Home Blog Page 3114

ಗಲಾಟೆ ಕಾಂಗ್ರೆಸ್ ಪಕ್ಷದ ಪ್ರೀ ಪ್ಲ್ಯಾನ್; ಸಚಿವ ಸೋಮಶೇಖರ್ ಆರೋಪ

ವಿಜಯಸಾಕ್ಷಿ ಸುದ್ದಿ, ಮೈಸೂರು

ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕಾಗಿ ಮಂಗಳವಾರ ಮೇಲ್ಮನೆಯಲ್ಲಿ ಕೋಲಾಹಲ ಉಂಟಾಗಿತ್ತು. ಗೊಂದಲ -ಗದ್ದಲಕ್ಕೆ ಕಾರಣವಾಗಿತ್ತು. ಅಲ್ಲದೇ, ಕಾಂಗ್ರೆಸ್ ಬಿಜೆಪಿ ನಾಯಕರ ಮಧ್ಯೆ ಜಂಗಿ ಕುಸ್ತಿ ನಡೆಯುವ ಹಂತಕ್ಕೆ ತಲುಪಿತ್ತು.

ಪರಿಷತ್ ಗಲಾಟೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಮುಂಚೆಯೇ ಸಭೆಯಲ್ಲಿ ನಿರ್ಧಾರವಾಗಿತ್ತು.
ಇದು ಕಾಂಗ್ರೆಸ್ ಪಕ್ಷದ ಪ್ರೀ ಪ್ಲ್ಯಾನ್ ಆಗಿತ್ತು ಎಂದು
ಸಹಕಾರ ಸಚಿವ ಎಸ್.ಟಿ‌.ಸೋಮಶೇಖರ್ ಆರೋಪಿಸಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಲ್ ಪಿ ಸಭೆಯಲ್ಲಿ‌ ಗಲಾಟೆ, ರೌಡಿಸಂ, ದಾಂಧಲೆ ಮಾಡಿ ಅಂತಾ ಹೇಳಿದ್ದಾರೆ. ಅವರು ಹೇಳಿಕೊಟ್ಟ ಹಾಗೇ ಮೇಲ್ಮನೆಯಲ್ಲಿ‌ ನಡೆದಿದೆ ಎಂದು ದೂರಿದರು.

ಗೂಂಡಾಗಿರಿ ಮಾಡಿ ಗೌರವಾನ್ವಿತ ಉಪ ಸಭಾಪತಿ ಅವರನ್ನು ಬಲಾತ್ಕಾರವಾಗಿ ಎಳೆದಾಡಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿಯನ್ನ ತೋರಿಸುತ್ತದೆ.
ಮೇಲ್ಮನೇ ಸದಸ್ಯರನ್ನ ಬುದ್ದಿವಂತ ಸದಸ್ಯರು ಅಂತ ಕರೆಯುತ್ತಾರೆ. ಆದರೆ, ಅವರು ನಡೆದುಕೊಂಡ ರೀತಿ ಸರಿಯಲ್ಲ. ಕಾಂಗ್ರೆಸ್ ಗೆ ಮಾನ ಮರ್ಯಾದೆ ಇದ್ದರೆ ಅವರೆಲ್ಲರನ್ನು ಕೂಡಲೇ ಅಮಾನತು ಮಾಡಬೇಕು. ಇಲ್ಲದಿದ್ದರೆ, ಮತ್ತೆ ಅದೇ ಸಂಸ್ಕೃತಿ ಮುಂದುವರೆಸುತ್ತಾರೆ ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಊರೆಲ್ಲಾ ನ್ಯಾಯ ಮಾತನಾಡುತ್ತಾರೆ. ಇವರೇ ಗಲಾಟೆ ಮಾಡಿದವರನ್ನ ಪಕ್ಷದಿಂದ ಅಮಾನತು ಮಾಡಲಿ. ಸಭಾಪತಿ ಪೀಠಕ್ಕೆ ಅದರದ್ದೇ ಆದ ಗೌರವವಿದೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಎಸ್.ಟಿ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.

ನಿರುದ್ಯೋಗ, ಹಸಿವು, ಬಡತನ ಮುಕ್ತ ದೇಶವಾಗಿಸಲು ಪ್ರಾಮಾಣಿಕ ಶ್ರಮ ಮುಖ್ಯ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ

ಬದುಕಿನ ಪಯಣದಲ್ಲಿ ಮುಂದ್ಮೂಂದೆ ಹೋದಂತೆ ಕೆಲವೊಂದಿಷ್ಟು ಅವಮಾನ, ಹಿಂಜರಿಕೆ, ತಾಪತ್ರಯ.., ಯಾಕೀ ಹೋರಾಟ? ಪ್ರತಿಯೊಬ್ಬ ಮನುಷ್ಯನು ಅನುಭವಿಸಲೇಬೇಕಾದ ಪಾಡು.. ಕೇವಲ ತುತ್ತು ಅನ್ನಕ್ಕಾಗಿಯೇ ಈ ಪರಿಪಾಟಲು? ಇಲ್ಲಾ ತುತ್ತು ಅನ್ನಕ್ಕಾಗಲಿ ನಿರ್ಧಿಷ್ಟ ಗುರಿ ಸಾಧನೆಗಾಗಲಿ ವ್ಯಕ್ತಿಯೊಬ್ಬ ಕಷ್ಟ ನೋವುಗಳನ್ನು ಅನುಭವಿಸಲು ಸಿದ್ಧನಿರಬೇಕು. ಅಂತೆಯೇ ಪ್ರತಿಯೊಬ್ಬ ವ್ಯಕ್ತಿ ಹುಟ್ಟಿನಿಂದ ಮರಣದವರೆಗೂ ಹೋರಾಟ ನಡಿಸುತ್ತಾನೆ, ಮತ್ತೆ ನಡಿಸಲೇಬೇಕು.

