Home Blog Page 3177

ಇಂದು ಶಿವರಾಜ್ ಕುಮಾರ್ ವಿವಾಹ ವಾರ್ಷಿಕೋತ್ಸವ – ಅರ್ಥಪೂರ್ಣವಾಗಿ ಆಚರಿಸಿದ ಅಭಿಮಾನಿಗಳು

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಇಂದು ನಟ ಶಿವರಾಜ್ ಕುಮಾರ್ ದಂಪತಿಗೆ ವಿವಾಹ ವಾರ್ಷಿಕೋತ್ಸವದ ದಿನ. ಹೀಗಿಗ ನಾಡಿನ ಜನತೆ ಈ ದಂಪತಿಯನ್ನು ಹಾರೈಸುತ್ತಿದ್ದಾರೆ. ಶಿವರಾಜ್ ಕುಮಾರ್ ಅವರು 1986ರ ಮೇ. 19ರಂದು ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಮಗಳು ಗೀತಾ ಅವರನ್ನು ಕೈ ಹಿಡಿದ ದಿನ. ಸದ್ಯ ಇವರ ವಿವಾಹವಾಗಿ 35 ವರ್ಷಗಳು ಕಳೆದಿವೆ. ಹೀಗಾಗಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳ ಹಾರೈಕೆಯ ಮಹಾಪೂರವೇ ಹರಿದು ಬರುತ್ತಿದೆ.

ಪ್ರತಿ ವರ್ಷವೂ ಶಿವಣ್ಣ ಅವರು ಮದುವೆ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು. ಆದರೆ, ಕಳೆದ ವರ್ಷದಿಂದ ದೇಶದಲ್ಲಿ ಮಹಾಮಾರಿಯ ಅಟ್ಟಹಾಸ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಚರಮೆ ಮಾಡಿಕೊಳ್ಳುತ್ತಿಲ್ಲ. ಆದರೆ, ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.

ಶಿವಣ್ಣ ಅವರ ವಿವಾಹ ವಾರ್ಷಿಕೋತ್ಸವ ಇರುವ ಹಿನ್ನೆಲೆಯಲ್ಲಿ ಕೆ.ಜಿ. ರಸ್ತೆಯಲ್ಲಿರುವ ಚಿತ್ರಮಂದಿರದ ಕಾರ್ಮಿಕರಿಗೆ ರೇಷನ್ ಕಿಟ್ ವಿತರಣೆ ಮಾಡಲಾಗುತ್ತಿದೆ. ಶಿವು ಅಡ್ಡ ಮತ್ತು ಶಿವ ಸೈನ್ಯ ಅಭಿಮಾನಿ ಬಳಗ ಒಟ್ಟಾಗಿ ಈ ಕೆಲಸ ಮಾಡುತ್ತಿದ್ದಾರೆ.

ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರನ್ನು ಕಡೆಗಣಿಸಿದ ಸರಕಾರ; ಮಹಾಮಂಡಳ ರಾಜ್ಯಾಧ್ಯಕ್ಷ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಇದರಲ್ಲಿ ಅಲೆಮಾರಿ ಹಾಗೂ ಕಡು ಬಡತನದಿಂದ ಕುಡಿದ ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೇ ಅನ್ಯಾಯ ಮಾಡಿದೆ ಎಂದು ಕರ್ನಾಟಕ ಪಿಂಜಾರ್ ನದಾಫ್ ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಘೋಷಿಸಿದ ಪ್ಯಾಕೇಜ್ ನಿಂದಲೂ ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರಿಗೆ ಯಾವುದೇ ಪ್ಯಾಕೇಜ್ ಘೋಷಿಸಿದ ಸರಕಾರ ಈ ಭಾರಿಯು ಅದೇ ಸಂಪ್ರದಾಯ ಮುಂದುವರಿಸಿ ಕೊಂಡು ಬಂದಿದೆ.

