Home Blog Page 3156

ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಸಮರ್ಥ ವ್ಯಕ್ತಿಯ ಆಯ್ಕೆ: ಶಾಸಕ ಪ್ರಭು ಚವ್ಹಾಣ

0

ಬೆಂಗಳೂರು , ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕನಾಗಿ ನೇಮಕಗೊಂಡ ಆರ್.ಅಶೋಕ್ ಅವರಿಗೆ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಪಕ್ಷದ ವರಿಷ್ಠರು ರಾಜ್ಯ ವಿಧಾನಸಭೆಯ ವಿರೋಧಪಕ್ಷ ನಾಯಕನ ಸ್ಥಾನಕ್ಕೆ ಸಮರ್ಥ ವ್ಯಕ್ತಿಯನ್ನು ನೇಮಕ ಮಾಡಿದ್ದಾರೆ. ರಾಜ್ಯದ ಉಪ ಮುಖ್ಯಮಂತ್ರಿಯಾಗಿ, ವಿವಿಧ ಇಲಾಖೆಗಳ ಸಚಿವರಾಗಿ ಸಾಕಷ್ಟು ಮಹತ್ವದ ಯೋಜನೆ ಜಾರಿಗೆ ತಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಆರ್.ಅಶೋಕ ಅವರನ್ನು ವಿರೋಧ ಪಕ್ಷದ ನಾಯಕನ ಜವಾಬ್ದಾರಿ‌‌‌ ವಹಿಸಿರುವುದಕ್ಕೆ ಪಕ್ಷಕ್ಕೆ ಹೊಸ‌‌ ಶಕ್ತಿ ಸಿಕ್ಕಂತಾಗಿದೆ ಎಂದಿದ್ದಾರೆ.

ಜವಾಬ್ದಾರಿಯನ್ನು ಸಮರ್ಥವಾಗಿ ಎದುರಿಸುವ ಜಾಣ್ಮೆ, ಸಂಘಟನಾ ಚತುರತೆ ಮತ್ತು ಸಾಕಷ್ಟು ಅನುಭವ ಹೊಂದಿರುವ ಆರ್.ಅಶೋಕ್ ಅವರು ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರ‌ಕ್ಕೆ‌ ಬಂದಾಗಿನಿಂದಲೂ ಒಂದಿಲ್ಲೊಂದು ವಿವಾದಗಳಿಗೆ ಸಿಲುಕುತ್ತಿದೆ. ಚುನಾವಣೆ ಭರವಸೆಗಳನ್ನು ಈಡೇರಿಸಲು ಒದ್ದಾಡುತ್ತಾ,

ಜನ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡೋಣ. ಜನಸಾಮಾನ್ಯರ ಧ್ವನಿಯನ್ನು ವಿಧಾನಸಭೆಯಲ್ಲಿ ಪ್ರತಿದ್ವನಿಸುವ ಕೆಲಸವನ್ನು ತಮ್ಮ ನೇತೃತ್ವದಲ್ಲಿ ಸಮರ್ಥವಾಗಿ ನಿಭಾಯಿಸೋಣ ಎಂದಿದ್ದಾರೆ.

ವಿಪಕ್ಷದವರ ಟೀಕೆ ಜನರ ಅಭಿವೃದ್ಧಿಗೆ ಪೂರಕವಾಗಿ ಇರಬೇಕು: ಚಲುವರಾಯಸ್ವಾಮಿ

0

ಮಂಡ್ಯ: ವಿಪಕ್ಷದವರ ಟೀಕೆ ಜನರ ಅಭಿವೃದ್ಧಿಗೆ ಪೂರಕವಾಗಿ ಇರಬೇಕು ಎಂದು ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ಯತೀಂದ್ರ ವರುಣ ಕ್ಷೇತ್ರದ ಮಾಜಿ ಶಾಸಕ, ಅವರ ತಂದೆ ಸಿಎಂ. ಹೀಗಿರುವಾಗ ಆ ಕ್ಷೇತ್ರದ ಕೆಲಸವನ್ನು ನೋಡಿಕೊಂಡರೆ ತಪ್ಪೇನು? ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಹಾಕಿ ಅನ್ನೋದರಲ್ಲಿ ತಪ್ಪೇನು? ಸಾರ್ವಜನಿಕರೇ ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಬೇಕು ಅಂತಾರೆ.

