗಿ ಅಭಿಪ್ರಾಯಗಳು ಬೆಳೆಯುತ್ತಲೇ ಹೋಗುತ್ತವೆ. ಆದರೆ, ಒಂದಂತೂ ಸತ್ಯ ಪ್ರತಿ ಗ್ರಾಮದಿಂದ ಒಬ್ಬ ನಾಯಕ ಹುಟ್ಟುತ್ತಾನೆ. ಆಯ್ಕೆಯಾದ ನಾಯಕ ಗ್ರಾಮಸ್ಥರ ನಂಬಿಕೆಗೆ ಅರ್ಹರೇ? ಗ್ರಾಮದ ಅಭಿವೃದ್ದಿ ಬಯಸುವರೆ? ಜನರ ಸಂಕಷ್ಟಗಳಿಗೆ ಸ್ಪಂದಿಸುವರೆ? ಕ್ಷೇತ್ರ ಜನರಿಗೆ ಸಕಾಲದಲ್ಲಿ ದೊರೆಯುವವರೆ? ಎಂಬ ಅಂಶಗಳ ಕುರಿತು ಯೋಚಿಸಿ ನಾಯಕನನ್ನು ನಿರ್ಧರಿಸುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಮೇಲಿದೆ. ಈಗಾಗಲೇ ಬದುಕು ಸಾಕಷ್ಟು ಅನುಭವ ನೀಡಿದೆ. ಪ್ರಕೃತಿ ವಿಕೋಪಗಳಿಂದಾದ ಹಾನಿಯಲ್ಲಿ ನಾಯಕರು ನಿಮಗಾಸರೆ ಆಗಿದ್ದಾರೆಯೇ? ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ, ದಿನ ಕಳೆದಂತೆ ದುಸ್ತರವಾಗುತ್ತಿರುವ ಜನರ ಬದುಕು ಪ್ರತಿಯೊಂದನ್ನೂ ಗಮನದಲ್ಲಿರಿಸಿಕೊಂಡು ಸೂಕ್ತವಾದ ಅಭ್ಯರ್ಥಿಗಳಿಗೆ ಮತ ನೀಡಬೇಕು. ಹಣ, ಹೆಂಡ, ಸೀರೆ, ಇನ್ನಿತರ ಆಮಿಷಗಳಿಗೆ ಬಲಿಯಾಗಿ ಅಮೂಲ್ಯವಾದ ಮತ ಮಾರಿಕೊಳ್ಳಬೇಡಿ, ಆಸೆ, ಆಮಿಷಗಳಿಗೆ ಬಲಿಯಾದರೆ ಸಮಸ್ಯೆಗಳು ಉದ್ಭವಿಸಿದಾಗ ನಾಯಕರನ್ನು ಪ್ರಶ್ನಿಸುವ ಹಕ್ಕ ಕಳೆದುಕೊಂಡಂತಾಗುತ್ತದೆ. ಗ್ರಾಮಸ್ಥರ ಅಭಿಪ್ರಾಯ, ಸಲಹೆ ಸ್ವೀಕರಿಸುವ ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಹಿರಿಯರು ಯುವಕರನ್ನು ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸಲು ಪಣತೊಡಬೇಕು. ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ, ಹಳ್ಳಿಯ ಜನರ ಬದುಕು ಹಸನಾಗಲಿ, ಪ್ರತಿಯೊಂದು ಹಳ್ಳಿ ಆದರ್ಶವಾಗಲಿ.

ಮುಂಬರುವ ಐದು ವರ್ಷದ ನಿಮ್ಮ ಯೋಜನೆಗಳೇನು.? ಹಿಂದಿನ ಬಾರಿಯ ನಿಮ್ಮ ಸಾಧನೆಗಳೇನು?

