ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಸುಲ್ತಾನ್ ಎಂದು ಸಲ್ಮಾನ್ ಖಾನ್ ಹೆಸರು ಮಾಡಿದ್ದರು. ಅವರ ಬಹುತೇಕ ಚಿತ್ರಗಳು ಬಿಡುಗಡೆಯಾದ ಮೊದಲ ದಿನವೇ ಕೋಟಿ ಕೋಟಿ ಹಣ ದೋಚಿ, ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದವು. ಆದರೆ, ಅವರ ಚಿತ್ರ ಕೂಡ ಈಗ ಕೆಟ್ಟ ದಾಖಲೆ ಬರೆದಿದೆ.
ಇತ್ತೀಚೆಗಷ್ಟೇ ತೆರೆಕಂಡಿದ್ದ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೇ ದೇಶದಲ್ಲಿ ಲಾಕ್ ಡೌನ್ ಜಾರಿಯಾಗಿದೆ. ಹೀಗಾಗಿ ಹೆಚ್ಚು ಕಲೆಕ್ಷನ್ ಮಾಡಲು ಸಾಧ್ಯವಾಗಿರಲಿಲ್ಲ. ಇಡೀ ದೇಶದಲ್ಲಿಯೇ ಈ ಚಿತ್ರ ಕೇವಲ ಮೂರು ಚಿತ್ರ ಮಂದಿರಗಳಲ್ಲಿ ಮಾತ್ರ ತೆರೆ ಕಂಡಿದೆ.
ಹೀಗಾಗಿ ಈ ಚಿತ್ರ ತಂಡ ಓಟಿಟಿ ಮೊರೆ ಹೋಯಿತು. ಆದರ ನಡುವೆಯೂ ತ್ರಿಪುರದ ಮೂರು ಥಿಯೇಟರ್ಗಳಲ್ಲಿ ರಾಧೆ ಬಿಡುಗಡೆ ಆಯಿತು. ಮೊದಲ ದಿನ ಮೂರು ಚಿತ್ರಮಂದಿರಗಳಿಂದ ಒಟ್ಟು 11 ಶೋಗಳು ನಡೆದಿದ್ದವು. ಈ ಎಲ್ಲ ಪ್ರದರ್ಶನಗಳಿಂದ ಒಟ್ಟು ರೂ. 10,432 ಮಾತ್ರ ಕಲೆಕ್ಷನ್ ಆಗಿದೆ. ಹೀಗಾಗಿ ಬಾಕ್ಸ್ ಆಫೀಸ್ ಸುಲ್ತಾನ್ ಕೋಟಿ ಎತ್ತುವ ಕೈಯಲ್ಲಿ ಪುಡಿಗಾಸು ಹಿಡಿಯುವಂತೆ ಈ ಕೊರೊನಾ ಮಾಡಿತಲ್ಲ ಎಂದು ಚಿತ್ರ ತಂಡದ ಸದಸ್ಯರು ಮಾತನಾಡುತ್ತಿದ್ದಾರೆ.
ಈ ಮೂರು ಚಿತ್ರ ಮಂದಿರಗಳಲ್ಲಿ ರಾಧೆ ಪ್ರದರ್ಶನ ಕಂಡಿದ್ದು ಕೇವಲ ನಾಲ್ಕು ದಿನ ಮಾತ್ರ. ಅಲ್ಲಿ ಕೂಡ ಸಂಪೂರ್ಣ ಲಾಕ್ ಡೌನ್ ಆದ ಮೇಲೆ ರಾಧೆಗೆ ಸಂಪೂರ್ಣ ಬಾಗಿಲು ಹಾಕಲಾಯಿತು. ಅಂದರೆ, ಚಿತ್ರ ಥಿಯೇಟರ್ ನಲ್ಲಿ ಪ್ರದರ್ಶನ ಕಂಡ ನಂತರ ಒಟ್ಟು ಇಲ್ಲಿಯವರೆಗೆ ರೂ. 63 ಸಾವಿರ ಗಳಿಸಿದ ಎಂದು ಮೂಲಗಳು ತಿಳಿಸಿವೆ. ನಂತರ ಈ ಚಿತ್ರ ಓಟಿಟಿಯಲ್ಲಿ ಭರ್ಜರಿ ಹಣ ಬಾಚಿಕೊಂಡಿದೆ.
ಮೇ .13ರಂದು ಈ ಚಿತ್ರ ಜೀ ಪ್ಲೆಕ್ಸ್ನಲ್ಲಿ ‘ರಾಧೆ ರಿಲೀಸ್ ಆಗಿತ್ತು. ಅಂದು ಒಂದೇ ದಿನಕ್ಕೆ ಈ ಚಿತ್ರ ರೂ. 42 ಲಕ್ಷ ಗಳಿಸಿದೆ. ಡಿಜಿಟಲ್ ಮಾಧ್ಯಮದಲ್ಲಿ ಈ ಚಿತ್ರ ಒಂದೇ ದಿನ 42 ಲಕ್ಷ ವೀಕ್ಷಣೆ ಕಂಡಿದೆ. ಒಂದು ಬಾರಿ ಸಿನಿಮಾ ವೀಕ್ಷಣೆ ಮಾಡಬೇಕೆಂದರೆ ರೂ. 249 ಸಂದಾಯ ಮಾಡಬೇಕು. ಹೀಗಾಗಿ ಈ ಸಿನಿಮಾ ಮೊದಲ ದಿನ ಗಳಿಸಿದ್ದು ರೂ. 108 ಕೋಟಿ ಎಂದು ವರದಿಯಾಗಿದೆ.