ಇತ್ತೀಚಿಗಷ್ಟೇ ಆಚರಿಸಿದ ಮಾನವಹಕ್ಕು ದಿನಾಚರಣೆಯೂ ಇದನ್ನೇ ಪ್ರತಿಬಿಂಬಿಸುತ್ತದೆ. ವ್ಯಕ್ತಿಯು ಸಂವಿಧಾನದನ್ವಯ ನಿರ್ಧಿಷ್ಟ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿದ್ದು, ಅವುಗಳನ್ನು ಪಡೆಯಲು ನಿಭಾಯಿಸಲು ಹೋರಾಟದ ಬದುಕು ನಡೆಸುತ್ತಾನೆ.

ಆದರೆ, ಇಂದಿನ ಜನ ಕೇವಲ ಹಕ್ಕಿನ ಬಗ್ಗೆ ಮಾತನಾಡುವವರೇ ಹೊರತು ಕರ್ತವ್ಯದ ಬಗ್ಗೆ ಒಂದಿಷ್ಟು ಯೋಚಿಸಲಾರರು. ತಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳಲು ಹಕ್ಕಿನ ಕುರಿತಷ್ಟೇ ಗಮನಹರಿಸುವವರೂ ನಮ್ಮ ನಡುವೆಯೇ ಇದ್ದಾರೆ. ಇವುಗಳನ್ನು ಬದಿಗಿಟ್ಟು ಪುನಃ ನೋಡಿದಾಗ ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ಭೂಮಿಯಲ್ಲಿ ಎಂದಿಗೂ ಬದಲಾಗದಿರದ ಬಡತನ, ಹಸಿವು, ನಿರುದ್ಯೋಗ ಅನಾದಿಕಾಲದಿಂದಲೂ ಕೇಳುತ್ತಲಿರುವ ಅದೇ ಮುಂದುವರೆಯುತ್ತಿರುವ ಭಾರತ; ಇಂದಿಗೂ ಯಾವ ಹಕ್ಕು, ಅನುಕೂಲಗಳು ಯಾರಿಗೆ ಉಪಯೋಗವಾಗಬೇಕೋ ಅವರಿಗಾಗದಿರುವುದು ಅಸಮಾಧನೀಯ.

ಇಡೀ ನಾಡು ಸ್ವಚ್ಛಗೊಳಿಸಬೇಕಾಗಿರುವವರು ಕೇವಲ ತಮ್ಮ ಮನೆ ಮಾತ್ರ ಸ್ವಚ್ಛಗೊಳಿಸಿಕೊಳ್ಳುತ್ತಿರುವುದು ವಿಪರ್ಯಾಸ. ಪ್ರತಿಯೊಬ್ಬ ಜನಪ್ರತಿನಿಧಿ ಯಾವಾಗ ತನ್ನ ಸ್ವಾರ್ಥದ ಪರಿದೆಯಿಂದ ಹೊರಬಂದು ಜನರ ಏಳಿಗೆಗಾಗಿ ಪ್ರಮಾಣಿಕವಾಗಿ ಶ್ರಮಿಸುವನೋ ಆಗ ದೇಶ ಮುಂದುವರೆದ ಭಾರತವಾಗಲು ಸಾಧ್ಯ.
ಬೇರೆಯವರಿಗೆ ಸಾಮಾನ್ಯವೆನ್ನಿಸುವ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ತಾನು ಶ್ರೇಷ್ಟನೇ. ಯೋಗ್ಯತೆಗೆ ತಕ್ಕಂತೆ ಉದ್ಯೋಗ ಮತ್ತು ಉದ್ಯೋಗಕ್ಕೆ ತಕ್ಕಂತೆ ವೇತನ ನೀಡಿದ್ದಲ್ಲಿ ನಿರುದ್ಯೋಗ, ಹಸಿವು ಮತ್ತು ಬಡತನವೆಂಬ ಕತ್ತಲು ಮಾಯವಾಗಿ ಬೆಳಕು ಮೂಡುವುದರಲ್ಲಿ ಸಂಶಯವಿಲ್ಲ.

ತೇಜಶ್ವಿನಿ ಅ.ಹೊಂಬಳ, ಹುಬ್ಬಳ್ಳಿ

ಕುಮಾರಸ್ವಾಮಿಗೆ ಶುಭಾಶಯ ಕೋರಿದ ದೇವೇಗೌಡ; ಕುತೂಹಲಕ್ಕೆ ಕಾರಣವಾಯ್ತು ಆ ಒಂದು ಟ್ವೀಟ್!

ವಿಜಯಸಾಕ್ಷಿ ಸುದ್ದಿ, ಮೈಸೂರು

ಸದಾ ಜೆಡಿಎಸ್ ಸಭೆ, ಸಮಾರಂಭಗಳಿಗೆ ತೆರಳದೆ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿರುವ ಜಿ.ಟಿ.ದೇವೇಗೌಡ ಅವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಡವಾಗಿ ಜನ್ಮದ ದಿನದ ಶುಭಾಶಯ ಕೋರಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಬುಧವಾರ ಹೆಚ್‌ಡಿಕೆ ಅವರ ಜನ್ಮ ದಿನವಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಾಲು ಸಾಲು ಶುಭಾಶಯ ಕೋರುತ್ತಿದ್ದಾರೆ. ಕೆಲವರು ಭೇಟಿಯಾಗಿ, ಇನ್ನು ಕೆಲವರು ಫೋನ್ ಕರೆ, ಸಂದೇಶ, ಸಾಮಾಜಿಕ ಜಾಲತಾಣಗಳ ಮೂಲಕ ಜನ್ಮ ದಿನದ ಶುಭಾಶಯ ತಿಳಿಸುತ್ತಿದ್ದಾರೆ.

