ಕೊರೊನಾ ವೈರಸ್ ರೂಪಾಂತರ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಡಿ.31 ರ ಸಂಜೆ 6 ರಿಂದ ಜ.1 ರವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ಡಿ.31 ರ ರಾತ್ರ 8 ಗಂಟೆಯಿಂದ ಬೆಂಗಳೂರಿನ ಪ್ಲೈ ಓವರ್ ಬಂದ್ ಆಗಿರಲಿವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೈರಸ್ ರೂಪಾಂತರ ಹಿನ್ನೆಲೆಯಲ್ಲಿ ಮತ್ತಷ್ಟು ಕಠಿಣ ನಿಬಂದನೆಗಳಿದ್ದು, ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರಲು ಅವಕಾಶವಿಲ್ಲ. ಪ್ರತಿಯೊಬ್ಬರು ಕೊವಿಡ್ ನಿಯಮ ಪಾಲಿಸಬೇಕು ಎಂದರು.
ಖಾಸಗಿ ಕ್ಲಬ್ ಗಳು, ಅಪಾರ್ಟ್ಮೆಂಟ್ ನಿವಾಸಿಗಳಿಗೆ ಆಚರಣೆಗೆ ಅವಕಾಶವಿದ್ದು, ಯಾವುದೇ ಬ್ಯಾಂಡ್, ಮ್ಯೂಸಿಕ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಿಲ್ಲ. ಹೊಸ ವರ್ಷಾಚರಣೆಗೆ ಡಿಜೆ ಅವಕಾಶವಿಲ್ಲ.
ಡಿ.31 ರಿಂದ ಬೆಂಗಳೂರು ನಗರಾದ್ಯಾಂತ ಹೆಚ್ಚಿನ ಕಡೆ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುತ್ತೇವೆ. ಅನಾವಶ್ಯಕವಾಗಿ ಜಾಲಿರೈಡ್ ತೆರಳಲು ಅವಕಾಶವಿಲ್ಲ. ಅಲ್ಲದೇ, ವ್ಹಿಲಿಂಗ್, ಡ್ರಾಗ್ ರೈಡ್ ಮಾಡಿದರೆ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಪಂತ್ ತಿಳಿಸಿದರು.
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಸ್ಥಾಪಿಸಲಾಗುವುದು. ಮಾಲ್, ರೆಸ್ಟೋರೆಂಟ್, ಪಬ್, ಕ್ಲಬ್ ಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು. ಅಡ್ವಾನ್ಸ್ ಬುಕಿಂಗ್ ಮಾಡಿದ ಶೇ.50 ಜನರಿಗೆ ಮತ್ತು ಪ್ರವೇಶ ಕೂಪನ್ ಪಡೆದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ರಾತ್ರಿ 11 ಕ್ಕೆ ಬಾರ್, ವೈನ್ ಶಾಪ್ ಬಂದ್ ಮಾಡಬೇಕು. ತುರ್ತು ಸೇವೆ, ತುರ್ತು ಚಟುವಟಿಕೆಗಳಿಗೆ ಎಂದಿನಂತೆ ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಮೊದಲನೇ ಹಾಗೂ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಡಿ.30 ರಂದು ಮತ ಎಣಿಕೆ ಕಾರ್ಯವು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ಗದಗ ನಗರದ ಶ್ರೀಗುರುಬಸವ ಆಂಗ್ಲ ಮಾಧ್ಯಮ ಶಾಲೆ, ತೋಂಟದಾರ್ಯ ಇಂಜನೀಯರಿಂಗ್ ಕಾಲೇಜು, ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಕಲಾ ಮಹಾವಿದ್ಯಾಲಯ, ಶಿರಹಟ್ಟಿಯ ಎಫ್.ಎಂ.ಡಬಾಲಿ ಪದವಿ ಪೂರ್ವ ಮಹಾವಿದ್ಯಾಲಯ, ಮುಂಡರಗಿಯ ಕೆ.ಆರ್. ಬೆಲ್ಲದ ಕಾಲೇಜು,
ರೋಣದ ಡಿ.ಪೌಲ್ ಅಕಾಡೆಮಿ ಶಾಲೆ, ಗಜೇಂದ್ರಗಡದ ಶ್ರೀಜಗದ್ಗುರು ತೋಂಟದಾರ್ಯ ಆಂಗ್ಲ ಮಾಧ್ಯಮ ಶಾಲೆ ಹಾಗೂ ನರಗುಂದ ಪಟ್ಟಣದ ಶ್ರೀವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಗಳಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ ಬೆನ್ನಲ್ಲೇ ಮಾಜಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿರುವ ಅವರು, ದನದ ಮಾಂಸ ಕೆಲವರ ಆಹಾರ ಪದ್ಧತಿ, ಅದನ್ನೇಕೆ ಪ್ರಶ್ನೆ ಮಾಡ್ತೀರಾ?. ಆಹಾರ ಆಯ್ಕೆ ಅವರವರ ಇಚ್ಛೆ ಅದನ್ನು ಕಟ್ಟಿಕೊಂಡು ಇವರಿಗೇನು? ಎಂದು ಪ್ರಶ್ನಿಸಿರುವ ಅವರು ನನ್ನ ಆಹಾರ ನನ್ನ ಹಕ್ಕು ಎಂದು ಹೇಳಿದ್ದಾರೆ.