ಪ್ರತಿಪಕ್ಷಗಳ ಹಾಗೂ ಸಾರ್ವಜನಿಕ ಒತ್ತಡದ ಮೇರೆಗೆ ಸರ್ಕಾರವು ಒಲ್ಲದ ಮನಸ್ಸಿನಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರು ಹಾಗೂ ಬಿ.ಪಿ.ಎಲ್.ಕುಟುಂಬಗಳನ್ನು ಗುರುತಿಸಿ ಅವರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ನೇರವಾಗಿ ಆರ್ಥಿಕ ಸಹಾಯ ಮಾಡುವುದರಿಂದ ರಾಜ್ಯದ ಕೋಟ್ಯಾಂತರ ಬಡ ಜನರಿಗೆ ಉಪಯೋಗವಾಗಬಹುದು, ಆದರೆ ಸರ್ಕಾರವು ಇದರ ಬಗ್ಗೆ ಗಮನ ಹರಿಸಿಲ್ಲ.

ರಾಜ್ಯದಾದ್ಯಂತ ಸಾವಿರಾರು ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರು ಅದೇ ವೃತ್ತಿಯನ್ನು ನಂಬಿ ದುಡಿಯುತ್ತಿದ್ದಾರೆ.ಆದರೆ, ಅವರಿಗೆ ಹಾಸಿಗೆ ಹೊಲೆಯುವ ಕೂಲಿ ಬಿಟ್ಟು ಯಾವುದೇ ಕೆಲಸ ಗೊತ್ತಿಲ್ಲ ಎಂದರು

ಇದರಿಂದಾಗಿ ಅವರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಕೋವಿಡ್–19 ಲಾಕ್‌ಡೌನ್‌ ಪರಿಸ್ಥಿತಿಯಿಂದಾಗಿ ಕೆಲಸವಿಲ್ಲದೆ ಮತ್ತು ಬದುಕು ಸಾಗಿಸಲು ಕಷ್ಟಸಾಧ್ಯವಾಗಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇದ್ದಾರೆ. ಹೀಗಾಗಿ ಅವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಸರ್ಕಾರದಿಂದ ದೊರೆಯುವ ಶಾಸನಬದ್ಧ ಸೌಲಭ್ಯಗಳನ್ನು ಕಲ್ಪಿಸಬೇಕೆಂದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿ ಹಾಸಿಗೆ ಹೊಲೆಯುವ ಕೂಲಿ ಕಾರ್ಮಿಕರಿಗೂ ಕಾರ್ಮಿಕರೆಂದು ಗುರುತಿನ ಚೀಟಿ ನೀಡಬೇಕು ಎಂದು ಮಹಾಮಂಡಳ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ಆಗ್ರಹಿಸಿದರು.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಟ್ಟು ಕರಕಲಾದ ಜನರಲ್ ಸ್ಟೋರ್!

ವಿಜಯಸಾಕ್ಷಿ ಸುದ್ದಿ, ಗದಗ

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಜನರಲ್ ಸ್ಟೋರ್ ಹೊತ್ತಿ ಉರಿದ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಕೆಸಿ ರಾಣಿ ರಸ್ತೆಯಲ್ಲಿರುವ ಚೇತನ ಕ್ಯಾಂಟಿನ್ ಸರ್ಕಲ್ ಬಳಿ ಈ ಘಟನೆ ನಡೆದಿದೆ. ಬಸವರಾಜ್ ನಾಡಗೌಡ್ರ ಎಂಬುವವರಿಗೆ ಸೇರಿದ್ದ ಜನರಲ್ ಸ್ಟೋರ್ ಬೆಂಕಿಗೆ ಆಹುತಿಯಾಗಿದೆ.