ಕುಮಾರಸ್ವಾಮಿ ಕುಟುಂಬದವರು ಅಧಿಕಾರದಲ್ಲಿದ್ದಾಗ ಏನು ಮಾಡಿಲ್ವೇ? ಮಾಜಿ ಸಿಎಂ ಕುಮಾರಸ್ವಾಮಿಗೆ ಅಧಿಕಾರ ಬಿಟ್ಟು ಇರೋಕೆ ಆಗಲ್ಲ. ಹೆಚ್​.ಡಿ.ಕುಮಾರಸ್ವಾಮಿಗೆ ಅಧಿಕಾರ ಕೊಟ್ಟರೆ ನಿಭಾಯಿಸಲು ಆಗಲ್ಲ. ಕುಮಾರಸ್ವಾಮಿ ನೆಮ್ಮದಿಯಿಂದ ಇರಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಕೊಪ್ಪ ಗ್ರಾಮದಲ್ಲಿ ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಕಿಡಿ ಕಾರಿದ್ದಾರೆ.

ಭಾರತದ ಗೆಲುವಿಗೆ ಲಯ ಡ್ಯಾನ್ಸ್ ಅಕಾಡಮಿ ಹಾರೈಕೆ

0

ಧಾರವಾಡ: ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿ ಎಂದು ಧಾರವಾಡ ಲಯ ಡ್ಯಾನ್ಸ್ ಅಕಾಡೆಮಿ ಸದಸ್ಯರು ಡ್ಯಾನ್ಸ್ ಮಾಡಿ ಶುಭ ಹಾರೈಸಿದರು. ವಿಶ್ವಕಪ್ ಫೈನಲ್ ಪಂದ್ಯ ಆಸ್ಟ್ರೇಲಿಯಾ ಹಾಗೂ ಭಾರತ ತಂಡದ ಮಧ್ಯೆ ಭಾನುವಾರ ಏರ್ಪಡಲಿದ್ದು, ಭಾರಿ ಕುತೂಹಲ ಮೂಡಿಸಿದೆ.

ಬಲಿಷ್ಠ ತಡಗಳ ಮಧ್ಯೆ ನೇರ ಹಣಾಹಣಿ ಏರ್ಪಡಲಿದ್ದು, ಭಾರತ ತಂಡ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಗೆದ್ದು, ವಿಶ್ವಕಪ್ ತನ್ನ ಮಡಿಲಿಗೆ ಏರಿಸಿಕೊಳ್ಳಲಿ ಎಂದು ಧಾರವಾಡ ಲಯ ಡ್ಯಾನ್ಸ್ ಅಕಾಡೆಮಿ ಹಾರೈಸಿದರು.ಲಯ ಡ್ಯಾನ್ಸ್ ಅಕಾಡೆಮಿ ಮಕ್ಕಳು ಆಲ್ ದಿ ಬೆಸ್ಟ್ ಇಂಡಿಯಾ, ಇಂಡಿಯಾ ಇಂಡಿಯಾ, ಜಿತೇಗಾ ಭೀ ಜಿತೇಗಾ ಇಂಡಿಯಾ ಜಿತೇಗಾ ಘೋಷಣೆ ಕೂಗುತ್ತ ಶುಭ ಹಾರೈಸಿದರು.