ಆದರೆ, ದೇವೇಗೌಡರು ಮಾತ್ರ ತಡವಾಗಿ (ಅಂದರೆ ಮಧ್ಯಾಹ್ನ) ಟ್ವೀಟ್ ಮಾಡುವ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದು, ಕುತೂಹಲ ಕೆರಳಿಸಿದೆ.

ಮಾಜಿ ಸಿಎಂ ಹೆಚ್ಡಿಕೆ ಹಾಗೂ ಶಾಸಕ ಜಿಟಿಡಿ ನಡುವೆ ಮುನಿಸು ಉಂಟಾಗಿತ್ತು. ಇದರಿಂದ ಜಿಟಿಡಿ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡು ಮೈಸೂರಿನಲ್ಲಿ ನಡೆಯುವ ಜೆಡಿಎಸ್‌ನ ಎಲ್ಲ ಕಾರ್ಯಕ್ರಮಗಳಿಗೂ ಗೈರಾಗುತ್ತಿದ್ದರು. ಅಲ್ಲದೇ, ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆಯಿಂದಲೂ ದೂರವೇ ಉಳಿದಿದ್ದಾರೆ. ಹಾಗಾಗಿ ಕಳೆದ ಮೂರು ದಿನಗಳ ಹಿಂದಷ್ಟೇ ಜನತಾದಳದ ನಾಯಕರು ಜಿಟಿಡಿ ಮನವೊಲಿಸಲು ಪ್ರಯತ್ನಿಸಿದ್ದರು.

ಹಾಗಾಗಿಯೇ ಸಹಜವಾಗಿ ಕುಮಾರಸ್ವಾಮಿ ಅವರ ಮೇಲಿದ್ದ ದೇವೇಗೌಡರ ಮುನಿಸು ಶಮನವಾಯ್ತಾ? ಜೆಡಿಎಸ್ ನಾಯಕರ ಭೇಟಿ ಫಲಪ್ರದವಾಗಿ ಗ್ರಾ.ಪಂ.ಚುನಾವಣೆಯಲ್ಲಿ ಜಿಟಿಡಿ ಸಕ್ರಿಯವಾಗಿ ಪಾಳ್ಗೊಳ್ಳುತ್ತಾರೆಯೇ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ.

ಕೃಷ್ಣಾ ಮೇಲ್ದಂಡೆ 3 ನೇ ಹಂತದ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ

0

2018ರಲ್ಲೇ ಮುಗಿಯಬೇಕಿದ್ದ ಕಾಮಗಾರಿ ಇನ್ನೂ ಆಮೆ ವೇಗದಲ್ಲಿ

ಉತ್ತರ ಕರ್ನಾಟಕದ ಜನಪ್ರತಿನಿಧಿಗಳಿಗೆ ಬೇಕಿದೆ ಇಚ್ಛಾಶಕ್ತಿ

ವಿಜಯಸಾಕ್ಷಿ ಸುದ್ದಿ ಕೊಪ್ಪಳ: ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಕಳೆದೊಂದು ದಶಕದಿಂದ ಕುಂಟುತ್ತಲೇ ಸಾಗಿದೆ. ಪ್ರತಿ ಚುನಾವಣೆಯಲ್ಲೂ ಈ ವಿಷಯವನ್ನೇ ಮುಂದಿಟ್ಟುಕೊಂಡು ಜನರ ಬಳಿಗೆ ಬರುವ ಅಭ್ಯರ್ಥಿಗಳು ಚುನಾಯಿತರಾದ ನಂತರ ಮರೆತುಬಿಡುತ್ತಾರೆ.

ಇದು ಯಾವುದೋ ಒಂದು ಪಕ್ಷದ ವಿರುದ್ಧ ಮಾಡುತ್ತಿರುವ ಆರೋಪವಲ್ಲ. ಯೋಜನೆ ಅನುಷ್ಠಾನಗೊಳ್ಳಲು, ಜನರಿಗೆ, ರೈತರಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಎಂದು ರೈತಮುಖಂಡರು, ಪ್ರಗತಿಪರರಾದ ದೇವೇಂದ್ರಪ್ಪ ಬಳೂಟಗಿ ಆಗ್ರಹಿಸಿದರು.

ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯು.ಕೆ.ಪಿ 3ನೇ ಹಂತದ ಯೋಜನೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಅಂತಿಮ ತೀರ್ಪಿನ ಅಧಿಸೂಚನೆ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈಗಲೂ ಸಹ ಯೋಜನೆ ಪೂರ್ಣಗೊಂಡಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರಕಾರವಿರುವುದರಿಂದ ಎಲ್ಲ ಸಂಸದರು, ಶಾಸಕರು ಒತ್ತಡ ತಂದರೆ ಯೋಜನೆ ಪೂರ್ಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಪಕ್ಷಾತೀತ ಹೋರಾಟ ಮಾಡಲು ನಿರ್ಧರಿಸಿದ್ದು ಮೊದಲ ಹಂತದಲ್ಲಿ ಎಲ್ಲ ಜನಪ್ರತಿನಿಧಿಗಳಿಗೆ ಪತ್ರ ಬರೆಯುವುದರ ಮುಖಾಂತರ ಮನವಿ ಮಾಡಿಕೊಳ್ಳುತ್ತೇವೆ.

