Home Blog Page 3151

ಕೊರೊನಾ; ಬುಧವಾರ ಸೋಂಕಿಗೆ ಐವರು ಸಾವು, 486 ಜನರಿಗೆ ಸೋಂಕು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಅದ್ಯಾಕೋ ಸೋಂಕು ಕಡಿಮೆಯಾಗುವಂತೆ ಕಾಣುತ್ತಿಲ್ಲ. ನಿನ್ನೆ ಐದನೂರರ ಗಡಿ ದಾಟಿದ್ದ ಸೋಂಕು ಇವತ್ತು ಕಡಿಮೆ ಇದ್ರೂ ಸಾವಿನ ಸರಣಿ ಮುಂದುವರೆದಿದೆ.

ಇವತ್ತಿನ ಜಿಲ್ಲಾಡಳಿತದ ವರದಿಯಂತೆ ಐದು ಜನ ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 486 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 19316 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -234, ಮುಂಡರಗಿ-38, ನರಗುಂದ-18 ರೋಣ-66, ಶಿರಹಟ್ಟಿ-121, ಹೊರಜಿಲ್ಲೆಯ-09 ಸೇರಿದಂತೆ 486 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 197 ಕ್ಕೇರಿದೆ.

ರೋಣ ತಾಲೂಕಿನ ನಿವಾಸಿ 64 ವರ್ಷದ ವ್ಯಕ್ತಿ ಮೇ -13 ರೋಣ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 13 ರಂದು ಮೃತಪಟ್ಟಿದ್ದಾರೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ನಿವಾಸಿ 76 ವರ್ಷದ ವ್ಯಕ್ತಿ ಮೇ -15 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 16 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಯಾವಗಲ್ ನಿವಾಸಿ 87 ವರ್ಷದ ವ್ಯಕ್ತಿ ಮೇ 16 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 17 ರಂದು ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಹಳೇ ಕಂಕಾಪೂರ ನಿವಾಸಿ 62 ವರ್ಷದ ವ್ಯಕ್ತಿ ಮೇ 10ರಂದು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಮೇ 14 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಬೆನಳ್ಳಿ ನಿವಾಸಿ 42 ವರ್ಷದ ಮಹಿಳೆ, ಮುಂಡರಗಿ ತಾಲೂಕು ಆಸ್ಪತ್ರೆಗೆ ಮೇ-13 ರಂದು ದಾಖಲಾಗಿದ್ದರು. ಇವರು ಮೇ -15 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 323 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 15954 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3165 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 187 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಜಿಂದಾಲ್ ಗೆ ಭೂಮಿ – ಸಿಎಂಗೆ ಲೀಗಲ್ ನೊಟೀಸ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಜಿಂದಾಲ್ ಸಂಸ್ಥೆಗೆ ರಾಜ್ಯ ಸರ್ಕಾರ ಸುಮಾರು 3,667 ಎಕರೆ ಭೂಮಿ ಹಸ್ತಾಂತರ ಮಾಡಿರುವ ಕುರಿತು ವಕೀಲ ದೊರೆರಾಜು ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಲೀಗಲ್ ನೊಟೀಸ್ ಜಾರಿ ಮಾಡಿದ್ದಾರೆ.

ಸರ್ಕಾರಿ ಜಮೀನನ್ನು ಖಾಸಗಿ ಸಂಸ್ಥೆಗೆ ನೀಡುವ ವಿಚಾರದ ಕುರಿತು ತರಾತುರಿಯಾಗಿ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಭೂಮಿ ಹಸ್ತಾಂತರ ಮಾಡಿರುವುದು ಕಾನೂನು ಬಾಹಿರವಾಗಿದೆ. ಜಿಂದಾಲ್ ಸಂಸ್ಥೆ ಕಾನೂನುಬಾಹಿರ ಚಟುವಟಿಕೆ ನಡೆಸಿದೆ ಎಂದು ಲೋಕಾಯುಕ್ತ, ನೀಡಿರುವ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಜಿಂದಾಲ್ ಸಂಸ್ಥೆಯು ಈ ಹಿಂದೆ ಸೌತ್ ವೆಸ್ಟ್ ಕಂಪನಿ ಮೂಲಕ ನಡೆಸಿದ ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ರೂ. 1078 ಕೋಟಿ ನಷ್ಟವಾಗಿದ್ದರ ಬಗ್ಗೆ ಲೋಕಾಯುಕ್ತ ವರದಿ ನೀಡಿದೆ ಎಂದು ಉಲ್ಲೇಖಿಸಿದ್ದಾರೆ.