ಸಚಿವ ಕೃಷ್ಣಭೈರೇಗೌಡ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ: ಕಕ್ಕಾಬಿಕ್ಕಿಯಾದ ಅಧಿಕಾರಿಗಳು

0

ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ದಿಢೀರ್ ಭೇಟಿ ನೀಡಿದ್ದಾರೆ. ಬೆಂಗಳೂರಿನಿಂದ ಹಾಸನಕ್ಕೆ ತೆರಳುವಾಗ ಮಾರ್ಗಮಧ್ಯೆ ದಿಢೀರ್ ಭೇಟಿ ನೀಡಿದ್ದು, ಕಂದಾಯ ಸಚಿವರ ದಿಢೀರ್ಭೇಟಿ ಕಂಡು ಅಧಿಕಾರಿಗಳು ಕಕ್ಕಾಬಿಕ್ಕಿ ಆಗಿದ್ದಾರೆ. ಇದೇ ವೇಳೆ ಸಾರ್ವಜನಿಕರು ಸಾಲು ಸಾಲು ಸಮಸ್ಯೆ ಹೇಳಿಕೊಂಡಿದ್ದಾರೆ. ರೈತರೊಬ್ಬರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ದೂರು ನೀಡಲಾಗಿದೆ.

ಜನರ ಎದುರೇ ಅಧಿಕಾರಿಗಳನ್ನು ಸಚಿವ ಕೃಷ್ಣಭೈರೇಗೌಡ ತರಾಟೆ ತೆಗೆದುಕೊಂಡಿದ್ದಾರೆ. ಅಧಿಕಾರಿಗೆ 5 ಬಾರಿ ನೋಟಿಸ್ ನೀಡಿದ್ದೇನೆ ಎಂದು ತಹಶೀಲ್ದಾರ್ ಹೇಳಿದ್ದು, 5 ಬಾರಿ ನೋಟಿಸ್ ನೀಡಿಇನ್ನೂ ಯಾಕೆ ಕಾಯ್ತಾ ಇದ್ದೀರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರ ಅಹವಾಲು ಸ್ವೀಕರಿಸಿ ಹಾಸನಕ್ಕೆ ತೆರಳಿದ್ದಾರೆ.

ಬಡವರಿಗೆ ಸರ್ಕಾರ ರೇಷನ್ ಕಾರ್ಡ್ ನೀಡುತ್ತಿಲ್ಲ: ತೆಲ್ಕೂರ ಆರೋಪ

0

ಕಲಬುರಗಿ :ಈ ಕಾಂಗ್ರೆಸ್ ಸರ್ಕಾರ ಬಂದು ಏಳು ತಿಂಗಳು ಕಳೆಯುತ್ತಾ ಬರುತ್ತಿದೆ ಆದರೆ ಇಲ್ಲಿಯವರೆಗೆ ಒಂದೇ ಒಂದು ಹೊಸ ಪಡಿತರ ಚೀಟಿ ನೀಡಿಲ್ಲ ಎಂದು ರಾಜಕುಮಾರ ಪಾಟೀಲ್ ತಲ್ಕೂರ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ತೆಲ್ಕೂರ್ ಹೊಸ ಪಡಿತರ ಚೀಟಿ ಪಡೆಯಬೇಕು ಎಂದು ರಾಜ್ಯದಲ್ಲಿ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ. ಎಲ್ಲಿ ಬಡವರಿಗೆ ಅನ್ನಭಾಗ್ಯದ ಹಣ ಹಾಗೂ ಗೃಹಲಕ್ಷ್ಮಿ ಹಣ ನೀಡಬೇಕಾಗಿ ಬರುತ್ತದೆ ಎನ್ನುವ ಭಯದಲ್ಲಿ ಸುಮಾರು 2ಲಕ್ಷ 95 ಸಾವಿರ ಕುಟುಂಬಗಳಿಗೆ ಪಡಿತರ ಚೀಟಿ ನೀಡದೇ ಬಾಕಿ ಉಳಿಸಿಕೊಂಡಂತೆ ಕಾಣುತ್ತಿದೆ ಅಂತ ಆರೋಪಿಸಿದ್ದಾರೆ…