ಪ್ರವೀಣ ಸಂಗಳದ ಶೆಟ್ಟರ್

ಪರಿಹಾರ ಕೊಡದಿದ್ರೆ ಚುನಾವಣೆ ಬಹಿಷ್ಕರಿಸ್ತೀವಿ

ವಿಜಯಸಾಕ್ಷಿ ಸುದ್ದಿ, ಗದಗ

ಚುನಾವಣೆಯ ಹೊಸ್ತಿಲ್ಲಲ್ಲಿ ಜಿಲ್ಲೆಯಲ್ಲಿ ಚುನಾವಣೆಯ ಬಹಿಷ್ಕಾರದ ಸುದ್ದಿಗಳು ಸದ್ದು ಮಾಡುತ್ತಲೇ ಇವೆ. ಮೊನ್ನೆಯಷ್ಟೇ ಜಿಲ್ಲೆಯ ನೀಲಗುಂದ ಗ್ರಾಮದಲ್ಲಿ ಚುನಾವಣೆ ಬಹಿಷ್ಕರಿಸಿರುವ ಬೆನ್ನಲ್ಲೇ ಕೊಣ್ಣೂರು ಗ್ರಾಮದಲ್ಲೂ ಚುನಾವಣಾ ಬಹಿಷ್ಕಾರದ ಧ್ವನಿ ಮೊಳಗುತ್ತಿದೆ.

ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದ ಸುಮಾರು 150ಕ್ಕೂ ಹೆಚ್ಚು ಪ್ರವಾಹಪೀಡಿತ ಸಂತ್ರಸ್ತರು ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.

ಕಳೆದ ಆಗಷ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮಲಪ್ರಭಾ ನದಿ ಉಕ್ಕಿ ಹರಿದಿದ್ದರ ಪರಿಣಾಮವಾಗಿ ಕೊಣ್ಣೂರ ಗ್ರಾಮದೊಳಗೆ ನೀರು ನುಗ್ಗಿ ಸುಮಾರು 200 ಜನರು ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದರು.

ಆ ಪೈಕಿ ಸುಮಾರು 170 ಜನರನ್ನು ನೆರೆ ಸಂತ್ರಸ್ತರೆಂದು ಗುರುತಿಸಿ ಅಧಿಕಾರಿಗಳು ಎ,ಬಿ,ಸಿ ಹಾಗೂ ಡಿ ಗ್ರೇಡ್ ನಲ್ಲಿ ಸರ್ವೆ ಮಾಡಿ ಪರಿಹಾರ ಘೋಷಿಸಿದ್ದರು. ಅಲ್ಲದೇ, ಸಂತ್ರಸ್ತರಿಗೆ ಮನೆ ಬಾಡಿಗೆಗೆ ಅಂತಾ ಐದು ತಿಂಗಳ ಅವಧಿಯವರೆಗೆ ಸುಮಾರು 50 ಸಾವಿರ ರೂ. ಕೊಡುವ ಭರವಸೆ ನೀಡಿದ್ದರು. ಆದರೆ, ಇದರೊಳಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ.

ಸಂಪೂರ್ಣ ಮನೆ ಬೀಳದ ಕೆಲವರಿಗೆ ‘ಎ’ ಗ್ರೇಡ್ ನಲ್ಲಿ ಪರಿಹಾರ ನೀಡಿದ್ದಾರೆ. ಪ್ರಭಾವಿಗಳಿಗಷ್ಟೇ ಮನೆ ಬಾಡಿಗೆ ಹಣ ಹಾಕಿದ್ದಾರೆ. ಇನ್ನುಳಿದವರಿಗೆ ಬಾಡಿಗೆ ಹಣ ಮತ್ತು ಪರಿಹಾರ ಕೊಟ್ಟಿಲ್ಲ. ಅಧಿಕಾರಿಗಳು
ತಾರತಮ್ಯ ಮಾಡದೇ ಸಂತ್ರಸ್ತರಿಗೆ ‘ಎ’ ಗ್ರೇಡ್ ನಲ್ಲಿ ಪರಿಹಾರ ಮತ್ತು ಮನೆ ಬಾಡಿಗೆಗೆ ಹಣ ನೀಡಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಕೊಣ್ಣೂರ ಗ್ರಾಮದ ನೆರೆ ಸಂತ್ರಸ್ತರು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರತಿಭಟನೆಯಲ್ಲಿ ಯಲ್ಲಪ್ಪ ಕುಂಬಾರ, ಸಿದ್ದಪ್ಪ ಕುಂಬಾರ, ಹನಮಂತ ಕುಂಬಾರ, ಗುರುಲಿಂಗಪ್ಪ ಕುಂಬಾರ, ಮಂಜುನಾಥ್ ಕುಂಬಾರ, ಮಲ್ಲಪ್ಪ ಕುಂಬಾರ, ವಿಜಯ್ ಕುಂಬಾರ, ದೊಡ್ಡಕ್ಕ ರಾಜನಾಳ, ಭೀಮಪ್ಪ ರಾಜನಾಳ, ಸುವರ್ಣ ದಿವಟರ, ಕೃಷ್ಣೇಗೌಡ ಮುಳಗುಂದ, ರಿಯಾಜ್ ಮನಿಯಾರ ಸೇರಿದಂತೆ ಹಲವಾರು ಸಂತ್ರಸ್ತರು ಇದ್ದರು.