ಈ ಕುರಿತು ಹೈಕೋರ್ಟ್, ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಜಿಂದಾಲ್ ಸಂಸ್ಥೆಗೆ ಸರ್ಕಾರಿ ಭೂಮಿಯನ್ನು ನೀಡುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಹೆಚ್ಚು ಖನಿಜಾಂಶವುಳ್ಳ ಜಾಗದಲ್ಲಿ ಪ್ರತಿ ಎಕರೆಗೆ ಕೇವಲ ರೂ. 1,22,195 ನಿಗದಿಪಡಿಸಿದ್ದು, ಸರ್ಕಾರಕ್ಕೆ ದೊಡ್ಡ ನಷ್ಟವಾಗಿದೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.

ಸರ್ಕಾರದ ಈ ನಿರ್ಧಾರದ ವಿರೋಧಿಸಿ ಶಾಸಕ ಉದಯ್ ಗರುಡಾಚಾರ್, ಪೂರ್ಣಿಮ ಕೃಷ್ಣಪ್ಪ, ಅರವಿಂದ ಬೆಲ್ಲದ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಇದಕ್ಕ ಸಿಎಂ ಅವರು ಗರಂ ಆಗಿದ್ದು, ಈ ಕುರಿತು ಸ್ಪಷ್ಟನೆ ನೀಡುವಂತೆ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅವರಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ಗರುಡಾಚಾರ್ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

ತಮ್ಮ ಬಂಗಲೆಯನ್ನೇ ಕೋವಿಡ್ ಕೇರ್ ಸೆಂಟರ್ ಮಾಡಿದ ನಾಯಕ!

ವಿಜಯಸಾಕ್ಷಿ ಸುದ್ದಿ, ಪಾಟ್ನಾ

ಸದ್ಯ ಇಡೀ ರಾಷ್ಟ್ರದಲ್ಲಿಯೇ ಮಹಾಮಾರಿಯ ಅಟ್ಟಹಾಸ ವಿಪರೀತವಾಗಿದೆ. ಈ ಸಂದರ್ಭದಲ್ಲಿ ಪ್ರತಿಯೊಂದು ರಾಜ್ಯ ಸರ್ಕಾರಗಳು ಸ್ಥಳೀಯ ಮಟ್ಟದಲ್ಲಿ ಲಾಕ್ ಡೌನ್ ಘೋಷಿಸಿ ಕೊರೊನಾ ಹಿಮ್ಮೆಟ್ಟಿಸುವ ಕಾರ್ಯ ಮಾಡುತ್ತಿವೆ. ಇದರೊಂದಿಗೆ ಹಲವರು ಹಲವಾರು ರೀತಿಯಲ್ಲಿ ಜನರ ಸೇವೆ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ವಿಪಕ್ಷ ನಾಯಕ ಮಾತ್ರ ಸೇವೆಯಲ್ಲಿ ಜನರ ಮನ ಗೆದ್ದು ಮಾದರಿಯಾಗಿದ್ದಾರೆ.

ಪಾಟ್ನಾದ 1-ಪೊಲೊ ರಸ್ತೆಯಲ್ಲಿರುವ ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನು ಶಾಸಕರ ನಿಧಿಯಿಂದ ಪೂರ್ಣ ಪ್ರಮಾಣದ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ, ಬಿಹಾರ ವಿರೋಧ ಪಕ್ಷದ ನಾಯಕ ತೇಜಶ್ವಿ ಯಾದವ್ ಜನರ ಸೇವೆಗೆ ಮುಂದಾಗಿದ್ದಾರೆ.