ಪಾರ್ಟಿಗಾಗಿ ಹೊರಟಿದ್ದ ಅರಣ್ಯಾಧಿಕಾರಿಗಳನ್ನು ತೆಡೆದಿದ್ದ ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಯರ ಮೇಲೆಯೇ ಕೇಸ್ ದಾಖಲಿಸಿರುವ ಘಟನೆ ನಡೆದಿದೆ. ಜಿಲ್ಲೆಯ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ನಾಲ್ವರ ಮೇಲೆ ಎಫ್ ಐಆರ್ ದಾಖಲಾಗಿದೆ.
ಭದ್ರಾ ಅಭಯಾರಣ್ಯದ ಮುತ್ತೋಡಿ ವಲಯದಲ್ಲಿರುವ ಸೀಗೇಕಾನ್ ಅರಣ್ಯ ಪ್ರವಾಸಿ ಮಂದಿರದಲ್ಲಿ ಬುಧವಾರ ರಾತ್ರಿ ಹೊತ್ತು ಅರಣ್ಯಾಧಿಕಾರಿಗಳು ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ನಂತರ ಗುರುವಾರ ಇವರು ತಾಲೂಕು ಸಂತವೇರಿಯ ಬೇಟೆ ನಿಗ್ರಹ ದಳದ ಬಳಿ ಪಾರ್ಟಿಗೆ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಗ್ರಾಮಸ್ಥರು ಅಡ್ಡಗಟ್ಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ರಾಜ್ಯ ಅರಣ್ಯ ಪಡೆ ಮುಖ್ಯಸ್ಥ ಸಂಜಯ್ ಮೋಹನ್ ಮತ್ತು ಅವರ ಸಿಬ್ಬಂದಿ 10ಕ್ಕೂ ಹೆಚ್ಚು ಕಾರುಗಳಲ್ಲಿ ತೆರಳುತ್ತಿದ್ದರು. ಇವುಗಳನ್ನು ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಪಾರ್ಟಿಗಾಗಿಯೇ ಈ ಸಿಬ್ಬಂದಿ 10ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಇವರೆಲ್ಲ ಪಾರ್ಟಿಗಾಗಿ ಸಂತವೇರಿ ಸಮೀಪದ ಗೇಮ್ ಫಾರೆಸ್ಟ್ ನತ್ತ ಹೊರಟಿದ್ದರು. ಗ್ರಾಪಂ ಸದಸ್ಯರು ಸೇರಿದಂತೆ ಗ್ರಾಮಸ್ಥರು ತಡೆದು ಪ್ರಶ್ನಿಸಿದ್ದಾರೆ. ಆಗ ಅಧಿಕಾರಿಗಳು ಮರಳಿ ಹೋಗಿದ್ದರು ಎನ್ನಲಾಗಿದೆ.
ಆದರೆ, ಸದ್ಯ ಅಧಿಕಾರಿಗಳನ್ನು ತಡೆದ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ಮೇಲೆಯೇ ದೂರು ದಾಖಲಾಗಿದೆ. ಇದಕ್ಕ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಏರ್ ಇಂಡಿಯಾ ಮೇಲೆ ದೊಡ್ಡ ಮಟ್ಟದ ಸೈಬರ್ ದಾಳಿ ನಡೆದಿದೆ. ಈ ಮೂಲಕ ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ವಿವರಗಳು ಕಳ್ಳತನವಾಗಿವೆ. ಫೆಬ್ರವರಿ ತಿಂಗಳಲ್ಲಿ ಡೇಟಾ ಪ್ರಾಸೆಸರ್ ಮೇಲೆ ದೊಡ್ಡ ಮಟ್ಟದ ಸೈಬರ್ ದಾಳಿ ನಡೆದಿದೆ. ಸುಮಾರು ಹತ್ತು ವರ್ಷಗಳ ಅವಧಿಯಲ್ಲಿನ ಡೇಟಾ ಕಳ್ಳತನ ಮಾಡಲಾಗಿದೆ. ಏರ್ ಇಂಡಿಯಾ ಗ್ರಾಹಕರ ಕ್ರೆಡಿಟ್ ಕಾರ್ಡ್, ಪಾಸ್‌ಪೋರ್ಟ್, ಫೋನ್ ನಂಬರ್ ಸೇರಿದಂತೆ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿವೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಈ ಸಂಗತಿ ವಿಶ್ವಾದ್ಯಂತ 4,500,000 ದತ್ತಾಂಶದ ಮೇಲೆ ಪರಿಣಾಮ ಬೀರಿದೆ. ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ಮಾಹಿತಿ, ಪಾಸ್ ಪೋರ್ಟ್, ಟಿಕೆಟ್, ಕ್ರೆಡಿಟ್ ಕಾರ್ಡ್, ಸ್ಟಾರ್ ಅಲಯನ್ಸ್ ಹಾಗೂ ಏರ್ ಇಂಡಿಯಾ ಪ್ರಯಾಣಿಕರ ಮಾಹಿತಿಗಳನ್ನು ಇದು ಒಳಗೊಂಡಿರುತ್ತದೆ. ಹೀಗಾಗಿ ಪ್ರಯಾಣಿಕರು ತಮ್ಮ ವೈಯಕ್ತಿಕ ಮಾಹಿತಿ ಸುರಕ್ಷತೆಗಾಗಿ ಸಾಧ್ಯವಾದಾಗಲೆಲ್ಲಾ ಪಾಸ್‌ವರ್ಡ್ ಬದಲಾಯಿಸುವಂತೆ ತಿಳಿಸುತ್ತಿರುತ್ತೇವೆ ಎಂದು ಸಂಸ್ಥೆ ಹೇಳಿದೆ.