ಈ ಘಟನೆಯಲ್ಲಿ ಜನರಲ್ ಸ್ಟೋರ್ ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿವೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆಗ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಸ್ಥಳಕ್ಕೆ ಬೆಟಗೇರಿ ಬಡಾವಣೆ ಪೋಲಿಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ- ಬೆಟಗೇರಿ ಬಡಾವಣೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹಣ ಲೂಟಿ ಮಾಡಲು ಈ ಪ್ಯಾಕೇಜ್ ಘೋಷಿಸಲಾಗಿದೆ – ಕುಮಾರಸ್ವಾಮಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸರ್ಕಾರ ಅರೆಕಾಸಿನ ಮಜ್ಜಿಗೆ ಕೊಟ್ಟಂತೆ ಪ್ಯಾಕೇಜ್ ಘೋಷಿಸಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು ರೂ. 1,250 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದು ಯಾವುದಕ್ಕೂ ಪ್ರಯೋಜನವಿಲ್ಲ. ಜನರ ದುಡ್ಡನ್ನು ಲೂಟಿ ಹೊಡೆಯಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ನಿರಾಶಾದಾಯಕ ಪ್ಯಾಕೇಜ್. ಹೂವಿನ ಬೆಳೆಗಾರರಿಗೆ ಘೋಷಣೆ ಮಾಡಿರುವ ಪ್ಯಾಕೇಜ್ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಇದು ಯಾವುದಕ್ಕೂ ಸಾಲುವುದಿಲ್ಲ. ಕೂಲಿ, ಬೀಜದ ಬೆಲೆ ಏರಿಕೆ ಆಗಿರುವಾಗ ಈ ಸಹಾಯ ಅವರಿಗೆ ಯಾವುದಕ್ಕೆ ಪ್ರಯೋಜನವಾಗಲಿದೆ. ಆಟೋ, ಕ್ಯಾಬ್ ಡ್ರೈವರ್ ಗಳಿಗೆ ಈ ಹಣ ಸಾಕಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕರು, ಚಮ್ಮಾರರು, ಕಮ್ಮಾರಿಗೆ ಕೊಟ್ಟ ಹಣ ಯಾವುದಕ್ಕೂ ಸಾಕಾಗುವುದಿಲ್ಲ. 10 ಕೆಜಿ ಅಕ್ಕಿ ಕೂಡಾ ಸಾಕಾಗೊಲ್ಲ. ಇದು ರಾಜ್ಯ ಸರ್ಕಾರದ ನಾಟಕ. ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನ ಇಲ್ಲ ಎಂದು ಹೆಚ್ಡಿಕೆ ಜರಿದಿದ್ದಾರೆ.

ವಿಜಯೇಂದ್ರನ ಕೈಯಿಂದ ಅಧಿಕಾರ ಡಿಸಿಗಳಿಗೆ ಹೋಗಲಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಇನ್ನೂ 15 ದಿನ ಲಾಕ್ ಡೌನ್ ಮುಂದುವರೆಸಬೇಕು ಹಾಗೂ ಶ್ರಮಿಕ ವರ್ಗದವರಿಗೆ ತಲಾ ರೂ. 5 ಸಾವಿರ ಪರಿಹಾರ ಘೋಷಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಜಿಲ್ಲೆಗೆ ಹಿರಿಯ ಐಎಎಸ್ ಅಧಿಕಾರಿಯನ್ನು ಮಾನಿಟರ್ ಮಾಡಲು ನಿಯೋಜಿಸಬೇಕು. ಪ್ರತಿ ಜಿಲ್ಲೆಗೂ ರೂ. 100 ಕೋಟಿ ಅನುದಾನ ನೀಡಬೇಕು. ಜಿಲ್ಲಾಧಿಕಾರಿಗಳಿಗೆ ಹಣ ನೀಡಿ ಬಳಕೆಯ ಸ್ವತಂತ್ರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಒಂದು ದಿನವೂ ಹಳ್ಳಿಯತ್ತ ತೆರಳಿಲ್ಲ. ಟಾಸ್ಕ್ ಪೋರ್ಸ್ ನವರು ಕೂಡ ಹಳ್ಳಿಯತ್ತ ಮುಖ ಮಾಡುತ್ತಿಲ್ಲ. ಹಳ್ಳಿಯಲ್ಲಿ ಸಾಯುತ್ತಿರುವವರು ಶ್ರಮಿಕರು, ಅಹಿಂದ ವರ್ಗದವರೇ ಹೆಚ್ಚು. ಕೂಡಲೇ ಮಾಂಸದ ಅಂಗಡಿಗಳನ್ನು ಮುಚ್ಚಬೇಕು. ಮಾಂಸದ ಅಂಗಡಿಯ ಮುಂದೆ ಪ್ರತಿ ದಿನವೂ ಜಾತ್ರೆ ಇರುತ್ತದೆ ಎಂದು ಮನವಿ ಮಾಡಿದ್ದಾರೆ.