ಹಾಲಿ ಮತ್ತು ಮಾಜಿ ಸಂಸದರು, ಶಾಸಕರನ್ನು ಒಳಗೊಂಡ ನಿಯೋಗದಿಂದ ಸರಕಾರವನ್ನು ಭೇಟಿ ಮಾಡಲಾಗುವುದು. ಆ ಮೂಲಕ ಸರಕಾರದ ಮೇಲೆ ಒತ್ತಡ ಹಾಕಿ ಯೋಜನೆ ಪೂರ್ಣಗೊಳಿಸಲು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಕೃಷ್ಣಾ ನದಿಯ ವ್ಯಾಪ್ತಿಯ ಮಹಾರಾಷ್ಟ್ರ , ಕರ್ನಾಟಕ ಮತ್ತು ಆಂಧ್ರಪ್ರದೇಶಗಳಿಗೆ ನೀರು ಹಂಚಿಕೆ ಮಾಡಿ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯು 2010 ರಲ್ಲಿ ಐತೀರ್ಪು ನೀಡಿದೆ. ಅಲ್ಲದೆ , ಕಣಿವೆ ರಾಜ್ಯಗಳು ಐತೀರ್ಪಿನ ಸ್ಪಷ್ಟೀಕರಣ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ನೇತೃತ್ವದ ನ್ಯಾಯಮಂಡಳಿ , 2013 ರಲ್ಲಿ ಅಂತಿಮ ವರದಿ ಸಲ್ಲಿಸಿದೆ. ಕೃಷ್ಣಾ ನ್ಯಾಯಾಧೀಕರಣ -2 ರ ಐತೀರ್ಪಿನಲ್ಲಿ ರಾಜ್ಯದ ಆಲಮಟ್ಟಿ ಜಲಾಶಯಕ್ಕೆ 130 T.M.C ನೀರು ಹಂಚಿಕೆಯಾಗಿದೆ. ಈ ನೀರನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲು ಜಲಾಶಯದ ಎತ್ತರವನ್ನು 519.6 ಮೀಟರ್ನಿಂದ 524.256 ಮೀಟರ್ವರೆಗೆ ಹೆಚ್ಚಿಸಬೇಕಾಗಿದೆ ಎಂದರು.

ಕಾನೂನು ಹೋರಾಟದಲ್ಲಿ ಯಶಸ್ಸು ಗಳಿಸಿದ ನಂತರವೂ , ಇವತ್ತಿನವರೆಗೂ ನೀರಾವರಿ ಯೋಜನೆಗಳಿಗೆ ಬಳಕೆಗೆ ಸಾಧ್ಯವಾಗುತ್ತಿಲ್ಲ . ಯೋಜನೆ ಎಷ್ಟೇ ಪ್ರಗತಿ ಸಾಧಿಸಿದರೂ ನೀರು ಬಳಕೆಯ ಮೇಲೆ ಹಕ್ಕು ಸಿಗುವುದು ಕೇಂದ್ರವು ಅಧಿಸೂಚನೆ ಹೊರಡಿಸಿದ ಬಳಿಕವಷ್ಟೇ. ಅಂತಿಮ ತೀರ್ಪಿನ ಅಧಿಸೂಚನೆ ಹೊರಡಿಸಲು ಕಾಲ ವಿಳಂಬ ನೀತಿಯಿಂದ ಏತನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದೇ ನನೆಗುದಿಗೆ ಬಿದ್ದಿವೆ. ಯೋಜನೆ ವಿಳಂಬವಾದಷ್ಟೂ ಒಂದಡೆ ಯೋಜನೆ ಗಾತ್ರ ಹೆಚ್ಚಾಗುತ್ತಾ ಹೋಗುತ್ತದೆ ಎಂದು ಅವರು ವಿವರಿಸಿದರು.

ಆದರೆ ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ -3 ರ, ಒಳಪಡುವ ಹಲವಾರು ಏತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಸಂಪೂರ್ಣವಾಗಿ ಕೈಗೊಳ್ಳಲು ಯಾವುದೇ ರೀತಿಯ ಕಾನೂನಾತ್ಮಕ ಅಡತಡೆಗಳು ಇರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಅಧಿಸೂಚನೆ ಪ್ರಕಟವಾಗಬೇಕು ಎನ್ನುವುದು ತಾಂತ್ರಿಕ ವಿಚಾರವಷ್ಟೇ. ಹೊಸ ಕಾಯಿದೆಯಂತೆ ಪುನರ್ವಸತಿ , ಭೂಪರಿಹಾರ ಹಾಗೂ ಪುನರ್ ನಿರ್ಮಾಣಕ್ಕೆ ರಾಜ್ಯ ಸರಕಾರ ಹಣಕಾಸಿನ ಅನುದಾನ ಹಂಚಿಕೆಗೆ ತಕ್ಷಣ ಕ್ರಮಕೈಗೊಳ್ಳಬೇಕು. ಈ ಕಾಮಗಾರಿ ಪೂರ್ಣಗೊಂಡರೆ ನೀರು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಈ ವಿಷಯದ ಕುರಿತಾಗಿ ಸರಕಾರ ಇಚ್ಛಾಶಕ್ತಿ ತೋರಬೇಕು.