ಬಿಹಾರ ರಾಜ್ಯದಲ್ಲಿ ಕೂಡ ಆಕ್ಸಿಜನ್ ಕೊರತೆ ತಾಂಡವವಾಡುತ್ತಿದೆ. ಇದರೊಂದಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಕೂಡ ಎದ್ದು ಕಾಣುತ್ತಿದೆ. ಹೀಗಾಗಿ ವಿರೋಧ ಪಕ್ಷದ ನಾಯಕ ಈ ರೀತಿಯ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಸರ್ಕಾರಿ ನಿವಾಸದಲ್ಲಿರುವ ಬೆಡ್ ಗಳಿಗೆ ಆಕ್ಸಿಜನ್ ಅಳವಡಿಸಲಾಗಿದ್ದು, ಔಷಧಿಗಳ ಸಂಗ್ರಹ ಮಾಡಲಾಗಿದೆ. ಈ ಕೇಂದ್ರಕ್ಕೆ ತಮ್ಮ ಶಾಸಕರ ನಿಧಿಯಿಂದ ಬೆಡ್ ಮತ್ತು ಇತರ ಎಲ್ಲ ಸೌಲಭ್ಯಗಳನ್ನು ಹೊಂದಿಸಲಾಗಿದೆ. ಇದನ್ನು ಪ್ರತ್ಯೇಕ ವಾರ್ಡ್ ಅಥವಾ ಕ್ವಾರಂಟೈನ್ ಕೇಂದ್ರವಾಗಿ ಬಳಸಿಕೊಳ್ಳಲು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಅಷ್ಟೇ ಅಲ್ಲದೇ, ಜವಾಬ್ದಾರಿಯುತ ಪ್ರತಿಪಕ್ಷವಾಗಿ, ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ಯಾವುದೇ ವ್ಯವಸ್ಥೆಗಳನ್ನು ಬೆಂಬಲಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. ಸದ್ಯ ಅವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

3ನೇ ಅಲೆಯ ಭಯ – ಈಗಲೇ ಮಕ್ಕಳ ಕೋವಿಡ್ ಕೇರ್ ಸ್ಥಾಪನೆಗೆ ನಿರ್ಧಾರ!

ವಿಜಯಸಾಕ್ಷಿ ಸುದ್ದಿ, ಚಿಕ್ಕೋಡಿ

ಸದ್ಯ ಎಲ್ಲೆಡೆ ಕೊರೊನಾ ಹಾವಳಿ ಶುರುವಾಗಿದೆ. ಇನ್ನೂ ಮೂರನೇ ಅಲೆಗೆ ದೇಶ ಸಿದ್ಧವಾಗಬೇಕಿದೆ. ಆ ಸಂದರ್ಭದಲ್ಲಿ ಚಿಕ್ಕ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಆವರಿಸಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರಿಂದಾಗಿ ರಾಜ್ಯದ 30 ಜಿಲ್ಲೆಗಳಲ್ಲಿಯೂ ಮಕ್ಕಳಿಗೆ ಕೋವಿಡ್ ಕೇರ್ ಸೆಂಟರ್ ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಕೊವಿಡ್ ಕೇರ್ ಸೆಂಟರ್ ನಿರ್ಮಾಣಕ್ಕಾಗಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ಚೆನ್ನಮ್ಮ ಶಾಲೆಗಳನ್ನು ಗುರುತಿಸಲಾಗಿದೆ. ವಿಶೇಷ ಮಕ್ಕಳ ಶಾಲೆಯಲ್ಲಿ ಕೂಡ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮಂಡ್ಯ ಮತ್ತು ಚಾಮರಾಜನಗರದಲ್ಲಿ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಈ ಇಬ್ಬರೂ ಮಕ್ಕಳ ಮುಂದಿನ ಭವಿಷ್ಯದ ಹಿತದೃಷ್ಟಿಯಿಂದ ಏನು ಮಾಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಆ ಮಕ್ಕಳ ಪಾಲನೆ ಪೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ಸೌಕರ್ಯ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇಂದು ಶಿವರಾಜ್ ಕುಮಾರ್ ವಿವಾಹ ವಾರ್ಷಿಕೋತ್ಸವ – ಅರ್ಥಪೂರ್ಣವಾಗಿ ಆಚರಿಸಿದ ಅಭಿಮಾನಿಗಳು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇಂದು ನಟ ಶಿವರಾಜ್ ಕುಮಾರ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ದಿನ. ಹೀಗಿಗ ನಾಡಿನ ಜನತೆ ಈ ದಂಪತಿಯನ್ನು ಹಾರೈಸುತ್ತಿದ್ದಾರೆ. ಶಿವರಾಜ್ ಕುಮಾರ್ ಅವರು 1986ರ ಮೇ. 19ರಂದು ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಮಗಳು ಗೀತಾ ಅವರನ್ನು ಕೈ ಹಿಡಿದ ದಿನ. ಸದ್ಯ ಇವರ ವಿವಾಹವಾಗಿ 35 ವರ್ಷಗಳು ಕಳೆದಿವೆ. ಹೀಗಾಗಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳ ಹಾರೈಕೆಯ ಮಹಾಪೂರವೇ ಹರಿದು ಬರುತ್ತಿದೆ.