ಕ್ರೆಡಿಟ್ ಕಾರ್ಡ್ ಹೊಂದಿರುವ ಸಿವಿವಿ/ಸಿವಿಸಿ ಡೇಟಾ ಸಂಗ್ರಹಿಸಲಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ದಾಳಿಗೆ ಒಳಗಾದ ಪ್ರಯಾಣಿಕರಿಗೆ ಸಹಾಯ ಮಾಡಲು ಸಂಸ್ಥೆ ಕಾಲ್ ಸೆಂಟರ್ ಸ್ಥಾಪಿಸಿದೆ. ಈ ಕುರಿತು ತನಿಖೆಗೆ ಮುಂದಾಗಿದೆ.
ನಟಿ ಕಂಗನಾ ರಣಾವತ್ ಅವರ ಗನ್ ಮ್ಯಾನ್ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ನಗರದ ಮೇಕಪ್ ಕಲಾವಿದೆಯೊಬ್ಬರು ಕುಮಾರ್ ಹೆಗ್ಡೆ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ. ಅಲ್ಲದೇ, ಈ ಕುರಿತು ದೂರು ಕೂಡ ದಾಖಲಿಸಿದ್ದಾರೆ.
ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ ಐಆರ್ ದಾಖಲಾಗಿದೆ. ಆದರೆ, ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ, ನನ್ನಿಂದಲೇ ರೂ. 50 ಸಾವಿರ ಹಣ ಪಡೆದಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
8 ವರ್ಷಗಳ ಹಿಂದೆ ಕುಮಾರ್ ಸಂತ್ರಸ್ತೆಯ ಜೊತೆ ಸಂಪರ್ಕಕ್ಕೆ ಬಂದಿದ್ದು, ಕಳೆದ ವರ್ಷ ಮದುವೆಯಾಗುತ್ತೇನೆ ಎಂದು ನಂಬಿಸಿದ್ದಾನೆ. ಇದಾದ ನಂತರ ಸಂತ್ರಸ್ತೆಯ ಪ್ಲ್ಯಾಟ್ ಗೆ ಬಂದು ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಏ.27ಕ್ಕೆ ನಾನು ಆತನಿಗೆ ಹಣ ನೀಡಿದ್ದೆ. ಆ ನಂತರ ಅವನು ಕರ್ನಾಟಕ ರಾಜ್ಯಕ್ಕೆ ಓಡಿ ಹೋಗಿದ್ದಾನೆ. ಈ ಸಂದರ್ಭದಲ್ಲಿ ನಾನು ಆತನ ತಾಯಿಗೆ ಕರೆ ಮಾಡಿದಾಗ ಆತ ಬೇರೆ ಯುವತಿಯೊಂದಿಗೆ ಮದುವೆಯಾಗುತ್ತಿರುವ ವಿಚಾರ ತಿಳಿಯಿತು. ಆತನ ತಾಯಿ ಕೂಡ ನನ್ನ ಮಗನಿಂದ ನೀನು ದೂರ ಇರು ಎಂದು ಹೇಳಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ನಟಿ ಕಂಗನಾ, ಈ ಕುರಿತು ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಕುಮಾರ್ ತನ್ನ ಕುಟುಂಬದ ಸದಸ್ಯ ಎಂದು ಈ ಹಿಂದೆ ಹೇಳಿದ್ದರು.
ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯ ಸಾಧಿಸಿದ್ದ ಟಿಎಂಸಿಯ ಹಿರಿಯ ನಾಯಕ ಹಾಗೂ ಕೃಷಿ ಸಚಿವ ಶೋಭಾನ್ ದೇವ್ ಚಟ್ಟೋಪಾಧ್ಯಾಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಈ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಲು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಹಾದಿ ಸುಗಮವಾಗಿದೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ನಂದಿ ಗ್ರಾಮದ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಅವರು ಸೋಲು ಕಂಡಿದ್ದರು. ಸಿಎಂ ಆಗಿರುವ ಅವರು, 6 ತಿಂಗಳೊಳಗೆ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಬೇಕಾಗಿದೆ. ಹೀಗಾಗಿ ಅವರು ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಸಚಿವ ಪಾರ್ಥ ಚಟರ್ಜಿ ಹಾಗೂ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ವಿಧಾನಸಭಾಧ್ಯಕ್ಷ ಬಿಮ್ ಬಂಡೋಪಾಧ್ಯಾಯ ಅವರಿಗೆ ಚಟ್ಟೋಪಾಧ್ಯಾಯ ಅವರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಸಿ ಮಾತನಾಡಿದ ಅವರು, ನಾನು ಪಕ್ಷದ ನಿರ್ಧಾರಕ್ಕೆ ವಿಧೇಯನಾಗಿದ್ದೇನೆ. ಪಕ್ಷದ ಹಿತದೃಷ್ಟಿಯಿಂದ ನಾನು ರಾಜೀನಾಮೆ ಸಲ್ಲಿಸಿದ್ದೇನೆ. ಹೀಗಾಗಿ ಭವಾನಿಪುರ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಕೊರೊನಾದಿಂದ ಟಿಎಂಸಿ ಮುಖಂಡ ಕಜಾಲ್ ಸಿನ್ಹಾ ಅವರು ನಿಧನರಾದ ಹಿನ್ನೆಲೆಯಲ್ಲಿ ನಡೆಯಲಿರುವ ಖಾರ್ದಾ ಕ್ಷೇತ್ರದ ಮರು ಚುನಾವಣೆಯಲ್ಲಿ ಶೋಭಾನ್ ದೇವ್ ಚಟ್ಟೋಪಾದ್ಯಾಯ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅಲ್ಲದೇ, ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲಾಗುವ ಸಾಧ್ಯತೆ ಇದೆ ಎಂದು ಹಲವರು ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ಮೂರು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿತ್ತು. ಆದರೆ, ಇಂದು ಮತ್ತೆ ಬೆಳಿಗ್ಗೆ ಓಪನ್ ಆಗಿದೆ. ಹೀಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮುಗಿ ಬಿದ್ದಿರುವ ದೃಶ್ಯ ಸಾಮಾನ್ಯವಾಗಿದೆ. ಹೊಲ್ ಸೇಲ್ ಮಾರುಕಟ್ಟೆಯಲ್ಲಿ ಜನ ಜಂಗುಳಿ ತುಂಬಿ ತುಳುಕುತ್ತಿದೆ.
ಪೊಲೀಸರಿಗೂ ಡೋಂಟ್ ಕೇರ್ ಎನ್ನುತ್ತಿರುವ ಜನರು, ಸಾಮಾಜಿಕ ಅಂತರ ಮರೆತು ವ್ಯಾಪಾರ – ವಹಿವಾಟು ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಮೂರು ದಿನಗಳಿಂದ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದಿನಿಂದ ಬೆಳಿಗ್ಗೆ 6 ರಿಂದ 10ರ ವರೆಗೆ ತರಕಾರಿ ಮತ್ತು ದಿನಸಿ ಖರೀದಿಗೆ ಅವಕಾಶವನ್ನು ಜಿಲ್ಲಾಡಳಿತ ನೀಡಿತ್ತು. ಆದರೆ, ಈ ಸಂದರ್ಭದಲ್ಲಿ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜನರಿಗೆ ತಿಳಿಸಲಾಗಿದೆ. ಆದರೆ, ಜನರು ಮಾತ್ರ ತಮ್ಮ ಹಳೆಯ ಚಾಳಿ ಮುಂದುವರೆಸಿದ್ದಾರೆ.
ಪೊಲೀಸರು ಮತ್ತು ನಗರಸಭೆ ಸಿಬ್ಬಂದಿ ಮಾರುಕಟ್ಟೆಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಜನ ಮಾತ್ರ ತಲೆ ಕೆಡಿಸಿಕೊಳ್ಳದೆ ಗುಂಪು, ಗುಂಪಾಗಿ ವ್ಯಾಪಾರ – ವಹಿವಾಟು ನಡೆಸಿದ್ದಾರೆ.
ಕೊರೊನಾ ಮಹಾಮಾರಿಯ ನಿಯಂತ್ರಣಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಸಮರ ಸೇನೆಯ ತಾಲೂಕ ಅಧ್ಯಕ್ಷ ಬಿ ಎಂ ವೀರಯ್ಯಸ್ವಾಮಿ ಹೇಳಿದರು.
ಪ್ರಗತಿಪರ ರೈತರಾದ ಎಂ ಎಸ್ ಜಾನ್ ಅವರ ಜಮೀನಿನಲ್ಲಿ ಬೆಳೆದಂತಹ ತರಕಾರಿಗಳನ್ನು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಮೂಲಕ ಸರ್ಕಾರ ಜಾರಿ ಮಾಡಿದ ಲಾಕ್ ಡೌನ್ ಅನ್ನು ಪ್ರತಿಯೊಬ್ಬರೂ ಪಾಲಿಸಿ ಎಂದ ಅವರು, ಸಾರ್ವಜನಿಕರ ಜೀವ ರಕ್ಷಣೆ ಮಾಡುತ್ತಿರುವ ಪೋಲೀಸ್ ಇಲಾಖೆಗೆ ಸಹಕಾರ ನೀಡಿ, ಕೊರೊನಾ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದರು.
