Home Blog Page 3179

ಹಸಿದವರ ಹೊಟ್ಟೆ ತುಂಬಿಸುತ್ತಿರುವ ಶಿವಣ್ಣ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿ ಮೆಟ್ಟಿ ನಿಲ್ಲುವುದಕ್ಕಾಗಿ ಸದ್ಯ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಿದೆ. ಹೀಗಾಗಿ ಬಡವರ ಬದುಕು ಬೀದಿಗೆ ಬಂದು ನಿಂತಿದೆ. ಸೆಲೆಬ್ರಿಟಿಗಳು ಇಂತಹ ಜನರ ಬದುಕಿಗೆ ಆಸರೆಯಾಗಿ ನಿಲ್ಲುತ್ತಿದ್ದಾರೆ. ಸದ್ಯ ಈ ಸಾಲಿಗೆ ನಟ ಶಿವರಾಜ್ ಕುಮಾರ್ ಸೇರಿದ್ದಾರೆ.
ಹಸಿವಿನಿಂದ ಪರಿತಪಿಸುತ್ತಿರುವ ಕಾರ್ಮಿಕರಿಗೆ ಹಾಗೂ ಬಡವರಿಗೆ ಶಿವರಾಜ್ ಕುಮಾರ್ ಪ್ರತಿ ದಿನ ಊಟ ಹಾಕಿ ಹಸಿವು ನೀಗಿಸುತ್ತಿದ್ದಾರೆ.

ನಾಗವಾರದಲ್ಲಿನ ತಮ್ಮ ನಿವಾಸದ ಸುತ್ತಮುತ್ತಲಿನ ಏರಿಯಾದಲ್ಲಿರುವ ನೂರಾರು ಜನರಿಗೆ ನಿತ್ಯವು ಆಹಾರ ಒದಗಿಸುವ ಕೆಲಸ ಶಿವರಾಜ್ ಕುಮಾರ್ ಹಾಗೂ ಗೀತಾ ದಂಪತಿಯಿಂದ ನಡೆಯುತ್ತಿದೆ.
ಶಿವರಾಜ್‌ ಕುಮಾರ್ ಅವರು ‘ಆಸರೆ’ ಎಂಬ ಹೆಸರಿನಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ. ಶಿವಣ್ಣ ಬಾಯ್ಸ್ ಹೆಸರಿನ ತಂಡವೊಂದು ಪ್ರತಿ ದಿನ ಅಗತ್ಯವಿದ್ದವರಿಗೆ ಊಟ ತಲುಪಿಸುವ ಕಾರ್ಯ ಮಾಡುತ್ತಿದೆ. ಈ ಪ್ರದೇಶದ ಸುತ್ತಮುತ್ತಲಿನ ಸುಮಾರು 500 ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

ಲಾಕ್ ಡೌನ್ ಜಾರಿಯಾದ ದಿನದಿಂದಲೂ ಶಿವರಾಜ್ ಕುಮಾರ್ ಅವರು ಸುಮಾರು 500 ಜನರಿಗೆ ಊಟ, ತಿಂಡಿ ಹಾಗೂ ಟೀ ವ್ಯವಸ್ಥೆ ಮಾಡಿದ್ದಾರೆ. ಈ ಕಾರ್ಯಕ್ಕೆ ಬೊಲೇರೋ ಕ್ಯಾಂಟ್ರೋವೊಂದನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜನರ ಬಳಿಯೇ ಊಟ, ತಿಂಡಿ ವಿತರಿಸಲಾಗುತ್ತಿದೆ. ‘ಆಸರೆ’- ‘ಹಸಿದ ಹೊಟ್ಟೆಗೆ ಕೈ ತುತ್ತು’ ಅನ್ನೋ ಶೀರ್ಷಿಕೆಯಡಿಯಲ್ಲಿ ಈ ಕಾರ್ಯ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬಡ ಜನರಿಗೆ ಸಹಾಯ ಮಾಡಲು ಶಿವಣ್ಣ ಮುಂದಾಗಿದ್ದಾರೆ.