ಪ್ರತಿ ವರ್ಷವೂ ಶಿವಣ್ಣ ಅವರು ಮದುವೆ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು. ಆದರೆ, ಕಳೆದ ವರ್ಷದಿಂದ ದೇಶದಲ್ಲಿ ಮಹಾಮಾರಿಯ ಅಟ್ಟಹಾಸ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಚರಮೆ ಮಾಡಿಕೊಳ್ಳುತ್ತಿಲ್ಲ. ಆದರೆ, ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.

ಶಿವಣ್ಣ ಅವರ ವಿವಾಹ ವಾರ್ಷಿಕೋತ್ಸವ ಇರುವ ಹಿನ್ನೆಲೆಯಲ್ಲಿ ಕೆ.ಜಿ. ರಸ್ತೆಯಲ್ಲಿರುವ ಚಿತ್ರಮಂದಿರದ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ ಮಾಡಲಾಗುತ್ತಿದೆ. ಶಿವು ಅಡ್ಡ ಮತ್ತು ಶಿವ ಸೈನ್ಯ ಅಭಿಮಾನಿ ಬಳಗ ಒಟ್ಟಾಗಿ ಈ ಕೆಲಸ ಮಾಡುತ್ತಿದ್ದಾರೆ.

ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರನ್ನು ಕಡೆಗಣಿಸಿದ ಸರಕಾರ; ಮಹಾಮಂಡಳ ರಾಜ್ಯಾಧ್ಯಕ್ಷ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಇದರಲ್ಲಿ ಅಲೆಮಾರಿ ಹಾಗೂ ಕಡು ಬಡತನದಿಂದ ಕುಡಿದ ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೇ ಅನ್ಯಾಯ ಮಾಡಿದೆ ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಘೋಷಿಸಿದ ಪ್ಯಾಕೇಜ್ ನಿಂದಲೂ ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರಿಗೆ ಯಾವುದೇ ಪ್ಯಾಕೇಜ್ ಘೋಷಿಸಿದ ಸರಕಾರ ಈ ಭಾರಿಯು ಅದೇ ಸಂಪ್ರದಾಯ ಮುಂದುವರಿಸಿ ಕೊಂಡು ಬಂದಿದೆ.

ಪ್ರತಿಪಕ್ಷಗಳ ಹಾಗೂ ಸಾರ್ವಜನಿಕ ಒತ್ತಡದ ಮೇರೆಗೆ ಸರ್ಕಾರವು ಒಲ್ಲದ ಮನಸ್ಸಿನಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರು ಹಾಗೂ ಬಿ.ಪಿ.ಎಲ್.ಕುಟುಂಬಗಳನ್ನು ಗುರುತಿಸಿ ಅವರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ನೇರವಾಗಿ ಆರ್ಥಿಕ ಸಹಾಯ ಮಾಡುವುದರಿಂದ ರಾಜ್ಯದ ಕೋಟ್ಯಾಂತರ ಬಡ ಜನರಿಗೆ ಉಪಯೋಗವಾಗಬಹುದು, ಆದರೆ ಸರ್ಕಾರವು ಇದರ ಬಗ್ಗೆ ಗಮನ ಹರಿಸಿಲ್ಲ.