ಡಿವೈಎಸ್ಪಿ ಹಾಲ ಮೂರ್ತಿರಾವ್ ಮಾತನಾಡಿ, ಉಚಿತ ತರಕಾರಿಗಳನ್ನು ನೀಡಿದ ಪ್ರಗತಿಪರ ರೈತರಾದ ಎಂ ಎಸ್ ಜಾನ್ ರವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೋಂಕು ನಿಯಂತ್ರಣಕ್ಕಾಗಿ ಪ್ರತಿಯೊಂದು ಇಲಾಖೆಯ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಸೋಂಕು ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಕೈಜೋಡಿಸಿ ಕೊರೊನಾ ಮುಕ್ತ ದೇಶವನ್ನಾಗಿ ಮಾಡಲು ಹೋರಾಡಬೇಕೆಂದು ಎಂದರು.
ಸಿ ಪಿ ಐ ರಾಮರೆಡ್ಡಿ ಮಾತನಾಡಿ, ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಜಾಗೃತಗೊಂಡು ಈ ಕೊರೊನಾ ಮಹಾಮಾರಿಯ ರೋಗದಿಂದ ಜೀವವನ್ನು ರಕ್ಷಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಎ ಎಸ್ ಐ ವಡಕಪ್ಪ ಸೇರಿದಂತೆ ಸಿಬ್ಬಂದಿಗಳು, ಗೃಹರಕ್ಷಕದಳ ಸಿಬ್ಬಂದಿ ಉಪಸ್ಥಿತರಿದ್ದರು.
ಕೊರೋನಾದಿಂದ ಇನ್ನೂ ಸುಧಾರಿಸಿಕೊಂಡಿಲ್ಲ, ಆಗಲೇ ಬ್ಲಾಕ್ ಫಂಗಸ್, ವೈಟ್ ಫಂಗಸ್, ಮೂರನೇ ಅಲೆ, ಮಕ್ಕಳ ಮೇಲೆ ದಾಳಿ…..
ಏನ್ ನಾವು ಬದುಕಬೇಕಾ ಇಲ್ಲ ಭಯದಿಂದ ಸಾಯಬೇಕಾ ದಯವಿಟ್ಟು ನೀವೇ ಹೇಳಿ ಸ್ವಾಮಿ….
ಆ ಖಾಯಿಲೆ ಬರುತ್ತೆ, ಈ ರೋಗ ಬರುತ್ತೆ, ಕಣ್ಣು ಹೋಗುತ್ತೆ, ರಕ್ತ ಹೆಪ್ಪುಗಟ್ಟುತ್ತೆ, ಹೃದಯ ನಿಲ್ಲುತ್ತೆ, ತಲೆ ಸಿಡಿದು ಹೋಗುತ್ತೆ ಅಂತಾ ಸದಾ ಸುದ್ದಿ ಮಾಡ್ತೀರಿ, ಆಮೇಲೆ ಧೈರ್ಯವಾಗಿರಿ, ಎಚ್ಚರಿಕೆಯಿಂದ ಇರಿ ಅಂತಾನೂ ಹೇಳ್ತೀರಿ…….
ಮೈಮೇಲೆ ಚೇಳು ಬಿಸಾಕಿ ಭಯ ಪಡಬೇಡಿ ಅಂದ್ರೆ ಹೇಗೆ ಸಾಧ್ಯ ಸ್ವಾಮಿ………..
ಜೀವರಾಶಿ ಸೃಷ್ಟಿಯಾದ ಸಮಯದಲ್ಲೇ ಅದಕ್ಕೆ ವಿರುದ್ಧವಾದ ಮತ್ತು ತೊಂದರೆ ಕೊಡುವ ಜೀವಿಗಳು ಸೃಷ್ಟಿಯಾಗಿವೆ. ರೋಗಗಳು ಹೊಸದಲ್ಲ, ರೋಗಿಗಳು ಹೊಸದಲ್ಲ, ಅದರ ವಿರುದ್ಧ ಹೋರಾಟವೂ ಹೊಸದಲ್ಲ, ಹುಟ್ಟುಗಳು ಹೊಸದಲ್ಲ, ಸಾವುಗಳು ಹೊಸದಲ್ಲ………
ಟಿವಿ ವಾಹಿನಿಗಳು ಹೊಸವು, ಎಂಬಿಬಿಎಸ್ ಡಾಕ್ಟರುಗಳು ಹೊಸಬರು, ಪ್ರಜಾಪ್ರಭುತ್ವದಲ್ಲಿ ಚುನಾಯಿತ ಮಂತ್ರಿಗಳು ಹೊಸಬರು, ಜಿಲ್ಲಾಧಿಕಾರಿಗಳು ಹೊಸಬರು ಅಷ್ಟೇ………..
ರೀ ಸ್ವಾಮಿ, ಕಷ್ಟಗಳು, ನೋವುಗಳು, ಮಾರಣಾಂತಿಕ ರೋಗಗಳು ಎಲ್ಲಾ ಕಾಲಕ್ಕೂ ಬೇರೆ ಬೇರೆ ರೂಪದಲ್ಲಿ ಬರುತ್ತಲೇ ಇರುತ್ತವೆ. ಅದರ ವಿರುದ್ಧ ಹೋರಾಟವೂ ನಡೆಯುತ್ತಲೇ ಇರುತ್ತದೆ. ಆ ಸಂಘರ್ಷದಲ್ಲಿ ಸಾವುಗಳು ಸಹ ಸಹಜ.