ದೇಶದಲ್ಲಿ ಒಂದೇ ದಿನ ನಾಲ್ಕು ಸಾವಿರದ ಗಡಿ ದಾಟಿದ ಬಲಿಯಾದವರ ಸಂಖ್ಯೆ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ದೇಶದಲ್ಲಿ ಒಂದೇ ದಿನ ಮಹಾಮಾರಿಗೆ ನಾಲ್ಕು ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 2,63,533 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 2,52,28,996ಕ್ಕೆ ಏರಿಕೆ ಕಂಡಿದೆ. ನಿನ್ನೆ ಒಂದೇ ದಿನ 4,329 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಅಲ್ಲದೇ, ದೇಶದಲ್ಲಿ ಇಲ್ಲಿಯವರೆಗೆ 2,78,719 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ದೇಶದಲ್ಲಿ 33,53,765 ಸಕ್ರಿಯ ಪ್ರಕರಣಗಳಿವೆ. 2,15,96,512 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 18,44,53,149 ಜನ ದೇಶದಲ್ಲಿ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.

ಕೇವಲ ಎರಡೇ ತಿಂಗಳಲ್ಲಿ ಎಷ್ಟು ಜನ ವೈದ್ಯರು ಮಹಾಮಾರಿಗೆ ಬಲಿಯಾಗಿದ್ದಾರೆ ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ದೇಶದಲ್ಲಿ ಮಹಾಮಾರಿ ಮಿತಿ ಮೀರಿ ತನ್ನ ಅಟ್ಟಹಾಸ ಪ್ರದರ್ಶಿಸುತ್ತಿದೆ. ಸಾಮಾನ್ಯ ಜನರ ಸೇವೆಗೆ ವೈದ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ನಿಸ್ವಾರ್ಥ ಸೇವೆ ನೀಡುತ್ತಿರುವ ವೈದ್ಯರನ್ನೂ ಈ ಸೋಂಕು ಬಿಡುತ್ತಿಲ್ಲ. ಕಳೆದ ವರ್ಷ ಮಹಾಮಾರಿಗೆ ಬರೋಬ್ಬರಿ 800ಕ್ಕೂ ಅಧಿಕ ವೈದ್ಯರು ಬಲಿಯಾಗಿದ್ದರು.

ಸದ್ಯ ಎರಡನೇ ಅಲೆಯ ಭಯಾನಕತೆ ಶುರುವಾಗಿದ್ದು, ಏಪ್ರೀಲ್ ಹಾಗೂ ಮೇ ತಿಂಗಳ ವೇಳೆಗೆ ದೇಶದಲ್ಲಿ ಸುಮಾರು 269 ವೈದ್ಯರು ಈಗಾಗಲೇ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರಿಂದಾಗಿ ಹಲವು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಚಿಕಿತ್ಸೆಗೆ ತೊಂದರೆಯಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸೇವೆ ಮಾಡುತ್ತ ಪ್ರಾಣ ಬಿಟ್ಟ ವೈದ್ಯರ ಕುಟುಂಬಸ್ಥರು ಮಾತ್ರ ಕಣ್ಣೀರಿನಲ್ಲಿ ದಿನ ಕಳೆಯುತ್ತಿದ್ದಾರೆ.

ಎರಡನೇ ಅಲೆಯ ಏಪ್ರೀಲ್ ಹಾಗೂ ಮೇ ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ 22, ಆಸ್ಸಾಂ 3, ಬಿಹಾರ 78, ಛತ್ತೀಸಗಢ 3, ದೆಹಲಿ 28, ಗುಜರಾತ್ 2, ಗೋ 1, ಹರಿಯಾಣ 2, ಜಮ್ಮು ಮತ್ತು ಕಾಶ್ಮೀರ 3, ಕರ್ನಾಟಕ 8, ಕೇರಳ 2, ಮಧ್ಯಪ್ರದೇಶ 5, ಮಹಾರಾಷ್ಟ್ರ 14, ಓಡಿಶಾ 10, ಪುದುಚೇರಿ 1, ತಮಿಳುನಾಡು 11, ತೆಲಂಗಾಣ 19, ಉತ್ತರ ಪ್ರದೇಶ 37, ಉತ್ತರಖಾಂಡ 2, ಪಶ್ಚಿಮ ಬಂಗಾಳ 14 ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಇಬ್ಬರು ವೈದ್ಯರು ಸೇವೆ ಮಾಡುತ್ತ ಮಹಾಮಾರಿಗೆ ಬಲಿಯಾಗಿದ್ದಾರೆ.