ರಾಜ್ಯದಾದ್ಯಂತ ಸಾವಿರಾರು ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರು ಅದೇ ವೃತ್ತಿಯನ್ನು ನಂಬಿ ದುಡಿಯುತ್ತಿದ್ದಾರೆ.ಆದರೆ, ಅವರಿಗೆ ಹಾಸಿಗೆ ಹೊಲೆಯುವ ಕೂಲಿ ಬಿಟ್ಟು ಯಾವುದೇ ಕೆಲಸ ಗೊತ್ತಿಲ್ಲ ಎಂದರು

ಇದರಿಂದಾಗಿ ಅವರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಕೋವಿಡ್–19 ಲಾಕ್‌ಡೌನ್‌ ಪರಿಸ್ಥಿತಿಯಿಂದಾಗಿ ಕೆಲಸವಿಲ್ಲದೆ ಮತ್ತು ಬದುಕು ಸಾಗಿಸಲು ಕಷ್ಟಸಾಧ್ಯವಾಗಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇದ್ದಾರೆ. ಹೀಗಾಗಿ ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಸರ್ಕಾರದಿಂದ ದೊರೆಯುವ ಶಾಸನಬದ್ಧ ಸೌಲಭ್ಯಗಳನ್ನು ಕಲ್ಪಿಸಬೇಕೆಂದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿ ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರಿಗೂ ಕಾರ್ಮಿಕರೆಂದು ಗುರುತಿನ ಚೀಟಿ ನೀಡಬೇಕು ಎಂದು ಮಹಾಮಂಡಳ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ಆಗ್ರಹಿಸಿದರು.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಟ್ಟು ಕರಕಲಾದ ಜನರಲ್ ಸ್ಟೋರ್!

ವಿಜಯಸಾಕ್ಷಿ ಸುದ್ದಿ, ಗದಗ

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಜನರಲ್ ಸ್ಟೋರ್ ಹೊತ್ತಿ ಉರಿದ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಕೆಸಿ ರಾಣಿ ರಸ್ತೆಯಲ್ಲಿರುವ ಚೇತನ ಕ್ಯಾಂಟಿನ್ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಬಸವರಾಜ್ ನಾಡಗೌಡ್ರ ಎಂಬುವವರಿಗೆ ಸೇರಿದ್ದ ಜನರಲ್ ಸ್ಟೋರ್ ಬೆಂಕಿಗೆ ಆಹುತಿಯಾಗಿದೆ.

ಈ ಘಟನೆಯಲ್ಲಿ ಜನರಲ್ ಸ್ಟೋರ್ ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆಗ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೋಲಿಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ- ಬೆಟಗೇರಿ ಬಡಾವಣೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹಣ ಲೂಟಿ ಮಾಡಲು ಈ ಪ್ಯಾಕೇಜ್ ಘೋಷಿಸಲಾಗಿದೆ – ಕುಮಾರಸ್ವಾಮಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸರ್ಕಾರ ಅರೆಕಾಸಿನ ಮಜ್ಜಿಗೆ ಕೊಟ್ಟಂತೆ ಪ್ಯಾಕೇಜ್ ಘೋಷಿಸಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು ರೂ. 1,250 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದು ಯಾವುದಕ್ಕೂ ಪ್ರಯೋಜನವಿಲ್ಲ. ಜನರ ದುಡ್ಡನ್ನು ಲೂಟಿ ಹೊಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ನಿರಾಶಾದಾಯಕ ಪ್ಯಾಕೇಜ್. ಹೂವಿನ ಬೆಳೆಗಾರರಿಗೆ ಘೋಷಣೆ ಮಾಡಿರುವ ಪ್ಯಾಕೇಜ್ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಕೂಲಿ, ಬೀಜದ ಬೆಲೆ ಏರಿಕೆ ಆಗಿರುವಾಗ ಈ ಸಹಾಯ ಅವರಿಗೆ ಯಾವುದಕ್ಕೆ ಪ್ರಯೋಜನವಾಗಲಿದೆ. ಆಟೋ, ಕ್ಯಾಬ್ ಡ್ರೈವರ್ ಗಳಿಗೆ ಈ ಹಣ ಸಾಕಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರು, ಚಮ್ಮಾರರು, ಕಮ್ಮಾರಿಗೆ ಕೊಟ್ಟ ಹಣ ಯಾವುದಕ್ಕೂ ಸಾಕಾಗುವುದಿಲ್ಲ. 10 ಕೆಜಿ ಅಕ್ಕಿ ಕೂಡಾ ಸಾಕಾಗೊಲ್ಲ. ಇದು ರಾಜ್ಯ ಸರ್ಕಾರದ ನಾಟಕ. ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನ ಇಲ್ಲ ಎಂದು ಹೆಚ್ಡಿಕೆ ಜರಿದಿದ್ದಾರೆ.