ನಾನು ದನದ ಮಾಂಸ ತಿನ್ನುತ್ತೇನೆ ಅದನ್ನ ಕೇಳುವುದಕ್ಕೆ ಅವರು ಯಾರು? ಎಂದು ಬಹಿರಂಗವಾಗಿಯೇ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ರವಿವಾರವಷ್ಟೇ ಮೈಸೂರು ಜಿಲ್ಲೆಯ ಸಿದ್ದರಾಮಯ್ಯನಹುಂಡಿಯಲ್ಲಿ ಹನುಮನ ಹುಟ್ಟಿದ ದಿನವನ್ನು ಕೇಳಿ ಸಿದ್ದರಾಮಯ್ಯ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಬಿಜೆಪಿ ನಾಯಕರು ಮುಗಿ ಬಿದ್ದಿದ್ದರು. ಸಿದ್ದರಾಮಯ್ಯ ಹೇಳಿಕೆಗೆ ಪ್ರತಿರೋಧ ವ್ಯಕ್ತಪಡಿಸಿದ್ದರು.
ಸುಗ್ರಿವಾಜ್ಞೆ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದೆ.
ಸೋಮವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರಿವಾಜ್ಞೆಗೆ ಅನುಮೋದನೆ ಸಿಕ್ಕಿದೆ. ಈ ಕುರಿತು ಸುದೀರ್ಘ ಚರ್ಚೆ ನಡೆಸಿದೆ.
ವಿಧಾನಸಭೆಯಲ್ಲಿ ಗೋ ಹತ್ಯೆ ಕಾಯ್ದೆಗೆ ಅಂಗೀಕಾರ ಪಡೆದಿದ್ದ ರಾಜ್ಯ ಸರ್ಕಾರ, ವಿಧಾನ ಪರಿಷತ್ ನಲ್ಲಿ ಪಡೆಯಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮುಂದಿನ ಅಧಿವೇಶನದವರೆಗೂ ಕಾಯದೇ ಸುಗ್ರಿವಾಜ್ಞೆ ಮೂಲಕ ಕಾಯ್ದೆ ಜಾರಿ ಮಾಡಿದೆ.
ವಿಧಾನಸಭೆಯಲ್ಲಿ ಕಾಯ್ದೆ ಅಂಗೀಕಾರಗೊಳ್ಳುತ್ತಿದ್ದಂತೆ ರಾಜ್ಯಾದ್ಯಂತ ಕೆಲ ಹಿಂದೂಪರ ಸಂಘಟನೆಗಳು ಸಂಭ್ರಮಿಸಿದ್ದವು. ಅಲ್ಲದೇ, ಸರ್ಕಾರಕ್ಕೆ ಅಭಿನಂದನೆಗಳ ಸುರಿಮಳೆ ಗೈದಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಮೂಲಕ ಗೋ ಹತ್ಯೆ ಕಾಯ್ದೆ ಜಾರಿಗೊಳಿಸಿದೆ.
ತಾಯಿ ಇವರೇ ನಿಮ್ಮ ತಂದೆ ಎಂದರೆ ನಂಬುತ್ತಾರೆ, ಸಾಕ್ಷಿ ಕೇಳಲ್ಲ. ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನರು ಇರುತ್ತಾರೆ. ಸಿದ್ದರಾಮಯ್ಯ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅವರ ದೋಷ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದರು.