ಬಿಹಾರ ರಾಜ್ಯದಲ್ಲಿಯೇ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ. ಇನ್ನುಳಿದಂತೆ ಉತ್ತರ ಪ್ರದೇಶ, ದೆಹಲಿ, ಆಂಧ್ರಪ್ರದೇಶದಲ್ಲಿ ಹೆಚ್ಚಿನ ವೈದ್ಯರು ಬಲಿಯಾಗಿದ್ದಾರೆ. ಸರ್ಕಾರ ವೈದ್ಯರ ಆರೋಗ್ಯದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಬ್ಲ್ಯಾಕ್ ಫಂಗಸ್ ಕಾಟ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಾಣಿಸುತ್ತಿದ್ದು, ರಾಜ್ಯದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.

ಕೋಲಾರ, ವಿಜಯಪುರ, ಮಂಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಕೊಪ್ಪಳ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ, ಮೈಸೂರಿನ ಎಂಎಂಸಿ, ಶಿವಮೊಗ್ಗದ ಎಸ್ಐಎಂಎಸ್, ಕಲಬುರಗಿಯ ಜಿಮ್ಸ್, ಹುಬ್ಬಳ್ಳಿಯ ಕಿಮ್ಸ್ ಮತ್ತು ಮಣಿಪಾಲದ ಕೆಎಂಸಿಯಲ್ಲಿ ಮ್ಯೂಕೋರ್ಮೈಕೋಸಿಸ್ ಚಿಕಿತ್ಸೆಗಾಗಿ ಪ್ರಾದೇಶಿಕ ಕೇಂದ್ರಗಳಾಗಿ ಗುರುತಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ವಿಜಯಪುರ ಜಿಲ್ಲೆಯಲ್ಲಿ ಅತೀ ಹೆಚ್ಚು 26 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದರೆ, ಬೆಂಗಳೂರು ನಗರದಲ್ಲಿ 12, ಕಲಬುರಗಿ, ಗದಗಗಳಲ್ಲಿ ತಲಾ ಇಬ್ಬರು, ಬಳ್ಳಾರಿಯಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.

ನವಜಾತ ಶಿಶುಗಳ ಕಾಲು ಕಚ್ಚಿ ತಿಂದ ಇಲಿಗಳು!

ವಿಜಯಸಾಕ್ಷಿ ಸುದ್ದಿ, ಭೋಪಾಲ್

ಮಧ್ಯಪ್ರದೇಶದಲ್ಲಿನ ಇಂದೋರ್ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ್ನು ಇಲಿಗಳು ಕಚ್ಚಿ ತಿಂದಿರುವ ಘಟನೆ ನಡೆದಿದೆ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಹೀಗಾಗಿ ಆಸ್ಪತ್ರೆಯ ಆಡಳಿತ ಮಂಡಳಿಯು ತನಿಖೆಗೆ ಆದೇಶಿಸಿದೆ.

ಈ ಕುರಿತು ಆಸ್ಪತ್ರೆಯ ಅಧೀಕ್ಷಕ ಡಾ. ಪ್ರಮೇಂದ್ರ ಠಾಕೂರ್ ಪ್ರತಿಕ್ರಿಯಿಸಿ, ಸರ್ಕಾರದ ಅಧೀನದಲ್ಲಿರುವ ಮಹಾರಾಜ ಯಶವಂತರಾವ್(ಎಂವೈ) ಆಸ್ಪತ್ರೆಯಲ್ಲಿ ಇಲಿಗಳು, ನವಜಾತ ಶಿಶುಗಳ ಕಾಲುಗಳನ್ನು ಕಚ್ಚಿ ತಿಂದಿರುವ ಪ್ರಕಣ ಬೆಳಕಿಗೆ ಬಂದಿದೆ. ಆದರೆ, ಹೆಚ್ಚಿನ ಮಾಹಿತಿ ಇನ್ನು ತಿಳಿದು ಬಂದಿಲ್ಲ. ಈ ಕುರಿತು ತನಿಖೆ ಮಾಡುವುದಾಗಿ ಅವರು ಹೇಳಿದ್ದಾರೆ.