ವಿಜಯೇಂದ್ರನ ಕೈಯಿಂದ ಅಧಿಕಾರ ಡಿಸಿಗಳಿಗೆ ಹೋಗಲಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಇನ್ನೂ 15 ದಿನ ಲಾಕ್ ಡೌನ್ ಮುಂದುವರೆಸಬೇಕು ಹಾಗೂ ಶ್ರಮಿಕ ವರ್ಗದವರಿಗೆ ತಲಾ ರೂ. 5 ಸಾವಿರ ಪರಿಹಾರ ಘೋಷಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಜಿಲ್ಲೆಗೆ ಹಿರಿಯ ಐಎಎಸ್ ಅಧಿಕಾರಿಯನ್ನು ಮಾನಿಟರ್ ಮಾಡಲು ನಿಯೋಜಿಸಬೇಕು. ಪ್ರತಿ ಜಿಲ್ಲೆಗೂ ರೂ. 100 ಕೋಟಿ ಅನುದಾನ ನೀಡಬೇಕು. ಜಿಲ್ಲಾಧಿಕಾರಿಗಳಿಗೆ ಹಣ ನೀಡಿ ಬಳಕೆಯ ಸ್ವತಂತ್ರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಒಂದು ದಿನವೂ ಹಳ್ಳಿಯತ್ತ ತೆರಳಿಲ್ಲ. ಟಾಸ್ಕ್ ಪೋರ್ಸ್ ನವರು ಕೂಡ ಹಳ್ಳಿಯತ್ತ ಮುಖ ಮಾಡುತ್ತಿಲ್ಲ. ಹಳ್ಳಿಯಲ್ಲಿ ಸಾಯುತ್ತಿರುವವರು ಶ್ರಮಿಕರು, ಅಹಿಂದ ವರ್ಗದವರೇ ಹೆಚ್ಚು. ಕೂಡಲೇ ಮಾಂಸದ ಅಂಗಡಿಗಳನ್ನು ಮುಚ್ಚಬೇಕು. ಮಾಂಸದ ಅಂಗಡಿಯ ಮುಂದೆ ಪ್ರತಿ ದಿನವೂ ಜಾತ್ರೆ ಇರುತ್ತದೆ ಎಂದು ಮನವಿ ಮಾಡಿದ್ದಾರೆ.

ಪ್ರತಿ ಹಣದ ಬಿಲ್ ಕೂಡ ವಿಜಯೇಂದ್ರನ ಕಡೆಯಿಂದ ಕ್ಲಿಯರ್ ಆಗಬೇಕು. ಹಣದ ಬಿಡುಗಡೆಯ ಕೇಂದ್ರೀಕರಣ ಮೊದಲು ತಪ್ಪಬೇಕು. ಡಿಸಿಗಳಿಗೆ ಹಣ ಖರ್ಚು ಮಾಡುವ ಅಧಿಕಾರ ನೀಡಬೇಕು. ಸರಕಾರ ನಡೆಸುವವರು ಹೆಣದ ಮೇಲೆ ಹಣ ಮಾಡಲು ಹೋಗಬೇಡಿ ಎಂದು ಹೇಳಿದ್ದಾರೆ.