ನಮಗೆ ಸ್ವಂತ ಭವ್ಯ ಬಂಗಲೆ ಇದೆ, ಬೆಲೆ ಬಾಳುವ ಕಾರು ಇದೆ, ಆಸ್ತಿ ಒಡವೆಗಳು ಇದೆ, ಅಧಿಕಾರ ಇದೆ, ಒಳ್ಳೆಯ ಗಂಡ ಹೆಂಡತಿ ಮಕ್ಕಳು ಇದ್ದಾರೆ, ತಿಂಗಳಿಗೆ ಲಕ್ಷಾಂತರ ಬಾಡಿಗೆ ಬಡ್ಡಿ ಸಂಬಳ ಬರುತ್ತದೆ, ಸಾಕಷ್ಟು ಆಳು ಕಾಳು ಊಟ ಬಟ್ಟೆ ಇದೆ, ಆದ್ದರಿಂದ ನಾವು ಅತ್ಯಂತ ಭದ್ರ ಕೋಟೆಯಲ್ಲಿ ಇದ್ದೇವೇ, ಅದರಿಂದ ಸಾವು ನೋವು ರೋಗಗಳನ್ನು ಗೆದ್ದು ಆರಾಮವಾಗಿ ಜೀವನ ಮಾಡಬಹುದು ಎಂಬ ಭ್ರಮೆಗೆ ಒಳಗಾಗಿ ದೇಹ ಮನಸ್ಸುಗಳನ್ನು ದಂಡಿಸದೆ, ಓದು ಪ್ರವಾಸಗಳಿಂದ ಜ್ಞಾನಾರ್ಜನೆ ಮಾಡದೆ, ರುಚಿಗಾಗಿ ತಿನ್ನುತ್ತಾ, ಮಾಲ್ ಗಳಲ್ಲಿ ಓಡಾಡುತ್ತಾ, ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಈಗ ಟಿವಿ ನೋಡಿ ಬೆಚ್ಚಿ ಬಿದ್ದರೆ ಏನು ಪ್ರಯೋಜನ……
ಜಾತಸ್ಯ ಮರಣಂ ಧ್ರುವಂ….
ಮನುಷ್ಯ ಹುಟ್ಟಿದ ಕ್ಷಣದಿಂದ ಮುನ್ನಡೆಯುವುದು ಸಾವಿನ ಕಡೆಗೆ….
O – 100 ವರ್ಷಗಳ ನಡುವೆ ಯಾವಾಗ ಬೇಕಾದರೂ, ಯಾವುದೇ ಕಾರಣದಿಂದ ಸಾವು ಸಂಭವಿಸಬಹುದು. ಆ ಸಾಧ್ಯತೆ ಪ್ರತಿ ಮನುಷ್ಯನಿಗೂ ಪ್ರತಿ ಕ್ಷಣವೂ ಇರುತ್ತದೆ. ಆದರೆ ಸಾರ್ವತ್ರಿಕವಾಗಿ ಭಾರತದ 140 ಕೋಟಿ ಜನಸಂಖ್ಯೆಯ ಈ ಕ್ಷಣದ ಸರಾಸರಿ ಆಯಸ್ಸು ಸುಮಾರು 65 ವರ್ಷಗಳು. ಇದು ಒಂದು ರೀತಿಯ ಅನುಭವದ ಸರಾಸರಿ ಗ್ಯಾರಂಟಿ ಅಥವಾ ವಾರಂಟಿ.
ಸಾವುಗಳು ಸಹಜವಾಗಿದ್ದರು ಕಳೆದ 15 ತಿಂಗಳಿನಿಂದ ಕೊರೋನಾ ಎಂಬ ವೈರಸ್ ಸೋಂಕಿತ ಶೇಕಡಾ 1.5% ಜನರು ಸಾಯುತ್ತಿರುವುದು ವಾಸ್ತವ. ಬಹಳಷ್ಟು ಡಾಕ್ಟರುಗಳ ಹೇಳಿಕೆಯಂತೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮತ್ತು ಈಗಾಗಲೇ ಅನೇಕ ರೋಗಗಳಿಗೆ ತುತ್ತಾಗಿರುವ ಜನರು ಸಾಯುತ್ತಿರುವುದು ಕಂಡು ಬರುತ್ತಿದೆ.
ಅದು ಏನೇ ಇರಲಿ. ವೈದ್ಯಕೀಯ ಭಾಷೆಯಲ್ಲಿ ದೇಹಕ್ಕೆ ಹಿತವಲ್ಲದ ಅನೇಕ ಅಂಶಗಳನ್ನು ರೋಗಗಳು ಎಂದು ಪರಿಗಣಿಸಲಾಗುತ್ತದೆ. ನೆತ್ತಿಯಿಂದ ಪಾದದವರೆಗಿನ ದೇಹದ ಒಳ ಹೊರ ಎಲ್ಲವೂ ಒಳಗೊಂಡ ಯಾವುದೇ ಭಾಗಕ್ಕೆ ಏನೇ ವ್ಯತ್ಯಾಸ ಆದರೂ ಅದನ್ನು ರೋಗ ಎಂದೇ ಕರೆಯಲಾಗುತ್ತದೆ. ಅಧ್ಯಯನದ ದೃಷ್ಟಿಯಿಂದ ಇದಕ್ಕೆ ಅದೇ ವೈದ್ಯಕೀಯ ಭಾಷೆಯಲ್ಲಿ ಏನೇನೂ ಹೆಸರುಗಳನ್ನು ಇಡಲಾಗಿದೆ. ಅವುಗಳ ಸಂಖ್ಯೆ ಬಹುಶಃ ಲಕ್ಷ ಮೀರಬಹುದು.