ಪ್ರಕರಣದ ತನಿಖೆ ನಡೆಸುವುದಕ್ಕಾಗಿ ಇಬ್ಬರು ವೈದ್ಯರು ಮತ್ತು ಆಡಳಿತಾಧಿಕಾರಿಯನ್ನು ಒಳಗೊಂಡ ಮೂವರು ಸದಸ್ಯರ ಸಮಿತಿ ರಚಿಸಲಾಗಿದೆ ಎಂದು ಠಾಕೂರ್ ತಿಳಿಸಿದ್ದಾರೆ.

ಆಸ್ಪತ್ರೆಗೆ ಸೇರಿದ್ದು ಕಾಲು ಮುರಿದಿದ್ದಕ್ಕೆ ಆದರೆ, ಸತ್ತಿದ್ದು ಕೊರೊನಾದಿಂದ!

ವಿಜಯಸಾಕ್ಷಿ ಸುದ್ದಿ, ತುಮಕೂರು

ಜಿಲ್ಲೆಯ ನ್ಯಾಯವಾದಿಯೊಬ್ಬರು ಕಾಲು ಮುರಿದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಕೊರೊನಾದಿಂದ ಅವರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕೊರಟಗೆರೆಯ ನ್ಯಾಯವಾದಿ ಬಿ.‌ಕೆ. ನಾರಾಯಣ್(52) ಸೋಂಕಿಗೆ ಬಲಿಯಾದ ದುರ್ದೈವಿ. ಇವರು ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಇತ್ತೀಚೆಗಷ್ಟೇ ವಕೀಲ ಬಿ.ಕೆ. ನಾರಾಯಣ್ ಅವರು ಬಾತ್ ರೂಂನಲ್ಲಿ ಬಿದ್ದು ಕಾಲು ಮುರಿದುಕೊಂಡಿದ್ದರು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅಲ್ಲಿ ತೆರಳುತ್ತಿದ್ದಂತೆ ಅವರಲ್ಲಿ ಕೋವಿಡ್ ಕಂಡು ಬಂದಿದೆ. ಆ ನಂತರ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಕೊರೊನಾ; ಜಿಲ್ಲೆಯಲ್ಲಿ 480 ಜನರಿಗೆ ಸೋಂಕು, ಮತ್ತೆ ನಾಲ್ವರು ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕು ತನ್ನ ಅಟಾಟೋಪ ಮುಂದುವರೆಸಿದೆ. ಸೋಮವಾರವೂ ಸೋಂಕಿನ ಪ್ರಕರಣಗಳು ನಾಲ್ಕು ‌ನೂರರ ಗಡಿ ದಾಟಿದೆ.

ಇವತ್ತಿನ ವರದಿಯಂತೆ ಮತ್ತೆ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 480 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 18287 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -208, ಮುಂಡರಗಿ-55, ನರಗುಂದ-19, ರೋಣ-72, ಶಿರಹಟ್ಟಿ-116 ಹೊರಜಿಲ್ಲೆಯ-10 ಸೇರಿದಂತೆ 480 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 187 ಕ್ಕೇರಿದೆ.

ಗದಗ ತಾಲೂಕಿನ ನಾಗಾವಿ ನಿವಾಸಿ 65 ವರ್ಷದ ವ್ಯಕ್ತಿ ಏ,25 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 13 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ನಿವಾಸಿ 62 ವರ್ಷದ ಮಹಿಳೆ ಮೇ 12 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 14 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಸೂರಣಗಿ ನಿವಾಸಿ 75 ವರ್ಷದ ವ್ಯಕ್ತಿ ಮೇ 07 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 14 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ನಿವಾಸಿ 70 ವರ್ಷದ ಮಹಿಳೆ ಮೇ 10 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 15 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 310 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 15338 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2712 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 188 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ದಂಡ ಕೊಟ್ಟು ಕೈ ಮುಗಿದ ಎಎಸ್‌ಐ! ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದ ಪೊಲೀಸಪ್ಪನ ಮತ್ತೊಂದು ಮುಖ ಬಯಲು!