10,000 ಅಡಿ ಘೋಸ್ಟ್ ಪೋಸ್ಟರ್ ಲಾಂಚ್: ಇದು ಜೀ ಕನ್ನಡದ ಹೊಸ ಪ್ರಯತ್ನ

0

ಕನ್ನಡ ಕಿರುತೆರೆ ಲೋಕದಲ್ಲಿ ಜೀ ಕನ್ನಡ ಈಗಾಗ್ಲೇ ಹಲವು ವಿಭಿನ್ನ ಪ್ರಯತ್ನಗಳನ್ನಾ ಮಾಡುತ್ತಾ ಬಂದಿದೆ. ಕನ್ನಡದ ನಂಬರ್ 1 ಮನರಂಜನಾ ಚಾನೆಲ್ ಎಂಬ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದು, ಜೊತೆಗೆ ಜೀ5 ಒಟಿಟಿ ಮೂಲಕ ಒಳ್ಳೆ ಕಂಟೆಂಟ್ ಸಿನಿಮಾಗಳನ್ನು ಪ್ರಪಂಚದೆದುರು ತೆರೆದಿಡ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಭಿನ್ನ-ವಿಶೇಷ ಯೋಜನೆಗಳನ್ನು ಈ ಒಟಿಟಿ ಹಾಕಿಕೊಂಡಿದೆ. ಸದ್ಯ ಜೀ5 ಒಟಿಟಿಯಲ್ಲಿ ಶಿವರಾಜ್ ಕುಮಾರ್ ನಟನೆಯ ಘೋಸ್ಟ್ ಸಿನಿಮಾ ಧಮಾಕ ಎಬ್ಬಿಸ್ತಿದೆ.

ಸಾಹಸ ಥ್ರಿಲ್ಲರ್‌ ಸಿನಿಮಾ ಘೋಸ್ಟ್‌ ಇದೇ ನವೆಂಬರ್‌ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ. ಶಿವಣ್ಣನ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿಲ್ಲದೆ ಇರುವವರು ಜೀ5 ಒಟಿಟಿಯಲ್ಲಿ ಕಣ್ತುಂಬಿಕೊಳ್ಳಬಹುದು. ಈಗಾಗಲೇ ನೋಡಿರುವವರು ಇನ್ನೊಮ್ಮೆ ಒಟಿಟಿಯಲ್ಲೂ ನೋಡಬಹುದು. ಸಿನಿಮಾ ಜೀ5ನಲ್ಲಿ ರಿಲೀಸ್ ಆಗಿರುವುದಕ್ಕೆ ಅದ್ದೂರಿಯಾಗಿ ಪ್ರಚಾರ ಮಾಡಿದೆ.

ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ ಹತ್ತು ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರ್ಅನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂಇಎಸ್ ಗ್ರೌಂಡ್ ನಲ್ಲಿ ಘೋಸ್ಟ್ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್‌ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ ಜೀ ಕನ್ನಡ.

ಘೋಸ್ಟ್ ಚಿತ್ರದಲ್ಲಿ ಶಿವಣ್ಣ ಹಿಂದೆಂದೂ ಕಾಣದ ಮಾಸ್‌ ಅವತಾರದಲ್ಲಿ ಮಿಂಚಿದ್ದಾರೆ. ನಿರ್ದೇಶಕ ಶ್ರೀನಿ ಅಭಿಮಾನಿಗಳಿಗೆ ಶಿವರಾಜ್‌ಕುಮಾರ್‌ ಅವರ ಹೊಸ ಲುಕ್‌ ದರ್ಶನ ಮಾಡಿದ್ದಾರೆ. ಸಂದೇಶನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ‘ಘೋಸ್ಟ್’ ಸಿನಿಮಾ ನಿರ್ಮಾಣಗೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿದೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತವಿದೆ. ಶಿವಣ್ಣನ ಜೊತೆ ಮಲಯಾಳಂ ನಟ ಜಯರಾಮ್‌, ಹಿಂದಿ ನಟ ಅನುಪಮ್‌ ಖೇರ್‌, ಅರ್ಚನಾ ಜೋಯಿಸ್‌, ಸತ್ಯಪ್ರಕಾಶ್‌, ನಿರ್ದೇಶಕ ಎಂಜಿ ಶ್ರೀನಿವಾಸ್‌ ಹಾಗೂ ಇನ್ನಿತರರು ನಟಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ನಡುವಿನ ಫೋನ್‌ ಸಂಭಾಷಣೆಯಲ್ಲಿ ಪ್ರಸ್ತಾಪಗೊಂಡಿದ್ದ ವಿವೇಕಾನಂದ ಎನ್ನುವ ಹೆಸರು ಕಳೆದ ರಾತ್ರಿ ಹೊರಬಿದ್ದ ಪೊಲೀಸ್‌ ಇನಸ್ಪೆಕ್ಟರ್‌ʼಗಳ ವರ್ಗಾವಣೆ ಪಟ್ಟಿಯಲ್ಲಿ ಪ್ರತ್ಯಕ್ಷವಾಗಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಟೀಕಾಪ್ರಹಾರ ನಡೆಸಿರುವ ಅವರು; ಕರ್ನಾಟಕದ ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಎಂದು ಪ್ರಶ್ನೆ ಮಾಡಿದ್ದಾರೆ.