ಹನುಮ ಹುಟ್ಟಿದ್ದು ಗೊತ್ತಾ, ಸುಮ್ಮನೆ ತಿನ್ಲಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಕೆಲವರಿಗೆ ಎಲ್ಲವನ್ನೂ ಅನುಮಾನಿಸುವ ಪ್ರವೃತ್ತಿ ಇರುತ್ತೆ. ಸಿದ್ದರಾಮಯ್ಯ ಅವರಿಗೂ ಅಂತಹ ಕಾಯಿಲೆ ಇದ್ರೆ ಅದು ಅವರ ದೋಷ. ನಂಬಿಕೆ ಎಲ್ಲವನ್ನೂ ಮೀರಿದ್ದು. ನಂಬಿಕೆಗಳ ಮೇಲೆ ಜಗತ್ತು ಇರುವುದು ಎಂದು ಅಭಿಪ್ರಾಯ ಪಟ್ಟರು.
ಕೆಲವರಿಗೆ ಭಗವಂತ ಕಾಣಲ್ಲ, ಕೆಲವರಿಗೆ ಎಲ್ಲ ಕಡೆ ಕಾಣುತ್ತಾನೆ. ನೋಡುವ ದೃಷ್ಟಿ ಇರುವವರಿಗೆ ಭಗವಂತನನ್ನು ತೋರಿಸಬಹುದು. ನೋಡುವ ದೃಷ್ಟಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತ ಕಾಣುವುದಿಲ್ಲ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಸಿದ್ದರಾಮಯ್ಯ ಅವರಿಗೆ ನಂಬಿಕೆ ಹುಟ್ಟಿನಿಂದ ಬಂದಿರುವುದಲ್ಲ, ಸಹವಾಸ ದೋಷದಿಂದ ಬಂದಿರುವದು. ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರುವ ಕಾರಣಕ್ಕೆ ದೇವರ ಹೆಸರಿಟ್ಟರು. ಸಹವಾಸ ದೋಷದಿಂದ ಅವರು ಕೆಟ್ಟಿದ್ದಾರೆ ಎಂದು ಸಿ.ಟಿ.ರವಿ ಹೇಳಿದರು.
ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ಮತದಾನವು ಗದಗ ಜಿಲ್ಲೆಯ ಮುಂಡರಗಿ, ನರಗುಂದ, ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 850 ಸ್ಥಾನಗಳಿಗೆ ಭಾನುವಾರ ನಡೆದ ಮತದಾನವು ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದಲ್ಲಿ ನಡೆದ ಗಲಾಟೆ ಹೊರತುಪಡಿಸಿ ಜಿಲ್ಲೆಯಲ್ಲಿ ಶಾಂತಿಯುತವಾಗಿತ್ತು. ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿತ್ತು.
ರೋಣ ತಾಲ್ಲೂಕಿನ ಗ್ರಾಮಗಳ ಮತಗಟ್ಟೆಗಳಲ್ಲಿ ಮಹಿಳೆಯರು ಮತ್ತು ಪುರುಷರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಗುಜಮಾಗಡಿ, ಚಿಕ್ಕಮಣ್ಣೂರ, ಬೆಳವಣಿಕೆ, ಕರಮುಡಿ, ಮೆಣಸಗಿ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಪ್ರತ್ಯೇಕ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಹೀಗೆ ಹಲವು ಗ್ರಾಮಗಳ ಮತಗಟ್ಟೆಗಳಲ್ಲಿ ಮತದಾರರು ಮತದಾನ ಮಾಡಲು ಗುರುತಿನ ಚೀಟಿಯೊಂದಿಗೆ ಸರದಿ ಸಾಲಿನಲ್ಲಿ ನಿಂತು ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
ರೋಣ ತಾಲ್ಲೂಕಿನ ಹಲವು ಮತಗಟ್ಟೆಗಳಲ್ಲಿ ತಮ್ಮ ಮಕ್ಕಳು, ಮೊಮ್ಮಕ್ಕಳ ಸಹಾಯದೊಂದಿಗೆ ಹಿರಿಯರು ಮತಗಟ್ಟೆಗೆ ಆಗಮಿಸಿ ಮತ ಹಕ್ಕು ಚಲಾಯಿಸಿದ್ದು ಕಂಡುಬಂದಿತು. ಹಲವು ಮತಗಟ್ಟೆಗಳಲ್ಲಿ ಬೆಳಗಿನ ವೇಳೆಯಲ್ಲಿ ಬಿರುಸಿನಿಂದ ಮತದಾನ ನಡೆಯಿತು. ಗ್ರಾಮಗಳ ಪ್ರತಿ ಮತದಾರರು ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದು ಕಂಡುಬಂದಿತು.