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ‌ ಎಎಸ್ಐ ಸಾಹೇಬರು ಕೊನೆಗೂ ಎರಡು ಲಕ್ಷ ರೂ. ದಂಡ ಕಟ್ಟಿದ್ದಾರೆ. ಕಳೆದ ಭಾನುವಾರ ಗದಗ ಸಮೀಪದ ತಾಂಡಾವೊಂದರಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಎಎಸ್ಐ ಸಾಹೇಬರು ಬಾಲಕಿಯ ಪೋಷಕರ ಕೈಗೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದರು. ತಾಂಡಾದ ಹಿರಿಯರ ಸಮ್ಮುಖದಲ್ಲಿ ರಾಜೀ ಪಂಚಾಯತಿ ನಡೆದಿತ್ತು. ಎರಡು ಲಕ್ಷ ದಂಡ ಕಟ್ಟಲು ಶುಕ್ರವಾರ ಡೆಡ್ ಲೈನ್ ಇತ್ತು.

ಇದನ್ನೂ ಓದಿ  ಅಪ್ರಾಪ್ತೆ ಜೊತೆ ಚಕ್ಕಂದ ಆಡಲು ಹೋಗಿ ಸಿಕ್ಕಿಬಿದ್ದ ಎಎಸ್ಐ; ಎರಡು ಲಕ್ಷ ದಂಡ!

ಆ ತಾಂಡಾದಲ್ಲಿ ಇವತ್ತಿಗೂ ‌ಒಂದು ವ್ಯವಸ್ಥೆಯಿದೆ. ಇದೆ. ಯಾರೇ ಜಗಳ ಮಾಡಲಿ, ಹೊಡೆದಾಟ ಮಾಡಿಕೊಳ್ಳಲಿ, ಕುಟುಂಬ ಕಲಹ ಸೇರಿದಂತೆ ಯಾವುದೇ ಅಹಿತಕರ ಘಟನೆ ನಡೆದರೂ ಈ ವಿಷಯ ತಾಂಡಾದ ಹಿರಿಯರ ಕಿವಿಗೆ ಬೀಳದೆ ಠಾಣೆಯ ಮೆಟ್ಟಲು ಹತ್ತಲ್ಲ. ಹತ್ತಬಾರದು ಕೂಡ. ಒಂದು ವೇಳೆ ಹಿರಿಯರ ಮಾತು ಮೀರಿ ಠಾಣೆಗೆ ಬಂದವರಿಗೆ ಬಹಿಷ್ಕಾರ ಖಚಿತ. ಹೀಗಾಗಿ ಈ ಪೊಲೀಸಪ್ಪನ ಕಿತಾಪತಿ ಠಾಣೆಯ ಮೆಟ್ಟಲು ಏರಿಲ್ಲ.

ಸೋಮವಾರ ತಾಂಡಾದಲ್ಲಿ ಸಭೆ ಸೇರಿದ್ದ ಹಿರಿಯರು, ದಂಡ ಪಾವತಿಸುವಂತೆ ಎಎಸ್ಐ ಸಾಹೇಬರಿಗೆ ತಾಕೀತು ಮಾಡಿದ್ದರು. ಅದಕ್ಕೆ ಶುಕ್ರವಾರದ ಗಡುವನ್ನೂ ಮೀರಲಾಗಿತ್ತು. ಮೀರಿದರೆ ದ್ವಿಗುಣ (4,01,000 ರೂ.) ದಂಡ ಪಾವತಿಸಬೇಕಿತ್ತು. ಅಲ್ಲದೆ, ತಾಂಡಾಕ್ಕೆ ಕಾಲಿಡದಂತೆ ಬಹಿಷ್ಕಾರದ ಎಚ್ಚರಿಕೆಯೂ ಕೊಡಲಾಗಿತ್ತು.