ಪ್ರತಿ ಹಣದ ಬಿಲ್ ಕೂಡ ವಿಜಯೇಂದ್ರನ ಕಡೆಯಿಂದ ಕ್ಲಿಯರ್ ಆಗಬೇಕು. ಹಣದ ಬಿಡುಗಡೆಯ ಕೇಂದ್ರೀಕರಣ ಮೊದಲು ತಪ್ಪಬೇಕು. ಡಿಸಿಗಳಿಗೆ ಹಣ ಖರ್ಚು ಮಾಡುವ ಅಧಿಕಾರ ನೀಡಬೇಕು. ಸರಕಾರ ನಡೆಸುವವರು ಹೆಣದ ಮೇಲೆ ಹಣ ಮಾಡಲು ಹೋಗಬೇಡಿ ಎಂದು ಹೇಳಿದ್ದಾರೆ.

ಕೊರೊನಾ ಸಂಕಷ್ಟ 1250 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿಯ 2ನೇ ಅಲೆಯಿಂದ ಜನ ಕಂಗಾಲಾಗಿದ್ದಾರೆ. ಲಾಕ್ ಡೌನ್ ನಿಂದಾಗಿ ಬಡವರಿಗೆ ಸರ್ಕಾರ ಆಸರೆಯಾಗುವ ಪ್ರಯತ್ನ ಮಾಡುತ್ತಿದೆ. ಬಡವರು ಹಾಗೂ ಶ್ರಮಿಕ ವರ್ಗದ ಜನರಿಗೆ ಸಿಎಂ ಯಡಿಯೂರಪ್ಪ ಅವರು ರೂ. 1,250 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ ರೂ. 10 ಸಾವಿರ ಸಹಾಯಧನ, ಹಣ್ಣು, ತರಕಾರಿ ನಷ್ಟಕ್ಕೆ ಪ್ರತಿ ಹೆಕ್ಟೇರ್ ರೂ. 10 ಸಾವಿರ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ.

ಆಟೋ, ಕ್ಯಾಬ್ ಚಾಲಕರಿಗೆ ರೂ. 3 ಸಾವಿರ, ಕಟ್ಟಡ ಕಾರ್ಮಿಕರಿಗೆ ತಲಾ ರೂ. 3 ಸಾವಿರ, ಅಗಸ, ಚಮ್ಮಾರ, ಕಮ್ಮಾರ ಸೇರಿದಂತೆ ಅಸಂಘಟಿತರಿಗೆ ರೂ. 2 ಸಾವಿರ, ರಸ್ತೆ ಬದಿ ವ್ಯಾಪಾರಿಗಳಿಗೆ ರೂ. 2 ಸಾವಿರ, ರಸ್ತೆ ಬದಿಯ ವ್ಯಾಪಾರಿಗಳಿಗೆ ರೂ. 2 ಸಾವಿರ, ಕಲಾವಿದರು, ಕಲಾ ತಂಡಕ್ಕೆ ರೂ. 3 ಸಾವಿರ ಘೋಷಿಸಿದ್ದಾರೆ. ಅಲ್ಲದೇ, ಸಾಲ ಮರುಪಾವತಿಗೆ ಜುಲೈವರೆಗೆ ಅವಧಿ ವಿಸ್ತರಣೆ ಮಾಡಿದ್ದಾರೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಬಿಪಿಎಲ್ ಕಾರ್ಡ್ ದಾರರಿಗೆ ತಲೆಗೆ 5 ಕೆಜಿ ಅಕ್ಕಿ ನೀಡಲಾಗುವುದು. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ರೇಷನ್ ಕೊಡಲಾಗುತ್ತದೆ. ಅಲ್ಲದೆ ಮೇ, ಜೂನ್ ರೇಷನ್ ಕೊಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.

ಸಾಲ ಮರುಪಾವತಿಗೆ 3 ತಿಂಗಳ ಅವಕಾಶ ಇದ್ದು, 3 ತಿಂಗಳ ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಅಲ್ಲದೇ, ಲಾಕ್ ಡೌನ್ ಬಗ್ಗೆ ಮೇ. 23ರಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರತಿ ಪಂಚಾಯತಿಗೆ ಕೋವಿಡ್ ನಿರ್ವಹಣೆಗೆ ರೂ. 50 ಸಾವಿರ ಹಣ ನೀಡಲಾಗುವುದು. ಅಲ್ಲದೇ, ಲೈನ್ ಮ್ಯಾನ್, ಗ್ಯಾಸ್ ತಲುಪಿಸೋರು, ಶಿಕ್ಷಕರು ಫ್ರಂಟ್ ಲೈನ್ ವರ್ಕರ್ಸ್ ಎಂದು ಸರ್ಕಾರ ಘೋಷಿಸಿದೆ.