ಕೃಷ್ಣಾ ನ್ಯಾಯಾಧೀಕರಣ ಅಂತಿಮ ತೀರ್ಪಿನ ಅಧಿಸೂಚನೆ ಪ್ರಕಟಿಸುವಂತೆ ರಾಜ್ಯ ಸರಕಾರ ಕೇಂದ್ರದ ಮೇಲೆ ಒತ್ತಡ ತರಬೇಕು . ಹಾಗೆಯೇ ಯು.ಕೆ.ಪಿ ಮೂರನೇ ಹಂತದ ಯೋಜನೆಯನ್ನು “ ರಾಷ್ಟ್ರೀಯ ಯೋಜನೆ ” ಎಂದು ಘೋಷಿಸುವಂತೆ ಕರ್ನಾಟಕ ಸರಕಾರ ಸರ್ವಪಕ್ಷ ನಿಯೋಗ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ಮೂಲಕ , ಅದಕ್ಕೆ ಆದ್ಯತೆಯ ಮೇಲೆ ಹಣಕಾಸಿನ ವ್ಯವಸ್ಥೆ ಒದಗಿಸುವಂತೆ ಬೇಡಿಕೆ ಸಲ್ಲಿಸಬೇಕು ಎಂದರು.

ಆದ್ದರಿಂದ ಯೋಜನೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಸಂಸದರು ಮತ್ತು ಶಾಸಕರು ಒಳಗೊಂಡು ಸದರಿ ವಿಷಯದ ಕುರಿತಾಗಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ನೀರಾವರಿ ಸಚಿವರಿಗೆ ಮನವಿ ಕೊಡುವುದರ ಮೂಲಕ ಒತ್ತಡ ತರಬೇಕು . ಬರದ ನಾಡು ಎಂದು ಕರೆಸಿಕೊಳ್ಳುವ ಉತ್ತರ ಕರ್ನಾಟಕದ ಭೂಮಿಯನ್ನು ಹಸಿರಾಗಿಸಬಹುದು. ಅಧಿಸೂಚನೆ ಬಾರದಿರುವುದು ಈ ಎಲ್ಲಾ ಪ್ರಕ್ರಿಯೆಗೂ “ ತಡೆಗೋಡೆ ” ಯಾಗಿ ನಿಲ್ಲುವಂತಾಗಿದೆ . ಶೀಘ್ರವೇ ಅಧಿಸೂಚನೆ ತರಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ, ಬಸವರಾಜ್ ಡಿ, ಕೆ.ಚನ್ನಬಸವಸ್ವಾಮಿ ಕನಕಗಿರಿ, ಜಿಲ್ಲಾ ಪಂಚಾಯತ್ ಸದಸ್ಯ ಹನುಮಂತಗೌಡ ಮಾಲೀಪಾಟೀಲ್, ಅಪ್ಪು ಪಟ್ಟಣಶೆಟ್ರ, ಮಲ್ಲಿಕಾರ್ಜುನ ಮೇಟಿ ಮತ್ತಿತರರು ಉಪಸ್ಥಿತರಿದ್ದರು.

ದೇವರ ಹುಂಡಿಗೆ ಕನ್ನ; ಅಪರಾಧಿಗೆ ಮೂರು ವರ್ಷ ಜೈಲು

0

ವಿಜಯಸಾಕ್ಷಿ ಸುದ್ದಿ, ಸುರಪುರ

ಕಾಲಜ್ಞಾನಿ ಕೊಡೆಕಲ್ ಬಸವೇಶ್ವರ ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಪ್ರಯತ್ನಿಸಿದ್ದ ರಾಜನಕೋಳೂರು ಗ್ರಾಮದ ಮಾಳಿಂಗರಾಯ ದೇವಪ್ಪ ನಾಯ್ಕೋಡಿ ಎಂಬ ವ್ಯಕ್ತಿಗೆ ಸುರಪುರ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಮರನಾಥ್ ಬಿ.ಎನ್. ಅವರು ಅಪರಾಧಿಗೆ 3 ವರ್ಷ ಜೈಲು ಹಾಗೂ 5000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಕೊಡೆಕಲ್ ಪಿಎಸ್‌ಐ ಬಾಷುಮಿಯಾ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರ ನ್ಯಾಯವಾದಿ ನಾಗರಾಜ್‌ ವಾದ ಮಂಡಿಸಿದ್ದರು.

ನರೇಗಾ ಕೆಲಸ ಕೇಳಿದ್ರೆ ಪಿಡಿಓ ಆವಾಜ್!! ದೂರು ಸಿಎಸ್‌ವರೆಗೆ ಹೋಗಿದ್ದಕ್ಕೆ ಸೇಡು

0

ವಿಜಯಸಾಕ್ಷಿ ವಿಶೇಷ ಸುದ್ದಿ, ಕೊಪ್ಪಳ:
ಹಳ್ಳಿಗಳಲ್ಲಿ ಈಗ ಗ್ರಾಮ ಪಂಚಾಯಿತಿ ಚುನಾವಣೆಯದ್ದೇ ಸದ್ದು. ಗ್ರಾಮೀಣ ಮಟ್ಟದ ಅಧಿಕಾರಿಗಳಿಗಂತು ಇದೊಂದು ಅಸ್ತ್ರವೂ, ವರವೂ ಆದಂತಿದೆ. ಸಾರ್ವಜನಿಕರು ಏನೇ ಕೇಳಿದರೂ ಗ್ರಾಪಂ ಚುನಾವಣೆ ಮುಗಿಯಲಿ, ಮುಂದೆ ನೋಡೋಣ ಎಂದು ಹೇಳಿ ಸಾಗಿ ಹಾಕುತ್ತಿದ್ದಾರೆ.

ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಕೊಪ್ಪಳ ತಾಲೂಕಿನ ಕೊಳೂರು ಗ್ರಾಮ ಪಂಚಾಯಿತಿಯ ಪುರಾಣ. ಕೊಳೂರು ಗ್ರಾಪಂ ವ್ಯಾಪ್ತಿಯ ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿ ಕೆಲಸ ಕೇಳಲು ಹೋದಾಗ ಪಿಡಿಒ ಸಿದ್ದಮ್ಮ ಮಠದ ಅವರು ಚುನಾವಣೆ ನೆಪ ಹೇಳಿದ್ದಾರೆ. ಮಂಗಳಾಪುರದ ಮುತ್ತು ದೊಡ್ಡಮನಿ ಎಂಬ ಯುವಕ ಈ ಕುರಿತು ಜಿಪಂ ಸಿಎಸ್ ಅವರಿಗೆ ದೂರು ನೀಡಿದ್ದಾನೆ. ದೂರು ಬಂದ ತಕ್ಷಣ ಸಿಎಸ್ ಅವರು ಕೊಳೂರು ಗ್ರಾಪಂ ಪಿಡಿಓ ಅವರಿಗೆ ಲೆಫ್ಟ್ ರೈಟ್ ತೆಗೆದುಕೊಂಡಿದ್ದು ಪಿಡಿಓ ಸಿದ್ದಮ್ಮ ಕೆಂಡಾಮಂಡಲರಾಗಿದ್ದಾರೆ.

ದೂರು ನೀಡಿದ ಯುವಕ ನರೇಗಾ ಕೆಲಸದ ವಿಚಾರವಾಗಿ ಪಿಡಿಓ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ ಮಹಿಳೆಯರಿಗೆ ಚುನಾವಣೆ ಮುಗಿದ ಮೇಲೆ ಕೆಲಸ ಕೊಡ್ತಿನಿ. ನೀನೂ ಅವರ ಹಾಗೆ ಕೆಲಸ ಕೇಳೋನು. ನೀನೇನು ದೊಡ್ಡ ಲೀಡರ್ ಅಲ್ಲ, ನನ್ನ ಹಿಂದೆ ತಿರುಗಾಡಬೇಡ. ಮಹಿಳೆಯರು ಬರಲಿ, ಅವರು ಬಂದಾಗ ಪಂಚಾಯಿತಿಗೆ ಕಡೆಗೆ ಬಾ. ಚುನಾವಣೆ ಮುಗಿದ ನಂತರ ಕೆಲಸ ಕೊಡ್ತಿನಿ. ಫಾರಂನ್ನು ನಾನೇ ತುಂಬುತ್ತೇನೆ. ಇಲ್ಲಿ ಪಿಡಿಓ ನಾನೇ ಹೊರತು ನೀನಲ್ಲ. ನಿನ್ನ ಆಟ ಬೇರೆಯವರ ಹತ್ತಿರ ಇಟ್ಕೊ. ನನ್ನ ಹತ್ತಿರ ನಡೆಯಲ್ಲ. ಇಡೋ ಫೋನು ಅಂತ ಆವಾಜ್ ಹಾಕಿದ ಆಡಿಯೊ ವೈರಲ್ ಆಗಿದೆ.

ಪಿಡಿಓ ಅವರು ನನ್ನ ಚಾರಿತ್ರ್ಯ ವಧೆಯಾಗುವಂಥ ಮಾತುಗಳನ್ನಾಡಿದ್ದಾರೆ. ಇದರಿಂದ ತುಂಬಾ ಬೇಸರವಾಗಿದೆ. ವಯಸ್ಸಿನಲ್ಲಿ ಅವರು ನನ್ನ ತಾಯಿ ಸಮಾನರಾಗಿದ್ದಾರೆ. ನನಗಿಂತಲೂ ಹೆಚ್ಚು ವಯಸ್ಸಿನ ಮಕ್ಕಳಿರುವ ಅವರು, ಉದ್ದೇಶಪೂರ್ವಕವಾಗಿ ನನ್ನ ವ್ಯಕ್ತಿತ್ವ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬಡವರಿಗೆ ಕೆಲಸ ಕೊಡಿ ಎಂದು ಕೇಳಿದ್ದೇ ತಪ್ಪಾ ಸರ್?
-ಮುತ್ತು ದೊಡ್ಡಮನಿ, ಮಂಗಳಾಪುರ.

ಚುನಾವಣೆಗೂ, ನರೇಗಾ ಕೆಲಸಕ್ಕೂ ಸಂಬಂಧ ಇಲ್ಲ. ಬುಧವಾರ ಬಹದ್ದೂರ್ ಬಂಡಿ ಕೆರೆ ಪರಿಶೀಲನೆಗೆ ಹೊರಟಿದ್ದೇವೆ. ನಾಡಿದ್ದೇ ಅರ್ಹರಿಗೆ ಫಾರಂಸಮೇತ ನರೇಗಾದಡಿ ಕೆಲಸ ಕೊಡ್ತಿವಿ. ಮುತ್ತು ಎಂಬ ಹುಡುಗ ಫಾರಂಗಳಿಗೆ ಸಹಿ ಹಾಕುವಂತೆ ಹಿಂದೆ ಹಿಂದೆ ದುಂಬಾಲು ಬೀಳುತ್ತಾನೆ. ಹಿಂದೆ ಇದ್ದ ಪಿಡಿಓಗಳಿಗೂ ಇದೇ ರೀತಿ ಕಾಟ ಕೊಟ್ಟಿದ್ದಾನಂತೆ. ನಾನು ಚುನಾವಣೆ ನಂತರ ಕೆಲಸ ಕೊಡ್ತಿನಿ ಅಂತ ಹೇಳೇ ಇಲ್ಲ.
-ಸಿದ್ದಮ್ಮ ಮಠದ, ಪಿಡಿಓ ಕೊಳೂರು ಗ್ರಾಪಂ.