ಹಿರಿಯರ ಸಭೆಯಲ್ಲಿ ‌ಕಣ್ಣೀರು ಕೋಡಿ ಹರಿಸಿದ್ದ ಸಾಹೇಬರು, ಶಹರ ಠಾಣೆಯ ಸಿಬ್ಬಂದಿ ಮುಂದೆ, ನಾ ಏನೂ ಮಾಡೇ ಇಲ್ಲ..ಇನ್ನು ದಂಡ ಯಾಕ ಕಟ್ಲೀ ಅಂತ ಬಿಲ್ಡ್ ಅಪ್ ಕೊಟ್ಟಿದ್ದರು.
ಶುಕ್ರವಾರ ಸಾಹೇಬರು ಸೀದಾ ಸಮೀಪದ ಗೋವಾವನ್ನೇ ನೆನಪಿಸುವ, ಈಗ ಮುಚ್ಚಿರುವ ಹೋಟೆಲ್‌ಗೆ ಪತ್ನಿ ಸಮೇತ ಹೋಗಿ ಹಿರಿಯರ ಕೈಯಲ್ಲಿ 2 ಲಕ್ಷ ರೂ. ಕೊಟ್ಟು, ಎಸ್ಪಿ ಸಾಹೇಬರ ಗಮನಕ್ಕೆ ಈ ವಿಷಯ ಹೋಗಬಾರದು ಅಂತ ಮನವಿ ಮಾಡಿ, ಕೈ ಮುಗಿದು ಕಾಲ್ಕಿತ್ತಿದ್ದಾರೆ.

ಇದೇನೂ ಹೊಸದಲ್ಲ ಇವರಿಗೆ

ಈ ಪ್ರಕರಣ ‌ಮಾತ್ರ ಬಯಲಿಗೆ ಬಂದಿದೆ. ಬೆಳಕಿಗೆ ಬಾರದ ಅದೆಷ್ಟೋ ಪ್ರಕರಣಗಳು ಈ ಸಾಹೇಬರ ಲಿಸ್ಟ್ ನಲ್ಲಿವೆ. ಇವರಿಗೆ ಪ್ರತಿ ವಾರವೂ ಒಂದು ವೈರಟಿ ಬೇಕೇ ಬೇಕು. ಯಾವ ಡ್ಯೂಟಿ ಇದ್ದರೂ ಈ ಡ್ಯೂಟಿಯನ್ನು ಸಾಹೇಬರು ತಪ್ಪಿಸುವುದಿಲ್ಲವಂತೆ!
ಪಾನಮತ್ತನಾಗಿಯೇ ಕರ್ತವ್ಯ ನಿರ್ವಹಿಸುತ್ತಾರೆ ಎನ್ನುವುದು ಇವರ ಮೇಲಿನ ಮತ್ತೊಂದು ಆರೋಪ. ಜನತಾ ಕರ್ಫ್ಯೂ ಇದ್ದಾಗಲೂ ಇವರು ಎಣ್ಣೆ ತಪ್ಪಿಸಿಲ್ಲ ಎಂದು ಕೆಲವು ಸಹೋದ್ಯೋಗಿಗಳೇ ಹೇಳುತ್ತಿದ್ದಾರೆ. ಎಎಸ್ಐ ಸಾಹೇಬರಿಗೆ ಠಾಣೆಯ ಮೇಲಧಿಕಾರಿಗಳಾದ ಪಿಎಸ್ಐ, ಸಿಪಿಐ ಮುಂತಾದವರೆಲ್ಲ ಲೆಕ್ಕಕ್ಕೇ ಇಲ್ಲ. ಈ‌ ಕಚ್ಚೆ ಹರಕು ಎಎಸ್ಐ ಬಗ್ಗೆ ಯಾರ ಮುಂದೆ ಹೇಳಬೇಕು ಅನ್ನೋ ಗೊಂದಲ ಹಿರಿಯ ಅಧಿಕಾರಿಗಳಲ್ಲಿದೆ.