ಕೊರೊನಾ ಸಂಕಷ್ಟ 1250 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿಯ 2ನೇ ಅಲೆಯಿಂದ ಜನ ಕಂಗಾಲಾಗಿದ್ದಾರೆ. ಲಾಕ್ ಡೌನ್ ನಿಂದಾಗಿ ಬಡವರಿಗೆ ಸರ್ಕಾರ ಆಸರೆಯಾಗುವ ಪ್ರಯತ್ನ ಮಾಡುತ್ತಿದೆ. ಬಡವರು ಹಾಗೂ ಶ್ರಮಿಕ ವರ್ಗದ ಜನರಿಗೆ ಸಿಎಂ ಯಡಿಯೂರಪ್ಪ ಅವರು ರೂ. 1,250 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ ರೂ. 10 ಸಾವಿರ ಸಹಾಯಧನ, ಹಣ್ಣು, ತರಕಾರಿ ನಷ್ಟಕ್ಕೆ ಪ್ರತಿ ಹೆಕ್ಟೇರ್ ರೂ. 10 ಸಾವಿರ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ.

ಆಟೋ, ಕ್ಯಾಬ್ ಚಾಲಕರಿಗೆ ರೂ. 3 ಸಾವಿರ, ಕಟ್ಟಡ ಕಾರ್ಮಿಕರಿಗೆ ತಲಾ ರೂ. 3 ಸಾವಿರ, ಅಗಸ, ಚಮ್ಮಾರ, ಕಮ್ಮಾರ ಸೇರಿದಂತೆ ಅಸಂಘಟಿತರಿಗೆ ರೂ. 2 ಸಾವಿರ, ರಸ್ತೆ ಬದಿ ವ್ಯಾಪಾರಿಗಳಿಗೆ ರೂ. 2 ಸಾವಿರ, ರಸ್ತೆ ಬದಿಯ ವ್ಯಾಪಾರಿಗಳಿಗೆ ರೂ. 2 ಸಾವಿರ, ಕಲಾವಿದರು, ಕಲಾ ತಂಡಕ್ಕೆ ರೂ. 3 ಸಾವಿರ ಘೋಷಿಸಿದ್ದಾರೆ. ಅಲ್ಲದೇ, ಸಾಲ ಮರುಪಾವತಿಗೆ ಜುಲೈವರೆಗೆ ಅವಧಿ ವಿಸ್ತರಣೆ ಮಾಡಿದ್ದಾರೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ ತಲೆಗೆ 5 ಕೆಜಿ ಅಕ್ಕಿ ನೀಡಲಾಗುವುದು. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ರೇಷನ್ ಕೊಡಲಾಗುತ್ತದೆ. ಅಲ್ಲದೆ ಮೇ, ಜೂನ್ ರೇಷನ್ ಕೊಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

ಸಾಲ ಮರುಪಾವತಿಗೆ 3 ತಿಂಗಳ ಅವಕಾಶ ಇದ್ದು, 3 ತಿಂಗಳ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಅಲ್ಲದೇ, ಲಾಕ್ ಡೌನ್ ಬಗ್ಗೆ ಮೇ. 23ರಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರತಿ ಪಂಚಾಯತಿಗೆ ಕೋವಿಡ್ ನಿರ್ವಹಣೆಗೆ ರೂ. 50 ಸಾವಿರ ಹಣ ನೀಡಲಾಗುವುದು. ಅಲ್ಲದೇ, ಲೈನ್ ಮ್ಯಾನ್, ಗ್ಯಾಸ್ ತಲುಪಿಸೋರು, ಶಿಕ್ಷಕರು ಫ್ರಂಟ್ ಲೈನ್ ವರ್ಕರ್ಸ್ ಎಂದು ಸರ್ಕಾರ ಘೋಷಿಸಿದೆ.

error: Content is protected !!