ಹಲವು ಕಡೆಗಳಲ್ಲಿ ಹೊಸ ಮತದಾರರು ಹುರುಪಿನಿಂದ ಮತ ಚಲಾಯಿಸಿದ್ದು ಕಂಡುಬಂದಿತು. ಹಲವು ಗ್ರಾಮಗಳ ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದು ವಿಶೇಷ ಎನಿಸಿತು.
ಎಲ್ಲಾ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಮತದಾರರನ್ನು ತಪಾಸಣೆ ಮಾಡಿ ಮತಗಟ್ಟೆಗೆ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿತು. ಜತೆಗೆ ಸ್ಯಾನಿಟೇಜರ್ ವ್ಯವಸ್ಥೆ ಮಾಡಲಾಗಿತ್ತು, ಹಾಗೆಯೇ 4 ರಿಂದ 5 ಗಂಟೆ ಅವಧಿಯಲ್ಲಿ ಕೋವಿಡ್-19 ಶಂಕಿತರಿಗೆ ಮತಹಕ್ಕು ಚಲಾಯಿಸಲು ಅವಕಾಶ ನೀಡಲಾಗಿತ್ತು.
ಮತದಾನದ ವಿವರ
ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಯ ಸಮಯವಾರು ಒಟ್ಟಾರೆ ಮತದಾನದ ವಿವರ ಇಂತಿದೆ; ಮುಂಜಾನೆ 9 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 8.22 ನರಗುಂದ ಶೇ 8.29, ರೋಣ ಶೇ. 6.62 ಹಾಗೂ ಗಜೇಂದ್ರಗಡ ಶೇ. 7.74 ಒಟ್ಟು ಶೇ. 7.69 ರಷ್ಟು ಮತದಾನವಾಗಿತ್ತು.
ಮುಂಜಾನೆ 11 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 24.23 ನರಗುಂದ ಶೇ 24.59, ರೋಣ ಶೇ. 20.16 ಹಾಗೂ ಗಜೇಂದ್ರಗಡ ಶೇ. 25.46 ಒಟ್ಟು ಶೇ. 23.53 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 44.50 ನರಗುಂದ ಶೇ 46.96, ರೋಣ ಶೇ. 42.02 ಹಾಗೂ ಗಜೇಂದ್ರಗಡ ಶೇ. 44.91 ಒಟ್ಟು ಶೇ. 44.51 ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ 3 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿ ಶೇ. 64.88 ನರಗುಂದ ಶೇ 66.45, ರೋಣ ಶೇ. 60.71 ಹಾಗೂ ಗಜೇಂದ್ರಗಡ ಶೇ. 62.29 ಒಟ್ಟು ಶೇ. 63.48 ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆಯವರೆಗೆ ಅಂತಿಮವಾಗಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 82.13 ನರಗುಂದ ಶೇ 83.64, ರೋಣ ಶೇ. 77.41 ಹಾಗೂ ಗಜೇಂದ್ರಗಡ ಶೇ. 78.51 ಒಟ್ಟು ಶೇ. 80.32 ರಷ್ಟು ಮತದಾನವಾಗಿದೆ.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ ಅವರು ರೋಣ ತಾಲ್ಲೂಕಿನ ಗುಜಮಾಗಡಿ, ಡ.ಸ.ಹಡಗಲಿ, ಸವಡಿ, ನರಗುಂದ ತಾಲ್ಲೂಕಿನ ಹದ್ಲಿ, ಕಲಕೇರಿ ಗ್ರಾಮಗಳ ಮತಗಟ್ಟೆಗಳಿಗೆ ಬೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ವಗ್ರಾಮ ವರುಣಾ ಹೋಬಳಿಯ ಸಿದ್ದರಾಮಯ್ಯನಹುಂಡಿ ಸರ್ಕಾರಿ ಶಾಲೆ ಮತಗಟ್ಟೆ ಸಂಖ್ಯೆ 138ರಲ್ಲಿ ಮತ ಚಲಾಯಿಸಿದರು.