ಈ ಪೊಲೀಸಪ್ಪನಿಗೆ ಸಾರ್ವಜನಿಕರೇ ಪೊರಕೆ ಹಿಡಿಯುವ ಮುನ್ನ ಸೌಮ್ಯ ಸ್ವಭಾವದ ಎಸ್ಪಿ ಸಾಹೇಬರು ಗಮನ ಹರಿಸುವುದು ಒಳ್ಳೆಯದು. ಇಂತಹ ಪೊಲೀಸರಿಂದ ಇಲಾಖೆಯ ಮಾನ ಹರಾಜು ಆಗುವ ಮೊದಲು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಎಸ್ಪಿ ಸಾಹೇಬರೇ ತಾಂಡಾದ ಈ ಹೋರಿಗೆ ಮೂಗುದಾರ ಯಾವಾಗ? ಎಂದು ಜನರು ಕೇಳುತ್ತಿದ್ದಾರೆ.

ಕಳಪೆ ವೆಂಟಿಲೇಟರ್ ವಿತರಿಸಿ, ಜನರ ಪ್ರಾಣ ತೆಗೆಯಲಾಗಿದೆ; ಸಿಬಿಐ ತನಿಖೆಗೆ ಎಚ್ಕೆ ಆಗ್ರಹ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸಮರ್ಪಕವಲ್ಲದ ವೆಂಟಿಲೇಟರ್ ಗಳನ್ನು ಸರಬರಾಜು ಮಾಡಲಾಗಿದ್ದು, ಕಳೆದ ಒಂದು ವಾರವಾದರೂ ಸೇವೆಗೆ ಸಿಗುತ್ತಿಲ್ಲ. ಅಲ್ಲದೇ, ವೆಂಟಿಲೇಟರ್ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಚಿವ, ಗದಗ ಶಾಸಕ ಎಚ್.ಕೆ. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ಸರಿಯಾದ ಕನೆಕ್ಟರ್ ಇಲ್ಲ, ಆಕ್ಸಿಜನ್ ಸೆನ್ಸಾರ್ ಇಲ್ಲ. ಹೀಗಾಗಿ ಡಬ್ಬಾ ವೆಂಟಿಲೇಟರ್ ಗಳು ಹಾಗೆಯೇ ಬಿದ್ದಿವೆ. ಇಂತಹ ವೆಂಟಿಲೇಟರ್ ಗಳನ್ನು ಇಟ್ಟುಕೊಂಡ ಸಂದರ್ಭದಲ್ಲಿ ಸೋಂಕಿತರು ಹೆಚ್ಚಾಗಿ ದಾಖಲಾದರೆ ಪರಿಸ್ಥಿತಿ ತೀರಾ ಹದಗೆಡುತ್ತದ ಎಂದು ಕಿಡಿಕಾರಿದ್ದಾರೆ.