ಕೊವಿಡ್-19: ಗದಗ ಜಿಲ್ಲೆಯ ಮಂಗಳವಾರದ ಅಪ್ಡೇಟ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಡಿಸೆಂಬರ್‌ 15 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.

ಇದುವರೆಗೆ ಜಿಲ್ಲೆಯಲ್ಲಿ 147964 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 153347 ಮಾದರಿಗಳಲ್ಲಿ 142364 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 147 ಮಾದರಿಗಳ ವರದಿ ಬರಲು ಬಾಕಿ ಇದೆ.

ಜಿಲ್ಲೆಯಲ್ಲಿ ಇಂದಿನ 08 (ಗದಗ-04, ರೋಣ-03, ಶಿರಹಟ್ಟಿ-01) ಪ್ರಕರಣಗಳು ಸೇರಿದಂತೆ ಒಟ್ಟು 10836 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ
ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 11 ಜನ ಸೇರಿದಂತೆ ಒಟ್ಟು 10653 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 42 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಕಿತ್ತಾಟ, ಗಲಾಟೆ ಕಾಂಗ್ರೆಸ್ ನವರ ಸಂಸ್ಕೃತಿ; ಸಚಿವ ಸಿ.ಸಿ.ಪಾಟೀಲ್ ವ್ಯಂಗ್ಯ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಗಲಾಟೆ ಸಿದ್ದರಾಮಯ್ಯನವರ ಕಾಲದಿಂದ ಬಂದಿರುವ ಪರಂಪರೆಯಾಗಿದೆ. ಸದನದಲ್ಲಿ ಇವತ್ತು ನಡೆದ ಘಟನೆ ನೋವಿನ ಸಂಗತಿ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರು ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಉಪ ಸಭಾಪತಿ ಪೀಠಕ್ಕಾಗಿ ನಡೆದ ಫೈಟ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅವಿಶ್ವಾಸ ನಿರ್ಣಯ ಮಾಡಿದ ವೇಳೆ ಕಾಂಗ್ರೆಸ್ ನವರು ಖುರ್ಚಿ‌ ಮೇಲೆ ಕೂಡಬಾರದು. ಕಿತ್ತಾಟ, ಗಲಾಟೆ ಇದು ಕಾಂಗ್ರೆಸ್ ನವರ ಸಂಸ್ಕೃತಿ ತೋರಿಸುತ್ತದೆ. ಖುರ್ಚಿ ಮೇಲೆ ಕೂಡಬೇಕಾದರೆ ಏಳಬೇಕಾದರೆ ಪೀಠಕ್ಕೆ ಕೈ‌ಮಗಿಯುತ್ತೆವೆ. ಹಾಗಾಗಿ ಪೀಠದ ಘನತೆ, ಗೌರವ ಉಳಿಸಬೇಕು ಎಂದರು.

ಶಂಕರ್ ಬಿದರಿ ಹೊರಹಾಕಿ ಆಗಲೂ ಹೈಡ್ರಾಮಾ ಮಾಡಿದರು. ಅವಿಶ್ವಾಸ ಮಂಡನೆಗೆ ಅವಕಾಶ ಕೊಡಬೇಕಿತ್ತು, ಮತ ಹಾಕಬೇಕಿತ್ತು. ಬಹುಮತವಿಲ್ಲದೆ ಸ್ಪೀಕರ್ ಕೂಡಲು ಸಾಧ್ಯನಾ?
ಬಹುಮತವಿದ್ದರೆ ಹತ್ತು ನಿಮಷದಲ್ಲಿ‌ ಮುಗಿಯುತ್ತದೆ‌.
ಖುರ್ಚಿ ಎಳೆಯುವುದು, ಅವರು ಕೂಡಿಸುವುದು, ನಾವು ಕೂಡಿಸುವುದು ರಾದ್ಧಾಂತಾ ಬೇಕಿತ್ತಾ ಎಂದು ಸಚಿವರು ಪ್ರಶ್ನಿಸಿದರು.

ಗೋ ಹತ್ಯೆ ನಿಷೇಧದ ಕುರಿತು ಮಾತನಾಡಿದ ಅವರು, ಬಹುಮತವಿದ್ದರೆ ೧೦ ನಿಮಿಷದಲ್ಲಿ ಮುಗಿದು, ಗೋ ಹತ್ಯೆ ಬಿಲ್ ಪಾಸ್ ಆಗುತ್ತಿತ್ತು. ಕಾಂಗ್ರೆಸ್ ನವರ ಉದ್ದೇಶ ಗೋ ಹತ್ಯೆ ಬಿಲ್ ಪಾಸ್ ಮಾಡಬಾರದು ಅಂತಿರಬಹುದು ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ ಹಿಂಪಡೆಯುತ್ತೇವೆ ಎಂದು ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಅವರು ಹಿಂದೂಗಳ ಭಾವನೆ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ಮುಖಂಡ ರಾಜು ಕುರಡಗಿ ಇದ್ದರು.