ಕೈಗೆ ಬಂದ ತುತ್ತು ಬಾಯಿಗೆ ಬರ್ತಿಲ್ಲ; ಕಳ್ಳರ ಕಾಟಕ್ಕೆ ರೈತರ ಕಣ್ಣೀರು

0

ವಿಜಯಸಾಕ್ಷಿ ಸುದ್ದಿ, ಕೋಲಾರ

ಜಿಲ್ಲೆಯಲ್ಲಿ ಆಲೂಗಡ್ಡೆ ಕಳ್ಳರು ಹೆಚ್ಚುತ್ತಿದ್ದಾರೆ. ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಆಲೂಗಡ್ಡೆ ಮೂಟೆಗಳನ್ನು ಕದ್ದೊಯ್ಯುತ್ತಿದ್ದು,
ಆಲೂಗಡ್ಡೆ ಬೆಳೆರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಉಕ್ಕುಂದ ಗ್ರಾಮದ ರೈತ ಕೃಷ್ಣಪ್ಪ ಅವರಿಗೆ ಸೇರಿದ ತೋಟದಲ್ಲಿದ್ದ 20 ಮೂಟೆ ಹಾಗೂ ಬೂದಿಕೋಟೆ ಗ್ರಾಮದ ರೈತ ವೆಂಕಟೇಶ್ ಶೆಟ್ಟಿಗೆ ಸೇರಿದ 15 ಮೂಟೆ ಆಲೂಗಡ್ಡೆ ಕಳ್ಳತನ ಮಾಡಿದ್ದಾರೆ.

ಕಳೆದ ವಾರದ ಹಿಂದಷ್ಟೇ ಬಂಗಾರಪೇಟೆ ತಾಲ್ಲೂಕಿನ ಗಾಜಗ ಗ್ರಾಮದ ಮಂಜುನಾಥ್ ರೆಡ್ಡಿ ಎಂಬ ರೈತನಿಗೆ ಸೇರಿದ ಆಲೂಗಡ್ಡೆ ಬೆಳೆ ಕದ್ದೊಯ್ದಿದ್ದರು.

ಫಸಲು ಬಂದು ಇನ್ನೇನೂ ಬೆಳೆ ಕೀಳುವ ಸಮಯದಲ್ಲಿಯೇ ಖದೀಮರು ಇಂತಹ ದುರ್ಷ್ಕತ್ಯಗೈಯುತ್ತಿದ್ದು,
ಸಾಲ ಮಾಡಿ ಬೆಳೆ ಬೆಳೆದಿದ್ದ ರೈತನಿಗೆ ಆಘಾತವುಂಟಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ರೈತರು ಕಣ್ಣೀರಿಡುತ್ತಿದ್ದಾರೆ.

ಬೆಳೆಗಳಿಗೆ ರಕ್ಷಣೆ ನೀಡುವಂತೆ ರೈತರು ಪೋಲಿಸರಿಗೆ ಮನವಿ ಮಾಡಿಕೊಂಡಿದ್ದಾರೆ.