ಅಬ್ಬಬ್ಬಾ.. ಬಾಯಿ ತೆರೆದರೆ ಭಗವದ್ಗೀತೆ! ನಾಲಿಗೆ ಮೇಲೆ ನೈತಿಕತೆಯ ನಾಟ್ಯ!! ಮಾತಿ ಮಾತಿನಲ್ಲೂ ಮೌಲ್ಯಗಳದ್ದೇ ಮಥನ!! ಕೊನೆಗೆ, ಝಣ ಝಣ ಕಾಂಚಾಣ… ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ! ಥೂ.. ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಓಹ್! ಒಂದು ಸರಕಾರ! ವಿಸ್ಮಯಗಳ ಆಗರ!! ಡೂಪ್ಲಿಕೇಟ್‌ ಸಿಎಂ-DCM ಸಲಹೆ ಮೇರೆಗೆ ಕಾಸಿಗಾಗಿ ಹುದ್ದೆ ವಿಡಿಯೋಗೆ CSR ಕಥೆ ಕಟ್ಟಿದ್ದ ಮುಖ್ಯಮಂತ್ರಿಗಳ ನೈತಿಕತೆಗೆ ನಯಗಾರಿಕೆಗೆ ನೂರೆಂಟು ನಮನ ಎಂದು ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.

ವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್‌ ಪಡೆದಿದ್ದು ಹೇಗೆ? ʼಬರ್ಮುಡಾ ಟ್ರ್ಯಾಂಗಲ್‌ʼ ರಹಸ್ಯವನ್ನೇ ಮೀರಿಸಿದೆ ಈ ಚಿದಂಬರ ರಹಸ್ಯ. ಪ್ರಶ್ನೆ ಕೇಳುವುದು ನನ್ನ ವಿಧಿ, ಉತ್ತರ ಹೇಳಲೇಬೇಕು.. ಅದು ನಿಮ್ಮ ದುರ್ವಿಧಿ. ಆನ್ಸರ್‌ ಮಾಡಿ ಸಿದ್ದರಾಮಯ್ಯನವರೇ..? ಎಂದು ಮಾಜಿ ಮುಖ್ಯಮಂತ್ರಿಗಳು ಕಾಲೆಳೆದಿದ್ದಾರೆ.

ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು. ದ್ವೇಷದಿಂದ ಮಗನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಲ್ಲವೇ ನೀವು ಹೇಳಿದ್ದು. ಹಾಗಾದರೆ; 71 ಪೊಲೀಸ್‌ ಇನಸ್ಪೆಕ್ಟರ್‌ʼಗಳ ವರ್ಗದ ಈ ಯಾದಿಯ 4ನೇ ಹೆಸರಿನಲ್ಲೇ ಅಡಗಿದೆಯಲ್ಲಾ ನಿಮ್ಮ ‘ಸುಲಿಗೆಪುತ್ರ’ನ ಕೆಚ್ಚು! ಕ್ಷೇತ್ರತ್ಯಾಗದ ತ್ಯಾಗಮಯಿ, ಈಗ ವರುಣಾಕ್ಕೆ ವಕ್ಕರಿಸಿದ ಕೆಡಿಪಿ ಕಲಿ. ಏನಂತೀರಿ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಈ ಪಾಪದ ಕಾಸಿನ ಕಮಟು ದುರ್ನಾತ ಅಸಹ್ಯಕರ. ‘ವರ್ಗಾವರ್ಗಿ ಬಜೆಟ್‌’ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ! 6 ತಿಂಗಳ ಭರ್ಜರಿ ʼಅತೀಂದ್ರೀಯʼ ಅಟ್ಟಹಾಸ!! ‘ಕಾಸಿಗಾಗಿ ಹುದ್ದೆ& ಕಾಂಗ್ರೆಸ್‌ ಹುಂಡಿ’ ಎಂಬ ಸಿನಿಮಾವನ್ನೂ ಮಾಡಿ, ಕೆಡಿಪಿ ಕಲಿಯೇ ನಾಯಕ, ಟೆಂಪರರಿ ಸಿಎಂ-TCM ನಿರ್ಮಾಪಕ, ಡೂಪ್ಲಿಕೇಟ್‌ ಸಿಎಂ-DCM ನಿರ್ದೇಶಕ.. ಹೇಗಿದೆ? ಎಂದು ಕುಮಾಸ್ವಾಮಿ ಅವರು ಟಾಂಗ್‌ ನೀಡಿದ್ದಾರೆ.

ಸತ್ಯ ಹೇಳಿದರೆ ಗುಂಪುಗುಂಪಾಗಿ ಮೇಲೆ ಬೀಳುತ್ತೀರಿ.. ಬೆದರಿಸುತ್ತೀರಿ. ಕುಮಾರಸ್ವಾಮಿಯದು ಹಿಟ್‌ & ರನ್‌ ಅಂತೀರಿ, ಸುಳ್ಳು ಎನ್ನುತ್ತೀರಿ. ಕಣ್ಮುಂದೆ ವಿಡಿಯೋ ಸಾಕ್ಷ್ಯವಿದೆ. ರಾಜ್ಯದ ಜನ ನೋಡಿದ್ದಾರೆ. ಪಲಾಯನಕ್ಕೆ ಅವಕಾಶವೇ ಇಲ್ಲ. ನಿಮ್ಮ ಕೌರವ ದುರ್ನೀತಿ ನನ್ನ ಮುಂದೆ ನಡೆಯಲ್ಲ. ನಾನು ಒಬ್ಬನೇ ಒಬ್ಬ, ಅಂಜಿಕೆ ನನ್ನ ರಕ್ತದಲ್ಲೇ ಇಲ್ಲ ಎಂದು ನೇರವಾಗಿ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಈ 2 ದಿನ ‘ಎಸ್ಕಾಂ’ ಆನ್ ಲೈನ್ ಸೇವೆ ಸ್ಥಗಿತ

0

ಬೆಂಗಳೂರು: ನವೆಂಬರ್​ 24ರಿಂದ .26ರವರೆಗೆ ಎಸ್ಕಾಂ ಆನ್ಲೈನ್ಸೇವೆ ಸ್ಥಗಿತಗೊಳ್ಳಲಿದೆ. .24ರಂದು ಮಧ್ಯಾಹ್ನ 12ರಿಂದ .26 ಬೆಳಗ್ಗೆ 11.59ರವರೆಗೆ ಬಂದ್ಆಗಿರಲಿದೆ. ರಾಜ್ಯದ ಐದು ಎಸ್ಕಾಂಗಳ ವ್ಯಾಪ್ತಿಯಲ್ಲಿ ವೆಬ್ ಪೋಟರ್ಲ್ ಗೆ ಸಂಬಂಧಿಸಿದಂತೆ ತುರ್ತು ತಾಂತ್ರಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆ 2 ದಿನಎಸ್ಕಾಂಆನ್ ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ.