ಆತಂಕಕಾರಿ ಸುದ್ದಿ…ಸಾವಿನಲ್ಲಿ ದೆಹಲಿ ಹಿಂದಿಕ್ಕಿದ ಕರ್ನಾಟಕ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಮಹಾಮಾರಿ 2ನೇ ಅಲೆ ಎಗ್ಗಿಲ್ಲದೆ ಸಾಗುತ್ತಿದೆ. ಹೀಗಾಗಿ ಸರ್ಕಾರ ಆರಂಭದಲ್ಲಿ ಕರ್ಫ್ಯೂ ಜಾರಿ ಮಾಡಿ, ತದನಂತರ ಲಾಕ್ ಡೌನ್ ಘೋಷಿಸಿದೆ. ಆದರೂ ಸೋಂಕು ತಹಬದಿಗೆ ಬರುತ್ತಿಲ್ಲ. ಗಮನಾರ್ಹ ಇಳಿಕೆ ಕಾಣುತ್ತಿಲ್ಲ. ಈ ನಡುವೆ ರಾಜ್ಯದಲ್ಲಿ ಮರಣ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕೇವಲ 17 ದಿನಗಳಲ್ಲಿಯೇ 6,790 ಜನ ಸೋಂಕಿಗೆ ಬಲಿಯಾಗಿದ್ದಾರೆ. ಮೊದಲ ಅಲೆಯಲ್ಲಿ ಹೆಚ್ಚಿನ ಸಾವು ಕಂಡಿದ್ದ ದೆಹಲಿಯನ್ನು ಸದ್ಯ ರಾಜ್ಯ ಹಿಂದಿಕ್ಕಿದೆ. ಹೀಗಾಗಿ ರಾಜ್ಯದ ಜನರಲ್ಲಿ ಆತಂಕ ಮನೆ ಮಾಡುತ್ತಿದೆ.

ಅತೀ ಹೆಚ್ಚು ಸಾವು ಸಂಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ರಾಜ್ಯ ಎರಡನೆಯ ಸ್ಥಾನದಲ್ಲಿದೆ. ಮೇ. 17ರ ವೇಳೆಗೆ ರಾಜ್ಯದಲ್ಲಿ ಒಟ್ಟು 22,313 ಕೋವಿಡ್ ಸಾವುಗಳು ವರದಿಯಾಗಿವೆ. ದೆಹಲಿಯಲ್ಲಿ 21,846 ಜನ ಪ್ರಾಣ ಕಳೆದುಕೊಂಡಿದ್ದಾರೆ. ಎರಡನೇ ಅಲೆಯ ಮೇ ತಿಂಗಳಲ್ಲಿಯೇ ರಾಜ್ಯದಲ್ಲಿ ಸಾವು ಹೆಚ್ಚಾಗಿವೆ.

ರಾಜ್ಯಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಿದ್ದು, ಮಹಾರಾಷ್ಟ್ರದಲ್ಲಿ. ಆ ರಾಜ್ಯದಲ್ಲಿ 82 ಸಾವಿರಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. ದೆಹಲಿ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿಯೇ ದೇಶದಲ್ಲಿ ಇಲ್ಲಿಯವರೆಗೂ 2.8 ಲಕ್ಷ ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಕ್ಷೀಣ…ಸಾವಿನಲ್ಲಿ ಹೆಚ್ಚು

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದಲ್ಲಿ ಮಹಾಮಾರಿಯ 2ನೇ ಅಲೆ ಇನ್ನೂ ಶಾಂತವಾಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ ತುಸು ಇಳಿಕೆ ಕಂಡಿದ್ದರೂ ಸಾವಿನಲ್ಲಿ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ದೇಶದಲ್ಲಿ 2,67,334 ಹೊಸ ಪ್ರಕರಣಗಳು ಪತ್ತೆಯಾಗಿವೆ. 4529 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,54,96,330ಕ್ಕೆ ಏರಿಕೆ ಕಂಡಿದೆ. ಅಲ್ಲದೇ, ಸಾವನ್ನಪ್ಪಿದವರ ಸಂಖ್ಯೆ 2,83,248ಕ್ಕೆ ತಲುಪಿದೆ.

ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 32,26,719ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 3,89,851 ಜನ ಗುಣಮುಖರಾಗುವುದರೊಂದಿಗೆ ಇಲ್ಲಿಯವರೆಗೂ ಚೇತರಿಸಿಕೊಂಡವರ ಸಂಖ್ಯೆ 2,19,86,363ಕ್ಕೆ ತಲುಪಿದೆ.
ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 18,58,09,302 ಮಂದಿಗೆ ಲಸಿಕೆ ನೀಡಲಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಯ ಕಿಂಗ್ ಪಿನ್ ಇನ್ನಿಲ್ಲ!

ವಿಜಯಸಾಕ್ಷಿ ಸುದ್ದಿ, ತುಮಕೂರು

ಎಸ್ಸೆಸ್ಸೆಲ್ಸಿ, ಪಿಯುಸಿ, ಪೊಲೀಸ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ ಕಿಂಗ್ ಪಿನ್ ಶಿವಕುಮಾರ್ ನನ್ನು ಮಹಾಮಾರಿ ಬಲಿ ಪಡೆದಿದೆ. ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆ ಕಾಗ್ಗೆರೆ ಮೂಲದ ಶಿವಕುಮಾರ್ (65) ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಶಿವಕುಮಾರ್ ವಿರುದ್ಧ 2011ರಲ್ಲಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಹಾಗೂ 2012ರಲ್ಲಿ ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವಾಗಿ ದೂರು ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ 2013ರಲ್ಲಿ ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ದೇವೇಂದ್ರ, ತುಮಕೂರಿನ ಗುಬ್ಬಿ ಮೂಲದ ಮಲ್ಲೇಶ್ ಎಂಬುವವರನ್ನು ಪೊಲೀಸರು ಬಂದಿಸಿದ್ದರು.

ವಿಚಾರಣೆ ಸಂದರ್ಭದಲ್ಲಿ ಅವರು ಕಿಂಗ್ಪಿ ನ್ ಶಿವಕುಮಾರ್ ಎಂಬ ವಿಷಯ ಬೆಳಕಿಗೆ ಬಂದಿತ್ತು. ಹೀಗಾಗಿ ಬೆಂಗಳೂರು ಪೊಲೀಸರು ಆತನನ್ನು ಬಂಧಿಸಿದ್ದರು.
ಆನಂತರ ಹೊರಗೆ ಬಂದಿದ್ದ ಈ ವ್ಯಕ್ತಿ 2016ರಲ್ಲಿ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಹಾಗೂ 2018ರಲ್ಲಿ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದ. ಆನಂತರ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ, ಈಗ ಈ ವ್ಯಕ್ತಿಯನ್ನು ಮಹಾಮಾರಿ ಬಲಿ ಪಡೆದಿದೆ.

ಕೊರೊನಾ ವಾರಿಯರ್ಸ್ ಬಲಿ ಪಡೆದ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ಮೈಸೂರು

ಜಿಲ್ಲೆಯಲ್ಲಿಯೂ ಬ್ಲ್ಯಾಕ್ ಫಂಗಸ್ ನ ಅಟ್ಟಹಾಸ ಶುರುವಾಗಿದೆ. ಸದ್ಯ ಮೊದಲ ಬಲಿಯನ್ನು ಕೂಡ ಈ ಫಂಗಸ್ ಪಡೆದಿದೆ. ಕೊರೊನಾ ವಾರಿಯರ್ಸ್ ಗಳನ್ನು ಬಲಿ ಪಡೆದಿದೆ. ಮಹಾನಗರ ಪಾಲಿಕೆಯ ಗುತ್ತಿಗೆ ನೌಕರ ವಿನೋದ್ ಹಾಗೂ ಕೋವಿಡ್ ಮೃತ ದೇಹ ಸಾಗಿಸುತ್ತಿದ್ದ ಆಂಬುಲೇನ್ಸ್ ಚಾಲಕ ರವಿ ಬಲಿಯಾಗಿದ್ದಾರೆ.

ಕಳೆದ ಹದಿನಾರು ದಿನಗಳ ಹಿಂದೆ ರವಿ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್ ನೊಂದಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪಾಲಿಕೆ ನೌಕರ ವಿನೋದ್ ಅವರು ಫಾಗಿಂಗ್ ವಾಹನದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೂರು ದಿನಗಳ ಹಿಂದೆ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರನ್ನು ಸಾವನ್ನಪ್ಪಿದ್ದಾರೆ.

error: Content is protected !!