ಕಳಪೆ ಗುಣಮಟ್ಟದ ವೆಂಟಿಲೇಟರ್ ಖಾಲಿ ಡಬ್ಬಿಗಳಾಗಿವೆ. ಇವುಗಳಿಂದಲೇ ರಾಜ್ಯದಲ್ಲಿ ನೂರಾರು ಜನ ಸಾಯುತ್ತಿದ್ದಾರೆ. ಪಿಎಂ ಕೇರ್ ಮುಖಾಂತರ ಡಬ್ಬಾ ವೆಂಟಿಲೇಟರ್ ಖರೀದಿ‌ ಮಾಡಲಾಗಿದೆ. ಇಂತಹ ಕಳಪೆ ವೆಂಟಿಲೇಟರ್ ನೀಡಿ ಜನರ ಜೀವ ತೆಗೆಯುವ ಕಾರ್ಯ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಈ ರೀತಿಯಾಗಿ ಅಮಾನವೀಯ ಭ್ರಷ್ಟಾಚಾರ ನಡೆದಿದೆ. ಇಂತಹ ಭ್ರಷ್ಟಾಚಾರದ ಮೂಲಕ ಜನರ ಜೀವ ಬಲಿ ಪಡೆಯಲಾಗುತ್ತಿದೆ. ಇದು ಸರ್ಕಾರದ ಕೊಲೆ. ಜನರ ಪ್ರತಿಯೊಂದು ಸಾವಿಗೂ ಸರ್ಕಾರವೇ ನೇರ ಹೊಣೆ. ಕೂಡಲೇ ಕಳಪೆ ವೆಂಟಿಲೇಟರ್ ಖರೀದಿ ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ದೇಶ ವ್ಯಾಪಿ ವೆಂಟಿಲೇಟರ್ ನಲ್ಲಿ ಭ್ರಷ್ಟಾಚಾರ ನಡೆದಿರುವುದರಿಂದ ಉಚ್ಛ ನ್ಯಾಯಾಲಯ‌ ಸಿಬಿಐ ತನಿಖೆಗೆ ಆದೇಶ ಮಾಡಬೇಕು ಎಂದು ಎಚ್ ಕೆ ಪಾಟೀಲ್ ಒತ್ತಾಯ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ವಾಸಣ್ಣ ಕುರಡಗಿ, ಗುರಣ್ಣ ಬಳಗಾನೂರು, ಪ್ರಭು ಬುರಬುರೆ, ಅಶೋಕ್ ಮಂದಾಲಿ, ಸಿದ್ದಲಿಂಗೇಶ್ವರ ಪಾಟೀಲ್, ಬಸವರಾಜ್ ಕಡೆಮನಿ, ಉಮರ್ ಫಾರೂಕ್ ಹುಬ್ಬಳ್ಳಿ, ಸರ್ಫರಾಜ್ ಬಬರ್ಚಿ ಸೇರಿದಂತೆ ಮತ್ತೀತರು ಉಪಸ್ಥಿತರಿದ್ದರು.

ಭಾನುವಾರವೂ ಬೆಂಬಿಡದ ಭೂತ; ಜಿಲ್ಲೆಯಲ್ಲಿ 448 ಜನರಿಗೆ ಸೋಂಕು, ಮತ್ತೆ ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಅದ್ಯಾಕೋ ಸೋಂಕು ಕಡಿಮೆಯಾಗುವಂತೆ ಕಾಣುತ್ತಿಲ್ಲ. ಇವತ್ತು ಭಾನುವಾರವೂ ಸೋಂಕಿನ ಪ್ರಕರಣಗಳು ನಾಲ್ಕು ‌ನೂರರ ಗಡಿ ದಾಟಿದೆ.

ಇವತ್ತಿನ ವರದಿಯಂತೆ ಮತ್ತೆ ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದಿನ 448 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 17807ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -181, ಮುಂಡರಗಿ-61, ನರಗುಂದ-20, ರೋಣ-72, ಶಿರಹಟ್ಟಿ-98 ಹೊರಜಿಲ್ಲೆಯ-16 ಸೇರಿದಂತೆ 448 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 183 ಕ್ಕೇರಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಆದ್ರಹಳ್ಳಿ ನಿವಾಸಿ 45 ವರ್ಷದ ಮಹಿಳೆ ಮೇ 09 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 13 ರಂದು ಮೃತಪಟ್ಟಿದ್ದಾರೆ.

ಮುಂಡರಗಿ ತಾಲೂಕಿನ ಕಕ್ಕೂರತಾಂಡಾ‌ ನಿವಾಸಿ 65 ವರ್ಷದ ವ್ಯಕ್ತಿ ಮೇ 11 ರಂದು ಜಿಮ್ಸ್ ಗೆ ದಾಖಲಾಗಿದ್ದು, ಕೋವಿಡ್ ದೃಢಪಟ್ಟಿತ್ತು, ಮೇ 13 ರಂದು ಜಿಮ್ಸ್ ನಲ್ಲಿ ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಆದ್ರಹಳ್ಳಿ ನಿವಾಸಿ 36 ವರ್ಷದ ಯುವಕ ಮೇ 07 ರಂದು ಜಿಮ್ಸ್ ಗೆ ದಾಖಲಾಗಿದ್ದರು. ಮೇ 14 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ನಿವಾಸಿ 63 ವರ್ಷದ ವ್ಯಕ್ತಿ ಮೇ 10 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 14 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 309 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 15078 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2546 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 190 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!