ಆದರೆ ಈ ವಿವೇಚನಾ ರಹಿತ ಮಾಧ್ಯಮಗಳು ಏನೋ ಹೊಸದನ್ನು ಕಂಡುಹಿಡಿದಂತೆ ಬ್ರೇಕಿಂಗ್ ನ್ಯೂಸ್ ಎಂದು ಅದಕ್ಕೆ ಪ್ರಚಾರ ನೀಡಿ ಹೆದರಿಸಿ ಸಾಮಾನ್ಯ ಜನರ ಬದುಕನ್ನೇ ಅಸಹನೀಯ ಗೊಳಿಸುತ್ತಿವೆ. ಮನುಷ್ಯರಿಗೆ ಖಾಯಿಲೆಗಳು ಬರಬಾರದು, ಅವರು ಸಾಯಲೇ ಬಾರದು ಎಂಬಂತೆ ವಿಚಿತ್ರ ಸಿದ್ದಾಂತ ಮಂಡಿಸುತ್ತಿವೆ. ಅದಕ್ಕೆ ಪೂರಕವಾಗಿ ಒಂದಷ್ಟು ಡಾಕ್ಟರುಗಳು ಸಹ ಅನವಶ್ಯಕ ಭಯ ಪಡಿಸುತ್ತಿದ್ದಾರೆ.
ರೋಗಗಳು ಇದೆ ನಿಜ. ಅದು ವ್ಯಾಪಕವಾಗಿ ಹರಡಿ ಸಾವು ನೋವು ಉಂಟುಮಾಡುತ್ತಿದೆ ಅದೂ ನಿಜ. ಆದರೆ ಸಾಮಾನ್ಯ ಜನರಾದ ನಮಗೆ ಆಯ್ಕೆಗಳು ಸೀಮಿತ. ರೋಗ ಬರದಂತೆ ತಡೆಯಲು ಒಂದಷ್ಟು ಪ್ರಯತ್ನ. ಅದರ ನಂತರವೂ ಬಂದರೆ ಅದನ್ನು ಸಾಧ್ಯವಾದಷ್ಟು ಧೈರ್ಯವಾಗಿ ಎದುರಿಸುವುದು, ಇರುವ ವ್ಯವಸ್ಥೆಯಲ್ಲಿ ನಮ್ಮ ನಿಯಂತ್ರಣ ಮೀರಿದ ಯಾವುದೇ ಫಲಿತಾಂಶಗಳಿಗೆ ಮಾನಸಿಕವಾಗಿ ಸಿದ್ದರಾಗುವುದು. ಇದಕ್ಕಿಂತ ಉತ್ತಮ ಆಯ್ಕೆಗಳು ಸಿಕ್ಕಲ್ಲಿ ಅದನ್ನು ಉಪಯೋಗಿಸಿಕೊಳ್ಳುವುದು ಅಷ್ಟೇ…….
ಸದಾ ಕೊರೋನಾ ಕೊರೋನಾ ಎಂದು ಕೊರಗುತ್ತಾ ಇರುವ ಬದಲು ಅನಾರೋಗ್ಯ ಪೀಡಿತರು ಸಾಧ್ಯವಾದ ಚಿಕಿತ್ಸೆ ಪಡೆಯಿರಿ, ಆರೋಗ್ಯವಂತರು ದೇಹ ಮನಸ್ಸು ಮತ್ತಷ್ಟು ದಂಡಿಸಿ ಉತ್ತಮ ಆಹಾರ ಸೇವಿಸಿ ಎಂದಿನ ಕೆಲಸಗಳಲ್ಲಿ ಸಹಜವಾಗಿ ತೊಡಗಿಸಿಕೊಳ್ಳಿ.
ಆ ರೋಗ ಈ ರೋಗ ಎಂದು ಅನವಶ್ಯಕ ಭಯಪಡಿಸುವ ಸುದ್ದಿಗಳನ್ನು ನಿರ್ಲಕ್ಷಿಸಿ. ದೇಹ ಇರುವವರೆಗೂ ರೋಗಗಳು ಇರುತ್ತವೆ. ಬದುಕು ಇರುವವರೆಗೂ ಕಷ್ಟಗಳು ಇರುತ್ತವೆ. ಹುಟ್ಟಿನ ನಂತರ ಸಾವುಗಳು ಇರುತ್ತವೆ. ಹಾಗೆಯೇ ಅದರ ವಿರುದ್ಧ ಹೋರಾಟಗಳು ಇರುತ್ತವೆ. ಇದು ಪ್ರಕೃತಿಯ ಸಹಜ ಸ್ವಾಭಾವಿಕ ನಿಯಮ.