ವಿವಿಧ ಪೋರ್ಟಲ್ ಗಳಲ್ಲಿರುವ ಡಾಟಾವನ್ನು ನೂತನ ಪೋರ್ಟಲ್ ಗೆ ವರ್ಗಾವಣೆ ಮಾಡುವ ಕೆಲಸ ನಡೆಯುವ ಹಿನ್ನೆಲೆ ಆನ್ ಲೈನ್ ಸೇವೆ ಸ್ಥಗಿತಗೊಳಿಸಲಾಗಿದೆ. 2 ದಿನ ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಸೇವೆ ಇರಲ್ಲ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಕ್ಕೆ ರಮೇಶ್ ಜಾರಕಿಹೊಳಿ ಅಸಮಾಧಾನ

0

ಬೆಳಗಾವಿ: ಪ್ರತಿಪಕ್ಷ ನಾಯಕನ ಆಯ್ಕೆಗೆ ಶುಕ್ರವಾರ ರಾತ್ರಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಮುನಿಸಿಕೊಂಡು ತೆರಳಿದ್ದ ಶಾಸಕ ರಮೇಶ್​​ ಜಾರಕಿಹೊಳಿ ಇದೀಗ ಪಕ್ಷದ ರಾಜ್ಯ ಘಟದ ಅಧ್ಯಕ್ಷರ ನೇಮಕ್ಕೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕಕ್ಕೆ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರದ ವೀಕ್ಷಕರ ಎದುರು ತಮ್ಮ ಬೇಗುದಿ ತೋಡಿಕೊಂಡಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದರೆ ಒಪ್ಪುತ್ತಿದ್ದೆವು. ಆದರೆ, ನಮಗಿಂತ ಕಿರಿಯವಯಸ್ಸಿನ ಬಿವೈ ವಿಜಯೇಂದ್ರ ಕೈ ಕೆಳಗೆ ಕೆಲಸ ಮಾಡೋದು ಹೇಗೆ? ರಾಜಾಧ್ಯಕ್ಷರ ನೇಮಕ ವಿಚಾರದಲ್ಲಿ ಇತರ ಹಿರಿಯರನ್ನ ಪರಿಗಣಿಸಬೇಕಿತ್ತು ಎಂದು ರಮೇಶ್ ಜಾರಕಿಹೊಳಿ ನೇರವಾಗಿ ವೀಕ್ಷಕರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಕ್ಷ ವಿರೋಧಿ ಚಟುವಟಿಕೆ: ಜೆಡಿಎಸ್‌ ನಿಂದ ಸಿಎಂ ಇಬ್ರಾಹಿಂ ಅಮಾನತು

0

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ರಾಜ್ಯದ ಜೆಡಿಎಸ್‌ ಘಟಕದ ಮಾಜಿ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಜೆಡಿಎಸ್‌ ಪಕ್ಷದಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿರುವ ಮಾಜಿ ಪ್ರಧಾನಿಗಳು ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಇಬ್ರಾಹಿಂ ಅವರನ್ನು ಪಕ್ಷದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಸಂವಿಧಾನ ಹಾಗೂ ನಿಯಮಗಳ ಅಡಿಯಲ್ಲಿ ಶಿಸ್ತು ಉಲ್ಲಂಘನೆ ಮಾಡಿದ ಕಾರಣದಿಂದ ಇಬ್ರಾಹಿಂ ಅವರನ್ನು ಸಸ್ಪಂಡ್‌ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ. ಇಬ್ರಾಹಿಂ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಸಂಪೂರ್ಣ ನಿಷ್ಕ್ರಿಯರಾಗಿದ್ದರು. ಸಂಘಟನೆ ಬಲವರ್ಧನೆಗೆ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿರುವುದಿಲ್ಲ, ಸದಸ್ಯತ್ವ ನೋಂದಣಿ ಅಭಿಯಾನ ಕೈಗೊಂಡಿರುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿತದೃಷ್ಟಿಯಿಂದ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಪಕ್ಷದ ನಿರ್ಣಯವನ್ನು ಅವರು ಸ್ಪಷ್ಟವಾಗಿ ಉಲ್ಲಂಘನೆ ಮಾಡಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಅಮಾನತು ಹಿನ್ನೆಲೆ:

ಪಕ್ಷದ ಹಿತಕ್ಕಾಗಿ ಬಿಜೆಪಿ ಜತೆ ಲೋಕಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸರ್ವಾನುಮತದ ಅಧಿಕಾರ ನೀಡಲಾಗಿತ್ತು ಹಾಗೂ ಮೈತ್ರಿಯ ಬಗ್ಗೆ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಲು ರಾಷ್ಟ್ರೀಯ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರಿಗೆ ಪೂರ್ಣ ಅಧಿಕಾರ ನೀಡಲಾಗಿತ್ತು. ಈ ಬಗ್ಗೆ ನಿರ್ಣಯ ಕೈಗೊಳ್ಳಲು ನಡೆದ ಎಲ್ಲಾ ಸಭೆಗಳಲ್ಲಿ ಇಬ್ರಾಹಿಂ ಅವರು ಹಾಜರಿದ್ದರು. ಆದರೂ ಅವರು ಪಕ್ಷಕ್ಕೆ ಹಾನಿ ಉಂಟು ಮಾಡುವ ವಿರೋಧಾಭಾಸದ ಹೇಳಿಕೆಗಳನ್ನು ನೀಡಿರುತ್ತಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಜನತಾದಳದ ರಾಜ್ಯಾಧ್ಯಕ್ಷರನ್ನು ಒಳಗೊಂಡ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಪಕ್ಷದ ಸಂವಿಧಾನದ ಆರ್ಟಿಕಲ್‌ 10ರ ಅನ್ವಯ ಕಳೆದ ಅಕ್ಟೋಬರ್‌ 19ರಂದು ವಿಸರ್ಜನೆ ಮಾಡಿ ರಾಷ್ಟ್ರೀಯ ಅಧ್ಯಕ್ಷರು ಆದೇಶ ಹೊರಡಿಸಿದ್ದರು. ತದ ನಂತರ ಇಬ್ರಾಹಿಂದ ಅವರು ನವೆಂಬರ್‌ 7ರಂದು ʼಚಿಂತನ ಮಂಥನʼ ಎನ್ನುವ ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಮಾನಾಂತರ ಸಭೆ ಕರೆದು ಜೆಡಿಎಸ್-ಬಿಜೆಪಿ ಮೈತ್ರಿಯ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರ ವಿರುದ್ಧ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ಸುಳ್ಳು ಆರೋಪಗಳನ್ನು ಮಾಡಿದ್ದರು.

ನವೆಂಬರ್‌ 7ರಂದು ನೀಡಿದ ಹೇಳಿಕೆಯಲ್ಲಿ, ನಾನಿನ್ನೂ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ಮುಂದುವರಿದಿದ್ದೇನೆ ಎಂದು ತಿಳಿಸಿ, ಬಿಜೆಪಿ ಜತೆ ಮೈತ್ರಿಗೆ ಒಲವು ಇರುವವರೆಲ್ಲರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಪಕ್ಷ ವಿರೋಧಿ ಹೇಳಿಕೆಯನ್ನೂ ನೀಡಿರುತ್ತಾರೆ. ನವೆಂಬರ್‌ 15ರಂದು ಕೇರಳದ ತಿರುವನಂತಪುರದಲ್ಲಿ ಸಿ.ಕೆ.ನಾನು ಅವರ ನೇತೃತ್ವದಲ್ಲಿ ಪಕ್ಷ ವಿರೋಧಿ ಸಭೆಯನ್ನು ನಡೆಸಿ, ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿರುತ್ತಾರೆ. ಇವೆಲ್ಲಾ ನಡವಳಿಕೆ, ಹೇಳಿಕೆಗಳ ಹಿನ್ನೆಲೆಯಲ್ಲಿ ಸಿಎಂ ಇಬ್ರಾಹಿಂ ಅವರು ಪಕ್ಷದ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷರು ತಿಳಿಸಿದ್ದಾರೆ.

error: Content is protected !!