ಅಹಿಂದ ವರ್ಗಗಳನ್ನೇ ಮರೆತ ಸಿದ್ದರಾಮಯ್ಯಗೆ ತಕ್ಕ ಉತ್ತರ; ನಳೀನ್

ವಿಜಯಸಾಕ್ಷಿ ಸುದ್ದಿ, ಮೈಸೂರು

ಸಿದ್ದರಾಮಯ್ಯ ಶಕ್ತಿ ತುಂಬಿದ ಸಮುದಾಯಗಳನ್ನೇ ಮರೆತಿದ್ದು, ಅಧಿಕಾರಕ್ಕಾಗಷ್ಟೇ ಅಹಿಂದ ಬೇಕಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು,
ಅಹಿಂದ ಚಳುವಳಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಿತು. ಎಲ್ಲ ವರ್ಗದವರು ಬೆಂಬಲಿಸಿದರು.
ಸಿಎಂ ಬಳಿಕ ಸಿದ್ದರಾಮಯ್ಯ ಅಹಿಂದ ವರ್ಗವನ್ನೇ ಮರೆತರು ಎಂದು ವ್ಯಂಗ್ಯವಾಡಿದರು.

ಅಧಿಕಾರದಲ್ಲಿರುವಾಗ ನಮ್ಮ ಪರ ನಿಂತ ಸಮುದಾಯಗಳ ಪರ ಕೆಲಸ ಮಾಡಬೇಕು.
ಆದರೆ, ಸಿದ್ದರಾಮಯ್ಯ ಅಹಿಂದ ಸಮುದಾಯಗಳನ್ನ ಮರೆತ ಕಾರಣಕ್ಕೆ ತಕ್ಕ ಉತ್ತರವೂ ಸಿಕ್ಕಿತು ಎಂದರು.

ಬಿಜೆಪಿ ಪ್ರತಿ ವರ್ಗಗಳಿಗೂ ಮೋರ್ಚಾಗಳನ್ನ ನೇಮಕಗೊಳಿಸಿ ತಳಮಟ್ಟದಲ್ಲಿ ಪಕ್ಷ ಸಂಘಟಿಸುತ್ತಿದೆ.
ಕಾರ್ಯಕರ್ತರ ಮೂಲಕ ಬಿಜೆಪಿ ಆಯಾ ಸಮುದಾಯಗಳ ಸಮಸ್ಯೆ ಪರಿಹರಿಸಲು ಮುಂದಾಗಿದೆ. ಒಂದು ಕಾಲದಲ್ಲಿ ಬಿಜೆಪಿ ಪಕ್ಷ ಕೇವಲ ಮೇಲ್ವರ್ಗದ ಪಕ್ಷ ಎಂಬಂತಿತ್ತು. ಆದರೆ, ಇವತ್ತು ಎಲ್ಲ ವರ್ಗದವರು ಪಕ್ಷದ ಮುಂಚೂಣಿಯ ಕುರ್ಚಿಯಲ್ಲಿದ್ದಾರೆ. ಬಿಜೆಪಿ ಎಲ್ಲ ವರ್ಗದ ಸ್ಪರ್ಶ ಪಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹೆಮ್ಮೆ ಪಟ್ಟರು.

ಒಂದು ಕಾಲದಲ್ಲಿ ಒಂದು ಲೈಟು ಕಂಬ ನಿಲ್ಲಿಸಿದರು. ಕಾಂಗ್ರೆಸ್ ಗೆಲ್ಲುತ್ತಿತ್ತು, ಆದರೆ, ಇಂದು ಸಮುದಾಯ, ಸಮಾಜ ಕಡೆಗಣಿಸಿದ್ದಕ್ಕಾಗಿ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಹಿಂದುಳಿದ ವರ್ಗಗಳ ಶಾಸಕರು ಬಿಜೆಪಿ ಪಕ್ಷದಲ್ಲಿದ್ದಾರೆ. ಇದು ಬಿಜೆಪಿಯ ಶಕ್ತಿ. ಹಾಗಾಗಿ ಜನರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

error: Content is protected !!