ಮತದಾನಕ್ಕೂ ಮುನ್ನ ಗ್ರಾಮ ದೇವರಾದ ಸಿದ್ದರಾಮೇಶ್ವರ ದೇವಾಲಯಕ್ಕೆ ಸಿದ್ದರಾಮಯ್ಯ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆಯೇ ಬೆಂಬಲಿಗರು ಸುತ್ತುವರೆದರೆ, ಅಭ್ಯರ್ಥಿಗಳು ಕರಪತ್ರ ನೀಡಿ ಮತ ಹಾಕುವಂತೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಕಟ್ಟಿಲ್ಲ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಗೆ, ದೇವೇಗೌಡರು ಪಾಪ ಎಂದು ಮರುಗಿದರು. 1999ರಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದು ಯಾರು? 6 ವರ್ಷಗಳ ಕಾಲ ಜೆಡಿಎಸ್ ಅಧ್ಯಕ್ಷನಾಗಿದ್ದು ನಾನು? ಹಾಗಾದರೆ, ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ? ಎಂದು ದೇವೇಗೌಡರನ್ನು ಪ್ರಶ್ನಿಸಿದರು.
ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದ್ದು ನಾನಂತೂ ಅಲ್ಲ. ನನಗೆ ಯಾರೆಂಬುದೂ ಗೊತ್ತಿಲ್ಲ. ಅವರಿಗೆ ಖರ್ಗೆ ಹೆಸರು ತಿರಸ್ಕಾರ ಮಾಡಿದವರ ಹೆಸರು ಗೊತ್ತಿದ್ದರೆ ಹೇಳಲಿ. ಸಿದ್ದರಾಮಯ್ಯ, ವಿಪಕ್ಷ ನಾಯಕ
ಕುರುಬರ ಎಸ್ ಟಿ ಮೀಸಲಾತಿ ಹೋರಾಟದ ಅಗತ್ಯವೇ ಇಲ್ಲ. ಇದು ಕುರುಬರನ್ನ ಇಬ್ಭಾಗ ಮಾಡುವ ಹುನ್ನಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಜ.29 ಕ್ಕೆ ಮೈಸೂರಿನಲ್ಲಿ ನಡೆಯುವ ಕುರುಬರ ಎಸ್‌ಟಿ ಮೀಸಲಾತಿ ಹೋರಾಟ ಸಭೆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು.
ನಗರದಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗಲೇ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸ್ಸು ಮಾಡಿದ್ದೆ. ಈಶ್ವರಪ್ಪ, ವಿಶ್ವನಾಥ ಇಬ್ಬರು ಬಿಜೆಪಿ ಸರ್ಕಾರದಲ್ಲಿದ್ದಾರೆ. ಅವರು ಕುಲಶಾಸ್ತ್ರ ಅಧ್ಯಯನ ವರದಿ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಿಸಲಿ. ಇದು ಕುರುಬರನ್ನ ಇಬ್ಬಾಗ ಮಾಡುವ ಆರ್‌ಎಸ್‌ಎಸ್ ಹುನ್ನಾರ ಎಂದು ಆರೋಪಿಸಿದರು.
ಇಲ್ಲಿನ ದತ್ತಾತ್ರೇಯ ಪೀಠದ ದರ್ಶನ ಪಡೆದು ಕೊರೋನಾ ನಿರ್ಮೂಲನೆಗೆಗಾಗಿ ಸಂಸದೆ ಶೋಭಾ ಕರಂದ್ಲಾಜೆ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಮಾತನಾಡಿದ ಸಂಸದೆ, ಅಯೋಧ್ಯೆಯ ರಾಮಮಂದಿರದಂತೆ ದತ್ತಪೀಠದಲ್ಲಿ ದತ್ತಮಂದಿರ ನಿರ್ಮಿಸಲಾಗುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲೇ ದತ್ತಪೀಠಕ್ಕೆ ಮುಕ್ತಿ ಸಿಗುತ್ತದೆ. ಈ ಪೀಠದಲ್ಲಿ ದತ್ತಾತ್ರೇಯ ಮಂದಿರ ನಿರ್ಮಾಣವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದತ್ತಪೀಠದ ಮುಕ್ತಿಗೆ ಕಾನೂನಿನ ಅಡೆತಡೆಗಳಿದ್ದು, ತಜ್ಞರು ಪರಿಶೀಲಿಸುತ್ತಿದ್ದಾರೆ. ಜಗತ್ತಿನಲ್ಲಿ ದತ್ತ ಭಕ್ತರಿದ್ದು, ಚಿಕ್ಕಮಗಳೂರಿನಲ್ಲಿ ದತ್ತಪಾದುಕೆ ಇದೆ. ದತ್ತಪೀಠ ನಮ್ಮದಾಗಬೇಕೆಂಬುವುದೇ ನಮ್ಮ ಸಂಕಲ್ಪ ಎಂದು ಸಂಸದೆ ಶೋಭಾ ಕರಂದ್ಲಾಜೆ ಶಪತಗೈದರು.