ಗಾಬರಿಯು ಬೇಡ, ನಿರ್ಲಕ್ಷ್ಯವೂ ಬೇಡ. ಇರುವ ಪರಿಸ್ಥಿತಿಯಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಿ, ಆತ್ಮಾವಲೋಕನ ಮಾಡಿಕೊಂಡು ಸಹಜವಾಗಿ ಬದುಕಲು ಪ್ರಯತ್ನಿಸೋಣ.
ಬ್ಲಾಕ್ ಫಂಗಸ್, ವೈಟ್ ಫಂಗಸ್, ಕೊರೋನಾ ಎಬೋಲ ಕ್ಯಾನ್ಸರ್ ಏಡ್ಸ್ ಎಲ್ಲವೂ ಜೀವ ಜಗತ್ತಿನ ಭಾಗಗಳು. ಅದರೊಂದಿಗೇ ಬದುಕು ಮತ್ತು ಅದರಿಂದಲೇ ಸಾವು. ಈ ಎಲ್ಲಾ ಸಾಧ್ಯತೆಗಳ ನಡುವಿನ ಸಮಯವೇ ಜೀವನ……
ಶಿರಹಟ್ಟಿಯ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಇತ್ತೀಚಿಗಷ್ಟೇ ಕೋವಿಡ್ ಆರೈಕೆ ಕೇಂದ್ರ ಪ್ರಾರಂಭವಾಗಿತ್ತು. ರೋಡ್ ವರ್ಕ್ ಮಾಡುವಂತಹ ಖಾಸಗಿ ಇಂಜಿನಿಯರ್ ಒಬ್ಬರಿಗೆ ಮೇ 20 ರಂದು ಸೋಂಕು ದೃಢ ಪಟ್ಟಿದ್ದರಿಂದ ಆರೈಕೆ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು, ಆದರೆ ಸೋಂಕಿತ ವ್ಯಕ್ತಿ ಮೇ 21 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಊಟ ಮಾಡಿದ ನಂತರ ಆರೈಕೆ ಕೇಂದ್ರದಲ್ಲಿ ಇರುವಂತಹ ಸಿಬ್ಬಂದಿಗಳ ಮರೆಮಾಚಿ ಪರಾರಿಯಾಗಿದ್ದಾನೆ.
ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ನಂತರ ಸೋಂಕಿತ ವ್ಯಕ್ತಿ ಪರಾರಿಯಾಗಿರುವುದು ಖಚಿತಗೊಂಡಿದೆ.
ಕಂದಾಯ ನಿರೀಕ್ಷಕ ಮಹಾಂತೇಶ ಮಗದುಮ್ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಸೋಂಕಿತ ವ್ಯಕ್ತಿ ಪರಾರಿಯಾದ ಬಗ್ಗೆ ದೂರು ನೀಡಿದ್ದಾರೆ
ಬೇರೆ ರಾಜ್ಯಗಳಿಂದ ಜಿಲ್ಲೆಗೆ ವಲಸೆ ಬಂದು ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ದುಡಿಮೆಗೆ ಅವಕಾಶ ಸಿಗದೆ, ಊಟಕ್ಕೂ ಪರದಾಡುತ್ತಿರುವ ಸ್ಥಿತಿಯನ್ನು ಗಮನಿಸಿದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ಅವರ ಪೊಲೀಸ್ ತಂಡದವರು ಈ ನಿರಾಶ್ರಿತರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದರು.
#IndiaFightsCorona ಎಂಬ ಹ್ಯಾಷ್ ಟ್ಯಾಗ್‌ನಲ್ಲಿ ಗದಗ ಎಸ್ಪಿ ಯತೀಶ್ ಹಾಗೂ ಸಿಬ್ಬಂದಿ ನಿರಾಶ್ರಿತರಿಗೆ ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವ ಫೋಟೋ ಸಹಿತ ಪೋಸ್ಟ್ ಪ್ರಕಟಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ `Covid-19 Warriors of India’ ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ.
ಇಂತಹ ಮಾನವೀಯ ಸೇವೆ ಇತರರಿಗೂ ಪ್ರೇರಣೆಯಾಗಿ, ಇನ್ನಷ್ಟು ದಾನಿಗಳು ಸಹಾಯ ಮಾಡಲು ಮುಂದಾಗಲಿ ಎಂಬ ಉದ್ದೇಶ ಈ ಪೋಸ್ಟ್ ಹಿಂದಿದೆ.
ಯತೀಶ್ ಅವರ ಈ ಮಾನವೀಯ ಕಾರ್ಯವನ್ನು ವಿಜಯಸಾಕ್ಷಿ ವೆಬ್ ‘ ಸದ್ದಿಲ್ಲದೆ ಅಲೆಮಾರಿಗಳ ಹಸಿವು ನೀಗಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶೀರ್ಷಿಕೆಯಲ್ಲಿ ಮೇ 15ರಂದು, ಹಾಗೂ ವಿಜಯಸಾಕ್ಷಿ ದಿನಪತ್ರಿಕೆಯ ಮೇ 16ರ ಸಂಚಿಕೆಯಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.