ಮೊದಲ ಹಂತದ ಗ್ರಾ.ಪಂ. ಚುನಾವಣೆ;
ಅಂತಿಮವಾಗಿ 2216 ಅಭ್ಯರ್ಥಿಗಳು ಕಣದಲ್ಲಿ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅಂತಿಮವಾಗಿ 53 ಗ್ರಾ.ಪಂ.ಗಳ 801 ಸ್ಥಾನಗಳಿಗೆ 2216 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿ ಉಳಿದಿದ್ದಾರೆ.

ಮೊದಲ ಹಂತದಲ್ಲಿ ಗದಗ ತಾಲ್ಲೂಕಿನ 26 ಗ್ರಾಮ ಪಂಚಾಯತಿಗಳ 438 ಸ್ಥಾನಗಳಿಗೆ ಅನುಸೂಚಿತ ಜಾತಿ 207, ಅನುಸೂಚಿತ ಪಂಗಡದ 77, ಹಿಂದುಳಿದ ‘ಅ’ ವರ್ಗ 216, ಹಿಂದುಳಿದ ‘ಬ’ ವರ್ಗ 36, ಸಾಮಾನ್ಯ 653 ಸೇರಿ ಒಟ್ಟು 1189 ಅಭ್ಯರ್ಥಿಗಳಿದ್ದಾರೆ.

ಲಕ್ಷ್ಮೇಶ್ವರ ತಾಲ್ಲೂಕಿನ 13 ಗ್ರಾಮ ಪಂಚಾಯತಿಗಳ 174 ಸ್ಥಾನಗಳಿಗೆ ಅನುಸೂಚಿತ ಜಾತಿಯ 144, ಅನುಸೂಚಿತ ಪಂಗಡದ 47, ಹಿಂದುಳಿದ ‘ಅ’ ವರ್ಗ 55, ಹಿಂದುಳಿದ ‘ಬ’ ವರ್ಗ 9, ಸಾಮಾನ್ಯ 257 ಸೇರಿ ಒಟ್ಟು 512 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅದರಂತೆ, ಶಿರಹಟ್ಟಿ ತಾಲ್ಲೂಕಿನ 14 ಗ್ರಾ.ಪಂ‌. 189 ಸ್ಥಾನಗಳಿಗೆ ಅನುಸೂಚಿತ ಜಾತಿಯ 114, ಅನುಸೂಚಿತ ಪಂಗಡದ 55, ಹಿಂದುಳಿದ ‘ಅ’ ವರ್ಗ 62, ಹಿಂದುಳಿದ ‘ಬ’ ವರ್ಗ 17, ಸಾಮಾನ್ಯ 267 ಸೇರಿ ಒಟ್ಟು 515 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣೆ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆ ತಿಳಿಸಿದೆ.

ಕೊಲೆಯಾದ ಯುವಕನ ಗುರುತು ಪತ್ತೆ; ಹಂತಕರ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ

ಮುಳಗುಂದ ರಸ್ತೆಯ ಈಚಲ ಹಳ್ಳದಲ್ಲಿ ನಿನ್ನೆ ಪತ್ತೆಯಾಗಿದ್ದ ಯುವಕನ ಶವದ ಗುರುತು ಪತ್ತೆಯಾಗಿದ್ದು, ನಗರದ ಗಂಗಿಮಡಿ ಆಶ್ರಯ ಕಾಲೋನಿಯ ನಿವಾಸಿ ರಮೇಶ್ ಹುಳಕಣ್ಣವರ ಎಂದು ತಿಳಿದು ಬಂದಿದೆ.

ರಮೇಶ್ ನ ಕುತ್ತಿಗೆಗೆ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾರೆ. ಅಲ್ಲದೇ, ಕೊಲೆಯಾಗಿರುವ ಯುವಕನ ಮೃತದೇಹವನ್ನು ದುಷ್ಕರ್ಮಿಗಳು ಈಚಲ ಹಳ್ಳದ ಬ್ರಿಡ್ಜ್ ಕೆಳಗೆ ರವಿವಾರ ತಡರಾತ್ರಿ ಎಸೆದು ಹೋಗಿದ್ದರು. ಸೋಮವಾರ ಸಂಜೆ ಯುವಕನ ಶವ ಪತ್ತೆಯಾಗಿತ್ತು.

ಇದನ್ನೂ ಓದಿ ಯುವಕನ ಕೊಲೆ; ಬ್ರಿಡ್ಜ್ ಕೆಳಗೆ ಶವ ಎಸೆದು ಹೋದ ದುಷ್ಕರ್ಮಿಗಳು

ರಮೇಶ್ ಆಟೋ ಚಾಲಕನಾಗಿದ್ದು, ಅವನ ಸ್ನೇಹಿತನೇ ಕರೆದುಕೊಂಡು ಹೋಗಿ ಹತ್ಯೆ ಮಾಡಿಸಿರಬಹುದು ಎಂದು ಶಂಕಿಸಲಾಗಿದೆ.

ಇನ್ನು ಪ್ರೇಮ ಕಲಹ ಅಥವಾ ಹಣಕಾಸಿನ ವ್ಯವಹಾರಗಳಲ್ಲಿ ರಮೇಶ್ ಭಾಗಿಯಾಗಿದ್ದನೇ
ಎಂಬ ಎಲ್ಲಾ ಆಯಾಮಗಳನ್ನಿಟ್ಟುಕೊಂಡು ಮೃತ ಯುವಕನ ಕುಟುಂಬದವರ ಮಾಹಿತಿ ಆಧರಿಸಿ ಪೊಲೀಸರು ಹಂತಕರ ಪತ್ತೆಗಾಗಿ ಬಲೆ ಬೀಸಿದ್ದು, ತನಿಖೆ ನಡೆಸುತ್ತಿದ್ದಾರೆ.

error: Content is protected !!