ಕುರುಬ ಸಮುದಾಯ ಎಸ್‌ಟಿ ಪಟ್ಟಿಗೆ ಸೇರಿಸುವ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕರೆದಿದ್ದೇನೆ. ಅವರು ನಮ್ಮ ಜೊತೆಗೆ ಇದ್ದಾರೆ. ಇದಕ್ಕೆ ಅವರ ವಿರೋಧವಿಲ್ಲ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಸಿದ್ದರಾಮಯ್ಯ, ರೇವಣ್ಣ, ಈಶ್ವರಪ್ಪ, ವಿಶ್ವನಾಥ್ ಪ್ರಶ್ನೆ ಅಲ್ಲ. ಇದು ಸಮುದಾಯದ ಪ್ರಶ್ನೆ. ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ವಿಚಾರದಲ್ಲಿ ಎಲ್ಲಾ ಸಂಘಟನೆ, ಪಕ್ಷಗಳ ಬೆಂಬಲ ಕೇಳಿದ್ದೇವೆ. ಅದರಲ್ಲಿ ಆರ್ ಎಸ್ ಎಸ್ ಸಹವಿದೆ. ದೇಶದಲ್ಲಿರುವ ಎಲ್ಲಾ ಕುರುಬ ಅಧಿಕಾರಿಗಳಿಗೆ ಪತ್ರ. ಪತ್ರದ ಮೂಲಕ ಹೋರಾಟಕ್ಕೆ ಬೆಂಬಲ ಕೇಳುತ್ತೇವೆ. ಈ ನಿಟ್ಟಿನಲ್ಲಿ ಡಿ.29 ರಂದು ಕುರುಬ ನಾಯಕರ ಸಭೆ ನಡೆಸುವ ಮೂಲಕ ಹೋರಾಟದ ರೂಪುರೇಷೆ ಸಿದ್ಧಮಾಡಿಕೊಳ್ಳಲಾಗುವು ಎಂದು ವಿಶ್ವನಾಥ್ ತಿಳಿಸಿದರು.
ನಿರಂಜನಾನಂದಪುರಿ ಶ್ರೀಗಳ ಮೂಲಕ ಸರ್ಕಾರಕ್ಕೆ ನಾನು ಹಾಗೂ ಸೋಮಶೇಖರ್ ವರದಿ ಕೊಟ್ಟಿದ್ದೇವೆ. ಆ ಮೂಲಕ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಇಡೀ ಸಮುದಾಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು. ಇದರ ಬಗ್ಗೆ ಪತ್ರ ಚಳುವಳಿ ಮಾಡುತ್ತೇವೆ ಎಂದು ವಿಶ್ವನಾಥ್ ಹೇಳಿದರು
ದೇಶದಲ್ಲಿ RSS ಸಂಘಟನೆಯನ್ನು ಬ್ಯಾನ್ ಮಾಡಿದ್ದಾರಾ? RSS ಅಂದರೆ ಮೈಲಿಗೆ ಏಕೆ? ಎಲ್ಲರ ಬೆಂಬಲ ನಮಗೆ ಬೇಕಾಗಿದೆ. ಬರೀ ಇದರೊಂದರ ಬಗ್ಗೆ ಏಕೆ ಹೇಳಬೇಕು. ಎಚ್ ವಿಶ್ವನಾಥ್, ಎಮ್ ಎಲ್ ಸಿ